ಪದ್ಯ ೬೪: ದ್ರೋಣನು ಸೇನೆಯ ಮೇಲೆ ಹೇಗೆ ಎಗರಿದನು?

ಬಿಲುದುಡುಕಿ ಬಲುಸರಳ ತಿರುವಾಯ್
ಗೊಳಿಸಿ ಮಲೆತನು ಮಾರ್ಬಲಕೆ ಬಲೆ
ಕಳಚಿದರೆ ಮೃಗ ಬಿದ್ದುದಿರುಬಿನ ಕುಳಿಯೊಳೆಂಬಮ್ತೆ
ತಿಳುಹಿ ಹೋದರು ಮುನಿಗಳೀತನ
ತಿಳಿವು ತೊಟ್ಟುದು ಮರವೆಯನು ಮುಂ
ಕೊಳಿಸಿ ಮೊಗೆದನು ಮತ್ತೆ ಪಾಂಡವಸೈನ್ಯಸಾಗರವ (ದ್ರೋಣ ಪರ್ವ, ೧೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ದ್ರೋಣನು ಬಿಲ್ಲನ್ನು ಹಿಡಿದು ಹೆದೆಗೆ ಬಾನವನ್ನೇರಿಸಿ ಶತ್ರುಸೇನೆಗೆ ಇದಿರಾದನು. ಬಲೆ ಹರಿದ ಮೃಗ ಹೊರಬಂದು ಇಕ್ಕಟ್ಟಾದ ಗುಂಡಿಯಲ್ಲಿ ಬಿದ್ದಂತೆ ಯುದ್ಧತಾಮಸದಿಂದ ಮತಿಗೆಟ್ಟನು. ಮುನಿಗಳು ಬಂದು ಬೋಧಿಸಿ ಹೋದರೂ, ಜ್ಞಾನವನ್ನು ಮರೆವು ಆವರಿಸಲು ಪಾಂಡವ ಸೈನ್ಯ ಸಾಗರವನ್ನು ಸಂಹರಿಸಲು ಆರಂಭಿಸಿದನು.

ಅರ್ಥ:
ದುಡುಕು: ಆಲೋಚನೆ ಮಾಡದೆ ಮುನ್ನುಗ್ಗುವುದು; ಬಲು: ಹೆಚ್ಚು; ಸರಳ: ಬಾಣ; ಮಲೆತ: ಗರ್ವಿಸಿದ, ಸೊಕ್ಕಿದ; ಪ್ರತಿಭಟಿಸಿದ; ಮಾರ್ಬಲ: ಶತ್ರು ಸೈನ್ಯ; ಬಲೆ: ಜಾಲ; ಕಳಚು: ಬೇರ್ಪಡಿಸು; ಮೃಗ: ಪ್ರಾಣಿ; ಬಿದ್ದು: ಬೀಳು; ಇರುಬು: ಇಕ್ಕಟ್ಟು ; ಕುಳಿ: ಗುಂಡಿ, ಗುಣಿ, ಹಳ್ಳ; ಮುನಿ: ಋಷಿ; ತಿಳಿವು: ಅರಿವು; ತೊಟ್ಟು: ಮೊದಲಾಗಿ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಮೊಗೆ: ಮಣ್ಣಿನ ಗಡಿಗೆ; ಸಾಗರ: ಸಮುದ್ರ;

ಪದವಿಂಗಡಣೆ:
ಬಿಲುದುಡುಕಿ +ಬಲುಸರಳ +ತಿರುವಾಯ್
ಗೊಳಿಸಿ +ಮಲೆತನು +ಮಾರ್ಬಲಕೆ +ಬಲೆ
ಕಳಚಿದರೆ+ ಮೃಗ +ಬಿದ್ದುದ್+ಇರುಬಿನ+ ಕುಳಿಯೊಳೆಂಬಂತೆ
ತಿಳುಹಿ +ಹೋದರು +ಮುನಿಗಳ್+ಈತನ
ತಿಳಿವು +ತೊಟ್ಟುದು +ಮರವೆಯನು+ ಮುಂ
ಕೊಳಿಸಿ +ಮೊಗೆದನು +ಮತ್ತೆ +ಪಾಂಡವ+ಸೈನ್ಯ+ಸಾಗರವ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮರವೆಯನು ಮುಂಕೊಳಿಸಿ ಮೊಗೆದನು ಮತ್ತೆ

ಪದ್ಯ ೨೨: ಪಾಂಡವರು ಯಾವ ವ್ಯೂಹವನ್ನು ರಚಿಸಿದರು?

ತುರಗ ಹಲ್ಲಣಿಸಿದವು ಸಮರ
ದ್ವಿರದ ಸಜ್ಜಂಬಡೆದವೊಗ್ಗಿನ
ತುರಗದಲಿ ಹೂಡಿದವು ರಥ ಕಾಲಾಳು ಮುಂಕೊಳಿಸಿ
ಅರಸನನುಜರು ಸಹಿತ ಕೃಷ್ಣನ
ಬೆರಳ ಸನ್ನೆಯೊಳೈದೆ ಬಿಡೆ ಮೋ
ಹರಿಸಿ ನಿಂದುದು ಮುರಿದ ಮಕರವ್ಯೂಹ ರಚನೆಯಲಿ (ದ್ರೋಣ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ದೋಣರ ಪದ್ಮವ್ಯೂಹ ರಚನೆಗೆ ಪ್ರತಿಯಾಗಿ ಪಾಂಡವರು ಮಕರವ್ಯೂಹದಲ್ಲಿ ಯುದ್ದಕ್ಕೆ ಸನ್ನದ್ಧರಾದರು. ಆನೆ ಕುದುರೆಗಳನ್ನು ಹಲ್ಲಣಿಸಿ, ಕಾಲಾಳು ರಥಗಳು ಸಜ್ಜಾಗಿ, ಧರ್ಮಜನೂ ಅವನ ತಮ್ಮಂದಿರೂ ಕೃಷ್ಣನ ಸನ್ನೆಯಂತೆ ಯುದ್ಧಕ್ಕೆ ಸನ್ನದ್ಧರಾದರು.

ಅರ್ಥ:
ತುರಗ: ಅಶ್ವ; ಹಲ್ಲಣಿಸು: ತಡಿಹಾಕು, ಧರಿಸು; ಸಮರ: ಯುದ್ಧ; ದ್ವಿರದ: ಆನೆ, ಎರಡು ಹಲ್ಲುಳ್ಳ; ಸಜ್ಜು: ಸನ್ನದ್ಧ; ಒಗ್ಗು:ಗುಂಪು, ಸಮೂಹ; ತುರಗ: ಕುದುರೆ; ಹೂಡು: ಬೀಸು, ಒಡ್ಡು; ರಥ: ಬಂಡಿ; ಕಾಲಾಳು: ಸೈನಿಕ; ಮುಂಕೊಳಿಸು: ಸಜ್ಜಾಗು; ಅರಸ: ರಾಜ; ಅನುಜ: ತಮ್ಮ; ಸಹಿತ: ಜೊತೆ; ಬೆರಳು: ಅಂಗುಲಿ; ಸನ್ನೆ: ಗುರುತು, ಚಿಹ್ನೆ; ಐದು: ಬಂದು ಸೇರು; ಬಿಡು: ತೊರೆ; ಮೋಹರ: ಯುದ್ಧ; ನಿಂದು: ನಿಲ್ಲು; ಮುರಿ: ಸೀಳು; ವ್ಯೂಹ: ಗುಂಪು, ಸಮೂಹ; ಮಕರ: ಮೊಸಳೆ; ರಚನೆ: ನಿರ್ಮಾಣ;

ಪದವಿಂಗಡಣೆ:
ತುರಗ +ಹಲ್ಲಣಿಸಿದವು +ಸಮರ
ದ್ವಿರದ +ಸಜ್ಜಂಬಡೆದವ್+ಒಗ್ಗಿನ
ತುರಗದಲಿ +ಹೂಡಿದವು +ರಥ +ಕಾಲಾಳು +ಮುಂಕೊಳಿಸಿ
ಅರಸನ್+ಅನುಜರು +ಸಹಿತ +ಕೃಷ್ಣನ
ಬೆರಳ +ಸನ್ನೆಯೊಳ್+ಐದೆ +ಬಿಡೆ +ಮೋ
ಹರಿಸಿ+ ನಿಂದುದು +ಮುರಿದ +ಮಕರವ್ಯೂಹ+ ರಚನೆಯಲಿ

ಅಚ್ಚರಿ:
(೧) ಸಮರ, ಮೋಹರ – ಸಮಾನಾರ್ಥಕ ಪದ