ಪದ್ಯ ೧೪: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಹಂಗಿಸಿದನು?

ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣಿಯುಂಟಾಗೆ ಮೆಚ್ಚುವೆನೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ದ್ರೋಣನು ಪಾಂಡವರ ಸೈನ್ಯವನ್ನು ಕಂಡು, ಭಲೇ, ಚೆನ್ನಾಗಿ ಜೋಡಿಸಿಕೊಂಡು ಬಂದಿದ್ದೀರಿ, ಶಿವನೂ ನಿಮ್ಮನ್ನು ಇದಿರಿಸಲಾರ ಎನ್ನಿಸುತ್ತದೆ. ಆದರೆ ಸಿಂಹದಂತಹ ಒಂದು ಬಾಣ ನಿಮ್ಮ ಮೇಲೆ ಬಂದರೆ, ಓಟದಲ್ಲಿ ಮೊಲವನ್ನು ಮೀರಿಸುತ್ತೀರಿ, ನಿರಾಯಾಸವಾಗಿ ಸತ್ತು ನಿಮ್ಮ ತಂದೆಗೆ ಅಪಕೀರ್ತಿಯನ್ನು ತರದಂತೆ ಯುದ್ಧಮಾಡುವ ಇಚ್ಛೆ ನಿಮಗಿದ್ದರೆ ಆಗ ಮೆಚ್ಚುತ್ತೇನೆ ಎಂದು ದ್ರೋಣನು ಸೈನಿಕರನ್ನು ಹೀಯಾಳಿಸಿದನು.

ಅರ್ಥ:
ಅಂಗವಣೆ: ರೀತಿ, ಬಯಕೆ; ಒಳ್ಳಿತು: ಚೆನ್ನು; ಮೊಗಸು: ಬಯಕೆ, ಅಪೇಕ್ಷೆ; ಅರಿ: ತಿಳಿ; ಮೊದಲು: ಆದಿ; ಸಿಂಗ: ಸಿಂಹ; ಆಯತ: ವಿಸ್ತಾರ; ಅಂಬು: ಬಾಣ; ಸುಳಿ: ಆವರಿಸು, ಮುತ್ತು; ಮುಂಚು: ಮುಂದೆ; ಭಂಗ: ಮುರಿಯುವಿಕೆ; ಬಿದ್ದು: ಬೀಳು; ಅಯ್ಯ: ತಂದೆ; ಹಳಿ: ದೂಷಿಸು, ನಿಂದಿಸು; ಹೊರಿಸು: ಭಾರವನ್ನು ಹೊರುವಂತೆ ಮಾಡು; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ;

ಪದವಿಂಗಡಣೆ:
ಅಂಗವಣೆ+ಒಳ್ಳಿತು +ಮಹಾದೇ
ವಂಗೆ+ ಮೊಗಸುವಡ್+ಅರಿದು+ ಮೊದಲಲಿ
ಸಿಂಗದ್+ಆಯತದ್+ಅಂಬು +ಸುಳಿದರೆ +ಮೊಲನ +ಮುಂಚುವಿರಿ
ಭಂಗವಿಲ್ಲದೆ +ಬಿದ್ದ +ನಿಮ್ಮ್
ಅಯ್ಯಂಗೆ+ಹಳಿವನು +ಹೊರಿಸದಿಹ+ ಮನದ್
ಅಂಗವಣಿ+ಉಂಟಾಗೆ +ಮೆಚ್ಚುವೆನೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಅಂಗವಣೆಯೊಳ್ಳಿತು ಮಹಾದೇವಂಗೆ ಮೊಗಸುವಡರಿದು; ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ

ಪದ್ಯ ೩: ಸಾತ್ಯಕಿಯು ಧರ್ಮಜನಿಗೆ ಏನೆಂದು ಉತ್ತರಿಸಿದನು?

ಮೊಲದ ಬಲೆಯಲಿ ವನದ ಮದಕರಿ
ಸಿಲುಕಲರಿವುದೆ ಶಿವಶಿವಾ ನರ
ನಳವನರಿಯಾ ಕೃಷ್ಣನಾರೆಂದರಸ ಮರೆದೆಯಲಾ
ಕೊಳುಗುಳವನಾರೈದು ಬಾಯೆನೆ
ನಿಲುವುದನುಚಿತವರ್ಜುನನ ನೆಲೆ
ಗೊಳಿಸಿ ಬಹೆನೆಂದಾಯುಧವ ಕೊಂಡಡರಿದನು ರಥವ (ದ್ರೋಣ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಉತ್ತರಿಸುತ್ತಾ, ದೊರೆಯೇ, ನಿನಗೆ ಅರ್ಜುನನ ಸಾಮರ್ಥ್ಯ ತಿಳಿಯದೇ? ಕಾಡಿನ ಮದದಾನೆಯಮ್ತಿರುವ ಅವನು ಕೌರವರೆಂಬ ಮೊಲಗಳ ಬಲೆಗೆ ಬಿದ್ದಾನೆ? ಕೃಷ್ಣನು ಯಾರು ಎನ್ನುವುದು ಮರೆತೆಯಾ? ಯುದ್ಧವನ್ನು ನೋಡಿಕೊಂಡು ಬಾ ಎಂದು ಹೇಳಿದ ಮೇಲೆ ಸುಮ್ಮನಿರುವುದು ಉಚಿತವಲ್ಲ, ಅರ್ಜುನನು ಎಲ್ಲಿದ್ದಾನೆ ಎಂಬುದನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಸಾತ್ಯಕಿಯು ರಥವನ್ನು ಹತ್ತಿದನು.

ಅರ್ಥ:
ಬಲೆ: ಜಾಲ; ವನ:ಕಾಡು; ಮದ: ಮತ್ತು, ಅಮಲು; ಕರಿ: ಆನೆ; ಸಿಲುಕು: ಬಂಧಿಸು; ನರ:ಅರ್ಜುನ; ಅಳವು: ಶಕ್ತಿ; ಅರಿ: ತಿಳಿ; ಅರಸ: ರಾಜ; ಮರೆದೆ: ನೆನಪಿನಿಂದ ದೂರಮಾಡು; ಕೊಳುಗುಳ: ಯುದ್ಧ; ನಿಲುವು: ನಿಲ್ಲು; ಅನುಚಿತ: ಸರಿಯಲ್ಲದು; ನೆಲೆ: ಆಶ್ರಯ, ಆಧಾರ; ಬಹೆ: ಹಿಂದಿರುಗು; ಆಯುಧ: ಶಸ್ತ್ರ; ಅಡರು: ಹತ್ತು; ರಥ: ಬಂಡಿ;

ಪದವಿಂಗಡಣೆ:
ಮೊಲದ +ಬಲೆಯಲಿ +ವನದ +ಮದಕರಿ
ಸಿಲುಕಲ್+ಅರಿವುದೆ+ ಶಿವಶಿವಾ +ನರನ್
ಅಳವನರಿಯಾ +ಕೃಷ್ಣನಾರೆಂದ್+ಅರಸ +ಮರೆದೆಯಲಾ
ಕೊಳುಗುಳವನ್+ಆರೈದು +ಬಾಯೆನೆ
ನಿಲುವುದ್+ಅನುಚಿತವ್+ಅರ್ಜುನನ +ನೆಲೆ
ಗೊಳಿಸಿ +ಬಹೆನೆಂದ್+ಆಯುಧವ +ಕೊಂಡ್+ಅಡರಿದನು +ರಥವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮೊಲದ ಬಲೆಯಲಿ ವನದ ಮದಕರಿಸಿಲುಕಲರಿವುದೆ

ಪದ್ಯ ೩೭: ದ್ರೌಪದಿಯು ಮಾಂಸದ ಮನೆಯಲ್ಲಿ ಏನು ನೋಡಿದಳು?

ತರಿದ ಕುರಿಗಳ ಹಂದಿಯಡಗಿನ
ಜುರಿತರಕ್ತದ ಮೊಲನ ಖಂಡದ
ಕಿರಿದ ಗುಬ್ಬಿಯ ಕೀಸಿ ಸೀಳಿದ ನವಿಲ ಲಾವುಗೆಯ
ತುರುಗಿದೆಲುವಿನ ಸಾಲ ಸುಂಟಿಗೆ
ಮೆರೆವ ಮಾಂಸದ ರಾಶಿಗಳ ಹರ
ದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ (ವಿರಾಟ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕತ್ತರಿಸಿದೆ ಕುರಿ, ಹಂದಿಗಳ ಮಾಂಸ, ರಕ್ತ ಹರಿದ ಮೊಲದ ಮಾಂಸ, ರೆಕ್ಕೆಕಿತ್ತ ಗುಬ್ಬಿಗಳ ಮಾಂಸ, ರೆಕ್ಕೆ ತೆಗೆದು ಸೀಳಿದ ನವಿಲು, ಪುರಲೆಗಳ ಮಾಂಸಗಳು, ಬೇಯಿಸಿದ ಮಾಂಸದ ಉಂಡೆಗಳು, ಮಾಂಸದ ರಾಶಿಯನ್ನು ನೋಡಿ ದ್ರೌಪದಿಯು ಆ ಮಾಂಸದ ಮನೆಯನ್ನು ಪ್ರಶಂಶಿಸಿದಳು.

ಅರ್ಥ:
ತರಿ: ಕತ್ತರಿಸು; ಕುರಿ: ಮೇಷ; ಹಂದಿ: ವರಾಹ; ಅಡಗು: ಮಾಂಸ; ಜುರಿತ: ರಕ್ತಸ್ರಾವ; ರಕ್ತ: ನೆತ್ತರು; ಮೊಲ: ಶಶಾಂಕ; ಖಂಡ: ತುಂಡು, ಚೂರು; ಕಿರಿ: ಚಿಕ್ಕ; ಗುಬ್ಬಿ: ಗುಬ್ಬಚ್ಚಿ; ಕೀಸಿ: ಕೊರೆ, ಕೆತ್ತು; ಸೀಳು: ಚೂರು; ನವಿಲು: ಮಯೂರ; ಲಾವುಗೆ: ಒಂದು ಬಗೆಯ ಹಕ್ಕಿ; ತುರುಗು: ಸಂದಣಿ, ದಟ್ಟಣೆ; ಎಲುಬು: ಮೂಳೆ; ಸಾಲು: ರಾಶಿ; ಸುಂಟಿಗೆ: ಹೃದಯ, ಗುಂಡಿಗೆ; ಮೆರೆ: ಹೊಳೆ, ಪ್ರಕಾಶಿಸು; ಮಾಂಸ: ಅಡಗು; ರಾಶಿ: ಗುಂಪು, ಸಮೂಹ; ಹರದ: ಅವ್ಯವಸ್ಥೆ; ಕಂಡು: ನೋಡು; ಅಬಲೆ: ಹೆಣ್ಣು; ಹೊಗಳು: ಪ್ರಶಂಶಿಸು; ಅಡಬಳ: ಮಾಂಸ; ಮನೆ: ಆಲಯ;

ಪದವಿಂಗಡಣೆ:
ತರಿದ +ಕುರಿಗಳ+ ಹಂದಿ+ಅಡಗಿನ
ಜುರಿತರಕ್ತದ+ ಮೊಲನ +ಖಂಡದ
ಕಿರಿದ +ಗುಬ್ಬಿಯ +ಕೀಸಿ+ ಸೀಳಿದ+ ನವಿಲ+ ಲಾವುಗೆಯ
ತುರುಗಿದ್+ಎಲುವಿನ +ಸಾಲ +ಸುಂಟಿಗೆ
ಮೆರೆವ+ ಮಾಂಸದ +ರಾಶಿಗಳ +ಹರ
ದೆರಕೆಗಳ+ ಕಂಡ್+ಅಬಲೆ +ಹೊಗಳಿದಳ್+ಅಡಬಳದ +ಮನೆಯ

ಅಚ್ಚರಿ:
(೧) ಅಡಬಳ, ಅಡಗು, ಮಾಂಸ – ಸಮನಾರ್ಥಕ ಪದಗಳು
(೨) ಯಾವುದನ್ನು ಹೊಗಳಿದಳು – ಮೆರೆವ ಮಾಂಸದ ರಾಶಿಗಳ ಹರದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ

ಪದ್ಯ ೩೧: ಅರ್ಜುನನೇಕೆ ಶಿವನ ಬಾಣಗಳನ್ನು ಪ್ರಯೋಗಿಸಲಿಲ್ಲ?

ಮೊಲನ ಬೇಂಟೆಗೆ ತಿವಿದು ಹಾಸವ
ಕಳುಚುವರೆ ಕೇಸರಿಯನಕಟಾ
ಕೊಳಚೆಯುದಕಕೆ ಕೊಂಬುದೇ ಹರಿಗೋಲ ಬಾಡಗೆಯ
ಗಳಹತನವೇ ಹರನ ಬಾಣಾ
ವಳಿಗೆ ಗುರಿಯೇ ನೀನೆನುತ ಕೈ
ಚಳಕದಲಿ ರಿಪುಶರವ ಖಂಡಿಸಿ ತುಳುಕಿದನು ಪಾರ್ಥ (ಕರ್ಣ ಪರ್ವ, ೨೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಮೊಲದ ಬೇಟೆಯಾಡಲು ಹಗ್ಗವನ್ನು ಬಿಚ್ಚಿ ಸಿಂಹವನ್ನು ಕಳಿಸುತ್ತಾರೆಯೇ? ಕೊಳಚೆಗುಂಡಿಯ ನೀರನ್ನು ದಾಟಲು ಹರಿಗೋಲನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆಯೇ? ನೀನು ಬಾಯ್ಬಡಿಕತನದ ಮಾತಾಡಿದರೆ ನಿನ್ನ ಮೇಲೆ ಶಿವನು ಕೊಟ್ಟ ಬಾಣವನ್ನು ಬಿಡುವರೇ? ಎಂದು ಅರ್ಜುನನು ಕರ್ಣನ ಬಾಣಗಳನ್ನು ಖಂಡಿಸಿ ಅವನನ್ನು ಬಾಣಗಳಿಂದ ಮುಚ್ಚಿದನು.

ಅರ್ಥ:
ಮೊಲ: ಕುಂದಲಿ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ತಿವಿ: ಚುಚ್ಚು; ಹಾಸವ: ಹಗ್ಗ, ಪಾಶ; ಕಳುಚು: ತೆಗೆ, ಬಿಚ್ಚು; ಕೇಸರಿ: ಸಿಂಹ; ಅಕಟ: ಅಯ್ಯೋ; ಕೊಳಚೆ: ಗಲೀಜ, ಕಲ್ಮಶ; ಉದಕ: ನೀರು; ಹರಿಗೋಲು: ದೋಣಿ; ಬಾಡಗೆ: ವಸ್ತುವನ್ನು ನಿಯಮಿತ ಅವಧಿಗೆ ಬೇರೆಯವರಿಗೆ ನೀಡಿ ಹಣ ಪಡೆಯುವುದು; ಗಳಹ: ಅತಿಯಾಗಿ ಹರಟುವವ, ಮಾತಾಳಿ; ಹರ: ಶಿವ; ಬಾಣ: ಅಂಬು, ಶರ; ಆವಳಿ: ಗುಂಪು; ಗುರಿ: ಲಕ್ಷ್ಯ; ಕೈಚಳಕ: ಕೈಯ ಚಮತ್ಕಾರ, ನೈಪುಣ್ಯ; ರಿಪು: ವೈರಿ; ಶರ: ಬಾಣ; ಖಂಡಿಸು: ಚೂರುಮಾಡು; ತುಳುಕು: ಹೊರಸೂಸುವಿಕೆ;

ಪದವಿಂಗಡಣೆ:
ಮೊಲನ +ಬೇಂಟೆಗೆ+ ತಿವಿದು+ ಹಾಸವ
ಕಳುಚುವರೆ+ ಕೇಸರಿಯನ್+ಅಕಟಾ
ಕೊಳಚೆ+ಉದಕಕೆ +ಕೊಂಬುದೇ +ಹರಿಗೋಲ+ ಬಾಡಗೆಯ
ಗಳಹತನವೇ +ಹರನ +ಬಾಣಾ
ವಳಿಗೆ +ಗುರಿಯೇ +ನೀನೆನುತ +ಕೈ
ಚಳಕದಲಿ +ರಿಪುಶರವ+ ಖಂಡಿಸಿ+ ತುಳುಕಿದನು +ಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮೊಲನ ಬೇಂಟೆಗೆ ತಿವಿದು ಹಾಸವ
ಕಳುಚುವರೆ ಕೇಸರಿಯ; ಕೊಳಚೆಯುದಕಕೆ ಕೊಂಬುದೇ ಹರಿಗೋಲ ಬಾಡಗೆಯ

ಪದ್ಯ ೩೧: ದುಶ್ಯಾಸನನು ಭೀಮನಿಗೆ ಏನು ಹೇಳಿದ?

ತೊಲಗಿರೈ ಪರಿವಾರ ಬಾಳೆಯ
ತಳಿಯ ಮುರಿವತಿಸಹಸಿ ಗಡ ಮರಿ
ಮೊಲನ ಬೇಟೆಯ ವೀರ ಗಡ ಬಾಣಪ್ರಯೋಗದಲಿ
ಸಲೆ ಮೃಗದ ಸಾಹಸಿಕ ಗಡ ಕು
ಟ್ಮಳಿತ ಕೇತಕಿ ತೀಕ್ಷ್ಣ ಗಡ ನೀ
ವಳವಿಗೊಡದಿರಿ ಎನುತ ನಿನ್ನ ಕುಮಾರನನುವಾದ (ಕರ್ಣ ಪರ್ವ, ೧೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ದುಶ್ಯಾಸನನು “ಪರಿವಾರದವರು ದೂರ ನಿಲ್ಲಿರಿ, ಬಾಣಗಳಿಂದ ಬಾಳೆಯ ಗಿಡವನ್ನು ಕತ್ತರಿಸುವ, ಮೊಲದ ಮರಿಯ ಬೇಟೆಯಾಡಬಲ್ಲ ಬಿಲ್ಲುಗಾರನು ಬಂದಿದ್ದಾನೆ. ಇವನು ಜಿಂಕೆಯನ್ನು ಕೊಲ್ಲಬಲ್ಲ. ಕೇದಿಗೆ ಮೊಗ್ಗಿನಂತೆ ಹರಿತವಾಗಿರುವ ವೀರನಿವನು. ನೀವು ಯುದ್ಧಕ್ಕೆ ಬರಬೇಡಿರಿ ಎಂದು ಹೇಳಿ ದುಶ್ಯಾಸನನು ಯುದ್ಧಕ್ಕೆ ಸನ್ನದ್ಧನಾದನು.

ಅರ್ಥ:
ತೊಲಗು: ದೂರ ಸರಿ; ಪರಿವಾರ: ಸಂಬಂಧಿಕರು; ಬಾಳೆ: ಕದಳಿ; ತಳಿ: ಚೆಲ್ಲು, ಚಿಮುಕಿಸು; ಮುರಿ: ಸೀಳು; ಸಹಸಿ: ಸಾಹಸ, ಪರಾಕ್ರಮಿ; ಗಡ: ಅಲ್ಲವೆ; ಮರಿ: ಚಿಕ್ಕ; ಮೊಲ: ಕುಂದಿಲಿ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಮೃಗ: ಜಿಂಕೆ; ವೀರ: ಪರಾಕ್ರಮ; ಕುಟ್ಮಳಿತ: ಮೊಗ್ಗದ; ಕೇತಕಿ: ಕೇದಗೆ; ತೀಕ್ಷ್ಣ: ಹರಿತವಾದುದು, ಚುರುಕಾದುದು; ಅಳವಿ: ಯುದ್ಧ; ಕೊಡು: ನೀಡು; ಕುಮಾರ: ಮಕ್ಕಳು;

ಪದವಿಂಗಡಣೆ:
ತೊಲಗಿರೈ +ಪರಿವಾರ +ಬಾಳೆಯ
ತಳಿಯ +ಮುರಿವ್+ಅತಿಸಹಸಿ +ಗಡ +ಮರಿ
ಮೊಲನ +ಬೇಟೆಯ +ವೀರ +ಗಡ+ ಬಾಣ+ಪ್ರಯೋಗದಲಿ
ಸಲೆ+ ಮೃಗದ +ಸಾಹಸಿಕ+ ಗಡ +ಕು
ಟ್ಮಳಿತ +ಕೇತಕಿ +ತೀಕ್ಷ್ಣ +ಗಡ +ನೀವ್
ಅಳವಿ+ಕೊಡದಿರಿ+ ಎನುತ+ ನಿನ್ನ +ಕುಮಾರನ್+ಅನುವಾದ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಬಾಳೆಯ ತಳಿಯ ಮುರಿವತಿಸಹಸಿ, ಮರಿ ಮೊಲನ ಬೇಟೆಯ ವೀರ, ಬಾಣಪ್ರಯೋಗದಲಿ ಸಲೆ ಮೃಗದ ಸಾಹಸಿಕ, ಕುಟ್ಮಳಿತ ಕೇತಕಿ ತೀಕ್ಷ್ಣ

ಪದ್ಯ ೩: ಯಾವ ಉಪಮಾನಗಳ ಮೂಲಕ ಅರ್ಜುನನು ಮಹಾರಥನೆಂದು ಶಲ್ಯ ಹೇಳಿದನು?

ಮೊಲನ ಕಾಹಿನ ಕಾಡಿನಲಿ ಹೆ
ಬ್ಬುಲಿ ವಿಭಾಡಿಸುವಂತೆ ನರಿಗಳು
ಬಲಿದ ಬೇಲಿಯ ಕದಳಿಯನು ಕಾಡಾನೆ ಹೊಗುವಂತೆ
ದಳವ ಬಗಿದು ಮಹಾರಥರನೊಡೆ
ದುಳಿದು ನಿನ್ನಯ ನಾಲಗೆಯ ಹೆಡ
ತಲೆಯಲುಗಿವರ್ಜುನನನೀಗಳೆ ತೋರಿಸುವೆನೆಂದ (ಕರ್ಣ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಮೊಲಗಳು ಕಾಯುವ ಕಾಡಿನಲ್ಲಿ ಹೆಬ್ಬುಲಿಯು ಎರಗುವಂತೆ, ನರಿಗಳು ಕಟ್ಟಿದ ಬೇಲಿಯನ್ನು ಕಿತ್ತೆಸೆದು ಕಾಡಾನೆಯು ಕದಳೀವನಕ್ಕೆ ನುಗ್ಗುವಂತೆ, ನಿನ್ನ ಸೈನ್ಯವನ್ನು ಸೀಳಿ ಮಹಾರಥರನ್ನು ಕೆಡವಿ, ತುಳಿದು, ಮುನ್ನುಗ್ಗಿ ನಿನ್ನ ನಾಲಗೆಯನ್ನು ಹೆಡತಲೆಯಲ್ಲಿ ಕೀಳುವ ಅರ್ಜುನನನ್ನು ಈಗಲೇ ತೋರಿಸುತ್ತೇನೆ ಎಂದು ಶಲ್ಯನು ಕರ್ಣನಿಗೆ ನುಡಿದನು.

ಅರ್ಥ:
ಕಾಹು: ಕಾಯುವ; ಕಾಡು: ವನ; ಹೆಬ್ಬುಲಿ: ವ್ಯಾಘ್ರ; ವಿಭಾಡಿಸು: ನಾಶಮಾಡು; ಬಲಿ: ಗಟ್ಟಿ, ದೃಢ; ಬೇಲಿ: ಆವರಣ, ಸುತ್ತುಗೋಡೆ; ಕದಳಿ: ಬಾಳೆ; ಆನೆ: ಕರಿ; ಹೊಗು: ನುಗ್ಗು, ನಡೆ; ತುಳಿ:ಮೆಟ್ಟುವಿಕೆ, ತುಳಿತ; ದಳ: ಸೈನ್ಯ; ಬಗಿ: ಸೀಳು; ಮಹಾರಥ: ಪರಾಕ್ರಮಿ; ನಾಲಗೆ: ಜಿಹ್ವೆ; ಹೆಡತಲೆ:ಹಿಂದಲೆ; ಉಗಿ: ಇರಿತ, ತಿವಿತ; ತೋರಿಸು: ಗೋಚರ, ನೋಡು;

ಪದವಿಂಗಡಣೆ:
ಮೊಲನ +ಕಾಹಿನ +ಕಾಡಿನಲಿ +ಹೆ
ಬ್ಬುಲಿ +ವಿಭಾಡಿಸುವಂತೆ +ನರಿಗಳು
ಬಲಿದ +ಬೇಲಿಯ +ಕದಳಿಯನು ಕಾಡಾನೆ ಹೊಗುವಂತೆ
ದಳವ +ಬಗಿದು +ಮಹಾರಥರನ್+ಒಡೆ
ತುಳಿದು +ನಿನ್ನಯ +ನಾಲಗೆಯ +ಹೆಡ
ತಲೆಯಲುಗಿವ್+ಅರ್ಜುನನನ್+ಈಗಳೆ +ತೋರಿಸುವೆನೆಂದ

ಅಚ್ಚರಿ:
(೧) ಉಪಮಾನಗಳ ಬಳಕೆ – ಮೊಲನ ಕಾಹಿನ ಕಾಡಿನಲಿ ಹೆಬ್ಬುಲಿ ವಿಭಾಡಿಸುವಂತೆ; ನರಿಗಳು
ಬಲಿದ ಬೇಲಿಯ ಕದಳಿಯನು ಕಾಡಾನೆ ಹೊಗುವಂತೆ