ಪದ್ಯ ೧೪: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಹಂಗಿಸಿದನು?

ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣಿಯುಂಟಾಗೆ ಮೆಚ್ಚುವೆನೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ದ್ರೋಣನು ಪಾಂಡವರ ಸೈನ್ಯವನ್ನು ಕಂಡು, ಭಲೇ, ಚೆನ್ನಾಗಿ ಜೋಡಿಸಿಕೊಂಡು ಬಂದಿದ್ದೀರಿ, ಶಿವನೂ ನಿಮ್ಮನ್ನು ಇದಿರಿಸಲಾರ ಎನ್ನಿಸುತ್ತದೆ. ಆದರೆ ಸಿಂಹದಂತಹ ಒಂದು ಬಾಣ ನಿಮ್ಮ ಮೇಲೆ ಬಂದರೆ, ಓಟದಲ್ಲಿ ಮೊಲವನ್ನು ಮೀರಿಸುತ್ತೀರಿ, ನಿರಾಯಾಸವಾಗಿ ಸತ್ತು ನಿಮ್ಮ ತಂದೆಗೆ ಅಪಕೀರ್ತಿಯನ್ನು ತರದಂತೆ ಯುದ್ಧಮಾಡುವ ಇಚ್ಛೆ ನಿಮಗಿದ್ದರೆ ಆಗ ಮೆಚ್ಚುತ್ತೇನೆ ಎಂದು ದ್ರೋಣನು ಸೈನಿಕರನ್ನು ಹೀಯಾಳಿಸಿದನು.

ಅರ್ಥ:
ಅಂಗವಣೆ: ರೀತಿ, ಬಯಕೆ; ಒಳ್ಳಿತು: ಚೆನ್ನು; ಮೊಗಸು: ಬಯಕೆ, ಅಪೇಕ್ಷೆ; ಅರಿ: ತಿಳಿ; ಮೊದಲು: ಆದಿ; ಸಿಂಗ: ಸಿಂಹ; ಆಯತ: ವಿಸ್ತಾರ; ಅಂಬು: ಬಾಣ; ಸುಳಿ: ಆವರಿಸು, ಮುತ್ತು; ಮುಂಚು: ಮುಂದೆ; ಭಂಗ: ಮುರಿಯುವಿಕೆ; ಬಿದ್ದು: ಬೀಳು; ಅಯ್ಯ: ತಂದೆ; ಹಳಿ: ದೂಷಿಸು, ನಿಂದಿಸು; ಹೊರಿಸು: ಭಾರವನ್ನು ಹೊರುವಂತೆ ಮಾಡು; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ;

ಪದವಿಂಗಡಣೆ:
ಅಂಗವಣೆ+ಒಳ್ಳಿತು +ಮಹಾದೇ
ವಂಗೆ+ ಮೊಗಸುವಡ್+ಅರಿದು+ ಮೊದಲಲಿ
ಸಿಂಗದ್+ಆಯತದ್+ಅಂಬು +ಸುಳಿದರೆ +ಮೊಲನ +ಮುಂಚುವಿರಿ
ಭಂಗವಿಲ್ಲದೆ +ಬಿದ್ದ +ನಿಮ್ಮ್
ಅಯ್ಯಂಗೆ+ಹಳಿವನು +ಹೊರಿಸದಿಹ+ ಮನದ್
ಅಂಗವಣಿ+ಉಂಟಾಗೆ +ಮೆಚ್ಚುವೆನೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಅಂಗವಣೆಯೊಳ್ಳಿತು ಮಹಾದೇವಂಗೆ ಮೊಗಸುವಡರಿದು; ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ

ಪದ್ಯ ೧: ರಣರಂಗವು ಹೇಗೆ ಕಂಡಿತು?

ಅಳಿದುದೆರಡರ ಚೂಣಿ ಮುಂಗುಡಿ
ಯೊಳಗೆ ಕಡಲಾಯ್ತರುಣ ಜಲದೊ
ಬ್ಬುಳಿಯ ಖಂಡದ ದೊಂಡೆಗಳು ಕೆಸರಿಡುವ ಮಿದುಳುಗಳ
ಕಳದ ಹೆಣನೊಟ್ಟಿಲಲಿ ಮೊಗಸುವೊ
ಡಳುಕಿದರು ಮನ್ನೆಯರು ಬಳಿಕರ
ನೆಲೆಗಳಲಿ ಸೂಳೈಸಿದವು ನಿಸ್ಸಾಳ ಕೋಟಿಗಳು (ಭೀಷ್ಮ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ಮುಂಚೂಣೀಗಳು ನಾಶವಾದವು. ರಕ್ತ ಕಡಲಾಗಿ ನಿಂತಿತು. ರಕ್ತ ಮಾಂಸಖಂಡದ ತುಂಡುಗಳು, ಕೆಸರಿನಂತಹ ಮಿದುಳುಗಳು, ಹೆಣದ ರಾಶಿಗಳು, ಇವನ್ನು ನೋಡಿ ಸಾಮಂತ ರಾಜರು ಯುದ್ಧಕ್ಕೆ ಬೆದರಿದರು. ರಾಜರ ಸೇನಾನಾಯಕರ ಬೀಡುಗಳಲ್ಲಿ ಕಹಳೆಗಳು ಮೊಳಗಿದವು.

ಅರ್ಥ:
ಅಳಿ: ನಾಶ; ಚೂಣಿ: ಮುಂದಿನ ಸಾಲು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಕಡಲು: ಸಾಗರ; ಅರುಣ: ಕೆಂಪು ಬಣ್ಣ; ಜಲ: ನೀರು; ಉಬ್ಬು: ಹಿಗ್ಗು; ಖಂಡ: ತುಂಡು; ದೊಂಡೆ: ಗಂಟಲು, ಕಂಠ; ಕೆಸರು: ಬಗ್ಗಡ, ನೀರು ಬೆರೆತ ಮಣ್ಣು; ಮಿದುಳು: ಮೆದುಳು, ಮಸ್ತಿಷ್ಕ; ಕಳ:ಮಧುರವಾದ, ಇಂಪಾದ; ಹೆಣ: ಜೀವವಿಲ್ಲದ ಶರೀರ; ಮೊಗಸು: ಬಯಕೆ, ಅಪೇಕ್ಷೆ; ಅಳುಕು: ಹೆದರು; ಮನ್ನೆಯ: ಮೆಚ್ಚಿನ; ಬಳಿಕ: ನಂತರ; ನೆಲೆ: ಭೂಮಿ; ಸೂಳೈಸು: ಧ್ವನಿ ಮಾಡು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ;

ಪದವಿಂಗಡಣೆ:
ಅಳಿದುದ್+ಎರಡರ +ಚೂಣಿ +ಮುಂಗುಡಿ
ಯೊಳಗೆ+ ಕಡಲಾಯ್ತ್+ಅರುಣ +ಜಲದ
ಉಬ್ಬುಳಿಯ +ಖಂಡದ +ದೊಂಡೆಗಳು+ ಕೆಸರಿಡುವ +ಮಿದುಳುಗಳ
ಕಳದ +ಹೆಣನ್+ಒಟ್ಟಿಲಲಿ+ ಮೊಗಸುವೊಡ್
ಅಳುಕಿದರು +ಮನ್ನೆಯರು +ಬಳಿಕರ
ನೆಲೆಗಳಲಿ+ ಸೂಳೈಸಿದವು+ ನಿಸ್ಸಾಳ +ಕೋಟಿಗಳು

ಅಚ್ಚರಿ:
(೧) ರಕ್ತದ ಕಡಲು ಎಂದು ಹೇಳಲು – ಕಡಲಾಯ್ತರುಣ ಜಲ