ಪದ್ಯ ೩೦: ಧರ್ಮಜನು ಮುಂದೆ ಯಾರ ಬಳಿ ಬಂದನು?

ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜನುಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣಕಮಲದಲಿ (ಭೀಷ್ಮ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಭೀಷ್ಮನ ಮಾತುಗಳನ್ನು ಆಲಿಸಿ, ಮಹಾಪ್ರಸಾದ ವೆಂದು ತಿಳಿದು ಭೀಷ್ಮರಿಂದ ಬೀಳುಕೊಂಡು, ಆತನ ಮಾತನ್ನು ನೆನೆನೆನೆದು ರೋಮಾಂಚನಗೊಂಡನು. ಕೌರವ ಸೈನ್ಯದ ನಡುವೆ ಬರುತ್ತಿರಲು ಕೌರವ ವೀರರು ಅವನನ್ನು ತಡೆಯಲಿಲ್ಲ, ಅವನು ದ್ರೋಣರ ಬಳಿ ಬಂದು ಅವರಿಗೆ ವಂದಿಸಿದನು.

ಅರ್ಥ:
ಹಸಾದ: ಅನುಗ್ರಹ; ನಂದನ: ಮಗ; ಕಳುಹಿಸು: ತೆರಳು; ತನುಜ: ಮಗ; ಉಚಿತ: ಸರಿಯಾದ; ಉಕ್ತಿ: ಮಾತು; ನೆನೆದು: ಜ್ಞಾಪಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಪುಳಕ: ರೋಮಾಂಚನ; ವಿನುತ: ಸ್ತುತಿಗೊಂಡ; ಮತಿ: ಬುದ್ಧಿ; ನಡೆ: ಚಲಿಸು; ಸುಭಟ: ಪರಾಕ್ರಮಿ; ತೊಲಗು: ದೂರ ಸರಿ; ಜನಪ: ರಾಜ; ಮೈಯಿಕ್ಕು: ನಮಸ್ಕರಿಸು; ಚರಣ: ಪಾದ; ಕಮಲ: ಪದ್ಮ;

ಪದವಿಂಗಡಣೆ:
ಎನೆ+ ಹಸಾದವೆನುತ್ತ+ ಯಮ+ನಂ
ದನನು +ಕಳುಹಿಸಿಕೊಂಡು +ಗಂಗಾ
ತನುಜನ್ + ಉಚಿತ+ಉಕ್ತಿಗಳ +ನೆನೆದ್+ಅಡಿಗಡಿಗೆ+ ಪುಳಕಿಸುತ
ವಿನುತ+ಮತಿ +ನಡೆತರಲು+ ಸುಭಟರು
ತನತನಗೆ +ತೊಲಗಿದರು+ ಪಾಂಡವ
ಜನಪ +ಮೈಯಿಕ್ಕಿದನು +ದ್ರೋಣನ +ಚರಣ+ಕಮಲದಲಿ

ಅಚ್ಚರಿ:
(೧) ತನತನಗೆ, ಅಡಿಗದಿ – ಪದಗಳ ಬಳಕೆ
(೨) ನಂದನ, ತನುಜ – ಸಮನಾರ್ಥಕ ಪದ

ಪದ್ಯ ೩೦: ಕೃಷ್ಣನಿಗೆ ದೂತರು ಏನನ್ನು ನೀಡಿದರು?

ಬರವ ಬಿನ್ನಹ ಮಾಡಿ ಪಡಿ
ಹಾರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಒರೆಯಲಿಳುಹಿದರವರು ಕಳುಹಿದ ಬಿನ್ನವತ್ತಳೆಯ (ವಿರಾಟ ಪರ್ವ, ೧೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕಾವಲಿನವರು ಪಾಂಡವ ದೂತರು ಬಂದ ವಿಷಯವನ್ನು ತಿಳಿಸಿದರು. ಶ್ರೀಕೃಷ್ಣನ ಅಪ್ಪಣೆಯಂತೆ ಅವರನ್ನು ಆಸ್ಥಾನಕ್ಕೆ ಕರೆತಂದರು. ಪಾಂಡವರ ದೂತರು ಶ್ರೀಕೃಷ್ಣನಿಗೆ ನಮಸ್ಕರಿಸಿ ಪಾಂಡವರ ಓಲೆಯನ್ನು ನೀಡಿದರು.

ಅರ್ಥ:
ಬರವ: ಆಗಮಿಸು; ಬಿನ್ನಹ: ಕೋರಿಕೆ; ಪಡಿಹಾರ: ಬಾಗಿಲು ಕಾಯುವವ; ಮುರಾರಿ: ಕೃಷ್ಣ; ನೇಮ: ನಿಯಮ; ಚಾರರು: ದೂತರು; ಹೊಗಿಸು: ಪ್ರವೇಶಕ್ಕೆ ಅನುಮತಿಯನ್ನು ಕೊಡು; ಬಂದು: ಆಗಮಿಸು; ಹೊಕ್ಕು: ಸೇರು; ಓಲಗ: ದರ್ಬಾರು; ದರುಶನ: ನೋಟ; ಚರಣಾಂಬುರುಹ: ಪಾದ ಪದ್ಮ; ಅಂಬುರುಹ: ಕಮಲ; ಮೈಯಿಕ್ಕು: ನಮಸ್ಕರಿಸು; ದೇವ: ಭಗವಂತ; ಹೊರೆ: ರಕ್ಷಣೆ, ಆಶ್ರಯ; ಇಳುಹು: ಕೆಳಕ್ಕೆ ಬಾ; ಬಿನ್ನವತ್ತಳೆ: ಮನವಿ ಪತ್ರ;

ಪದವಿಂಗಡಣೆ:
ಬರವ +ಬಿನ್ನಹ +ಮಾಡಿ +ಪಡಿ
ಹಾರರು +ಮುರಾರಿಯ +ನೇಮದಲಿ +ಚಾ
ರರನು+ ಹೊಗಿಸಲು+ ಬಂದು +ಹೊಕ್ಕರು +ಕೃಷ್ಣನ್+ಓಲಗವ
ದರುಶನವ+ ಮಾಡುತ್ತ+ ಚರಣಾಂ
ಬುರುಹದಲಿ +ಮೈಯಿಕ್ಕಿ +ದೇವನ
ಒರೆಯಲ್+ಇಳುಹಿದರ್+ಅವರು +ಕಳುಹಿದ+ ಬಿನ್ನವತ್ತಳೆಯ

ಅಚ್ಚರಿ:
(೧) ನಮಸ್ಕರಿಸು ಎಂದು ಹೇಳಲು – ಚರಣಾಂಬುರುಹದಲಿ ಮೈಯಿಕ್ಕಿ
(೨) ಪ ವರ್ಗದ ಪದಗಳ ಬಳಕೆ – ಬರವ ಬಿನ್ನಹ ಮಾಡಿ ಪಡಿಹಾರರು ಮುರಾರಿಯ

ಪದ್ಯ ೩೦: ದ್ರೌಪದಿಯು ಯಾರನ್ನು ಕರೆದಳು?

ಅಗಿದು ಬೆಂಬತ್ತಿದಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಮೈಯಿಕ್ಕಿ ಶ್ರುತಿಶೀರ್ಷೋಕ್ತ ರೀತಿಯಲಿ
ಹೊಗಳಿದೊಡೆ ಹಿಂಗಿದವಲಾ ಸುರ
ರುಗಳುಘೇಯೆನಲಂಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆಂದಳಿಂದು ಮುಖಿ (ಅರಣ್ಯ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸುದರ್ಶನ ಚಕ್ರವು ಬೆನ್ನು ಹತ್ತಲು ದೂರ್ವಾಸನು ಮೂರು ಲೋಕಗಳನ್ನು ಸುತ್ತಿ ತಪ್ಪಿಸಿಕೊಳ್ಳಲಾರದೆ ವೇದ ಶೀರ್ಷೋಕ್ತ (ಉಪನಿಷತ್ತುಗಳು) ರೀತಿಯಲ್ಲಿ ನಿನ್ನನ್ನು ಹೊಗಳಿದನು. ಆಗ ಚಕ್ರವು ಹಿಂದೆಗೆದು ಹೋಯಿತು. ಅಂಬರೀಷನೂ ಭಯಮುಕ್ತನಾದನು. ಅಂಬರೀಷನ ಭಯವನ್ನು ಬಿಡಿಸಿದ ಕೃಷ್ಣನೇ, ಇಲ್ಲಿಗೆ ಬಾ ಎಂದು ದ್ರೌಪದಿಯು ಪ್ರಾರ್ಥಿಸಿದಳು.

ಅರ್ಥ:
ಅಗಿ: ಹೆದರು, ಆವರಿಸು; ಬೆಂಬತ್ತು: ಹಿಂದೆ ಬೀಳು; ಮುನಿ: ಋಷಿ; ಮೂಜಗ: ಮೂರು ಲೋಕ; ತೊಳಲು: ಬವಣೆ, ಸಂಕಟ; ಭಕುತಿ: ದೇವರಲ್ಲಿ ತೋರುವ ನಿಷ್ಠೆ; ಬಿಗುಹು: ಬಿಗಿ; ಮೈ: ತನು; ಮೈಯಿಕ್ಕು: ಬಾಗು, ನಮಸ್ಕರಿಸು; ಶ್ರುತಿ: ವೇದ; ಶೀರ್ಷ: ತಲೆ, ಅಗ್ರ; ಉಕ್ತಿ: ನುಡಿ; ಶ್ರುತಿಶೀರ್ಷೋಕ್ತ: ಉಪನಿಷತ್ತು; ರೀತಿ: ಶೈಲಿ; ಹೊಗಳು: ಪ್ರಶಂಶಿಸು; ಹಿಂಗಿದ: ಹಿಂತಿರುಗು; ಸುರರು: ದೇವತೆಗಳು; ಉಘೇ: ಜಯಘೋಷ; ಬೆಗಡು: ಆಶ್ಚರ್ಯ, ಬೆರಗು; ಬಿಡಿಸು: ಹೋಗಲಾಡಿಸು; ಮೈದೋರು: ಗೋಚರಿಸು; ಇಂದುಮುಖಿ: ಚಂದ್ರನಮ್ತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಅಗಿದು +ಬೆಂಬತ್ತಿದಡೆ +ಮುನಿ +ಮೂ
ಜಗವನೆಲ್ಲವ +ತೊಳಲಿ +ಭಕುತಿಯ
ಬಿಗುಹಿನಲಿ +ಮೈಯಿಕ್ಕಿ +ಶ್ರುತಿ+ಶೀರ್ಷ+ ಉಕ್ತ +ರೀತಿಯಲಿ
ಹೊಗಳಿದೊಡೆ +ಹಿಂಗಿದವಲಾ +ಸುರ
ರುಗಳ್+ಉಘೇ+ಎನಲ್+ಅಂಬರೀಷನ
ಬೆಗಡ+ ಬಿಡಿಸಿದ +ಕೃಷ್ಣ +ಮೈದೋರೆಂದಳ್+ಇಂದುಮುಖಿ

ಅಚ್ಚರಿ:
(೧) ದೂರ್ವಾಸನು ಸುದರ್ಶನ ಚಕ್ರದಿಂದ ತಪ್ಪಿಸಿಕೊಂಡ ಬಗೆ – ಮೂಜಗವನೆಲ್ಲವ ತೊಳಲಿ ಭಕುತಿಯ ಬಿಗುಹಿನಲಿ ಮೈಯಿಕ್ಕಿ ಶ್ರುತಿಶೀರ್ಷೋಕ್ತ ರೀತಿಯಲಿ ಹೊಗಳಿದೊಡೆ ಹಿಂಗಿದವಲಾ
(೨) ಹೊಗಳು, ಉಘೇ – ಸಾಮ್ಯಾರ್ಥ ಪದ

ಪದ್ಯ ೯೯: ಅರ್ಜುನನು ಪಾಶುಪತಾಸ್ತ್ರವನ್ನು ಹೇಗೆ ಪಡೆದನು?

ಸರಸಿಯಲಿ ಮೀಂದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿಂದನು ಭಾವಶುದ್ಧಿಯಲಿ
ಸರಳ ಸಾಂಗೋಪಾಂಗ ಮಂತ್ರೋ
ಚ್ಚರಣ ಸಂಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ (ಅರಣ್ಯ ಪರ್ವ, ೭ ಸಂಧಿ, ೯೯ ಪದ್ಯ)

ತಾತ್ಪರ್ಯ:
ಸರೋವರದಲ್ಲಿ ಸ್ನಾನಮಾಡಿ, ಆಚಮನವನ್ನು ಮಾಡಿ ಅರ್ಜುನನು ಶಿವನ ಚರಣಕ್ಕೆ ನಮಸ್ಕರಿಸಿ ಭಾವ ಶುದ್ಧಿಯಿಂದ ಎದ್ದು ನಿಂತನು. ಪಾಶುಪತಾಸ್ತ್ರ ಮಂತ್ರವನ್ನು ಅಂಗ ಉಪಾಂಗಗಳ ಸಹಿತವಾಗಿ, ಉಚ್ಚರಣೆ ಸಂಹೃತಿ ಮೋಕ್ಷಗಳ ಸಹಿತವಾಗಿ ಶಿವನು ಅರ್ಜುನನಿಗೆ ರಹಸ್ಯವಾಗಿ ಬೋಧಿಸಿದನು.

ಅರ್ಥ:
ಸರಸಿ: ನೀರು; ಮಿಂದು: ಮುಳುಗು; ಆಚಮನ: ವೈದಿಕಕರ್ಮಗಳನ್ನು ಮಾಡುವಾಗ ಶುದ್ಧಿಗಾಗಿ ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಕುಡಿಯುವುದು; ವಿಸ್ತರ: ವಿಸ್ತಾರ, ವಿವರವಾಗಿ; ಶೂಲಿ: ಶಿವ; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ನಿಂದು: ನಿಲ್ಲು; ಭಾವ: ಮನೋಧರ್ಮ, ಭಾವನೆ; ಶುದ್ಧ: ನಿರ್ಮಲ; ಸರಳ: ಬಾಣ; ಸಾಂಗೋಪಾಂಗ: ವಿಧಿವತ್ತಾದುದು, ಶಾಸ್ತ್ರೋಕ್ತವಾದುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಚ್ಚರಣ: ಹೇಳುವಿಕೆ; ಸಂಹೃತಿ: ನಾಶ, ಸಂಹಾರ; ಮೋಕ್ಷ: ಬಿಡುಗಡೆ; ವಿಸ್ತರಿಸು: ವಿವರವಾಗಿ ಹೇಳು; ರಹಸ್ಯ: ಗುಪ್ತ; ಕೊಟ್ಟು: ನೀಡು; ಶರ: ಬಾಣ;

ಪದವಿಂಗಡಣೆ:
ಸರಸಿಯಲಿ +ಮಿಂದ್+ಆಚಮನ +ವಿ
ಸ್ತರಣೆಯೆಲ್ಲವ+ ಮಾಡಿ +ಶೂಲಿಯ
ಚರಣದಲಿ+ ಮೈಯಿಕ್ಕಿ+ ನಿಂದನು +ಭಾವ+ಶುದ್ಧಿಯಲಿ
ಸರಳ+ ಸಾಂಗೋಪಾಂಗ+ ಮಂತ್ರೋ
ಚ್ಚರಣ+ ಸಂಹೃತಿ +ಮೋಕ್ಷವನು +ವಿ
ಸ್ತರಿಸುತ +ರಹಸ್ಯದಲಿ+ ಕೊಟ್ಟನು +ಪಾಶುಪತ+ ಶರವ

ಅಚ್ಚರಿ:
(೧) ಚರಣ ಪದದ ಬಳಕೆ – ಶೂಲಿಯ ಚರಣ, ಮಂತ್ರೋ ಚ್ಚರಣ
(೨) ವಿಸ್ತರಣೆ, ವಿಸ್ತರಿಸು – ಪದದ ಬಳಕೆ

ಪದ್ಯ ೮: ಧರ್ಮಜನು ವ್ಯಾಸರನ್ನು ಹೇಗೆ ಬರೆಮಾಡಿಕೊಂಡನು?

ಹಾ ಮಹಾದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ (ಅರಣ್ಯ ಪರ್ವ, ೫ ಸಂಧಿ, ೮ ಪದ್ಯ)

ತಾತ್ಪರ್ಯ:
ಅಲ್ಲಿ ನೆರೆದಿದ್ದ ಋಷಿಮುನಿಗಳು ವ್ಯಾಸರನ್ನು ನೋಡಿ, ಹಾ ಭಗವಂತ, ಮಹಾದೇವ, ಇವರಾರು, ಇವರು ಮಹಾ ಮುನಿಗಳಂತೆ ತೋರುತ್ತಿರುವವರು ಎಂದು ತಿಳಿದು ಅಲ್ಲಿದ್ದ ಮುನಿಗಳ ಗುಂಪು ಎದ್ದು ನಿಂತರು. ಧರ್ಮಜನು ವ್ಯಾಸರ ಬಳಿ ತೆರಳಿ ಮುಖಾಮುಖಿಯಾದನು. ಪ್ರೇಮದಿಂದ ರೋಮಾಂಚನಗೊಂಡು, ಸಂತಸದ ಕಣ್ಣೀರಿನ ಹನಿಯನ್ನು ಹೊರಹಾಕುತ್ತಾ, ಸತ್ಯವೇ ಭಾವವಾಗಿದ್ದ ಧರ್ಮಜನು ವ್ಯಾಸರ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಮಹಾ: ಶ್ರೇಷ್ಠ; ಮುನಿ: ಋಷಿ; ಈಶ್ವರ: ಒಡೆಯ, ಪ್ರಭು; ಸ್ತೋಮ: ಗುಂಪು; ಎದ್ದು: ಮೇಲೇಳು; ನಂದನ: ಮಗ; ಇದಿರು: ಎದುರು; ಪ್ರೇಮ: ಒಲವು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಸಲಿಲ: ನೀರು; ನಯನ: ಕಣ್ಣು; ರೋಮ: ಕೂದಲು; ಹರ್ಷ: ಸಂತಸ; ಸತ್ಯ: ನಿಜ; ಭಾವ: ಭಾವನೆ; ಭೂಮಿಪತಿ: ರಾಜ; ಮೈಯಿಕ್ಕು: ನಮಸ್ಕರಿಸು; ವರ: ಶ್ರೇಷ್ಠ; ಚರಣ: ಪಾದ;

ಪದವಿಂಗಡಣೆ:
ಹಾ +ಮಹಾದೇವಾ+ಇದಾರು +ಮ
ಹಾ +ಮುನೀಶ್ವರರ್+ಎನುತ+ ಮುನಿಪ
ಸ್ತೋಮವ್+ಎದ್ದುದು +ಧರ್ಮನಂದನನ್+ಅವರಿಗ್+ಇದಿರಾಗಿ
ಪ್ರೇಮ +ಪುಳಕದ +ನಯನ +ಸಲಿಲದ
ರೋಮಹರ್ಷದ+ ಸತ್ಯಭಾವದ
ಭೂಮಿಪತಿ+ ಮೈಯಿಕ್ಕಿದನು +ಮುನಿವರನ +ಚರಣದಲಿ

ಅಚ್ಚರಿ:
(೧) ರೋಮಾಂಚನದ ವರ್ಣನೆ – ಪ್ರೇಮ ಪುಳಕದ ನಯನ ಸಲಿಲದ ರೋಮಹರ್ಷದ
(೨) ನಮಸ್ಕರಿಸಿದನು ಎಂದು ಹೇಳಲು – ಮೈಯಿಕ್ಕಿದನು ಪದದ ಬಳಕೆ
(೩) ಮ ಕಾರದ ಸಾಲು ಪದಗಳು – ಮಹಾದೇವಾಯಿದಾರು ಮಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು