ಪದ್ಯ ೧೭: ಭೀಮನು ಅಶ್ವತ್ಥಾಮನಿಗೆ ಏನು ಹೇಳಿದ?

ನಿಲ್ಲು ಗುರುಸುತ ಶೌರ್ಯಪಣ ನ
ಮ್ಮಲ್ಲಿಯೇ ಹುಲುಜೀವರಿಗೆ ಜವ
ನಲ್ಲಿ ಮೇಳವೆ ಉಗುಳು ಪಂಚದ್ರೌಪದೀಸುತರ
ಬಿಲ್ಲ ಗುರು ನೀನಾದಡೆಮಗೇ
ನಿಲ್ಲಿ ದ್ರೌಪದಿಯಕ್ಷಿಜಲಕೃಪೆ
ಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ (ಗದಾ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ಗುಡುಗುತ್ತಾ, ಎಲೈ ಗುರುಪುತ್ರಾ ನಿಲ್ಲು, ಶೌರ್ಯದ ಆಟವನ್ನು ನಮ್ಮಲ್ಲಿ ಆಡಿದೆಯಾ? ಮಕ್ಕಳಿಗೆ ಯಮನೊಡನೆ ಆಟವೇ? ಐವರು ದ್ರೌಪದೀ ಪುತ್ರರನ್ನು ಉಗುಳು. ನೀನು ಬಿಲ್ವಿದ್ಯೆಯ ಗುರುವಾಗಿರಬಹುದು. ಆದರೇನೆಅಂತೆ. ದ್ರೌಪದಿಯ ಕಣ್ಣೀರು, ಕೃಪೆಯಲ್ಲಿ ಮುಂದುವರಿಯಬೇಕು ಎಂದನು.

ಅರ್ಥ:
ಸುತ: ಮಗ; ಶೌರ್ಯ: ಸಾಹಸ, ಪರಾಕ್ರಮ; ಪಣ: ಸಂಕಲ್ಪ, ಶಪಥ; ಹುಲು: ಅಲ್ಪ; ಜೀವ: ಪ್ರಾಣ; ಜವ: ಯಮ; ಮೇಳ: ಗುಂಪು; ಉಗುಳು: ಹೊರಹಾಕು; ಬಿಲ್ಲು: ಚಾಪ; ಗುರು: ಆಚಾರ್ಯ; ಅಕ್ಷಿ: ಕಣ್ಣು; ಅಕ್ಷಿಜಲ: ಕಣ್ಣೀರು; ಕೃಪೆ: ದಯೆ; ಲಂಬಿಸು: ಬೆಳೆಸು, ತೂಗಾಡು; ಮೂದಲಿಸು: ಹಂಗಿಸು;

ಪದವಿಂಗಡಣೆ:
ನಿಲ್ಲು +ಗುರುಸುತ +ಶೌರ್ಯಪಣ+ ನ
ಮ್ಮಲ್ಲಿಯೇ +ಹುಲು+ಜೀವರಿಗೆ +ಜವ
ನಲ್ಲಿ+ ಮೇಳವೆ +ಉಗುಳು +ಪಂಚ+ದ್ರೌಪದೀಸುತರ
ಬಿಲ್ಲ+ ಗುರು +ನೀನಾದಡ್+ಎಮಗೇ
ನಿಲ್ಲಿ+ ದ್ರೌಪದಿ+ಅಕ್ಷಿಜಲ+ಕೃಪೆ
ಯಲ್ಲಿ+ ಲಂಬಿಸಬೇಕ್+ಎನುತ +ಮೂದಲಿಸಿದನು +ಭೀಮ

ಅಚ್ಚರಿ:
(೧) ಅಶ್ವತ್ಥಾಮನು ಸಾಯಬೇಕೆಂದು ಹೇಳುವ ಪರಿ – ದ್ರೌಪದಿಯಕ್ಷಿಜಲ ಕೃಪೆಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ

ಪದ್ಯ ೧೪: ದ್ರೌಪದಿಯು ಪಾಳೆಯದಿಂದ ಹೇಗೆ ಬಂದಳು?

ಪಾಳೆಯದಲಿ ಕುಮಾರರನು ಪಾಂ
ಚಾಲರನು ನೋಡುವೆವೆನುತ ಭೂ
ಪಾಲ ನಡೆತರಲಿದಿರುವಂದುದು ಯುವತಿನಿಕುರುಂಬ
ಸೂಳುವೊಯ್ಲಿನ ತೆಳುವಸುರ ಕರ
ತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ ಬಂದಳು ದ್ರೌಪದೀದೇವಿ (ಗದಾ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಳೆಯದಲ್ಲಿ ಮಲಗಿದ್ದ ಮಕ್ಕಳನ್ನು, ಪಾಂಚಾಲರನ್ನು ನೋಡೋಣವೆಂದು ಧರ್ಮಜನು ಬರುತ್ತಿರಲು, ಮತ್ತೆ ಮತ್ತೆ ಅಳುತ್ತಾ, ತಮ್ಮ ಕೈಗಳಿಂದ ತೆಳುವಾಗಿದ್ದ ಹೊಟ್ಟೆಗಲನ್ನು ಹೊಡೆದುಕೊಳ್ಳುತ್ತಾ ಹಾಹಾಕಾರ ಮಾಡುತ್ತಿದ್ದ ಸ್ತ್ರೀಯರೊಡನೆ ದ್ರೌಪದಿಯು ಎದುರು ಬಂದಳು.

ಅರ್ಥ:
ಪಾಳೆಯ: ಬಿಡಾರ; ಕುಮಾರ: ಮಕ್ಕಳು; ನೋಡು: ವೀಕ್ಷಿಸು; ಭೂಪಾಲ: ರಾಜ; ನಡೆ: ಚಲಿಸು; ಇದಿರು: ಎದುರು; ವಂದುದು: ಬಂದನು; ಯುವತಿ: ಹೆಣ್ಣು; ನಿಕುರುಂಬ: ಸಮೂಹ; ಸೂಳು: ಆರ್ಭಟ, ಬೊಬ್ಬೆ; ಸೂಳುವೊಯಿಲು: ಸರದಿಯಾಗಿ ಕೊಡುವ ಹೊಡೆತ; ತೆಳುವು: ಸೂಕ್ಷ್ಮ; ಕರತಾಳ: ಅಂಗೈ; ಹಾಹಾವಿರಾವ: ಹಾಹಾಕಾರ; ಮೇಳ: ಗುಂಪು; ಗೀತ: ಹಾಡು; ಬಂದು: ಆಗಮಿಸು;

ಪದವಿಂಗಡಣೆ:
ಪಾಳೆಯದಲಿ +ಕುಮಾರರನು +ಪಾಂ
ಚಾಲರನು +ನೋಡುವೆವೆನುತ +ಭೂ
ಪಾಲ +ನಡೆತರಲ್+ಇದಿರು+ಬಂದುದು +ಯುವತಿ+ನಿಕುರುಂಬ
ಸೂಳುವೊಯ್ಲಿನ +ತೆಳುವಸುರ +ಕರ
ತಾಳದಲಿ +ಹಾಹಾವಿರಾವದ
ಮೇಳವದ +ಗೀತದಲಿ +ಬಂದಳು +ದ್ರೌಪದೀದೇವಿ

ಅಚ್ಚರಿ:
(೧) ಅಳಲನ್ನು ವಿವರಿಸುವ ಪರಿ – ಸೂಳುವೊಯ್ಲಿನ ತೆಳುವಸುರ ಕರತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ

ಪದ್ಯ ೩: ಕೌರವನ ಸ್ತ್ರೀಯರ ಪರಿಸ್ಥಿತಿ ಹೇಗಿತ್ತು?

ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲುಬೀಯಗದಂಗರಕ್ಷೆಯ ಕಂಚುಕಿ ವ್ರಜದ
ಮೇಳವವದೇನಾಯ್ತೊ ಬೀದಿಯ
ಗಾಳುಮಂದಿಯ ನಡುವೆ ಕುರುಭೂ
ಪಾಲನರಸಿಯರಳುತ ಹರಿದರು ಬಿಟ್ಟಮಂಡೆಯಲಿ (ಅರಣ್ಯ ಪರ್ವ, ೨೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವರ ರಾಣೀವಾಸವನ್ನು ಗಾಳಿಯೇ ಕಾಣದು, ಎಂದ ಮೇಲೆ ಸೂರ್ಯಕಿರಣಗಳ ಸೋಂಕೆಲ್ಲಿ? ಅವರು ಓಡಾಡುವ ಕಿರುಬಾಗಿಲ ಬೀಗ, ಅವರ ಅಂಗರಕ್ಷಕರು, ಕಂಚುಕಿಗಳು ಎಲ್ಲಿ? ಬೀದಿಯ ಜನಜಾಲದ ನಡುವೆ ಕೌರವರ ಅರಸಿಯರು ತಲೆಗೆದರಿಕೊಂಡು ಅಳುತ್ತಾ ಬಂದರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ರವಿ: ಭಾನು; ಕಿರಣ: ಪ್ರಕಾಶ; ಬಾಲೆ: ಹೆಂಗಸು, ಸ್ತ್ರೀ; ಗೋಚರ: ತೋರು; ದಡ್ಡಿ: ಪಂಜರ; ಅಂಗರಕ್ಷೆ: ಕಾವಲುಗಾರ; ಕಂಚುಕಿ: ಅಂತಃಪುರದ ಅಧಿಕಾರಿ; ವ್ರಜ: ಗುಂಪು; ಮೇಳ: ಗುಂಪು; ಬೀದಿ: ಕೇರಿ; ಆಳು: ಸೇವಕ; ಮಂದಿ: ಜನ; ನಡುವೆ: ಮಧ್ಯೆ; ಭೂಪಾಲ: ರಾಜ; ಅರಸಿ: ರಾಣಿ; ಅಳು: ಆಕ್ರಂದನ; ಹರಿ: ಚಲಿಸು; ಬಿಟ್ಟ: ತೊರೆ; ಮಂಡೆ: ಶಿರ;

ಪದವಿಂಗಡಣೆ:
ಗಾಳಿ+ಅರಿಯದು +ರವಿಯ +ಕಿರಣಕೆ
ಬಾಲೆಯರು +ಗೋಚರವೆ+ ದಡ್ಡಿಯ
ಮೇಲುಬೀಯಗದ್+ಅಂಗರಕ್ಷೆಯ +ಕಂಚುಕಿ +ವ್ರಜದ
ಮೇಳವವದ್+ಏನಾಯ್ತೊ +ಬೀದಿಯಗ್
ಆಳುಮಂದಿಯ+ ನಡುವೆ +ಕುರು+ಭೂ
ಪಾಲನ್+ಅರಸಿಯರ್+ಅಳುತ +ಹರಿದರು +ಬಿಟ್ಟ+ಮಂಡೆಯಲಿ

ಅಚ್ಚರಿ:
(೧) ತಲೆಗೆದರಿಕೊಂಡು ಎಂದು ಹೇಳುವ ಪರಿ – ಬಿಟ್ಟಮಂಡೆಯಲಿ
(೨) ಅಂತಃಪುರದ ರಕ್ಷಣೆಯನ್ನು ವಿವರಿಸುವ ಪರಿ – ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ

ಪದ್ಯ ೯೬: ಯಾರನ್ನು ಗಾಯಕರೆನ್ನಬಹುದು?

ತಾಳಲಯ ಬೊಂಬಾಳ ಮಿಶ್ರದ
ಹೇಳಿಕೆಯನಾ ರಾಗ ಶುದ್ಧದ
ಸಾಳಗದ ಸಂಕೀರ್ಣ ದೇಸಿಯ ವಿವಿಧ ರಚನೆಗಳ
ಮೇಳವರಿವುತ ವಾದ್ಯ ಸಾಧನ
ದೇಳಿಗೆಯ ಸಂಪೂರ್ಣ ಮಾರ್ಗದ
ಸೂಳುಗಳ ಲಯಮಾನವರಿದವನವನೆ ಗಾಯಕನು (ಉದ್ಯೋಗ ಪರ್ವ, ೩ ಸಂಧಿ, ೯೬ ಪದ್ಯ)

ತಾತ್ಪರ್ಯ:
ತಾಳ, ಲಯ, ಧ್ವನಿ ಭೇದಗಳನ್ನೊಳಗೊಂಡು, ಶುದ್ಧಸ್ಥಾಯಿಯಲ್ಲಿ ನಾನಾ ವಿಧವಾದ ದೇಶೀ ರಚನೆಗಳನ್ನರಿತು, ಸಹಕಾರಿ ವಾದ್ಯಗಳನ್ನು ಉಪಯೋಗಿಸುವುದನ್ನರಿತು ಶಾಸ್ತ್ರೀಯ ಸಂಗೀತದ ವರಸೆಗಳ ಲಯವನ್ನರಿತವನೇ ಗಾಯಕ ಎಂದು ವಿದುರ ಧೃತರಾಷ್ಟ್ರನಿಗೆ ಹೇಳಿದ.

ಅರ್ಥ:
ತಾಳ: ಹಾಡುವಾಗ ಯಾ ವಾದ್ಯವನ್ನು ನುಡಿಸುವಾಗ ನಿಯತಗತಿಯನ್ನು ಸೂಚಿಸಲು ಕೈ ಗಳಿಂದ ಹಾಕುವ ಪೆಟ್ಟು; ಬೊಂಬಾಳ:ನಾಲ್ಕು ಧ್ವನಿ ಭೇದಗಳಲ್ಲಿ ಒಂದು; ಮಿಶ್ರ: ಸೇರುವಿಕೆ; ಹೇಳಿಕೆ: ತಿಳಿಸುವಿಕೆ ; ಶುದ್ಧ: ತಪ್ಪಿಲ್ಲದ; ರಾಯ: ರಾಜ; ಸಾಳಗ: ಒಂದು ವಾದ್ಯ; ಸಂಕೀರ್ಣ: ಸೇರಿಕೊಂಡಿರುವುದು; ದೇಸಿ: ಒಂದು ದೇಶದಲ್ಲಿ ಪರಂಪರಾನುಗತವಾಗಿ ಬಂದಿರುವ ಸಂಸ್ಕೃತಿ, ಆಚಾರ; ವಿವಿಧ: ಹಲವಾರು; ರಚನೆ: ಸೃಷ್ಟಿ; ಮೇಳ: ಸಂಗೀತಗಾರ, ವಾದ್ಯಗಾರ ಯಾ ನರ್ತಕರ ಗುಂಪು ; ಅರಿ: ತಿಳಿ; ವಾದ್ಯ: ಸಂಗೀತದ ಸಾಧನ; ಸಾಧನ: ಅಭ್ಯಾಸ; ಏಳಿಗೆ: ಮೇಲೇಳು, ಮುಂದುವರಿ; ಸಂಪೂರ್ಣ: ಎಲ್ಲಾ; ಮಾರ್ಗ: ದಾರಿ; ಸೂಳು:ಆವೃತ್ತಿ, ಬಾರಿ, ಸರದಿ; ಲಯ: ಸಂಗೀತದಲ್ಲಿ ತಾಳ, ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ; ಮಾನ: ಗಣನೆ, ಎಣಿಕೆ; ಗಾಯಕ: ಹಾಡುಗಾರ, ಸಂಗೀತಗಾರ; ರಾಗ: ಹೊಂದಿಸಿದ ಸ್ವರಗಳ ಮೇಳೈಕೆ;

ಪದವಿಂಗಡಣೆ:
ತಾಳ+ಲಯ +ಬೊಂಬಾಳ +ಮಿಶ್ರದ
ಹೇಳಿಕೆಯನಾ +ರಾಗ +ಶುದ್ಧದ
ಸಾಳಗದ +ಸಂಕೀರ್ಣ +ದೇಸಿಯ +ವಿವಿಧ +ರಚನೆಗಳ
ಮೇಳವರಿವುತ+ ವಾದ್ಯ +ಸಾಧನದ್
ಏಳಿಗೆಯ +ಸಂಪೂರ್ಣ +ಮಾರ್ಗದ
ಸೂಳುಗಳ +ಲಯಮಾನವರಿದವನ್+ಅವನೆ+ ಗಾಯಕನು

ಅಚ್ಚರಿ:
(೧) ಏಳಿಗೆ, ಹೇಳಿಕೆ – ಪ್ರಾಸ ಪದ

ಪದ್ಯ ೮: ಕೃಷ್ಣನು ಯಾರನ್ನು ಹೇಗೆ ಭೇಟಿಯಾದನು?

ಅರಸ ಸಹಿತ ಸಮಸ್ತ ಯಾದವ
ಪರಿಕರದ ಮೇಳದಲಿ ಯಾದವ
ರರಸ ಬಿಜಯಂಗೈದು ಕುಂತಿಯ ಸುತರ ಭವನದಲಿ
ಅರಸಿಯರ ಸುಕುಮಾರ ವರ್ಗವ
ಕರೆಸಿ ಕಾಣಿಸಿಕೊಂಡು ದಿವ್ಯಾ
ಭರಣ ವಸನಾದಿಯಲಿ ಮನ್ನಿಸಿದನು ಮಹೀಶ್ವರರ (ಆದಿ ಪರ್ವ, ೨೦ ಸಂಧಿ, ೮ ಪದ್ಯ)

ತಾತ್ಪರ್ಯ:
ಕೃಷ್ಣನು ಧರ್ಮರಾಯನಿಗೆ ನಮಸ್ಕರಿಸಿದ ನಂತರ ಅವನ ಜೊತೆ ಸಮಸ್ತ ಯಾದವ ಜನರೊಡನೆ ಪಾಂಡವರ ಮನೆಗೆ ಕೃಷ್ಣನು ಬಂದು ರಾಣಿಯರನ್ನೂ ಮಕ್ಕಳನ್ನೂ ಕರೆಸಿಕೊಂಡು ಎಲ್ಲರಿಗೂ ಉತ್ತಮವಸ್ತ್ರಗಳನ್ನೂ ಆಭರಣಗಳನ್ನೂ ಕೊಟ್ಟು ಮನ್ನಿಸಿದನು.

ಅರ್ಥ:
ಅರಸ: ರಾಜ; ಸಹಿತ: ಜೊತೆ; ಸಮಸ್ತ: ಎಲ್ಲಾ; ಪರಿಕರ: ಸುತ್ತುಮುತ್ತಲಿನ ಜನ, ಸಮೂಹ; ಮೇಳ: ಗುಂಪು; ಬಿಜಯಂಗೈದು: ಆಗಮನ; ಸುತ: ಮಕ್ಕಳು; ಭವನ: ಮನೆ; ಅರಸಿ: ರಾಣಿ; ಕುಮಾರ: ಮಗ, ಮಕ್ಕಳು; ವರ್ಗ:ಗುಂಪು; ಕರೆಸಿ: ಬರಮಾಡು; ದಿವ್ಯ: ಶ್ರೇಷ್ಠ; ಆಭರಣ: ಒಡವೆ; ವಸನ: ಬಟ್ಟೆ; ಮನ್ನಿಸು: ಗೌರವಿಸು; ಮಹೀಶ್ವರ: ರಾಜ;

ಪದವಿಂಗಡಣೆ:
ಅರಸ+ ಸಹಿತ +ಸಮಸ್ತ +ಯಾದವ
ಪರಿಕರದ+ ಮೇಳದಲಿ+ ಯಾದವರ್
ಅರಸ +ಬಿಜಯಂಗೈದು +ಕುಂತಿಯ +ಸುತರ +ಭವನದಲಿ
ಅರಸಿಯರ +ಸುಕುಮಾರ +ವರ್ಗವ
ಕರೆಸಿ +ಕಾಣಿಸಿಕೊಂಡು +ದಿವ್ಯಾ
ಭರಣ+ ವಸನಾದಿಯಲಿ+ ಮನ್ನಿಸಿದನು +ಮಹೀಶ್ವರರ

ಅಚ್ಚರಿ:
(೧) ಅರಸ, ಅರಸಿ – ಪುಲ್ಲಿಂಗ, ಸ್ತ್ರೀಲಿಂಗ ಪದ, ೧, ೪ ಸಾಲಿನ ಮೊದಲ ಪದ
(೨) ವರ್ಗ, ಮೇಳ – ಸಮನಾರ್ಥಕ ಪದ
(೩) ಅರಸ, ಮಹೀಶ್ವರ – ರಾಜ ಅರ್ಥವನ್ನು ಕೊಡುವ ಪದ – ಪದ್ಯದ ಮೊದಲನೆ ಹಾಗು ಕೊನೆ ಪದ
(೪) ಯಾದವ – ೧, ೨ ಸಾಲಿನ ಕೊನೆ ಪದ; ಅರಸ – ೧, ೩ ಸಾಲಿನ ಮೊದಲ ಪದ

ಪದ್ಯ ೨೦: ಮಂಟಪದ ಸುತ್ತ ನೆರದಿದ್ದ ಜನಸಮೂಹವು ಹೇಗೆ ಆನಂದಿಸಿದರು?

ಸಾಳಗದ ಸಮ್ಮೋಹನದ ಮಳೆ
ಗಾಲವೋ ಗೀತವೋ ರಸಾಳಿಯ
ಕಾಲುವೆಯೊ ನವಕಾವ್ಯಬಂಧದ ಸಾರಸಂಗತಿಯೋ
ಆಲಿಗಳಿಗಾಯುಷ್ಯಫಲ ಜೀ
ವಾಳವೋ ನರ್ತನವೊ ಸೊಗಸಿನ
ಮೇಳವಣಿಗಳ ಪಾಟಿಯಾದುದು ಜನದ ಕಣ್ಮನಕೆ (ಆದಿ ಪರ್ವ, ೧೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಇಂತಹ ವಿಧವಿಧವಾದ ಸಂಗೀತದ ನಾದದಿಂದ ತುಂಬಿದ್ದ ಆ ಮಂಟಪವು ಇದೇನು ಸಂಗೀತದ ಮೋಹಕವಾದ ಮಳೆಗಾಲವೋ, ಅಥವ ಈ ನವರಸಗಳು ಭರಿತವಾದ ಹಾಡುಗಳು ಹರಿಯುತ್ತಿರುವ ಕಾಲುವೆಯೋ, ನೂತನ ಕಾವ್ಯರಚನೆಯ ರೀತಿಯೋ, ಈ ನೋಟವು ಜೀವಿತಾವಧಿಯಲ್ಲಿ ನೋಡಿದಕ್ಕೆ ಸಾರ್ಥಕವೋ ಎಂಬಂತೆ, ಈ ಸಂಗೀತ, ನೃತ್ಯಗಳ ಸೊಗಸು ಅಲ್ಲಿದ್ದವರ ಕಣ್ಮನಕ್ಕೆ ಆನಂದವನ್ನುಂಟುಮಾಡಿತು.

ಅರ್ಥ:
ಸಾಳ: ಒಂದು ಬಗೆಯ ವಾದ್ಯ; ಸಮ್ಮೋಹನ: ಆಕರ್ಷಿಸು, ಸೆಳೆತ; ಮಳೆ: ವರ್ಷ; ಗೀತ: ಹಾಡು; ರಸ: ಸಾರ; ಆಳಿ: ಗುಂಪು; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಕಾವ್ಯ: ಕವನ; ನವ: ಹೊಸ; ಬಂಧ: ಜೊತೆ; ಸಾರ: ರಸವತ್ತಾದ; ಸಂಗತಿ: ವಿಷಯ; ಆಲಿ: ನೋಟ, ಆಸೆ; ಆಯುಷ್ಯ: ಜೀವತದ ಅವಧಿ; ಜೀವಾಳ: ತಿರುಳು, ಸತ್ತ್ವ; ನರ್ತನ: ಕುಣಿತ; ಸೊಗಸು: ಶೋಭಿಸು, ಇಷ್ಟ; ಮೇಳವಣೆ: ಗುಂಪು, ಕೂಟ; ಪಾಟಿ: ಸಮ, ಸಾಟಿ, ಪ್ರಕಾರ; ಜನ:ಮನುಷ್ಯ; ಕಣ್ಣು: ನಯನ; ಮನ: ಮನಸ್ಸು;

ಪದವಿಂಗಡಣೆ:
ಸಾಳಗದ+ ಸಮ್ಮೋಹನದ+ ಮಳೆ
ಗಾಲವೋ +ಗೀತವೋ +ರಸಾಳಿಯ
ಕಾಲುವೆಯೊ +ನವಕಾವ್ಯಬಂಧದ+ ಸಾರಸಂಗತಿಯೋ
ಆಲಿಗಳಿಗ್+ಆಯುಷ್ಯಫಲ+ ಜೀ
ವಾಳವೋ +ನರ್ತನವೊ +ಸೊಗಸಿನ
ಮೇಳವಣಿಗಳ+ ಪಾಟಿಯಾದುದು +ಜನದ +ಕಣ್ಮನಕೆ

ಅಚ್ಚರಿ:
(೧) ಒ, ಓ ಕಾರದಿಂದ ಕೊನೆಗೊಳ್ಳುವ ಪದಗಳು: ಗಾಲವೋ, ಗೀತವೋ, ಕಾಲುವೆಯೊ, ನರ್ತನವೊ, ಜೀವಾಳವೋ, ಸಂಗತಿಯೋ
(೨) ೧, ೫,೬ ಸಾಲಿನ ಮೊದಲೆರಡು ಪದ್: ಸಾಳ,ವಾಳ,ಮೇಳ – ಪ್ರಾಸದಿಂದ ಕೂಡಿರುವುದು