ಪದ್ಯ ೬: ಶಿರಸ್ತ್ರಾಣದ ಮಣಿಗಳು ಹೇಗೆ ಸಿಡಿದವು?

ತಿವಿದನವನಿಪನನಿಲತನುಜನ
ಕವಚ ಬಿರಿದುದು ಕಯ್ಯೊಡನೆ ರಣ
ದವಕಿ ಕೈದೋರಿದನು ಕೌರವನ್ರ್ಪನ ವಕ್ಷದಲಿ
ಸವಗ ಸೀಳಿತು ಮರಳಿ ಹೊಯ್ದನು
ಪವನಜನ ಸೀಸಕದ ವರಮಣಿ
ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ (ಗದಾ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಕೌರವನು ಗದೆಯಿಂದ ತಿವಿಯಲು ಭೀಮನ ಕವಚ ಒಡೆಯಿತು. ಭೀಮನು ಆ ಕ್ಷಣದಲ್ಲೇ ಯುದ್ಧದ ತವಕದಿಂದ ಕೌರವನ ಎದೆಗೆ ಹೊಡೆಯಲು ಅವನ ಕವಚ ಸೀಳಿತು. ಕೌರವನು ಮತ್ತೆ ಭೀಮನ ತಲೆಗೆ ಹೊಯ್ಯಲು ಶಿರಸ್ತ್ರಾಣದ ಮಣಿಗಳು, ಸಿಡಿಲು ಹೊಡೆದ ಮೇರುಪರ್ವತದ ಶಿಖರದಂತೆ ಸಿಡಿದವು.

ಅರ್ಥ:
ತಿವಿ: ಚುಚ್ಚು; ಅವನಿಪ: ರಾಜ; ಅನಿಲ: ವಾಯು; ತನುಜ: ಮಗ; ಕವಚ: ಉಕ್ಕಿನ ಅಂಗಿ, ಕಂಚುಕ, ರಕ್ಷೆ; ಬಿರಿ: ಬಿರುಕು, ಸೀಳು; ಒಡಣೆ: ಕೂಡಲೆ; ರಣ: ಯುದ್ಧರಂಗ; ತವಕ: ಆತುರ, ತ್ವರೆ; ವಕ್ಷ: ಎದೆ; ನೃಪ: ರಾಜ; ಸವಗ: ಕವಚ; ಸೀಳು: ಬಿರುಕು; ಮರಳಿ: ಪುನಃ, ಮತ್ತೆ; ಹೊಯ್ದು: ಹೊಡೆ; ಪವನಜ: ಭೀಮ; ಸೀಸಕ: ಶಿರಸ್ತ್ರಾಣ; ವರಮಣಿ: ಶ್ರೇಷ್ಠವಾದ ರತ್ನ; ನಿವಹ: ಗುಂಪು; ಸಿಡಿ: ಚೆಲ್ಲು; ಸಿಡಿಲು: ಅಶನಿ; ಮೆಟ್ಟು: ತುಳಿ; ಮೇರುಗಿರಿ: ಎತ್ತರವಾದ ಬೆಟ್ಟ;

ಪದವಿಂಗಡಣೆ:
ತಿವಿದನ್+ಅವನಿಪನ್+ಅನಿಲ+ತನುಜನ
ಕವಚ +ಬಿರಿದುದು +ಕಯ್ಯೊಡನೆ +ರಣ
ತವಕಿ +ಕೈದೋರಿದನು +ಕೌರವನೃಪನ +ವಕ್ಷದಲಿ
ಸವಗ +ಸೀಳಿತು +ಮರಳಿ +ಹೊಯ್ದನು
ಪವನಜನ+ ಸೀಸಕದ +ವರಮಣಿ
ನಿವಹ +ಸಿಡಿದವು +ಸಿಡಿಲು +ಮೆಟ್ಟಿದ+ ಮೇರುಗಿರಿಯಂತೆ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ತಿವಿದನವನಿಪನನಿಲತನುಜನ
(೨) ಪವನಜ, ಅನಿಲತನುಜ – ಭೀಮನನ್ನು ಕರೆದ ಪರಿ
(೩) ಉಪಮಾನದ ಪ್ರಯೋಗ – ಸೀಸಕದ ವರಮಣಿ ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ

ಪದ್ಯ ೬೦: ಭೂಮಿಯು ಹೇಗೆ ಶೋಭಿಸುತ್ತದೆ?

ಉರಗ ನಾಳಾಂಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು
ಸರಸಿರುಹಸಂಭವನು ಮಧ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ (ಅರಣ್ಯ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಆದಿಶೇಷವು (ಹಾವು) ನಾಳವಾಗಿ, ಈ ಭೂಮಿಯು ಮಹಾವಿಷ್ಣುವಿನ ನಾಭೀಕಮಲದಂತಿದೆ. ಭೂಮಿಯು ಕರ್ಣಿಕೆ, ಇದನ್ನು ಸುತ್ತಿರುವ ಪರ್ವತಗಳೇ ಕುಸುರು. ಬ್ರಹ್ಮನು ಮಧ್ಯದಲ್ಲಿರಲು ಭೂಮಿಯು ವಿಷ್ಣುವಿನ ನಾಭೀಕಮಲದಂತಿದೆ.

ಅರ್ಥ:
ಉರಗ: ಹಾವು; ನಾಳ: ಟೊಳ್ಳಾದ ಕೊಳವೆ, ನಳಿಕೆ; ಅಂಬುಜ: ತಾವರೆ; ಕುಸುಮ: ಹೂವು; ಧರಣಿ: ಭೂಮಿ; ಕರ್ಣಿಕೆ: ಮಲದ ಮಧ್ಯ ಭಾಗ, ಬೀಜಕೋಶ; ಮೇರುಗಿರಿ: ಮೇರು ಪರ್ವತ; ಕೇಸರ: ಹೂವಿನಲ್ಲಿರುವ ಕುಸುರು, ಎಳೆ; ನಗ: ಬೆಟ್ಟ, ಪರ್ವತ; ಬಳಸು: ಆವರಿಸು; ಸೊಗ: ಚೆಲುವು; ಸರಸಿರುಹ: ಕಮಲ; ಸರಸಿರುಹಸಂಭವ: ಬ್ರಹ್ಮ; ಮಧ್ಯ: ನಡುವೆ; ಭೂತಲ: ಭೂಮಿ; ಐದೆ: ಸೇರು; ಮೆರೆ: ಶೋಭಿಸು; ಸಿರಿ: ಐಶ್ವರ್ಯ; ನಾಭಿ: ಹೊಕ್ಕಳು; ಕಮಲ: ತಾವರೆ;

ಪದವಿಂಗಡಣೆ:
ಉರಗ +ನಾಳ+ಅಂಬುಜ +ಕುಸುಮವ್+ಈ+
ಧರಣಿ +ಕರ್ಣಿಕೆ +ಮೇರುಗಿರಿ+ ಕೇ
ಸರ +ನಗಂಗಳು+ ಬಳಸಿ+ ಕೇಸರದಂತೆ +ಸೊಗಯಿಪವು
ಸರಸಿರುಹಸಂಭವನು+ ಮಧ್ಯದೊಳ್
ಇರಲು +ಭೂತಲವ್+ಐದೆ+ ಮೆರೆವುದು
ಸಿರಿ+ ಮಹಾವಿಷ್ಣುವಿನ+ ನಾಭೀ+ಕಮಲದಂದದಲಿ

ಅಚ್ಚರಿ:
(೧) ಅಂಬುಜ, ಕಮಲ, ಸರಸಿರುಹ – ಸಮನಾರ್ಥಕ ಪದ