ಪದ್ಯ ೧೨: ಪಾಂಡವರ ಗುಂಪಿನಲ್ಲಿದ್ದ ಪರಾಕ್ರಮಿಗಳಾರು?

ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯುತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ (ಶಲ್ಯ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧರ್ಮಜನ ಎಡದಲ್ಲಿ ಸಾತ್ಯಕಿ ಅರ್ಜುನ, ನಕುಲ, ಸಹದೇವ ಸೋಮಕ, ಯುಧಾಮನ್ಯು, ಉತ್ತಮೌಜಸ, ಸೃಂಜಯರೇ ಮೊದಲಾದವರಿದ್ದರು. ಬಲಭಾಗದಲ್ಲಿ ಉಪಪಾಂಡವರು, ಭೀಮ ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಉಳಿದ ಪಾಂಚಾಲರು ಇದ್ದರು.

ಅರ್ಥ:
ಅರಸ: ರಾಜ; ವಂಕ: ಬದಿ, ಮಗ್ಗುಲು; ನರ: ಅರ್ಜುನ; ಆದಿ: ಮುಂತಾದ; ನೆರೆ: ಗುಂಪು; ಬಲ: ದಕ್ಷಿಣ; ಎಡ: ವಾಮ; ತನುಜ: ಮಕ್ಕಳು; ಸುತ: ಮಗ; ಘನ: ಶ್ರೇಷ್ಠ; ಪರಿವಾರ: ಪರಿಜನ;

ಪದವಿಂಗಡಣೆ:
ಅರಸನ್+ಎಡವಂಕದಲಿ +ಸಾತ್ಯಕಿ
ನರ +ನಕುಲ +ಸಹದೇವ +ಸೋಮಕ
ವರ+ ಯುಧಾಮನ್ಯ+ಉತ್ತಮೌಜಸ+ ಸೃಂಜ+ಆದಿಗಳು
ನೆರೆದುದಾ +ಬಲವಂಕದಲಿ +ತನು
ಜರು +ವೃಕೋದರ +ದ್ರುಪದ+ಸುತ +ದು
ರ್ಧರ +ಶಿಖಂಡಿ +ಪ್ರಮುಖ +ಘನ+ಪಾಂಚಾಲ +ಪರಿವಾರ

ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದ
(೨) ಜೋಡಿ ಅಕ್ಷರದ ಪದ – ನರ, ನಕುಲ; ಸಹದೇವ ಸೋಮಕ

ಪದ್ಯ ೩೮: ಅರ್ಜುನನ ಮುಂದೆ ಯಾರು ಬಂದು ನಿಂತರು?

ವರ ಯುಧಾಮನ್ಯೂತ್ತಮೌಂಜಸ
ರೆರಡು ಕಡೆಯಲಿ ಬರೆ ಮುರಾರಿಯ
ಪರಮ ಸಾಹಾಯ್ಯದಲಿ ಸಾಹಸಮಲ್ಲನುರವಣಿಸಿ
ಅರಿಬಲವ ಕೆಣಕಿದನು ಪಾರ್ಥನ
ಬರವನೀಕ್ಷಿಸಿ ತನ್ನ ಸೇನೆಗೆ
ಬೆರಳ ಚೌರಿಯ ಬೀಸಿ ದುಶ್ಯಾಸನನು ಮಾರಾಂತ (ದ್ರೋಣ ಪರ್ವ, ೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಯುಧಾಮನ್ಯು ಉತ್ತಮೌಂಜಸರು ಅಕ್ಕ ಪಕ್ಕದಲ್ಲಿ ಬರುತ್ತಿರಲು ಶ್ರೀಕೃಷ್ಣನ ಅತಿಶಯ ಬೆಂಬಲದಿಂದ ಸಾಹಸಮಲ್ಲನಾದ ಅರ್ಜುನನು ಶತ್ರು ಸೈನ್ಯವನ್ನು ಕೆಣಕಿದನು. ಅರ್ಜುನನು ಬಂದುದನ್ನು ನೋಡಿ ದುಶ್ಯಾಸನನು ತನ್ನ ಸೇನೆಗೆ ಚೌರಿಯನ್ನು ಬೀಸಿ ಅರ್ಜುನನ ಮುಂದೆ ಬಂದು ನಿಂತನು.

ಅರ್ಥ:
ವರ: ಶ್ರೇಷ್ಠ; ಮುರಾರಿ: ಕೃಷ್ಣ; ಪರಮ: ಶ್ರೇಷ್ಠ; ಸಾಹಾಯ: ಬೆಂಬಲ; ಸಾಹಸ: ಪರಾಕ್ರಮ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಅರಿ: ವೈರಿ; ಬಲ: ಶಕ್ತಿ; ಕೆಣಕು: ರೇಗಿಸು; ಬರವು: ಬರುವಿಕೆ; ಈಕ್ಷಿಸು: ನೋಡು; ಸೇನೆ: ಸೈನ್ಯ; ಬೆರಳು: ಅಂಗುಲಿ; ಚೌರಿ: ಚೌರಿಯ ಕೂದಲು, ಗಂಗಾವನ; ಬೀಸು: ಬೀಸುವಿಕೆ, ತೂಗುವಿಕೆ; ಮಾರಾಂತು: ಎದುರಾಗು;

ಪದವಿಂಗಡಣೆ:
ವರ +ಯುಧಾಮನ್ಯ+ಉತ್ತಮೌಂಜಸರ್
ಎರಡು +ಕಡೆಯಲಿ +ಬರೆ +ಮುರಾರಿಯ
ಪರಮ+ ಸಾಹಾಯ್ಯದಲಿ +ಸಾಹಸಮಲ್ಲನ್+ಉರವಣಿಸಿ
ಅರಿಬಲವ +ಕೆಣಕಿದನು +ಪಾರ್ಥನ
ಬರವನೀಕ್ಷಿಸಿ +ತನ್ನ +ಸೇನೆಗೆ
ಬೆರಳ +ಚೌರಿಯ +ಬೀಸಿ +ದುಶ್ಯಾಸನನು +ಮಾರಾಂತ

ಅಚ್ಚರಿ:
(೧) ವರ, ಪರಮ – ಸಾಮ್ಯಾರ್ಥ ಪದ

ಪದ್ಯ ೯: ಪಾಂಡವರ ಸೇನಾಪತಿಯಾರು?

ಇವ ಕಣಾ ಪಾಂಡವರ ಸೇನಾ
ರ್ಣವಕೆ ನಾಯಕನಿವನ ಕೆಲಬಲ
ದವರು ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ
ಬವರಿಗರು ಪಾಂಚಾಲಕುಲಸಂ
ಭವರು ದ್ರುಪದ ಸಹೋದರರು ಮ
ತ್ತಿವರು ಸೃಂಜಯ ವರ ಯುಧಾಮನ್ಯೂತ್ತಮೌಂಜಸರು (ಭೀಷ್ಮ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ನೋಡು ದುರ್ಯೋಧನ ಅಲ್ಲಿ ಕಾಣುವವನೇ ಪಾಂಡವರ ಸೇನಾ ಸಮುದ್ರದ ಸೇನಾಧಿಪತಿ, ಸುತ್ತ ನಿಂತ ರಥಿಕರು ಪಾಂಚಾಲ ವಂಶದ ದ್ರುಪದನ ಸಹೋದರರು. ಇವರು ಯುಧಾಮನ್ಯು, ಸೃಂಜಯ ಮತ್ತು ಉತ್ತಮೌಂಜಸರು.

ಅರ್ಥ:
ಅರ್ಣವ: ಸಮುದ್ರ; ನಾಯಕ: ಒಡೆಯ; ಕೆಲಬಲ: ಅಕ್ಕಪಕ್ಕ, ಎಡಬಲ; ತೆಕ್ಕೆ: ಅಪ್ಪುಗೆ, ಆಲಿಂಗನ; ತೇರು:ಬಂಡಿ; ತೇಜಿ: ಕುದುರೆ; ಥಟ್ಟು: ಪಕ್ಕ, ಕಡೆ; ಉನ್ನತಿ: ಏಳಿಗೆ; ಬವರ: ಕಾಳಗ, ಯುದ್ಧ; ಬವರಿಗರು: ಯುದ್ಧಮಾಡುವವರು; ಕುಲ: ವಂಶ; ಸಂಭವ: ಹುಟ್ಟು; ಸಹೋದರ: ಅಣ್ಣ ತಮ್ಮಂದಿರು;

ಪದವಿಂಗಡಣೆ:
ಇವ +ಕಣಾ +ಪಾಂಡವರ +ಸೇನ
ಅರ್ಣವಕೆ +ನಾಯಕನ್+ಇವನ +ಕೆಲಬಲ
ದವರು +ತೆಕ್ಕೆಯ +ತೇರ +ತೇಜಿಯ+ ಥಟ್ಟಿನ್+ಉನ್ನತಿಯ
ಬವರಿಗರು+ ಪಾಂಚಾಲ+ಕುಲ+ಸಂ
ಭವರು +ದ್ರುಪದ+ ಸಹೋದರರು +ಮ
ತ್ತಿವರು+ ಸೃಂಜಯ+ ವರ+ ಯುಧಾಮನ್ಯ+ಉತ್ತಮೌಂಜಸರು

ಅಚ್ಚರಿ:
(೧) ಸೇನಾಗಾತ್ರವನ್ನು ಸಮುದ್ರಕ್ಕೆ ಹೋಲಿಸುವ ಪರಿ – ಪಾಂಡವರ ಸೇನಾರ್ಣವಕೆ ನಾಯಕ
(೨) ತ ಕಾರದ ಸಾಲು ಪದ – ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ

ಪದ್ಯ ೧: ಭೀಮನು ಕೃಷ್ಣನಿಗೆ ತನ್ನ ನಿಲುವೇನೆಂದು ಹೇಳಿದನು?

ದೇವ ಸಂಧಿಯನೊಲಿದು ಮಾಡುವು
ದಾವು ಮುಖದಿರುಹಿದೆವುಯೀ ಸಹ
ದೇವನೀ ಸಾತ್ಯಕಿ ಯುಧಾಮನ್ಯುತ್ತಮೌಜಸರ
ಭಾವವೆಮ್ಮದು ಬಳಿಕಲರ್ಜುನ
ದೇವ ಧರ್ಮಜ ನಕುಲರೆಂಬುದ
ನಾವು ಮಿಸುಕುವರಲ್ಲ ಚಿತ್ತೈಸೆಂದನಾ ಭೀಮ (ಉದ್ಯೋಗ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ಹೇ ಕೃಷ್ಣ ಸಂಧಿಗೆ ಮನಸ್ಸಿಲ್ಲದೆ ನಾನು ಹಿಂದೆ ಸಂಧಿಗೆ ಒಪ್ಪಿದೆ, ಸಹದೇವ, ಸಾತ್ಯಕಿ, ಯುಧಾಮ ಮತ್ತಿತರು ಸಂಧಿಗೆ ತಮ್ಮ ಅಸಮ್ಮತಿ ಸೂಚಿಸಿರುವ ಭಾವವೇ ನನ್ನದು, ನಂತರ ಅರ್ಜುನ, ಧರ್ಮಜ, ನಕುಲರ ಸಂಧಿಯ ವಿಚಾರಕ್ಕೆ ನಾನು ಒಪ್ಪುವುದಿಲ್ಲ ಎಂದು ಭೀಮನು ಕೃಷ್ಣನಿಗೆ ತಿಳಿಸಿದನು.

ಅರ್ಥ:
ದೇವ: ಭಗವಂತ, ಆರ್ಯ; ಸಂಧಿ: ಸಂಯೋಗ, ರಾಜಿ; ಒಲಿದು: ಒಪ್ಪಿ; ಮುಖ: ಆನನ; ಮಿಸುಗು: ಅಲುಗಾಟ; ಚಿತ್ತೈಸು: ಗಮನಿಸು;

ಪದವಿಂಗಡಣೆ:
ದೇವ +ಸಂಧಿಯನ್+ಒಲಿದು +ಮಾಡುವುದ್
ಆವು +ಮುಖದ್+ಇರುಹಿದೆವು+ಈ+ ಸಹ
ದೇವನ್+ಈ+ ಸಾತ್ಯಕಿ+ ಯುಧಾಮನ್ಯ್+ಉತ್ತಮೌಜಸರ
ಭಾವವ್+ಎಮ್ಮದು +ಬಳಿಕಲ್+ಅರ್ಜುನ
ದೇವ +ಧರ್ಮಜ +ನಕುಲರ್+ಎಂಬುದ
ನಾವು +ಮಿಸುಕುವರಲ್ಲ +ಚಿತ್ತೈಸೆಂದನಾ +ಭೀಮ

ಅಚ್ಚರಿ:
(೧) ಹೆಸರುಗಳ ಬಳಕೆ – ದೇವ (ಕೃಷ್ಣ), ಸಹದೇವ, ಸಾತ್ಯಕಿ, ಯುಧಾಮನ್ಯ, ಅರ್ಜುನ, ಧರ್ಮಜ, ನಕುಲ, ಭೀಮ