ಪದ್ಯ ೬೫: ಕೃಷ್ಣನು ಯಾರ ಸಾಹಸವನ್ನು ಕೇಳಲು ಇಚ್ಛಿಸಿದನು?

ಬೊಪ್ಪನವರೇ ಯೆಮ್ಮ ದೂರದೆ
ಯಿಪ್ಪವರು ತಾವಲ್ಲ ಸಾಕಿ
ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ
ತಪ್ಪಿಸಿದುದೇನಾಯ್ತು ಪಾರ್ಥನ
ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ (ವಿರಾಟ ಪರ್ವ, ೧೧ ಸಂಧಿ, ೬೫ ಪದ್ಯ)

ತಾತ್ಪರ್ಯ:
ವಸುದೇವನು ಹೀಗೆ ಹೇಳುತ್ತಿರಲು ಶ್ರೀಕೃಷ್ಣನು ನಮ್ಮ ತಂದೆಯವರು ನನ್ನ ಮೇಲೆ ದೂರು ಹೇಳದೆ ಬಿಡುವವರಲ್ಲ. ಯುಧಿಷ್ಠಿರ, ಇಲ್ಲಿ ಬಾ ಅರ್ಜುನನು ಗೋಧನವನ್ನು ಹೇಗೆ ಬಿಡಿಸಿದ, ಏನೇನಾಯಿತು ಹೇಳು ಎಂದು ಕೇಳಿದನು.

ಅರ್ಥ:
ಬೊಪ್ಪ: ತಂದೆ; ದೂರು: ಆರೋಪ ಮಾಡು; ಸಾಕು: ಕೊನೆ; ಮುರರಿಪು: ಕೃಷ್ಣ; ಕರೆ: ಬರೆಮಾಡು; ಅವನಿಪ: ರಾಜ; ಚಪ್ಪರಿಸು: ಸವಿ, ರುಚಿನೋಡು; ತುರು: ಆಕಳು; ದರ್ಪ: ಹೆಮ್ಮೆ, ಗರ್ವ; ಬೆಸ: ಅಪ್ಪಣೆ, ಆದೇಶ; ಮುರಧ್ವಂಸಿ: ಕೃಷ್ಣ;

ಪದವಿಂಗಡಣೆ:
ಬೊಪ್ಪನವರೇ+ ಎಮ್ಮ +ದೂರದೆ
ಯಿಪ್ಪವರು +ತಾವಲ್ಲ+ ಸಾಕಿನ್
ಒಪ್ಪದಲಿ +ಬಾಯೆಂದು +ಮುರರಿಪು+ ಕರೆದನ್+ಅವನಿಪನ
ಚಪ್ಪರಿಸಿ+ ಕೌರವರು+ ತುರುಗಳ
ತಪ್ಪಿಸಿದುದ್+ಏನಾಯ್ತು +ಪಾರ್ಥನ
ದರ್ಪದನುವ್+ಎಂತೆಂದು +ಬೆಸಗೊಂಡನು +ಮುರಧ್ವಂಸಿ

ಅಚ್ಚರಿ:
(೧) ಮುರರಿಪು, ಮುರಧ್ವಂಸಿ – ಕೃಷ್ಣನನ್ನು ಕರೆದ ಪರಿ
(೨) ಕೌರವರನ್ನು ಸೋಲಿಸಿ ಎಂದು ಹೇಳಲು – ಚಪ್ಪರಿಸಿ ಕೌರವರು ತುರುಗಳ ತಪ್ಪಿಸಿದುದೇನಾಯ್ತು

ಪದ್ಯ ೨೭: ದ್ರೌಪದಿಗೆ ಕೃಷ್ಣನು ಏನು ಹೇಳಿದನು?

ಅತ್ತಲಾ ಕೋಳಾಹಳದಲಿರ
ಲಿತ್ತಲಾದುದು ಜೂಜು ನಿಮ್ಮ ವಿ
ಪತ್ತು ಕಂಡುದು ತೆರಹ ತಪ್ಪಿಸಿ ನಮ್ಮ ಸುಳಿವುಗಳ
ಇತ್ತಲಾವಿರೆ ಮೇಣು ದೋರಕಿ
ಯತ್ತಲಿರೆ ನೀವಡವಿಯೊಕ್ಕರೆ
ಹೆತ್ತಳೋ ದೇವಕಿ ಮಗನೆಂದನು ಮುರಧ್ವಂಸಿ (ಅರಣ್ಯ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅತ್ತ ನಾನು ಸಾಲ್ವನೊಡನೆ ಯುದ್ಧದ ಕೋಲಾಹಲದಲ್ಲಿ ಮುಳುಗಿರಲು, ಇತ್ತ ಈ ಜೂಜಿನ ಪ್ರಸಂಗ ನಡೆಯಿತು. ನಿಮ್ಮನ್ನು ನುಂಗಿಹಾಕಲು ವಿಪತ್ತು ಕಾಯುತ್ತಿತ್ತು. ನಾನು ನಿಮ್ಮೊಡನೆ ಇರುವವರೆಗೂ ಅದರ ಆಟ ನಡೆಯಲಿಲ್ಲ. ನಾನು ಅತ್ತಹೋಗಿರುವಾಗ, ವಿಪತ್ತು ನಿಮ್ಮನ್ನಡಸಿತ್ತು. ನಾನು ಇಲ್ಲಿದ್ದಿದ್ದರೆ, ಬೇಡ ದ್ವಾರಕೆಯಲ್ಲಿದ್ದಿದ್ದರೆ ನೀವು ಸೋತು ಅಡವಿಗೆ ಹೋಗುವುದೆಂದರೇನು? ದೇವಕಿ ನನ್ನನ್ನು ಹೆತ್ತುದಕ್ಕೆ ಯಾವ ಸಾಫಲ್ಯ ಎಂದು ಶ್ರೀಕೃಷ್ಣನು ದ್ರೌಪದಿಗೆ ಹೇಳಿದನು.

ಅರ್ಥ:
ಕೋಳಾಹಲ: ಗೊಂದಲ; ಜೂಜು: ದ್ಯೂತ; ವಿಪತ್ತು: ತೊಂದರೆ; ಕಂಡುದು: ನೋಡು; ತೆರಹು: ಬರಿದು, ಖಾಲಿ; ತಪ್ಪಿಸು: ಅಡ್ಡಿಪಡಿಸು, ನೆರವೇರದಂತೆ ಮಾಡು; ಸುಳಿವು: ಗುರುತು, ಕುರುಹು; ಮೇಣ್: ಇನ್ನು, ಮತ್ತು; ಅಡವಿ: ಕಾಡು; ಒಕ್ಕು: ಸೇರು; ಹೆತ್ತು: ಜನ್ಮ ನೀಡು; ಮಗ: ಸುತ; ಮುರಧ್ವಂಸಿ: ಮುರನನ್ನು ಸಂಹಾರಮಾಡಿದವ (ಕೃಷ್ಣ);

ಪದವಿಂಗಡಣೆ:
ಅತ್ತಲಾ+ ಕೋಳಾಹಳದಲ್+ಇರಲ್
ಇತ್ತಲ್+ಆದುದು +ಜೂಜು +ನಿಮ್ಮ +ವಿ
ಪತ್ತು +ಕಂಡುದು +ತೆರಹ+ ತಪ್ಪಿಸಿ+ ನಮ್ಮ +ಸುಳಿವುಗಳ
ಇತ್ತಲ್+ಆವಿರೆ +ಮೇಣು +ದೋರಕಿ
ಯತ್ತಲಿರೆ+ ನೀವ್+ಅಡವಿ+ಯೊಕ್ಕರೆ
ಹೆತ್ತಳೋ +ದೇವಕಿ +ಮಗನೆಂದನು +ಮುರಧ್ವಂಸಿ

ಅಚ್ಚರಿ:
(೧) ಅತ್ತ, ಇತ್ತ – ಪ್ರಾಸ ಪದಗಳು

ಪದ್ಯ ೫೪: ಕಾಲನೇಮಿಯ ಅಂತ್ಯವು ಹೇಗಾಯಿತು?

ರಣದೊಳೋಡಿದ ಸುರನಿಕರ ಘ
ಲ್ಲಣೆಯನಿಕ್ಕಿತು ಹರಿಗೆ ಕರೆ ಹ
ಲ್ಲಣಿಸು ಗರುಡನನೆಂದು ಹೊರವಂಟನು ಮುರಧ್ವಂಸಿ
ಕೆಣಕಿದನು ದಾನವನನಾಗಳೆ
ಹಣಿದವನ ಹೊಯ್ದಮಳ ಚಕ್ರದ
ಗೊಣೆಯದಲಿ ಮೆರೆಸಿದನು ತಲೆಯನು ದಿವಿಜನಗರಿಯಲಿ (ಸಭಾ ಪರ್ವ, ೧೦ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕಾಲನೇಮಿಯೊಡನೆ ಯುದ್ಧ ಮಾಡಿ ಸೋಲನ್ನನುಭವಿಸಿದ ಸುರರು ರಣರಂಗದಿಂದ ಪಲಾಯನ ಮಾಡಿ ಶ್ರೀಹರಿಯ ಬಳಿಗೆ ಬಂದರು. ವಿಷ್ಣುವು ಗರುಡನನ್ನು ಕರೆಯಿರಿ ಎಂದು ಅಜ್ಞಾಪಿಸಿ ಆ ಕೂಡಲೇ ಹೊರಟನು. ಕಾಲನೇಮಿ ರಾಕ್ಷಸನನ್ನು ಕೆಣಕಿ ಅವನನ್ನು ಹೊಡೆದು ಚಕ್ರದಿಂದ ಅವನ ತಲೆಯನ್ನು ಕೊಯ್ದು ಅಲಗಿಗೆ ಅವನ ತಲೆಯನ್ನು ಸಿಕ್ಕಿಸಿ ಸ್ವರ್ಗದಲ್ಲಿ ಅದರ ಮೆರವಣಿಗೆಯನ್ನು ಮಾಡಿಸಿದನು.

ಅರ್ಥ:
ರಣ: ಯುದ್ಧ; ಓಡು: ಧಾವಿಸು; ಸುರ: ದೇವ, ಸ್ವರ್ಗವಾಸಿ; ನಿಕರ: ಗುಂಪು; ಘಲ್ಲಣೆ: ಘಲ್ ಎಂಬ ಶಬ್ದ; ಹರಿ: ವಿಷ್ಣು; ಕರೆ: ಬರೆಮಾಡು; ಹಲ್ಲಣ: ಥಡಿ, ಜೀನು; ಹೊರವಂಟ: ಹೊರಬಂದು; ಮುರಧ್ವಂಸಿ: ಮುರನ ಸಂಹಾರಕ; ಕೆಣಕು: ರೇಗಿಸು, ಪ್ರಚೋದಿಸು; ದಾನವ: ರಾಕ್ಷಸ; ಹಣಿದು: ಬಾಗು, ಮಣಿ, ತೃಪ್ತವಾಗು; ಹೊಯ್ದು: ಹೊಡೆ; ಅಮಳ: ನಿರ್ಮಲ; ಚಕ್ರ:
ವೃತ್ತಾಕಾರದ ಆಯುಧ; ಗೊಣೆ: ಬಿಲ್ಲನ ಹೆದೆ, ಮೌರ್ವಿ; ಮೆರೆಸು: ಹೊಳೆ, ಪ್ರಕಾಶಿಸು; ತಲೆ: ಶಿರ; ದಿವಿಜ: ಸುರರು; ನಗರಿ: ಪಟ್ಟಣ, ಊರು; ದಿವಿಜನಗರಿ: ಸ್ವರ್ಗ;

ಪದವಿಂಗಡಣೆ:
ರಣದೊಳ್+ಓಡಿದ+ ಸುರನಿಕರ+ ಘ
ಲ್ಲಣೆಯನ್+ಇಕ್ಕಿತು +ಹರಿಗೆ +ಕರೆ +ಹ
ಲ್ಲಣಿಸು +ಗರುಡನನ್+ಎಂದು +ಹೊರವಂಟನು +ಮುರಧ್ವಂಸಿ
ಕೆಣಕಿದನು +ದಾನವನನ್+ಆಗಳೆ
ಹಣಿದವನ +ಹೊಯ್ದ್+ಅಮಳ +ಚಕ್ರದ
ಗೊಣೆಯದಲಿ+ ಮೆರೆಸಿದನು +ತಲೆಯನು +ದಿವಿಜನಗರಿಯಲಿ

ಅಚ್ಚರಿ:
(೧) ಘಲ್ಲಣೆ, ಹಲ್ಲಣೆ, ಗೊಣೆ – ಪ್ರಾಸ ಪದ
(೨) ಹರಿ, ಮುರಧ್ವಂಸಿ – ವಿಷ್ಣುವಿನ ಹೆಸರು
(೩) ಕಾಲನೇಮಿಯ ಅಂತ್ಯ – ಹಣಿದವನ ಹೊಯ್ದಮಳ ಚಕ್ರದ ಗೊಣೆಯದಲಿ ಮೆರೆಸಿದನು ತಲೆಯನು

ಪದ್ಯ ೪೧: ಅರ್ಜುನನನ್ನು ಪ್ರೇರೇಪಿಸಲು ಕೃಷ್ಣನು ಯಾವ ಮಾರ್ಗವನ್ನು ಪ್ರಯೋಗಿಸಿದನು?

ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ (ಕರ್ಣ ಪರ್ವ, ೨೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ಅರ್ಜುನನನ್ನು ಜರೆಯಲು ಅರ್ಜುನನು ತಲೆ ತಗ್ಗಿಸಿದನು. ಅವನನ್ನು ಹೊಡೆದೆಳೆದಂತೆ ಕೃಷ್ಣನು ಹಂಗಿಸಿದನು. ಕೃಷ್ಣನ ಮಾತುಗಳು ಾವನನ್ನು ಯುದ್ಧಮಾಡಲು ಪ್ರಚೋದಿಸಿದವು, ಅರ್ಜುನನ ಮಾತುಗಳು ಅದನ್ನು ನಿರಾಕರಿಸಿದವು, ಕೊನೆಗೆ ಕೃಷ್ಣನು ಸಾಮೋಪಾಯದಿಂದ ಅರ್ಜುನನನ್ನು ಒಡಂಬಡಿಸಲು ಯತ್ನಿಸಿದನು.

ಅರ್ಥ:
ಜರೆ: ಬಯ್ಯು; ದನುಜರಿಪು: ರಾಕ್ಷಸರ ವೈರಿ; ತಲೆ: ಶಿರ; ಕಲಿ: ಶೂರ; ಕುತ್ತು: ಹೊಡೆತ, ಪೆಟ್ಟು; ಬರಸೆಳೆ: ಹತ್ತಿರಕ್ಕೆ ಬರುವಂತೆ ಎಳೆ; ಭಂಗಿಸು: ಮುರಿ; ಮುರಧ್ವಂಸಿ: ಕೃಷ್ಣ; ಒತ್ತು: ಒತ್ತಡ ಹತ್ತಿರ; ನುಡಿ: ಮಾತು; ಮಿಗೆ: ಮತ್ತು; ಕೆತ್ತು:ನಡುಕ, ಸ್ಪಂದನ; ವಚನ: ನುಡಿ, ಮಾತು; ಚಿತ್ತ: ಮನಸ್ಸು; ಸಂತೈಸು: ಸಮಾಧಾನಪಡಿಸು; ತಿಳುಹು: ತಿಳಿಸು, ಹೇಳು; ಸಾಮ: ಶಾಂತಗೊಳಿಸುವಿಕೆ, ಕಾರ್ಯ ಸಾಧನೆಯ ಚತುರೋಪಾಯಗಳಲ್ಲಿ ಒಂದು;

ಪದವಿಂಗಡಣೆ:
ಮತ್ತೆ +ಜರೆದನು +ದನುಜರಿಪು +ತಲೆ
ಗುತ್ತಿದನು+ ಕಲಿ +ಪಾರ್ಥನ್+ಆತನ
ಕುತ್ತಿ +ಬರಸೆಳೆದಂತೆ +ಭಂಗಿಸಿದನು +ಮುರಧ್ವಂಸಿ
ಒತ್ತುವವು +ಫಲುಗುಣನ+ ನುಡಿ +ಮಿಗೆ
ಕೆತ್ತುವವು +ಹರಿವಚನವ್+ಆತನ
ಚಿತ್ತವನು +ಸಂತೈಸಿ +ಹರಿ +ತಿಳುಹಿದನು +ಸಾಮದಲಿ

ಅಚ್ಚರಿ:
(೧) ಕುತ್ತು, ಒತ್ತು, ಕೆತ್ತು, – ಪದಗಳ ಬಳಕೆ
(೨) ಕಾರ್ಯಸಾಧನೆಯ ಹಲವು ಮಾರ್ಗಗಳನ್ನು ಉಪಯೋಗಿಸಿದ ಕೃಷ್ಣ
(೩) ದನುಜರಿಪು, ಮುರಧ್ವಂಸಿ, ಹರಿ; ನುಡಿ, ವಚನ – ಸಮನಾರ್ಥಕ ಪದ

ಪದ್ಯ ೨೯: ಕೃಷ್ಣನ ಆಗಮನ ಹೇಗಿತ್ತು?

ಹೊಗಳುತೈತಂದಸುರರಿಪು ಗಜ
ನಗರವನು ಹೊಕ್ಕನು ಸುಯೋಧನ
ನಗಣಿತೈಶ್ವರ್ಯವ ಮಹಾದೇವೆನುತ ನಲಿವಿನಲಿ
ಬಿಗಿದ ಬೀದಿಯ ನಯದ ನೆಲೆಗ
ಟ್ಟುಗಳ ಮಣಿಮಯ ಹೇಮದುಪ್ಪರಿ
ಗೆಗಳ ಕೇರಿಗಳೊಳಗೆ ಬರುತಿರ್ದನು ಮುರಧ್ವಂಸಿ (ಉದ್ಯೋಗ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣನು ಹಸ್ತಿನಾಪುರಕ್ಕೆ ಪ್ರವೇಶಿಸಿದನು. ಅವನು ಬರುತ್ತಿರಲು ಅವನ ಬಿರುದಾವಳಿಗಳನ್ನು ಹೇಳಲಾರಂಭಿಸಿದರು, ಸುಯೋಧನನು ಅವನಿಗೆ ಬಹಳೈಶ್ವರ್ಯದ ನೀಡಲು ಶಿವ ಶಿವ ಎಂದು ಬೆರಗಾಗಿ ಸಂತೋಷಿಸಿದರು, ಭದ್ರತೆಯಲ್ಲಿ ಬಿಗಿಯಾಗಿದ್ದ ಬೀದಿಗಳು ನೋಡಲು ಅಂದವಾಗಿದ್ದ ನೆಲೆಗಟ್ಟುಗಳು, ಚಿನ್ನ ಮತ್ತು ಮಣಿಗಳಿಂದ ಸಿಗಂರಗೊಂಡ ಉಪ್ಪರಿಗೆಗಳನ್ನೊಳಗೊಂಡ ಕೇರಿಯೊಳಗೆ ಕೃಷ್ಣನು ಆಗಮಿಸಿದನು.

ಅರ್ಥ:
ಹೊಗಳು: ಸ್ತುತಿ; ಅಸುರರಿಪು: ರಾಕ್ಷಸರ ವೈರಿ, ಕೃಷ್ಣ; ಗಜನಗರ: ಹಸಿನಾಪುರ; ಹೊಕ್ಕು: ಸೇರು; ಅಗಣಿತ:ಲೆಕ್ಕವಿಲ್ಲದ; ಐಶ್ವರ್ಯ: ಸಂಪತ್ತು, ಸಿರಿ; ನಲಿವು: ಆನಂದಿಸು; ಬಿಗಿ:ಭದ್ರ ಮಾಡು; ಬೀದಿ: ರಸ್ತೆ; ನಯ: ಅಂದ, ಸೊಗಸು; ನೆಲೆಗಟ್ಟು: ಬುನಾದಿ; ಮಣಿಮಯ: ರತ್ನಭರಿತ; ಹೇಮ: ಚಿನ್ನ; ಉಪ್ಪರಿಗೆ: ಮಹಡಿ, ಸೌಧ; ಕೇರಿ: ಬೀದಿ, ಓಣಿ; ಬರುತಿರ್ದನು: ಆಗಮಿಸು; ಧ್ವಂಸಿ: ನಾಶಮಾಡಿದ;

ಪದವಿಂಗಡಣೆ:
ಹೊಗಳುತೈತಂದ್+ಅಸುರರಿಪು +ಗಜ
ನಗರವನು+ ಹೊಕ್ಕನು +ಸುಯೋಧನನ್
ಅಗಣಿತ್+ಐಶ್ವರ್ಯವ +ಮಹಾದೇವೆನುತ+ ನಲಿವಿನಲಿ
ಬಿಗಿದ +ಬೀದಿಯ +ನಯದ +ನೆಲೆಗ
ಟ್ಟುಗಳ+ ಮಣಿಮಯ +ಹೇಮದುಪ್ಪರಿ
ಗೆಗಳ+ ಕೇರಿಗಳೊಳಗೆ+ ಬರುತಿರ್ದನು +ಮುರಧ್ವಂಸಿ

ಅಚ್ಚರಿ:
(೧) ಕೃಷ್ಣನನ್ನು ಅಸುರರಿಪು, ಮುರಧ್ವಂಸಿ ಎಂದು ಕರೆದಿರುವುದು
(೨) ಬೀದಿ, ನೆಲೆಗಟ್ಟು, ಉಪ್ಪರಿ, ಕೇರಿ – ಊರಿನ ವಿವರಣೆಗೆ ಉಪಯೋಗಿಸಿದ ಪದಗಳು