ಪದ್ಯ ೧: ಹತ್ತನೆಯ ದಿನದ ಪ್ರಾರಂಭವು ಹೇಗಾಯಿತು?

ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳತತಿ ಮುಂಜಾವದಲಿ ಹೆ
ಗ್ಗಾಳೆ ಮೊರೆದವು ಕುಣಿದು ಗಜರಿದವಾನೆ ಕುದುರೆಗಳು
ತೂಳುವರೆಗಳ ಭಟರ ಘೋಳಾ
ಘೋಳಿ ದೆಸೆಗಳ ಬಗಿಯೆ ಮೂಡಣ
ಶೈಲಮಂಚದಲುಪ್ಪವಡಿಸಿದನಬುಜಿನೀರಮಣ (ಭೀಷ್ಮ ಪರ್ವ ೮ ಸಂಧಿ, ೧ ಪದ್ಯ)

ತಾತ್ಪರ್ಯ:
ಯುದ್ಧದ ಹತ್ತನೆಯ ದಿನ ಮುಂಜಾವಿನಲ್ಲಿ ಹೆಗ್ಗಾಳೆಗಳು ಭೇರಿಗಳೂ ಮೊರೆದವು. ತಮ್ಮಟೆಗಳ ಸದ್ದು, ಯೋಧರ ಗರ್ಜನೆಗಳು, ಆನೆ ಕುದುರೆಗಳು ಈ ಗರ್ಜನೆಗೆ ಧ್ವನಿಗೂಡಿಸಿದವು, ಕುದುರೆಗಳ ನಡುವಿನ ಯುದ್ಧದ ಶಬ್ದವು ದಿಕ್ಕುಗಳನ್ನು ಬಿಗಿದವು. ಸೂರ್ಯನು ಪೂರ್ವ ದಿಕ್ಕಿನ ಪರ್ವತದ ಮಂಚನ ಮೇಲಿಂದ ಮೇಲೆದ್ದನು.

ಅರ್ಥ:
ಸೂಳು: ಆವೃತ್ತಿ, ಬಾರಿ; ಮಿಗಲು: ಹೆಚ್ಚು; ಇರಿ: ಚುಚ್ಚು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಮುಂಜಾವ: ಬೆಳಗಿನ ಜಾವ; ಹೆಗ್ಗಾಳೆ: ದೊಡ್ಡ ಕಹಳೆ; ಮೊರೆ: ಧ್ವನಿ ಮಾಡು, ಝೇಂಕರಿಸು; ಕುಣಿ: ನರ್ತಿಸು; ಗಜರಿ: ಗರ್ಜನೆ; ಆನೆ: ಕರಿ, ಕುದುರೆ: ಅಶ್ವ; ತೂಳು: ಬೆನ್ನಟ್ಟು, ಹಿಂಬಾಲಿಸು; ಭಟ: ಸೈನಿಕ; ಘೋಳಾಘೋಳಿ: ಕುದುರೆಗಳ ನಡುವಿನ ಯುದ್ಧ; ದೆಸೆ: ದಿಕ್ಕು; ಬಗಿ: ಸೀಳು, ಹೋಳು ಮಾಡು; ಮೂಡಣ: ಪೂರ್ವ; ಶೈಲ: ಗಿರಿ, ಬೆಟ್ಟ; ಮಂಚ: ಪರ್ಯಂಕ; ಉಪ್ಪವಡಿಸು: ಮೇಲೇಳು; ಅಬುಜಿನೀರಮಣ: ಕಮಲದ ಗಂಡ, ಸೂರ್ಯ; ಉರು: ಹೆಚ್ಚಾದ; ತತಿ: ಗುಂಪು;

ಪದವಿಂಗಡಣೆ:
ಸೂಳು +ಮಿಗಲಳ್+ಇರಿದವ್+ಉರು +ನಿ
ಸ್ಸಾಳ+ ತತಿ+ ಮುಂಜಾವದಲಿ +ಹೆ
ಗ್ಗಾಳೆ +ಮೊರೆದವು +ಕುಣಿದು +ಗಜರಿದವ್+ಆನೆ+ ಕುದುರೆಗಳು
ತೂಳುವರೆಗಳ+ ಭಟರ+ ಘೋಳಾ
ಘೋಳಿ +ದೆಸೆಗಳ +ಬಗಿಯೆ +ಮೂಡಣ
ಶೈಲ+ಮಂಚದಲ್+ಉಪ್ಪವಡಿಸಿದನ್+ಅಬುಜಿನೀರಮಣ

ಅಚ್ಚರಿ:
(೧) ಸುರ್ಯೋದಯವನ್ನು ಹೇಳುವ ಪರಿ – ಮೂಡಣ ಶೈಲಮಂಚದಲುಪ್ಪವಡಿಸಿದನಬುಜಿನೀರಮಣ

ಪದ್ಯ ೪: ಐದು ಮತ್ತು ಆರನೆಯ ದಿನದ ಯುದ್ಧವು ಹೇಗೆ ನಡೆಯಿತು?

ಬಿದ್ದುದಗಣಿತ ಸೇನೆ ಪಡುವಲು
ಹೊದ್ದಿದನು ರವಿ ಮತ್ತೆ ಮೂಡಣ
ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ
ಬಿದ್ದುದದ್ಭುತರಣ ಕೃತಾಂತಗೆ
ಬಿದ್ದನಿಕ್ಕಿದನದಟನಬುಧಿಯೊ
ಳದ್ದ ಸೂರ್ಯನ ಬಿಂಬವೆದ್ದುದು ಮೂಡಣದ್ರಿಯಲಿ (ಭೀಷ್ಮ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಐದನೆಯ ದಿನವೂ ಲೆಕ್ಕವಿಲ್ಲದಷ್ಟು ಸೈನ್ಯ ನಿರ್ನಾಮವಾಯಿತು. ಸೂರ್ಯನು ಮುಳುಗಲು ಕುಮುದಗಲರಳಿದವು. ಮತ್ತೆ ಸೂರ್ಯನು ಹುಟ್ಟಿದನು. ಕುಮುದಗಳು ಮುಚ್ಚಿದವು, ಆರನೆಯ ದಿನ ಭೀಷ್ಮನು ಶತ್ರು ಸೈನ್ಯವನ್ನು ಕಡಿದು ಯಮನಿಗೆ ಔತಣವನ್ನು ನೀಡಿದನು. ಮುಳುಗಿದ ಸೂರ್ಯಬಿಂಬವು ಪೂರ್ವದಲ್ಲಿ ಮೂಡಿತು.

ಅರ್ಥ:
ಬಿದ್ದು: ಬೀಳು; ಅಗಣಿತ: ಅಸಂಖ್ಯಾತ; ಸೇನೆ: ಸೈನ್ಯ; ಪಡುವಣ: ಪಶ್ಚಿಮದಿಕ್ಕು; ಹೊದ್ದು: ಹೊಂದು, ಸೇರು; ಮೂಡಣ: ಪೂರ್ವ; ಗದ್ದುಗೆ: ಪೀಠ; ವೆಂಠಣಿಸು: ಮುತ್ತಿಗೆ ಹಾಕು; ಕುಮುದಾಳಿ: ಬಿಳಿಯ ನೈದಿಲೆಗಳ ಗುಂಪು; ಕಂಠಣಿಸು: ಗೋಳಾಡು, ದುಃಖಿಸು; ಬಿದ್ದು: ಬೀಳು; ಅದ್ಭುತ: ಅತ್ಯಾಶ್ಚರ್ಯಕರವಾದ ವಸ್ತು; ಕೃತಾಂತ: ಯಮ; ಇಕ್ಕು: ಇರಿಸು, ಇಡು; ಅದಟ: ಶೂರ, ಪರಾಕ್ರಮಿ; ಅಬುಧಿ: ಸಾಗರ; ಸೂರ್ಯ: ರವಿ; ಬಿಂಬ: ಕಿರಣ; ಮೂಡಣ: ಪೂರ್ವ; ಅದ್ರಿ: ಬೆಟ್ಟ;

ಪದವಿಂಗಡಣೆ:
ಬಿದ್ದುದ್+ಅಗಣಿತ +ಸೇನೆ +ಪಡುವಲು
ಹೊದ್ದಿದನು +ರವಿ +ಮತ್ತೆ +ಮೂಡಣ
ಗದ್ದುಗೆಯ +ವೆಂಠಣಿಸಿದನು +ಕುಮುದಾಳಿ +ಕಂಠಣಿಸೆ
ಬಿದ್ದುದ್+ಅದ್ಭುತ+ರಣ +ಕೃತಾಂತಗೆ
ಬಿದ್ದನ್+ಇಕ್ಕಿದನ್+ಅದಟನ್+ಅಬುಧಿಯೊಳ್
ಅದ್ದ +ಸೂರ್ಯನ +ಬಿಂಬವ್+ಎದ್ದುದು +ಮೂಡಣ್+ಅದ್ರಿಯಲಿ

ಅಚ್ಚರಿ:
(೧) ಸೂರ್ಯೋದಯ ಎಂದು ಹೇಳುವ ಪರಿ – ರವಿ ಮತ್ತೆ ಮೂಡಣ ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ, ಅಬುಧಿಯೊಳದ್ದ ಸೂರ್ಯನ ಬಿಂಬವೆದ್ದುದು ಮೂಡಣದ್ರಿಯಲಿ
(೨) ಸೂರ್ಯಾಸ್ತವನ್ನು ಹೇಳುವ ಪರಿ – ಪಡುವಲು ಹೊದ್ದಿದನು ರವಿ
(೩) ವೆಂಠಣಿ, ಕಂಠಣಿ – ಪ್ರಾಸ ಪದಗಳು

ಪದ್ಯ ೧: ನಾಲ್ಕನೇ ದಿನದ ಯುದ್ಧವು ಹೇಗೆ ಪ್ರಾರಂಭವಾಯಿತು?

ಕೇಳು ಜನಮೇಜಯ ಧರಿತ್ರೀ
ಪಾಲ ದಿನ ಮೂರಾಯ್ತು ಭೀಷ್ಮನ
ಕಾಳೆಗದೊಳಲ್ಲಿಂದ ಮೇಲಣ ಕಥನಕೌತುಕವ
ಆಲಿಸುವದೈ ಮೂಡಣದ್ರಿಯ
ಮೇಲೆ ಕೆಂಪೆಸೆಯಿತ್ತು ಘನನಿ
ಸ್ಸಾಳವೊದರಿದವೈ ನೃಪಾಲರ ಕಟಕವೆರಡರಲಿ (ಭೀಷ್ಮ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹೀಗೆ ಯುದ್ಧವು ಮೂರನೇ ದಿನಕ್ಕೆ ತಲುಪಿತು. ಮುಂದಿನ ಕಥೆಯು ಬಹು ರೋಚಕವಾಗಿದೆ, ಸೂರ್ಯನು ಪೂರ್ವ ದಿಕ್ಕಿನ ಬೆಟ್ಟದಿಂದ ಹೊರಹೊಮ್ಮಲು ಕೆಂಬೆಳಕು ಮೂಡಿತು, ಆಗ ಎರಡು ಸೈನ್ಯಗಳಲ್ಲೂ ರಣವಾದ್ಯಗಳಾದ ನಿಸ್ಸಾಳ ಮುಂತಾದವು ಮೊಳಗಿದವು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಕಾಳೆಗ: ಯುದ್ಧ; ಮೇಲಣ: ಮುಂದಿನ; ಕೌತುಕ: ಆಶ್ಚರ್ಯ; ಆಲಿಸು: ಕೇಳು; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಕೆಂಪೆಸೆ: ಕೆಂಪಾದ ಬಣ್ಣವು ತೋರಿತು; ಘನ: ಶ್ರೇಷ್ಠ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಒದರು: ಗರ್ಜಿಸು; ನೃಪಾಲ: ರಾಜ; ಕಟಕ: ಯುದ್ಧ;

ಪದವಿಂಗಡಣೆ:
ಕೇಳು +ಜನಮೇಜಯ+ ಧರಿತ್ರೀ
ಪಾಲ +ದಿನ +ಮೂರಾಯ್ತು +ಭೀಷ್ಮನ
ಕಾಳೆಗದೊಳ್+ಅಲ್ಲಿಂದ +ಮೇಲಣ+ ಕಥನ+ಕೌತುಕವ
ಆಲಿಸುವದೈ +ಮೂಡಣ್+ಅದ್ರಿಯ
ಮೇಲೆ +ಕೆಂಪೆಸೆಯಿತ್ತು+ ಘನ+ನಿ
ಸ್ಸಾಳವ್+ಒದರಿದವೈ+ ನೃಪಾಲರ+ ಕಟಕವ್+ಎರಡರಲಿ

ಅಚ್ಚರಿ:
(೧) ಸೂರ್ಯೋದಯವಾಯಿತು ಎಂದು ಹೇಳುವ ಪರಿ – ಮೂಡಣದ್ರಿಯ ಮೇಲೆ ಕೆಂಪೆಸೆಯಿತ್ತು
(೨) ಕಾಳೆಗ, ಕಟಕ – ಸಮನಾರ್ಥಕ ಪದ

ಪದ್ಯ ೨: ಎರಡು ಸೈನ್ಯಗಳು ಹೇಗೆ ಯುದ್ಧವನ್ನಾರಂಭಿಸಿದರು?

ಎರಡು ಬಲ ಕೈ ಲಾಗನೀಕ್ಷಿಸು
ತಿರೆ ಕೃತಾಂತಾಲಯಕೆ ವಾಹಿನಿ
ಸರಿವುದೆಂಬಂದದಲಿ ಕೈವೀಸಿದರು ಭೂಭುಜರು
ಅರರೆ ಮೂಡಣ ಶರಧಿ ಪಡುವಣ
ಶರಧಿಗಾಂತುದೊ ರಣಚಮತ್ಕೃತಿ
ಸುರರ ನಯನಾಂಗಣಕೆ ಕವಿಸಿತು ಕೌತುಕಾಂಬುಧಿಯ (ಭೀಷ್ಮ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ಎರಡು ಸೈನ್ಯಗಳೂ ತಮ್ಮ ದೊರೆಗಳ ಕೈಯನ್ನು ನೋಡುತ್ತಿರುವಾಗ, ಯಮಲೋಕಕ್ಕೆ ಹೋಗಿರಿ ಎಂದಪ್ಪಣೆ ಕೊಡುವಂತೆ ರಾಜರು ಕೈಬೀಸಿದರು. ಪೂರ್ವ ಸಮುದ್ರವು ಪಶ್ಚಿಮ ಸಮುದ್ರವನ್ನೆದುರಿಸುವಂತೆ ಸೈನ್ಯಗಳು ಒಂದರ ಮೇಲೊಂದು ಬಿದ್ದವು. ದೇವತೆಗಳು ಅದನ್ನು ಕಂಡು ಕೌತುಕಗೊಂಡರು.

ಅರ್ಥ:
ಬಲ: ಸೈನ್ಯ; ಕೈ: ಹಸ್ತ; ಲಾಗ: ಹಾರುವಿಕೆ; ಈಕ್ಷಿಸು: ನೋಡು; ಕೃತಾಂತ: ಯಮ; ಆಲಯ: ಮನೆ; ವಾಹಿನಿ: ಸೈನ್ಯ; ಸರಿ: ಹೋಗು, ಗಮಿಸು; ಕೈವೀಸು: ಕೈಬೀಸು; ಭೂಭುಜ: ರಾಜ; ಅರರೆ: ಓಹೋ; ಮೂಡಣ: ಪೂರ್ವ; ಶರಧಿ: ಸಮುದ್ರ; ಪಡುವಣ: ಪಶ್ಚಿಮ; ರಣ: ಯುದ್ಧ; ಚಮತ್ಕೃತಿ: ಸೋಜಿಗ, ವಿಸ್ಮಯ; ಸುರ: ದೇವತೆ; ನಯನ: ಕಣ್ಣು; ಅಂಗಣ: ಮನೆಗೆ ಸೇರಿರುವ ಆವರಣದ ಬಯಲು, ಅಂಗಳ; ಕವಿ: ಆವರಿಸು; ಕೌತುಕ: ಆಶ್ಚರ್ಯ; ಅಂಬುಧಿ: ಸಾಗರ;

ಪದವಿಂಗಡಣೆ:
ಎರಡು+ ಬಲ +ಕೈ +ಲಾಗನ್+ಈಕ್ಷಿಸು
ತಿರೆ +ಕೃತಾಂತ+ಆಲಯಕೆ +ವಾಹಿನಿ
ಸರಿವುದೆಂಬಂದದಲಿ+ ಕೈವೀಸಿದರು+ ಭೂಭುಜರು
ಅರರೆ+ ಮೂಡಣ+ ಶರಧಿ+ ಪಡುವಣ
ಶರಧಿಗಾಂತುದೊ+ ರಣ+ಚಮತ್ಕೃತಿ
ಸುರರ+ ನಯನಾಂಗಣಕೆ+ ಕವಿಸಿತು+ ಕೌತುಕ+ಅಂಬುಧಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೃತಾಂತಾಲಯಕೆ ವಾಹಿನಿಸರಿವುದೆಂಬಂದದಲಿ ಕೈವೀಸಿದರು ಭೂಭುಜರು
(೨) ಸೈನ್ಯವು ಎದುರಿಸಿದ ಪರಿ – ಅರರೆ ಮೂಡಣ ಶರಧಿ ಪಡುವಣ ಶರಧಿಗಾಂತುದೊ
(೩) ಶರಧಿ, ಅಂಬುಧಿ – ಸಮನಾರ್ಥಕ ಪದ
(೪) ಸುರರು ನೋಡಿದರು ಎಂದು ಹೇಳಲು – ರಣಚಮತ್ಕೃತಿ ಸುರರ ನಯನಾಂಗಣಕೆ ಕವಿಸಿತು ಕೌತುಕಾಂಬುಧಿಯ

ಪದ್ಯ ೬೪: ಆಕಾಶವು ಯಾವುದರಿಂದ ಆವರಿಸಿಕೊಂಡಿತು?

ಬಳಿಕ ಧೃಷ್ಟದ್ಯುಮ್ನನಾಜ್ಞೆಯೊ
ಳಳವಿಗೊಟ್ಟುದು ಸೇನೆ ಮೂಡಣ
ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ
ಪಳಹರದ ತೋಮರದ ಕುಂತಾ
ವಳಿಯ ಚಮರಚ್ಛತ್ರಮಯ ಸಂ
ಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ (ಭೀಷ್ಮ ಪರ್ವ, ೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಬಳಿಕ, ಧೃಷ್ಟದ್ಯುಮ್ನನ ಆಜ್ಞೆಯಂತೆ ಪಾಂಡವ ಸೇನೆಯು ಪಶ್ಚಿಮ ಸಮುದ್ರವನ್ನು ಪೂರ್ವ ಸಮುದ್ರವು ಎದುರಿಸಿದಂತೆ, ಕೌರವ ಸೈನ್ಯಕ್ಕೆದುರಾಯಿತು. ಎರಡೂ ಸೈನ್ಯಗಳ ಧ್ವಜಗಳೂ ಛತ್ರ ಚಾಮರಗಳೂ ತೋಮರ ಕುಂತಾದಿ ಆಯುಧಗಳೂ ಆಕಾಶ ಮುಚ್ಚಿ ಹೋಗಿ ನಾಲ್ಕೇ ಭೂತಗಳುಳಿದವು (ಭೂಮಿ, ನೀರು, ಅಗ್ನಿ, ವಾಯು)

ಅರ್ಥ:
ಬಳಿಕ: ನಂತರ; ಆಜ್ಞೆ: ಅಪ್ಪಣೆ; ಅಳವಿ: ಯುದ್ಧ; ಸೇನೆ: ಸೈನ್ಯ; ಮೂಡಣ: ಪೂರ್ವ; ಜಲಧಿ: ಸಾಗರ; ಪಶ್ಚಿಮ: ಪಡುವಣ; ಉದಧಿ: ಸಾಗರ; ರಭಸ: ವೇಗ; ಪಳಹರ: ಬಾವುಟ, ಧ್ವಜ; ತೋಮರ: ಅರ್ಧಚಂದ್ರಾಕೃತಿಯಲ್ಲಿರುವ ಒಂದು ಬಗೆಯ ಬಾಣ; ಕುಂತ: ಒಂದು ಬಗೆಯ ಆಯುಧ, ಈಟಿ, ಭರ್ಜಿ; ಆವಳಿ: ಗುಂಪು; ಚಮರ: ಚಾಮರ; ಚ್ಛತ್ರ: ಕೊಡೆ; ಸಂಕುಲ: ಸಮೂಹ; ಭೂತ: ಐದು ಎಂಬ ಸಂಖ್ಯೆಯ ಸಂಕೇತ; ಆಕಾಶ: ನಭ; ಗತ: ಹಿಂದೆ ಆದುದು, ಕಳೆದು ಹೋದ;

ಪದವಿಂಗಡಣೆ:
ಬಳಿಕ +ಧೃಷ್ಟದ್ಯುಮ್ನನ್+ಆಜ್ಞೆಯೊಳ್
ಅಳವಿಗೊಟ್ಟುದು+ ಸೇನೆ+ ಮೂಡಣ
ಜಲಧಿಗಾಂತುದು +ಪಶ್ಚಿಮ+ಉದಧಿಯೆಂಬ +ರಭಸದಲಿ
ಪಳಹರದ +ತೋಮರದ+ ಕುಂತಾ
ವಳಿಯ+ ಚಮರ+ಚ್ಛತ್ರಮಯ +ಸಂ
ಕುಳದಿನಾದುದು +ಭೂತ +ನಾಲ್ಕ್+ಆಕಾಶ+ಗತವಾಗಿ

ಅಚ್ಚರಿ:
(೧) ಎರಡು ಸೈನ್ಯವನ್ನು ಸಾಗರಕ್ಕೆ ಹೋಲಿಸಿರುವ ಪರಿ – ಅಳವಿಗೊಟ್ಟುದು ಸೇನೆ ಮೂಡಣ
ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ
(೨) ಕವಿಯ ಕಲ್ಪನೆ ಪಂಚಭೂತಗಳ ಜೊತೆ ಹೋಲಿಕೆ – ಪಳಹರದ ತೋಮರದ ಕುಂತಾ
ವಳಿಯ ಚಮರಚ್ಛತ್ರಮಯ ಸಂಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ

ಪದ್ಯ ೩: ಸೂರ್ಯೋದಯವು ಹೇಗೆ ಕಂಡಿತು?

ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು
ಕೆರಳಿ ನೈದಿಲೆ ಸಿರಿಯ ಸೂರೆಯ
ತರಿಸಿದನು ರಿಪುರಾಯರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ (ವಿರಾಟ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕಮಲದ ಪರಿಮಳಕ್ಕೆ ಉಡುಗೊರೆಯಾಗಿ ದುಂಬಿಯನ್ನು ಕಳಿಸಿದನು, ಶತ್ರು ಪಕ್ಷಕ್ಕೆ ಸೇರಿದ ಚಂದ್ರಕಾಂತ ಶಿಲೆಗೆ ಆಶ್ಚರ್ಯಕರವಾದ ಪರಾಭವವನ್ನು ಕೊಟ್ಟನು, ಚಕ್ರವಾಕ ಪಕ್ಷಿಗಳ ಬಂಧನವನ್ನು ಕೊನೆಗೊಳಿಸಿದನು, ಕೋಪದಿಂದ ಶತ್ರುರಾಜನ ಗೆಳತಿಯಾದ ಕನ್ನೈದಿಲೆಯ ಹರ್ಷವನ್ನು ಸೂರೆಗೊಂಡನು, ರಾತ್ರಿಯ ರಾಜ್ಯವನ್ನು ಕೊನೆಗೊಳಿಸಿ ಪೂರ್ವಪರ್ವತದ ಶಿಖರದ ಮೇಲೆ ಕುಳಿತು ಸೂರ್ಯನು ಓಲಗವನ್ನಿತ್ತನು.

ಅರ್ಥ:
ಸರಸಿಜ: ಕಮಲ; ಪರಿಮಳ: ಸುಗಂಧ; ತುಂಬಿ: ದುಂಬಿ; ಬರವ: ಆಗಮನ; ಕೊಡು: ನೀಡು; ಚಂದ್ರಕಾಂತ: ಶಶಿಕಾಂತ ಶಿಲೆ; ಬೆರಗು: ವಿಸ್ಮಯ, ಸೋಜಿಗ; ಜಕ್ಕವಕ್ಕಿ: ಎಣೆವಕ್ಕಿ, ಚಕ್ರವಾಕ; ಸೆರೆ: ಬಂಧನ; ಬಿಡಿಸು: ಕಳಚು, ಸಡಿಲಿಸು, ನಿವಾರಿಸು; ಕೆರಳು: ಕೋಪಗೊಳ್ಳು; ಸಿರಿ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ತರಿಸು: ಬರೆಮಾಡು; ರಿಪು: ವೈರಿ; ರಾಯ: ರಾಜ; ಒರಸು: ನಾಶಮಾಡು; ರವಿ: ಭಾನು; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಓಲಗ: ಸೇವೆ, ದರ್ಬಾರು;

ಪದವಿಂಗಡಣೆ:
ಸರಸಿಜದ+ ಪರಿಮಳಕೆ +ತುಂಬಿಯ
ಬರವ +ಕೊಟ್ಟನು +ಚಂದ್ರಕಾಂತಕೆ
ಬೆರಗನಿತ್ತನು+ ಜಕ್ಕವಕ್ಕಿಯ +ಸೆರೆಯ +ಬಿಡಿಸಿದನು
ಕೆರಳಿ+ ನೈದಿಲೆ+ ಸಿರಿಯ +ಸೂರೆಯ
ತರಿಸಿದನು +ರಿಪುರಾಯ+ರಾಜ್ಯವನ್
ಒರಸಿದನು +ರವಿ+ ಮೂಡಣ+ಅದ್ರಿಯೊಳ್+ ಇತ್ತನ್+ಓಲಗವ

ಅಚ್ಚರಿ:
(೧) ಸೂರ್ಯೋದಯದ ಬಹು ಸೊಗಸಾದ ವರ್ಣನೆ
(೨) ನೈದಿಲೆಯು ಮುದುಡಿತು ಎಂದು ಹೇಳಲು – ಕೆರಳಿ ನೈದಿಲೆ ಸಿರಿಯ ಸೂರೆಯ ತರಿಸಿದನು
(೩) ರಾತ್ರಿಯನ್ನು ಹೋಗಲಾಡಿಸಿದನು ಎಂದು ಹೇಳಲು – ರಿಪುರಾಯರಾಜ್ಯವನೊರಸಿದನು
(೪) ಕಮಲವನ್ನು ಅರಳಿಸಿದನು ಎಂದು ಹೇಳಲು – ಸರಸಿಜದ ಪರಿಮಳಕೆ ತುಂಬಿಯ ಬರವ ಕೊಟ್ಟನು

ಪದ್ಯ ೧: ಮುಂಜಾನೆಯನ್ನು ಹೇಗೆ ವಿವರಿಸಿದ್ದಾರೆ?

ಕೇಳು ಜನಮೇಜಯ ಧರಿತ್ರೀ
ಪಾಲ ಚರಿತಾಜ್ಞಾತವಾಸವ
ಬೀಳುಕೊಟ್ಟರು ಬಹಳ ಹರುಷದಲಿರುಳ ನೂಕಿದರು
ಮೇಲಣವರಭ್ಯುದಯವನು ಕೈ
ಮೇಳವಿಸಿ ಕೊಡುವಂತೆ ಮೂಡಣ
ಶೈಲ ಮುಖದಲಿ ಕೆಂಪು ಸುಳಿದುದು ಭಾನುಮಂಡಲದ (ವಿರಾಟ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ಪಾಂಡವರು ತಾವು ಅನುಭವಿಸುತ್ತಿದ್ದ ಅಜ್ಞಾತವಾಸವನ್ನು ಬೀಳುಕೊಟ್ಟು ಸಂತೋಷದಿಂದ ಆ ರಾತ್ರಿಯನ್ನು ಕಳೆದರು. ಮುಂದೆ ಬರಲಿರುವ ಅವರ ಅಭ್ಯುದಯವನ್ನು ಅವರಿಗೆ ನೀಡುವಂತೆ ಪೂರ್ವ ಶೈಲದಲ್ಲಿ ಅರುಣೋದಯವಾಯಿತು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಚರಿತ: ನಡೆದುದು, ಗತಿ; ಅಜ್ಞಾತವಾಸ: ತಲೆಮರೆಸಿಕೊಂಡಿರುವುದು; ಬೀಳುಕೊಡು: ಮುಗಿಸು; ಬಹಳ: ತುಂಬ; ಹರುಷ: ಸಂತಸ; ಇರುಳು: ರಾತ್ರಿ; ನೂಕು: ತಳ್ಳು; ಮೇಲಣ: ಮುಂದೆ; ಅಭ್ಯುದಯ: ಏಳಿಗೆ; ಕೈಮೇಳವಿಸು: ಜೊತೆಗೂಡು; ಕೊಡು: ನೀಡು; ಮೂಡಣ: ಪೂರ್ವ; ಶೈಲ: ಬೆಟ್ಟ; ಮುಖ: ಆನನ; ಕೆಂಪು: ರಕ್ತವರ್ಣ, ಸಿಂಧೂರ; ಸುಳಿ: ಕಾಣಿಸಿಕೊಳ್ಳು; ಭಾನು: ರವಿ; ಭಾನುಮಂಡಲ: ಸೂರ್ಯಮಂಡಲ;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ+ ಚರಿತ+ಅಜ್ಞಾತವಾಸವ
ಬೀಳುಕೊಟ್ಟರು +ಬಹಳ +ಹರುಷದಲ್+ಇರುಳ +ನೂಕಿದರು
ಮೇಲಣವರ್+ಅಭ್ಯುದಯವನು +ಕೈ
ಮೇಳವಿಸಿ +ಕೊಡುವಂತೆ +ಮೂಡಣ
ಶೈಲ +ಮುಖದಲಿ+ ಕೆಂಪು +ಸುಳಿದುದು +ಭಾನುಮಂಡಲದ

ಅಚ್ಚರಿ:
(೧) ಸೂರ್ಯೋದಯವನ್ನು ಪಾಂಡವರ ಏಳಿಗೆಗೆ ಹೋಲಿಸುವ ಪರಿ – ಮೇಲಣವರಭ್ಯುದಯವನು ಕೈ
ಮೇಳವಿಸಿ ಕೊಡುವಂತೆ ಮೂಡಣ ಶೈಲ ಮುಖದಲಿ ಕೆಂಪು ಸುಳಿದುದು ಭಾನುಮಂಡಲದ

ಪದ್ಯ ೩: ಧರ್ಮಜನ ವಿಶ್ಲೇಷಣೆ ಹೇಗಿತ್ತು?

ಬಡಗಲವರದು ಮೂಡಣರಸುಗ
ಳೆಡೆಗೆಣೆಯರಾತಂಗೆ ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಮಗಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ (ವಿರಾಟ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನ ಯೋಚನಾ ಲಹರಿಯನ್ನು ವಿವರಿಸುತ್ತಾ, ಉತ್ತರ ದಿಕ್ಕಿನ ಭಾರತ ಅವರದು, ಪೂರ್ವ ದಿಕ್ಕಿನ ರಾಜರು ಕೌರವನ ಗೆಳೆಯರು, ದಕ್ಷಿಣದ ರಾಜರು ಕೌರವನ ದರ್ಪದ ಬಲವನ್ನು ಕಂಡು ಸುಮ್ಮನಾಗಿರುವವರು. ಈ ಮೂಲೆ ಆ ಮೂಲೆಗಳ ರಾಜರು ಚಾಡಿಕೋರರು, ಪಶ್ಚಿಮದವರು ಬಲಹೀನರು, ಹೀಗಿರುವಾಗ ನಾವೆಲ್ಲಿ ಅಡಗಿಕೊಳ್ಳಬಹುದು ಎನ್ನಲು, ಅರ್ಜುನನು ಅಣ್ಣನಿಗೆ ವಿನಯದಿಂದ ಹೀಗೆ ಹೇಳಿದನು.

ಅರ್ಥ:
ಬಡಗಲು: ಉತ್ತರ; ಮೂಡಣ: ಪೂರ್ವ; ಎಡೆಗೆಣೆ: ಹತ್ತಿರದವ, ಸ್ನೇಹಿತ; ತೆಂಕಣ: ದಕ್ಷಿಣ; ಕಡೆ: ಪಕ್ಕ; ಕಂಡು: ನೋಡು; ಬಲ: ಸೈನ್ಯ; ಕೊಂಡೆ: ಚಾಡಿಯ ಮಾತು; ಪಡುವಣ: ಪಶ್ಚಿಮ; ಕೃಶ: ಬಲವಿಲ್ಲದ; ಅಡಗು: ಬಚ್ಚಿಟ್ಟುಕೊಳ್ಳು; ತೆರ: ಪದ್ಧತಿ; ನುಡಿ: ಮಾತಾಡು; ಅವನಿಪತಿ: ರಾಜ; ವಿನಯ: ಸೌಜನ್ಯ;

ಪದವಿಂಗಡಣೆ:
ಬಡಗಲ್+ಅವರದು +ಮೂಡಣ್+ಅರಸುಗಳ್
ಎಡೆಗೆಣೆಯರ್+ಆತಂಗೆ +ತೆಂಕಣ
ಕಡೆಯವರು +ಕಂಡಿಹರು +ಕೆಲಬಲದವರು +ಕೊಂಡೆಯರು
ಪಡುವಣವವ್+ಅತಿ+ ಕೃಶರು +ನಮಗಿನ್
ಅಡಗಿರಲು +ತೆರನಾವುದ್+ಎಂದೆನೆ
ನುಡಿದನ್+ಅರ್ಜುನ ದೇವನ್+ಅವನೀಪತಿಗೆ+ ವಿನಯದಲಿ

ಅಚ್ಚರಿ:
(೧) ಬಡಗಲು, ಮೂಡಣ, ತೆಂಕಣ, ಪಡುವಣ – ದಿಕ್ಕುಗಳ ಹೆಸರುಗಳ ಬಳಕೆ
(೨) ಕ ಕಾರದ ಸಾಲು ಪದ – ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು

ಪದ್ಯ ೪೪: ಗಿರಿಗಳ ವಿಸ್ತಾರವೆಷ್ಟು?

ವರುಷ ಮಧ್ಯದ ಪರ್ವತಂಗಳ
ಹರಹು ತಾನೆರಡೆರಡು ಸಾಸಿರ
ವರುಷ ನವನವ ನವಸಹಸ್ರವದಾರು ಮಧ್ಯದಲಿ
ವರುಷವದು ಇಪ್ಪತ್ತ ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ (ಅರಣ್ಯ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಒಂಬತ್ತು ವರ್ಷಗಳ (ಕುರು, ಹಿರಣ್ಮಯ, ರಮ್ಯಕ, ಇಳಾವೃತ, ಹರಿ, ಕಿಂಪುರುಷ, ಭರತ, ಭದ್ರಾಶ್ವ, ಕೇತುಮಾಲ) ನಡುವಿರುವ ಗಿರಿಗಳು ಎರಡೆರಡು ಸಹಸ್ರ ಯೋಜನ ವಿಸ್ತಾರವಾಗಿವೆ. ಮಧ್ಯದಲ್ಲಿ ಆರು ಸಹಸ್ರ ಯೋಜನ ವಿಸ್ತಾರದ ಪರ್ವತಗಳಿವೆ. ಹೀಗೆ ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ ಇಪ್ಪತ್ನಾಲ್ಕು ಯೋಜನ ವಿಸ್ತಾರದ ಪರ್ವತಗಳಿವೆ. ಇವು ಲವಣ ಸಮುದ್ರದವರೆಗೂ ಹಬ್ಬಿವೆ.

ಅರ್ಥ:
ವರ್ಷ: ಭೂ ಮಂಡಲದ ವಿಭಾಗ; ಮಧ್ಯ: ನಡುವೆ; ಪರ್ವತ: ಗಿರಿ, ಬೆಟ್ಟ; ಹರಹು: ವಿಸ್ತಾರ; ಸಾಸಿರ: ಸಹಸ್ರ, ಸಾವಿರ; ನವ: ಹೊಸ; ಪರಿಗಣನೆ: ಗಮನ, ಲೆಕ್ಕಾಚಾರ; ಮೂಡಣ: ಪೂರ್ವ; ಪಡುವಣ: ಪಶ್ಚಿಮ; ಮೆರೆ: ಹೊಳೆ, ಪ್ರಕಾಶಿಸು; ಹೊರಗೆ: ಆಚೆ; ಲವಣ: ಉಪ್ಪು; ಅಬ್ಧಿ: ಸಾಗರ;

ಪದವಿಂಗಡಣೆ:
ವರುಷ +ಮಧ್ಯದ +ಪರ್ವತಂಗಳ
ಹರಹು+ ತಾನ್+ಎರಡೆರಡು +ಸಾಸಿರ
ವರುಷ +ನವನವ +ನವ+ಸಹಸ್ರವದ್+ಆರು+ ಮಧ್ಯದಲಿ
ವರುಷವದು +ಇಪ್ಪತ್ತ +ನಾಲ್ಕರ
ಪರಿಗಣಿತ+ ಮೂಡಣದು +ಪಡುವಣದ್
ಎರಡು+ ತಾನದರಂತೆ +ಮೆರೆವುದು+ ಹೊರಗೆ +ಲವಣಾಬ್ಧಿ

ಅಚ್ಚರಿ:
(೧) ಎರಡೆರಡು , ನವನವ – ಜೋಡಿ ಪದಗಳ ಬಳಕೆ

ಪದ್ಯ ೩೯: ಪಾಂಡವರ ಹಿರಿಮೆಯನ್ನು ವಿದುರ ಹೇಗೆ ವಿವರಿಸಿದ?

ಬಡಗಲುತ್ತರ ಕುರುನರೇಂದ್ರರ
ನಡುಗಿಸಿದರುದಯಾದ್ರಿತನಕವೆ
ನಡೆದು ಮುರಿದರು ಮೂಡಣರಸುಗಳತುಳಭುಜಬಲರ
ಪಡುವಲಗಣಿತ ಯವನ ತೆಂಕಲು
ಗಡೆ ವಿಭೀಷಣನೀ ಮಹೀಶರ
ಬಡಿದ ಪಾಂಡವರರಸಿ ತೊತ್ತಹಳೇ ಶಿವಾ ಎಂದ (ಸಭಾ ಪರ್ವ, ೧೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಪಾಂಡವರು ಉತ್ತರದಲ್ಲಿ ಉತ್ತರ ಕುರುಗಳನ್ನು ನಡುಗಿಸಿದರು, ಪೂರ್ವದ ಉದಯಾದ್ರಿಯವರೆಗೆ ಮೂಡಣ ರಾಜರನ್ನು ಮುರಿದರು, ಪಶ್ಚಿಮದ ಯವನರನ್ನೂ ಹಾಗೂ ದಕ್ಷಿಣದ ವಿಭೀಷಣನನ್ನೂ ಜಯಿಸಿದ ಪಾಂಡವರ ರಾಣಿ ದ್ರೌಪದಿ ನಿನಗೆ ದಾಸಿಯಾದಳೇ ಶಿವ ಶಿವಾ ಎಂದು ವಿದುರನು ದುಃಖಿಸಿದನು.

ಅರ್ಥ:
ಬಡಗಲು: ಉತ್ತರ; ನರೇಂದ್ರ: ರಾಜ; ನಡುಗಿಸು: ಬೆದರಿಸು, ಅಲ್ಲಾಡಿಸು; ಉದಯಾದ್ರಿ: ಪೂರ್ವದಿಕ್ಕನ್ನು ಸೂಚಿಸುವ ಪದ ; ಉದಯ: ಹುಟ್ಟುವ; ಅದ್ರಿ: ಬೆಟ್ಟ; ನಡೆ: ಚಲಿಸು; ಮುರಿ: ಸೀಳು; ಮೂಡಣ: ಪೂರ್ವ; ಅರಸು: ರಾಜ; ಅತುಳ: ಬಹಳ; ಭುಜಬಲ: ಪರಾಕ್ರಮ; ಪಡುವಣ: ಪಶ್ಚಿಮ; ಅಗಣಿತ: ಲೆಕ್ಕವಿಲ್ಲದ; ತೆಂಕಲ: ದಕ್ಷಿಣ; ಮಹೀಶ: ರಾಜ; ಬಡಿ: ಬಗ್ಗಿಸು; ಅರಸಿ: ರಾಣಿ; ತೊತ್ತು: ದಾಸಿ;

ಪದವಿಂಗಡಣೆ:
ಬಡಗಲ್+ಉತ್ತರ +ಕುರುನರೇಂದ್ರರ
ನಡುಗಿಸಿದರ್+ಉದಯಾದ್ರಿತನಕವೆ
ನಡೆದು +ಮುರಿದರು +ಮೂಡಣ್+ಅರಸುಗಳ್+ಅತುಳ+ಭುಜಬಲರ
ಪಡುವಲ್+ಅಗಣಿತ +ಯವನ +ತೆಂಕಲು
ಗಡೆ +ವಿಭೀಷಣನೀ+ ಮಹೀಶರ
ಬಡಿದ+ ಪಾಂಡವರ್+ಅರಸಿ +ತೊತ್ತಹಳೇ +ಶಿವಾ +ಎಂದ

ಅಚ್ಚರಿ:
(೧) ಬಡಗಲು, ಮೂಡಣ, ತೆಂಕಲು, ಪಡುವಲ – ದಿಕ್ಕುಗಳನ್ನು ವಿವರಿಸುವ ಪದ