ಪದ್ಯ ೩೭: ದುರ್ಯೋಧನನು ಕೃಷ್ಣನನ್ನೇಕೆ ಬೈದನು?

ಅರಸ ತಲೆಗುತ್ತಿದನು ದೃಗು ಜಲ
ವುರವಣಿಸಿ ಮೌನದಲಿ ಫಲುಗುಣ
ನಿರೆ ಮುರಾರಿ ಸುಯೋಧನನ ಸರ್ವಾವಗುಣ ಗಣವ
ಪರಿಪರಿಯಲೆಚ್ಚರಿಸಿ ದುಗುಡವ
ಪರಿಹರಿಸಿ ಸಂತೈಸಿದಡೆ ಮುರ
ಹರನ ಬೈದನು ನಿನ್ನ ಮಗ ನಾನಾ ವಿಡಂಬದಲಿ (ಗದಾ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ಧರ್ಮಜನು ತಲೆ ತಗ್ಗಿಸಿ ಕಣ್ಣೀರಿಟ್ಟನು. ಅರ್ಜುನನು ಮೌನದಿಂದಿದ್ದನು. ಶ್ರೀಕೃಷ್ಣನು ದುರ್ಯೋಧನನ ಸಮಸ್ತ ದುರ್ಗುಣಗಳನ್ನು ನೆನಪಿಸಿ ಅವರ ದುಃಖವನ್ನು ಕಡಿಮೆ ಮಾಡುತ್ತಿರಲು, ನಿನ್ನ ಮಗನು ಕೃಷ್ಣನನ್ನು ಹಲವು ತೆರದಿಂದ ಬೈದನು.

ಅರ್ಥ:
ಅರಸ: ರಾಜ; ತಲೆ: ಶಿರ; ಕುತ್ತು: ಬಾಗು, ಕುಸಿ; ದೃಗುಜಲ: ಕಣ್ಣೀರು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಮೌನ: ಮಾತಿಲ್ಲದ ಸ್ಥಿತಿ; ಮುರಾರಿ: ಕೃಷ್ಣ; ಅವಗುಣ: ದುರ್ಗುಣ, ದೋಷ; ಗಣ: ಸಮೂಹ, ಗುಂಪು; ಪರಿಪರಿ: ಹಲವಾರು; ಎಚ್ಚರ: ಹುಷಾರಾಗಿರುವಿಕೆ; ದುಗುಡ: ದುಃಖ; ಪರಿಹರಿಸು: ನಿವಾರಿಸು; ಸಂತೈಸು: ಸಮಾಧಾನ ಪಡಿಸು; ಮುರಹರ: ಕೃಷ್ಣ; ಬೈದನು: ಜರೆದನು; ಮಗ: ಸುತ; ವಿಡಂಬ: ಅನುಸರಣೆ, ಅಣಕ, ಪರಿಹಾಸ್;

ಪದವಿಂಗಡಣೆ:
ಅರಸ +ತಲೆಗುತ್ತಿದನು +ದೃಗು +ಜಲವ್
ಉರವಣಿಸಿ +ಮೌನದಲಿ +ಫಲುಗುಣನ್
ಇರೆ+ ಮುರಾರಿ +ಸುಯೋಧನನ +ಸರ್ವಾವಗುಣ+ ಗಣವ
ಪರಿಪರಿಯಲ್+ಎಚ್ಚರಿಸಿ +ದುಗುಡವ
ಪರಿಹರಿಸಿ+ ಸಂತೈಸಿದಡೆ +ಮುರ
ಹರನ +ಬೈದನು +ನಿನ್ನ+ ಮಗ+ ನಾನಾ +ವಿಡಂಬದಲಿ

ಅಚ್ಚರಿ:
(೧) ಕಣ್ಣೀರು ಎಂದು ಹೇಳಲು ದೃಗುಜಲ ಪದದ ಬಳಕೆ
(೨) ದುಃಖವನ್ನು ಹೋಗಲಾಡಿಸುವ ಪರಿ – ಸುಯೋಧನನ ಸರ್ವಾವಗುಣ ಗಣವಪರಿಪರಿಯಲೆಚ್ಚರಿಸಿ ದುಗುಡವ ಪರಿಹರಿಸಿ ಸಂತೈಸಿ

ಪದ್ಯ ೨೮: ಕರ್ಣನು ಹಿಂದಕ್ಕೆ ಹೇಗೆ ಸರಿದನು?

ಅರಿಭಟನ ಶರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ
ಶರ ಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ (ವಿರಾಟ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅರ್ಜುನನು ಕರ್ಣನ ಬಾಣಗಳನ್ನು ನಿಮಿಷದೊಳಗೆ ಸಂಹರಿಸಿ, ಎರಡು ಬಾಣಗಳಿಂದ ಕರ್ನನ ಸಾರಥಿಯನ್ನೂ, ಐದು ಬಾಣಗಳಿಂದ ಅವನ ಕುದುರೆಗಳನ್ನೂ, ನಾಲ್ಕು ಬಾಣಗಳಿಂದ ಅವನ ಕೈಯಲ್ಲಿದ್ದ ಬಿಲ್ಲನ್ನೂ ಕಡಿದು ಹಾಕಲು, ಗೆಲುವಿನ ಆವೇಶದಲ್ಲಿದ್ದ ಕರ್ಣನು ಮೌನದಿಂದ ಹಿಂದಕ್ಕೆ ಸರಿದನು.

ಅರ್ಥ:
ಅರಿ: ವೈರಿ; ಭಟ: ಸೈನಿಕ; ಶರ: ಬಾಣ; ಜಾಲ: ಬಲೆ; ಸಂಹರಿಸು: ನಾಶಮಾದು; ನಿಮಿಷ: ಕ್ಷಣಮಾತ್ರ; ಸಾರಥಿ: ಸೂತ; ಅಂಬು: ಬಾಣ; ಹಯ: ಕುದುರೆ; ಕರ: ಕೈ; ಬಿಲ್ಲು: ಚಾಪ; ಕಡಿ: ಸೀಳು; ಭಗ್ನ: ನಾಶ; ಉತ್ಕರ್ಷ:ಹೆಚ್ಚಳ, ಮೇಲ್ಮೆ; ಭಂಗ: ನಾಶ; ಮುರಿ: ಸೀಳು; ಮೌನ: ಸುಮ್ಮನಿರುವಿಕೆ;

ಪದವಿಂಗಡಣೆ:
ಅರಿಭಟನ +ಶರಜಾಲವನು +ಸಂ
ಹರಿಸಿದನು +ನಿಮಿಷದಲಿ +ಫಲುಗುಣನ್
ಎರಡು +ಶರದಲಿ +ಸಾರಥಿಯನ್+ಐದ್+ಅಂಬಿನಲಿ +ಹಯವ
ಶರ +ಚತುಷ್ಟಯದಿಂದ +ಕರ್ಣನ
ಕರದ +ಬಿಲ್ಲನು +ಕಡಿಯೆ +ಭಗ್ನ
ಉತ್ಕರುಷ+ ಭಂಗಿತನಾಗಿ +ಮುರಿದನು +ಮೌನದಲಿ +ಕರ್ಣ

ಅಚ್ಚರಿ:
(೧) ಕರ್ಣನು ಹಿಂದಕ್ಕೆ ಸರಿದ ಪರಿ – ಭಗ್ನೋತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ

ಪದ್ಯ ೧೭: ದ್ರೌಪದಿ ಏಕೆ ದುಃಖಿಸಿದಳು?

ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಮಗ್ಗುಲಾಗಿ ಎದ್ದು ತಲೆಗೂದಲಿನ ಮಣ್ಣನ್ನು ಕೊಡುವುತ್ತಾ, ಗಲ್ಲದ ಮೇಲಿನ ರಕ್ತವನ್ನು ಬೆರಳಿನಿಂದ ಮಿಡಿದು ಆ ದುಷ್ಟನು ಒಂದು ಹೆಣ್ಣನ್ನು ಬಡಿಯುತ್ತಿರುವಾಗ, ಆಸ್ಥಾನದಲ್ಲಿರುವ ಹಿರಿಯರಾದ ನೀವು ಒಂದಾದರೂ ಮಾತನಾಡಲಿಲ್ಲವಲ್ಲಾ! ಮೌನ ವ್ರತಕ್ಕೆ ನೀವು ಆರಿಸಿಕೊಂಡ ಹೊತ್ತು ಬಹಳ ಪ್ರಶಸ್ತವಾಗಿದೆ ಎಂದಳು.

ಅರ್ಥ:
ಹೊಡೆ: ಪೆಟ್ಟು; ಮರಳಿ: ಮತ್ತೆ; ಮುರಿ: ಸೀಳು; ಎದ್ದು: ಮೇಲೇಳು; ತುರುಬು: ತಲೆಗೂದಲು; ಹುಡಿ: ಮಣ್ಣು; ಕೊಡವು:ದೂಳನ್ನು ಹೊರಹಾಕು; ಮೊಲೆ: ಸ್ತನ; ಮೇಲುದು: ವಸ್ತ್ರ; ತೊಡಿಸು: ಹೊದ್ದು; ಗಲ್ಲ: ಕೆನ್ನೆ; ರಕುತ: ನೆತ್ತರು; ಬೆರಳು: ಅಂಗುಲಿ; ಮಿಡಿ: ಹೊಮ್ಮಿಸು; ನುಡಿ: ಮಾತು; ಖಳ: ದುಷ್ಟ; ಹೆಂಗುಸು: ಸ್ತ್ರೀ; ಬಡಿ: ಹೊಡೆ; ನೋಡು: ವೀಕ್ಷಿಸು; ಹಿರಿಯ: ದೊಡ್ಡವ; ಹಿಡಿ: ಗ್ರಹಿಸು; ಮೌನ: ಮಾತನಾಡದಿರುವ ಸ್ಥಿತಿ; ಹೊತ್ತು: ಉಂಟಾಗು, ಒದಗು; ಲೇಸು: ಒಳಿತು; ಹಲುಬು: ದುಃಖಪಡು, ಬೇಡು; ಅಬಲೆ: ಹೆಣ್ಣು;

ಪದವಿಂಗಡಣೆ:
ಹೊಡೆ +ಮರಳಿ +ಮುರಿದೆದ್ದು +ತುರುಬಿನ
ಹುಡಿಯ +ಕೊಡಹುತ +ಮೊಲೆಗೆ+ ಮೇಲುದು
ತೊಡಿಸಿ+ ಗಲ್ಲದ +ರಕುತವನು +ಬೆರಲಿಂದ +ಮಿಡಿಮಿಡಿದು
ನುಡಿಯಲಾಗದೆ+ ಖಳನು +ಹೆಂಗುಸ
ಬಡಿಯೆ+ ನೋಡುತ್ತಿಹರೆ+ ಹಿರಿಯರು
ಹಿಡಿದ +ಮೌನವ +ಹೊತ್ತು +ಲೇಸೆಂದ್+ಅಬಲೆ +ಹಲುಬಿದಳು

ಅಚ್ಚರಿ:
(೧) ದ್ರೌಪದಿಯು ಸಭೆಯನ್ನು ಬಯ್ದ ಪರಿ – ಹಿರಿಯರು ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು

ಪದ್ಯ ೪೪: ಭೀಷ್ಮನು ಧೃತರಾಷ್ಟ್ರನಿಗೆ ಯಾರನ್ನು ಸಂತೈಸಲು ಹೇಳಿದನು?

ಆಹಹ ಭೂತ ಕ್ಷೋಭವಿದು ನಿ
ರ್ದಹಿಸುವುದು ಕುರುಕುಲವ ನಕಟೀ
ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದೆಲೆ
ಕುಹಕಿ ಮಕ್ಕಳನಿಕ್ಕಿ ಮೌನದೊ
ಳಿಹರೆ ಬಾ ಧೃತರಾಷ್ಟ್ರ ಪಾಂಡವ
ಮಹಿಳೆಯನು ಸಂತೈಸು ನಡೆನಡೆಯೆಂದನಾ ಭೀಷ್ಮ (ಸಭಾ ಪರ್ವ, ೧೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಪಂಚಭೂತಗಳಲ್ಲಿ ಉಂಟಾದ ಈ ಕೋಲಾಹಲವು ಕುರುಕುಲವನ್ನೇ ಸುಟ್ಟು ಬೂದಿ ಮಾಡುತ್ತದೆ, ದ್ರೌಪದಿಯು ದೇವತೆಗಳಿಗೆ ಮೊರೆಯಿಟ್ಟುದುದರಿಂದ ದೇವತೆಗಳು ಈ ಉತ್ಪಾತಗಳನ್ನುಂಟುಮಾಡುತ್ತಿದ್ದಾರೆ. ನಿನ್ನ ದುಷ್ಟ ಮಕ್ಕಳನ್ನು ದುಷ್ಕೃತ್ಯಮಾಡಲು ಬಿಟ್ಟು ನೀನು ಮೌನದಿಂದಿರುವುದು ಸರಿಯಲ್ಲ. ದ್ರೌಪದಿಯನ್ನು ಸಂತೈಸು ಬಾ, ನಡೆ ಎಂದು ಭೀಷ್ಮನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಅಹಹ: ಓಹೋ!; ಭೂತ: ದೆವ್ವ, ಪಿಶಾಚಿ, ಪಂಚಭೂತ; ಕ್ಷೋಭೆ: ಉದ್ವೇಗ; ದಹಿಸು: ಸುಡು; ಅಕಟ: ಅಯ್ಯೋ; ಮಹಿಳೆ: ಹೆಣ್ಣು; ಒರಲು: ಗೋಳು, ಕೂಗು; ಅಮರ: ದೇವ, ಸುರರು; ನಿಕರ: ಗುಂಪು; ದೈವ: ಭಗವಂತ; ಕೃತ: ಮಾಡಿದ; ಕುಹಕಿ: ಕಪಟಿ; ಮಕ್ಕಳು: ಪುತ್ರರು; ಮೌನ: ಸದ್ದಿಲ್ಲದ ಸ್ಥಿತಿ; ಸಂತೈಸು: ಸಮಾಧಾನ ಪಡಿಸು; ನಡೆ: ಚಲಿಸು, ಮುಂದೆ ಹೋಗು;

ಪದವಿಂಗಡಣೆ:
ಆಹಹ +ಭೂತ +ಕ್ಷೋಭವಿದು +ನಿ
ರ್ದಹಿಸುವುದು +ಕುರುಕುಲವನ್ + ಅಕಟ
ಈ+ಮಹಿಳೆ+ಒರಲಿದಳ್+ಅಮರ+ ನಿಕರಕೆ +ದೈವ+ಕೃತವಿದ್+ಎಲೆ
ಕುಹಕಿ+ ಮಕ್ಕಳನಿಕ್ಕಿ+ ಮೌನದೊಳ್
ಇಹರೆ+ ಬಾ +ಧೃತರಾಷ್ಟ್ರ +ಪಾಂಡವ
ಮಹಿಳೆಯನು +ಸಂತೈಸು +ನಡೆನಡೆ+ಎಂದನಾ +ಭೀಷ್ಮ

ಅಚ್ಚರಿ:
(೧) ದ್ರೌಪದಿಯನ್ನು ಮಹಿಳೆ ಎಂದು ಕರೆದಿರುವುದು
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಕುಹಕಿ ಮಕ್ಕಳನಿಕ್ಕಿ ಮೌನದೊಳಿಹ

ಪದ್ಯ ೯೬: ವಿಕರ್ಣನು ಸಭಾಸದರನ್ನು ಏಕೆ ಜರೆದನು?

ಅರಿದು ಮೌನವೊ ಮೇಣು ಮಾನಿನಿ
ಯೊರಲುತಿರಲೆಂದಾದುಪೇಕ್ಷೆಯೊ
ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ
ಅರಿಯಿರೇ ಸಮವರ್ತಿ ದೂತರ
ಮುರುಕವನು ನೀವೇಕೆ ನಿಮ್ಮನು
ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ (ಸಭಾ ಪರ್ವ, ೧೫ ಸಂಧಿ, ೯೬ ಪದ್ಯ)

ತಾತ್ಪರ್ಯ:
ಎಲ್ಲರ ಭೀತಿಯಿಂದ ಮೌನವಾಗಿರುವುದನ್ನು ಕಂಡು, ಕೌರವರಲ್ಲೊಬ್ಬನಾದ ವಿಕರ್ಣನು ಎದ್ದು ನಿಂತು, ಇದೇನು ತಿಳಿದು ಎಲ್ಲರೂ ಮೌನವಾಗಿದ್ದೀರಿ, ಹೆಣ್ಣೊಬ್ಬಳು ಪ್ರಶ್ನೆ ಕೇಳಿದಳೆಂದ ಅಲಕ್ಷವೋ? ನೇರವಾಗಿ ಕಡ್ಡಿ ಮುರಿದಹಾಗೆ ಸಮಸ್ಯೆಗೆ ಉತ್ತರವನ್ನು ಕೊಡಲು ನಿಮಗೆ ಸಾಧ್ಯವಿಲ್ಲವೋ? ಏತಕ್ಕಾಗಿ ಸುಮ್ಮನಿರುವಿರಿ? ತಿಳಿಯದೇ ನಿಮಗೆ ಪಾಂಡವರಿಗಾದ ನಾಶವು, ನಿಮ್ಮ ವಿವೇಕವನ್ನು ನೀವೇಕೆ ಮರೆತಿರಿ ಎಂದು ವಿಕರ್ಣನು ಕೇಳಿದನು.

ಅರ್ಥ:
ಅರಿ: ತಿಳಿ; ಮೌನ: ನೀರವತೆ, ಮಾತಿಲ್ಲದ ಸ್ಥಿತಿ; ಮೇಣು: ಮತ್ತು, ಅಥವಾ; ಮಾನಿನಿ: ಹೆಣ್ಣು; ಒರಲು: ಅರಚು, ಕೂಗಿಕೊಳ್ಳು; ಉಪೇಕ್ಷೆ:ಅಲಕ್ಷ್ಯ, ಕಡೆಗಣಿಸುವಿಕೆ; ಮುರಿ: ತುಂಡು, ಸೀಳು; ನುಡಿ: ಮಾತಾಡು; ಅಸಾಧ್ಯ: ಸಾಧ್ಯವಲ್ಲದ; ಸಮವರ್ತಿ: ತಾರತಮ್ಯ ಭಾವವಿಲ್ಲದವನು; ದೂತ: ಸೇವಕ; ಮುರುಕ: ಬಿಂಕ, ಬಿನ್ನಾಣ; ಮರೆ: ನೆನಪಿನಿಂದ ದೂರ ಮಾಡು; ಜರೆ: ಬಯ್ಯು; ಸಭೆ: ಓಲಗ;

ಪದವಿಂಗಡಣೆ:
ಅರಿದು +ಮೌನವೊ +ಮೇಣು +ಮಾನಿನಿ
ಒರಲುತಿರಲ್+ಎಂದಾದ್+ಉಪೇಕ್ಷೆಯೊ
ಮುರಿದು+ ನುಡಿವುದ್+ಅಸಾಧ್ಯವೋ +ಮೇಣ್+ಆವುದ್+ಇದರೊಳಗೆ
ಅರಿಯಿರೇ+ ಸಮವರ್ತಿ +ದೂತರ
ಮುರುಕವನು +ನೀವೇಕೆ +ನಿಮ್ಮನು
ಮರೆದಿರೆಂದು +ವಿಕರ್ಣ +ಜರೆದನು +ತತ್ಸಭಾಸದರ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೌನವೊ ಮೇಣು ಮಾನಿನಿ

ಪದ್ಯ ೭: ಕೃಷ್ಣನ ಮಾತು ಕೇಳಿ ಆಸ್ಥಾನವು ಹೇಗಾಯಿತು?

ವಿದುರನುತ್ಸವ ಕೃಪನ ಸಮ್ಮುದ
ನದಿಯ ಮಗನೊಲವಂಧನೃಪನ
ಭ್ಯುದಯ ಕೇಳೆಂದಸುರರಿಪು ನಯ ನುಡಿಯ ಗಡಣಿಸಲು
ಮದದ ಮೈಗಾಣಿಕೆಯ ಮನ ಲೇ
ಪದ ಮಹಾಖಳನಡ್ಡ ಮೊಗವಿಡ
ಲುದಧಿಯೊಳಗದ್ದಂತೆ ಮೌನದೊಳಿದ್ದುದಾಸ್ಥಾನ (ಉದ್ಯೋಗ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಪಾಂಡವರಿಗೆ ರಾಜ್ಯವನ್ನು ನೀಡಿದರೆ ವಿದುರನಿಗೆ ಸಂಭ್ರಮ, ಕೃಪಾಚಾರ್ಯರಿಗೆ ಸಂತೋಷ, ಭೀಷ್ಮರಿಗೆ ಪ್ರೀತಿ, ಧೃತರಾಷ್ಟ್ರನ ಅಭ್ಯುದಯದ ಮಾರ್ಗ ಎಂದು ನೀತಿಸಮ್ಮತವಾದ ಮಾತುಗಳನ್ನು ಕೃಷ್ಣನು ಹೇಳಲು, ಅಹಂಕಾರವನ್ನೇ ತನ್ನೊಳು ಪ್ರದರ್ಶಿಸುತ್ತಾ, ಮನಸ್ಸಿನಲ್ಲೂ ಅದನ್ನೇ ಲೇಪಿಸಿಕೊಂಡಿದ್ದ ದುಷ್ಟಬುದ್ಧಿಯುಳ್ಳ ದುರ್ಯೋಧನನು ಈ ಮಾತಿಗೆ ತನ್ನ ಅಸಮ್ಮತಿಯನ್ನು ಸೂಚಿಸುವಂತೆ ಮುಖವನ್ನು ತಿರುಗಿಸಿದನು. ಆಸ್ಥಾನವು ನಿಶ್ಯಬ್ದವಾಗಿ ಸಾಗರದಲ್ಲಿ ಮುಳುಗಿದಂತೆ ತೋರಿತು.

ಅರ್ಥ:
ಉತ್ಸವ: ಸಂಭ್ರಮ, ಸಡಗರ; ಸಮ್ಮುದ:ಅತಿಯಾದ ಆನಂದ; ಒಲವು: ಪ್ರೀತಿ; ಅಭ್ಯುದಯ: ಅಭಿವೃದ್ಧಿ, ಗೌರವ; ಅಸುರರಿಪು: ಕೃಷ್ಣ; ನಯ: ನೀತಿ; ನುಡಿ: ಮಾತು; ಗಡಣ: ಕೂಟ, ಸಹವಾಸ; ಮದ: ಅಹಂಕಾರ; ಮೈ: ತನು; ಗಾಣಿಕೆ:ತೋರಿಕೆ; ಮನ: ಮನಸ್ಸು; ಲೇಪ: ಹಚ್ಚು; ಮಹಾ: ಅತಿ; ಖಳ: ದುಷ್ಟ; ಅಡ್ಡ: ಚಿಕ್ಕದು; ಮೊಗ: ಮುಖ; ಉದಧಿ: ಸಮುದ್ರ; ಅದ್ದು: ಮಿಂದು; ಮೌನ: ನಿಶ್ಯಬ್ದತೆ; ಆಸ್ಥಾನ: ದರ್ಬಾರು;

ಪದವಿಂಗಡಣೆ:
ವಿದುರನ್+ಉತ್ಸವ +ಕೃಪನ +ಸಮ್ಮುದ
ನದಿಯ +ಮಗನ್+ಒಲವ್+ಅಂಧ+ನೃಪನ್
ಅಭ್ಯುದಯ +ಕೇಳ್+ಎಂದ್+ಅಸುರರಿಪು+ ನಯ +ನುಡಿಯ +ಗಡಣಿಸಲು
ಮದದ+ ಮೈಗಾಣಿಕೆಯ +ಮನ +ಲೇ
ಪದ +ಮಹಾಖಳನ್+ಅಡ್ಡ +ಮೊಗವಿಡಲ್
ಉದಧಿಯೊಳಗ್+ಅದ್ದಂತೆ +ಮೌನದೊಳಿದ್ದುದ್+ಆಸ್ಥಾನ

ಅಚ್ಚರಿ:
(೧) ದುರ್ಯೋಧನನ ಚಿತ್ರಣ (‘ಮ’ಕಾರದ ಸಾಲು ಪದಗಳು) – ಮದದ ಮೈಗಾಣಿಕೆಯ ಮನ ಲೇಪದ ಮಹಾಖಳನಡ್ಡ ಮೊಗವಿಡಲ್
(೨) ಉಪಮಾನದ ಪ್ರಯೋಗ – ಉದಧಿಯೊಳಗದ್ದಂತೆ ಮೌನದೊಳಿದ್ದುದಾಸ್ಥಾನ

ಪದ್ಯ ೧೩: ಕೃಷ್ಣನನ್ನು ಕಂಡ ವಿದುರನೇಕೆ ಮೌನವಾದ?

ನೆರೆಯೆ ಕೃತ್ಯಾಕೃತ್ಯ ಭಾವವ
ಮರೆದು ಕಳೆದನು ಮನ ಮುರಾರಿಯ
ನಿರುಕಿಕೊಂಡುದು ಕಂಗಳೊಡೆವೆಚ್ಚುವು ಪದಾಬ್ಜದಲಿ
ಅರಿವು ಮಯಣಾಮಯದ ಭಕ್ತಿಯೊ
ಳೆರಗಿಸಿದ ಪುತ್ಥಳಿಯವೊಲು ಕಡು
ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ (ಉದ್ಯೋಗ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೃಷ್ಣನ ಜೊತೆಯಲ್ಲಿದ್ದ ವಿದುರನು ಕೃತ ಅಕೃತ್ಯ ಭಾವವನ್ನು ಮರೆತು ತೊರೆದನು, ಮನವು ಮುರಾರಿಯನ್ನು ಅಪ್ಪಿಕೊಂಡಿತು ಕಣ್ಣುಗಳು ಅವನ ಚರಣಕಮಲವನ್ನು ನೋಡಿ ಪಾವನಗೊಂಡಿತು, ತಿಳುವಳಿಕೆಯು ಮೇಣಮಯವಾದ ಭಕ್ತಿಯಲ್ಲಿ ನಿರ್ಮಿಸಿದ ಬೊಂಬೆಯಂತೆ ವಿಸ್ಮಯವಾಗಿ ಕೃಷ್ಣನ ಗೆಳೆತನವನ್ನು ನೋಡುತ್ತಾ ವಿದುರನು ಮೌನಕ್ಕೆ ಶರಣಾದನು.

ಅರ್ಥ:
ನೆರೆ: ಸಮೀಪ, ಪಕ್ಕ, ಸೇರು, ಜೊತೆಗೂಡು; ಕೃತ್ಯಾಕೃತ್ಯ: ಒಳ್ಳೆಯ ಮತ್ತು ಕೆಟ್ಟ ಕೆಲಸ; ಭಾವ: ಭಾವನೆ; ಮರೆ: ನೆನಪಿನಿಂದ ದೂರ ಮಾಡು; ಕಳೆ: ಬಿಡು, ತೊರೆ; ಮನ: ಮನಸ್ಸು; ಮುರಾರಿ: ಕೃಷ್ಣ; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಕಂಗಳು: ಕಣ್ಣು, ನಯನ; ಪದಾಬ್ಜ: ಚರಣ ಕಮಲ; ಅರಿ: ತಿಳು; ಮಯಣಮಯ; ಮೇಣದಿಂದ ತುಂಬಿದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಎರಗು: ನಮಸ್ಕರಿಸು; ಪುತ್ಥಳಿ: ಬೊಂಬೆ; ಕಡು: ಹೆಚ್ಚಾಗಿ, ಅಧಿಕ; ಬೆರಗು: ವಿಸ್ಮಯ, ಸೋಜಿಗ; ಕೇಣಿ:ಮೈತ್ರಿ, ಗೆಳೆತನ; ಮೌನ: ಮಾತಿಲ್ಲದ, ಸುಮ್ಮನಿರುವಿಕೆ;

ಪದವಿಂಗಡಣೆ:
ನೆರೆಯೆ +ಕೃತ್ಯ+ಅಕೃತ್ಯ+ ಭಾವವ
ಮರೆದು +ಕಳೆದನು +ಮನ +ಮುರಾರಿಯನ್
ಇರುಕಿಕೊಂಡುದು+ ಕಂಗಳ್+ಒಡೆವೆಚ್ಚುವು +ಪದಾಬ್ಜದಲಿ
ಅರಿವು +ಮಯಣಾಮಯದ +ಭಕ್ತಿಯೊಳ್
ಎರಗಿಸಿದ +ಪುತ್ಥಳಿಯವೊಲು +ಕಡು
ಬೆರಗ +ಕೇಣಿಯ +ಕೊಂಡು +ಮೌನದೊಳಿದ್ದನಾ +ವಿದುರ

ಅಚ್ಚರಿ:
(೧) ನೆರೆ, ಮರೆ – ಪ್ರಾಸ ಪದ
(೨) ಕಡು ಬೆರಗ ಕೇಣಿಯ ಕೊಂಡು – ‘ಕ’ ಕಾರದ ಸಾಲು ಪದಗಳು
(೩) ಉಪಮಾನದ ಪ್ರಯೋಗ – ಅರಿವು ಮಯಣಾಮಯದ ಭಕ್ತಿಯೊಳೆರಗಿಸಿದ ಪುತ್ಥಳಿಯವೊಲು

ಪದ್ಯ ೨೫: ದ್ರೌಪದಿಯು ಶ್ರೀಕೃಷ್ಣನಿಗೆ ಯಾವ ಪ್ರಶ್ನೆ ಕೇಳಿದಳು?

ಮುಂದಲೆಯ ಹಿಡಿದೆಳೆದು ಸಭೆಯಲಿ
ತಂದು ಸೀರೆಯ ಸುಲಿದಡವದಿರ
ಮುಂದೆ ಮೌನದೊಳಿದ್ದರಲ್ಲದೆ ಪತಿಗಳುಸುರಿದಿರೆ
ಅಂದು ನೀ ಹಿಂದಿಕ್ಕಿಕೊಂಡುದ
ನಿಂದು ಮರೆದೈ ಸಂಧಿಗೋಸುಗ
ಮುಂದುವರಿದೈ ಕೃಷ್ಣಯೆಂದಳು ದ್ರೌಪದೀ ದೇವಿ (ಉದ್ಯೋಗ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅಂದು ರಾಜಸಭೆಯಲ್ಲಿ ನನ್ನ ತಲೆಯ ಜುಟ್ಟನ್ನು ಹಿಡಿದು ಎಳೆತಂದು ಉಟ್ಟ ಸೀರೆಯನ್ನು ಸೆಳೆವಾಗ ತಲೆತಗ್ಗಿಸಿ ಸುಮ್ಮನಿದ್ದರು ಅವರೇನಾದರು ಅಂದು ಮಾತನಾಡಿದರೇ? ಆ ಘೋರ ಪ್ರಸಂಗದಲ್ಲಿ ನೀನು ನನ್ನನ್ನು ಸಂರಕ್ಷಿಸಿದವನು ಅದನ್ನು ಇಂದು ನೀನು ಮರೆತು ಸಂಧಿಗೆ ಮುಂದುವರಿದಿರುವೆಯಾ ಎಂದು ದ್ರೌಪದಿಯು ಶ್ರೀಕೃಷ್ಣನತ್ತ ನೋಡಿದಳು.

ಅರ್ಥ:
ಮುಂದಲೆ: ತಲೆಯ ಮುಂಭಾಗ; ಹಿಡಿ: ಗ್ರಹಿಸು, ಬಂಧನ; ಎಳೆ: ತನ್ನ ಕಡೆಗೆ ಸೆಳೆದುಕೊ; ಸಭೆ: ದರ್ಬಾರು, ಓಲಗ; ತಂದು: ಬರೆಮಾಡಿ; ಸೀರೆ: ಬಟ್ಟೆ; ಸುಲಿ: ಬಿಚ್ಚು; ಅವದಿರ: ಅವರ; ಮುಂದೆ: ಎದುರು; ಮೌನ: ಸುಮ್ಮನಿರುವಿಕೆ; ಪತಿ: ಗಂಡ; ಉಸುರು: ಮಾತನಾಡು; ಹಿಂದಿಕ್ಕು: ಸಂರಕ್ಷಿಸು; ನಿಂದು: ನಿಲ್ಲು; ಮರೆ: ನೆನಪಿನಿಂದ ದೂರ; ಸಂಧಿ: ಸಂಧಾನ; ಮುಂದುವರಿದೈ: ಮುನ್ನಡೆ;

ಪದವಿಂಗಡಣೆ:
ಮುಂದಲೆಯ+ ಹಿಡಿದೆಳೆದು +ಸಭೆಯಲಿ
ತಂದು +ಸೀರೆಯ +ಸುಲಿದಡ್+ಅವದಿರ
ಮುಂದೆ +ಮೌನದೊಳ್+ಇದ್ದರಲ್ಲದೆ +ಪತಿಗಳ್+ಉಸುರಿದಿರೆ
ಅಂದು +ನೀ +ಹಿಂದಿಕ್ಕಿ+ಕೊಂಡುದನ್
ಇಂದು +ಮರೆದೈ+ ಸಂಧಿ+ಗೋಸುಗ
ಮುಂದುವರಿದೈ+ ಕೃಷ್ಣ+ಯೆಂದಳು +ದ್ರೌಪದೀ +ದೇವಿ

ಅಚ್ಚರಿ:
(೧) ಅಂದು, ಇಂದು, ತಂದು, ಮುಂದು – ಪ್ರಾಸ ಪದಗಳು