ಪದ್ಯ ೮೦: ಧರ್ಮಜನು ಹೇಗೆ ಎಲ್ಲರನ್ನು ಸತ್ಕರಿಸಿದನು?

ಯಾದವರು ಪಾಂಚಾಲ ಮತ್ಸ್ಯರು
ಮೇದಿನೀಪತಿ ಪಾಂಡು ಸೋಮಕ
ರಾದಿಯಾದನ್ವಯವನಗಣಿತ ಬಂಧು ಬಳಗವನು
ಆದರಿಸಿದನು ವಿನಯದಲಿ ವಿ
ತ್ತಾದಿ ಸತ್ಕಾರದಲಿ ದಣಿದುದು
ಮೇದಿನೀ ಜನವವನಿಪನ ಸನ್ಮಾನ ದಾನದಲಿ (ವಿರಾಟ ಪರ್ವ, ೧೧ ಸಂಧಿ, ೮೦ ಪದ್ಯ)

ತಾತ್ಪರ್ಯ:
ಯಾದವರು, ಪಾಂಚಾಲರು, ಮತ್ಸ್ಯರು, ಪಾಂಡು, ಸೋಮಕ ಮೊದಲಾದವರನ್ನು ಲೆಕ್ಕವಿಲ್ಲದಷ್ಟು ಬಂಧು ಬಳಗದವರನ್ನು ಧರ್ಮಜನು ಹಣ ಮೊದಲಾದ ವಸ್ತುಗಳಿಂದ ಸತ್ಕರಿಸಿದನು. ಸರ್ವರೂ ಧರ್ಮಜನ ಸನ್ಮಾನದಿಂದ ತೃಪ್ತರಾಗಿ ಸಂತೋಷ ಪಟ್ಟರು.

ಅರ್ಥ:
ಮೇದಿನೀಪತಿ: ರಾಜ; ಆದಿ: ಮುಂತಾದ; ಅನ್ವಯ: ವಂಶ, ಸಂಬಮ್ಧ; ಅಗಣಿತ: ಎಣಿಕೆಯಿಲ್ಲದ; ಬಳಗ: ಗುಂಪು; ಆದರಿಸು: ಗೌರವಿಸು; ವಿನಯ: ಸೌಜನ್ಯ; ವಿತ್ತ: ಹಣ; ಸತ್ಕಾರ: ಗೌರವ, ಉಪಚಾರ; ದಣಿದು: ಆಯಾಸಗೊಳ್ಳು; ಜನ: ಮನುಷ್ಯ, ಗುಂಪು; ಅವನಿಪ: ರಾಜ; ಸನ್ಮಾನ: ಗೌರವ, ಮಾನ್ಯತೆ; ದಾನ: ಚತುರೋಪಾಯಗಳಲ್ಲಿ ಒಂದು, ನೀಡು;

ಪದವಿಂಗಡಣೆ:
ಯಾದವರು +ಪಾಂಚಾಲ +ಮತ್ಸ್ಯರು
ಮೇದಿನೀಪತಿ+ ಪಾಂಡು +ಸೋಮಕ
ರಾದಿಯಾದ್+ಅನ್ವಯವನ್+ಅಗಣಿತ +ಬಂಧು +ಬಳಗವನು
ಆದರಿಸಿದನು +ವಿನಯದಲಿ +ವಿ
ತ್ತಾದಿ +ಸತ್ಕಾರದಲಿ +ದಣಿದುದು
ಮೇದಿನೀ+ ಜನವ್+ಅವನಿಪನ +ಸನ್ಮಾನ +ದಾನದಲಿ

ಅಚ್ಚರಿ:
(೧) ಸತ್ಕಾರವನ್ನು ಮಾಡಿದ ಪರಿ – ಆದರಿಸಿದನು ವಿನಯದಲಿ ವಿತ್ತಾದಿ ಸತ್ಕಾರದಲಿ ದಣಿದುದು ಮೇದಿನೀ – ಭೂಮಿಯೇ ಆಯಾಸಗೊಂಡಿತು ಎಂದು ಹೇಳುವ ಪರಿ

ಪದ್ಯ ೧೧೫: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೪?

ವೇದವಧುಗಳ ಕಾಯ್ದೆಲಾ ತಮ
ಬಾಧೆಯಲಿ ಖಳನಿಂದ ಧರಣಿ ಮ
ಹೋದಧಿಯಲಕ್ಕಾಡಿದರೆ ದಾಡೆಯಲಿ ದಾನವನ
ಕೋದು ಹಾಕೀ ಭೂತ ಧಾತ್ರಿಯ
ಕಾದೆಲಾ ಕಾರುಣ್ಯಸಿಂಧುವೆ
ಮೇದಿನೀಪತಿ ಮನ್ನಿಸೆಂದೊರಲಿದಳು ತರಳಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೧೫ ಪದ್ಯ)

ತಾತ್ಪರ್ಯ:
ಜ್ಞಾನದ ಪ್ರತೀಕವಾದ ಬೆಳಕನ್ನು ತಮನೆಂಬ ರಾಕ್ಷಸನು ಕದ್ದು ಸಮುದ್ರವನ್ನು ಹೊಕ್ಕಾಗ ಮತ್ಸ್ಯರೂಪದಿಂದ ವೇದವಧುವನ್ನು ರಕ್ಷಿಸಲಿಲ್ಲವೇ? ಹಿರಣ್ಯಾಕ್ಷನು ಭೂಮಿಯನ್ನು ಸಮುದ್ರದಲ್ಲಿ ಮುಳುಗಿಸಿದಾಗ ಯಜ್ಞವರಾಹನಾಗಿ ಕೋರೆದಾಡೆಯಿಂದ ಭೂದೇವಿಯನ್ನು ಉದ್ಧರಿಸಲಿಲ್ಲವೇ! ಹೇ ಭೂದೇವಿ ರಮಣನೇ ನನ್ನನ್ನು ಕಾಪಾಡು ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ವೇದ: ಅರಿವು, ಜ್ಞಾನ; ತಮ: ರಾಕ್ಷಸನ ಹೆಸರು, ಅಂಧಕಾರ; ವಧು: ಹೆಣ್ಣು; ಕಾಯ್ದೆ: ಕಾಪಾಡಿದೆ; ಬಾಧೆ: ತೊಂದರೆ; ಖಳ: ದುಷ್ಟ; ಧರಣಿ: ಭೂಮಿ; ಮಹೋದಧಿ: ದೊಡ್ಡ ಸಮುದ್ರ; ಉದಧಿ: ಸಮುದ್ರ; ಕಾಡು: ಪೀಡಿಸು; ದಾಡೆ: ದವಡೆ, ಹಲ್ಲು; ದಾನವ: ರಾಕ್ಷಸ; ಕೋದು: ಸೇರಿಸಿ, ಪೋಣಿಸಿ; ಭೂತ: ಚರಾಚರಾತ್ಮಕ ಜೀವರಾಶಿ; ಧಾತ್ರಿ: ಭೂಮಿ; ಕಾದೆ: ಕಾಪಾಡಿದೆ; ಕಾರುಣ್ಯಸಿಂಧು: ಕರುಣೆಯ ಸಾಗರ; ಮೇದಿನೀಪತಿ: ಭೂಮಿಪತಿ; ಮನ್ನಿಸು: ದಯೆತೋರು, ಅನುಗ್ರಹಿಸು; ತರಳಾಕ್ಷಿ: ಚಂಚಲವಾದ ಕಣ್ಣುಳ್ಳವಳು (ಸುಂದರಿ);

ಪದವಿಂಗಡಣೆ:
ವೇದ+ವಧುಗಳ+ ಕಾಯ್ದೆಲಾ+ ತಮ
ಬಾಧೆಯಲಿ +ಖಳನಿಂದ +ಧರಣಿ +ಮಹ
ಉದಧಿಯಲ್+ಕಾಡಿದರೆ+ ದಾಡೆಯಲಿ+ ದಾನವನ
ಕೋದು +ಹಾಕಿ+ಈ+ ಭೂತ +ಧಾತ್ರಿಯ
ಕಾದೆಲಾ+ ಕಾರುಣ್ಯ+ಸಿಂಧುವೆ
ಮೇದಿನೀಪತಿ+ ಮನ್ನಿಸೆಂದ್+ಒರಲಿದಳು +ತರಳಾಕ್ಷಿ

ಅಚ್ಚರಿ:
(೧) ಧಾತ್ರಿ, ಮೇದಿನಿ, ಧರಣಿ; ಉದಧಿ, ಸಿಂಧು – ಸಮನಾರ್ಥಕ ಪದ
(೨) ವೇದವನ್ನು ಬೆಳಕೆಂದು ನೋಡುವ ಹಾಗು ತಮ (ಅಂಧಕಾರ) ರಾಕ್ಷಸನೆಂದು ನೋಡುವ ಪರಿ
(೩) ಕೃಷ್ಣನನ್ನು ಕರೆದ ಬಗೆ – ಕಾರುಣ್ಯಸಿಂಧುವೆ, ಮೇದಿನೀಪತಿ;
(೪) ಕೃಷ್ಣನ ಗುಣಗಾನ – ವೇದವಧುಗಳ ಕಾಯ್ದೆಲಾ, ಭೂತ ಧಾತ್ರಿಯ ಕಾದೆಲಾ

ಪದ್ಯ ೩: ಕೃಷ್ಣನು ಕರ್ಣನನಿಗೆ ಏನು ಹೇಳಿ ಭಯವನ್ನು ಬಿತ್ತಿದನು?

ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆ ಸಂ
ವಾದಿಸುವಡನ್ವಯದ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದಿಲ್ಲರಿವೆನುತೆ ದಾನವ
ಸೂದನನು ರವಿಸುತನ ಕಿವಿಯೊಳು ಬಿತ್ತಿದನು ಭಯವ (ಉದ್ಯೋಗ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕೃಷ್ಣನು ಕರ್ಣನ ಪಕ್ಕದಲ್ಲಿ ಕೂತು ಮೈದುನನ ಸಲಗೆಯನ್ನು ತೋರಿ ಕರ್ಣ, ಕೌರವರು ಯಾದವರಿಗೆ ಭೇದವಿಲ್ಲ. ವಿಚಾರಿಸಿದರೆ ಇಬ್ಬರೂ ಒಂದೇ ವಂಶದವರು (ಯಯಾತಿಯ ಮಕ್ಕಳು ಪುರು, ಯದು, ಪುರುವಿನಿಂದ ಕೌರವರು, ಯದುವಿನಿಂದ ಯಾದವರು) ನಿನ್ನಾಣೆಯಾಗಿಯೂ ನೀನೇ ರಾಜ, ಆದರೆ ನಿನಗೆ ಅದು ತಿಳಿಯದು ಎಂದು ಕರ್ಣನ ಕಿವಿಯಲ್ಲಿ ಭಯವನ್ನು ಬಿತ್ತಿದನು.

ಅರ್ಥ:
ಭೇದ: ಬಿರುಕು; ಸಂವಾದಿ: ಹೋಲುವಂಥದು; ಅನ್ವಯ: ವಂಶ; ಮೊದಲೆರಡಿಲ್ಲ: ಬೇರೆ; ಆಣೆ: ಪ್ರಮಾಣ; ಮೇದಿನಿ: ಭೂಮಿ; ಪತಿ: ಒಡೆಯ; ಚಿತ್ತ: ಮನಸ್ಸು; ಅರಿ: ತಿಳಿ; ದಾನವ: ರಾಕ್ಷಸ; ಸೂದನ: ಸಾಯಿಸಿದ; ಸುತ: ಮಗ; ರವಿ: ಭಾನು; ಕಿವಿ: ಕರಣ; ಬಿತ್ತು: ಉಂಟುಮಾಡು; ಭಯ: ಅಂಜಿಕೆ;

ಪದವಿಂಗಡಣೆ:
ಭೇದವಿಲ್ಲ್+ಎಲೆ +ಕರ್ಣ +ನಿಮ್ಮೊಳು
ಯಾದವರು+ ಕೌರವರೊಳಗೆ+ ಸಂ
ವಾದಿಸುವಡ್+ಅನ್ವಯದ +ಮೊದಲೆರಡಿಲ್ಲ +ನಿನ್ನಾಣೆ
ಮೇದಿನೀಪತಿ+ ನೀನು +ಚಿತ್ತದೊಳ್
ಆದುದಿಲ್+ ಅರಿವೆನುತೆ+ ದಾನವ
ಸೂದನನು +ರವಿಸುತನ +ಕಿವಿಯೊಳು +ಬಿತ್ತಿದನು +ಭಯವ

ಅಚ್ಚರಿ:
(೧) ಕರ್ಣ, ರವಿಸುತ – ಕರ್ಣನನ್ನು ಕರೆದಿರುವ ಬಗೆ