ಪದ್ಯ ೫೪: ಮುನಿವರ್ಯರು ಯಾರಿಗೆ ಕಾಣಿಸಿಕೊಂಡರು?

ವರಮುನೀಶ್ವರರವನಿಯಲಿ ಮೂ
ವರಿಗೆ ಗೋಚರವಾದರಿತ್ತಲು
ಮುರವಿರೋಧಿಗೆ ನರಗೆ ಕುರುಸೇನಾಧಿನಾಥಂಗೆ
ಅರಿಯರುಳಿದವರೀತನಿಂ ಸ
ತ್ಕರಿಸಿಕೊಂಡರು ನುಡಿದರಾ ಮುನಿ
ವರರು ಕಡಿದರು ಕೌರವಾನ್ವಯ ಕಲ್ಪಭೂರುಹವ (ದ್ರೋಣ ಪರ್ವ, ೧೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ರಣಭೂಮಿಯಲ್ಲಿದವರಲ್ಲಿ ಮೂವರಿಗೆ ಮಾತ್ರ ಇವರು ಕಾಣಿಸಿಕೊಂಡರು. ಶ್ರೀಕೃಷ್ಣ, ಅರ್ಜುನ ಮತ್ತು ದ್ರೋಣರಿಗೆ. ಉಳಿದವರಿಗೆ ಇದು ತಿಳಿಯದು. ದ್ರೋಣನ ಸತ್ಕಾರವನ್ನು ಸ್ವೀಕರಿಸಿ ಅವನೊಡನೆ ಮಾತಾಡಿ ಅವರು ಕೌರವ ವಂಶವೆಂಬ ಕಲ್ಪವೃಕ್ಷವನ್ನು ಕಡಿದು ಹಾಕಿದರು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ಅವನಿ: ಭೂಮಿ; ಗೋಚರ: ಕಾಣು; ವಿರೋಧಿ: ವೈರಿ; ಮುರವಿರೋಧಿ: ಕೃಷ್ಣ; ನರ: ಅರ್ಜುನ; ಸೇನಾಧಿನಾಥ: ಸೇನಾಪತಿ; ಅರಿ: ತಿಳಿ; ಉಳಿದ: ಮಿಕ್ಕ; ಸತ್ಕರಿಸು: ಗೌರವಿಸು; ನುಡಿ: ಮಾತಾಡು; ಮುನಿ: ಋಷಿ; ಕಡಿ: ಸೀಳು; ಅನ್ವಯ: ವಂಶ; ಕಲ್ಪಭೂರುಹ: ಕಲ್ಪವೃಕ್ಷ;

ಪದವಿಂಗಡಣೆ:
ವರ+ಮುನೀಶ್ವರರ್+ಅವನಿಯಲಿ +ಮೂ
ವರಿಗೆ +ಗೋಚರವಾದರ್+ಇತ್ತಲು
ಮುರವಿರೋಧಿಗೆ +ನರಗೆ +ಕುರು+ಸೇನಾಧಿನಾಥಂಗೆ
ಅರಿಯರ್+ಉಳಿದವರ್+ಈತನಿಂ +ಸ
ತ್ಕರಿಸಿಕೊಂಡರು +ನುಡಿದರಾ +ಮುನಿ
ವರರು +ಕಡಿದರು +ಕೌರವಾನ್ವಯ +ಕಲ್ಪಭೂರುಹವ

ಅಚ್ಚರಿ:
(೧) ಕೃಷ್ಣನನ್ನು ಮುರವಿರೋಧಿ, ದ್ರೋಣರನ್ನು ಕುರುಸೇನಾಧಿನಾಥ ಎಂದು ಕರೆದಿರುವುದು
(೨) ಕ ಕಾರದ ತ್ರಿವಳಿ ಪದ – ಕಡಿದರು ಕೌರವಾನ್ವಯ ಕಲ್ಪಭೂರುಹವ

ಪದ್ಯ ೪: ಧರ್ಮಜನು ಭೀಮನಿಗೆ ಯಾವ ಕಾರ್ಯವನ್ನು ಹೇಳಿದನು?

ಮುರವಿರೋಧಿಯ ಪಾಂಚಜನ್ಯದ
ಪರಮರವ ಪಾರ್ಥನ ಪತಾಕೆಯ
ವರ ಕಪೀಂದ್ರನ ರಭಸವೇ ತುಂಬಿತು ಜಗತ್ರ್ಯವ
ನರನ ಧನುವಿನ ದನಿಯ ಕೇಳೆನು
ಕರಗಿತಂತಃಕರಣವರ್ಜುನ
ನಿರವ ಕಾಣಿಸಿ ಬಾಯೆನಲು ಕೈಕೊಂಡನಾ ಭೀಮ (ದ್ರೋಣ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಪಾಂಚಜನ್ಯದ ಘೋಷ, ಹನುಮಮ್ತನ ಗರ್ಜನೆಗಳೇ ಮೂರುಲೋಕಗಳಲ್ಲಿ ಪ್ರತಿಧ್ವನಿಸಿವೆ. ಅರ್ಜುನನ ಗಾಂಡೀವ ಧನುಸ್ಸಿನ ಠೇಂಕಾರ ಕೇಳಿಬರುತ್ತಿಲ್ಲ. ಮನಸ್ಸು ಕರಗಿಹೋಗಿದೆ. ಅರ್ಜುನನು ಹೇಗಿರುವನೆಂದು ನೋಡಿಬಾ ಎಂದು ಧರ್ಮಜನು ಹೇಳಲು ಭೀಮನು ಒಪ್ಪಿಕೊಂಡನು.

ಅರ್ಥ:
ಮುರವಿರೋಧಿ: ಕೃಷ್ಣ; ವಿರೋಧ: ವೈರತ್ವ; ಪರಮ: ಶ್ರೇಷ್ಠ; ರವ: ಶಬ್ದ; ಪತಾಕೆ: ಬಾವುಟ; ವರ: ಶ್ರೇಷ್ಠ; ಕಪೀಂದ್ರ: ಹನುಮ; ರಭಸ: ವೇಗ; ತುಂಬು: ಅತಿಶಯ; ಜಗ: ಪ್ರಪಂಚ; ತ್ರಯ: ಮೂರು; ನರ: ಅರ್ಜುನ; ಧನು: ಬಿಲ್ಲು; ದನಿ: ಶಬ್ದ; ಕೇಳು: ಆಲಿಸು; ಕರಗು: ಕಡಿಮೆಯಾಗು; ಅಂತಃಕರಣ: ಮನಸ್ಸು, ಚಿತ್ತವೃತ್ತಿ; ಇರವು: ಜೀವಿಸು; ಕಾಣಿಸು: ತೋರು; ಬಾ: ಆಗಮಿಸು;

ಪದವಿಂಗಡಣೆ:
ಮುರವಿರೋಧಿಯ+ ಪಾಂಚಜನ್ಯದ
ಪರಮ+ರವ +ಪಾರ್ಥನ +ಪತಾಕೆಯ
ವರ +ಕಪೀಂದ್ರನ +ರಭಸವೇ +ತುಂಬಿತು +ಜಗತ್ರಯವ
ನರನ +ಧನುವಿನ+ ದನಿಯ +ಕೇಳೆನು
ಕರಗಿತ್+ಅಂತಃಕರಣವ್+ಅರ್ಜುನನ್
ಇರವ +ಕಾಣಿಸಿ+ ಬಾ+ಎನಲು +ಕೈಕೊಂಡನಾ +ಭೀಮ

ಅಚ್ಚರಿ:
(೧) ಕೃಷ್ಣನನ್ನು ಮುರವಿರೋಧಿ ಎಂದು ಕರೆದಿರುವುದು

ಪದ್ಯ ೬: ಸಾರಥಿಯ ಮಹತ್ವವೇನು?

ಬಲುಹಲೇ ಬಳಿಕೇನು ಹಗೆಯ
ಗ್ಗಳಿಕೆ ಮೆರೆಯದೆ ಮುರವಿರೋಧಿಯ
ಬಲುಹ ಹೇಳಾ ಪಾರ್ಥನೆಂಬವನಾವ ಮಾನಿಸನು
ಬಲುಹು ಸಾರಥಿಯಿಂದ ರಿಪುಗಳ
ಗೆಲವು ಸಾರಥಿಯಿಂದ ಸಾರಥಿ
ಯೊಲಿದಡೇನೇನಾಗದೆಂದನು ಭೂಪತಿಗೆ ಕರ್ಣ (ಕರ್ಣ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿದ ಸೇನಾಧಿಪತಿ ಕರ್ಣನು, ಅವರ ಬಲ ಪರಾಕ್ರಮಗಳು ಇಂದು ಹೆಚ್ಚಾಗಿದ್ದುದ್ದು ನಿಜ, ವೈರಿಗಳ ಪ್ರಾಬಲ್ಯ ಹೆಚ್ಚದೇನು? ಅರ್ಜುನನು ಒಬ್ಬ ಮಹಾವೀರನೋ? ಅವನ ಬಲವಿರುವುದು ಸಾರಥಿಯಾದ ಶ್ರೀಕೃಷ್ಣನಿಂದ. ರಥಿಕನ ಸತ್ತ್ವ, ಸಾರಥಿಯಿಂದ ಬರುತ್ತದೆ. ರಥಿಕನು ಗೆಲ್ಲುವುದು ಸಾರಥಿಯಿಂದ. ಸಾರಥಿ ಒಲಿದರೆ ಏನಾಗುವುದಿಲ್ಲ ವೆಂದು ಸಾರಥಿಯ ಮಹತ್ತ್ವವನ್ನು ಕರ್ಣನು ತಿಳಿಸಿದನು.

ಅರ್ಥ:
ಬಲುಹು: ಬಲ, ಪರಾಕ್ರಮ; ಬಳಿಕ: ನಂತರ; ಹಗೆ: ವೈರ; ಅಗ್ಗಳಿಕೆ: ಹೆಚ್ಚಳ, ಶ್ರೇಷ್ಠತೆ; ಮೆರೆ: ಬೀಗು, ಖ್ಯಾತಿ; ಮುರವಿರೋಧಿ: ಮುರ ಎಂಬ ರಾಕ್ಷಸನ ವೈರಿ (ಕೃಷ್ಣ); ಹೇಳು: ತಿಳಿಸು; ಪಾರ್ಥ: ಅರ್ಜುನ; ಮಾನಿಸ: ಮನುಷ್ಯ; ಸಾರಥಿ: ರಥವನ್ನು ಓಡಿಸುವವ; ರಿಪು: ವೈರಿ; ಗೆಲವು: ಜಯ; ಒಲಿ: ಬಯಸು, ಅಪೇಕ್ಷಿಸು; ಭೂಪತಿ: ರಾಜ;

ಪದವಿಂಗಡಣೆ:
ಬಲುಹಲೇ+ ಬಳಿಕೇನು +ಹಗೆಯ್
ಅಗ್ಗಳಿಕೆ+ ಮೆರೆಯದೆ +ಮುರವಿರೋಧಿಯ
ಬಲುಹ +ಹೇಳಾ +ಪಾರ್ಥನೆಂಬವನಾವ+ ಮಾನಿಸನು
ಬಲುಹು+ ಸಾರಥಿಯಿಂದ +ರಿಪುಗಳ
ಗೆಲವು +ಸಾರಥಿಯಿಂದ +ಸಾರಥಿ
ಯೊಲಿದಡ್+ಏನೇನಾಗದ್+ಎಂದನು +ಭೂಪತಿಗೆ+ ಕರ್ಣ

ಅಚ್ಚರಿ:
(೧) ಕೃಷ್ಣನನ್ನು ಮುರವಿರೋಧಿ ಎಂದು ಕರೆದಿರುವುದು
(೨) ಸಾರಥಿಯಿಂದ – ೪, ೫ ಸಾಲಿನ ೨ನೇ ಪದ
(೩) ಬಲುಹು – ೧, ೪ ಸಾಲಿನ ಮೊದಲ ಪದ
(೪) ರಿಪು, ಹಗೆ – ಸಾಮ್ಯಾರ್ಥಪದಗಳು