ಪದ್ಯ ೩೭: ಮಂತ್ರಿಗಳು ಯಾವ ಅಭಿಪ್ರಾಯ ಪಟ್ಟರು?

ಅಂಗವಿಸುವವರಿಲ್ಲ ಭಟರಿಗೆ
ಭಂಗವಿಕ್ಕಿತು ಕೌರವೇಂದ್ರಗೆ
ಸಂಗರದ ಸಿರಿ ಸೊಗಸಿನಲಿ ಕಡೆಗಣ್ಣ ಸೂಸಿದಳು
ಮುಂಗುಡಿಯಲ್ಲಿನ್ನಾರು ನಮಗಾ
ವಂಗದಲಿ ಜಯವೇನು ಹದನರ
ಸಂಗೆ ಬಿನ್ನಹ ಮಾಡಿಯೆಂದರು ನಿಖಿಳ ಮಂತ್ರಿಗಳು (ದ್ರೋಣ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದ್ರೋಣನನ್ನು ತಡೆದು ನಿಲ್ಲಿಸುವವರೇ ಇಲ್ಲ. ಪಾಂಡವ ವೀರರೆಲ್ಲರೂ ಭಂಗಿತರಾದರು. ಯುದ್ಧದ ವಿಜಯಲಕ್ಷ್ಮಿ ಸುಯೋಧನನ ಕಡೆಗೆ ಸಂತೋಷದ ಕುಡಿನೋಟ ಬೀರಿದ್ದಾಳೆ. ಈಗ ಮುಮ್ದೆ ನಿಮ್ತು ಯುದ್ಧಮಾದುವವರಾರು? ನಾವು ಗೆಲ್ಲುವುದಾದರೂ ಹೇಗೆ? ಇದ್ದ ವಿಷಯವನ್ನು ದೊರೆಗೆ ಬಿನ್ನಹಮಾಡಿರೆಂದು ಎಲ್ಲಾ ಮಂತ್ರಿಗಳು ಹೇಳಿದರು.

ಅರ್ಥ:
ಅಂಗವಿಸು: ಬಯಸು; ಭಟ: ಸೈನಿಕ; ಭಂಗ: ಮುರಿಯುವಿಕೆ, ಚೂರು; ಸಂಗರ: ಯುದ್ಧ; ಸಿರಿ: ಐಶ್ವರ್ಯ; ಸೊಗಸು: ಎಲುವು; ಕಡೆಗಣ್ಣು: ಓರೆನೋಟ; ಸೂಸು: ಎರಚು, ಚಲ್ಲು, ಚಿಮ್ಮು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಅಂಗ: ಭಾಗ; ಜಯ: ಗೆಲುವು; ಹದ: ಸ್ಥಿತಿ; ಅರಸ: ರಾಜ; ಬಿನ್ನಹ: ಕೋರಿಕೆ; ನಿಖಿಳ: ಎಲ್ಲಾ; ಮಂತ್ರಿ: ಸಚಿವ;

ಪದವಿಂಗಡಣೆ:
ಅಂಗವಿಸುವವರಿಲ್ಲ +ಭಟರಿಗೆ
ಭಂಗವಿಕ್ಕಿತು +ಕೌರವೇಂದ್ರಗೆ
ಸಂಗರದ +ಸಿರಿ +ಸೊಗಸಿನಲಿ +ಕಡೆಗಣ್ಣ+ ಸೂಸಿದಳು
ಮುಂಗುಡಿಯಲ್+ಇನ್ನಾರು +ನಮಗಾ
ವಂಗದಲಿ +ಜಯವೇನು +ಹದನ್+ಅರ
ಸಂಗೆ +ಬಿನ್ನಹ +ಮಾಡಿ+ಎಂದರು +ನಿಖಿಳ +ಮಂತ್ರಿಗಳು

ಅಚ್ಚರಿ:
(೧) ಅಂಗ, ಭಂಗ – ಪ್ರಾಸ ಪದಗಳು
(೨) ಸ ಕಾರದ ತ್ರಿವಳಿ ಪದ – ಸಂಗರದ ಸಿರಿ ಸೊಗಸಿನಲಿ

ಪದ್ಯ ೪೧: ಪಾಂಡವರು ಯುದ್ಧಕ್ಕೆ ಹೇಗೆ ತಯಾರಾದರು?

ಹಿಂಗಿದುದು ಭಯ ಕಂಠದ ಸುಸ
ರ್ವಾಂಗದಲಿ ಪಸರಿಸಿತು ಕಾಳೆಗ
ದಂಘವಣೆ ಹೊಗರೇರಿದುದು ವಿಕ್ರಮ ಛಡಾಳಿಸಿತು
ಹೊಂಗಿದರು ಹೊಂಪುಳಿಯ ಪುಳಕದ
ಮುಂಗುಡಿಯ ರೊಮಾಂಚನದ ರಣ
ರಂಗ ಧೀರರು ತರುಬಿ ನಿಮ್ದರು ಮತ್ತೆ ಕಾಳೆಗವ (ದ್ರೋಣ ಪರ್ವ, ೧೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದ ಭೀತಿ ಮಾಯವಾಗಿ, ಯುದ್ಧಾತುರಕೆ ಸೈನ್ಯದ ಸರ್ವಾಂಗಗಳಲ್ಲೂ ಬಂದು ಸೇರಿತು. ಅವರ ಪರಾಕ್ರಮ ಅಧಿಕವಾಯಿತು. ಅವರೆಲ್ಲರೂ ಉತ್ಸಾಹಿಸಿದರು. ಅವರೆಲ್ಲರೂ ರೋಮಾಂಚನಗೊಂಡರು. ವಿರೋಧಿಗಳನ್ನು ತಡೆದು ನಿಲ್ಲಿಸಿ ಯುದ್ಧಕ್ಕಾರಂಭಿಸಿದರು.

ಅರ್ಥ:
ಹಿಂಗು: ಬತ್ತುಹೋಗು, ಕಡಿಮೆಯಾಗು; ಭಯ: ಅಂಜಿಕೆ; ಕಂಠ: ಕೊರಳು, ಧ್ವನಿ; ಸರ್ವಾಂಗ: ಎಲ್ಲಾ ಅಂಗಗಳು; ಪಸರಿಸು: ಹರಡು; ಕಾಳೆಗ: ಯುದ್ಧ; ಅಂಘವಣೆ: ರೀತಿ, ಬಯಕೆ; ಹೊಗರು: ಕಾಂತಿ, ಪ್ರಕಾಶ; ಏರು: ಹೆಚ್ಚಾಗು; ವಿಕ್ರಮ: ಪರಾಕ್ರಮ, ಶೌರ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಹೊಂಗು: ಉತ್ಸಾಹ, ಹುರುಪು; ಹೊಂಪುಳಿ: ಹೆಚ್ಚಳ, ಆಧಿಕ್ಯ; ಪುಳಕ: ರೋಮಾಂಚನ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ರಣರಂಗ: ಯುದ್ಧ; ಧೀರ: ಶೂರ; ತರುಬು: ತಡೆ, ನಿಲ್ಲಿಸು; ನಿಂದು: ನಿಲ್ಲು; ಕಾಳೆಗ: ಯುದ್ಧ;

ಪದವಿಂಗಡಣೆ:
ಹಿಂಗಿದುದು +ಭಯ +ಕಂಠದ+ ಸುಸ
ರ್ವಾಂಗದಲಿ +ಪಸರಿಸಿತು+ ಕಾಳೆಗದ್
ಅಂಘವಣೆ +ಹೊಗರ್+ಏರಿದುದು +ವಿಕ್ರಮ +ಛಡಾಳಿಸಿತು
ಹೊಂಗಿದರು +ಹೊಂಪುಳಿಯ +ಪುಳಕದ
ಮುಂಗುಡಿಯ +ರೋಮಾಂಚನದ +ರಣ
ರಂಗ +ಧೀರರು +ತರುಬಿ + ನಿಂದರು+ ಮತ್ತೆ +ಕಾಳೆಗವ

ಅಚ್ಚರಿ:
(೧) ಪುಳಕ, ರೋಮಾಂಚನ – ಸಮಾನಾರ್ಥಕ ಪದ
(೨) ಪಾಂಡವರ ಸಿದ್ಧತೆ – ಹಿಂಗಿದುದು ಭಯ ಕಂಠದ ಸುಸರ್ವಾಂಗದಲಿ ಪಸರಿಸಿತು

ಪದ್ಯ ೫೩: ಭೀಷ್ಮನು ಕೌರವಸೇನೆಗೆ ಹೇಗೆ ಕಂಡನು?

ಪಡೆಯ ಮುಂಗುಡಿ ಭೀಷ್ಮನದು ಬಲ
ನೆಡನು ಪಿಂಗುಡಿಯಾತನದು ನೃಪ
ಗಡಣಬೀಡಿನ ಕಾಹು ಗಂಗಾಸುತನ ಗುರುಭಾರ
ನಡೆವಡಾತನ ನೇಮ ಮರಳಿದು
ಬಿಡುವಡಾತನ ಮಾತು ಕೌರವ
ಪಡೆಗೆ ಭಾರಿಯ ವಜ್ರಪಂಜರವಾದನಾ ಭೀಷ್ಮ (ಭೀಷ್ಮ ಪರ್ವ, ೧ ಸಂಧಿ, ೫೩ ಪದ್ಯ)

ತಾತ್ಪರ್ಯ:
ಸೈನ್ಯದ ಮುಂಚೂಣಿ ಭೀಷ್ಮನದು, ಎದ, ಬಲ, ಹಿಂದೆ ಎಲ್ಲೆಡೆಯಲ್ಲಿಯೂ ಅವನ ರಕ್ಷೆ. ಮುಂದೆ ಹೋಗಲು, ಹಿಂದಕ್ಕೆ ಬರಲು ಅವನ ಅಪ್ಪಣೆ ಅಗತ್ಯ. ಕೌರವನ ಬಿಡಾರದ ಅದರ ಸುತ್ತುವಳಯದ ರಕ್ಷಣೆ, ಭೀಷ್ಮನಿಗೇ ಸೇರಿದ್ದು. ಕೌರವ ಸೈನ್ಯಕ್ಕೆ ಭೀಷ್ಮನೇ ವಜ್ರ ಪಂಜರದಂತೆ ರಕ್ಷೆಯನ್ನು ಕೊಡುವವನು.

ಅರ್ಥ:
ಪಡೆ: ಸೈನ್ಯ; ಮುಂಗುಡಿ: ಮುಂಭಾಗ; ಬಲ: ಸೈನ್ಯ; ಪಿಂಗುಡಿ: ಸೈನ್ಯದ ಹಿಂಭಾಗ; ನೃಪ: ರಾಜ; ಗಡಣ: ಗುಂಪು; ಬೀಡು: ಮನೆ, ವಾಸಸ್ಥಳ, ವಸತಿ; ಕಾಹು: ಸಂರಕ್ಷಣೆ; ಸುತ: ಮಗ; ಗುರುಭಾರ: ದೊಡ್ಡಭಾರ; ನಡೆ: ಚಲಿಸು; ನೇಮ: ನಿಯಮ; ಮರಳು: ಹಿಂದಕ್ಕೆ ಬರು; ಮಾತು: ವಾಣಿ; ಪಡೆ: ಸೈನ್ಯ; ಭಾರಿ: ತೂಕವಾದುದು; ವಜ್ರಪಂಜರ: ಗಟ್ಟಿಯಾದಗೂಡು;

ಪದವಿಂಗಡಣೆ:
ಪಡೆಯ +ಮುಂಗುಡಿ +ಭೀಷ್ಮನದು +ಬಲನ್
ಎಡನು +ಪಿಂಗುಡಿಯಾತನದು +ನೃಪ
ಗಡಣ+ಬೀಡಿನ +ಕಾಹು +ಗಂಗಾಸುತನ +ಗುರುಭಾರ
ನಡೆವಡ್+ಆತನ+ ನೇಮ +ಮರಳಿದು
ಬಿಡುವಡ್+ಆತನ+ ಮಾತು +ಕೌರವ
ಪಡೆಗೆ +ಭಾರಿಯ +ವಜ್ರಪಂಜರವಾದನಾ+ ಭೀಷ್ಮ

ಅಚ್ಚರಿ:
(೧) ಭೀಷ್ಮನ ಸ್ಥಿತಿ – ಕೌರವಪಡೆಗೆ ಭಾರಿಯ ವಜ್ರಪಂಜರವಾದನಾ ಭೀಷ್ಮ
(೨) ಮುಂಗುಡಿ, ಪಿಂಗುಡಿ – ಪ್ರಾಸ ಪದಗಳು

ಪದ್ಯ ೨೭: ಅರ್ಜುನನು ಚಿತ್ರಸೇನನನ್ನು ಹೇಗೆ ಬಂಧಿಸಿದನು?

ಬಿಡು ಸೆರೆಯನವಗಡೆಯ ತನವೆ
ಮ್ಮೊಡನೆ ಸಲ್ಲದು ಸೂಳೆಯರ ಸುರೆ
ಗುಡುಹಿಗಳ ರಸವಾದಿಗಳ ಸೇರುವೆಯಲೊಪ್ಪುವುದು
ಫಡಯೆನುತ ನಾರಾಚದಲಿ ಬಲ
ನೆಡನ ಕೀಲಿಸಿ ಪಿಂಗುಡಿಯ ಮುಂ
ಗುಡಿಯ ಕಟ್ಟಿದ ನಂಬಿನಲಿ ಖಚರಾಧಿಪನ ರಥವ (ಅರಣ್ಯ ಪರ್ವ, ೨೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಚಿತ್ರಸೇನ, ಸೆರೆಹಿಡಿದ ಕೌರವನನ್ನು ಬಿಡು, ನಿನ್ನ ಪರಾಕ್ರಮವನ್ನು ನಮ್ಮ ಹತ್ತಿರ ತೋರಬೇಡ. ಅದೇನಿದ್ದರೂ ಸೂಳೆಯರು ಮದ್ಯಪಾನಿಳು, ರಸವಾದಿಗಳ ಮುಂದೆ ಸರಿ ಎಂದು ಹೇಳುತ್ತಾ ಅರ್ಜುನನು ಚಿತ್ರಸೇನನ ಹಿಂಭಾಗ ಮುಂಭಾಗಳನ್ನು ತನ್ನ ಬಾಣಗಳಿಂದ ಬಂಧಿಸಿದನು.

ಅರ್ಥ:
ಬಿಡು: ತೊರೆ; ಸೆರೆ: ಬಂಧನ; ಅವಗಡೆ: ಅಸಡ್ಡೆ; ಸಲ್ಲದು: ಸರಿಹೊಂದುವುದಿಲ್ಲ, ನಡೆಯದು; ಸೂಳೆ: ಗಣಿಕೆ; ಸುರೆ: ಮದ್ಯ; ಕುಡುಹಿಗ: ಪಾನಮಾಡುವ; ರಸವಾದಿ: ರಸಿಕ; ಸೇರು: ಜೊತೆಯಾಗು; ಒಪ್ಪು: ಒಪ್ಪಿಗೆ, ಸಮ್ಮತಿ; ಫಡ: ತಿರಸ್ಕಾರದ ಮಾತು; ನಾರಾಚ: ಬಾಣ, ಸರಳು; ಬಲ: ಸೈನ್ಯ; ಕೀಲಿಸು: ಜೋಡಿಸು, ನಾಟು; ಪಿಂಗುಡಿ: ಸೈನ್ಯದ ಹಿಂಭಾಗ; ಮುಂಗುಡಿ: ಸೈನ್ಯದ ಮುಂಭಾಗ; ಕಟ್ಟು: ಬಂಧಿಸು; ಅಂಬು: ಬಾಣ; ಖಚರ: ಗಂಧರ್ವ; ಅಧಿಪ: ಒಡೆಯ; ರಥ: ಬಂಡಿ;

ಪದವಿಂಗಡಣೆ:
ಬಿಡು +ಸೆರೆಯನ್+ಅವಗಡೆಯ +ತನವ್
ಎಮ್ಮೊಡನೆ +ಸಲ್ಲದು +ಸೂಳೆಯರ +ಸುರೆ
ಕುಡುಹಿಗಳ +ರಸವಾದಿಗಳ +ಸೇರುವೆಯಲ್+ಒಪ್ಪುವುದು
ಫಡ+ಎನುತ +ನಾರಾಚದಲಿ +ಬಲ
ನೆಡನ +ಕೀಲಿಸಿ +ಪಿಂಗುಡಿಯ +ಮುಂ
ಗುಡಿಯ +ಕಟ್ಟಿದನ್ + ಅಂಬಿನಲಿ +ಖಚರಾಧಿಪನ+ ರಥವ

ಅಚ್ಚರಿ:
(೧)ಪಿಂಗುಡಿ, ಮುಂಗುಡಿ – ಪದಗಳ ಬಳಕೆ
(೨) ಚಿತ್ರಸೇನನನ್ನು ಹಂಗಿಸುವ ಪರಿ – ಸೂಳೆಯರ ಸುರೆಗುಡುಹಿಗಳ ರಸವಾದಿಗಳ ಸೇರುವೆಯಲೊಪ್ಪುವುದು ಫಡ

ಪದ್ಯ ೩೨: ಚಿತ್ರಸೇನನ ಸೈನ್ಯವು ಕೌರವರನ್ನು ಹೇಗೆ ಆಕ್ರಮಣ ಮಾಡಿತು?

ಜೋಡುಮಾಡಿತು ಖಚರ ಬಲ ಕೈ
ಮಾಡಿ ಕವಿದುದು ಚಿತ್ರಸೇನನ
ಜೋಡಿಯಲಿ ಜರ್ಝಾರರಿರಿದರು ಮುಂದೆ ಮುಂಗುಡಿಯ
ಓಡಿದರೆ ಹಾವಿಂಗೆ ಹದ್ದಿನ
ಕೂಡೆ ಮರುಕವೆ ಫಡಯೆನುತ ಕೈ
ಮಾಡಿದರು ರಿಪುಭಟರು ನಿಂದರು ನಿಮಿಷ ಮಾತ್ರದಲಿ (ಅರಣ್ಯ ಪರ್ವ, ೨೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ದೇವತೆಗಳ ಸೈನ್ಯವು ಕೈಯಲ್ಲಿ ಆಯುಧಗಳನ್ನು ಹಿಡಿದು ಸಿದ್ಧವಾಯಿತು, ಚಿತ್ರಸೇನನ ಜೊತೆ ಸೈನ್ಯವು ಕೌರವರ ಸೈನ್ಯವನ್ನು ಆವರಿಸಿ, ಮುಂದಿನ ಸಾಲಿನಲ್ಲಿದ್ದ ಬಲವನ್ನು ಇರಿದರು. ಅವರು ಓಡಿ ಹೋದರೆ ಹಾವಿನ ಮೇಲೆ ಹದ್ದಿಗೆಂತಹ ಅನುಕಂಪ ಎಂದು ಅಟ್ಟಿಸಿಕೊಂಡು ಹೋಗಿ ನಿರ್ದಯೆಯಿಂದ ಹೊಡೆದರು.

ಅರ್ಥ:
ಜೋಡು: ಜೊತೆ, ಜೋಡಿ; ಖಚರ: ಗಂಧರ್ವ; ಬಲ: ಸೈನ್ಯ; ಕೈಮಾಡು: ಸನ್ನೆ ಮಾಡಿ ಕರೆ, ಎಚ್ಚರಿಕೆ ವಹಿಸು; ಕವಿ: ಆವರಿಸು; ಜೋಡಿ: ಜೊತೆ; ಜರ್ಝಾರ: ಚೂರು ಚೂರಾಗು; ಇರಿ: ಚುಚ್ಚು; ಮುಂದೆ: ಎದುರು; ಮುಂಗುಡಿ: ಮುಂದಿನ ತುದಿ; ಓಡು: ಧಾವಿಸು; ಹಾವು: ಉರಗ; ಹದ್ದು: ಒಂದು ಬಗೆಯ ಹಕ್ಕಿ; ಕೂಡ: ಜೊತೆ; ಮರುಕ: ಬೇಗುದಿ, ಅಳಲು; ಫಡ: ರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಕೈಮಾಡು: ಹೋರಾಡು; ರಿಪು: ವೈರಿ; ಭಟ: ಸೈನಿಕ; ನಿಂದರು: ನಿಲ್ಲು; ನಿಮಿಷ: ಕ್ಷಣ;

ಪದವಿಂಗಡಣೆ:
ಜೋಡುಮಾಡಿತು +ಖಚರ +ಬಲ +ಕೈ
ಮಾಡಿ +ಕವಿದುದು +ಚಿತ್ರಸೇನನ
ಜೋಡಿಯಲಿ +ಜರ್ಝಾರರ್+ಇರಿದರು +ಮುಂದೆ +ಮುಂಗುಡಿಯ
ಓಡಿದರೆ +ಹಾವಿಂಗೆ +ಹದ್ದಿನ
ಕೂಡೆ +ಮರುಕವೆ +ಫಡಯೆನುತ +ಕೈ
ಮಾಡಿದರು +ರಿಪುಭಟರು +ನಿಂದರು +ನಿಮಿಷ +ಮಾತ್ರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಓಡಿದರೆ ಹಾವಿಂಗೆ ಹದ್ದಿನ ಕೂಡೆ ಮರುಕವೆ

ಪದ್ಯ ೨೪: ಯಾರನ್ನು ನೋಡಿ ಸೈನಿಕರು ಅಳುಕಿದರು?

ಇವರು ಮೂರೇ ದಿನಕೆ ಕಾಮ್ಯಕ
ವನ ಮಹಾಶ್ರಮಕಾಗಿ ಬರೆ ದಾ
ನವನು ದಾರಿಯ ಕಟ್ಟಿನಿಂದನು ಕೈಯ ಮುಷ್ಟಿಯಲಿ
ಅವನ ಕಂಗಳ ಕೆಂಪಿನಲಿ ಮೇ
ಣವನ ದಾಡೆಯ ಬೆಳಗಿನಲಿ ಖಳ
ನವಯವವ ಕಂಡಳುಕಿ ನಿಂದರು ಮುಂಗುಡಿಯ ಭಟರು (ಅರಣ್ಯ ಪರ್ವ, ೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾಂಡವರು ಮೂರೇ ದಿನಕ್ಕೆ ಕಾಮ್ಯಕ ವನವನ್ನು ತಲುಪಿ ತಮ್ಮ ನೆಲಸುವ ಸ್ಥಾನಕ್ಕೆ ಬರುವುದನ್ನು ತಿಳಿದ ಕಿಮ್ಮೀರನು ಮುಷ್ಟಿಗಟ್ಟಿ ದಾರಿಯಲ್ಲಿ ಅಡ್ಡವಾಗಿ ನಿಂತನು. ಅವನ ಕೆಂಪಾದ ಕಣ್ಣುಗಳು, ಬಿಳಿಯ ಕೋರೆಹಲ್ಲುಗಳ ಬೆಳಕಿನಲ್ಲಿ ಅವನ ಬೃಹದಾಕಾರವನ್ನು ನೋಡಿದ ಮುಂದಿನ ಸಾಲುಗಳ್ಳಿದ್ದ ಸೈನಿಕರು ಹೆದರಿ ನಿಂತರು.

ಅರ್ಥ:
ದಿನ: ವಾರ; ವನ: ಕಾಡು; ಆಶ್ರಮ: ವಾಸಸ್ಥಳ; ಮಹಾ: ಶ್ರೇಷ್ಠ; ಬರೆ: ಆಗಮಿಸು; ದಾನವ: ರಾಕ್ಷಸ; ದಾರಿ: ಮಾರ್ಗ; ಕಟ್ಟಿ: ಅಡ್ಡಹಾಕು; ಕೈಯ: ಹಸ್ತ; ಮುಷ್ಟಿ: ಮುಚ್ಚಿದ ಅಂಗೈ; ಕಂಗಳು: ನಯನ; ಕೆಂಪು: ರಕ್ತವರ್ಣ; ಮೇಣ್: ಮತ್ತು; ದಾಡೆ: ಹಲ್ಲು; ಬೆಳಗು: ಕಾಂತಿ; ಖಳ: ದುಷ್ಟ; ಅವಯವ: ದೇಹದ ಒಂದು ಭಾಗ, ಅಂಗ; ಕಂಡು: ನೋಡಿ; ಅಳುಕು: ಹೆದರು; ನಿಂದರು: ನಿಲ್ಲು, ಚಲನೆಯಿಲ್ಲದ ಸ್ಥಿತಿ; ಮುಂಗುಡಿ: ಅಗ್ರಭಾಗ, ಮುಂದೆ; ಭಟ: ಸೈನಿಕರು;

ಪದವಿಂಗಡಣೆ:
ಇವರು +ಮೂರೇ +ದಿನಕೆ+ ಕಾಮ್ಯಕ
ವನ +ಮಹಾಶ್ರಮಕಾಗಿ+ ಬರೆ+ ದಾ
ನವನು +ದಾರಿಯ +ಕಟ್ಟಿನಿಂದನು +ಕೈಯ +ಮುಷ್ಟಿಯಲಿ
ಅವನ+ ಕಂಗಳ +ಕೆಂಪಿನಲಿ+ ಮೇಣ್
ಅವನ +ದಾಡೆಯ+ ಬೆಳಗಿನಲಿ +ಖಳನ್
ಅವಯವವ+ ಕಂಡ್+ಅಳುಕಿ +ನಿಂದರು +ಮುಂಗುಡಿಯ +ಭಟರು

ಅಚ್ಚರಿ:
(೧) ಕಿಮ್ಮೀರನ ವರ್ಣನೆ – ಅವನ ಕಂಗಳ ಕೆಂಪಿನಲಿ ಮೇಣವನ ದಾಡೆಯ ಬೆಳಗಿನಲಿ ಖಳ
ನವಯವವ ಕಂಡಳುಕಿ ನಿಂದರು