ಪದ್ಯ ೨೫ : ಕೃಷ್ಣನ ವಿಶ್ವರೂಪ ದರ್ಶನ ಹೇಗಿತ್ತು?

ವಿದುರನಿಂತೆನುತಿರಲು ಮಿಂಚಿನ
ಹೊದರು ಹುರಿಗೊಂಡಂತೆ ರವಿ ಶತ
ಉದುರಿದವು ಮೈ ಮುರಿದು ನಿಂದಡೆ ದೇವರಂಗದಲಿ
ಸದೆದುದಾಸ್ಥಾನವನು ಘನತೇ
ಜದಲಹರಿಲೀಲೆಯಲಿ ಹರಿ ತೋ
ರಿದನು ನಿರುಪಮ ವಿಶ್ವರೂಪವನಾ ಮಹಾಸಭೆಗೆ (ಉದ್ಯೋಗ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ವಿದುರನು ಹೀಗೆ ಕೃಷ್ಣನ ಮಹಿಮೆಯನ್ನು ಹೇಳುತ್ತಿರಲು, ಕೃಷ್ಣನು ತನ್ನ ಪ್ರಕಾಶಮಾನವಾದ ದೇಹವನ್ನು ಕೊಡವಿ ನೆಟ್ಟನೆ ನಿಂತನು, ಮಿಂಚಿನ ಬಳ್ಳಿಗಳು ಹುರಿಗೊಂಡವೋ ಎಂಬಂತೆ ನೂರು ಸೂರ್ಯರು ಅವನ ದೇಹದಿಂದ ಉದುರಿದವು ಆ ತೇಜಸ್ಸಿನ ಹೊಳೆಯು ಆಸ್ಥಾನದ ಕಣ್ಣು ಕುಕ್ಕಿಸಿತು. ಶ್ರೀ ಕೃಷ್ಣನು ಆ ಮಹಾಸಭೆಗೆ ತನ್ನ ವಿಶ್ವರೂಪವನ್ನು ತೋರಿದನು.

ಅರ್ಥ:
ಮಿಂಚು: ಹೊಳಪು, ಕಾಂತಿ; ಹೊದರು:ಬಿರುಕು; ಹುರಿಗೊಳ್ಳು:ಹೊಂದಿಕೊಳ್ಳು; ರವಿ: ಭಾನು, ಸೂರ್ಯ; ಶತ: ನೂರು; ಉದುರು: ಕೆಳಗೆ ಬೀಳು; ಮೈ: ತನು; ಮುರಿ:ಸೀಳು; ನಿಂದಡೆ: ನಿಲ್ಲು; ದೇವ: ಭಗವಂತ; ರಂಗ: ಸಭೆ; ಸದೆ: ಹೊಡೆ; ಆಸ್ಥಾನ: ಸಭೆ, ದರ್ಬಾರು; ಘನತೆ: ಪ್ರತಿಷ್ಠೆ; ತೇಜ: ಕಾಂತಿ; ಲಹರಿ: ಚುರುಕು, ಪ್ರಭೆ; ಲೀಲೆ:ಆನಂದ; ಹರಿ: ವಿಷ್ಣು; ತೋರು: ಕಾಣಿಸು; ನಿರುಪಮ:ಸಾಟಿಯಿಲ್ಲದ, ಅತಿಶಯವಾದ; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ಮಹಾ: ಶ್ರೇಷ್ಠ;

ಪದವಿಂಗಡಣೆ:
ವಿದುರನ್+ಇಂತೆನುತಿರಲು +ಮಿಂಚಿನ
ಹೊದರು +ಹುರಿಗೊಂಡಂತೆ+ ರವಿ +ಶತ
ಉದುರಿದವು+ ಮೈ +ಮುರಿದು +ನಿಂದಡೆ +ದೇವ+ರಂಗದಲಿ
ಸದೆದುದ್+ಆಸ್ಥಾನವನು +ಘನ+ತೇ
ಜದ+ಲಹರಿ+ಲೀಲೆಯಲಿ +ಹರಿ +ತೋ
ರಿದನು +ನಿರುಪಮ +ವಿಶ್ವರೂಪವನಾ +ಮಹಾಸಭೆಗೆ

ಅಚ್ಚರಿ:
(೧) ಸಭೆ, ಆಸ್ಥಾನ, ರಂಗ – ಸಮಾನಾರ್ಥಕ ಪದ

ಪದ್ಯ ೫೦: ಧೃಷ್ಟದ್ಯುಮ್ನನು ದ್ರೌಪದಿಗೆ ರಾಜರನ್ನು ಪರಿಚಯಿಸುವ ಮೊದಲು ಏನೆಂದು ಹೇಳಿದನು?

ತಂಗಿ ನೋಡೌ ತಾಯೆ ನಿನ್ನಯ
ಕಂಗಳೊಲಿವರೆ ಚಿತ್ತವಾರ್ಧಿತ
ರಂಗದಲಿ ತೂಗುವರೆ ತೋರುವೆನವನಿಪಾಲಕರ
ಇಂಗಿತದಲವರಂತರಂಗವ
ನಂಗವಟ್ಟದ ಬಳಕೆಯನು ಬಹಿ
ರಂಗದಲಿನೀನರಿಯೆನುತ ನುಡಿದನು ನಿಜಾನುಜೆಗೆ (ಆದಿ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ತನ್ನ ತಂಗಿ ಬಳಿ ಹೋಗೆ, “ತಂಗಿ, ತಾಯೆ ನೋಡು, ನಿನ್ನ ಕಂಗಳಿಗೆ ಈ ರಾಜರು ಒಲಿವರೆ?,ನಿನ್ನ ಮನಸ್ಸಿನ ರಂಗದಲ್ಲಿ ಇವರು ಸರಿಯಾಗಿ ನಿಲ್ಲುವರೆ? ನಾನು ನಿನಗೆ ಈ ಅವನಿಪಾಲರ ಪರಿಚಯ ಮಾಡಿಕೊಡುತ್ತೇನೆ, ನಿನ್ನ ಇಂಗಿತ ಅವರ ಅಂತರಂವನ್ನು ಹೊರನೋಟದಿಂದ ಅವರ್ ಅಂಗ ಸೌಷ್ಠವನ್ನು ನಿರ್ಧರಿಸು, ಎಂದು ತನ್ನ ತಂಗಿಗೆ ಹೇಳಿದನು.

ಅರ್ಥ:
ತಂಗಿ: ಅನುಜೆ, ಸೋದರಿ; ನೋಡು: ವೀಕ್ಷಿಸು; ತಾಯೆ: ಮಾತೆ;ಕಂಗಳು: ಕಣ್ಣು, ನಯನ; ಒಲಿವರೆ: ಮೆಚ್ಚುವರೆ, ಇಷ್ಟ; ಚಿತ್ತ: ಮನಸ್ಸು; ರಂಗ: ಸ್ಥಳ; ತೂಗುವರೆ: ಸರಿಯಾಗುವರೆ; ತೋರುವೆ: ತೋರಿಸು, ಪರಿಚಯಿಸು; ಅವನಿಪಾಲ: ರಾಜ; ಇಂಗಿತ: ಇಚ್ಛೆ; ಅಂತರಂಗ: ಒಳಮನಸ್ಸು; ಅಂಗ: ಭಾಗ; ಅಂಗವಟ್ಟ: ಮೈಕಟ್ಟು, ಅಂಗಸೌಷ್ಠವ; ಬಳಕೆ: ಉಪಯೋಗ; ಬಹಿರಂಗ: ಹೊರಗೆ; ಅರಿ: ತಿಳಿ; ನುಡಿ: ಮಾತಾಡು;

ಪದವಿಂಗಡಣೆ:
ತಂಗಿ +ನೋಡೌ +ತಾಯೆ +ನಿನ್ನಯ
ಕಂಗಳ್+ಒಲಿವರೆ+ ಚಿತ್ತ+ವಾರ್ಧಿತ
ರಂಗದಲಿ+ ತೂಗುವರೆ+ ತೋರುವೆನ್+ಅವನಿಪಾಲಕರ
ಇಂಗಿತದಲ್+ಅವರ್+ಅಂತರಂಗವನ್
ಅಂಗವಟ್ಟದ+ ಬಳಕೆಯನು +ಬಹಿ
ರಂಗದಲಿ+ನೀನ್+ಅರಿ+ಎನುತ+ ನುಡಿದನು+ ನಿಜಾನುಜೆಗೆ

ಅಚ್ದ್ಚರಿ:
(೧) ತಂಗಿ, ಅನುಜೆ – ಸಮಾನಾರ್ಥಕ ಪದ, ಪದ್ಯದ ಮೊದಲ ಹಾಗು ಕೊನೆ ಪದ
(೨) ನೋಡೌ, ನುಡಿ – ನೋಡಿ, ಮಾತಾಡು – ಮೊದಲ ಹಾಗು ಕೊನೆಯ ೨ ಪದ
(೩) ತ, ನ ಪದಗಳ ಮಿಲನ – ತಂಗಿ ನೋಡೌ ತಾಯೆ ನಿನ್ನಯ
(೪) ಜೋಡಿ ಪದಗಳು – “ತ” – ತೂಗುವರೆ ತೋರುವೆನ; “ಬ”- ಬಳಕೆಯನು ಬಹಿರಂಗ; “ನ” – ನುಡಿದನು ನಿಜಾನುಜೆಗೆ
(೫) ರಂಗ, ಅಂತರಂಗ, ಬಹಿರಂಗ, ಅಂಗ – ಂಗ ದಿಂದ ಕೊನೆಗೊಳ್ಳುವ ಪದಗಳು
(೬) ವಿರುದ್ಧ ಪದ – ಅಂತರಂಗ, ಬಹಿರಂಗ

ಪದ್ಯ ೨೭: ದುರ್ಯೋಧನನು ರಂಗವನು ಹೇಗೆ ಪ್ರವೇಶಿಸಿದನು?

ಹೋ ನಿರಂತರ ಗಜಬಜವು ತಾ
ನೇನು ಜೀಯವಧಾರು ಚಿತ್ತವ
ಧಾನವೆಂದುದು ಸಾಲಕಂಚುಕಿ ನಿಕರ ಕೈ ನೆಗಹಿ
ಭಾನುವಿನ ಭಾರಣೆಯವೋಲು
ತ್ಥಾನಮುಖ ಚತುರಾಕ್ಷ ಭೂಪನ
ಸೂನು ಹೊಕ್ಕನು ರಂಗವನು ಭೀಷ್ಮಾದಿಗಳಿಗೆರಗಿ (ಆದಿ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅಲ್ಲಿ ನೆರದಿದ್ದ ಅವನ ಪರಿವಾರದ ಜನರು, ಹೋ ಇದೇನು ನಿರಂತರವಾದ ಶಬ್ದ, ಜೀಯ ಇದನ್ನು ಗಮನವಿಟ್ಟು ಕೇಳು ಎಂದು ಕೈ ಯೆತ್ತಿ ಘೋಷಿಸಿದರು. ಸೂರ್ಯನಂತೆ ಹೊಳೆಯುವ ಕಾಂತಿಯುತವಾದ ಮುಖವನ್ನು ಮೇಲಕೆತ್ತಿ ಧೃತರಾಷ್ಟ್ರ ಸುತನಾದ ದುರ್ಯೋಧನನು ಭೀಷ್ಮನೆ ಮೊದಲಾದವರಿಗೆ ನಮಸ್ಕರಿಸಿ ರಂಗವನ್ನು ಪ್ರವೇಶಿಸಿದನು.

ಅರ್ಥ:
ನಿರಂತರ: ಸದಾ, ಯಾವಾಗಲು; ಗಜಬಜ: ಶಬ್ದ, ಗುಂಪಿನಲ್ಲಾಗುವ ಶಬ್ದ; ಜೀಯ: ಒಡೆಯ, ಯಜಮಾನ; ಚಿತ್ತ: ಬುದ್ದಿ, ಮನಸ್ಸು; ಕಂಚುಕಿ: ಅಂತಃಪುರದ ಅಧಿಕಾರಿ, ದ್ವಾರಪಾಲಕ;ನಿಕರ: ಗುಂಪು; ನೆಗಹು: ಮೇಲಕ್ಕೆ ಎತ್ತು; ಭಾನು: ಸೂರ್ಯ; ಬಾರಣೆ: ಹೊರೆ, ಭಾರ, ಹಿರಿಮೆ; ಉತ್ಥಾನ: ಎದ್ದು ನಿಲ್ಲುವುದು; ಮುಖ: ವಕ್ತ್ರ; ಚತುರ: ನಾಲ್ಕು, ಅಕ್ಷ: ನಯನ, ಕಣ್ಣು; ಭೂಪ: ರಾಜ; ಸೂನು: ಮಗ; ಹೊಕ್ಕು: ಬಂದನು, ಪ್ರವೇಶಿಸು; ಎರಗಿ: ನಮಸ್ಕರಿಸಿ;

ಪದವಿಂಗಡನೆ:
ಹೋ + ನಿರಂತರ+ ಗಜಬಜವು +ತಾನ್
ಏನು +ಜೀಯವಧಾರು +ಚಿತ್ತವ
ಧಾನ+ವೆಂದುದು+ ಸಾಲ+ಕಂಚುಕಿ +ನಿಕರ+ ಕೈ +ನೆಗಹಿ
ಭಾನುವಿನ+ ಭಾರಣೆಯ+ವೋಲ್
ಉತ್ಥಾನಮುಖ + ಚತುರಾಕ್ಷ +ಭೂಪನ
ಸೂನು +ಹೊಕ್ಕನು +ರಂಗವನು +ಭೀಷ್ಮಾದಿಗಳಿಗ್+ಎರಗಿ

ಅಚ್ಚರಿ:
(೧) ಧೃತರಾಷ್ತ್ರನಿಗೆ ಚತುರಾಕ್ಷ ಎಂದು ಸಂಭೋದಿಸಿರುವುದು, ಈ ಹಿಂದೆ ಅಂಧ ನೃಪಾಲ ಎಂದು ಸಂಭೋದಿಸಿರುವುದನ್ನು ನೋಡಿದ್ದೆವು, ಆದರೆ ಇಲ್ಲಿ ಚತುರಾಕ್ಷ? ಧೃತರಾಷ್ತ್ರ ಯಾವಗಲು ಇನ್ನೊಬ್ಬರ ಕಣ್ಣಿನ ಸಹಾಯದಿಂದ ನೋಡುವವನಾದ್ದರಿಂದ ಚತುರಾಕ್ಷ ಎಂದು ಸಂಭೋದಿಸಿದ್ದಾರೆಯೆ?
(೨) ಆಡುವ ಭಾಷೆಯ ಪ್ರಯೋಗ: ಹೋ, ಗಜಬಜ,
(೩) ಹಿಂದಿನ ಪದ್ಯದಲ್ಲಿ ಅವನ ದೇಹ ಕಾಂತಿ, ಖಡ್ಗ ಕಾಂತಿಯ ಬಗ್ಗೆ ವಿವರವಿತ್ತು, ಇಲ್ಲಿ ಅವನ ಮುಖ ಕಾಂತಿ ಬಗ್ಗೆ ವರ್ಣಿಸಿದೆ