ಪದ್ಯ ೨೭: ಭೀಮಾರ್ಜುನರು ಭಾಷೆಯನ್ನು ಹೇಗೆ ನೆರವೇರಿಸಿದರು?

ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ
ಗೆಲಿದು ತಿರುಗಿದರಿದರು ಸಾಹಸ
ವಳುಕಿಸದೆ ಮೂಜಗದ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ತಲೆಯನ್ನುರುಳಿಸುವೆವೆಂದು ಮಾಡಿದ ಭಾಷೆಯನ್ನುಳಿಸಿಕೊಳ್ಳಲು ಭೀಮಾರ್ಜುನರು ಅಶ್ವತ್ಥಾಮನ ಕಿರೀಟದ ಮಾಣಿಕ್ಯವನ್ನು ತೆಗೆದುಕೊಂಡು ಹೋದರು. ಪಾಂಡವರು ವಿಜಯಶಾಲಿಗಳಾದರು. ಯದುಕುಲ ತಿಲಕನಾದ ವೀರನಾರಾಯಣನ ಕರುಣೆಯಿರಲು ಅವರ ಪರಾಕ್ರಮಕ್ಕೆ ಮೂರು ಲೋಕಗಳೂ ಅಳುಕದಿರುವುದೇ?

ಅರ್ಥ:
ತಲೆ: ಶಿರ; ಕೊಂಬು: ತೆಗೆದುಕೋ; ಅವಗಡ: ಅಸಡ್ಡೆ; ಭಾಷೆ: ನುಡಿ; ಸಲಿಸು: ದೊರಕಿಸಿ ಕೊಡು, ಪೂರೈಸು; ತನುಜ: ಮಗ; ಹೊಳೆ: ಪ್ರಕಾಶಿಸು; ಮಕುಟ: ಕಿರೀಟ; ಮಾಣಿಕ: ಮಾಣಿಕ್ಯ; ಕೊಂಡು: ಪಡೆದು; ಗೆಲಿದು: ಜಯಶಾಲಿ; ತಿರುಗು: ಸುತ್ತು, ಸಂಚರಿಸು; ಸಾಹಸ: ಪರಾಕ್ರಮ, ಶೌರ್ಯ; ಅಳುಕು: ಹೆದರು; ಮೂಜಗ: ತ್ರಿಜಗತ್ತು; ತಿಲಕ: ಶ್ರೇಷ್ಥ; ಕರುಣ: ದಯೆ; ಉತ್ತರಾಯ: ಜವಾಬುದಾರಿ;

ಪದವಿಂಗಡಣೆ:
ತಲೆಯ +ಕೊಂಬ್+ಅವಗಡದ +ಭಾಷೆಯ
ಸಲಿಸಲೆಂದ್+ಆ+ ದ್ರೋಣ+ತನುಜನ
ಹೊಳೆವ +ಮಕುಟದ +ಮಾಣಿಕವ +ಕೊಂಡ್+ಉತ್ತರಾಯದಲಿ
ಗೆಲಿದು +ತಿರುಗಿದ್+ಅರಿದರು+ ಸಾಹಸವ್
ಅಳುಕಿಸದೆ +ಮೂಜಗದ +ಯದುಕುಲ
ತಿಲಕ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಭಾಷೆಯನ್ನು ತೀರಿಸಿದ ಪರಿ – ದ್ರೋಣತನುಜನ ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ

ಪದ್ಯ ೪: ಭೀಮ ದುರ್ಯೋಧನರ ಗದಾ ಯುದ್ಧವು ಹೇಗೆ ನಡೆಯಿತು?

ಗದೆಗದೆಯ ಹೊಯ್ಲುಗಳ ಖಣಿಖಟಿ
ಲೊದಗಿತಿಬ್ಬರ ಬೊಬ್ಬೆ ಭುವನವ
ಬೆದರಿಸಿತು ಪದಥಟ್ಟಣೆಯ ಘಟ್ಟಣೆಯ ಘಾತಿಯಲಿ
ಅದರಿತಿಳೆ ಮಝ ಭಾಪು ಭಟರೆಂ
ದೊದರಿತಾ ಪರಿವಾರದಬ್ಬರ
ತ್ರಿದಶನಿಕರದ ಸಾಧುರವವಂಜಿಸಿತು ಮೂಜಗದ (ಗದಾ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಗದೆಗಳು ಒಂದನ್ನೊಂದು ತಾಗಿ ಖಣಿ ಖಟಿಲೆಂಬ ಸದ್ದಾಗುತ್ತಿತ್ತು. ಇಬ್ಬರ ಕೂಗುಗಳು ಲೋಕವನ್ನೇ ಬೆದರಿಸಿದವು. ಪಾದಗಳ ತುಳಿತಕ್ಕೆ ಭೂಮಿ ನಡುಗಿತು. ಪರಿವಾಅರದವರು ಭಲೇ, ಭಾಪು ಎಂದು ಹೊಗಳುತ್ತಿದ್ದರು. ದೇವತೆಗಳು ಸಾಧುವಾದವನ್ನು ಮಾಡಿದರು.

ಅರ್ಥ:
ಗದೆ: ಮುದ್ಗರ; ಹೊಯ್ಲು: ಹೊಡೆತ; ಖಣಿಖಟಿ: ಶಬ್ದವನ್ನು ವರ್ಣಿಸುವ ಪದ; ಬೊಬ್ಬೆ: ಗರ್ಜನೆ; ಭುವನ: ಭೂಮಿ; ಬೆದರಿಸು: ಹೆದರಿಸು; ಪದ: ಪಾದ, ಚರಣ; ಥಟ್ಟಣೆ: ಗುಂಪು; ಘಾತಿ: ಹೊಡೆತ; ಅದರು: ನಡುಗು; ಇಳೆ: ಭೂಮಿ; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಭಟ: ವೀರ; ಒದರು: ಹೇಳು; ಪರಿವಾರ: ಬಂಧುಜನ; ಅಬ್ಬರ: ಗರ್ಜನೆ; ತ್ರಿದಶ: ದೇವತೆ; ನಿಕರ: ಗುಂಪು; ಸಾಧು: ಒಪ್ಪಿಗೆ, ಮುನಿಜನ; ಅಂಜಿಸು: ಹೆದರು; ಮೂಜಗ: ತ್ರಿಜಗ, ಮೂರು ಜಗತ್ತು;

ಪದವಿಂಗಡಣೆ:
ಗದೆಗದೆಯ +ಹೊಯ್ಲುಗಳ +ಖಣಿಖಟಿಲ್
ಒದಗಿತ್+ಇಬ್ಬರ+ ಬೊಬ್ಬೆ +ಭುವನವ
ಬೆದರಿಸಿತು +ಪದ+ಥಟ್ಟಣೆಯ +ಘಟ್ಟಣೆಯ +ಘಾತಿಯಲಿ
ಅದರಿತ್+ಇಳೆ +ಮಝ +ಭಾಪು +ಭಟರೆಂದ್
ಒದರಿತಾ+ ಪರಿವಾರದ್+ಅಬ್ಬರ
ತ್ರಿದಶ+ನಿಕರದ+ ಸಾಧುರವವ್+ಅಂಜಿಸಿತು +ಮೂಜಗದ

ಅಚ್ಚರಿ:
(೧) ಶಬ್ದಗಳನ್ನು ವಿವರಿಸುವ ಪದ – ಖಣಿಖಟಿಲ, ಬೊಬ್ಬೆ, ಒದರು, ಸಾಧುರವ, ಮಝ, ಭಾಪು
(೨) ಘ ಕಾರದ ಪದಗಳು – ಘಟ್ಟಣೆಯ ಘಾತಿಯಲಿ

ಪದ್ಯ ೨೧: ಧೃಷ್ಟದ್ಯುಮ್ನನನ್ನು ಯಾರು ಬೈದರು?

ಕವಿದ ಕೌರವ ಬಲದ ಸುಮ್ಮಾ
ನವನು ತಮ್ಮಂಜಿಕೆಯನಾ ಭೈ
ರವನ ಭಾರಿಯ ಸರಳ ಸೊಗಡಿಗೆ ಜೀವ ಮೂಜಗವ
ಅವರು ಕಂಡರು ಖಾತಿಯಲಿ ಪಾಂ
ಡವರು ಧೃಷ್ಟಧ್ಯುಮ್ನನನು ತವ
ತವಗೆ ಬೈದರು ಪಾಪಿ ಲೋಕವ ಕೊಂದೆ ನೀನೆನುತ (ದ್ರೋಣ ಪರ್ವ, ೧೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕೌರವ ಸೇನೆಯ ಸಂತೋಷವನ್ನೂ ತಮಗೊದಗಿದ ಭೀತಿಯನ್ನೂ, ಅಶ್ವತ್ಥಾಮನ ಅಸ್ತ್ರದ ಝಳಕ್ಕೆ ಬೇಯುತ್ತಿರುವ ಮೂರು ಲೋಕಗಳನ್ನೂ ಪಾಂಡವ ಸೇನೆಯವರು ನೋಡಿ, ಪಾಪಿ, ಈ ಲೋಕವನ್ನು ನೀನು ಕೊಂದೆ ಎಂದು ಧೃಷ್ಟದ್ಯುಮ್ನನನ್ನು ಬೈದರು.

ಅರ್ಥ:
ಕವಿ: ಆವರಿಸು; ಬಲ: ಸೈನ್ಯ; ಸುಮ್ಮಾನ: ಸಂತೋಷ; ಅಂಜಿಕೆ: ಹೆದರು; ಭೈರವ: ಶಿವನ ಒಂದು ಅವತಾರ; ಭಾರಿ: ಹೊರೆ; ಸರಳ: ಬಾಣ; ಸೊಗಡು: ಕಂಪು, ವಾಸನೆ; ಜೀವ: ಪ್ರಾಣ; ಮೂಜಗ: ಮೂರು ಪ್ರಪಂಚ; ಕಂಡು: ನೋಡು; ಖಾತಿ: ಕೋಪ; ಬೈದರು: ಜರೆದರು; ಪಾಪಿ: ದುಷ್ಟ; ಲೋಕ: ಜಗತ್ತು; ಕೊಂದೆ: ಕೊಲ್ಲು;

ಪದವಿಂಗಡಣೆ:
ಕವಿದ+ ಕೌರವ+ ಬಲದ +ಸುಮ್ಮಾ
ನವನು +ತಮ್ಮಂಜಿಕೆಯನಾ+ ಭೈ
ರವನ +ಭಾರಿಯ +ಸರಳ+ ಸೊಗಡಿಗೆ +ಜೀವ +ಮೂಜಗವ
ಅವರು +ಕಂಡರು +ಖಾತಿಯಲಿ +ಪಾಂ
ಡವರು +ಧೃಷ್ಟಧ್ಯುಮ್ನನನು +ತವ
ತವಗೆ +ಬೈದರು +ಪಾಪಿ +ಲೋಕವ +ಕೊಂದೆ +ನೀನೆನುತ

ಅಚ್ಚರಿ:
(೧) ಧೃಷ್ಟದ್ಯುಮ್ನನನ್ನು ಬಯ್ಯುವ ಪರಿ – ಪಾಪಿ ಲೋಕವ ಕೊಂದೆ ನೀನೆನುತ

ಪದ್ಯ ೧೧: ಅರ್ಜುನನ ದುಃಖವು ಯಾರನ್ನು ಹೆದರಿಸಿತು?

ಸುರನಗರಿ ನಡುಗಿತ್ತು ಸುರಪತಿ
ಹರನ ನೆನೆದನು ಯಮನ ಪಟ್ಟಣ
ಸರಕುದೆಗೆಯಿತು ಮೃತ್ಯು ಮರೆಹೊಕ್ಕಳು ಮಹೇಶ್ವರನ
ಬಿರುದರಂಜಿತು ದೇಶದೇಶದ
ಧರಣಿಪತಿಗಳಪಾಯವಾಯ್ತೆನೆ
ನರನ ಕಡು ದುಮ್ಮಾನ ನೆರೆ ಹೆದರಿಸಿತು ಮೂಜಗವ (ದ್ರೋಣ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನ ದುಃಖವನ್ನು ಕಂಡು ಅಮರಾವತಿಯು ನಡುಗಿತು. ದೇವೇಂದ್ರನು ಶಿವನನ್ನು ನೆನೆದನು. ಯಮನ ಪಟ್ಟಣದಲ್ಲಿದ್ದವರು ಗುಳೆಕಿತ್ತು ಹೊರಹೊರಟರು. ಮೃತ್ಯುವು ಮಹೇಶ್ವರನ ಮರೆಹೊಕ್ಕಳು. ವೀರರು ಬೆದರಿದರು. ರಾಜರು ಅಪಾಯವಾಯಿತೆಂದರು. ಅರ್ಜುನನ ದುಃಖವು ತ್ರಿಲೋಕವನ್ನು ಹೆದರಿಸಿತು.

ಅರ್ಥ:
ಸುರನಗರಿ: ಅಮರಾವತಿ; ನಡುಗು: ಅಲ್ಲಾಡು; ಸುರಪತಿ: ಇಂದ್ರ; ಹರ: ಶಿವ; ನೆನೆ: ಜ್ಞಾಪಿಸು; ಯಮ: ಜವ; ಪಟ್ಟಣ: ಊರು; ಸರಕು: ಸಾಮಾನು, ಸಾಮಗ್ರಿ; ತೆಗೆ: ಹೊರತರು; ಮೃತ್ಯು: ಮರಣ; ಮರೆ: ನೆನಪಿನಿಂದ ದೂರ ಮಾಡು; ಹೊಕ್ಕು: ಸೇರು; ಮಹೇಶ್ವರ: ಶಿವ; ಬಿರುದು: ಗೌರವ ಸೂಚಕ ಪದ; ಅಂಜು: ಹೆದರು; ದೇಶ: ರಾಷ್ಟ್ರ; ಧರಣಿಪತಿ: ರಾಜ; ಅಪಾಯ: ತೊಂದರೆ; ನರ: ಅರ್ಜುನ; ಕಡು: ಬಹಳ; ದುಮ್ಮಾನ: ದುಃಖ; ನೆರೆ: ಸೇರು, ಪಕ್ಕ; ಹೆದರಿಕೆ: ಅಂಜಿಕೆ; ಮೂಜಗ: ತ್ರಿಲೋಕ;

ಪದವಿಂಗಡಣೆ:
ಸುರನಗರಿ+ ನಡುಗಿತ್ತು +ಸುರಪತಿ
ಹರನ +ನೆನೆದನು +ಯಮನ +ಪಟ್ಟಣ
ಸರಕು+ತೆಗೆಯಿತು +ಮೃತ್ಯು +ಮರೆಹೊಕ್ಕಳು +ಮಹೇಶ್ವರನ
ಬಿರುದರ್+ಅಂಜಿತು +ದೇಶದೇಶದ
ಧರಣಿಪತಿಗಳ್+ಅಪಾಯವಾಯ್ತೆನೆ
ನರನ +ಕಡು +ದುಮ್ಮಾನ +ನೆರೆ +ಹೆದರಿಸಿತು +ಮೂಜಗವ

ಅಚ್ಚರಿ:
(೧) ಸುರನಗರಿ, ಸುರಪತಿ – ಸುರ ಪದದ ಬಳಕೆ;
(೨) ಮೃತ್ಯುವು ಕೂಡ ಅರ್ಜುನನಿಗೆ ಹೆದರಿದಳು ಎಂದು ಹೇಳುವ ಪರಿ – ಮೃತ್ಯು ಮರೆಹೊಕ್ಕಳು ಮಹೇಶ್ವರನ

ಪದ್ಯ ೩೦: ಅರ್ಜುನನನ್ನು ಊರ್ವಶಿಯು ಹೇಗೆ ಹಂಗಿಸಿದಳು?

ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ತ ವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರಹರಯೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನ ತರ್ಕವನ್ನು ಕೇಳಿ ಕೋಪಗೊಂಡು, ಹೌದಲ್ಲವೇ, ನೀವು ವೇದವಿಹಿತ ಮಾರ್ಗದವರು, ಅಲ್ಲದೆ ಸ್ಮೃತಿಯಲ್ಲಿ ವಿಧಿಸಿದಂತೆ ನಡೆಯುವವರೆಂಬುದನ್ನು ಮೂರು ಲೋಕದ ಜನಗಳೆಲ್ಲರೂ ಅರಿತಿಲ್ಲವೇ, ಐವರು ಒಬ್ಬ ಹೆಂಗಸನ್ನು ಮದುವೆಯಾಗಿರುವರಂತೆ, ಅವರು ನೀವಲ್ಲ ತಾನೆ, ನಮ್ಮನ್ನು ಮಾತ್ರ ಸ್ವಲ್ಪವೂ ಬಯಸದಿರುವವರು ನೀವಲ್ಲವೇ ಶಿವ ಶಿವಾ ಎಂದು ಊರ್ವಶಿ ಅರ್ಜುನನನ್ನು ಹಂಗಿಸಿದಳು.

ಅರ್ಥ:
ಅಹುದು: ಹೌದು; ಶ್ರೌತ: ವೇದಗಳಿಗೆ ಸಂಬಂಧಿಸಿದ; ಪಥ: ಮಾರ್ಗ; ಬಹಿರಿ: ಬಂದಿರಿ; ಸ್ಮಾರ್ತ:ಸ್ಮೃತಿಗ್ರಂಥಗಳಲ್ಲಿ ವಿಧಿ ಸಿದ ಆಚರಣೆ; ವಿಧಿ: ನಿಯಮ; ಸನ್ನಿಹಿತ: ಹತ್ತಿರ, ಸಮೀಪ; ಅರಿ: ತಿಳಿ; ಮೂಜಗ: ತ್ರಿಲೋಕ; ಜನ: ಮನುಷ್ಯ; ಮಹಿಳೆ: ನಾರಿ; ಒಡಗೂಡು: ಸೇರು; ನಿಸ್ಪೃಹ: ಆಸೆ ಇಲ್ಲದವ; ಹರ: ಶಿವ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅಹುದ್+ಅಹುದಲೇ +ಶ್ರೌತ +ಪಥದಲಿ
ಬಹಿರಿ +ನೀವೇ +ಸ್ಮಾರ್ತ +ವಿಧಿ +ಸ
ನ್ನಿಹಿತರ್+ಎಂಬುದನ್+ಅರಿಯದೇ +ಮೂಜಗದ+ ಜನವೆಲ್ಲ
ಮಹಿಳೆ+ಒಬ್ಬಳೊಳ್+ಐವರ್+ಒಡಗೂ
ಡಿಹರು +ನೀವೇನಲ್ಲಲೇ +ನಿ
ಸ್ಪೃಹರು +ನೀವ್ +ನಮ್ಮಲ್ಲಿ+ ಹರಹರ+ಎಂದಳ್+ಇಂದುಮುಖಿ

ಅಚ್ಚರಿ:
(೧) ಅರ್ಜುನನನ್ನು ಹಂಗಿಸುವ ಪರಿ – ಮಹಿಳೆಯೊಬ್ಬಳೊಳೈವರೊಡಗೂಡಿಹರು ನೀವೇನಲ್ಲಲೇ

ಪದ್ಯ ೬೦: ಧೃಷ್ಟದ್ಯುಮ್ನನು ಕೃಷ್ಣನನ್ನು ಹೇಗೆ ವರ್ಣಿಸುತ್ತಾನೆ?

ಮದನನಯ್ಯನು ಮೂಜಗವ ಮಾ
ಡಿದನ ತಾತನು ರೂಪ ವಿಭವವ
ನಿದರೊಳಗೆ ನೀ ನೋಡಿಕೋ ಯಾದವ ಶಿರೋಮಣಿಯ
ಸುದತಿಯರ ಸೇರುವೆಗಳ ನೋ
ಡಿದರೆ ಧಾರುಣಿ ಲಕ್ಷ್ಮಿ ಕೃಷ್ಣನ
ಪದಯುಗವನೋಲೈಸುತಿಹರಬುಜಾಕ್ಷಿ ಕೇಳೆಂದ (ಆದಿ ಪರ್ವ, ೧೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನಾದರು ಯಾರೆಂದು ತಿಳಿದಿರುವೆ, ಈತ ಮನ್ಮಥನ ತಂದೆ, ಮೂರು ಲೋಕವನ್ನು ಸೃಷ್ಟಿಸಿದ ಬ್ರಹ್ಮನ ತಂದೆ, ಹೀರುಗುವಾಗ ಇವನ ರೂಪ ಮಹಿಮೆ ಎಂತಹುದು, ಸ್ತ್ರೀಯರು ಇವನನ್ನು ಹೇಗೆ ಬಯಸುವರೆಂದರೆ, ಲಕ್ಷಿ ಮತ್ತು ಭೂದೇವಿ ಇವನ ಪಾದಸೇವೆ ಮಾಡುತ್ತಾರೆ, ದ್ರೌಪದಿ ನೀನೆ ಇವನೆಂತಹವನು ಎಂದು ತಿಳಿದುಕೋ.

ಅರ್ಥ:
ಮದನ: ಮನ್ಮಥ; ಅಯ್ಯ: ತಂದೆ; ಮೂಜವ: ಮೂರು ಜಗತ್ತು; ಮಾಡಿದ: ಸೃಷ್ಟಿಸಿದ; ತಾತ: ತಂದೆ; ರೂಪ: ಆಕಾರ; ವಿಭವ:ಸಿರಿ, ಸಂಪತ್ತು; ಶಿರೋಮಣಿ: ಶ್ರೇಷ್ಠ; ಸುದತಿ: ಚೆಲುವೆ, ಸುಂದರವಾದ ಹಲ್ಲುಗಳ್ಳುಳವಳು; ಸೇರು: ಜೊತೆಗೂಡು; ಧಾರುಣಿ: ಭೂಮಿ; ಲಕ್ಷ್ಮಿ: ಕ್ಷೀರಾಬ್ಧಿಕನ್ಯೆ; ಪದ: ಚರಣ; ಓಲೈಸು: ಪುಸಲಾಯಿಸು; ಅಬುಜ: ತಾವರೆ; ಅಕ್ಷಿ: ಕಣ್ಣು;

ಪದವಿಂಗಡಣೆ:
ಮದನನ್+ಅಯ್ಯನು +ಮೂಜಗವ+ ಮಾ
ಡಿದನ +ತಾತನು+ ರೂಪ+ ವಿಭವವನ್
ಇದರೊಳಗೆ +ನೀ+ ನೋಡಿಕೋ +ಯಾದವ +ಶಿರೋಮಣಿಯ
ಸುದತಿಯರ +ಸೇರುವೆಗಳ+ ನೋ
ಡಿದರೆ +ಧಾರುಣಿ +ಲಕ್ಷ್ಮಿ +ಕೃಷ್ಣನ
ಪದಯುಗವನ್+ಓಲೈಸುತಿಹರ್+ಅಬುಜಾಕ್ಷಿ +ಕೇಳೆಂದ

ಅಚ್ಚರಿ:
(೧) ಜೋಡಿ ಪದ: “ಮ” – ಮದನನಯ್ಯನು ಮೂಜಗವ ಮಾಡಿದನ; “ಸ” – ಸುದತಿಯರ ಸೇರುವೆಗಳ
(೨) ೧ ಸಾಲು ಎಲ್ಲಾ ಪದಗಳು “ಮ” ಕಾರದಿಂದ ಪ್ರಾರಂಭ
(೩) ನೋಡಿಕೋ, ನೋಡಿದರೆ – ಪದಗಳ ಬಳಕೆ
(೪) ತಾತ, ಅಯ್ಯ – ತಂದೆಯ ಸಮಾನಾರ್ಥಕ ಪದಗಳು
(೫) ದ್ರೌಪದಿಯನ್ನು ಅಬುಜಾಕ್ಷಿ ಎಂದು ಕರೆದಿರುವುದು