ಪದ್ಯ ೩೦: ಕೌರವನೇಕೆ ಸಂತೈಸಿಕೊಂಡನು?

ಜಾಳಿಸಿದ ವೇದನೆಯ ಝೊಮ್ಮಿನ
ಜಾಳಿಗೆಯ ಜವ ಹರಿದುದೆಚ್ಚರ
ಮೇಲುಮರವೆಯ ಮುಸುಕು ಜಾರಿತು ಹಾರಿತತಿಭೀತಿ
ಬೇಳುವೆಯ ಕರಣೇಂದ್ರಿಯದ ವೈ
ಹಾಳಿ ನಿಂದುದು ಬಿಗಿದ ಬಳಲಿಕೆ
ಯೂಳಿಗದ ಮೊನೆ ಮುರಿಯೆ ಸಂತೈಸಿದನು ಕುರುರಾಯ (ಗದಾ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೌರವನಿಗೆ ಮೈತುಂಬ ಹರಡಿದ ನೋವಿನ ಜಾಲವು ಸ್ವಲ್ಪ ಹೊತ್ತಿನಲ್ಲೇ ಕಡಿಮೆಯಾಯಿತು. ಮೂರ್ಛೆ ತೊಲಗಿ ಎಚ್ಚರವಾಯಿತು. ಭೀತಿ ಬಿಟ್ಟು ಹೋಯಿತು, ಇಂದ್ರಿಯಗಳ ತೊಳಲಾಟ ನಿಂತು ಸ್ಥಿಮಿತಕ್ಕೆ ಬಂತು. ಬಳಲಿಕೆಯ ಕಾಟ ನಿಲ್ಲಲು ಕೌರವನು ಸಂತೈಸಿಕೊಂಡನು.

ಅರ್ಥ:
ಜಾಳಿಸು: ಚಲಿಸು, ನಡೆ; ವೇದನೆ: ನೋವು; ಝೊಮ್ಮು:ಝೊಂಪು, ಮರವೆ; ಜಾಲ: ಬಲೆ; ಜವ: ವೇಗ, ರಭಸ; ಹರಿ: ಚಲಿಸು; ಎಚ್ಚರ: ನಿದ್ರೆಯಿಂದ ಏಳುವುದು; ಮರವೆ: ಜ್ಞಾಪಕವಿಲ್ಲದ ಸ್ಥಿತಿ; ಮುಸುಕು:ಹೊದಿಕೆ; ಜಾರು: ಬೀಳು; ಹಾರು: ದೂರಹೋಗು; ಭೀತಿ: ಭಯ; ಬೇಳುವೆ: ಮೋಸ, ವಂಚನೆ, ಮೈಮರೆವು; ಕರಣೇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವೈಹಾಳಿ: ಕುದುರೆ ಸವಾರಿ, ಸಂಚಾರ; ನಿಂದು: ನಿಲ್ಲು; ಬಿಗಿ: ಬಂಧಿಸು; ಬಳಲಿಕೆ: ಆಯಾಸ; ಊಳಿಗ: ಕೆಲಸ, ಕಾರ್ಯ; ಮೊನೆ: ತುದಿ, ಕೊನೆ; ಮುರಿ: ಸೀಳು; ಸಂತೈಸು: ಸಮಾಧಾನಪಡಿಸು; ರಾಯ: ರಾಜ;

ಪದವಿಂಗಡಣೆ:
ಜಾಳಿಸಿದ +ವೇದನೆಯ +ಝೊಮ್ಮಿನ
ಜಾಳಿಗೆಯ +ಜವ +ಹರಿದುದ್+ಎಚ್ಚರ
ಮೇಲು+ಮರವೆಯ +ಮುಸುಕು +ಜಾರಿತು +ಹಾರಿತ್+ಅತಿಭೀತಿ
ಬೇಳುವೆಯ +ಕರಣೇಂದ್ರಿಯದ+ ವೈ
ಹಾಳಿ +ನಿಂದುದು +ಬಿಗಿದ +ಬಳಲಿಕೆ
ಯೂಳಿಗದ+ ಮೊನೆ +ಮುರಿಯೆ +ಸಂತೈಸಿದನು +ಕುರುರಾಯ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಝೊಮ್ಮಿನ ಜಾಳಿಗೆಯ ಜವ
(೨) ಜ ಕಾರದ ಪದಗಳು – ಜಾಳಿಸಿ, ಜವ, ಝೊಮ್ಮು, ಜಾರು
(೩) ರೂಪಕದ ಪ್ರಯೋಗ – ಬೇಳುವೆಯ ಕರಣೇಂದ್ರಿಯದ ವೈಹಾಳಿ ನಿಂದುದು

ಪದ್ಯ ೯: ಅರ್ಜುನನು ಕೃಷ್ಣನಲ್ಲಿ ಏನೆಂದು ಪ್ರಾರ್ಥಿಸಿದನು?

ದೆಸೆದೆಸೆಯ ನೋಡಿದರೆ ಕತ್ತಲೆ
ಮಸಗುವುದು ಪರಿತಾಪ ತನುವನು
ಮುಸುಕುವುದು ಮನ ಮರುಗುವುದು ಕಳವಳಿಸುವುದು ಧೈರ್ಯ
ಮಸೆದ ಸರಳೊಡಲೊಳಗೆ ಮುರಿದವೊ
ಲುಸುರಿಗುಬ್ಬಸವಾಯ್ತು ಬಲ್ಲಡೆ
ಬೆಸಸು ಮುರಹರ ಹಿರಿದು ಬಳಲಿಸಬೇಡ ಹೇಳೆಂದ (ದ್ರೋಣ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ದಿಕ್ಕು ದಿಕ್ಕಿನಲ್ಲೂ ಕತ್ತಲೆ ಕವಿದಿದೆ, ಪರಿತಾಪವು ದೇಹವನ್ನು ಆವರಿಸಿದೆ, ಮನಸ್ಸು ಮರುಗಿದೆ, ಧೈರ್ಯವು ಕಳವಳಿಸುತ್ತಿದೆ, ಚೂಪಾದ ಬಾಣವು ಮೈಯಲ್ಲಿ ಮುರಿದಂತಾಗಿ ಉಸಿರಾಟವು ಕಷ್ಟಕರವಾಗುತ್ತಿದೆ, ಕೃಷ್ಣಾ ನನ್ನನ್ನು ಆಯಾಸಗೊಳಿಸಬೇಡ, ನಿನಗೆ ತಿಳಿದಿದ್ದರೆ ಹೇಳು ಎಂದು ಅರ್ಜುನನು ದೈನ್ಯದಿಂದ ಪ್ರಾರ್ಥಿಸಿದನು.

ಅರ್ಥ:
ದೆಸೆ: ದಿಕ್ಕು; ನೋಡು: ವೀಕ್ಷಿಸು; ಕತ್ತಲೆ: ಅಂಧಕಾರ; ಮಸಗು: ಹರಡು; ಕೆರಳು; ತಿಕ್ಕು; ಪರಿತಾಪ: ದುಃಖ; ತನು: ದೇಹ; ಮುಸುಕು: ಹೊದಿಕೆ; ಮನ: ಮನಸ್ಸು; ಮರುಗು: ತಳಮಳ; ಕಳವಳ: ಗೊಂದಲ; ಧೈರ್ಯ: ಕೆಚ್ಚು, ದಿಟ್ಟತನ; ಮಸೆ: ಚೂಪು, ಹರಿತವಾದ; ಸರಳು: ಬಾಣ; ಒಡಲು: ದೇಹ; ಮುರಿ: ಸೀಳು; ಉಸುರು: ಪ್ರಾಣ, ಶ್ವಾಸ; ಉಬ್ಬಸ: ಮೇಲುಸಿರು, ಕಷ್ಟ; ಬಲ್ಲಡೆ: ತಿಳಿದ; ಬೆಸ: ಕೆಲಸ; ಮುರಹರ: ಕೃಷ್ಣ; ಬಳಲಿಸು: ಆಯಾಸ; ಹೇಳು: ತಿಳಿಸು;

ಪದವಿಂಗಡಣೆ:
ದೆಸೆದೆಸೆಯ +ನೋಡಿದರೆ +ಕತ್ತಲೆ
ಮಸಗುವುದು +ಪರಿತಾಪ +ತನುವನು
ಮುಸುಕುವುದು +ಮನ +ಮರುಗುವುದು +ಕಳವಳಿಸುವುದು +ಧೈರ್ಯ
ಮಸೆದ +ಸರಳ್+ಒಡಲೊಳಗೆ+ ಮುರಿದವೊಲ್
ಉಸುರಿಗ್+ಉಬ್ಬಸವಾಯ್ತು +ಬಲ್ಲಡೆ
ಬೆಸಸು +ಮುರಹರ +ಹಿರಿದು +ಬಳಲಿಸಬೇಡ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ -ಮಸೆದ ಸರಳೊಡಲೊಳಗೆ ಮುರಿದವೊಲುಸುರಿಗುಬ್ಬಸವಾಯ್ತು
(೨) ಮ ಕಾರದ ತ್ರಿವಳಿ ಪದ – ಮುಸುಕುವುದು ಮನ ಮರುಗುವುದು

ಪದ್ಯ ೧: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದನು?

ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ (ಭೀಷ್ಮ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಭೀಷ್ಮರಲ್ಲಿ ಬಂದು, ಜೀಯಾ ಎಲ್ಲಾ ಸೇನಾನಾಯಕರು ಮೋರೆಗಳಿಗೆ ಮುಸುಕು ಹಾಕಿಕೊಂಡುದನ್ನು ನೋಡಿದಿರಾ? ಯುದ್ಧಕ್ಕೆ ಹೊರಡುವ ಮೊದಲು ಅವರು ಹೊಗಳಿಸಿಕೊಂಡ ಬಿರುದುಗಳ ಆರ್ಭಟವನ್ನು ಕೇಳಿದ್ದಿರಲ್ಲವೇ? ಜಠರ ಪರಾಯಣ ಪರಿಣತರಾದ ಇವರ ಪಲಾಯನದ ಹೆಬ್ಬೆಳಸನ್ನು ನೋಡಿರಿ ಇಂಥವರನ್ನು ಕಳಿಸಿ ನೀವು ಕ್ಷತ್ರಿಯ ಧರ್ಮವನ್ನು ಕಾಪಾಡಿದಿರಲ್ಲವೇ ಎಂದು ಭೀಷ್ಮನಿಗೆ ಹೇಳಲು, ಭೀಷ್ಮನು ಹೀಗೆ ಉತ್ತರಿಸಿದನು.

ಅರ್ಥ:
ಜೀಯ: ಒಡೆಯ; ಚಿತ್ತೈಸು: ಆಲಿಸು; ನಾಯಕ: ಒಡೆಯ; ಮೋರೆ: ಮುಖ, ಆನನ; ಮುಸುಕು: ಹೊದಿಕೆ; ಆಯತ: ವಿಶಾಲವಾದ; ಹೊತ್ತು: ಸಮಯ; ಮುನ್ನ: ಮೊದಲು; ಬಿರು: ಬಿರುಸು, ಕಠೋರ; ಉಬ್ಬಟೆ: ಅತಿಶಯ, ಹಿರಿಮೆ; ಕಾಯಿ: ರಕ್ಷಿಸು; ಜಠರ: ಹೊಟ್ಟೆ; ಪರಾಯಣ: ಪೂರ್ಣವಾದುದು, ತಲ್ಲೀನವಾದ; ಪರಿಣತೆ: ಚಾತುರ್ಯ; ಪಲಾಯನ: ಓಡುವಿಕೆ, ಪರಾರಿ; ಹೆಬ್ಬೆಳಸು: ಸಮೃದ್ಧ ಫಸಲು; ನೋಡು: ವೀಕ್ಷಿಸು;

ಪದವಿಂಗಡಣೆ:
ಜೀಯ +ಚಿತ್ತೈಸಿದರೆ+ ಸೇನಾ
ನಾಯಕರ +ಮೋರೆಗಳ +ಮುಸುಕುಗಳ್
ಆಯತವನ್+ಈ+ ಹೊತ್ತು +ಮುನ್ನಿನ +ಬಿರುದಿನ್+ಉಬ್ಬಟೆಯ
ಕಾಯಿದಿರೆ +ಧರ್ಮವನು +ಜಠರ+ ಪ
ರಾಯಣರ+ ಪರಿಣತೆಯಲಾದ +ಪ
ಲಾಯನದ +ಹೆಬ್ಬೆಳಸ+ ನೋಡ್+ಎನೆ+ ಭೀಷ್ಮನ್+ಇಂತೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪರಾಯಣರ ಪರಿಣತೆಯಲಾದ ಪಲಾಯನದ

ಪದ್ಯ ೩೩: ಅರ್ಜುನನೇಕೆ ಕೋಪಗೊಂಡ?

ಒಗ್ಗೊಡೆದು ರಿಪುಸೇನೆ ಸರಿದುದು
ತೆಗ್ಗಿತುಬ್ಬಾಳುಗಳ ನುಡಿ ಮನ
ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು
ಲಗ್ಗೆವರೆಗಳಿಗಮಮ ಮೌನದ
ಸುಗ್ಗಿಯಾಯಿತು ಬಿರುದ ಬೈಚಿಡು
ತಗ್ಗಲೆಯರೊಳಸರಿಯೆ ಕಂಡನು ಪಾರ್ಥ ಖತಿಗೊಂಡ (ಭೀಷ್ಮ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸಾಲೋಡೆದು ಪಾಂಡವ ಸೈನ್ಯ ಕೆದರಿತು, ಉಬ್ಬಿ ಉಬ್ಬಿ ಮಾತಾಡುವ ವೀರರ ಮನಸ್ಸುಗಳು ಕುಸಿದವು, ಮಾಂಡಲೀಕರು ತಲೆಯ ಮೇಲೆ ಮುಸುಕನ್ನೆಳೆದುಕೊಂಡರು. ರಣವಾದ್ಯಗಳು ಮೌನವನ್ನು ಹಿಡಿದವು, ತಮ್ಮ ಬಿರುದಿನ ಬಾವುಟಗಳನ್ನು ಮಡಿಸಿದ ವೀರರು ಹಿಂದಕ್ಕೋಡಿದರು. ಇದನ್ನು ನೋಡಿ ಅರ್ಜುನನು ಕೆರಳಿದನು.

ಅರ್ಥ:
ಒಗ್ಗು: ಗುಂಪು; ಒಡೆದು: ಮುರಿದು; ರಿಪು: ವೈರಿ; ಸೇನೆ: ಸೈನ್ಯ; ಸರಿ: ಹೋಗು, ಗಮಿಸು; ತೆಗ್ಗು: ಕಡಿಮೆಯಾಗು; ಉಬ್ಬಾಳು: ಪರಾಕ್ರಮಿ; ನುಡಿ: ಮಾತು; ಮನ: ಮನಸ್ಸು; ನೆಗ್ಗು: ಕುಗ್ಗು, ಕುಸಿ; ಮಂಡಳಿಕ: ಮಾಂಡಳೀಕರು, ಸಾಮಂತ ರಾಜ; ತಲೆ: ಶಿರ; ಮುಸುಕು: ಹೊದಿಕೆ; ಪಸರಿಸು: ಹರಡು; ಲಗ್ಗೆ: ಮುತ್ತಿಗೆ; ಮೌನ: ಶಬ್ದವಿಲ್ಲದ, ನೀರವತೆ; ಸುಗ್ಗಿ: ಸಂಭ್ರಮ; ಬಿರುದು: ಗೌರವ ಸೂಚಕ ಪದ; ಬೈಚಿಡು: ಬಚ್ಚಿಡು; ತಗ್ಗು: ಕಡಿಮೆಯಾಗು, ಬಾಗು; ಒಳಸರಿ: ಹಿಂದೆ ಸರಿ; ಕಂಡು: ನೋಡು; ಖತಿ: ಕೋಪ; ಅಮಮ: ಅಬ್ಬಬ್ಬ;

ಪದವಿಂಗಡಣೆ:
ಒಗ್ಗೊಡೆದು +ರಿಪುಸೇನೆ +ಸರಿದುದು
ತೆಗ್ಗಿತ್+ಉಬ್ಬಾಳುಗಳ ನುಡಿ +ಮನ
ನೆಗ್ಗಿದವು +ಮಂಡಳಿಕರಿಗೆ+ ತಲೆ+ಮುಸುಕು +ಪಸರಿಸಿತು
ಲಗ್ಗೆವ್+ಅರೆಗಳಿರ್+ಅಮಮ +ಮೌನದ
ಸುಗ್ಗಿಯಾಯಿತು +ಬಿರುದ +ಬೈಚಿಡು
ತಗ್ಗಲೆಯರ್+ಒಳಸರಿಯೆ +ಕಂಡನು +ಪಾರ್ಥ +ಖತಿಗೊಂಡ

ಅಚ್ಚರಿ:
(೧) ಪರಾಕ್ರಮಿಗಳು ಪರಾಭವಗೊಂಡರು ಎನ್ನುವ ಪರಿ – ತೆಗ್ಗಿತುಬ್ಬಾಳುಗಳ ನುಡಿ ಮನ ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು

ಪದ್ಯ ೩೩: ವಿರಾಟನ ದುಃಖಕ್ಕೆ ಕಾರಣವೇನು?

ಎರಗಿದನು ತಲೆ ಬಿರಿಯಲಾ ಮು
ಕ್ಕುರುಕಿ ಶೋಣಿತ ಧಾರೆ ಬಾಯಿಂ
ದೊರತೆಯಿಡೆ ಮೈಮರೆದು ತುಂಬುರ ಕಳನ ಮಧ್ಯದಲಿ
ಒರಗಿದನು ಕಂಡುಳಿದ ಮಲ್ಲರು
ಧುರಕೆ ಮಿಸುಕದೆ ಮುಸುಕುದಲೆಯಲಿ
ಸರಿವವರ ನೃಪಕಂಡು ದುಗುಡವ ಹೊತ್ತು ಬೆರಗಾದ (ವಿರಾಟ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ತುಂಬುರನ ತಲೆ ಬಿರಿದು ಹೋಯಿತು, ಬಾಯಿಂದ ರಕ್ತದ ಧಾರೆ ಒಸರಿತು, ಅವನು ಕುಸ್ತಿಯ ಕಣದ ಮಧ್ಯದಲ್ಲಿ ಬಿದ್ದು ಬಿಟ್ಟನು. ಉಳಿದ ಜಟ್ತಿಗಳು ಮುಸುಕೆಳೆದುಕೊಂಡು ಯುದ್ಧಕ್ಕೆ ಬಾರದೆ ಹೊರಟು ಹೋದರು. ವಿರಾಟನು ದುಃಖದಿಂದ ಬೆರಗಾದನು.

ಅರ್ಥ:
ಎರಗು: ಬಾಗು; ತಲೆ: ಶಿರ; ಬಿರಿ: ಬಿರುಕು, ಸೀಳು; ಮುಕ್ಕುರು: ಕವಿ; ಶೋಣಿತ: ರಕ್ತ; ಧಾರೆ: ಪ್ರವಾಹ; ಬಾಯಿ: ಮುಖದ ಅವಯವ; ಮೈಮರೆ: ನೆನಪಿನಿಂದ ದೂರ ಮಾಡು; ಕಳ: ರಣರಂಗ; ಮಧ್ಯ: ನಡುವೆ; ಒರಗು: ಮಲಗು, ಕೆಳಕ್ಕೆ ಬಾಗು; ಕಂಡು: ನೋಡು; ಉಳಿದ: ಮಿಕ್ಕ; ಮಲ್ಲ: ಜಟ್ಟಿ; ಧುರ: ಯುದ್ಧ, ಕಾಳಗ; ಮಿಸುಕು: ಅಲುಗಾಟ; ಮುಸುಕು: ಹೊದಿಕೆ; ಅಲೆ: ತೆರೆ; ಸರಿ: ಸಮಾನ, ಸದೃಶ; ನೃಪ: ರಾಜ; ದುಗುಡ: ದುಃಖ; ಹೊತ್ತು: ಉಂಟಾಗು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಎರಗಿದನು +ತಲೆ +ಬಿರಿಯಲಾ +ಮು
ಕ್ಕುರುಕಿ +ಶೋಣಿತ+ ಧಾರೆ+ ಬಾಯಿಂದ್
ಒರತೆಯಿಡೆ +ಮೈಮರೆದು +ತುಂಬುರ+ ಕಳನ+ ಮಧ್ಯದಲಿ
ಒರಗಿದನು +ಕಂಡ್+ಉಳಿದ +ಮಲ್ಲರು
ಧುರಕೆ+ ಮಿಸುಕದೆ+ ಮುಸುಕುದ್+ಅಲೆಯಲಿ
ಸರಿವವರ+ ನೃಪ+ಕಂಡು +ದುಗುಡವ +ಹೊತ್ತು +ಬೆರಗಾದ

ಅಚ್ಚರಿ:
(೧) ಯುದ್ಧದ ಪರಿ – ಎರಗಿದನು ತಲೆ ಬಿರಿಯಲಾ ಮುಕ್ಕುರುಕಿ ಶೋಣಿತ ಧಾರೆ ಬಾಯಿಂ
ದೊರತೆಯಿಡೆ ಮೈಮರೆದು ತುಂಬುರ ಕಳನ ಮಧ್ಯದಲಿ

ಪದ್ಯ ೧೮: ರಾಜರು ಯಾವುದರ ಮರೆಯಲ್ಲಿ ಅವಿತುಕೊಂಡರು?

ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ (ಕರ್ಣ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಆ ರಾತ್ರಿ ದುರ್ಯೋಧನನ ಆಸ್ಥಾನಕ್ಕೆ ಬಂದವರು ತಮ್ಮ ಆಭರಣಗಳನ್ನು ತೆಗೆದಿಟ್ಟಿದ್ದರು. ಕೈಯಲ್ಲಿ ಕತ್ತಿಯನ್ನು ಹಿಡಿದಿರಲಿಲ್ಲ. ದುಃಖದ ಮುಸುಕು ಅವರ ಮುಖಗಳ ಮೇಲಿತ್ತು. ವಿಸ್ಮಯದಿಂದ ಕಣ್ಣುಗಳನ್ನು ಬಿಡುತ್ತಿದ್ದರು. ದೊರೆಯ ಇದಿರಿನಲ್ಲಿ ಕುಳಿತುಕೊಳ್ಳದೆ ದೀವಿಗೆಗಳ ಮರೆಯಲ್ಲಿ ಅವಿತುಕೊಂಡಿದ್ದರು.

ಅರ್ಥ:
ತೊಡರು: ಸಂಬಂಧ, ಸಂಕೋಲೆ; ತೆಗೆ: ಈಚೆಗೆ ತರು, ಹೊರತರು; ಕೈ: ಕರ; ಆಯ್ದವ: ಆಯುಧ, ಶಸ್ತ್ರ; ಜಡಿ: ಗರ್ಜಿಸು; ಹೊತ್ತ: ತೋರಿದ; ದುಗುಡ: ದುಃಖ; ನಿಡು: ದೊಡ್ಡದಾದ, ದೀರ್ಘ; ಮುಸುಕು: ಹೊದ್ದಿಕೆ; ಬಿಗಿದ: ಆವರಿಸಿದ; ಬೆರಗು: ಆಶ್ಚರ್ಯ; ಬಿಟ್ಟ: ತೋರಿದ; ಕಣ್ಣು: ನಯನ; ಒಡೆಯ: ರಾಜ; ಇದಿರು: ಎದುರು; ಕುಳ್ಳೀರು: ಆಸೀನನಾಗು; ಕೆಲ: ಮಿಕ್ಕ; ಕಡೆ: ಕೊನೆ, ಪಕ್ಕ; ಕೈದೀವಿಗೆ: ಸೊಡರು, ದೀಪಿಕೆ; ಮರೆ: ಹಿಂಭಾಗ, ಹಿಂಬದಿ; ಮಿಡುಕು: ಅಲುಗಾಟ, ಚಲನೆ; ರಾಯ: ರಾಜ; ಓಲಗ: ದರ್ಬಾರು; ಪರಿವಾರ: ಸಂಬಂಧಿಕರು;

ಪದವಿಂಗಡಣೆ:
ತೊಡರ +ತೆಗೆದರು +ಕೈಯಡ್+ಆಯ್ದವ
ಜಡಿಯಲಮ್ಮರು +ಹೊತ್ತ +ದುಗುಡದ
ನಿಡು +ಮುಸುಕುಗಳ +ಬಿಗಿದ +ಬೆರಗಿನ +ಬಿಟ್ಟ +ಕಣ್ಣುಗಳ
ಒಡೆಯನ್+ಇದಿರಲಿ +ಕುಳ್ಳಿರದೆ +ಕೆಲ
ಕಡೆಯ +ಕೈದೀವಿಗೆಯ +ಮರೆಯಲಿ
ಮಿಡುಕದಿರ್ದುದು+ ರಾಯನ್+ಓಲಗದೊಳಗೆ+ ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕುಳ್ಳಿರದೆ ಕೆಲಕಡೆಯ ಕೈದೀವಿಗೆಯ
(೨) ದುರ್ಯೋಧನನ ಮೇಲಿನ ಅಂಜಿಕೆಯನ್ನು ತೋರುವ ಸಾಲು – ಒಡೆಯನಿದಿರಲಿ ಕುಳ್ಳಿರದೆ ಕೆಲ ಕಡೆಯ ಕೈದೀವಿಗೆಯ ಮರೆಯಲಿ ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ

ಪದ್ಯ ೩೯: ಇಂದ್ರಾದಿಗಳ ಯುದ್ಧದ ಪರಿ ಹೇಗಿತ್ತು?

ಮಸಗಿತಮರವ್ರಾತವಭ್ರವ
ಮುಸುಕಿದವು ಝಲ್ಲರಿಗಳಿಂದ್ರನ
ವಿಸಸನಕೆ ಮೆಚ್ಚಿಸುವೆ ವಸುಗಳನೆನುತ ತಮತಮಗೆ
ಮುಸುಕಿದರು ಮೃಗರಾಜ ಸಿಂಹದ
ಮುಸುಕನುಗಿವಂದದಲಿ ಬಾಣ
ಪ್ರಸರವನು ಹರಹಿದರು ಮುಂದೆ ಧನಂಜಯಾಚ್ಯುತರ (ಆದಿ ಪರ್ವ, ೨೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ದೇವತಾ ಸೈನ್ಯವು ಯುದ್ಧಕ್ಕೆ ಕೆರಳಿ ನಿಂತಿತು, ಆಕಾಶವನ್ನು ಝಲ್ಲರಿಗಳು ಮುಸುಕಿದವು, ಇಂದ್ರನ ಪರ ಯುದ್ಧಮಾಡಲು ವಸುಗಳನ್ನು ಒಪ್ಪಿಸುತ್ತೇವೆ ಎನುತ, ಸಿಂಹದ ಮುಸುಕನ್ನು ತೆಗೆಯುವಂತೆ ಕೃಷ್ಣಾರ್ಜುನರ ಮೇಲೆ ಬಾಣಗಳನ್ನು ಬಿಟ್ಟರು.

ಅರ್ಥ:
ಮಸಗು:ಕೆರಳು; ಅಮರ: ದೇವತೆ; ವ್ರಾತ: ಗುಂಪು; ಮುಸುಕು:ಹೊದಿಕೆ;ಅಭ್ರ: ಮೋಡ, ಆಕಾಶ; ಝಲ್ಲರಿ: ಹಿತ್ತಾಳೆಯ ದೊಡ್ಡ ತಾಳ; ಇಂದ್ರ: ಶಕ್ರ; ವಿಸಸ:ಸಂಹಾರ, ಯುದ್ಧ; ಮೆಚ್ಚಿಸು: ಇಷ್ಟ; ವಸು:ದೇವತೆಗಳ ಒಂದು ವರ್ಗ; ಮೃಗರಾಜ: ಸಿಂಹ; ಉಗಿ: ಹೊರಹಾಕು; ಬಾಣ: ಅಂಬು; ಪ್ರಸರ:ಹರಡುವುದು, ವಿಸ್ತಾರ; ಹರಹು:ವಿಸ್ತಾರ; ಧನಂಜಯ: ಅರ್ಜುನ; ಅಚ್ಯುತ: ಕೃಷ್ಣ;

ಪದವಿಂಗಡಣೆ:
ಮಸಗಿತ್+ಅಮರ+ವ್ರಾತವ್+ಅಭ್ರವ
ಮುಸುಕಿದವು+ ಝಲ್ಲರಿಗಳ್+ಇಂದ್ರನ
ವಿಸಸನಕೆ+ ಮೆಚ್ಚಿಸುವೆ+ ವಸುಗಳನ್+ಎನುತ +ತಮತಮಗೆ
ಮುಸುಕಿದರು+ ಮೃಗರಾಜ+ ಸಿಂಹದ
ಮುಸುಕನ್+ಉಗಿ+ವಂದದಲಿ+ ಬಾಣ
ಪ್ರಸರವನು+ ಹರಹಿದರು +ಮುಂದೆ +ಧನಂಜಯ+ಅಚ್ಯುತರ

ಅಚ್ಚರಿ:
(೧) ಮುಸುಕು – ೨, ೪, ೫ ಸಾಲಿನ ಮೊದಲ ಪದ
(೨) ವಿಸಸನ ತಮತಮಗೆ – ಜೋಡಿ ಅಕ್ಷರಗಳ ಬಳಕೆ
(೩) ಮೃಗರಾಜ ಸಿಂಹ – ಸಮನಾರ್ಥಕ ಪದಗಳ ಬಳಕೆ

ಪದ್ಯ ೪೨: ಅರ್ಜುನನನ್ನು ಕೊಲ್ಲಲು ಬಲರಾಮ ಯಾರ ಮೇಲೆ ಆಣೆ ಮಾಡಿದನು?

ಮುಸುಕಿದನು ನಾರಾಚದಲಿ ನಿ
ಪ್ಪಸರದಲಿ ಹಲಧರನ ಸೇನೆಯ
ಕುಸುರಿದರಿದನು ಕೊಂದನಗಣಿತ ಬಲವನಾ ಪಾರ್ಥ
ಎಸೆವನೇ ಸಂನ್ಯಾಸಿ ಮಾಡಿದ
ಹುಸಿಯುಪನ್ಯಾಸಕ್ಕೆ ಕೊಯ್ವೆನು
ರಸನೆಯನು ದೇವಕಿಯ ಮೇಲಾಣೆನುತ ಗರ್ಜಿಸಿದ (ಆದಿ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಬಾಣಗಳ ಹೊದಿಕೆಯಿಂದ ಬಹಳಷ್ಟು ಬಲರಾಮನ ಸೈನಿಕರನ್ನು ಕೊಚ್ಚಿಹಾಕಿದನು, ಇದಕ್ಕೆ ಕೋಪಗೊಂಡ ಬಲರಾಮ, ಈ ಸಂನ್ಯಾಸಿಗೆ ಇಂತಹ ಪರಾಕ್ರಮವೆ? ಇವನು ಮಾಡಿದ ಸುಳ್ಳಿನ ಉಪನ್ಯಾಸಕ್ಕೆ ಮರುಳಾದೆ, ಇಂತಹ ಹುಸಿಯನ್ನಾಡಿದ ನಾಲಿಗೆಯನ್ನು ತಾಯಿ ದೇವಕಿಯ ಮೇಲಾಣೆ ಕೊಯ್ಯುತ್ತೇನೆ ಎಂದು ಗರ್ಜಿಸಿದನು.

ಅರ್ಥ:
ಮುಸುಕು: ಹೊದಿಕೆ; ನಾರಾಚ: ಬಾಣ;ನಿಪ್ಪಸರ:ಅತಿಶಯ, ಹೆಚ್ಚಳ; ಹಲಧರ: ಬಲರಾಮ; ಸೇನೆ: ಸೈನ್ಯ; ಕುಸುರು:ಕೊಚ್ಚು, ಚೂರುಮಾಡು; ಕೊಂದನು: ಸಾಯಿಸಿದನು; ಅಗಣಿತ: ಬಹಳ; ಬಲವ: ಸೈನಿಕರು; ಎಸೆ: ಬಿಸಾಡು, ಬಿಡು; ಸಂನ್ಯಾಸಿ: ಋಷಿ, ಯೋಗಿ; ಹುಸಿ: ಸುಳ್ಳು; ಉಪನ್ಯಾಸ:ಬೋಧನೆ; ಕೊಯ್ವೆನು: ಸೀಳು; ರಸನೆ:ನಾಲಿಗೆ, ಜಿಹ್ವೆ; ಆಣೆ: ಪ್ರತಿಜ್ಞೆ; ಗರ್ಜಿಸು: ಕೂಗು;

ಪದವಿಂಗಡಣೆ:
ಮುಸುಕಿದನು +ನಾರಾಚದಲಿ+ ನಿ
ಪ್ಪಸರದಲಿ +ಹಲಧರನ+ ಸೇನೆಯ
ಕುಸುರಿದ್+ಅರಿದನು +ಕೊಂದನ್+ಅಗಣಿತ+ ಬಲವನಾ +ಪಾರ್ಥ
ಎಸೆವನೇ +ಸಂನ್ಯಾಸಿ +ಮಾಡಿದ
ಹುಸಿ +ಉಪನ್ಯಾಸಕ್ಕೆ +ಕೊಯ್ವೆನು
ರಸನೆಯನು +ದೇವಕಿಯ +ಮೇಲಾಣ್+ಎನುತ +ಗರ್ಜಿಸಿದ

ಅಚ್ಚರಿ:
(೧) ಮುಸುಕು, ಕುಸುರು, ಅರಿದನು, ಕೊಯ್ವೆನು – ಕೊಚ್ಚು, ಕೊಲ್ಲು ಅರ್ಥ ಕೊಡುವ ಪದ
(೨) ಸೇನೆ, ಬಲವನು – ಸೈನಿಕರನ್ನು ಸೂಚಿಸುವ ಪದ