ಪದ್ಯ ೪೩: ದುರ್ಯೋಧನನು ಎಲ್ಲಿ ಮಲಗಿದನು?

ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ (ಗದಾ ಪರ್ವ, ೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಸೂರ್ಯನೇ ಮೊದಲಾದ ಸಮಸ್ತ ದೇವತೆಗಳಿಗೂ ನಮಸ್ಕರಿಸಿ, ಹೃದಯದಲ್ಲಿ ವರುಣನನ್ನು ಧ್ಯಾನಿಸುತ್ತಾ, ಸುತ್ತನಾಲ್ಕು ದಿಕ್ಕುಗಳನ್ನೂ ನೋಡಿ ಯಾರಿಗೂ ಕಾಣಿಸುತ್ತಿಲ್ಲವೆಂಬುದನ್ನು ನಿರ್ಧರಿಸಿಕೊಂಡು, ದುಷ್ಟಬುದ್ಧಿಯಾದ ಕೌರವನು ಪಾದ, ಮೊಣಕಾಲು, ಸೊಂಟ, ಹೃದಯ ಮುಖ ತಲೆಗಳ ಪರ್ಯಂತ ನೀರಲ್ಲಿ ಮುಳುಗಿ ಕೊಳದ ಮಧ್ಯದಲ್ಲಿ ಮಲಗಿದನು.

ಅರ್ಥ:
ದ್ಯುಮಣಿ: ಸೂರ್ಯ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಸುರರು: ದೇವತೆ; ನಮಿಸು: ವಂದಿಸು; ವರುಣ: ನೀರಿನ ಅಧಿದೇವತೆ; ಧ್ಯಾನ: ಮನನ; ಹೃತ್ಕಮಲ: ಹೃದಯ ಕಮಲ; ನೆಲೆಗೊಳಿಸು: ಸ್ಥಾಪಿಸು; ದೆಸೆ: ದಿಕ್ಕು; ಕುಮತಿ: ಕೆಟ್ಟ ಬುದ್ಧಿಯುಳ್ಳವ; ಇಳಿ: ಜಾರು; ಜಾನು: ಮಂಡಿ, ಮೊಳಕಾಲು; ಕಟಿ: ಸೊಂಟ, ನಡು; ಮುಖ: ಆನನ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಪರಿಯಂತ: ವರೆಗೆ, ತನಕ; ಜಲ: ನೀರು; ಕೊಳ: ಸರಸಿ; ಮಧ್ಯ: ನಡುವೆ; ಅರಸ: ರಾಜ; ಪವಡಿಸು: ಮಲಗು; ಅಮರಿ: ನೆಲತಂಗಡಿ;

ಪದವಿಂಗಡಣೆ:
ದ್ಯುಮಣಿ +ಮೊದಲಾದ್+ಅಖಿಳ+ ಸುರರಿಗೆ
ನಮಿಸಿ+ ವರುಣ+ಧ್ಯಾನವನು +ಹೃ
ತ್ಕಮಲದಲಿ +ನೆಲೆಗೊಳಿಸಿ+ ನಾಲುಕು +ದೆಸೆಯನ್+ಆರೈದು
ಕುಮತಿ+ಇಳಿದನು +ಜಾನು +ಕಟಿ +ಹೃ
ತ್ಕಮಲಗಳ +ಮುಖ +ಮೂರ್ಧ +ಪರಿಯಂತ್
ಅಮರಿದುದು +ಜಲ +ಕೊಳನ +ಮಧ್ಯದಲ್+ಅರಸ +ಪವಡಿಸಿದ

ಅಚ್ಚರಿ:
(೧) ಹೃತ್ಕಮಲ – ೩, ೫ ಸಾಲಿನ ಮೊದಲ ಪದ
(೨) ದುರ್ಯೋಧನನನ್ನು ಕುಮತಿ, ಅರಸ ಎಂದು ಕರೆದಿರುವುದು

ಪದ್ಯ ೩೭: ಕೌರವನು ಏನೆಂದು ಆಜ್ಞೆ ಮಾಡಿದನು?

ನುಡಿಸು ನಿಸ್ಸಾಳವನು ಕರೆ ಹೊಂ
ಗೊಡನ ಹಿಡಿದೈತರಲಿ ನಾರಿಯ
ರೆಡ ಬಲನು ತೆರಹಾಗಲಿಕ್ಕಲಿ ಸಿಂಹವಿಷ್ಟರವ
ತಡವು ಬೇಡೆನೆ ಕೌರವೇಂದ್ರನ
ನುಡಿಗೆ ಮುನ್ನನುವಾಯ್ತು ವಿಪ್ರರ
ಗಡಣ ಬಂದುದು ರಚಿಸಿದರು ಮೂರ್ಧಾಭಿಷೇಚನವ (ದ್ರೋಣ ಪರ್ವ, ೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೌರವನು, ನಿಸ್ಸಾಳಗಳನ್ನು ಬಡಿಯಿರಿ, ಸಿಂಹಾಸನವನ್ನು ಏರ್ಪಡಿಸಿ, ಎರಡೂ ಕಡೆಗೆ ಜಾಗವನ್ನು ಬಿಡಿ, ಸ್ತ್ರೀಯರು ಬಂಗಾರದ ಕೊಡಗಳಲ್ಲಿ ಅಭಿಷೇಕ ಜಲವನ್ನು ತರಲಿ ಎಂದು ಆಜ್ಞಾಪಿಸಿದನು ಆಜ್ಞೆ ಮುಗಿಯುವ ಮುನ್ನವೇ ಬ್ರಾಹ್ಮಣರ ಗುಂಪು ಬಂದರು, ಅಭಿಷೇಕಕ್ಕೆ ಸಕಲವೂ ಸಿದ್ಧವಾಯಿತು.

ಅರ್ಥ:
ನುಡಿ: ಮಾತು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕರೆ: ಬರೆಮಾಡು; ವಿಷ್ಟರ: ಪೀಠ; ಸಿಂಹವಿಷ್ಟರ: ಸಿಂಹಾಸನ; ಹೊಂಗೊಡ: ಚಿನ್ನದ ಕೊಡ; ಹಿಡಿ: ಗ್ರಹಿಸು; ಐತರು: ಬಂದು ಸೇರು; ನಾರಿ: ಹೆಣ್ಣು; ಎಡಬಲ: ಎರಡೂ ಬದಿ; ತಡ: ನಿಧಾನ; ಮುನ್ನ: ಮುಂಚಿತವಾಗಿ; ಅನುವು: ಅವಕಾಶ, ರೀತಿ; ವಿಪ್ರ: ಬ್ರಾಹ್ಮಣ; ಗಡಣ: ಗುಂಪು; ಬಂದು: ಆಗಮಿಸು; ರಚಿಸು: ನಿರ್ಮಿಸು; ಮೂರ್ಧ: ಶಿರಸ್ಸು, ತಲೆ; ಅಭಿಷೇಚನ: ಅಭಿಷೇಕ;

ಪದವಿಂಗಡಣೆ:
ನುಡಿಸು +ನಿಸ್ಸಾಳವನು +ಕರೆ +ಹೊಂ
ಕೊಡನ +ಹಿಡಿದ್+ಐತರಲಿ +ನಾರಿಯರ್
ಎಡ +ಬಲನು +ತೆರಹಾಗಲಿಕ್ಕಲಿ +ಸಿಂಹ+ವಿಷ್ಟರವ
ತಡವು+ ಬೇಡ್+ಎನೆ +ಕೌರವೇಂದ್ರನ
ನುಡಿಗೆ +ಮುನ್ನ್+ಅನುವಾಯ್ತು +ವಿಪ್ರರ
ಗಡಣ +ಬಂದುದು +ರಚಿಸಿದರು+ ಮೂರ್ಧಾಭಿಷೇಚನವ

ಅಚ್ಚರಿ:
(೧) ಸಿಂಹವಿಷ್ಟರ ಪದದ ಬಳಕೆ
(೨) ರಾಜನಾಜ್ಞೆಯನ್ನು ಪಾಲಿಸುವ ಪರಿ – ತಡವು ಬೇಡೆನೆ ಕೌರವೇಂದ್ರನ ನುಡಿಗೆ ಮುನ್ನನುವಾಯ್ತು