ಪದ್ಯ ೭೦: ದುರ್ಯೋಧನನ ಮಕ್ಕಳು ಹೇಗೆ ಯುದ್ಧಕ್ಕೆ ಬಂದರು?

ಚಂಡ ಭುಜಬಲನೊಡನೆ ಮಕ್ಕಳ
ತಂಡವೆದ್ದುದು ಬಿಗಿದ ಬಿಲ್ಲಿನ
ದಂಡವಲಗೆ ಮುಸುಂಡಿ ಮುದ್ಗ ಕಠಾರಿಯುಬ್ಬಣದ
ಗಂಡುಗಲಿಗಳು ಕವಿದರದಿರುವ
ಖಂಡೆಯದ ಮುಡುಹುಗಳ ಗಂಧದ
ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ (ದ್ರೋಣ ಪರ್ವ, ೫ ಸಂಧಿ, ೭೦ ಪದ್ಯ)

ತಾತ್ಪರ್ಯ:
ಅತುಲ ಬಾಹುಬಲ ಪರಾಕ್ರಮಿಯಾದ ಅಭಿಮನ್ಯುವಿನೊಡನೆ ದುರ್ಯೋಧನನ ಮಕ್ಕಳು ಸಮರಕ್ಕಿಳಿದರು. ಬಿಲ್ಲು, ಖಡ್ಗ, ದಂಡ, ಹಲಗೆ, ಮುಸುಂಡಿ, ಮುದ್ಗರ, ಕಠಾರಿ, ಉಬ್ಬನಗಳನ್ನು ಹಿಡಿದು ಬಂದ ಅವರೆಲ್ಲರೂ ಗಂಧಾನುಲೇಪನ ಮಾಡಿಕೊಂಡಿದ್ದರು.

ಅರ್ಥ:
ಚಂಡ: ಶೂರ, ಪರಾಕ್ರಮಿ; ಭುಜಬಲ: ಶೂರ; ಮಕ್ಕಳು: ಪುತ್ರ; ತಂಡ: ಗುಂಪು; ಎದ್ದು: ಮೇಲೇಳು; ಬಿಗಿ: ಭದ್ರವಾಗಿರುವುದು; ಬಿಲ್ಲು: ಚಾಪ; ದಂಡ:ಕೋಲು, ದಡಿ; ಅಲಗು: ಆಯುಧಗಳ ಹರಿತವಾದ ಅಂಚು; ಮುದ್ಗರ: ಗದೆ; ಕಠಾರಿ: ಬಾಕು, ಚೂರಿ; ಉಬ್ಬಣ: ಚೂಪಾದ ಆಯುಧ; ಗಂಡುಗಲಿ: ಅತ್ಯಂತ ಪರಾಕ್ರಮಿ, ಮಹಾಶೂರ; ಕವಿ: ಆವರಿಸು; ಅದಿರು: ನಡುಕ, ಕಂಪನ; ಖಂಡ: ತುಂಡು, ಚೂರು; ಮುಡುಹು: ಹೆಗಲು, ಭುಜಾಗ್ರ; ಗಂಧ: ಚಂದನ; ಮಂಡನ: ಸಿಂಗರಿಸುವುದು, ಅಲಂಕರಿಸುವುದು; ಮೈಸಿರಿ: ದೇಹದ ಸೌಂದರ್ಯ; ಪರಿಮಳ: ಸುವಾಸನೆ; ಪೂರ: ಬಹಳವಾಗಿ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಚಂಡ +ಭುಜಬಲನೊಡನೆ +ಮಕ್ಕಳ
ತಂಡವೆದ್ದುದು +ಬಿಗಿದ +ಬಿಲ್ಲಿನ
ದಂಡವ್+ಅಲಗೆ+ ಮುಸುಂಡಿ +ಮುದ್ಗ +ಕಠಾರಿ+ಉಬ್ಬಣದ
ಗಂಡುಗಲಿಗಳು +ಕವಿದರ್+ಅದಿರುವ
ಖಂಡೆಯದ +ಮುಡುಹುಗಳ+ ಗಂಧದ
ಮಂಡನದ+ ಮೈಸಿರಿಯ+ ಪರಿಮಳ +ಪೂರರೊಗ್ಗಿನಲಿ

ಅಚ್ಚರಿ:
(೧) ಆಯುಧಗಳ ಹೆಸರು – ಅಲಗೆ, ಮುಸುಂಡಿ, ಮುದ್ಗರ, ಕಠಾರಿ, ಉಬ್ಬಣ
(೨) ಭುಜಬಲ, ಗಂಡುಗಲಿ – ಪರಾಕ್ರಮಿಯೆಂದು ಹೇಳುವ ಪದ

ಪದ್ಯ ೫: ದುರ್ಯೋಧನನು ಪಾಂಡವರ ಬಗ್ಗೆ ಏನು ಹೇಳಿದ?

ನಾಡ ಮನ್ನೆಯ ಗಿನ್ನೆಯರುಗಳ
ಕೂಡಿಕೊಂಡೆಮ್ಮೊಡನೆ ಕಲಹವ
ಮಾಡಿ ಮಹಿಪಾಲನೆಯ ಪಟ್ಟಕೆ ನೊಸಲನೊಡ್ಡುವನೆ
ನೋಡಿರೈ ನಿರುಪಮವಲಾ ಕಾ
ಡಾಡಿಗಳ ಕಲಿತನವನೆನೆ ಮಾ
ತಾಡಿದನು ಕಲಿಕರ್ಣನಾತನ ಮನದ ಮೈಸಿರಿಯ (ಭೀಷ್ಮ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಚಿಕ್ಕ ಪುಟ್ಟ ಸಾಮಮ್ತರೊಡನೆ ಸೇರಿ ನಮ್ಮೊಡನೆ ಯುದ್ಧವನ್ನು ಮಾಡಿ, ಧರ್ಮಜನು ರಾಜಪಟ್ಟಾಭಿಷೇಕಕ್ಕೆ ಹಣೆಯನ್ನು ಒಡ್ಡುತ್ತಿದ್ದಾನೆ. ಕಾಡಿನಲ್ಲಿ ಅಲೆದಾಡಿಕೊಂಡಿದ್ದವರ ಪರಾಕ್ರಮವಉ ಹೋಲಿಕೆಯಿಲ್ಲದ್ದು, ಎಂದು ದುರ್ಯೋಧನನು ಹೇಳಲು, ಕರ್ಣನು ತನ್ನ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ಹೇಳಿದನು.

ಅರ್ಥ:
ನಾಡು: ಭೂಮಿ, ಪ್ರದೇಶ; ಮನ್ನೆಯ: ಮೆಚ್ಚಿನ; ಕೂಡಿ: ಜೊತೆ, ಸೇರು; ಕಲಹ: ಜಗಳ; ಮಹಿಪಾಲ: ರಾಜ; ಪಟ್ಟ: ಸ್ಥಾನ; ನೊಸಲ: ಹಣೆ; ಒಡ್ಡು: ನೀಡು; ನೋಡು: ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಕಾಡಾಡಿ: ಅರಣ್ಯವಾಸಿ; ಕಲಿ: ಶೂರ; ಮಾತಾಡು: ನುಡಿ; ಮನ: ಮನಸ್ಸು; ಮೈಸಿರಿ: ದೇಹ ಸೌಂದರ್ಯ;

ಪದವಿಂಗಡಣೆ:
ನಾಡ +ಮನ್ನೆಯ +ಗಿನ್ನೆಯರುಗಳ
ಕೂಡಿಕೊಂಡ್+ಎಮ್ಮೊಡನೆ +ಕಲಹವ
ಮಾಡಿ +ಮಹಿಪಾಲನೆಯ +ಪಟ್ಟಕೆ+ ನೊಸಲನ್+ಒಡ್ಡುವನೆ
ನೋಡಿರೈ +ನಿರುಪಮವಲಾ +ಕಾ
ಡಾಡಿಗಳ+ ಕಲಿತನವನ್+ಎನೆ+ ಮಾ
ತಾಡಿದನು +ಕಲಿಕರ್ಣನ್+ಆತನ+ ಮನದ +ಮೈಸಿರಿಯ

ಅಚ್ಚರಿ:
(೧) ಆಡುಭಾಷೆಯ ಪ್ರಯೋಗ – ಮನ್ನೆಯ ಗಿನ್ನೆಯ;
(೨) ಕಾಡಾಡಿ, ಮಾತಾಡಿ, ನೋಡಿ, ಮಾಡಿ, ಕೂಡಿ – ಪ್ರಾಸ ಪದಗಳು

ಪದ್ಯ ೬೫: ದ್ರೌಪದಿಯು ಕೊನೆಯದಾಗಿ ಏನು ಹೇಳಿದಳು?

ಭೀಮ ಕೊಟ್ಟೆ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕೆ ಧರ್ಮದ ಮೈಸಿರಿಯನರಿದು
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದೆಂದೆರಗಿದಳು ಚರಣದಲಿ (ವಿರಾಟ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಭೀಮಸೇನ, ನಿಮ್ಮಣ್ಣನ ಆಜ್ಞೆ ಆಭಾಧಿತವಾಗಿ ನಡೆಯಲು, ಧರ್ಮದ ಮಹಿಮೆಯನ್ನು ಧರ್ಮ ಸೂಕ್ಷ್ಮವನ್ನು ಚೆನ್ನಾಗಿ ಪರಿಶೀಲಿಸಿ, ಸಾಯಲು ನನಗೆ ಅಪ್ಪಣೆ ಕೊಟ್ಟಿರುವೆ, ಆದರೊಂದು ಪ್ರಾರ್ಥನೆ, ಹೆಣ್ಣಿನೊಂದಿನ ವಿನೋದ ಕ್ರೀಡೆಯಲ್ಲಿ ನನ್ನನ್ನು ನೆನೆಸಿಕೋ, ಕೋಪದ ಅಂಧಕಾರದಿಂದ ಮಿತಿಮೀರಿ ನಾನಾಡಿದ ಮಾತನ್ನು ಕ್ಷಮಿಸು, ಎನ್ನುತ್ತಾ ದ್ರೌಪದಿಯು ಭೀಮನ ಪಾದಗಳ ಮೇಲೆ ಬಿದ್ದಳು.

ಅರ್ಥ:
ಕೊಟ್ಟೆ: ನೀಡು; ಸಾವು: ಮರಣ; ನೇಮ: ನಿಯಮ; ಆಜ್ಞೆ: ಅನುಮತಿ, ಕಟ್ಟಳೆ; ವಿರಾಮ: ಬಿಡುವು, ವಿಶ್ರಾಂತಿ; ಬದುಕು: ಜೀವಿಸು; ಧರ್ಮ: ನಿಯಮ, ಧಾರಣ ಮಾಡಿದುದು; ಮೈಸಿರಿ: ದೇಹ ಸೌಂದರ್ಯ; ಅರಿ: ತಿಳಿ; ಕಾಮಿನಿ: ಹೆಣ್ಣು; ಕೇಳಿ: ವಿನೋದ, ಕ್ರೀಡೆ; ನೆನೆ: ಜ್ಞಾಪಿಸು; ತಾಮಸ: ಕತ್ತಲೆ, ಅಂಧಕಾರ; ಮೀರು: ಉಲ್ಲಂಘಿಸು; ನುಡಿ: ಮಾತು; ಉದ್ದಾಮ: ಶ್ರೇಷ್ಠವಾದ; ಸೈರಿಸು: ತಾಳು, ಸಹಿಸು; ಎರಗು: ನಮಸ್ಕರಿಸು; ಚರಣ: ಪಾದ;

ಪದವಿಂಗಡಣೆ:
ಭೀಮ +ಕೊಟ್ಟೆ +ತನಗೆ +ಸಾವಿನ
ನೇಮವನು +ನಿಮ್ಮಣ್ಣನಾಜ್ಞೆ +ವಿ
ರಾಮವಾಗದೆ+ ಬದುಕೆ+ ಧರ್ಮದ +ಮೈಸಿರಿಯನರಿದು
ಕಾಮಿನಿಯ +ಕೇಳಿಯಲಿ +ನೆನೆವುದು
ತಾಮಸದಿ+ ತಾ +ಮೀರಿ +ನುಡಿದ್
ಉದ್ದಾಮತೆಯ +ಸೈರಿಸುವುದೆಂದ್+ಎರಗಿದಳು +ಚರಣದಲಿ

ಅಚ್ಚರಿ:
(೧) ದ್ರೌಪದಿಯ ನೋವಿನ ನುಡಿ – ಕಾಮಿನಿಯ ಕೇಳಿಯಲಿ ನೆನೆವುದು ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದು

ಪದ್ಯ ೪೦: ಆಕಾಶದಿಂದ ಬಂದ ಶಬ್ದವೇನು?

ಇಲ್ಲಿ ನಿಲ್ಲರ್ಜುನ ತಪೋಧನ
ರ್ಗಿಲ್ಲಿ ನೆಲೆ ಶ್ರುತಿ ಯುವತಿ ಸೂಸುವ
ಚೆಲ್ಲಿಗಗಳ ಮೊನೆಗೆ ಮೀಸಲುಗುಡದ ಮೈಸಿರಿಯ
ದುರ್ಲಲಿತದಷ್ಟಾಂಗಯೋಗದ
ಕೊಲ್ಲಣಿಗೆಗೊಳಗಾಗದ ಪ್ರತಿ
ಮಲ್ಲ ಶಿವನ ಕ್ಷೇತ್ರವಿದೆ ಯೆಂದುದು ನಭೋನಿನದ (ಉದ್ಯೋಗ ಪರ್ವ, ೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಕಾನನದ ಸೌಂದರ್ಯವನ್ನು ನೋಡಿ ಚಲಿಸುತ್ತಿದ್ದಾಗ ನಭೋವಚನವು ಮೊಳಗಿತು. ಅರ್ಜುನ ಇಲ್ಲಿ ನಿಲ್ಲು, ತಪೋಧನರ ನೆಲೆಯು ಇದೇ. ವೇದ ಯುವತಿಯ ಚಂಚಲತೆಯ ನೋಟದ ಕೂರ್ಪಿಗೆ ಮನಸ್ಸು ಕೊಡದವನೂ, ಮಹಾ ಕಷ್ಟಕರವಾದ ಅಷ್ಟಾಂಗ ಯೋಗದ ಬಲಕ್ಕೆ ಒಳಗಾಗದಿರುವವನೂ, ಅಪ್ರತಿಮಮಲ್ಲನೂ ಆದ ಶಿವನ ಕ್ಷೇತ್ರವಿದು ಎಂದು ಆಕಾಶವಾಣಿ ನುಡಿಯಿತು.

ಅರ್ಥ:
ನಿಲ್ಲು: ತಡೆ; ತಪಸ್ಸು: ಧ್ಯಾನ; ಧನ: ಐಶ್ವರ್ಯ; ನೆಲೆ: ಭೂಮಿ, ಸ್ಥಾನ; ಯುವತಿ: ಹೆಣ್ಣು; ಸೂಸುವ: ಹರಡುವ; ಚೆಲ್ಲೆ: ಚೆಲ್ಲಾಟ; ಮೊನೆ: ಹರಿತವಾದ; ಮೀಸಲು: ಪ್ರತ್ಯೇಕವಾಗಿ ತೆಗೆದಿರಿಸಿದ್ದು, ಮುಡಿಪು; ಮೈಸಿರಿ: ಅಂಗ ಸೌಂದರ್ಯ; ಲಲಿತ: ಸುಂದರವಾದ; ದುರ್ಲಲಿತ: ಕುರೂಪಿಯಾದ; ಅಷ್ಠಾಂಗ: ಎಂಟು ಭಾಗ; ಯೋಗ: ಹೊಂದಿಸುವಿಕೆ, ಧ್ಯಾನ; ಕೊಲ್ಲಣಿಗೆ: ಸಂದಣಿ; ಮಲ್ಲ: ಜಟ್ಟಿ, ಬಲಶಾಲಿ; ಕ್ಷೇತ್ರ: ಸ್ಥಾನ; ನಭ: ಆಕಾಶ; ನಿನದ: ಶಬ್ದ;

ಪದವಿಂಗಡಣೆ:
ಇಲ್ಲಿ+ ನಿಲ್ಲ್+ಅರ್ಜುನ +ತಪೋಧನರ್ಗ್
ಇಲ್ಲಿ +ನೆಲೆ +ಶ್ರುತಿ +ಯುವತಿ+ ಸೂಸುವ
ಚೆಲ್ಲಿಗಗಳ+ ಮೊನೆಗೆ +ಮೀಸಲುಗುಡದ +ಮೈಸಿರಿಯ
ದುರ್ಲಲಿತದ್+ಅಷ್ಟಾಂಗ+ಯೋಗದ
ಕೊಲ್ಲಣಿಗೆಗ್+ಒಳಗಾಗದ್ + ಅಪ್ರತಿ
ಮಲ್ಲ +ಶಿವನ +ಕ್ಷೇತ್ರವಿದೆ +ಯೆಂದುದು +ನಭೋನಿನದ

ಅಚ್ಚರಿ:
(೧) ಶಿವನ ದೃಢತೆಯನ್ನು ಹೇಳುವ ಪರಿ – ಶ್ರುತಿ ಯುವತಿ ಸೂಸುವ
ಚೆಲ್ಲಿಗಗಳ ಮೊನೆಗೆ ಮೀಸಲುಗುಡದ ಮೈಸಿರಿಯ, ದುರ್ಲಲಿತದಷ್ಟಾಂಗಯೋಗದ ಕೊಲ್ಲಣಿಗೆಗೊಳಗಾಗದ

ಪದ್ಯ ೨೨: ಶಲ್ಯ ಮತ್ತು ಕರ್ಣನ ಅಂತರವದಾವುದು?

ತಾರ ತಮತೆಯ ಬಲ್ಲೆ ಪುರುಷರ
ಚಾರುಚರಿತವನರಿವೆ ಸುಭಟರ
ವೀರ ವೃತ್ತಿಯ ಬಲ್ಲೆ ಮಾನ್ಯರ ಮೈಸಿರಿಯ ತಿಳಿವೆ
ಆರವನು ರಾಧೇಯ ದಿಟ ನಾ
ವಾರವರು ನಮ್ಮಂತರವ ನೀ
ನಾರ ಕೈಯಲಿ ಕೇಳಿದರಿಯಾ ಶಿವಶಿವಾ ಎಂದ (ಕರ್ಣ ಪರ್ವ, ೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶಲ್ಯನು ದುರ್ಯೋಧನನ ಕೋರಿಕೆಯನ್ನು ಇನ್ನೂ ನಂಬಲಾಗದೆ, ತಾರತಮ್ಯಗಳನ್ನು ನಾನು ಬಲ್ಲೆ, ಯಾರ ನಡವಳಿಕೆ ಹೇಗೆ ಎಂಬುದನ್ನು ತಿಳಿದಿರುವೆ, ವೀರರು ಹೇಗಿರುತ್ತಾರೆ ಎನ್ನುವುದು ಬಲ್ಲೆ, ಮರ್ಯಾದಸ್ಥರ ರೀತಿನೀತಿಗಳನ್ನು ಅರಿತಿರುವೆ, ಆದರೆ ಏನೆಂದೆ ನೀನು ಕರ್ಣನೇ, ಯಾರವನು, ಗೊತ್ತು ಆತ ರಾಧೆಯ (ಸೂತನ ಮಗ), ನಾನು ಯಾರು? ನಮ್ಮಿಬ್ಬರದ ಅಂತರವೆಷ್ಟು ಇದನ್ನು ಯಾರು ನಿನಗೆ ಹೇಳಲಿಲ್ಲವೆ, ನೀನೂ ಕೇಳಲಿಲ್ಲವೆ, ಶಿವ ಶಿವಾ ಎಂದ.

ಅರ್ಥ:
ತಾರತಮ್ಯ: ಹೆಚ್ಚು-ಕಡಿಮೆ; ಬಲ್ಲೆ: ತಿಳಿದಿರುವೆ; ಪುರುಷ: ಮನುಷ್ಯ; ಚಾರು: ಸುಂದರ; ಚರಿತ: ಇತಿಹಾಸ; ಅರಿ: ತಿಳಿ; ಸುಭಟ: ಒಳ್ಳೆಯ ಸೈನಿಕ; ವೀರ: ಶೂರ; ವೃತ್ತಿ: ಕೆಲಸ; ಮಾನ್ಯರ: ಶ್ರೇಷ್ಠ; ಮೈಸಿರಿ: ನಡವಳಿಕೆ; ತಿಳಿ: ಅರಿ, ಗೊತ್ತುಮಾಡು; ದಿಟ: ಸತ್ಯ; ಕೈ: ಹಸ್ತ; ಅಂತರ: ದೂರ;

ಪದವಿಂಗಡಣೆ:
ತಾರತಮತೆಯ +ಬಲ್ಲೆ +ಪುರುಷರ
ಚಾರು+ಚರಿತವನ್+ಅರಿವೆ +ಸುಭಟರ
ವೀರ+ ವೃತ್ತಿಯ +ಬಲ್ಲೆ +ಮಾನ್ಯರ +ಮೈಸಿರಿಯ +ತಿಳಿವೆ
ಆರವನು+ ರಾಧೇಯ +ದಿಟ +ನಾವ್
ಆರ್+ಅವರು+ ನಮ್ಮ್+ಅಂತರವ+ ನೀನ್
ಆರ +ಕೈಯಲಿ +ಕೇಳಿದ್+ಅರಿಯಾ +ಶಿವಶಿವಾ +ಎಂದ

ಅಚ್ಚರಿ:
(೧) ಆರ್ – ಪದದ ಬಳಕೆ – ೪-೬ ಸಾಲುಗಲಲ್ಲಿ
(೨) ಬಲ್ಲೆ, ಅರಿ, ತಿಳಿ – ಸಮನಾರ್ಥಕ ಪದಗಳು

ಪದ್ಯ ೪೦: ರಾಜನೀತಿ ಯಾವುದು?

ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಐಶ್ವರ್ಯ, ಯೌವ್ವನ, ದೇಹ ಸೌಂದರ್ಯ, ದೇಹದ ಸುರೂಪ, ಶಸ್ತ್ರಾಸ್ತ್ರದ ಚಾತುರ್ಯ, ಅರಸುತನಗಳು ಇವು ಇರುವವರೆಗೂ ನೀತಿಯಿಂದ ರಾಜ್ಯವನ್ನಾಳು, ಬಂಧುಗಳನ್ನುದ್ಧರಿಸು, ಧರ್ಮವನ್ನು ಆರ್ಜಿಸು ಇದುವೆ ರಾಜನೀತಿ ಎಂದು ವಿದುರ ತಿಳಿಸಿದ.

ಅರ್ಥ:
ಸಿರಿ: ಐಶ್ವರ್ಯ; ನೆಲೆ: ಆಶ್ರಯ, ಆಧಾರ; ಜವ್ವನ: ಯೌವ್ವನ; ಮೈಸಿರಿ: ದೇಹ ಸೌಂದರ್ಯ; ತನು: ದೇಹ; ಖಂಡೆಯ: ಕತ್ತಿ;ಅರಸು: ರಾಜ; ನೀತಿ:ಮಾರ್ಗ ದರ್ಶನ; ಧರೆ: ಭೂಮಿ; ರಕ್ಷಿಸು: ಕಾಪಾಡು; ಬಂಧು: ಸಂಬಂಧಿಕರು; ಉದ್ಧರಿಸು: ಮೇಲಕ್ಕೆ ಎತ್ತುವುದು; ಧರ್ಮ: ಧಾರಣ ಮಾಡುವುದು, ನಿಯಮ, ಆಚಾರ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ನರಪತಿ: ರಾಜ; ನರ: ಮನುಷ್ಯ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಸಿರಿ +ನೆಲೆಯೆ +ಜವ್ವನ +ನೆಲೆಯೆ +ಮೈ
ಸಿರಿ +ನೆಲೆಯೆ +ತನು +ನೆಲೆಯೆ +ಖಂಡೆಯ
ಸಿರಿ +ನೆಲೆಯೆ +ನಿನಗ್+ಅರಸುತನವುಳ್ಳನ್ನ+ ನೀತಿಯಲಿ
ಧರೆಯ +ರಕ್ಷಿಸು+ ಬಂಧುಗಳನ್
ಉದ್ಧರಿಸು +ಧರ್ಮವ +ಸಾಧಿಸ್+ಇಂತಿದು
ನರಪತಿಗಳಿಗೆ+ ನೀತಿ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಸಿರಿ, ಯೌವ್ವನ, ಮೈಸಿರಿ, ತನು, ಖಂಡೆಯ, ಅರಸುತನ – ಇವುಗಳಿದ್ದಲ್ಲಿ ಧರ್ಮವನ್ನಾಚರಿಸಬೇಕು.
(೨) ನೆಲೆಯೆ – ೫ ಬಾರಿ ಪ್ರಯೋಗ
(೩) ಧರೆ, ಬಂಧು, ಧರ್ಮ – ಈ ಮೂರನ್ನು ರಕ್ಷಿಸಿ ಉದ್ಧರಿಸಿ ಸಾಧಿಸಬೇಕೆಂದು ವಿದುರ ತಿಳಿಸಿದ್ದಾನೆ.

ಪದ್ಯ ೨೧: ಉತ್ತರನು ಕತ್ತಿಯನು ತೋರಿಸುತ್ತಾ ಏನೆಂದು ಜಂಬ ಕೊಚ್ಚಿಕೊಂಡನು?

ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು
ಕಡೆಗೆ ದುರ್ಯಶವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದುಕವನಾವನೆಂದನು ಖಂಡೆಯವ ಜಡಿದು (ವಿರಾಟ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ರಾಜರಾದವರು ಬಂದು ಗೋವುಗಳನ್ನು ಹಿಡಿಯುವುದೇ? ಜಗತ್ತಿನಲ್ಲಿ ಕೀಳು ಕೃತ್ಯದ ಜನರು, ಅಧಮರ ಕೃತ್ಯಗಳನ್ನು (ಕೆಟ್ಟಯೋಚನೆಯುಳ್ಳ, ಹೆಂಗಸರ ಸೌಂದರ್ಯವನ್ನು ನೋಡುವ) ಕೌರವನು ರೂಢಿಸಿಕೊಂಡನೇ? ಇದರಿಂದ ಅವನಿಗೆ ದುಷ್ಕೃತ್ಯ ಕಟ್ಟಿಟ್ಟ ಬುತ್ತಿ. ನಾನು ಸುಮ್ಮನೆ ಬಿಡುವನೇ, ನನ್ನೊಡನೆ ಯುದ್ಧ ಮಾಡಿ ಬದುಕಿ ಉಳಿಯುವವರಾರು? ಎಂದು ಕತ್ತಿಯನ್ನು ಝಳಪಿಸಿ ಉತ್ತರನು ಗರ್ಜಿಸಿದನು.

ಅರ್ಥ:
ಪೊಡವಿ: ಪೃಥ್ವಿ, ಭೂಮಿ; ಪತಿ: ಒಡೆಯ; ಬಂದು: ಆಗಮಿಸಿ; ತುರು: ಗೋವು; ಹಿಡಿ: ಬಂಧಿಸು; ಲೋಕ: ಜಗತ್ತು; ಅಧಮ: ಕೀಳು, ನೀಚ; ಬಡ: ದೀನ; ಮನ್ನೆಯ: ಗೌರವಕ್ಕೆ ಪಾತ್ರವಾದವ; ಮೈಸಿರಿ: ದೇಹ ಸೌಂದರ್ಯ; ಕಡೆ: ಕೊನೆ; ದುರ್ಯಶ: ಅಪಕೀರ್ತಿ; ಉಳಿವುದು: ಇರುವುದು; ಗೋ: ಗೋವು; ಧನ: ಐಶ್ವರ್ಯ; ತೊಡಕು: ಸಿಕ್ಕು, ಗೋಜು, ಗೊಂದಲ; ಬದುಕು: ಜೀವಿಸು; ಖಂಡೆಯ: ಕತ್ತಿ, ಖಡ್ಗ;

ಪದವಿಂಗಡಣೆ:
ಪೊಡವಿ+ಪತಿಗಳು+ ಬಂದು +ತುರುಗಳ
ಹಿಡಿವರೇ +ಲೋಕದಲಿ +ಅಧಮರ
ಬಡಮನದ +ಮನ್ನೆಯರ +ಮೈಸಿರಿ +ಕೌರವನೊಳಾಯ್ತು
ಕಡೆಗೆ +ದುರ್ಯಶ+ವುಳಿವುದ್+ಅಲ್ಲದೆ
ಬಿಡುವೆನೇ +ಗೋಧನವನ್+ಎನ್ನೊಳು
ತೊಡಕಿ +ಬದುಕವನಾವನ್+ಎಂದನು +ಖಂಡೆಯವ +ಜಡಿದು

ಅಚ್ಚರಿ:
(೧) ರಾಜ ಎಂದು ಹೇಳಲು ಪೊಡವಿಪತಿ ಎಂಬ ಪದದ ಪ್ರಯೋಗ