ಪದ್ಯ ೨೨: ಕೃಷ್ಣನ ಬೀಳ್ಕೊಡುಗೆ ಹೇಗೆ ನಡೆಯಿತು?

ಆ ಶುಭಗ್ರಹದುದಯದಲಿ ತಿಥಿ
ರಾಶಿ ನಕ್ಷತ್ರಾದಿ ಪುಣ್ಯೋ
ದ್ಭಾಸಮಾನ ಮುಹೂರ್ತದಲಿ ಸುಸ್ವರ ವಿಳಾಸದಲಿ
ಭೂಸುರಾಶೀರ್ವಾದದಲಿ ಲ
ಕ್ಷ್ಮೀಶ ಪಯಣವ ಮಾಡಿದನು ಕ
ಟ್ಟಾಸುರದಲೊದರಿದವು ಘನಗಂಭೀರ ಭೇರಿಗಳು (ಸಭಾ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಒಂದು ಶುಭದಿನದಂದು, ಶುಭ ನಕ್ಷತ್ರ, ತಿಥಿ, ವಾರ, ರಾಶಿ, ಮುಹೂರ್ತದಲ್ಲಿ ಶ್ರೀಕೃಷ್ಣನು ದ್ವಾರಕೆಗೆ ಇಂದ್ರಪ್ರಸ್ಥನಗರದಿಂದ ಪ್ರಯಾಣಕ್ಕೆ ಸಿದ್ಧನಾದನು. ಬ್ರಾಹ್ಮಣರು ಆಶೀರ್ವಾದ ಮಾಡಿದರು, ಆಗ ಭಯಂಕರವಾದ ಭೇರಿಯ ನಿನಾದವು ಎಲ್ಲಡೆ ಗರ್ಜಿಸಿತು.

ಅರ್ಥ:
ಶುಭ: ಮಂಗಳ; ಗ್ರಹ: ಆಕಾಶಚರಗಳು; ಉದಯ: ಹುಟ್ಟು; ತಿಥಿ: ದಿನ; ರಾಶಿ: ಮೇಶ ಇತ್ಯಾದಿ ನಕ್ಷತ್ರಗಳ ಗುಂಪು; ನಕ್ಷತ್ರ: ತಾರ; ಪುಣ್ಯ: ಒಳ್ಳೆಯ; ಭಾಸ: ಹೊಳಪು, ಕಾಂತಿ, ತೋರು; ಮುಹೂರ್ತ: ಸಮಯ; ಸುಸ್ವರ: ನಿನಾದ, ನಾದ; ವಿಳಾಸ: ಉಲ್ಲಾಸ, ಅಂದ, ಸೊಬಗು; ಭೂಸುರ: ಬ್ರಾಹ್ಮಣ; ಆಶೀರ್ವಾದ: ಅನುಗ್ರಹ; ಪಯಣ: ಪ್ರಯಾಣ; ಕಟ್ಟಾಸುರ: ಅತ್ಯಂತ ಭಯಂಕರ; ಒದರು: ಕಿರುಚು, ಗರ್ಜಿಸು; ಘನ: ಶ್ರೇಷ್ಠ; ಗಂಭೀರ: ಆಳವಾದ, ಗಹನವಾದ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ;

ಪದವಿಂಗಡಣೆ:
ಆ +ಶುಭ+ಗ್ರಹದ್+ಉದಯದಲಿ +ತಿಥಿ
ರಾಶಿ +ನಕ್ಷತ್ರಾದಿ +ಪುಣ್ಯೋದ್
ಭಾಸಮಾನ +ಮುಹೂರ್ತದಲಿ+ ಸುಸ್ವರ +ವಿಳಾಸದಲಿ
ಭೂಸುರ+ಆಶೀರ್ವಾದದಲಿ +ಲ
ಕ್ಷ್ಮೀಶ +ಪಯಣವ +ಮಾಡಿದನು +ಕ
ಟ್ಟಾಸುರದಲ್+ಒದರಿದವು +ಘನಗಂಭೀರ+ ಭೇರಿಗಳು

ಪದ್ಯ ೬೭: ಕೃಷ್ಣ ಶಿಶುಪಾಲರ ಯುದ್ಧ ಹೇಗೆ ಶುರುವಾಯಿತು?

ಎನುತ ಖಳನಿದಿರಾಗಿ ಮಧುಮ
ರ್ದನನ ಹಳಚಿದನಸುರರಿಪುವಿನ
ಮೊನೆಗಣೆಯಲೇ ಮುಳುಗಿದನು ಬಳಿಕಾ ಮುಹೂರ್ತದಲಿ
ದನುಜವೈರಿಯ ಮುಸುಕಿದನು ತನ
ತನಗೆ ನೋಟಕವಾಯ್ತು ಭೂಪತಿ
ಜನ ಸುನೀತ ಮುರಾರಿಗಳ ಕೌತೂಹಲಾಹವಕೆ (ಸಭಾ ಪರ್ವ, ೧೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ತಾನೊಬ್ಬನೇ ಕೃಷ್ಣನೊಂದಿಗೆ ಯುದ್ಧ ಮಾಡುತ್ತೇನೆ ಎಂದು ಹೇಳಿ ದುಷ್ಟನಾದ ಶಿಶುಪಾಲನು ಕೃಷ್ಣನೆದುರು ಬಂದು ಹೋರಾಡಿದನು. ಶ್ರೀಕೃಷ್ಣನ ಬಾಣಗಳಲಿ ಕಾಣದಾಗಿ ಸ್ವಲ್ಪ ಹೊತ್ತಿನಲ್ಲೇ ಅವನನ್ನು ಬಾಣಗಳಿಂದ ಮುಚ್ಚಿದನು. ಶಿಶುಪಾಲ ಶ್ರೀಕೃಷ್ಣರ ಯುದ್ಧಕ್ಕೆ ರಾಜರು ನೋಟಕರಾದರು.

ಅರ್ಥ:
ಖಳ: ದುಷ್ಟ; ಇದಿರು: ಎದುರು; ಮರ್ದನ: ಸಾಯಿಸು; ಹಳಚು: ತಾಗು, ಬಡಿ, ಆಕ್ರಮಿಸು; ಅಸುರರಿಪು: ದಾನವರ ವೈರಿ (ಕೃಷ್ಣ); ಮೊನೆ: ತುದಿ, ಚೂಪಾದ, ಹರಿತ; ಕಣೆ: ಬಾಣ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಬಳಿಕ: ನಂತರ; ಮುಹೂರ್ತ: ಸರಿಯಾದ ಸಮಯ; ದನುಜ: ರಾಕ್ಷಸ; ವೈರಿ: ರಿಪು; ಮುಸುಕು: ಹೊದಿಕೆ; ನೋಟಕ: ವೀಕ್ಷಣೆ; ಭೂಪತಿ: ರಾಜ; ಜನ: ಗುಂಪು; ಸುನೀತ: ಶಿಶುಪಾಲ; ಮುರಾರಿ: ಕೃಷ್ಣ; ಕೌತೂಹಲ: ಸೋಜಿಗ, ಆಶ್ಚರ್ಯ; ಆಹವ: ಯುದ್ಧ;

ಪದವಿಂಗಡಣೆ:
ಎನುತ +ಖಳನ್+ಇದಿರಾಗಿ+ ಮಧುಮ
ರ್ದನನ +ಹಳಚಿದನ್+ಅಸುರರಿಪುವಿನ
ಮೊನೆ+ಕಣೆಯಲೇ +ಮುಳುಗಿದನು+ ಬಳಿಕ+ಆ+ ಮುಹೂರ್ತದಲಿ
ದನುಜವೈರಿಯ+ ಮುಸುಕಿದನು+ ತನ
ತನಗೆ +ನೋಟಕವಾಯ್ತು +ಭೂಪತಿ
ಜನ +ಸುನೀತ +ಮುರಾರಿಗಳ+ ಕೌತೂಹಲ+ಆಹವಕೆ

ಅಚ್ಚರಿ:
(೧) ಮಧುಮರ್ದನ, ಅಸುರರಿಪು, ದನುಜವೈರಿ, ಮುರಾರಿ – ಕೃಷ್ಣನನ್ನು ಕರೆದಿರುವ ಪರಿ
(೨) ಯುದ್ಧದ ತೀವ್ರತೆ – ಅಸುರರಿಪುವಿನ ಮೊನೆಗಣೆಯಲೇ ಮುಳುಗಿದನು