ಪದ್ಯ ೯: ಧರ್ಮಜನ ಮನಸ್ಥಿತಿ ಹೇಗಿತ್ತು?

ಹೊಳೆಹೊಳೆದು ತಂಬುಲದ ರಸದಲಿ
ಮುಳುಗಿ ಮೂಡುವ ಢಗೆಯ ತೊಡೆಹದ
ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ
ಹಿಳಿದ ಛಲದ ವಿಡಾಯಿ ಧರಿಯದ
ತಳಿತ ಭೀತಿಗೆ ಕಾಲ್ವೊಳೆಯಾ
ದಳಿಮನದ ಭೂಪಾಲನಿರವನು ಕಂಡನಾ ಪಾರ್ಥ (ದ್ರೋಣ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ದೇಹಶ್ರಮವನ್ನಾರಿಸಿಕೊಳ್ಳಲು ತಾಂಬೂಲವನ್ನು ಜರೆಯುತ್ತಾ ಅದರ ರಸದಲ್ಲಿ ಸ್ವಲ್ಪ ಸಮಾಧಾನವಾದರೂ ಮೇಲೆದ್ದು ಬರುವ ಆಯಾಸದಿಂದ ನೊಂದ, ನಟನೆಯ ನಗೆಯನ್ನು ಬೀರುವ, ಕಳವಳಗೊಂಡು ಕಣ್ಣುಗಳನ್ನು ತೆರೆದು ಮುಚ್ಚುವ, ಛಲ ಹಿಂಗಿ ಧೈರ್ಯವುಡುಗಿ ಭೀತಿ ತುಂಬಿ ಹರಿಯುತ್ತಿದ್ದ ಚಂಚಲ ಮನಸ್ಸಿನ ಧರ್ಮಜನನ್ನು ಅರ್ಜುನನು ಕಂಡನು.

ಅರ್ಥ:
ಹೊಳೆ: ಪ್ರಕಾಶ; ತಂಬುಲ: ಎಲೆ ಅಡಿಕೆ; ರಸ: ಸಾರ; ಮುಳುಗು: ಮೀಯು, ಕಾಣದಾಗು; ಮೂಡು: ತುಂಬು, ಹುಟ್ಟು; ಢಗೆ: ಕಾವು, ಧಗೆ; ತೊಡಹು: ಸೇರಿಕೆ; ಮೆಲುನಗೆ: ಮಂದಸ್ಮಿತ; ಕಳವಳ: ಗೊಂದಲ; ಮುಕ್ಕುಳಿಸು: ಹೊರಹಾಕು; ಆಲಿ: ಕಣ್ಣು; ಹಿಳಿ: ಹಿಸುಕಿ ರಸವನ್ನು ತೆಗೆ, ಹಿಂಡು; ಛಲ: ನೆಪ, ವ್ಯಾಜ; ವಿಡಾಯಿ: ಶಕ್ತಿ, ಆಡಂಬರ; ಧೈರ್ಯ: ಎದೆಗಾರಿಕೆ, ಕೆಚ್ಚು; ತಳಿತ: ಚಿಗುರು; ಭೀತಿ: ಭಯ; ಕಾಲ: ಸಮ್ಯ; ಅಳಿ: ನಾಶ; ಮನ: ಮನಸ್ಸು; ಭೂಪಾಲ: ರಾಜ; ಕಂಡು: ನೋಡು;

ಪದವಿಂಗಡಣೆ:
ಹೊಳೆಹೊಳೆದು +ತಂಬುಲದ +ರಸದಲಿ
ಮುಳುಗಿ +ಮೂಡುವ +ಢಗೆಯ+ ತೊಡೆಹದ
ಮೆಲುನಗೆಯ +ಕಳವಳವನ್+ಅರೆ+ ಮುಕ್ಕುಳಿಸಿದ್+ಆಲಿಗಳ
ಹಿಳಿದ +ಛಲದ +ವಿಡಾಯಿ +ಧರಿಯದ
ತಳಿತ +ಭೀತಿಗೆ +ಕಾಲವೊಳೆಯಾದ್
ಅಳಿಮನದ +ಭೂಪಾಲನ್+ಇರವನು +ಕಂಡನಾ +ಪಾರ್ಥ

ಅಚ್ಚರಿ:
(೧) ವೈರುಧ್ಯ ಭಾವನೆಗಳನ್ನು ವಿವರಿಸುವ ಪದ್ಯ – ಹೊಳೆಹೊಳೆದು ತಂಬುಲದ ರಸದಲಿ ಮುಳುಗಿ ಮೂಡುವ ಢಗೆಯ ತೊಡೆಹದ ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ

ಪದ್ಯ ೮: ಆನೆಗಳು ಹೇಗೆ ಮಲಗಿದವು?

ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಫೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ (ದ್ರೋಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಮೈಯನ್ನು ಅತ್ತಿತ್ತ ತೂಗಾಡಿ, ಸೊಂಡಿಲನ್ನು ದಾಡೆಗಳಲ್ಲಿಟ್ಟು, ಮೂಗಿನಿಂದ ಫೂತ್ಕಾರ ಮಾಡುತ್ತಾ, ಕಿವಿಗಳು ಜೋಲು ಬಿದ್ದಿರಲು, ಕಣ್ಣುಗಳಲ್ಲಿ ನಿದ್ರಾರಸವನ್ನು ಸೂಸುತ್ತಾ, ಎರಡು ಗಲ್ಲಗಳಲ್ಲೂ ಮದಜಲಕ್ಕೆ ಮುತ್ತಿದ ದುಂಬಿಗಳ ಝೇಂಕಾರ ತುಂಬಿರಲು ಆನೆಗಳು ಸಾಲು ಸಾಲಾಗಿ ಮಲಗಿದವು.

ಅರ್ಥ:
ಒಲೆ: ತೂಗಾಡು; ಒಡಲು: ದೇಹ; ಮುರಿ: ಸೀಳು; ಬರಿ: ಕೇವಲ; ಕೈ: ಹಸ್ತ; ದಾಡೆ: ದವಡೆ, ಒಸಡು; ಫೂತ್ಕೃತಿ: ಆರ್ಭಟ; ಬಲಿ: ಗಟ್ಟಿಯಾಗು; ನಾಸಾಪುಟ: ಮೂಗು; ಜೋಲು: ಕೆಳಕ್ಕೆ ಬೀಳು, ನೇತಾಡು; ಕರ್ಣ: ಕಿವಿ; ಪಲ್ಲವ: ಚಿಗುರು; ಕರ್ಣಪಲ್ಲವ: ಚಿಗುರಿನಂತೆ ಮೃದುವಾದ ಕಿವಿ; ತಳಿತ: ಚಿಗುರು; ನಿದ್ರೆ: ಶಯನ; ರಸ: ಸಾರ; ಮುಕ್ಕುಳಿಸು: ಬಾಯಿ ತೊಳೆದುಕೋ; ಅಕ್ಷಿ: ಕಣ್ಣು; ಗಲ್ಲ: ಕೆನ್ನ; ಉಲಿವು: ಶಬ್ದ; ತುಂಬಿ: ಭ್ರಮರ; ರವ: ಶಬ್ದ; ದಂತಿ: ಆನೆ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಒಲೆದ+ ಒಡಲನು +ಮುರಿದು +ಬರಿಕೈ
ಗಳನು +ದಾಡೆಯೊಳ್+ಇಟ್ಟು +ಫೂತ್ಕೃತಿ
ಬಲಿದ +ನಾಸಾಪುಟದ+ ಜೋಲಿದ +ಕರ್ಣ+ಪಲ್ಲವದ
ತಳಿತ +ನಿದ್ರಾರಸವನ್+ಅರೆ +ಮು
ಕ್ಕುಳಿಸಿದ್+ಅಕ್ಷಿಯೊಳ್+ಎರಡು+ ಗಲ್ಲದಲ್
ಉಲಿವ +ತುಂಬಿಯ +ರವದ +ದಂತಿಗಳ್+ಎಸೆದವ್+ಒಗ್ಗಿನಲಿ

ಅಚ್ಚರಿ:
(೧) ನಾಸಾಪುಟ, ದಾಡೆ, ಒಡಲು, ಕರ್ಣ, ಅಕ್ಷಿ – ದೇಹದ ಅಂಗಗಳನ್ನು ಬಳಸಿದ ಪರಿ

ಪದ್ಯ ೩೩: ಅರ್ಜುನನು ಯಾವ ಭಂಗಿಯಲ್ಲಿ ನಿಂತನು?

ಅಳಲ ಮುಕ್ಕುಳಿಸಿದನು ಮೋಹದ
ಬೆಳವಿಗೆಯ ಗವಸಣಿಸಿದನು ಕಳ
ಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು
ಪ್ರಳಯ ರುದ್ರನ ಕೋಪಶಿಖಿ ವೆ
ಗ್ಗಳಿಸಿತೆನೆ ಕಂಗಳಲಿ ಕಿಡಿಗಳು
ತುಳುಕಿದವು ರೌದ್ರಾನುಭಾವದ ರಸದ ಭಂಗಿಯಲಿ (ದ್ರೋಣ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನು ದುಃಖವನ್ನುಗುಳಿ, ಮೋಹಾತಿರೇಕಕ್ಕೆ ತೆರೆಯನ್ನೆಳೆದನು. ಮಾತು ನಿಂತಿತು. ಕಂಬನಿಗಳನ್ನು ಕಣ್ಣಿನಲ್ಲೇ ಕುಡಿದು ಕೋಪಾಗ್ನಿ ಭುಗಿಲ್ಲನೆ ಪ್ರಜ್ವಲಿಸಿತೋ ಎಂಬಂತೆ ಕಣ್ಣಿನಲ್ಲಿ ಕಿಡಿಗಳನ್ನುಗುಳಿದನು. ರೌದ್ರಾನುಭಾವದ ಭಂಗಿಯಲ್ಲಿ ನಿಂತನು.

ಅರ್ಥ:
ಅಳಲು: ದುಃಖ; ಮುಕ್ಕುಳಿಸು: ಹೊರಹಾಕು; ಮೋಹ:ಭ್ರಾಂತಿ, ಭ್ರಮೆ; ಬೆಳವಿಗೆ: ಏಳಿಗೆ; ಗವಸಣಿಗೆ: ಮುಸುಕು; ಕಳಕಳ: ಗೊಂದಲ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಅಶ್ರು: ಕಣ್ಣೀರು; ಜಲ: ನೀರು; ಕಂಗಳ: ಕಣ್ಣು; ಕುಡಿ: ಪಾನ ಮಾಡು; ಪ್ರಳಯ: ಅಂತ್ಯ; ಕೋಪ: ಕ್ರೋಧ, ಸಿಟ್ಟು; ಶಿಖಿ: ಬೆಂಕಿ; ವೆಗ್ಗಳಿಸು: ಹೆಚ್ಚಾಗು, ಅಧಿಕವಾಗು; ಕಂಗಳು: ಕಣ್ಣು; ಕಿಡಿ: ಬೆಂಕಿ; ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ರೌದ್ರ: ಸಿಟ್ಟು, ರೋಷ; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ರಸ: ಸಾರ; ಭಂಗಿ: ಬಾಗು, ತಿರುವು;

ಪದವಿಂಗಡಣೆ:
ಅಳಲ +ಮುಕ್ಕುಳಿಸಿದನು +ಮೋಹದ
ಬೆಳವಿಗೆಯ +ಗವಸಣಿಸಿದನು +ಕಳ
ಕಳಿಕೆ +ಹಿಂಗಿದುದ್+ಅಶ್ರು +ಜಲವನು +ಕಂಗಳಲಿ +ಕುಡಿದು
ಪ್ರಳಯ +ರುದ್ರನ +ಕೋಪ+ಶಿಖಿ+ ವೆ
ಗ್ಗಳಿಸಿತೆನೆ +ಕಂಗಳಲಿ +ಕಿಡಿಗಳು
ತುಳುಕಿದವು +ರೌದ್ರಾನುಭಾವದ +ರಸದ +ಭಂಗಿಯಲಿ

ಅಚ್ಚರಿ:
(೧) ಅರ್ಜುನನು ಚೇತರಿಸಿಕೊಂಡ ಪರಿ – ಅಳಲ ಮುಕ್ಕುಳಿಸಿದನು ಮೋಹದ ಬೆಳವಿಗೆಯ ಗವಸಣಿಸಿದನು ಕಳಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು

ಪದ್ಯ ೧೫: ಪಾರ್ಥನು ವೀರರಿಗೆ ಏನು ಹೇಳಿದನು?

ಉಕ್ಕಿ ಶೋಕದ ಕಡಲು ಪಾರ್ಥನ
ಮುಕ್ಕುಳಿಸಿತಾ ಶೋಕಶರಧಿಯ
ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
ಮಕ್ಕಳೊಳು ನೋಡಿದನು ಕಂದನ
ನಿಕ್ಕಿದಿರಲಾ ಲೇಸು ಮಾಡಿದಿ
ರೆಕ್ಕತುಳದಾಳುಗಳೆನುತ ಭೂಪತಿಗೆ ಪೊಡವಂಟ (ದ್ರೋಣ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶೋಕದ ಕಡಲು ಉಕ್ಕಿ ಪಾರ್ಥನನ್ನು ಉಗುಳಿತು. ಆ ಶೋಕ ಸಮುದ್ರವನ್ನು ಕೋಪವು ವಡಬಾಗ್ನಿಯಂತೆ ಹೊಕ್ಕು ಹೆಚ್ಚಿತು. ರಾಜಕುಮಾರರಿರುವ ಕಡೆಗೆ ನೋಡಿ, ಅಲ್ಲಿ ಅಭಿಮನ್ಯುವನ್ನು ಕಾಣದೆ, ಮಗನನ್ನ್ ಕೊಂದು ಮಹಾವೀರರಾದ ನೀವು ಒಳಿತನ್ನೇ ಮಾಡಿದಿರಿ ಎಂದು ಹೇಳುತ್ತಾ ಧರ್ಮಜನಿಗೆ ನಮಸ್ಕರಿಸಿದನು.

ಅರ್ಥ:
ಉಕ್ಕು: ಹೊಮ್ಮಿ ಬರು; ಶೋಕ: ದುಃಖ; ಕಡಲು: ಸಾಗರ; ಮುಕ್ಕುಳಿಸು: ಹೊರಹಾಕು; ಶರಧಿ: ಸಾಗರ; ಹೊಕ್ಕು: ಸೇರು; ಬೆಳೆ: ಎತ್ತರವಾಗು; ಕೋಪ: ಸಿಟ್ಟು; ಶಿಖಿ: ಬೆಂಕಿ; ವಡಬಾಗ್ನಿ: ಸಮುದ್ರದೊಳಗಿನ ಬೆಂಕಿ; ಮಕ್ಕಳು: ಸುತರು; ನೋಡು: ವೀಕ್ಷಿಸು; ಕಂದ: ಮಗ; ಇಕ್ಕು: ಬಿಟ್ಟು ಹೋಗು; ಲೇಸು: ಒಳಿತು; ಎಕ್ಕತುಳ: ಮಹಾವೀರ; ಭೂಪತಿ: ರಾಜ; ಪೊಡವಡು: ನಮಸ್ಕರಿಸು;

ಪದವಿಂಗಡಣೆ:
ಉಕ್ಕಿ+ ಶೋಕದ +ಕಡಲು +ಪಾರ್ಥನ
ಮುಕ್ಕುಳಿಸಿತ್+ಆ+ ಶೋಕ+ಶರಧಿಯ
ಹೊಕ್ಕು +ಬೆಳೆದುದು +ಕೋಪ+ಶಿಖಿ+ವಡಬಾಗ್ನಿಯಂದದಲಿ
ಮಕ್ಕಳೊಳು +ನೋಡಿದನು+ ಕಂದನನ್
ಇಕ್ಕಿದಿರಲಾ +ಲೇಸು +ಮಾಡಿದಿರ್
ಎಕ್ಕತುಳದಾಳುಗಳ್+ಎನುತ +ಭೂಪತಿಗೆ+ ಪೊಡವಂಟ

ಅಚ್ಚರಿ:
(೧) ಶೋಕದ ತೀವ್ರತೆಯನ್ನು ವಿವರಿಸುವ ಪರಿ – ಉಕ್ಕಿ ಶೋಕದ ಕಡಲು ಪಾರ್ಥನ ಮುಕ್ಕುಳಿಸಿತಾ; ಶೋಕಶರಧಿಯ ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
(೨) ಕಡಲು, ಶರಧಿ – ಸಮಾನಾರ್ಥಕ ಪದ

ಪದ್ಯ ೩೪: ಯಾವುದು ದುರ್ಯೋಧನನ ಮನಸ್ಸನ್ನು ನಾಶಮಾಡಿತು?

ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕುಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು (ಸಭಾ ಪರ್ವ, ೧೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಆ ಆಲಯದಲ್ಲಿ ಒಂದು ಕಡೆ ಮನಿಗಳ ಸಾಲು ಕಣ್ನನ್ನು ಕುಕ್ಕುತ್ತಿದ್ದವು, ಒಳಕ್ಕೆ ಹೋಗಿ ನೋಡಿದರೆ ಕಣ್ಣುಗುಡ್ಡೆಗಳು ಒಳಕ್ಕೆ ಸರಿದಂತಾಯಿತು. ನಿರ್ಮಲವಾದ ರತ್ನಗಳ ಕಾಂತಿಯಿಂದ ಮನಸ್ಸು ಮೋಹಿಸಿ ದಾರಿತಪ್ಪಿತು. ಅನೇಕ ವಿಧವಾದ ರತ್ನಗಳ ಕಾಂತಿಯು ವಿವೇಕವನ್ನು ನಾಶಮಾಡಿತು ಎಂದು ದುರ್ಯೋಧನನು ವಿವರಿಸಿದನು.

ಅರ್ಥ:
ಹೊಕ್ಕು: ಸೇರಿ; ಸಾಲು: ಆವಳಿ; ಹೊಳೆ: ಪ್ರಕಾಶಿಸು; ಮಣಿ: ಬೆಲೆಬಾಳುವ ರತ್ನ; ಮುಕ್ಕುಳಿಸು: ಹೊರಹಾಕು; ಕಂಗಳು: ಕಣ್ಣು; ನಡೆ: ಚಲಿಸು; ದಿಕ್ಕು: ದಿಶೆ; ನೋಡು: ವೀಕ್ಷಿಸು; ಮುರಿ: ಸೀಳು; ಆಲಿ: ಕಣ್ಣು; ಸರಿ: ಪಕ್ಕಕ್ಕೆ ಹೋಗು; ಉಕ್ಕು: ಹೆಚ್ಚು, ಹೊರಹೊಮ್ಮು; ಅಮಲ: ಸ್ವಚ್ಛ, ನಿರ್ಮಲ; ಚ್ಛವಿ: ಕಾಂತಿ; ಮನ: ಮನಸ್ಸು; ಸಿಕ್ಕಿ: ಬಂಧನ; ಹೊಲಬಳಿ: ದಾರಿ ಕೆಡು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಡೊಕ್ಕರಿಸು: ಗುದ್ದು, ನಾಶಮಾಡು; ಕೆಡಹು: ನಾಶಮಾದು; ಬಹುವಿಧ; ಹಲವಾರು ಬಗೆ; ರತ್ನ: ಮಣಿ; ಕಾಂತಿ: ಪ್ರಕಾಶ;

ಪದವಿಂಗಡಣೆ:
ಹೊಕ್ಕ+ ಸಾಲಲಿ +ಹೊಳೆವ +ಮಣಿರುಚಿ
ಮುಕ್ಕುಳಿಸಿದವು+ ಕಂಗಳನು+ ನಡೆ
ದಿಕ್ಕೆಲನ +ನೋಡಿದರೆ +ಮುರಿದೊಳ+ಸರಿದವ್+ಆಲಿಗಳು
ಉಕ್ಕುವ್+ಅಮಲಚ್ಛವಿಗಳಲಿ+ ಮನ
ಸಿಕ್ಕಿ+ ಹೊಲಬಳಿದುದು +ವಿವೇಕವ
ಡೊಕ್ಕರಿಸಿ+ ಕೆಡಹಿದವು +ಬಹುವಿಧ +ರತ್ನ+ಕಾಂತಿಗಳು

ಅಚ್ಚರಿ:
(೧) ಆಲಿ, ಕಂಗಳು – ಸಮನಾರ್ಥಕ ಪದ
(೨) ಮನಸ್ಸು ಚಂಚಲವಾದುದನ್ನು ಹೇಳುವ ಪರಿ – ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು
(೩) ಮಣಿರುಚಿ – ರುಚಿ ಪದದ ಬಳಕೆ

ಪದ್ಯ ೧೦: ಶಕುನಿಯು ದುರ್ಯೋಧನನಿಗೆ ಏನು ಹೇಳಿದ?

ಹೊಕ್ಕನೀತನು ಕೌರವೇಂದ್ರನ
ನೆಕ್ಕಟಿಯೊಳಿರೆ ಕಂಡು ನುಡಿಸಿದ
ನಕ್ಕಜದ ರುಜೆಯೇನು ಮಾನಸವೋ ಶರೀರಜವೋ
ಮುಕ್ಕುಳಿಸಿ ಕೊಂಡಿರದಿರಾರಿಗೆ
ಸಿಕ್ಕಿದೆಯೋ ಸೀಮಂತಿನಿಯರಿಗೆ
ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟ್ರನಾಣೆಂದ (ಸಭಾ ಪರ್ವ, ೧೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನ ಅರಮನೆಯನ್ನು ಪ್ರವೇಶಿಸಿದನು. ಏಕಾಂತದಲ್ಲಿದ್ದ ದುರ್ಯೋಧನನನ್ನು ಕಂಡು ಮಾತನಾಡಿಸಲು ಪ್ರಾರಂಭಿಸಿದನು, ಇದೇನು ಆಶ್ಚರ್ಯಕರವಾದ ರೋಗವೋ, ಇದು ಮನಸ್ಸಿನ ವ್ಯಾಧಿಯೋ ಅಥವ ಶರೀರದ ಕಲ್ಮಶವೋ, ಇದನ್ನು ಒಳಗಡೆಯೇ ಇಟ್ಟುಕೊಳ್ಳಬೇಡ, ಹೊರಹಾಕು, ಯಾರಾದರು ಹೆಂಗಸಿಗೆ ನಿನ್ನ ಮನಸ್ಸನ್ನು ತೆತ್ತೆಯೋ? ಇಂತಹ ಹುಡುಗಾಟ ಬೇಡ, ಮಾತಾಡು ನಿಮ್ಮ ತಂದೆಯಮೇಲಾಣೆ ಎಂದು ಶಕುನಿಯು ದುರ್ಯೋಧನನನ್ನು ಮಾತನಾಡಿಸಲು ಪ್ರಯತ್ನಿಸಿದನು.

ಅರ್ಥ:
ಹೊಕ್ಕು: ಸೇರು; ಎಕ್ಕಟಿ: ಏಕಾಂತ; ಕಂಡು: ನೋಡಿ; ನುಡಿಸು: ಮಾತನಾಡಿಸು; ಅಕ್ಕಜ: ಆಶ್ಚರ್ಯ; ರುಜೆ: ರೋಗ; ಮಾನಸ: ಮನಸ್ಸು; ಶರೀರ: ತನು, ದೇಹ; ಮುಕ್ಕುಳಿಸು: ಹೊರಹಾಕು; ಕೊಂಡು: ತೆಗೆದುಕೊಳ್ಳು; ಸಿಕ್ಕು: ವಶಪಡಿಸು; ಸೀಮಂತಿನಿ: ಹೆಣ್ಣು; ಮಕ್ಕಳಾಟ: ಹುಡುಗಾಟ; ಬೇಡ: ನಿಲ್ಲಿಸು; ನುಡಿ: ಮಾತಾಡು; ಆಣೆ: ಪ್ರಮಾಣ;

ಪದವಿಂಗಡಣೆ:
ಹೊಕ್ಕನ್+ಈತನು +ಕೌರವೇಂದ್ರನನ್
ಎಕ್ಕಟಿಯೊಳ್+ಇರೆ+ ಕಂಡು +ನುಡಿಸಿದನ್
ಅಕ್ಕಜದ +ರುಜೆಯೇನು+ ಮಾನಸವೋ +ಶರೀರಜವೋ
ಮುಕ್ಕುಳಿಸಿ+ ಕೊಂಡಿರದಿರ್+ಆರಿಗೆ
ಸಿಕ್ಕಿದೆಯೋ +ಸೀಮಂತಿನಿಯರಿಗೆ
ಮಕ್ಕಳಾಟಿಕೆ+ ಬೇಡ+ ನುಡಿ+ ಧೃತರಾಷ್ಟ್ರನ್+ಆಣೆಂದ

ಅಚ್ಚರಿ:
(೧) ಚಿಂತೆಯನ್ನು ಹೊರಹಾಕು ಎಂದು ಹೇಳುವ ಪರಿ – ಮುಕ್ಕುಳಿಸಿ
(೨) ಸ ಕಾರದ ಜೋಡಿ ಪದ – ಸಿಕ್ಕಿದೆಯೋ ಸೀಮಂತಿನಿಯರಿಗೆ

ಪದ್ಯ ೩೪: ದ್ರೌಪದಿಯು ಅರ್ಜುನನ ಬಳಿ ಬಂದಾಗ ಅವಳಿಲ್ಲಿ ಮೂಡಿದ ಭಾವನೆಗಳಾವುವು?

ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕ ಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತ ಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತ ಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ (ಆದಿ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸುಂದರವಾದ ಮಧುರಭಾವದಿಂದ ಕೂಡಿದ ಕಡೆಗಣ್ಣಿನನೋಟದಿಂದ ಅರ್ಜುನನನ್ನು ಎಷ್ಟು ಬಾರಿ ನೋಡಿದರು ಆ ಕಣ್ಣುಗಳಿಗೆ ಅದು ತಣಿಯಲೇಯಿಲ್ಲ. ರೋಮಾಂಚನಗೊಂಡ ಅವಳ ಸ್ವೇದಗಳಿಂದ ಆಕೆಯ ಮೈ ಒದ್ದೆಯಾಯಿತು. ನಾಚಿಕೆಯ ಭಾರಕ್ಕೆ ಅವಳ ಮನಸ್ಸು ಕುಗ್ಗಿತು, ಮನಸ್ಸು ಒಳ್ಳೆಯ ಭಾವನೆಗಳಿಂದ ಆವೃತಗೊಂಡಿತು.

ಅರ್ಥ:
ಲಲಿತ: ಚೆಲುವು, ಸೌಂದರ್ಯ; ಮಧುರ: ಸಿಹಿಯಾದ, ಸವಿ; ಅಪಾಂಗ: ಕಡೆಗಣ್ಣು; ಮುಕ್ಕುಳಿಸಿ: ಹೊರಹೊಮ್ಮು; ತಣಿ:ತೃಪ್ತಿಹೊಂದು, ಸಮಾಧಾನಹೊಂದು; ಕಂಗಳು: ಕಣ್ಣುಗಳು; ಉಬ್ಬಿದ: ಅಗಲವಾದ; ಪುಳಕ: ರೋಮಾಂಚನ; ಜಲ: ನೀರು; ಮುಳುಗು: ಒಳಸೇರು, ಕಾಣದಾಗು; ಮೂಡು: ತೋರು; ಮೈ: ಅಂಗ; ನಿತಂಬಿನಿ: ಚೆಲುವೆ; ತಳಿತ: ಹೊಂದು; ಲಜ್ಜ: ನಾಚಿಕೆ; ಭರ:ತುಂಬ; ಕುಸಿ: ಕೆಳಗೆ ಬೀಳು; ಅವ್ವಳಿಸು: ಅವ್ವಳಿಸು, ನುಗ್ಗು, ಪೀಡಿಸು; ಅಂತಃಕರಣ: ಮನಸ್ಸು, ಚಿತ್ತವೃತ್ತಿ; ಆಂಗಿಕ:ಶರೀರಕ್ಕೆ ಸಂಬಂಧಿಸಿದ; ಉಳಿ:ಬಿಡು; ಸಾತ್ವಿಕ: ಒಳ್ಳೆಯ ಗುಣ; ಭಾವ: ಸಂವೇದನೆ, ಭಾವನೆ; ಅವಗಡಿಸು: ವ್ಯಾಪಿಸು, ಹರಡು; ಮಾನಿನಿ: ಹೆಂಗಸು, ಚೆಲುವೆ;

ಪದವಿಂಗಡಣೆ:
ಲಲಿತ +ಮಧುರ+ಅಪಾಂಗದಲಿ+ ಮು
ಕ್ಕುಳಿಸಿ+ ತಣಿಯವು +ಕಂಗಳ್+ಉಬ್ಬಿದ
ಪುಳಕ+ ಜಲದಲಿ +ಮುಳುಗಿ +ಮೂಡಿತು +ಮೈ +ನಿತಂಬಿನಿಯ
ತಳಿತ+ ಲಜ್ಜಾ+ಭರಕೆ+ ಕುಸಿದ
ವ್ವಳಿಸಿತ್+ಅಂತಃಕರಣವ್+ಆಂಗಿಕಲ್
ಉಳಿತ+ ಸಾತ್ವಿಕ+ ಭಾವವ್+ಅವಗಡಿಸಿತ್ತು +ಮಾನಿನಿಯ

ಅಚ್ಚರಿ:
(೧) ಮಾನಿನಿ, ಲಲಿತ – ಹೆಂಗಸನ್ನು ವರ್ಣಿಸುವ ಪದ, ಪದ್ಯದ ಮೊದಲ ಮತ್ತು ಕೊನೆ ಪದ
(೨) ಪ್ರಿಯನನ್ನು ನೋಡಿದಾಗ ಮೈಯಲ್ಲಿ ಮೂಡುವ ಭಾವನೆಗಳ ಸ್ಪಷ್ಟ ಚಿತ್ರಣ
(೩) ಮುಳುಗಿ, ಅವ್ವಳಿಸಿ, ಮೂಡು, ಮುಕ್ಕುಳಿಸಿ, ತಣಿ,ಅವಗಡಿಸು – ಭಾವನೆಗಳನ್ನು ಇಮ್ಮಡಿಗೊಳಿಸುವ ಪದಗಳ ಬಳಕೆ