ಪದ್ಯ ೨೧: ರಾಜರು ಯಾವ ಅವಸ್ಥೆಯಲ್ಲಿದ್ದರು?

ತಳಿತ ಮುಸುಕಿನ ಬೆರಲ ಮೂಗಿನ
ನೆಲನ ನೋಟದ ಮೆಯ್ಯ ತೂಕದ
ಝಳದ ಸುಯ್ಲಿನ ಮುಖದ ಮೋನದ ನಸಿದ ನೆನಹುಗಳ
ಕಳಿದ ಕಡುಹಿನ ಬೀತ ಬಿರುದಿನ
ಬಲಿದ ಭಂಗದ ನೃಪತಿಗಳನ
ಗ್ಗಳೆಯ ರವಿಸುತ ಕಂಡು ಹೊಗಳಿದನಾ ಘಟೋತ್ಕಚನ (ದ್ರೋಣ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮುಖಕ್ಕೆ ಹಾಕಿಕೊಂಡು ಮುಸುಕುಗಳ, ಮೂಗಿನ ಮೇಲಿಟ್ಟ ಬೆರಳುಗಳ, ತಲೆತಗ್ಗಿಸಿ ನೆಲವನ್ನೇ ನೋಡುವ ನೋಟಗಳ, ಭಾರೈಸಿದ ಮೈಗಳ, ಕುಗ್ಗಿದ ಪರಾಕ್ರಮದ ತೊರೆದ ಬಿರುದುಗಳ, ಅನುಭವಿಸಿದ ಮಹಾಭಂಗಗಳ ರಾಜರನ್ನು ನೋಡಿ ಕರ್ಣನು ಘಟೋತ್ಕಚನನ್ನು ಹೊಗಳಿದನು.

ಅರ್ಥ:
ತಳಿತ: ಚಿಗುರಿದ; ಮುಸುಕು: ಆವರಿಸು; ಮೂಗು: ನಾಸಿಕ; ನೆಲ: ಭೂಮಿ; ನೋಟ: ದೃಷ್ಟಿ; ಮೆಯ್ಯ: ತನು; ತೂಕ: ಭಾರ; ಝಳ: ಪ್ರಕಾಶ, ಕಾಂತಿ; ಸುಯ್ಲು: ನಿಡಿದಾದ ಉಸಿರು, ನಿಟ್ಟುಸಿರು; ಮುಖ: ಆನನ; ಮೋನ: ಮಾತನಾಡದಿರುವಿಕೆ, ಮೌನ; ನಸಿ: ಹಾಳಾಗು, ನಾಶವಾಗು; ನೆನಹು: ಜ್ಞಾಪಕ, ನೆನಪು; ಕಳಿ: ಕಳೆದುಹೋಗು; ಕಡುಹು: ಸಾಹಸ, ಹುರುಪು; ಬೀತ: ಜರುಗಿದ; ಬಿರುದು: ಗೌರವ ಸೂಚಕ ಪದ; ಬಲಿ: ಗಟ್ಟಿ; ಭಂಗ: ಮೋಸ, ವಂಚನೆ; ನೃಪತಿ: ರಾಜ; ಅಗ್ಗಳೆ: ಶ್ರೇಷ್ಠ; ರವಿಸುತ: ಸೂರ್ಯಪುತ್ರ; ಕಂಡು: ನೋಡು; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ತಳಿತ +ಮುಸುಕಿನ +ಬೆರಳ +ಮೂಗಿನ
ನೆಲನ +ನೋಟದ +ಮೆಯ್ಯ +ತೂಕದ
ಝಳದ +ಸುಯ್ಲಿನ +ಮುಖದ +ಮೋನದ +ನಸಿದ +ನೆನಹುಗಳ
ಕಳಿದ+ ಕಡುಹಿನ+ ಬೀತ +ಬಿರುದಿನ
ಬಲಿದ +ಭಂಗದ +ನೃಪತಿಗಳನ್
ಅಗ್ಗಳೆಯ +ರವಿಸುತ +ಕಂಡು +ಹೊಗಳಿದನಾ +ಘಟೋತ್ಕಚನ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೀತ ಬಿರುದಿನ ಬಲಿದ ಭಂಗದ
(೨) ಒಂದೇ ಅಕ್ಷರದ ಜೋಡಿ ಪದಗಳು – ಮುಖದ ಮೋನದ ನಸಿದ ನೆನಹುಗಳ ಕಳಿದ ಕಡುಹಿನ

ಪದ್ಯ ೧೮: ಅರ್ಜುನನೇಕೆ ಸಂತಸ ಪಟ್ಟನು?

ಭಕುತ ಮುಖ ದರ್ಪಣನು ಬಹ ಸಾ
ತ್ಯಕಿಯ ಕಂಡನು ಭೀಮಸೇನನ
ವಿಕಟ ಸಿಂಹಧ್ವನಿಯನಾಲಿಸಿ ಹಿಗ್ಗಿದನು ಪಾರ್ಥ
ವಿಕಳತನವನು ಮಾದು ಧರ್ಮಜ
ಸುಕರ ಪರಿತೋಷದಲಿರಲು ರಿಪು
ನಿಕರ ಮುರಿದುದು ಪವನಪುತ್ರನ ರಥದ ಖುರಪುಟಕೆ (ದ್ರೋಣ ಪರ್ವ, ೧೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭಕ್ತಮುಖ ದರ್ಪಣನಾದ ಶ್ರೀಕೃಷ್ಣನು ಸಾತ್ಯಕಿಯು ಬರುವುದನ್ನು ಕಂಡನು. ಭೀಮನ ಸಿಂಹನಾದವನ್ನು ಕೇಳಿ ಅರ್ಜುನನು ಹಿಗ್ಗಿದನು. ಧರ್ಮಜನು ಖಿನ್ನತೆಯನ್ನೂ ಅರ್ಜುನನಿಗೆ ಏನಾಗುವುದೋ ಎಂಬ ಭ್ರಮೆಯನ್ನೂ ಬಿಟ್ಟು ಸಂತೋಷಿಸಿದನು. ಭೀಮನ ರಥದ ಕುದುರೆಗಳ ಖುರಪುಟದ ಸದ್ದನ್ನು ಕೇಳಿ ಶತ್ರುಗಳು ಓಡಿದರು.

ಅರ್ಥ:
ಭಕುತ: ಗುರು ಹಿರಿಯರಲ್ಲಿ ಶ್ರದ್ಧೆಯುಳ್ಳವನು; ಮುಖ: ಆನನ; ದರ್ಪಣ: ಮುಕುರ; ಬಹ: ಆಗಮನ; ಕಂಡು:ನೋಡು; ವಿಕಟ: ವಿಕಾರವಾದ; ಸಿಂಹಧ್ವನಿ: ಗರ್ಜನೆ; ಆಲಿಸು: ಕೇಳು; ಹಿಗ್ಗು: ಸಂತಸಪಡು; ವಿಕಳ: ಭ್ರಮೆ, ಭ್ರಾಂತಿ; ಮಾದು: ಬಿಡು; ಸುಕರ: ಸುಲಭವಾದುದು; ಪರಿತೋಷ: ಆಸೆಯಿಲ್ಲದಿರುವಿಕೆ; ರಿಪು: ವೈರಿ; ನಿಕರ: ಗುಂಪು; ಮುರಿ: ಸೀಳು; ಪವನಪುತ್ರ: ವಾಯುಸುತ (ಭೀಮ); ರಥ: ಬಂಡಿ; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು;

ಪದವಿಂಗಡಣೆ:
ಭಕುತ +ಮುಖ +ದರ್ಪಣನು +ಬಹ +ಸಾ
ತ್ಯಕಿಯ +ಕಂಡನು +ಭೀಮಸೇನನ
ವಿಕಟ+ ಸಿಂಹಧ್ವನಿಯನ್+ಆಲಿಸಿ +ಹಿಗ್ಗಿದನು +ಪಾರ್ಥ
ವಿಕಳತನವನು +ಮಾದು +ಧರ್ಮಜ
ಸುಕರ+ ಪರಿತೋಷದಲಿರಲು +ರಿಪು
ನಿಕರ +ಮುರಿದುದು +ಪವನಪುತ್ರನ +ರಥದ +ಖುರಪುಟಕೆ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಭಕುತ ಮುಖ ದರ್ಪಣನು

ಪದ್ಯ ೩೨: ಯಾರು ಜಗತ್ತಿನ ಸಂರಕ್ಷಕರು?

ಒಂದು ಮುಖದಲಿ ಜಗವ ಹೂಡುವ
ನೊಂದು ಮುಖದಲಿ ಜಗವ ಸಲಹುವ
ನೊಂದು ಮುಖದಲಿ ಬೇಳುವನು ನಯನಾಗ್ನಿಯಲಿ ಜಗವ
ಕೊಂದು ಹಗೆಯಲ್ಲೀತ ಸಲಹಿದ
ನೆಂದು ಮೋಹಿತನಲ್ಲ ಪರಮಾ
ನಂದ ನೀ ಹರಿಯಿದಕೆ ಕಾರಣವಿಲ್ಲ ನಿನಗೆಂದ (ಭೀಷ್ಮ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನ ಅಳಲಿಗೆ ಭೀಷ್ಮರು ಉತ್ತರಿಸುತ್ತಾ, ಎಲೈ ಅರ್ಜುನ ಹರಿಯು ಒಂದು ಮುಖದಿಂದ ಬ್ರಹ್ಮನಾಗಿ ಈ ಜಗತ್ತನ್ನು ಸೃಷ್ಟಿಸುತ್ತಾನೆ, ಇನ್ನೊಂದು ಮುಖದಿಂದ ವಿಷ್ಣುವಾಗಿ ಈ ಜಗತ್ತನ್ನು ಕಾಪಾಡುತ್ತಾನೆ, ಮತ್ತೊಂದು ಮುಖದಿಂದ ರುದ್ರನಾಗಿ ತನ್ನ ಹಣೆಗಣ್ಣಿನ ಬೆಂಕಿಯಿಂದ ಈ ಜಗತ್ತನ್ನು ಸಂಹರಿಸುತ್ತಾನೆ. ಕೋಮ್ದರೂ ಇವನು ಶತ್ರುವಲ್ಲ, ಕಾಪಾಡಿದರೂ ಇವನು ಮೋಹಿತನಲ್ಲ. ಇವನು ಪರಮಾನಂದ ಸ್ವರೂಪನು, ಆದುದರಿಂದ ಕೊಲ್ಲುವುದೂ ಸಾಯುವುದೂ ನಿನಗೆ ಸಂಬಂಧಿಸಿದುದಲ್ಲ.

ಅರ್ಥ:
ಮುಖ: ಆನನ; ಜಗ: ಪ್ರಪಂಚ; ಹೂಡು: ಅಣಿಗೊಳಿಸು, ಸಿದ್ಧಗೊಳಿಸು; ಸಲಹು: ಕಾಪಾಡು; ಬೇಳು: ಸುಟ್ಟುಹಾಕು, ನಾಶಪಡಿಸು; ನಯನ: ಕಣ್ಣು; ಅಗ್ನಿ: ಬೆಂಕಿ; ಜಗ: ಪ್ರಪಂಚ; ಕೊಂದು: ಸಾಯಿಸು; ಹಗೆ: ವೈರತ್ವ; ಸಲಹು: ಕಾಪಾಡು; ಮೋಹ: ಆಸೆ; ಆನಂದ: ಸಂತಸ; ಕಾರಣ: ನಿಮಿತ್ತ;

ಪದವಿಂಗಡಣೆ:
ಒಂದು +ಮುಖದಲಿ +ಜಗವ+ ಹೂಡುವನ್
ಒಂದು +ಮುಖದಲಿ +ಜಗವ +ಸಲಹುವನ್
ಒಂದು+ ಮುಖದಲಿ +ಬೇಳುವನು +ನಯನಾಗ್ನಿಯಲಿ +ಜಗವ
ಕೊಂದು +ಹಗೆಯಲ್ಲೀತ+ ಸಲಹಿದನ್
ಎಂದು +ಮೋಹಿತನಲ್ಲ+ ಪರಮಾ
ನಂದನ್ +ಈ +ಹರಿಯಿದಕೆ+ ಕಾರಣವಿಲ್ಲ +ನಿನಗೆಂದ

ಅಚ್ಚರಿ:
(೧) ಒಂದು, ಕೊಂದು, ಎಂದು – ಪ್ರಾಸ ಪದಗಳು
(೨) ಒಂದು ಮುಖದಲಿ – ೧-೩ ಸಾಲಿನ ಮೊದಲ ಪದಗಳು

ಪದ್ಯ ೫: ಯಾವಾಗ ತಾನೇ ದೈವವಾಗುತ್ತಾರೆ ಎಂದು ವಿದುರ ಹೇಳಿದನು?

ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನ ಮುಖ ನಾಲ್ಕು
ತನ್ನ ನೆನಹೆಂತಂತೆ ಕಾರ್ಯವು
ಚಿನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ (ಉದ್ಯೋಗ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ತಾನೊಂದು ಬಗೆದರೆ, ದೈವವೊಂದು ಬಗೆಯುವುದು ಎಂದು ಅರ್ಥೈಸುವ ಪದ್ಯವಿದಾಗಿದೆ. ತಾನು ಆಲೋಚಿಸುವುದೊಂದು, ಆದರೆ ಅದು ನಡೆಯದಿದ್ದರೆ, ದೈವವು ಮೋಸಮಾಡುವುದೆಂದು ಬಗೆಯುವುದು ಎರಡು, ಈ ರೀತಿ ಮನಸ್ಸು ಯೋಚನೆ ಮಾಡುವುದರಿಂದ ಹಲವು ವಿಧವಾಗಿ ದುಃಖಿಸುವುದು ಮೂರನೆಯ ಸ್ಥಿತಿ, ಆದರೆ ನಾವು ಯೋಚಿಸಿದ ಕಾರ್ಯವು ನಾವಂದುಕೊಂಡಂತೆ ಫಲ ನೀಡದಿದ್ದರೆ, ಇದರಲ್ಲಿ ಬೇರೇನನ್ನೋ ದೈವವು ಯೋಚಿಸಿದೆ ಎಂದು ತಿಳಿಯುವುದು ನಾಲ್ಕನೆಯ ಸ್ಥಿತಿ, ಹೀಗೆ ಮಾಡುವ ಕಾರ್ಯದ ನಾಲ್ಕು ಮುಖಗಳು. ತಾನಂದುಕೊಂಡಂತೆ ಎಲ್ಲವೂ ಆದರೆ, ಈ ಲೋಕದಲ್ಲಿ ದೈವ ಎಂದು ಯಾರು ಹೇಳುತ್ತಿದ್ದರು? ತಾನೇ ದೈವವಾಗುತ್ತಿದ್ದರು.

ಅರ್ಥ:
ತನ್ನ: ಪ್ರತಿಯೋರ್ವರ; ಚಿಂತೆ: ಯೋಚನೆ; ದೈವ: ದೇವರು, ಸುರರು; ಅನ್ನ: ಅನ್ಯ, ಬೇರೆ; ಗತ: ನಡೆಯುವಿಕೆ; ಭಾವ:ಅಂತರ್ಗತ ಅರ್ಥ; ಬನ್ನಣೆ:ವರ್ಣನೆ; ಬಗೆ: ರೀತಿ; ಭಿನ್ನ: ಬೇರೆ; ಮುಖ: ಆನನ; ನೆನಹು: ನೆನಪು; ಕಾರ್ಯ: ಕೆಲಸ; ಚಿನ್ನಹಡೆ: ಫಲಿಸಿದರೆ; ಲೋಕ: ಜಗತ್ತು;

ಪದವಿಂಗಡಣೆ:
ತನ್ನ +ಚಿಂತೆಯದ್+ಒಂದು +ದೈವದಗ್
ಅನ್ನಗತಕವದ್+ಎರಡು +ಭಾವದ
ಬನ್ನಣೆಯ+ ಬಗೆ+ ಮೂರು +ದೈವದ +ಭಿನ್ನ +ಮುಖ +ನಾಲ್ಕು
ತನ್ನ +ನೆನಹೆಂತಂತೆ +ಕಾರ್ಯವು
ಚಿನ್ನಹಡೆ+ ಲೋಕಕ್ಕೆ +ತಾ +ಬೇ
ರಿನ್ನು +ದೈವವದೇಕೆ +ತಾನೇ +ದೈವರೂಪೆಂದ

ಅಚ್ಚರಿ:
(೧) ಭಾವದ ಬನ್ನಣೆಯ ಬಗೆ – ಬ ಕಾರದ ಜೋಡಿ ಪದಗಳು
(೨) ನಾಲ್ಕು ರೀತಿಯ ಮನಸ್ಸಿನ ಸ್ಥಿತಿ ಬಗ್ಗೆ ತಿಳಿಸಿರುವ ಪದ್ಯ
(೩) ೪ ಬಾರಿ ದೈವ ಪದದ ಬಳಕೆ

ಪದ್ಯ ೬: ಉತ್ತರನ ಬಳಿ ಬಂದ ಗೋಪಾಲಕನು ಏನು ನಿವೇದಿಸಿದನು?

ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ
ಆಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪ ವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ (ವಿರಾಟ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಗೋಪಾಲಕನು ಉತ್ತರನ ಆಸ್ಥಾನಕ್ಕೆ ಬಂದ. ಮುಖದಲ್ಲಿ ಭಯವು ಆವರಿಸಿದೆ. ಆ ಭೀತಿಯ ತಾಪದಿಂದ ಎದೆ ಹೊಡೆದುಕೊಳ್ಳುತ್ತ್ದಿದೆ; ತುದಿನಾಲಗೆಯಲ್ಲಿ ತೊದಲು ಮಾತು ಬರುತ್ತಿವೆ. ಅಂಗಳು ಒಣಗಿದೆ; ಭಯದಿಂದ ಉತ್ತರನ ಮುಂದೆ ಗೋಪಾಲಕನು ಮೊರೆಯಿಡುತ್ತಿದ್ದಾನೆ.

ಅರ್ಥ:
ಬೆಗಡು:ಭಯ, ಅಂಜಿಕೆ; ಮುಸುಕು: ಆವರಿಸು; ಮುಖ: ಆನನ; ಭೀತಿ: ಭಯ; ಢಗೆ: ಕಾವು, ದಗೆ; ಹೊಯ್ಲು: ಏಟು, ಹೊಡೆತ; ಹೃದಯ: ಎದೆ, ವಕ್ಷ; ತುದಿ: ಅಗ್ರ;ನಾಲಗೆ: ಜಿಹ್ವೆ; ತೊದಳು: ಸ್ವಷ್ಟವಾಗಿ ಮಾತಾಡದಿರುವುದು; ನುಡಿ: ಮಾತು; ಬೆರಗು: ಆಶ್ಚರ್ಯ; ಬರ: ಕ್ಷಾಮ; ಹುಯ್ಯಲು: ಪೆಟ್ಟು, ಹೊಡೆತ; ಬಹಳ: ತುಂಬ; ಓಲಗ: ದರ್ಬಾರು; ಬಂದನು: ಆಗಮಿಸಿದನು; ನೃಪ: ರಾಜ; ಮಗ: ಸುತ; ಕಾಲು: ಪಾದ; ಎರಗು: ನಮಸ್ಕರಿಸು; ದೂರು: ಮೊರೆ, ಅಹವಾಲು; ಕಳವಳ: ಚಿಂತೆ, ಗೊಂದಲ; ತಾಳಿಗೆ: ಗಂಟಲು;

ಪದವಿಂಗಡಣೆ:
ಬೆಗಡು+ ಮುಸುಕಿದ +ಮುಖದ +ಭೀತಿಯ
ಢಗೆಯ +ಹೊಯ್ಲಿನ +ಹೃದಯ +ತುದಿ+ನಾ
ಲಗೆಯ +ತೊದಳಿನ+ ನುಡಿಯ +ಬೆರಗಿನ +ಬರತ +ತಾಳಿಗೆಯ
ಆಗಿವ +ಹುಯ್ಯಲುಗಾರ+ ಬಹಳ
ಓಲಗಕೆ +ಬಂದನು +ನೃಪ +ವಿರಾಟನ
ಮಗನ +ಕಾಲಿಂಗ್+ಎರಗಿದನು +ದೂರಿದನು +ಕಳಕಳವ

ಅಚ್ಚರಿ:
(೧) ಬೆಗಡು, ಭೀತಿ – ಸಮನಾರ್ಥಕ ಪದ
(೨) ಹೆದರಿದ ಮನುಷ್ಯನ ಸ್ಥಿತಿಯನ್ನು ವರ್ಣಿಸುವ ಪದ್ಯ –
ಬೆಗಡು ಮುಸುಕಿದ ಮುಖ; ಭೀತಿಯ ಢಗೆಯ ಹೊಯ್ಲಿನ ಹೃದಯ; ತುದಿನಾಲಿಗೆಯ ತೊದಳಿನ ನುಡಿ; ಬೆರಗಿನ ಬರತ ತಾಳಿಗೆಯ

ಪದ್ಯ ೫೦: ಅಗ್ನಿಯು ಯಾರನ್ನು ಹೇಗೆ ರಮಿಸಿತು?

ಕುರುಳ ತುಂಬಿಯ ತನಿಗೆದರಿ ಮುಖ
ಸರಸಿಜವ ಚುಂಬಿಸಿ ತಮಾಲದ
ತುರುಬಹಿಡಿದಧರ ಪ್ರವಾಳದರಸವ ನೆರೆ ಸವಿದು
ಉರು ಪಯೋಧರ ಬಿಲ್ವವನು ಹೊ
ಯ್ದೊರಸಿ ಕದಳಿಯ ನುಣ್ದೊಡೆಯ ನಿ
ಟ್ಟೊರಸಿ ರಮಿಸಿತು ವನಸಿರಿಯ ಪಿಪ್ಪಲದಳಾಂಗದಲಿ (ಆದಿ ಪರ್ವ, ೨೦ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅಗ್ನಿಯ ಶಾಖ, ಧಗೆ ಇಡೀ ಕಾಡನ್ನು ಆವರಿಸಿಕೊಂಡಾಗ ಹೇಗಿರಬಹುದು, ಆದರೆ ಕವಿಯ ಕಣ್ಣಿಗೆ ಅದು ರಮಿಸುವಂತೆ ಕಾಣುತ್ತದೆ, ಆ ಭಯಾನಕ ದೃಶ್ಯವನ್ನು ಸೌಂದರ್ಯದ ಕಣ್ಣಿನಲ್ಲಿ ನೋಡಿ ಚಿತ್ರಿಸುವ ಕವಿಯ ಚಿತ್ರಣ ಅದ್ಭುತವಾಗಿದೆ. ಅಗ್ನಿಯು ಮುಂಗುರುಳಿನಂತಹ ದುಂಬಿಗಳ ಹಾಗೆ ತನ್ನ ರೆಕ್ಕೆಗಳನ್ನು ಕೆದರಿ ಕಮಲದ ಮುಖವನ್ನು ಚುಂಬಿಸಿ,ಹೊಂಗೆಯ ಮುಡಿಹಿಡಿದು ಅದರ ಚಿಗುರಿನ ರಸವನ್ನು ಸವಿದು, ವಿಶೇಷವಾದ ಸ್ತನಗಳುಲ್ಲ ಬಿಲ್ವಮರವನ್ನು ಹೊಯ್ದು, ಬಾಳೆಯ ಮೃದುವಾದ ತೊಡೆಗಳನ್ನು ಸಂಪೂರ್ಣವಾಗಿ ರಮಿಸಿ, ಬೋರೆಹಣ್ಣಿನ ಎಲೆಗಳನ್ನು ಹಿಡಿದು ಹೊಯ್ದು ಅಗ್ನಿಯು ಆ ವನಸಿರಿಯನ್ನು ರಮಿಸಿತು.

ಅರ್ಥ:
ಕುರುಳು: ಮುಂಗುರುಳು; ತುಂಬಿ: ದುಂಬಿ; ತನಿ:ಚೆನ್ನಾಗಿ ಬೆಳೆದ; ಕೆದರು: ಹರಡು; ಮುಖ: ಆನನ; ಸರಸಿಜ: ಕಮಲ; ಚುಂಬಿಸು: ಮುತ್ತು ಕೊಡು; ತಮಾಲ: ಹೊಂಗೆ; ತುರುಬು:ಮುಡಿ; ಅಧರ: ತುಟಿ; ಪ್ರವಾಳ:ಚಿಗುರು; ರಸ: ಸಾರ; ನೆರೆ:ಹೆಚ್ಚು; ಸವಿ:ರುಚಿ ನೋಡು; ಉರು:ವಿಶೇಷವಾದ; ಪಯೋಧರ: ಮೋಡ, ಸ್ತನ; ಹೊಯ್ದು: ಹೊಡೆದು; ಒರಸು: ನಾಶಮಾಡು; ನುಣ್:ಮೃದು; ತೊಡೆ:ಊರು, ಸೊಂಟದಿಂದ ಮಂಡಿಯವರೆಗಿನ ಭಾಗ; ನಿಟ್ಟೊರಸು: ಒಟ್ಟಾಗಿ ನಾಶಮಾಡು; ವನ: ಕಾಡು; ಸಿರಿ: ಸಂಪತ್ತು; ಪಿಪ್ಪಲ: ಬೋರೆಹಣ್ಣಿನ ಮರ; ಕದಳಿ: ಬಾಳೆ;

ಪದವಿಂಗಡಣೆ:
ಕುರುಳ +ತುಂಬಿಯ +ತನಿಗೆದರಿ+ ಮುಖ
ಸರಸಿಜವ+ ಚುಂಬಿಸಿ +ತಮಾಲದ
ತುರುಬ+ಹಿಡಿದ್+ಅಧರ +ಪ್ರವಾಳದ+ರಸವ+ ನೆರೆ +ಸವಿದು
ಉರು +ಪಯೋಧರ+ ಬಿಲ್ವವನು+ ಹೊ
ಯ್ದೊರಸಿ+ ಕದಳಿಯ +ನುಣ್+ತೊಡೆಯ +ನಿ
ಟ್ಟೊರಸಿ+ ರಮಿಸಿತು +ವನಸಿರಿಯ+ ಪಿಪ್ಪಲದಳಾಂಗದಲಿ

ಅಚ್ಚರಿ:
(೧) ಭಯಂಕರವಾದ ದೃಶ್ಯವನ್ನು ಸೌಂದರ್ಯದ ರೀತಿಯಲ್ಲಿ ವರ್ಣಿಸಿರುವುದು
(೨) ಮುಖ ಚುಂಬಿಸು, ಅಧರ ರಸ ಸವಿದು,ಪಯೋಧರ ಹೊಯ್ದರಸಿ,ನುಣ್ದೊಡೆ, ರಮಿಸು – ಸೌಂದರ್ಯವನ್ನು ಪಸರಿಸುವ ಪದಗಳು

ಪದ್ಯ ೩೭: ಯಾವ ಮುಖಭಾವಗಳನ್ನು ರಾಜನಾದವನು ಪ್ರದರ್ಶಿಸಬಾರದು?

ಹೀನಮುಖ ಬಹುಮುಖ ಪರಾಜ್ಞ್ಮುಖ
ದೀನಮುಖ ವಾಚಾಲಮುಖವ
ಜ್ಞಾನಮುಖವಂತರ್ಮುಖ ಬಹಿರ್ಮುಖದ ಕಾರ್ಯದಲಿ
ಆ ನರೇಂದ್ರನ ವರ್ತನಕೆ ದು
ಸ್ಥಾನವಾಗದೆ ಬಿಡದು ಸಂಶಯ
ವೇನಿದಕೆ ಕುರುರಾಯ ಚಿತ್ತೈಸೆಂದನಾ ಶಕುನಿ (ಆದಿ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ರಾಜನಾದವನು ಗಂಭೀರವಾಗಿರಬೇಕು ಎಂದು ಹಿಂದೆ ಹೇಳಿದ ಪದ್ಯವನ್ನು ಮುಂದುವರೆಸುತ್ತ, ಮುಖಭಾವ ಹೇಗಿರಬೇಕು ಎಂದು ಇಲ್ಲಿ ವರ್ಣಿಸಿದ್ದಾರೆ. ರಾಜನ ಮುಖಭಾವವು ಯಾವಾಗಲು ಈ ಕೆಳಕಂಡ ಮುಖಭಾವಗಳನ್ನು ಪ್ರದರ್ಶಿಸಬಾರದು ಅವು, ಹೀನಮುಖ, ಬಹಳ ಭಾವನೆಗಳನ್ನು ಪ್ರದರ್ಶಿಸುವ ಮುಖ, ಎತ್ತಲೋ ಮುಖಮಾಡಿ ಚಿಂತಿಸುವ ಮುಖಭಾವ, ದೈನ್ಯವನ್ನು ಪ್ರದರ್ಶಿಸುವ ಭಾವ, ತುಂಬ ಮಾತಾಡುವ ಮುಖ, ಅರಿಯದ ಮುಖ, ಅಂತರ್ಮುಖ, ಬಹಿರ್ಮುಖಗಳನ್ನು ತನ್ನ ಕರ್ತವ್ಯದಲ್ಲಿ ಪ್ರದರ್ಶಿಸದ ರಾಜನು ದುಸ್ಥಾನಕ್ಕೆ ಬೀಳುವುದು ಖಚಿತ. ಇದರಲ್ಲಿ ಯಾವ ಸಂಶಯವು ಬೇಡ ಎಂದು ಶಕುನಿ ಹೇಳಿದನು.

ಅರ್ಥ:
ಹೀನ: ಕೆಟ್ಟದ್ದು, ಕಳಪೆ; ಬಹು: ಬಹಳ; ಮುಖ: ವಕ್ತ್ರ, ಆನನ; ಪರಾಜ್ಞ್ಮುಖ: ಹಿಮ್ಮೆಟ್ಟು; ದೀನ: ದೈನ್ಯ; ವಾಚಾಲ: ಅತೀವ ಮಾತಾಡುವ; ಅಜ್ಞಾನ: ತಿಳುವಳಿಕೆ ಇಲ್ಲದ; ಅಂತರ್ಮುಖ: ಒಳಮುಖ; ಬರ್ಹಿ: ಹೊರ; ಕಾರ್ಯ: ಕೆಲಸ; ನರೆಂದ್ರ: ರಾಜ; ವರ್ತನೆ: ನಡತೆ, ನಡವಳಿಕೆ, ರೂಢಿ; ದುಸ್ಥಾನ: ಕೆಳಸ್ಥಿತಿ, ಕೆಳದರ್ಜೆ; ಸಂಶಯ: ಅನುಮಾನ, ಸಂದೇಹ; ರಾಯ: ರಾಜ; ಚಿತ್ತೈಸು: ಮನಸ್ಸಿಟ್ಟು ಆಲಿಸು;

ಪದವಿಂಗಡನೆ:
ಹೀನ+ಮುಖ +ಬಹು+ಮುಖ +ಪರಾಜ್ಞ್+ಮುಖ
ದೀನ+ಮುಖ+ ವಾಚಾಲ+ಮುಖ
ಅಜ್ಞಾನ+ಮುಖವ್+ಅಂತರ್ಮುಖ+ ಬಹಿರ್ಮುಖದ+ ಕಾರ್ಯದಲಿ
ಆ +ನರೇಂದ್ರನ +ವರ್ತನಕೆ+ ದು
ಸ್ಥಾನ+ವಾಗದೆ+ ಬಿಡದು +ಸಂಶಯ
ವೇನಿದಕೆ+ ಕುರುರಾಯ+ ಚಿತ್ತೈಸೆಂದನಾ+ ಶಕುನಿ

ಅಚ್ಚರಿ:
(೧) ೮ ರೀತಿಯ ಮುಖಭಾವನೆಯ ವರ್ಣನೆ
(೨)ಅಂತರ್ಮುಖ, ಬಹಿರ್ಮುಖ – ವಿರುದ್ಧ ಪದಗಳು
(೩) ನರೇಂದ್ರ, ರಾಯ – ರಾಜ ಪದದ ಸಮಾನಾರ್ಥಕ ಪದ