ಪದ್ಯ ೨೩: ಧೃತರಾಷ್ಟ್ರನು ಅಶ್ವತ್ಥಾಮಾದಿಗಳಿಗೆ ಏನೆಂದು ಹೇಳಿದನು.

ಬಂದು ಧೃತರಾಷ್ಟ್ರವನೀಶನ
ಮುಂದೆ ನಿಂದರು ರಾಯಕಟಕವ
ಕೊಂದ ರಜನಿಯ ರಹವನಭಿವರ್ಣಿಸಿದರರಸಮ್ಗೆ
ಸಂದುದೇ ಛಲವೆನ್ನ ಮಗನೇ
ನೆಂದನೈ ಹರಿಬದಲಿ ಹರುಷವ
ತಂದಿರೈ ತಮಗಿನ್ನು ಲೇಸಾಯ್ತೆಂದನಂಧನೃಪ (ಗದಾ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮೂವರೂ ಬಂದು ಧೃತರಾಷ್ಟ್ರನ ಮುಂದೆ ನಿಂತು, ರಾತ್ರಿಯಲ್ಲಿ ಪಾಂಡವ ಸೇನೆಯನ್ನು ಕೊಂದ ರೀತಿಯನ್ನು ಧೃತರಾಷ್ಟ್ರನಿಗೆ ಹೇಳಿದರು. ಅವನು ಸೇಡನ್ನು ತೀರಿಸಿಕೊಂಡಿರಾ? ನಿಮ್ಮ ಕರ್ತವ್ಯವನ್ನು ಕೇಳಿ ನನ್ನ ಮಗನು ಏನೆಂದ? ನೀವು ನನಗೆ ಹರುಷವನ್ನು ತಂದಿರಿ ಒಳ್ಳೆಯದಾಯಿತು, ಎಂದು ಸಂತೋಷಪಟ್ಟನು.

ಅರ್ಥ:
ಬಂದು: ಆಗಮಿಸು; ಅವನೀಶ: ರಾಜ; ಮುಂದೆ: ಎದುರು; ನಿಂದು: ನಿಲ್ಲು; ರಾಯ: ರಾಜ; ಕಟಕ: ಸೈನ್ಯ; ಕೊಂದು: ಸಾಯಿಸು; ರಜನಿ: ರಾತ್ರಿ; ರಹ: ಗುಟ್ಟು, ರಹಸ್ಯ; ವರ್ಣಿಸು: ವಿವರಿಸು; ಅರಸ: ರಾಜ; ಸಂದು: ಪಡೆದ; ಛಲ: ದೃಢ ನಿಶ್ಚಯ; ಮಗ: ಸುತ; ಹರಿಬ: ಕೆಲಸ, ಕಾರ್ಯ, ಯುದ್ಧ; ಹರುಷ: ಸಂತಸ; ಲೇಸು: ಒಳಿತು; ಅಂಧ: ಕುರುಡ; ನೃಪ: ರಾಜ; ಅಂಧನೃಪ: ಧೃತರಾಷ್ಟ್ರ;

ಪದವಿಂಗಡಣೆ:
ಬಂದು +ಧೃತರಾಷ್ಟ್ರ್+ಅವನೀಶನ
ಮುಂದೆ +ನಿಂದರು +ರಾಯ+ಕಟಕವ
ಕೊಂದ+ ರಜನಿಯ +ರಹವನ್+ಅಭಿವರ್ಣಿಸಿದರ್+ಅರಸಂಗೆ
ಸಂದುದೇ+ ಛಲವೆನ್ನ+ ಮಗನೇನ್
ಎಂದನೈ +ಹರಿಬದಲಿ +ಹರುಷವ
ತಂದಿರೈ +ತಮಗಿನ್ನು +ಲೇಸಾಯ್ತೆಂದನ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರ, ಅಂಧನೃಪ – ಹೆಸರಿಸುವ ಪರಿ
(೨) ಅವನೀಶ, ಅರಸ – ಸಮಾನಾರ್ಥಕ ಪದ

ಪದ್ಯ ೫: ಅಶ್ವತ್ಥಾಮನು ಕೃಪಾಚಾರ್ಯರಿಗೆ ಏನೆಂದು ಹೇಳಿದನು?

ನಾವು ನಿಮ್ಮವರೆಮ್ಮ ಬೊಪ್ಪನ
ಭಾವ ಕೃಪ ಕೃತವರ್ಮನೀತನು
ದೇವರವಧರಿಸುವುದು ರಜನಿಯ ರಾಜಕಾರಿಯವ
ನೀವು ಬಿನ್ನಹಮಾಡಬೇಹುದು
ಮಾವ ರಣಸಂಗತಿಯನಾತ್ಮ
ಸ್ತಾವಕರು ನಾವಲ್ಲವೆಂದನು ಕೃಪಗೆ ಗುರುಸೂನು (ಗದಾ ಪರ್ವ, ೧೦ ಸಂಧಿ, ೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತಿಗೆ ಅಶ್ವತ್ಥಾಮನು ಉತ್ತರಿಸುತ್ತಾ, ನಾವು ನಿಮ್ಮವರು. ಇವರು ಕೃಪಕೃತವರ್ಮರು, ರಾತ್ರಿ ನಡೆದುದನ್ನು ಕೇಳಿರಿ, ಎಂದು ಕೌರವನಿಗೆ ಹೇಳಿ ಕೃಪನಿಗೆ, ಮಾವ, ನಾವು ನಮ್ಮನು ನಾವೇ ಹೊಗಳಿಕೊಳ್ಳುವವರಲ್ಲ, ಅರಸನಿಗೆ ರಾತ್ರಿ ನಡೆದ ಸಂಗತಿಯನ್ನು ಹೇಳಿರಿ ಎಂದು ನುಡಿದನು.

ಅರ್ಥ:
ಬೊಪ್ಪ: ತಂದೆ; ಭಾವ: ತಂಗಿಯ ಗಂಡ; ಅವಧರಿಸು: ಮನಸ್ಸಿಟ್ಟು ಕೇಳು; ರಜನಿ: ರಾತ್ರಿ; ರಾಜಕಾರಿಯ: ರಾಜಕಾರಣ; ಬಿನ್ನಹ: ಕೋರಿಕೆ; ಮಾವ: ತಾಯಿಯ ಸಹೋದರ; ರಣ: ಯುದ್ಧ; ಸಂಗತಿ: ವಿಚಾರ; ಆತ್ಮಸ್ತಾವಕ: ತನ್ನನ್ನು ತಾನೇ ಹೊಗಳಿಕೊಳ್ಳುವವ; ಸೂನು: ಮಗ;

ಪದವಿಂಗಡಣೆ:
ನಾವು +ನಿಮ್ಮವರ್+ಎಮ್ಮ+ ಬೊಪ್ಪನ
ಭಾವ +ಕೃಪ +ಕೃತವರ್ಮನ್+ಈತನು
ದೇವರ್+ಅವಧರಿಸುವುದು +ರಜನಿಯ +ರಾಜಕಾರಿಯವ
ನೀವು +ಬಿನ್ನಹ+ಮಾಡಬೇಹುದು
ಮಾವ +ರಣಸಂಗತಿಯನ್+ಆತ್ಮ
ಸ್ತಾವಕರು+ ನಾವಲ್ಲವೆಂದನು +ಕೃಪಗೆ +ಗುರುಸೂನು

ಅಚ್ಚರಿ:
(೧) ನಮ್ಮನ್ನು ಹೊಗಳಿಕೊಳ್ಳುವುದಿಲ್ಲ ಎಂದು ಹೇಳುವ ಪರಿ – ರಣಸಂಗತಿಯನಾತ್ಮಸ್ತಾವಕರು ನಾವಲ್ಲವೆಂದನು
(೨) ನಾವು, ನೀವು – ಪದಗಳ ಬಳಕೆ
(೩) ಎಮ್ಮ ಬೊಪ್ಪನ ಭಾವ, ಮಾವ, ಕೃಪ – ಕೃಪಚಾರ್ಯರನ್ನು ಕರೆದ ಪರಿ

ಪದ್ಯ ೩೮: ಪಾಂಡವರ ಪಾಳೆಯಲ್ಲಿ ಯೋಧರು ತಮ್ಮೊಳಗೆ ಏಕೆ ಹೊಡೆದಾಡಿದರು?

ಗಜವ ಹಲ್ಲಣಿಸಿದರು ವಾಜಿ
ವ್ರಜಕೆ ರೆಂಚೆಯ ಹಾಯ್ಕಿದರು ಗಜ
ಬಜವಿದೇನೆನುತ ಗಾಲಿಗೆ ಬಿಗಿದು ಕುದುರೆಗಳ
ರಜನಿ ಬಂದುದೆ ಹಗಲು ಹೋಯಿತೆ
ಗಜಬಜದೊಳಕಟೆನುತ ಸುಭಟ
ವ್ರಜಸುವಿಹ್ವಳಕರಣರಿರಿದಾಡಿದರು ತಮ್ಮೊಳಗೆ (ಗದಾ ಪರ್ವ, ೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆನೆಗೆ ಕುದುರೆಯ ತಡಿಯನ್ನು ಹಾಕಿದರು. ಕುದುರೆಗಳಿಗೆ ರೆಂಚೆಯನ್ನು ಹಾಕಿದರು. ಈಗ ಎಂಥಾ ಗಲಭೆ, ಎಂದು ಗೊಣಗುತ್ತಾ ಕುದ್ರೆಗಳನ್ನು ಗಾಲಿಗಳಿಗೆ ಬಿಗಿದರು. ಈ ಗಲಭೆಯಲ್ಲಿ ಹಗಲು ಹೋಗಿ ರಾತ್ರಿ ಬಂತೇ ಎನ್ನುತ್ತಾ ಯೋಧರು ನಿದ್ದೆಯ ಮಬ್ಬಿನಲ್ಲಿ ತಮ್ಮ ತಮ್ಮಲ್ಲಿಯೇ ಹೊಡೆದಾಡಿದರು.

ಅರ್ಥ:
ಗಜ: ಆನೆ; ಹಲ್ಲಣ: ಪಲ್ಲಣ, ಜೀನು, ತಡಿ; ವಾಜಿ: ಕುದುರೆ, ಅಶ್ವ; ವ್ರಜ: ಗುಂಪು; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಹಾಯ್ಕು:ಇಡು, ಇರಿಸು; ಗಜಬಜ: ಗೊಂದಲ; ಗಾಲಿ: ಚಕ್ರ; ಬಿಗಿ: ಭದ್ರವಾಗಿರುವುದು; ಕುದುರೆ: ಅಶ್ವ; ರಜನಿ: ರಾತ್ರಿ; ಹಗಲು: ದಿನ; ಹೋಯಿತು: ಕೈತಪ್ಪು, ಜಾರು; ಅಕಟ: ಅಯ್ಯೋ; ಸುಭಟ: ಪರಾಕ್ರಮಿ; ವಿಹ್ವಳ: ಹತಾಶ; ಕರಣ: ಕೆಲಸ; ಇರಿ: ಚುಚ್ಚು;

ಪದವಿಂಗಡಣೆ:
ಗಜವ +ಹಲ್ಲಣಿಸಿದರು +ವಾಜಿ
ವ್ರಜಕೆ+ ರೆಂಚೆಯ +ಹಾಯ್ಕಿದರು +ಗಜ
ಬಜವ್+ಇದೇನೆನುತ +ಗಾಲಿಗೆ +ಬಿಗಿದು +ಕುದುರೆಗಳ
ರಜನಿ +ಬಂದುದೆ +ಹಗಲು +ಹೋಯಿತೆ
ಗಜಬಜದೊಳ್+ಅಕಟೆನುತ +ಸುಭಟ
ವ್ರಜ+ಸುವಿಹ್ವಳ+ಕರಣರ್+ಇರಿದಾಡಿದರು +ತಮ್ಮೊಳಗೆ

ಅಚ್ಚರಿ:
(೧) ಗೊಂದಲವನ್ನು ಸೂಚಿಸುವ ಪದ್ಯ – ವಾಜಿವ್ರಜಕೆ ರೆಂಚೆಯ ಹಾಯ್ಕಿದರು ಗಜ
ಬಜವಿದೇನೆನುತ ಗಾಲಿಗೆ ಬಿಗಿದು ಕುದುರೆಗಳ
(೨) ಗಜ, ಗಜಬಜ – ಪದಗಳ ಬಳಕೆ

ಪದ್ಯ ೨೫: ಅಶ್ವತ್ಥಾಮನು ಹೇಗೆ ತೋರಿದನು?

ಎನೆ ಪುರಾರಿಯ ಪದಯುಗಕೆ ಗುರು
ತನುಜ ಮೈಯಿಕ್ಕಿದನು ಬೀಳ್ಕೊಂ
ಡನು ತಿರೋಹಿತನಾದನೀಶ್ವರನೀತನನು ಕಳುಹಿ
ಧನುವ ಕೊಂಡನು ಧೂರ್ಜಟಿಯ ರೂ
ಹಿನ ಮಹಾರಥ ರಥವನೇರಿದ
ನನುವರದ ರೌರವನಂಘೈಸಿದನು ರಜನಿಯಲಿ (ಗದಾ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನು ಅಶ್ವತ್ಥಾಮನಿಗೆ ಶತ್ರುಗಳನ್ನು ನಾಶಮಾಡಲು ಹೇಳಲು, ಅಶ್ವತ್ಥಾಮನು ಅವನ ಪಾದಗಳಿಗೆ ನಮಸ್ಕರಿಸಿ ಬೀಳ್ಕೊಡಲು, ಶಿವನು ಅದೃಶ್ಯನಾದನು. ಶಿವನನ್ನು ಹೋಲುವ ಮಹಾ ಪರಾಕ್ರಮಿಯಾದ ಅಶ್ವತ್ಥಾಮನು ರಾತ್ರಿಯ ಕೌರವ ಕಾಳಗವನ್ನು ಆರಂಭಿಸಿದನು.

ಅರ್ಥ:
ಪುರಾರಿ: ಶಿವ; ಪದ: ಚರಣ; ಪದಯುಗ: ಎರಡು ಪಾದಗಳಿಗೆ; ತನುಜ: ಮಗ; ಮೈಯಿಕ್ಕು: ನಮಸ್ಕರಿಸು; ಬೀಳ್ಕೊಂಡು: ತೆರಳು; ತಿರೋಹಿತ: ಮರೆಯಾದ, ಅಡಗಿಸಿದ; ಈಶ್ವರ: ಶಂಕರ; ಕಳುಹಿ: ಬೀಳ್ಕೊಡು; ಧನು: ಬಿಲ್ಲು; ಕೊಂಡನು: ಧರಿಸು; ಧೂರ್ಜಟಿ: ಶಿವ; ರೂಹಿನ: ರೂಪದ; ಮಹಾರಥ: ಪರಾಕ್ರಮಿ; ರಥ: ಬಂಡಿ; ಏರು: ಹತ್ತು; ಅನುವರ: ಯುದ್ಧ, ಕಾಳಗ; ರೌರವ: ಭಯಂಕರವಾದ; ಅಂಘೈಸು: ಜೊತೆಯಾಗು; ರಜನಿ: ರಾತ್ರಿ;

ಪದವಿಂಗಡಣೆ:
ಎನೆ +ಪುರಾರಿಯ +ಪದಯುಗಕೆ +ಗುರು
ತನುಜ +ಮೈಯಿಕ್ಕಿದನು +ಬೀಳ್ಕೊಂ
ಡನು +ತಿರೋಹಿತನಾದನ್+ಈಶ್ವರನ್+ಈತನನು +ಕಳುಹಿ
ಧನುವ +ಕೊಂಡನು +ಧೂರ್ಜಟಿಯ +ರೂ
ಹಿನ +ಮಹಾರಥ +ರಥವನ್+ಏರಿದನನ್
ಅನುವರದ +ರೌರವನ್+ಅಂಘೈಸಿದನು +ರಜನಿಯಲಿ

ಅಚ್ಚರಿ:
(೧) ನಮಸ್ಕರಿಸಿದನು ಎಂದು ಹೇಳಲು – ಮೈಯಿಕ್ಕಿದನು
(೨) ಪುರಾರಿ, ಈಶ್ವರ, ಧೂರ್ಜಟಿ – ಶಿವನನ್ನು ಕರೆದ ಪರಿ

ಪದ್ಯ ೧೨: ಕದ್ದು ಕೊಲ್ಲುವ ಬಗ್ಗೆ ಕೃತವರ್ಮನ ಅಭಿಪ್ರಾಯವೇನು?

ತಪ್ಪದಾಚಾರಿಯನ ನುಡಿ ಮೇ
ಲಪ್ಪುದನು ದೈವಾಭಿಯೋಗದೊ
ಳೊಪ್ಪವಿಡುವುದು ರಜನಿಯಲಿ ಕಳ್ಳೇರ ಕದನದಲಿ
ಒಪ್ಪದಿದು ಸೌಭಟ ವಿಧಾನಕೆ
ನೊಪ್ಪಿತಹುದಿದರಿಂದ ರಿಪುಗಳ
ತಪ್ಪಿಸುವನಸುರಾರಿಯೆಂದನು ನಗುತ ಕೃತವರ್ಮ (ಗದಾ ಪರ್ವ, ೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕೃತವರ್ಮನು ನಗುತ್ತಾ, ಕೃಪಾಚಾರ್ಯರು ಹೇಳುವ ಮಾತು ನಿಜವಾಗುತ್ತದೆ, ಅದು ತಪ್ಪುವುದಿಲ್ಲ. ಮುಂದೆ ಏನಾಗುವುದೋ ಅದನ್ನು ದೈವಾಜ್ಞೆಯೆಂದೇ ಸ್ವೀಕರಿಸಬೇಕು. ರಾತ್ರಿಯ ಹೊತ್ತು ಕದ್ದು ಕೊಲ್ಲುವುದು ವೀರರಿಗೆ ಒಪ್ಪುವುದಿಲ್ಲ. ಒಂದು ಪಕ್ಷ ನಾವು ಕೊಲ್ಲಲು ಹೋದರೂ ಕೃಷ್ಣನು ಪಾಂಡವರನ್ನು ಉಳಿಸುತ್ತಾನೆ ಎಂದು ಹೇಳಿದನು.

ಅರ್ಥ:
ತಪ್ಪು: ಸರಿಯಲ್ಲದ್ದು; ಆಚಾರಿ: ಗುರು; ನುಡಿ: ಮಾತು; ಮೇಲಪ್ಪುದು: ಮುಂದೆ ನಡೆವುದು; ಅಭಿಯೋಗ: ಆಸಕ್ತಿ, ಒತ್ತಾಯ; ಒಪ್ಪು: ಒಪ್ಪಿಗೆ, ಸಮ್ಮತಿ; ರಜನಿ: ರಾತ್ರಿ; ಕಳ್ಳ: ಚೋರ; ಕದನ: ಯುದ್ಧ; ಒಪ್ಪು: ಸಮ್ಮತಿಸು; ಸೌಭಟ: ಪರಾಕ್ರಮಿ; ವಿಧಾನ: ರೀತಿ; ರಿಪು: ವೈರಿ; ಅಸುರಾರಿ: ಕೃಷ್ಣ; ನಗು: ಹರ್ಷ;

ಪದವಿಂಗಡಣೆ:
ತಪ್ಪದ್+ಆಚಾರಿಯನ +ನುಡಿ +ಮೇ
ಲಪ್ಪುದನು+ ದೈವಾಭಿಯೋಗದೊಳ್
ಒಪ್ಪವಿಡುವುದು +ರಜನಿಯಲಿ +ಕಳ್ಳೇರ+ ಕದನದಲಿ
ಒಪ್ಪದಿದು +ಸೌಭಟ +ವಿಧಾನಕೆ
ನೊಪ್ಪಿತಹುದ್+ಇದರಿಂದ +ರಿಪುಗಳ
ತಪ್ಪಿಸುವನ್+ಅಸುರಾರಿ+ಎಂದನು +ನಗುತ +ಕೃತವರ್ಮ

ಅಚ್ಚರಿ:
(೧) ಪರಾಕ್ರಮಿಗಳಿಗೆ ಶೋಭೆ ತರದ ಸಂಗತಿ: ರಜನಿಯಲಿ ಕಳ್ಳೇರ ಕದನದಲಿ ಒಪ್ಪದಿದು ಸೌಭಟ ವಿಧಾನಕೆ

ಪದ್ಯ ೫: ಆಲದ ಮರದಿಂದ ಕಾಗೆಗಳೇಕೆ ಬಿದ್ದವು?

ಭಾಗ ಬೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್ ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ (ಗದಾ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಅರ್ಧರಾತ್ರಿಯಾಯಿತು. ಆಗ ಗೂಬೆಯೊಂದು ಆಲದ ಮರದ ಮೇಲೆ ಬಂದು ಕುಳಿತುಕೊಂಡಿತು. ಮರದಲ್ಲಿದ್ದ ಕಾಗೆಗಲ ಗೂಡುಗಲನ್ನು ಕೊಯ್ದು ಕಾಗೆಗಳನ್ನು ಕೊಕ್ಕಿನಿಂದ ಕುಕ್ಕಲು, ಕಾಗೆಗಳು ಸಹಸ್ರ ಸಂಖ್ಯೆಯಲ್ಲಿ ಕೆಳಗೆ ಬಿದ್ದವು.

ಅರ್ಥ:
ಭಾಗ: ಅಂಶ, ಪಾಲು; ಬೀತುದು: ಕಳೆದುದು; ರಜನಿ: ರಾತ್ರಿ; ಕ್ಷಣ: ಸಮಯ; ಗೂಗೆ: ಗೂಬೆ; ಬಂದು: ಆಗಮಿಸು; ವಟಕುಜ: ಆಲದ ಮರ; ಅಗ್ರ: ಮೇಲೆ; ಕಾಗೆ: ಕಾಕ; ಗೂಡು: ಮನೆ; ಹೊಯ್ದು: ಹೊಡೆ; ವಿಭಾಗಿಸು: ಒಡೆ, ಸೀಳು; ತುಂಡ: ಹಕ್ಕಿಗಳ ಕೊಕ್ಕು, ಚಂಚು; ಬಿದ್ದು: ಬೀಳು, ಕುಸಿ; ಸುಭಟ: ಪರಾಕ್ರಮಿ; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಭಾಗ +ಬೀತುದು +ರಜನಿಯಲಿ +ಸರಿ
ಭಾಗವಿದ್ದುದು +ಮೇಲೆ +ತತ್ +ಕ್ಷಣ
ಗೂಗೆ +ಬಂದುದದ್+ಒಂದು +ವಟಕುಜದ್+ಅಗ್ರ+ಭಾಗದಲಿ
ಕಾಗೆಗಳ +ಗೂಡುಗಳ +ಹೊಯ್ದು +ವಿ
ಭಾಗಿಸಿತು +ತುಂಡದಲಿ +ಬಿದ್ದವು
ಕಾಗೆ +ಸುಭಟನ +ಸಮ್ಮುಖದಲಿ +ಸಹಸ್ರ+ಸಂಖ್ಯೆಯಲಿ

ಅಚ್ಚರಿ:
(೧) ಭಾಗ, ಸರಿಭಾಗ, ವಿಭಾಗಿಸಿ, ಅಗ್ರಭಾಗ; – ಭಾಗ ಪದದ ಬಳಕೆ

ಪದ್ಯ ೫೯: ಅಶ್ವತ್ಥಾಮನು ಏನು ಪ್ರತಿಜ್ಞೆ ಮಾಡಿದನು?

ಶೋಕವಡಗಿದುದವರಿಗಂತ
ರ್ವ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವ ದುರ್ವ್ಯಸನ
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಲನು ತಹೆನೆಂದನಾ ದ್ರೌಣಿ (ಗದಾ ಪರ್ವ, ೮ ಸಂಧಿ, ೫೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮಾದಿಗಳ ದುಃಖವು ಅಡಗಿತು. ಮನಸ್ಸಿನ ವ್ಯಾಕುಲತೆಯು ಇಲ್ಲವಾಯಿತು. ಇನ್ನೇಕೆ ಆಗಿ ಹೋದುದನ್ನು ನೆನೆಸಿ ದುಃಖಿಸಬೇಕು? ಅದು ಹಾಗಿರಲಿ, ನೀನು ನಮ್ಮನ್ನು ಸಾಕಿದುದು ಸಾರ್ಥಕವೆನ್ನಿಸಲು, ಈ ರಾತ್ರಿ ಆ ಕುಠಾರರ ತಲೆಗಳನ್ನು ಕಡಿದು ತರುತ್ತೇನೆ ಎಂದು ಅಶ್ವತ್ಥಾಮನು ಹೇಳಿದನು.

ಅರ್ಥ:
ಶೋಕ: ದುಃಖ; ಅಡಗು: ಮುಚ್ಚು; ವ್ಯಾಕುಲ: ದುಃಖ, ವ್ಯಥೆ; ಬೀಳ್ಕೊಡು: ತೆರಳು; ಸಂವೇಶ: ಒಳಹೊಕ್ಕು; ಅನುಭೂತ: ಕಂಡು ಕೇಳಿದ, ಅನುಭವಿಸಿದ; ದುರ್ವ್ಯಸನ: ಕೆಟ್ಟ ಚಟ, ದುರಭ್ಯಾಸ; ಸಾಕು: ಸಲಹು; ಬಿಡು: ತೊರೆ; ಫಲ: ಪ್ರಯೋಜನ; ರಜನಿ: ರಾತ್ರಿ; ಕುಠಾರ: ಕೊಡಲಿ, ಗುದ್ದಲಿ; ತಲೆ: ಶಿರ; ತಹೆ: ತರುವೆ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಶೋಕವ್+ಅಡಗಿದುದ್+ಅವರಿಗ್+ಅಂತ
ರ್ವ್ಯಾಕುಳತೆ +ಬೀಳ್ಕೊಂಡುದ್+ಅಹುದ್
ಇನ್ನೇಕೆ +ಸಂವೇಶ+ಅನುಭೂತ+ಅನುಭವ +ದುರ್ವ್ಯಸನ
ಸಾಕ್+ಅದಂತಿರಲ್+ಇನ್ನು+ ಬಿಡು +ನೀ
ಸಾಕಿತಕೆ+ ಫಲವೆನಿಸಿ +ರಜನಿಯೊಳ್
ಆ+ ಕುಠಾರರ +ತಲೆಗಳನು +ತಹೆನೆಂದನಾ +ದ್ರೌಣಿ

ಅಚ್ಚರಿ:
(೧) ಸಾಕು, ಸಾಕಿತಕೆ – ಪದಗಳ ಪ್ರಯೋಗ
(೨) ಅಶ್ವತ್ಥಾಮನ ಪ್ರಮಾಣ – ನೀ ಸಾಕಿತಕೆ ಫಲವೆನಿಸಿ ರಜನಿಯೊಳಾ ಕುಠಾರರ ತಲೆಗಲನು ತಹೆನೆಂದನಾ ದ್ರೌಣಿ

ಪದ್ಯ ೪೭: ಪಾಂಡವರು ಯಾವ ಚಿಂತೆಯಲ್ಲಿ ಮುಳುಗಿದರು?

ಗಜಬಜಿಸಿದುದು ವೈರಿಸುಭಟ
ವ್ರಜ ನಕುಲ ಸಹದೇವ ಸಾತ್ಯಕಿ
ವಿಜಯ ಧೃಷ್ಟದ್ಯುಮ್ನ ಭೀಮ ದ್ರೌಪದೀಸುತರು
ವಿಜಿತನೋ ವಿಗತಾಸುವೋ ಧ
ರ್ಮಜನ ಹದನೇನೆನುತ ಚಿಂತಾ
ರಜನಿಯಲಿ ಕಂಗೆಟ್ಟುದಾ ಬಲವರಸ ಕೇಳೆಂದ (ಶಲ್ಯ ಪರ್ವ, ೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಪಾಂಡವ ಸೇನೆಯಲ್ಲಿ ಕೋಲಾಹಲವಾಯಿತು. ಭೀಮ ಅರ್ಜುನ ನಕುಲ ಸಹದೇವ ಧೃಷ್ಟದ್ಯುಮ್ನ, ಉಪಪಾಂಡವರೆಲ್ಲರೂ ಧರ್ಮಜನೇನು ಯುದ್ಧದಲ್ಲಿ ಸೋತನೋ ಅವನ ಪ್ರಾಣ ಹಾರಿ ಹೋಗಿದೆಯೋ ಏನುಗತಿ ಎಂದು ಚಿಂತೆಯ ಕತ್ತಲಲ್ಲಿ ಕಂಗೆಟ್ಟರು.

ಅರ್ಥ:
ಗಜಬಜ: ಗೊಂದಲ; ವೈರಿ: ಶತ್ರು; ಸುಭಟ: ಪರಾಕ್ರಮಿ; ವ್ರಜ: ಗುಂಪು; ಸುತ: ಮಕ್ಕಳು; ವಿಜಿತ: ಗೆಲುವು; ವಿಗತ: ಕಳೆದುಹೋದ; ಅಸು: ಪ್ರಾಣ; ಹದ: ಸ್ಥಿತಿ; ಚಿಂತೆ: ಯೋಚನೆ; ರಜನಿ: ಅಂಧಕಾರ, ರಾತ್ರಿ; ಕಂಗೆಡು: ದಿಕ್ಕುದೋರದಾಗು; ಬಲ: ಸೈನ್ಯ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಗಜಬಜಿಸಿದುದು+ ವೈರಿ+ಸುಭಟ
ವ್ರಜ +ನಕುಲ +ಸಹದೇವ +ಸಾತ್ಯಕಿ
ವಿಜಯ +ಧೃಷ್ಟದ್ಯುಮ್ನ +ಭೀಮ +ದ್ರೌಪದೀ+ಸುತರು
ವಿಜಿತನೋ +ವಿಗತ+ಅಸುವೋ +ಧ
ರ್ಮಜನ +ಹದನೇನ್+ಎನುತ +ಚಿಂತಾ
ರಜನಿಯಲಿ +ಕಂಗೆಟ್ಟುದ್+ಆ+ ಬಲವ್+ಅರಸ +ಕೇಳೆಂದ

ಅಚ್ಚರಿ:
(೧) ವಿಜಿತನೋ ವಿಗತಾಸುವೋ – ಪದಗಳ ಬಳಕೆ
(೨) ರೂಪಕದ ಪ್ರಯೋಗ – ಚಿಂತಾರಜನಿಯಲಿ ಕಂಗೆಟ್ಟುದಾ ಬಲವ್ – ಚಿಂತೆಯ ಕತ್ತಲಲ್ಲಿ ದಿಕ್ಕು ತೋರದಮ್ತಾಯಿತು, ಚಿಂತೆಯ ಗಾಢತೆಯನ್ನು ಕತ್ತಲಿಗೆ ಹೋಲಿಸುವ ಪರಿ

ಪದ್ಯ ೨೧: ಕೃಪಾಚಾರ್ಯರು ಯಾವ ನಿವೇದನೆ ಮಾಡಿದರು?

ಉಚಿತವಿತರೇತರಗುಣಸ್ತುತಿ
ರಚನೆ ಗುಣಯುಕ್ತರಿಗೆ ವಿಜಯೋ
ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ
ಅಚಲ ಮೂರರ ಪೈಸರದ ಬಲ
ನಿಚಯ ನಮ್ಮದು ವೀರ ಸುಭಟ
ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ (ಶಲ್ಯ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕೃಪಾಚಾರ್ಯರು ಮಾತನಾಡುತ್ತಾ, ಪರಸ್ಪರ ಗುಣಗಳನ್ನು ಹೊಗಳುವುದು ಗುಣಯುತರ ಸ್ವಭಾವ. ವಿಜಯದ ಗಳಿಕೆಗೆ ಈ ರಾತ್ರಿ ತೆರೆಯಂತಿದೆ. ಮೊದಲ ಮೂವರು ವಿಜಯವನ್ನು ಗಳಿಸುವಲ್ಲಿ ವಿಫಲರಾದರು. ಗೆಲ್ಲಲಸಾಧ್ಯರಾದ ಮೂವರು ಗೆಲುವನ್ನು ಪಡೆಯುವಲ್ಲಿ ವಿಪಲರಾಗಿ ಜಾರಿಹೋದ ಸೈನ್ಯ ನಮ್ಮದು. ನಿವೇ ವೀರಾಗ್ರಣಿಯೊಬ್ಬನನ್ನು ಸೇನಾಧಿಪತಿಯನ್ನಾಗಿ ಮಾಡಿರಿ ಎಂದರು.

ಅರ್ಥ:
ಉಚಿತ: ಸರಿಯಾದ; ಇತರ: ಅನ್ಯರ; ಗುಣ: ನಡತೆ, ಸ್ವಭಾವ; ಸ್ತುತಿ: ಹೊಗಳು; ಯುಕ್ತ: ಕೌಶಲ; ವಿಜಯ: ಗೆಲುವು; ಉಪಚಿತ: ಯೋಗ್ಯವಾದ; ರಣ: ಯುದ್ಧ; ನಾಟಕ: ತೋರಿಕೆಯ ವರ್ತನೆ; ಜವನಿಕೆ: ತೆರೆ, ಪರದೆ; ರಜನಿ: ರಾತ್ರಿ; ಅಚಲ: ನಿಶ್ಚಲ; ಪೈಸರ: ಕುಗ್ಗುವುದು; ವೀರ: ಶೂರ; ಸುಭಟ: ಪರಾಕ್ರಮಿ; ಪ್ರಚಯ: ಒಟ್ಟು ಗೂಡಿಸುವುದು; ಮುಖ್ಯ: ಪ್ರಮುಖ; ಕುರುಪತಿ: ದುರ್ಯೋಧನ;

ಪದವಿಂಗಡಣೆ:
ಉಚಿತವ್+ಇತರೇತರ+ಗುಣಸ್ತುತಿ
ರಚನೆ +ಗುಣಯುಕ್ತರಿಗೆ+ ವಿಜಯ
ಉಪಚಿತ+ ರಣನಾಟಕಕೆ +ಜವನಿಕೆಯಾಯ್ತಲೇ +ರಜನಿ
ಅಚಲ +ಮೂರರ +ಪೈಸರದ +ಬಲ
ನಿಚಯ +ನಮ್ಮದು +ವೀರ +ಸುಭಟ
ಪ್ರಚಯ +ಮುಖ್ಯರ+ ಮಾಡಿಯೆಂದನು +ಕೃಪನು+ ಕುರುಪತಿಗೆ

ಅಚ್ಚರಿ:
(೧) ನಿಚಯ, ಪ್ರಚಯ – ಪದಗಳ ಬಳಕೆ
(೨) ರೂಪಕದ ಪ್ರಯೋಗ – ವಿಜಯೋಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ

ಪದ್ಯ ೧೦: ಮಾವುತರು ಎಲ್ಲಿ ನಿದ್ರಿಸಿದರು?

ಒಲಿದ ಕಾಂತೆಯ ಕೂಡೆ ಮನುಮಥ
ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು ರಜನಿಯಲಿ
ಒಲಿದ ಸಮರಶ್ರಮದಲತಿವೆ
ಗ್ಗಳ ಗಜರೋಹಕರು ಕುಂಭ
ಸ್ಥಳದ ಮೇಲೊರಗಿದರು ನಿದ್ರಾ ಮುದ್ರಿತೇಕ್ಷಣರು (ದ್ರೋಣ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪ್ರೀತಿಯ ಪತ್ನಿಯೊಡನೆ ಮನ್ಮಥ ಕಲಹದಲ್ಲಿ ಬೆಂಡಾಗಿರುವ ಪತಿಯು ಕಳಶ ಕುಚಗಳ ಮಧ್ಯದಲ್ಲಿ ತಲೆಯಿಟ್ಟು ಮಲಗುವಂತೆ, ಯುದ್ಧ ಶ್ರಮದಿಂದ ಬೆಂಡಾದ ಮಾವುತರು ಆನೆಗಳ ಕುಂಭ ಸ್ಥಳಗಳ ಮೇಲೆ ಮಲಗೆ ಕಣ್ಣು ಮುಚ್ಚಿ ನಿದ್ರಿಸಿದರು.

ಅರ್ಥ:
ಒಲಿದ: ಪ್ರೀತಿಯ; ಕಾಂತೆ: ಪ್ರಿಯತಮೆ; ಕೂಡು: ಜೊತೆ; ಮನುಮಥ: ಮನ್ಮಥ, ಕಾಮದೇವ; ಕಲಹ: ಜಗಳ; ಬೆಂಡು: ತಿರುಳಿಲ್ಲದುದು; ಕಾಂತ: ಪ್ರಿಯತಮ; ಕಳಶ: ಕೊಡ; ಕುಚ: ಮೊಲೆ, ಸ್ತನ; ಮಧ್ಯ: ನಡುವೆ; ಮಲಗು: ನಿದ್ರಿಸು; ರಜನಿ: ರಾತ್ರಿ; ಸಮರ: ಯುದ್ಧ; ಶ್ರಮ: ದಣಿವು; ವೆಗ್ಗಳ: ಶ್ರೇಷ್ಠ; ಗಜ: ಆನೆ; ಗಜರೋಹಕ: ಮಾವುತ; ಕುಂಭ: ಕೊಡ, ಕಲಶ; ಸ್ಥಳ: ಜಾಗ; ಒರಗು: ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ನಿದ್ರೆ: ಶಯನ; ಈಕ್ಷಣ: ಕಣ್ಣು, ನೋಟ; ಮುದ್ರಿತ: ಗುರುತು;

ಪದವಿಂಗಡಣೆ:
ಒಲಿದ +ಕಾಂತೆಯ +ಕೂಡೆ +ಮನುಮಥ
ಕಲಹದಲಿ +ಬೆಂಡಾದ +ಕಾಂತನು
ಕಳಶ+ಕುಚ +ಮಧ್ಯದಲಿ+ ಮಲಗುವವೋಲು +ರಜನಿಯಲಿ
ಒಲಿದ +ಸಮರ+ಶ್ರಮದಲ್+ಅತಿ+ವೆ
ಗ್ಗಳ+ ಗಜರೋಹಕರು+ ಕುಂಭ
ಸ್ಥಳದ +ಮೇಲೊರಗಿದರು +ನಿದ್ರಾ +ಮುದ್ರಿತ+ಈಕ್ಷಣರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಲಿದ ಕಾಂತೆಯ ಕೂಡೆ ಮನುಮಥ ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು