ಪದ್ಯ ೩೪: ಅರ್ಜುನನು ಮಹಾಸ್ತ್ರವನ್ನು ಎಲ್ಲಿ ಪಠಿಸಿದನು?

ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಿಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ಸಾತ್ಯಕಿ ಭೀಮರನ್ನು ಕರೆದು ದೊರೆಯನ್ನು ರಕ್ಷಿಸಲು ನಿಲಿಸಿದನು. ಕೈಕೆಯ ಚೈದ್ಯ ಸೃಂಜಯರ ಸೈನ್ಯಗಳನ್ನು ಶತ್ರು ಸೈನ್ಯವನ್ನೆದುರಿಸಲು ಕಳಿಸಿದನು. ಅರ್ಜುನನು ಸೈನ್ಯದಿಂದ ಐದು ನೂರು ಬಿಲ್ಲುಗಳ ದೂರ ಹೋಗಿ ಮಹಾಸ್ತ್ರ ಮಂತ್ರವನ್ನು ಜಪಿಸಿದನು.

ಅರ್ಥ:
ಕರೆದು: ಬರೆಮಾಡು; ನೃಪ: ರಾಜ; ವರ: ಶ್ರೇಷ್ಠ; ಸುಯ್ದಾನ: ರಕ್ಷಣೆ; ನಿಲಿಸು: ಸ್ಥಿತವಾಗಿರು; ಅರಿ: ವೈರಿ; ಬಲ; ಸೈನ್ಯ; ನೂಕು: ತಳ್ಳು; ಮುರಮಥನ: ಕೃಷ್ಣ; ಒಡಗೂಡು: ಜೊತೆ; ಮೋಹರ: ಯುದ್ಧ; ಅಂತರ: ದೂರ; ತೊಲಗು: ಹೋಗು; ಅಸ್ತ್ರ: ಶಸ್ತ್ರ, ಆಯುಧ; ಜಪಿಸು: ಪಠಿಸು, ಮಂತ್ರಿಸು;

ಪದವಿಂಗಡಣೆ:
ಕರೆದು +ಸಾತ್ಯಕಿ +ಭೀಮನನು +ನೃಪ
ವರನ +ಸುಯ್ದಾನದಲಿ +ನಿಲಿಸಿದನ್
ಅರಿಬಲಕೆ +ನೂಕಿದನು +ಕೈಕೆಯ +ಚೈದ್ಯ +ಸೃಂಜಯರ
ಮುರಮಥನನ್+ಒಡಗೂಡಿ +ನಿಜ +ಮೋ
ಹರವನಂದ್+ಐನೂರು +ಬಿಲ್ಲಂ
ತರಕೆ+ ತೊಲಗಿ +ಮಹಾಸ್ತ್ರಮಂತ್ರವ +ಜಪಿಸಿದನು +ಪಾರ್ಥ

ಪದ್ಯ ೪: ಅರ್ಜುನನ ಬಳಿಗೆ ಕೃಷ್ಣನು ಏಕೆ ಬಂದನು?

ಇರುಳಿನದ್ಭುತರವವನಾಲಿಸಿ
ಮುರಮಥನನೀ ಫಲುಗುಣನ ಸಂ
ಗರ ಜಯೋದ್ಧತಮಂತ್ರವೆಂದನು ದಾರುಕನ ಕರೆದು
ಹರ ಮಹಾಸೇನಾದಿಗಳು ಗೆಲ
ಲರಿದು ನಾಳಿನ ಬವರವಿನ್ನೀ
ನರನ ಜಯವೆಂತೆನುತ ಚಿಂತಿಸುತಲ್ಲಿಗೈತಂದ (ದ್ರೋಣ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನು ಮಾಡಿದ ಪೂಜೆಯ ರಭಸದ ಸದ್ದನ್ನು ಕೇಳಿದ ಶ್ರೀಕೃಷ್ಣನು ನಾಳಿನ ಯುದ್ಧದಲ್ಲಿ ಜಯವನ್ನು ಬಯಸಿ ಅರ್ಜುನನು ಹೀಗೆ ಮಾದುತ್ತಿದ್ದಾನೆಂದುಕೊಂಡು, ದಾರುಕನನ್ನು ಕರೆದು ನಾಳಿನ ಯುದ್ಧದಲ್ಲಿ ಗೆಲ್ಲಲು ಶಿವ ಷಣ್ಮುಖರಿಗೂ ಅಸಾಧ್ಯ, ಈ ಬಡಪಾಯಿ ಮನುಷ್ಯನಾದ ಅರ್ಜುನನ ಗತಿಯೇನೆಂದು ಚಿಂತಿಸಿ ಅರ್ಜುನನ ಬಳಿಗೆ ಬಂದನು.

ಅರ್ಥ:
ಇರುಳು: ರಾತ್ರಿ; ಅದ್ಭುತ: ಆಶ್ಚರ್ಯ; ರವ: ಶಬ್ದ; ಆಲಿಸು: ಕೇಳು; ಮುರಮಥನ: ಕೃಷ್ಣ; ಸಂಗರ: ಯುದ್ಧ; ಜಯ: ಗೆಲುವು; ಉದ್ಧತ: ಉದ್ರೇಕಗೊಂಡ; ಮಂತ್ರ: ದೇವತಾ ಸ್ತುತಿ; ಕರೆ: ಬರೆಮಾಡು; ಹರ: ಈಶ್ವರ; ಮಹಾಸೇನಾ: ಷಣ್ಮುಖ; ಆದಿ: ಮುಂತಾದ; ಗೆಲುವು: ಜಯ; ಅರಿ: ತಿಳಿ; ನಾಳೆ: ಮರುದಿನ; ಬವರ: ಯುದ್ಧ; ನರ: ಅರ್ಜುನ; ಜಯ: ಗೆಲುವು; ಚಿಂತಿಸು: ಯೋಚಿಸು; ಐತರು: ಬಂದು ಸೇರು;

ಪದವಿಂಗಡಣೆ:
ಇರುಳಿನ್+ಅದ್ಭುತ+ರವವನ್+ಆಲಿಸಿ
ಮುರಮಥನನ್+ಈ+ ಫಲುಗುಣನ +ಸಂ
ಗರ +ಜಯ+ಉದ್ಧತ+ಮಂತ್ರವೆಂದನು +ದಾರುಕನ+ ಕರೆದು
ಹರ +ಮಹಾಸೇನಾದಿಗಳು +ಗೆಲಲ್
ಅರಿದು +ನಾಳಿನ +ಬವರವ್+ಇನ್ನೀ
ನರನ +ಜಯವೆಂತೆನುತ +ಚಿಂತಿಸುತ್+ಅಲ್ಲಿಗ್+ಐತಂದ

ಅಚ್ಚರಿ:
(೧) ಭಗವಂತನು ರಕ್ಷಿಸಲು ಬರುವನೆಂದು ಹೇಳುವ ಪರಿ – ನಾಳಿನ ಬವರವಿನ್ನೀನರನ ಜಯವೆಂತೆನುತ ಚಿಂತಿಸುತಲ್ಲಿಗೈತಂದ
(೨) ಇರುಳಿನದ್ಭುತರವವನಾಲಿಸಿ – ಒಂದೇ ಪದವಾಗಿ ರಚನೆ

ಪದ್ಯ ೩೧: ಶ್ರೀಕೃಷ್ಣನು ಯಾವುದನ್ನು ನೋಡಿದನು?

ಮುರಮಥನ ಕೆಲ್ಲೈಸಿ ನೋಡಿದ
ನುರುಭಯಂಕರ ಚಕ್ರವನು ದು
ರ್ಧರುಷಧಾರಾ ಲೂಯಮಾನ ನಿಶಾತಚಕ್ರವನು
ತರಳ ತರಣೀಚಕ್ರವನು ಸಂ
ಗರ ವಿನಿರ್ಜಿತ ಚಕ್ರವನು ಭಯ
ಭರ ವಿವರ್ಜಿತ ಚಕ್ರವನು ಕಡುಗೋಪ ಕುಡಿಯಿಡಲು (ಭೀಷ್ಮ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೋಪ ವಿಹ್ವಲನಾದ ಶ್ರೀಕೃಷ್ಣನು ಮಹಾಭಯಂಕರವೂ, ಸದಾ ಸಾಣೆಹಿಡಿದು ಚೂಪಾದ ಎದುರಿಸಲಸಾಧ್ಯವಾದ, ಉದಯರವಿಯ ವರ್ಣವನ್ನುಳ್ಳ, ಯುದ್ಧದಲ್ಲಿ ಭಯವನ್ನೇ ಕಾಣದ, ಗೆಲುವನ್ನೇ ಸದಾ ಸಾಧಿಸುವ ಸುದರ್ಶನ ಚಕ್ರವನ್ನು ಮಹಾಕೋಪದಿಂದ ನೋಡಿದನು.

ಅರ್ಥ:
ಮುರಮಥನ: ಕೃಷ್ಣ (ಮುರನೆಂಬ ರಾಕ್ಷಸನನ್ನು ಕೊಂದವ); ಕೆಲ್ಲೈಸು: ತುರಿಸಿಕೊಳ್ಳುವಿಕೆ, ಕೆರೆತ; ನೋಡು: ವೀಕ್ಷಿಸು; ಉರು: ಹೆಚ್ಚಾದ; ಭಯಂಕರ: ಭಯವನ್ನುಂಟು ಮಾಡುವ, ಘೋರವಾದ; ಚಕ್ರ: ಸುದರ್ಶನ ಚಕ್ರ; ದುರ್ಧರ: ತಾಳಲು ಅಸಾಧ್ಯವಾದ; ಉಷಧಾರಾ: ಸೂರ್ಯನ ಉದಯ ವರ್ಣವನ್ನುಳ್ಳ; ಲೂಯಮಾನ: ಕೆದರಿದ ಗರಿಗಳು ಗಾಳಿಯಲ್ಲಿ ಆಡುವಂತೆ; ನಿಶಾತ: ಹರಿತವಾದ; ತರಳ:ಚಂಚಲವಾದ; ತರಣಿ: ಸೂರ್ಯ, ನೇಸರು; ಸಂಗರ: ಯುದ್ಧ; ವಿನಿರ್ಜಿತ: ಸಂಪೂರ್ಣವಾಗಿ ಗೆಲ್ಲಲ್ಪಟ್ಟ; ಭಯ: ಹೆದರಿಕೆ; ಭರ: ಭಾರ, ಹೊರೆ; ವಿವರ್ಜಿತ: ದೂರವಾದುದು; ಕಡುಗೋಪ: ಬಹಳ ಕೋಪ; ಕೋಪ: ಸಿಟ್ಟು, ಮುಳಿ; ಕುಡಿ:ತುದಿ, ಕೊನೆ;

ಪದವಿಂಗಡಣೆ:
ಮುರಮಥನ +ಕೆಲ್ಲೈಸಿ +ನೋಡಿದನ್
ಉರು+ಭಯಂಕರ+ ಚಕ್ರವನು +ದು
ರ್ಧರ್+ಉಷಧಾರಾ +ಲೂಯಮಾನ +ನಿಶಾತ+ಚಕ್ರವನು
ತರಳ+ ತರಣೀ+ಚಕ್ರವನು +ಸಂ
ಗರ +ವಿನಿರ್ಜಿತ +ಚಕ್ರವನು +ಭಯ
ಭರ +ವಿವರ್ಜಿತ +ಚಕ್ರವನು +ಕಡುಗೋಪ +ಕುಡಿಯಿಡಲು

ಅಚ್ಚರಿ:
(೧) ಸುದರ್ಶನ ಚಕ್ರದ ವರ್ಣನೆ – ಉರುಭಯಂಕರ ಚಕ್ರವನು, ದುರ್ಧರುಷಧಾರಾ ಲೂಯಮಾನ ನಿಶಾತಚಕ್ರವನು, ತರಳ ತರಣೀಚಕ್ರವನು, ಸಂಗರ ವಿನಿರ್ಜಿತ ಚಕ್ರವನು, ಭಯಭರ ವಿವರ್ಜಿತ ಚಕ್ರವನು

ಪದ್ಯ ೮: ಅರ್ಜುನನಿಗೆ ಯಾರು ಸೂಚನೆಯನ್ನು ಕೊಟ್ಟರು?

ಅರಿಬಲದ ಲಗ್ಗೆಯನು ನಿಜ ಮೋ
ಹರದ ಮುರಿವಿನ ಸುಗ್ಗಿಯನು ಧರ
ಧುರದ ಪರಬಲದೊಸಗೆಯನು ನಿಜಬಲದ ಹಸುಗೆಯನು
ಮುರಮಥನ ನೋಡಿದನು ಮೂಗಿನ
ಬೆರಳ ತೂಗುವ ಮಕುಟದೊಲಹಿನ
ಬೆರಳ ಕುಡಿಚಮ್ಮಟಿಗೆಯಲಿ ಸೂಚಿಸಿದನರ್ಜುನಗೆ (ಕರ್ಣ ಪರ್ವ, ೧೪ ಸಂಧಿ, ೮ ಪದ್ಯ)

ತಾತ್ಪರ್ಯ:
ಶತ್ರುಗಳ ದಾಳಿಯನ್ನೂ ತಮ್ಮ ಸೈನ್ಯದ ಸೋಲಿನ ಸುಗ್ಗಿಯನ್ನೂ ಕೌರವರಿಗೆ ಭರ್ಜರಿ ಜಯದ ಶುಭವನ್ನೂ ಪಾಂಡವ ಬಲದ ದೈನ್ಯವನ್ನೂ ನೋಡಿ ಶ್ರೀಕೃಷ್ಣನು ಮೂಗಿನ ಮೇಲೆ ಬೆರಳಿಟ್ಟು, ಕಿರೀಟವನ್ನು ಅಲುಗಾಡಿಸಿ, ಕೈಲಿದ್ದ ಬಾರುಕೋಲಿನಿಂದ ತೋರಿಸಿ ಅರ್ಜುನನಿಗೆ ಸೂಚನೆಯನ್ನು ಕೊಟ್ಟನು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಲಗ್ಗೆ: ಆಕ್ರಮಣ, ಮುತ್ತಿಗೆ; ನಿಜ: ದಿಟ; ಮೋಹರ: ಯುದ್ಧ; ಮುರಿ: ಸೀಳು; ಸುಗ್ಗಿ: ಹೆಚ್ಚಳ, ಸಮೃದ್ಧಿ; ಧರಧುರ: ಆಧಿಕ್ಯ, ಅತಿಶಯ; ಪರಬಲ: ವೈರಿಸೈನ್ಯ; ಒಸಗೆ: ಶುಭ, ಮಂಗಳಕಾರ್ಯ, ಕಾಣಿಕೆ; ಹಸುಗೆ: ಹಂಚಿಕೆ, ಪಾಲು; ಮುರಮಥ: ಮುರನನ್ನು ಸೋಲಿಸಿದ (ಕೃಷ್ಣ); ನೋಡು: ವೀಕ್ಷಿಸು; ಮೂಗು: ನಾಸಿಕ; ಬೆರಳ: ಅಂಗುಲಿ; ತೂಗು: ಒಲೆದಾಟ; ಮಕುಟ: ಕಿರೀಟ; ಚಮ್ಮಟಿಗೆ: ಬಾರುಕೋಲು; ಸೂಚಿಸು: ತೋರಿಸು;

ಪದವಿಂಗಡಣೆ:
ಅರಿಬಲದ +ಲಗ್ಗೆಯನು +ನಿಜ +ಮೋ
ಹರದ +ಮುರಿವಿನ +ಸುಗ್ಗಿಯನು +ಧರ
ಧುರದ +ಪರಬಲದ್+ಒಸಗೆಯನು +ನಿಜಬಲದ +ಹಸುಗೆಯನು
ಮುರಮಥನ +ನೋಡಿದನು +ಮೂಗಿನ
ಬೆರಳ +ತೂಗುವ +ಮಕುಟದೊಲಹಿನ
ಬೆರಳ+ ಕುಡಿ+ಚಮ್ಮಟಿಗೆಯಲಿ +ಸೂಚಿಸಿದನ್+ಅರ್ಜುನಗೆ

ಅಚ್ಚರಿ:
(೧) ಕೃಷ್ಣನ ಭಾವವನ್ನು ಚಿತ್ರಿಸುವ ಸಾಲು – ಮುರಮಥನ ನೋಡಿದನು ಮೂಗಿನ
ಬೆರಳ ತೂಗುವ ಮಕುಟದೊಲಹಿನ ಬೆರಳ ಕುಡಿಚಮ್ಮಟಿಗೆಯಲಿ ಸೂಚಿಸಿದನರ್ಜುನಗೆ
(೨) ಒಸಗೆ, ಹಸುಗೆ – ಪ್ರಾಸ ಪದಗಳು

ಪದ್ಯ ೧: ಕೃಷ್ಣನು ತನ್ನ ಭಕ್ತರನ್ನು ಹೇಗೆ ಕಾಪಾಡುತ್ತಾನೆ?

ಒಲಿದವರನುಜ್ಜೀವಿಸುವ ಬಗೆ
ಬಲುಹು ಮುರಮಥನಂಗೆ ಮುನಿದೊಡೆ
ತಲೆಯ ಬರಹವ ತೊಡೆವನಲ್ಲದೆ ಬಳಿಕ ಸೈರಿಸನು
ನಳಿನನಾಭನು ಭಜಕರಿಗೆ ಬೆಂ
ಬಳಿಯ ಬಿರುದನು ಭೇದದಲಿ ಕುರು
ಕುಲವ ಕೊಂದನು ಕೇಳು ಜನಮೇಜಯ ಮಹೀಪಾಲ (ಉದ್ಯೋಗ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ಯಾರು ಕೃಷ್ಣನಲ್ಲಿ ಅನನ್ಯ ಭಕ್ತಿಯನ್ನು ತೋರುತ್ತಾರೆ ಅವರನ್ನು ಪ್ರಾಣವಿತ್ತು ಬದುಕಿಸಬೇಕೆಂಬ ಸಂಕಲ್ಪವು ಕೃಷ್ಣನಲ್ಲಿ ಅತಿ ಪ್ರಬಲವಾಗಿತ್ತು. ಕೋಪಗೊಂಡರೆ ಹಣೆಬರಹವನ್ನೇ ಅಳಿಸಿಹಾಕಿಯಾದರೂ ಕೊಲ್ಲುವನೇ ಹೊರತು ಸಹಿಸಿಕೊಳ್ಳುವವನಲ್ಲ. ಕಮಲನಾಭನು ಭಕ್ತರ ಬೆನ್ನು ಹಿಂದೆ ನಿಂತು ಕಾಪಾಡುವವನೆಂಬ ಬಿರುದನ್ನು ಪಡೆದಿರುವವನು. ಭೇದೋಪಾಯದಿಂದ ಕೌರವ ಕುಲವನ್ನೇ ನಾಶಮಾಡಿದನು ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ತಿಳಿಸಿದರು.

ಅರ್ಥ:
ಒಲಿ: ಒಪ್ಪು, ಸಮ್ಮತಿಸು; ಉಜ್ಜೀವಿಸು: ಬದುಕುವಂತೆ ಮಾಡು; ಬಗೆ: ರೀತಿ; ಬಲುಹು: ಬಲ, ಶಕ್ತಿ; ಮುರಮಥನ: ಮುರಾಸುರನನ್ನು ಸಂಹಾರಮಾಡಿದ (ಕೃಷ್ಣ); ಮುನಿ: ಕೋಪ; ತಲೆ: ಶಿರ; ಬರಹ: ಬರವಣಿಗೆ; ತೊಡೆ: ಬಳಿ; ಬಳಿಕ: ನಂತರ; ಸೈರಿಸು: ತಾಳು, ಸಹಿಸು; ನಳಿನನಾಭ: ವಿಷ್ಣು; ನಳಿನ: ಕಮಲ; ಭಜಕ: ಆರಾಧಿಸುವ; ಬೆಂಬಳಿ: ಬೆನ್ನ ಹಿಂದೆ ರಕ್ಷಣೆ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಭೇದ: ಮುರಿಯುವುದು; ಕುಲ: ವಂಶ; ಕೊಂದು: ಸಾಯಿಸು; ಮಹೀಪಾಲ: ರಾಜ; ಮಹಿ: ಭೂಮಿ;

ಪದವಿಂಗಡಣೆ:
ಒಲಿದವರನ್+ಉಜ್ಜೀವಿಸುವ +ಬಗೆ
ಬಲುಹು +ಮುರಮಥನಂಗೆ +ಮುನಿದೊಡೆ
ತಲೆಯ +ಬರಹವ+ ತೊಡೆವನಲ್ಲದೆ+ ಬಳಿಕ+ ಸೈರಿಸನು
ನಳಿನನಾಭನು +ಭಜಕರಿಗೆ +ಬೆಂ
ಬಳಿಯ +ಬಿರುದನು+ ಭೇದದಲಿ+ ಕುರು
ಕುಲವ +ಕೊಂದನು +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಭಜಕರಿಗೆ ಬೆಂಬಳಿಯ ಬಿರುದನು ಭೇದದಲಿ
(೨) ಕ ಕಾರದ ಸಾಲು ಪದಗಳು – ಕುರುಕುಲವ ಕೊಂದನು ಕೇಳು
(೩) ಮುರಮಥನ, ನಳಿನನಾಭ – ಕೃಷ್ಣನ ಹೆಸರುಗಳು

ಪದ್ಯ ೨೪: ಕೃಷ್ಣ ವಿದುರನಿಗೆ ಏನು ತಿಳಿಸಲು ಹೇಳಿದ?

ಪರಮ ಪರಿತೋಷದಲಿ ಕೃಷ್ಣನ
ವರಸುಧಾಮಯ ವಚನವನು ಪಂ
ಕರುಹಮುಖಿ ಕೇಳುತ್ತೆ ನೆನೆದಳು ನಯನವಾರಿಯಲಿ
ಮುರಮಥನನಾ ಕುಂತಿಗೆಲ್ಲವ
ನೊರೆದು ವಿದುರನ ಕರೆದು ಕೌರವ
ನರಮನೆಯ ಸಮಯವನು ನೋಡಿದು ತಮಗೆ ಹೇಳೆಂದ (ಉದ್ಯೋಗ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕುಂತಿಯು ಅತ್ಯಂತ ಆನಂದಪರವಶರಾಗಿ ಕೃಷ್ಣನ ಅಮೃತಮಯ ಮಾತನ್ನು ಕೇಳುತ್ತ ಪಾಂಡವರನ್ನು ನೆನೆಯುತ್ತಿದ್ದಂತೆ ಅವಳ ಕಣ್ಣಲ್ಲಿ ನೀರು ತುಂಬಿತು. ಕೃಷ್ಣನು ಕುಂತಿಗೆ ಎಲ್ಲಾ ವಿಚಾರವನ್ನು ತಿಳಿಸಿ ವಿದುರನನ್ನು ಕರೆದು ದುರ್ಯೋಧನನ್ನು ಭೇಟಿಯಾಗಲು ಅವನ್ ಅರಮನೆಯ ಸಮಯವನ್ನು ತಿಳಿಯಲು ಹೇಳಿದ.

ಅರ್ಥ:
ಪರಮ: ಶ್ರೇಷ್ಠ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ, ಅತಿಯಾದ ಆನಂದ; ವರ: ಶ್ರೇಷ್ಠ; ಸುಧ: ಅಮೃತ; ವಚನ: ಮಾತು, ವಾಣಿ; ಪಂಕರುಹ: ಕಮಲ; ಮುಖ: ಆನನ; ಪಂಕರುಹಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು; ಕೇಳು: ಆಲಿಸು; ನೆನೆ: ಜ್ಞಾಪಿಸು; ನಯನ: ಕಣ್ಣು; ವಾರಿ: ನೀರು; ಮುರಮಥ: ಕೃಷ್ಣ; ಒರೆ: ಮಾತು; ಕರೆ: ಬರೆಮಾಡು; ಅರಮನೆ: ಆಲಯ; ಸಮಯ: ಕಾಲ; ನೋಡು: ವೀಕ್ಷಿಸು; ಹೇಳು: ತಿಳಿಸು;

ಪದವಿಂಗಡಣೆ:
ಪರಮ +ಪರಿತೋಷದಲಿ+ ಕೃಷ್ಣನ
ವರಸುಧಾಮಯ +ವಚನವನು +ಪಂ
ಕರುಹಮುಖಿ +ಕೇಳುತ್ತೆ +ನೆನೆದಳು +ನಯನ+ವಾರಿಯಲಿ
ಮುರಮಥನನ್+ಆ+ ಕುಂತಿಗ್+ಎಲ್ಲವನ್
ಒರೆದು +ವಿದುರನ +ಕರೆದು +ಕೌರವನ್
ಅರಮನೆಯ +ಸಮಯವನು +ನೋಡ್+ಇದು +ತಮಗೆ +ಹೇಳೆಂದ

ಅಚ್ಚರಿ:
(೧) ಕಣ್ಣೀರು ಎಂದು ಹೇಳಲು – ನಯನವಾರಿ ಪದದ ಬಳಕೆ
(೨) ಪರಮ, ವರ – ಸಮನಾರ್ಥಕ ಪದ
(೩) ಕೃಷ್ಣ, ಮುರಮಥನ – ಕೃಷ್ಣನಿಗೆ ಬಳಸಿದ ಪದಗಳು
(೪) ಪಂಕರುಹಮುಖಿ, ಕುಂತಿ – ಕುಂತಿಗೆ ಬಳಸಿದ ಪದಗಳು

ಪದ್ಯ ೩೪: ಅರ್ಜುನನು ಕೃಷ್ಣನ ಕೊಡುಗೆಗೆ ಏನು ಹೇಳಿದನು?

ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯ ಸಾಗರವ
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೇ ಸಾಕು ನಮಗೆಂದ (ಉದ್ಯೋಗ ಪರ್ವ, ೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣಾ, ಕೌರವನು ಮಹಾ ಸಿರಿವಂತ, ಯಾದವ ಸೈನ್ಯವನ್ನು ರಕ್ಷಿಸಬಲ್ಲನು. ನಾವು ಐಶ್ವರ್ಯವಿಲ್ಲದವರು. ಅಡವಿಯ ತಿರುಕರು. ಈ ಮಹಾ ಸೈನ್ಯವನ್ನು ರಕ್ಷಿಸಲಾರೆವು, ನಮಗೆ ನೀನೇ ಸಾಕು ಎಂದು ಕೃಷ್ಣನಲ್ಲಿ ಕೇಳಿಕೊಂಡ.

ಅರ್ಥ:
ಮಥನ: ಕೊಲೆ, ವಧೆ; ಚಿತ್ತೈಸು: ಗಮನವಿಟ್ಟು ಕೇಳು; ಅರಸ: ರಾಜ; ಅತಿ: ತುಂಬ; ಸಿರಿವಂತ: ಐಶ್ವರ್ಯ, ಸಾಹುಕಾರ; ಸಂತರಿಸು:ನಿರ್ವಹಿಸು, ನಿಭಾಯಿಸು; ಬಹಳ: ತುಂಬ; ಸೈನ್ಯ: ಸೇನೆ; ಸಾಗರ: ಜಲಧಿ; ಧರೆ: ಭೂಮಿ; ಸಂಪದ:ಐಶ್ವರ್ಯ, ಸಂಪತ್ತು; ಅಡವಿ: ಕಾಡು; ತಿರುಕ:ಭಿಕ್ಷುಕ; ಇನಿಬ: ಇಬ್ಬರು; ಸಲೆ:ಚೆನ್ನಾಗಿ, ಲೇಸಾಗಿ; ಸಾಕು:ಆಗಬಹುದು, ಅಗತ್ಯ ಪೂರೈಸಿತು;

ಪದವಿಂಗಡಣೆ:
ಮುರಮಥನ +ಚಿತ್ತೈಸು +ಕೌರವರ್
ಅರಸನ್+ಅತಿ +ಸಿರಿವಂತನ್+ಇದ +ಸಂ
ತರಿಸಲ್+ಆಪನು +ಬಹಳ +ಯಾದವ +ಸೈನ್ಯ + ಸಾಗರವ
ಧರೆಯ +ಸಂಪದವಿಲ್ಲದ್+ಅಡವಿಯ
ತಿರುಕರ್+ಆವ್+ಇನಿಬರನು +ಸಲೆ +ಸಂ
ತರಿಸಲ್+ಆಪೆವೆ +ಕೃಷ್ಣ +ನೀನೇ +ಸಾಕು +ನಮಗೆಂದ

ಅಚ್ಚರಿ:
(೧) ಸಿರಿವಂತನ್, ಸಂತರಿಸಲ್, ಸಂಪದ – ‘ಸ’ ಕಾರದ ಪದಗಳು
(೨) ಮುರಮಥನ, ಕೃಷ್ಣ – ಕೃಷ್ಣನನ್ನು ಕರೆದಿರುವ ಪದಗಳು

ಪದ್ಯ ೧೨೨: ಶ್ರೀಕೃಷ್ಣನು ಭೀಮನಿಗೆ ಯಾವ ರೀತಿ ಸನ್ನೆ ಮಾಡಿದನು?

ಮುರಮಥನನಿದನರಿದು ನಿಜಕರ
ವೆರಡ ಪಲ್ಲಟವಾಗಿ ಸಂಧಿಸ
ಲರಿವಿದಾರಣ ಭೀಮ ನೋಡುತ ಮರಳಿ ಮಾಗಧನ
ಎರಡು ಸೀಳನು ಮಾಡಿ ಹೊಯ್ದು
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನೆಂಬೆನುನ್ನತ ಬಾಹುಸತ್ವದಲಿ (ಸಭಾ ಪರ್ವ, ೨ ಸಂಧಿ, ೧೨೨ ಪದ್ಯ)

ತಾತ್ಪರ್ಯ:
ಜರಾಸಂಧನ ದೇಹದ ಈ ವಿಚಿತ್ರವನ್ನರಿತ ಕೃಷ್ಣನು, ತನ್ನ ಎರಡು ಕೈಗಳನ್ನು ತಿರುವು ಮುರುವಾಗಿ ಸೇರಿಸಿದನು, ಈ ಸನ್ನೆಯನ್ನರಿತ ಭೀಮನು ಜರಾಸಂಧನನ್ನು ಸೀಳಿ ತಿರುವುಮುರುವಾಗಿ ಅವನ್ನು ಸೇರಿಸಿ ತನ್ನ ಬಾಹುಸತ್ವದಿಂದ ಅವನ್ನು ತಲೆಯ ಮೇಲೆ ತಿರುಗಿಸಿದನು.

ಅರ್ಥ:
ಮುರಮಥನ: ಕೃಷ್ಣ; ಅರಿ:ತಿಳಿ; ನಿಜ: ತನ್ನ; ಕರ: ಕೈ, ಹಸ್ತ; ಪಲ್ಲಟ: ಅವ್ಯವಸ್ಥೆ, ಬದಲಾವಣೆ; ಸಂಧಿಸು: ಸೇರಿಸು; ವಿದಾರಣ: ಸೀಳುವಿಕೆ, ಕೊಲ್ಲುವಿಕೆ; ಹೊಯ್ದು: ಬಿಸಾಕಿ; ಉಬ್ಬರ: ಜೋರು; ತಿರುಗಿಸು: ಸುತ್ತಾಡಿಸು; ಬಾಹು: ಭುಜ; ಸತ್ವ: ಸಾರ, ಸಾಮರ್ಥ್ಯ; ಉನ್ನತ: ಎತ್ತರ;

ಪದವಿಂಗಡಣೆ:
ಮುರಮಥನನ್+ಇದನ್+ಅರಿದು +ನಿಜಕರ
ವೆರಡ +ಪಲ್ಲಟವಾಗಿ +ಸಂಧಿಸಲ್
ಅರಿ+ವಿದಾರಣ +ಭೀಮ +ನೋಡುತ +ಮರಳಿ +ಮಾಗಧನ
ಎರಡು +ಸೀಳನು +ಮಾಡಿ +ಹೊಯ್ದು
ಬ್ಬರಿಸಿ +ಪಲ್ಲಟವಾಗಿ +ಸೇರಿಸಿ
ತಿರುಗಿಸಿದನ್+ಏನೆಂಬೆನ್+ ಉನ್ನತ +ಬಾಹುಸತ್ವದಲಿ

ಅಚ್ಚರಿ:
(೧) ಪಲ್ಲಟವಾಗಿ – ೨, ೫ ಸಾಲಿನ ೨ನೇ ಪದ