ಪದ್ಯ ೩೫: ನಾರಾಯಣಾಸ್ತ್ರವು ಹೇಗೆ ವೈರಿಸೈನ್ಯವನ್ನು ಬಂಧಿಸಿತು?

ಕಳವಳಿಸಿತರಿಸೇನೆ ಚೂಣಿಯ
ಕೊಳುಗಿಡಿಯ ಸೆಖೆ ತಾಗಿ ಸುಭಟಾ
ವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು
ಬಲದ ಸುತ್ತಲು ಕಟ್ಟಿತುರಿ ಕೆಂ
ಬೆಳಗು ಕುಡಿದವು ಕರ್ಬೊಗೆಗಳ
ಗ್ಗಳದ ಬಾಣದ ಬಂದಿಯಲಿ ಸಿಲುಕಿತ್ತು ರಿಪುಸೇನೆ (ದ್ರೋಣ ಪರ್ವ, ೧೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶತ್ರು ಸೈನ್ಯವು ಕಳವಳಿಸಿತು. ಕಿಡಿಗಳ ಶಾಖದಿಂದ ಯೋಧರ ಮೀಸೆಗಳು ಉರಿದುಹೋದವು, ಮೋರೆಗಳು ಬಾಡಿದವು. ಸೈನ್ಯದ ಸುತ್ತಲೂ ಉರಿಹೊಗೆಗಳು ಆವರಿಸಿದವು. ಶ್ರೇಷ್ಠವಾದ ನಾರಾಯಣಾಸ್ತ್ರದ ಕಪ್ಪು ಹೊಗೆಗಳು ವೈರಿಸೈನ್ಯವನ್ನು ಆವರಿಸಿತು.

ಅರ್ಥ:
ಕಳವಳ: ಗೊಂದಲ; ಅರಿ: ವೈರಿ; ಸೇನೆ: ಸೈನ್ಯ; ಚೂಣಿ: ಮುಂದೆ; ಕಿಡಿ: ಬೆಂಕಿ; ಸೆಖೆ: ಧಗೆ; ತಾಗು: ಮುಟ್ತು; ಭಟಾವಳಿ: ಸೈನಿಕರ ಗುಂಪು; ಉರಿ: ದಹಿಸು; ನೆರೆ: ಗುಂಪು; ಕಂದು: ಕಳಂಕ; ಮೊರೆ: ಮುಖ; ಬಲ: ಸೈನ್ಯ; ಸುತ್ತ: ಬಳಸಿಕೊಂಡು; ಉರಿ: ಬೆಂಕಿ; ಕೆಂಬೆಳಗು: ಕೆಂಪಾದ ಪ್ರಕಾಶ; ಕುಡಿ: ತುದಿ, ಕೊನೆ; ಕರ್ಬೊಗೆ: ಕಪ್ಪಾದ ಹೊಗೆ; ಅಗ್ಗ: ಶ್ರೆಷ್ಠ; ಬಾಣ: ಸರಳು; ಬಂದಿ: ಸೆರೆ, ಬಂಧನ; ಸಿಲುಕು: ಬಂಧನಕ್ಕೊಳಗಾಗು; ರಿಪು: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಕಳವಳಿಸಿತ್+ಅರಿಸೇನೆ +ಚೂಣಿಯ
ಕೊಳುಕಿಡಿಯ +ಸೆಖೆ +ತಾಗಿ +ಸುಭಟ
ಆವಳಿಯ +ಮೀಸೆಗಳ್+ಉರಿಯೆ +ನೆರೆ +ಕಂದಿದವು +ಮೋರೆಗಳು
ಬಲದ +ಸುತ್ತಲು +ಕಟ್ಟಿತ್+ಉರಿ +ಕೆಂ
ಬೆಳಗು +ಕುಡಿದವು +ಕರ್ಬೊಗೆಗಳ್
ಅಗ್ಗಳದ +ಬಾಣದ +ಬಂದಿಯಲಿ +ಸಿಲುಕಿತ್ತು +ರಿಪುಸೇನೆ

ಅಚ್ಚರಿ:
(೧) ಪರಾಕ್ರಮ ಕಡಿಮೆಯಾಯಿತು ಎಂದು ಹೇಳಲು – ಸುಭಟಾವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು

ಪದ್ಯ ೪೨: ದ್ರೋಣನ ಕೋಪವನ್ನು ಎದುರಿಸಲು ಯಾರು ಬಂದರು?

ಮತ್ತೆ ಮಸೆದುದು ಖಾತಿ ಕರ್ಬೊಗೆ
ಸುತ್ತಿದುಸುರಲಿ ಮೀಸೆಗಡಿದೌ
ಡೊತ್ತಿ ಸೆಳೆದನು ಶರವನೆಚ್ಚನು ಪವನನಂದನನ
ಹತ್ತೆಗಡಿದನು ಭೀಮ ಮಗುಳಿವ
ನೊತ್ತಿ ಹೊಕ್ಕರೆ ಕೈ ನೆರವ ಹಾ
ರುತ್ತ ಮುರಿದನು ಬಳಿಕ ಧೃಷ್ಟದ್ಯುಮ್ನನಿದಿರಾದ (ದ್ರೋಣ ಪರ್ವ, ೧೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ದ್ರೋಣನು ಮತ್ತೆ ಕೋಪಗೊಂಡು ಔಡೊತ್ತಿ, ಹೊಗೆಯುಗುಳುವ ಉಸಿರನ್ನು ಬಿಡುತ್ತ, ಭೀಮನ ಮೇಲೆ ಬಾಣವನ್ನು ಬಿಡಲು ಭೀಮನು ಅದನ್ನು ಕಡಿದನು. ದ್ರೋಣನು ಮತ್ತೆ ಮುನ್ನುಗ್ಗಲು, ಭೀಮನು ಸಹಾಯಕ್ಕಾಗಿ ಬೇರೆಡೆಗೆ ಹೋದನು. ಆಗ ಧೃಷ್ಟದ್ಯುಮ್ನನು ಎದುರಿಗೆ ಬಂದನು.

ಅರ್ಥ:
ಮಸೆ: ಹರಿತವಾದುದು; ಖಾತಿ: ಕೋಪ; ಕರ್ಬೊಗೆ: ದಟ್ಟವಾದ ಹೊಗೆ; ಸುತ್ತು: ಆವರಿಸು; ಉಸುರು: ಗಾಳಿ; ಕಡಿ: ಸೀಳು; ಔಡೊತ್ತು: ಹಲ್ಲಿನಿಂದ ತುಟಿಕಚ್ಚು; ಸೆಳೆ: ಎಳೆತ, ಸೆಳೆತ; ಶರ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ನಂದನ: ಮಗ; ಹತ್ತೆ: ಹತ್ತಿರ, ಸಮೀಪ; ಕದಿ: ಸೀಳು; ಮಗುಳು: ಪುನಃ, ಮತ್ತೆ; ಒತ್ತು: ತಳ್ಳು; ಹೊಕ್ಕು: ಸೇರು; ಕೈ: ಹಸ್ತ; ನೆರವು: ಸಹಾಯ; ಹಾರು: ಜಿಗಿ; ಮುರಿ: ಸೀಳು; ಬಳಿಕ: ನಂತರ; ಇರಿದು: ಎದುರು;

ಪದವಿಂಗಡಣೆ:
ಮತ್ತೆ +ಮಸೆದುದು +ಖಾತಿ +ಕರ್ಬೊಗೆ
ಸುತ್ತಿದ್+ಉಸುರಲಿ +ಮೀಸೆ+ಕಡಿದ್+ಔ
ಡೊತ್ತಿ +ಸೆಳೆದನು +ಶರವನ್+ಎಚ್ಚನು +ಪವನ+ನಂದನನ
ಹತ್ತೆ+ಕಡಿದನು +ಭೀಮ +ಮಗುಳಿವನ್
ಒತ್ತಿ +ಹೊಕ್ಕರೆ +ಕೈ +ನೆರವ+ ಹಾ
ರುತ್ತ +ಮುರಿದನು+ ಬಳಿಕ +ಧೃಷ್ಟದ್ಯುಮ್ನನ್+ಇದಿರಾದ

ಅಚ್ಚರಿ:
(೧) ಸುತ್ತಿ, ಔಡೊತ್ತಿ, ಒತ್ತಿ – ಪ್ರಾಸ ಪದಗಳು
(೨) ಕೋಪವನ್ನು ವರ್ಣಿಸುವ ಪರಿ – ಮತ್ತೆ ಮಸೆದುದು ಖಾತಿ ಕರ್ಬೊಗೆ ಸುತ್ತಿದುಸುರಲಿ

ಪದ್ಯ ೫೯: ಸೇನಾನಾಯಕರ ಹಾವಭಾವ ಹೇಗಿತ್ತು?

ಕದಡಿತೀ ಬಲಜಲಧಿ ಸುಭಟರು
ಹೊದರುಗಟ್ಟಿತು ಹೊಳೆವಡಾಯುಧ
ಹೊದಕೆಗಳ ಸತ್ತಿಗೆಯ ಸೂಸುವ ಚಮರ ಸೀಗುರಿಯ
ತುದಿವೆರಳ ಕಿರುದನಿಯ ಕೆಂಪಿನ
ಕದಡುಗಂಗಲ ಕುಣಿವಮೀಸೆಯ
ಕದನಗಲಿಗಳು ಕವಿದರೀ ಕರ್ಣಾದಿ ನಾಯಕರು (ದ್ರೋಣ ಪರ್ವ, ೧೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಕೌರವ ಸೈನ್ಯದಲ್ಲಿ ಕೋಲಾಹಲವಾಯಿತು. ವೀರರೆಲ್ಲರೂ ಒಗ್ಗೂಡಿದರು. ಕತ್ತಿ, ಛತ್ರ, ಚಾಮರಗಳು ಒಂದಾದವು. ತುದಿಬೆರಳ ಆಯುಧದ ಸದ್ದು, ಕೆಂಪೇರಿದ ಕಣ್ಣುಗಳು, ಕುಣಿವ ಮೀಸೆಗಳು ಕರ್ಣಾದಿ ಸೇನಾನಾಯಕರು ಅರ್ಜುನನತ್ತ ಹೋರಾಡಲು ಹೊರಟರು.

ಅರ್ಥ:
ಕದಡು: ಕಲಕು; ಬಲ: ಶಕ್ತಿ, ಸೈನ್ಯ; ಜಲಧಿ: ಸಾಗರ; ಸುಭಟ: ಸೈನಿಕರು; ಹೊದರು: ಗುಂಪು, ಸಮೂಹ; ಕಟ್ಟು: ಬಂಧಿಸು; ಹೊಳೆ: ಕಾಂತಿ, ಹೊಳಪು; ಆಯುಧ: ಶಸ್ತ್ರ; ಹೊದಕು: ಮುಸುಕು; ಸತ್ತಿಗೆ: ಕೊಡೆ, ಛತ್ರಿ; ಸೂಸು: ಹರಡು; ಚಮರ: ಚಾಮರ; ಸೀಗುರಿ: ಚಾಮರ; ತುದಿ: ಅಗ್ರ, ಮೇಲ್ಭಾಗ; ವೆರಳು: ಬೆರಳು ಕಿರುದನಿ: ಚಿಕ್ಕದಾದ ಶಬ್ದ; ಕೆಂಪು: ರಕ್ತವರ್ಣ; ಕಂಗಳು: ಕಣ್ಣು, ನಯನ; ಕದಡು: ಕಲಕು; ಕುಣಿ: ನರ್ತಿಸು; ಕದನ: ಯುದ್ಧ; ಕಲಿ: ಶೂರ; ಕವಿ: ಆವರಿಸು; ನಾಯಕ: ಒಡೆಯ;

ಪದವಿಂಗಡಣೆ:
ಕದಡಿತೀ +ಬಲಜಲಧಿ+ ಸುಭಟರು
ಹೊದರುಗಟ್ಟಿತು +ಹೊಳೆವಡ್+ಆಯುಧ
ಹೊದಕೆಗಳ +ಸತ್ತಿಗೆಯ +ಸೂಸುವ +ಚಮರ +ಸೀಗುರಿಯ
ತುದಿವೆರಳ +ಕಿರುದನಿಯ +ಕೆಂಪಿನ
ಕದಡುಗಂಗಳ+ ಕುಣಿವ+ಮೀಸೆಯ
ಕದನ+ಕಲಿಗಳು +ಕವಿದರೀ+ ಕರ್ಣಾದಿ +ನಾಯಕರು

ಅಚ್ಚರಿ:
(೧) ಕ ಕಾರದ ಸಾಲು ಪದ – ಕಿರುದನಿಯ ಕೆಂಪಿನ ಕದಡುಗಂಗಲ ಕುಣಿವಮೀಸೆಯ ಕದನಗಲಿಗಳು ಕವಿದರೀ ಕರ್ಣಾದಿ
(೨) ಸೈನ್ಯದ ವಿಸ್ತಾರವನ್ನು ವರ್ಣಿಸುವ ಪರಿ – ಬಲಜಲಧಿ

ಪದ್ಯ ೫೨: ಕರ್ಣನೇಕೆ ಕೋಪಗೊಂಡನು?

ಗದೆಯ ಹೊಯ್ಲಲಿ ನೊಂದು ಕೋಪದೊ
ಳದಿರೆನುತ ಸೈಗೆಡೆದ ರೋಮದ
ಹೊದರುಗಳ ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ
ಕುದಿದ ಹೃದಯದ ಕಾದ ದೇಹದ
ಕದನಗಲಿ ರವಿಸೂನು ಮೇಲಿ
ಕ್ಕಿದನು ಫಡ ಹೋಗದಿರು ಹೋಗದಿರೆನುತ ತೆಗೆದೆಚ್ಚ (ದ್ರೋಣ ಪರ್ವ, ೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಗದೆಯ ಬಡಿತದಿಂದ ನೊಂದು ಕರ್ಣನು ಬಹಳ ಕೋಪಗೊಂಡನು. ಅವನ ರೋಮಗಳು ಜೋಲು ಬಿದ್ದವು. ನಟ್ಟ ನೋಟದಿಂದ ನೋಡುವ ತನ್ನ ಕಣ್ಣುಗಳು ಕೆಂಪಾಗಿ ಕೋಪವನ್ನು ಕಾರಿದವು. ಅವನ ಮೀಸೆಗಳು ಕುಣಿದವು. ಹೃದಯವು ಕುದಿಯಿತು. ದೇಹ ಕಾವೇರಿತು. ಆಗ ಕರ್ಣನು ಹೋಗಬೇಡ ಹೋಗಬೇಡ ಎಂದು ಕೂಗಿ ಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಗದೆ: ಮುದ್ಗರ; ಹೊಯ್ಲು: ಏಟು, ಹೊಡೆತ; ನೊಂದು: ನೋವು; ಕೋಪ: ಖತಿ; ಅದಿರು: ನಡುಕ, ಕಂಪನ; ಸೈಗೆಡೆ: ನೇರವಾಗಿ ಕೆಳಕ್ಕೆ ಬೀಳು; ರೋಮ: ಕೂದಲು; ಹೊದರು: ಗುಂಪು, ಸಮೂಹ; ಬಿಡುಗಣ್ಣ: ಬಿಟ್ಟಕಣ್ಣು; ಕೆಂಪು: ರಕ್ತವರ್ಣ; ಕುಣಿ: ನರ್ತಿಸು; ಕುದಿ: ಮರಳು; ಹೃದಯ: ಎದೆ; ಕಾದ: ಬಿಸಿಯಾದ; ದೇಹ: ತನು; ಕದನ: ಯುದ್ಧ; ಕಲಿ: ಶೂರ; ರವಿ: ಸೂರ್ಯ; ಸೂನು: ಮಗ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಗದೆಯ +ಹೊಯ್ಲಲಿ +ನೊಂದು +ಕೋಪದೊಳ್
ಅದಿರೆನುತ +ಸೈಗೆಡೆದ +ರೋಮದ
ಹೊದರುಗಳ +ಬಿಡುಗಣ್ಣ +ಕೆಂಪಿನ +ಕುಣಿವ +ಮೀಸೆಗಳ
ಕುದಿದ +ಹೃದಯದ +ಕಾದ+ ದೇಹದ
ಕದನ+ಕಲಿ +ರವಿಸೂನು +ಮೇಲಿ
ಕ್ಕಿದನು +ಫಡ +ಹೋಗದಿರು +ಹೋಗದಿರ್+ಎನುತ+ ತೆಗೆದ್+ಎಚ್ಚ

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ ಕುದಿದ ಹೃದಯದ ಕಾದ ದೇಹದ

ಪದ್ಯ ೭೧: ಕೌರವನ ಮಕ್ಕಳು ಯುದ್ಧಕ್ಕೆ ಹೇಗೆ ಬಂದರು?

ತಳಿತ ಸತ್ತಿಗೆಗಳ ವಿಡಾಯಿಯ
ಲೋಲೆವ ಚಮರಿಯ ವಜ್ರ ಮಕುಟದ
ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ
ಕೆಲಬಲದ ವೇಲಾಯತರ ವೆ
ಗ್ಗಳದ ರಾವ್ತರ ಗಡಣ ನಾಲಗೆ
ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು (ದ್ರೋಣ ಪರ್ವ, ೫ ಸಂಧಿ, ೭೧ ಪದ್ಯ)

ತಾತ್ಪರ್ಯ:
ಛತ್ರ, ಚಾಮರಗಳಿಂದ ಸುತ್ತುವರೆದು, ವಜ್ರ ಕಿರೀಟಗಳನ್ನು ಧರಿಸಿ, ಮೀಸೆ ತಿರುವುತ್ತಾ, ರಾವುತರು ಹಿಂಡಿನೊಂದಿಗೆ ಹೊಳೆ ಹೊಳೆವ ಆಯುಧಗಳನ್ನು ಹಿಡಿದು ಕೌರವನ ಮಕ್ಕಳು ಬಂದರು. ಭಟ್ಟರು ಅವರ ಬಿರುದುಗಳನ್ನು ಉದ್ಘೋಷಿಸಿದರು.

ಅರ್ಥ:
ತಳಿತ: ಚಿಗುರಿದ; ಸತ್ತಿಗೆ: ಕೊಡೆ, ಛತ್ರಿ; ವಿಡಾಯಿ: ಶಕ್ತಿ, ಆಡಂಬರ; ಒಲೆ: ತೂಗಾಡು; ಚಮರಿ: ಚಾಮರ; ವಜ್ರ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಹೊಳಹು: ಕಾಂತಿ, ಪ್ರಕಾಶ; ಹೊಗೆ: ಉಗುಳು, ಪ್ರಜ್ವಲಿಸು; ಕೆದರು: ಹರಡು; ಬಿದು: ಜೋರಾದ; ಉಬ್ಬಟೆ: ಅತಿಶಯ; ಕೆಲಬಲ: ಅಕ್ಕಪಕ್ಕ; ವೇಳಾಯಿತ: ಸಮಯಕ್ಕೆ ಆಗುವವನು; ವೆಗ್ಗಳ: ಹೆಚ್ಚಳ; ರಾವ್ತರು: ಕುದುರೆ ಸವಾರ, ಅಶ್ವಾರೋಹಿ; ಗಡಣ: ಗುಂಪು; ನಾಲಗೆ: ಜಿಹ್ವೆ; ಎಳೆ:ತನ್ನ ಕಡೆಗೆ ಸೆಳೆದುಕೊ; ಹೊಳೆ: ಪ್ರಕಾಶ; ಆಯುಧ: ಶಸ್ತ್ರ; ಭಟ: ಸೈನಿಕ; ನೂಕು: ತಳ್ಳು;

ಪದವಿಂಗಡಣೆ:
ತಳಿತ +ಸತ್ತಿಗೆಗಳ +ವಿಡಾಯಿಯಲ್
ಒಲೆವ +ಚಮರಿಯ +ವಜ್ರ +ಮಕುಟದ
ಹೊಳಹುಗಳ+ ಹೊಗೆ +ಮೀಸೆ+ಕೆದರಿನ +ಬಿರುದಿನ್+ಉಬ್ಬಟೆಯ
ಕೆಲಬಲದ +ವೇಲಾಯತರ +ವೆ
ಗ್ಗಳದ +ರಾವ್ತರ +ಗಡಣ +ನಾಲಗೆ
ದಳೆದುದೆನೆ+ ಹೊಳೆಹೊಳೆವಡ್+ಆಯುಧ +ಭಟರು +ನೂಕಿದರು

ಅಚ್ಚರಿ:
(೧) ಹೊಳಹು, ಹೊಳೆ – ಸಾಮ್ಯಾರ್ಥ ಪದ

ಪದ್ಯ ೬೯: ದುರ್ಯೋಧನನ ಮಕ್ಕಳು ಹೇಗೆ ಪ್ರತಿಕ್ರಿಯಿಸಿದರು?

ಮಡಿದನಕಟಾ ತಮ್ಮ ಸಖನೆಂ
ದಡಸಿದಳಲಿನೊಳೆದ್ದು ಕೋಪದ
ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ
ಸಿಡಿದ ಮೀಸೆಯ ಬಿಗಿದ ಹುಬ್ಬಿನ
ಜಡಿವ ರೋಮಾಂಚನದ ಖಾತಿಯ
ಕಡುಹುಕಾರರು ಮಸಗಿದರು ದುರ್ಯೋದನಾತ್ಮಜರು (ದ್ರೋಣ ಪರ್ವ, ೫ ಸಂಧಿ, ೬೯ ಪದ್ಯ)

ತಾತ್ಪರ್ಯ:
ಶಲ್ಯನ ಮಗನ ಸಾವನ್ನು ಕೇಳಿದ ನೋಡಿದ ದುರ್ಯೋಧನನ ಮಕ್ಕಳು ಬಹಳ ನೊಂದರು. ಅಯ್ಯೋ ನಮ್ಮ ಒಬ್ಬ ಸ್ನೇಹಿತನು ಮಡಿದ, ಎಂದು ಅತ್ತು, ಕೋಪಗೊಂಡು ಕಾಲರುದ್ರನ ಕಣ್ಣನ್ನು ಹೋಲುವ ಕೆಂಗಣ್ಣುಗಳನ್ನು ತಾಳಿ, ಕುಣಿವ ಮೀಸೆ, ಬಿಗಿದ ಹುಬ್ಬು, ಕೋಪದಿಂದಾದಾ ರೋಮಾಂಚನಗಳೊಂದಿಗೆ ಯುದ್ಧಸನ್ನದ್ಧರಾದರು.

ಅರ್ಥ:
ಮಡಿ: ಸಾವು, ಮರಣ; ಅಕಟ: ಅಯ್ಯೋ; ಸಖ: ಸ್ನೇಹಿತ; ಅಡಸು: ಬಿಗಿಯಾಗಿ ಒತ್ತು; ಅಳಲು: ಅತ್ತು, ಕಣ್ಣೀರಿಡು; ಎದ್ದು: ಮೇಲೇಳು; ಕೋಪ: ಕ್ರೋಧ; ಕದು: ತುಂಬ; ಝಳ: ಪ್ರಕಾಶ, ಕಾಂತಿ; ಕಾಲಾಗ್ನಿ:ಪ್ರಳಯಕಾಲದ ಬೆಂಕಿ; ರುದ್ರ: ಶಿವನ ಸ್ವರೂಪ; ಹೋಲು: ಸದೃಶವಾಗು; ಸಿಡಿ: ಚಿಮ್ಮು; ಬಿಗಿ: ಭದ್ರವಾಗಿರುವುದು; ಹುಬ್ಬು: ಕಣ್ಣ ಮೇಲಿನ ಕೂದಲು; ಜಡಿ: ಗದರಿಸು; ರೋಮಾಂಚನ: ಆಶ್ಚರ್ಯ; ಖಾತಿ: ಕೋಪ, ಕ್ರೋಧ; ಕಡುಹು: ಸಾಹಸ; ಮಸಗು: ಹರಡು; ಆತ್ಮಜ: ಮಕ್ಕಳು;

ಪದವಿಂಗಡಣೆ:
ಮಡಿದನ್+ಅಕಟಾ +ತಮ್ಮ +ಸಖನೆಂದ್
ಅಡಸಿದ್+ಅಳಲಿನೊಳ್+ಎದ್ದು +ಕೋಪದ
ಕಡು+ಝಳದ +ಕಾಲಾಗ್ನಿ +ರುದ್ರನ +ಕಣ್ಣ +ಹೋಲುವೆಯ
ಸಿಡಿದ +ಮೀಸೆಯ +ಬಿಗಿದ +ಹುಬ್ಬಿನ
ಜಡಿವ +ರೋಮಾಂಚನದ +ಖಾತಿಯ
ಕಡುಹುಕಾರರು+ ಮಸಗಿದರು +ದುರ್ಯೋದನ್+ಆತ್ಮಜರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೋಪದ ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ

ಪದ್ಯ ೩೯: ಭೀಮನು ಹೇಗೆ ಬಂದು ವಿರಾಟನ ಮುಂದೆ ನಿಂತನು?

ಮುರಿದ ಮೀಸೆಯ ಹೊದರುದಲೆ ಕೆಂ
ಪೊರೆದ ಕಂಗಳ ಹೊಗರು ಮೋರೆಯ
ತುರುಗಿದುಬ್ಬಿನ ರೋಮಪುಳಕದ ಬಿಗಿದ ಹುಬ್ಬುಗಳ
ಹೊರೆದ ದೇಹದ ನಿರುತ ರೌದ್ರದ
ಮರುತಜನು ಕದನಕ್ಕೆ ಕಾಲನ
ಕರೆವವೊಲು ನಡೆತಂದು ನಿಂದನು ಮತ್ಸ್ಯನಿದಿರಿನಲಿ (ವಿರಾಟ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ತಿರುವಿದ ಮೀಸೆಗಳು, ಬಾಚದ ತಲೆಗೂದಲುಗಳು, ಕೆಂಪು ಕಣ್ಣುಗಳು, ಕಾಂತಿಭರಿತ ಮುಖ, ಹಿಗ್ಗಿದ ರೋಮ, ರೋಮಾಂಚನಗೊಂಡು ಬಿಗಿದಿದ್ದ ಹುಬ್ಬುಗಳು, ಸುಸ್ಥಿತಿಯಲ್ಲಿದ್ದ ದೇಹದಿಂದ ಭಯಂಕರನಾಗಿ ಕಾಣುತ್ತಿದ್ದ ಭೀಮನು ಯುದ್ಧಕ್ಕೆ ಕಾಲಯಮನನ್ನು ಕರೆಸಿದರೋ ಎಂಬಂತೆ ರಾಜನೆದುರಿನಲ್ಲಿ ಬಂದು ನಿಮ್ತನು.

ಅರ್ಥ:
ಮುರಿ: ತಿರುವು; ಹೊದರು: ಪೊದೆ, ಹಿಂಡಲು; ತಲೆ: ಶಿರ; ಒರೆ: ಸಾಮ್ಯತೆ; ಕಂಗಳು: ಕಣ್ಣು; ಹೊಗರು: ಕಾಂತಿ, ಪ್ರಕಾಶ; ಮೋರೆ: ಮುಖ; ತುರುಗು: ಸಂದಣಿ, ದಟ್ಟಣೆ; ಉಬ್ಬು: ಹಿಗ್ಗು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಬಿಗಿ: ಒತ್ತು, ಅಮುಕು; ಹುಬ್ಬು: ಕಣ್ಣಿನ ಮೇಲಿರುವ ಕೂದಲು; ಹೊರೆ: ರಕ್ಷಣೆ, ಭಾರ; ದೇಹ: ಕಾಯ, ತನು; ನಿರುತ: ದಿಟ, ಸತ್ಯ; ರೌದ್ರ: ಭಯಂಕರ; ಮರುತಜ: ಭೀಮ, ವಾಯುಪುತ್ರ; ಕದನ: ಯುದ್ಧ; ಕಾಲ: ಯಮ; ಕರೆ: ಬರೆಮಾಡು; ನಡೆ: ಚಲಿಸು; ನಡೆತಂದು: ನಡೆದುಕೊಂಡು ಬಂದು; ನಿಂದನು: ನಿಲ್ಲು; ಇದಿರು: ಎದುರು;

ಪದವಿಂಗಡಣೆ:
ಮುರಿದ +ಮೀಸೆಯ +ಹೊದರು+ತಲೆ +ಕೆಂ
ಪೊರೆದ+ ಕಂಗಳ +ಹೊಗರು +ಮೋರೆಯ
ತುರುಗಿದ್+ಉಬ್ಬಿನ +ರೋಮ+ಪುಳಕದ+ ಬಿಗಿದ +ಹುಬ್ಬುಗಳ
ಹೊರೆದ +ದೇಹದ +ನಿರುತ +ರೌದ್ರದ
ಮರುತಜನು +ಕದನಕ್ಕೆ +ಕಾಲನ
ಕರೆವವೊಲು +ನಡೆತಂದು +ನಿಂದನು +ಮತ್ಸ್ಯನ್+ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮರುತಜನು ಕದನಕ್ಕೆ ಕಾಲನ ಕರೆವವೊಲು ನಡೆತಂದು ನಿಂದನು

ಪದ್ಯ ೮: ಜೀಮೂತನು ದುರ್ಯೋಧನನಿಗೆ ಏನು ಹೇಳಿದನು?

ಹೊಡೆದು ಭುಜವನು ಹುಂಕರಿಸಿ ಕಿಡಿ
ಯಿಡುವ ಮೀಸೆಯ ತಿದ್ದುತೊಲವಿನ
ಲಡಿಗಡಿಗೆಯಾರ್ಭಟಿಸಿ ನಿಂದನು ಮಲ್ಲ ಜೀಮೂತ
ನುಡಿ ನೃಪತಿ ಹದನೇನು ರಿಪುಗಳ
ಮಡುಹಿ ಬರಲೋ ಮೇಣು ಕೈಸೆರೆ
ವಿಡಿದು ತರ್ಲೋ ಏನು ಹದನೆಲೆ ನೃಪತಿ ಹೇಳೆಂದ (ವಿರಾಟ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಮಲ್ಲರ ಮುಖಂಡನಾದ ಜೀಮೂತನು ತನ್ನ ತೋಳನ್ನು ತಟ್ಟಿ, ಹೂಂಕರಿಸಿ ಕಿಡಿಯಿಡುವ ಮೀಸೆಗಳನ್ನು ತಿದ್ದಿ, ಹೆಜ್ಜೆ ಹೆಜ್ಜೆಗೂ ಆರ್ಭಟಿಸಿ ಕೌರವನಿಗೆ ವಂದಿಸಿ ಪ್ರಭು ಏನಪ್ಪಣೆ, ಶತ್ರುಗಳನ್ನು ಸಂಹರಿಸಿ ಬರಲೋ ಅಥವ ಬಂಧಿಸಿ ತರಲೋ ಏನಪ್ಪಣೆ ಎಂದು ಕೇಳಿದನು.

ಅರ್ಥ:
ಹೊಡೆ: ಏಟು, ಹೊಡೆತ; ಭುಜ: ಬಾಹು; ಹೂಕರಿಸು: ಹೂಂಕಾರ; ಕಿಡಿ: ಬೆಂಕಿ; ತಿದ್ದು: ಸರಿಮಾಡು; ಒಲವು: ಪ್ರೀತಿ; ಅಡಿಗಡಿಗೆ: ಮತ್ತೆ ಮತ್ತೆ; ಆರ್ಭಟಿಸು: ಗರ್ಜಿಸು; ನಿಂದನು: ನಿಲ್ಲು; ಮಲ್ಲ: ಜಟ್ಟಿ; ನುಡಿ: ಮಾತು; ನೃಪತಿ: ರಾಜ; ಹದ: ಸ್ಥಿತಿ; ರಿಪು: ವೈರಿ; ಮಡುಹು: ಕೊಲ್ಲು, ಸಾಯಿಸು; ಮೇಣು: ಅಥವ; ಕೈಸೆರೆ: ಬಂಧಿಸು; ತರು: ಬರೆಮಾಡು;

ಪದವಿಂಗಡಣೆ:
ಹೊಡೆದು +ಭುಜವನು +ಹುಂಕರಿಸಿ+ ಕಿಡಿ
ಯಿಡುವ +ಮೀಸೆಯ +ತಿದ್ದುತ್+ಒಲವಿನಲ್
ಅಡಿಗಡಿಗೆ+ಆರ್ಭಟಿಸಿ+ ನಿಂದನು +ಮಲ್ಲ +ಜೀಮೂತ
ನುಡಿ +ನೃಪತಿ +ಹದನೇನು+ ರಿಪುಗಳ
ಮಡುಹಿ+ ಬರಲೋ+ ಮೇಣು+ ಕೈಸೆರೆ
ವಿಡಿದು +ತರಲೋ+ ಏನು+ ಹದನೆಲೆ+ ನೃಪತಿ+ ಹೇಳೆಂದ

ಅಚ್ಚರಿ:
(೧) ಬರಲೋ, ತರಲೋ – ಪ್ರಾಸ ಪದ

ಪದ್ಯ ೬: ವೈರಿಗಳ ಮೇಲೆ ಸೇನೆಯು ಹೇಗೆ ದಾಳಿಯಿಟ್ಟರು?

ಮೀಸೆ ಸೀದವು ಭಟರ ಸುಯ್ಲಿನ
ಲಾಸೆ ಬೀತುದು ದೇಹದಲಿ ಬಲು
ವಾಸಿಯಲಿ ಮನ ಮುಳುಗಿತನಿಬರಿಗೇಕಮುಖವಾಗಿ
ಬೀಸಿದರು ಚೌರಿಗಳ ಬಲ ವಾ
ರಾಶಿ ಮಸಗಿತು ರಿಪುಗಳಸುವಿನ
ಮೀಸಲನು ತುಡುಕಿದುದು ಮನ ಕೌರವ ಮಹಾರಥವ (ಕರ್ಣ ಪರ್ವ, ೧೩ ಸಂಧಿ, ೬ ಪದ್ಯ)

ತಾತ್ಪರ್ಯ:
ಸೈನಿಕರು ದುಃಖದಿಂದ ನಿಟ್ಟುಸಿರು ಬಿಟ್ಟರು, ಅವರ ಸಂತಾಪದ ಬಿಸಿಯುಸಿರಿನಿಂದ ಮೀಸೆಗಳು ಸುಟ್ಟುಹೋದವು, ಬಾಳುವ ಹಂಬಲು ದೇಹದ ಮಮತೆ ಬಿಟ್ಟು ಹೋದವು. ಅಷ್ಟೂ ಜನರು ಏಕಮುಖವಾಗಿ ತಮ್ಮ ಮನಸ್ಸಿನಲ್ಲಿ ಅವರ ಛಲ ಬಲವಾಯಿತು, ಅವರೆಲ್ಲರೂ ವೈರಿಗಳ ಪ್ರಾಣಹರಣ ಮಾಡಲೆಂದು ಚೌರಿಗಳನ್ನು ಬೀಸಿ ದಾಳಿಯಿಟ್ಟರು.

ಅರ್ಥ:
ಸೀದು: ಸೆಳೆದುಕೊಳ್ಳು; ಸುಯ್ಲು: ನಿಟ್ಟುಸಿರು; ಆಸೆ: ಇಚ್ಛೆ; ಬೀತು: ಕ್ಷಯವಾಯಿತು; ದೇಹ: ಶರೀರ; ವಾಸಿ:ಕ್ಷೇಮ, ಗುಣ ಮಟ್ಟ; ಮನ: ಮನಸ್ಸು; ಮುಳುಗು: ಕಾಣದಾಗು, ಮರೆಯಾಗು; ಅನಿಬರು: ಅಷ್ಟುಜನರು; ಏಕಮುಖ: ಒಂದೇ ರೀತಿ; ಬೀಸು: ತೂಗುವಿಕೆ; ಚೌರಿ:ಚೌರಿಯ ಕೂದಲು, ಗಂಗಾವನ; ಬಲ: ಶಕ್ತಿ; ವಾರಾಶಿ: ಸಮುದ್ರ; ಮಸಗು: ಹರಡು; ಕೆರಳು; ರಿಪು: ವೈರಿ; ಅಸು:ಪ್ರಾಣ; ಮೀಸಲು: ಮುಡಿಪು, ಪ್ರತ್ಯೇಕತೆ; ತುಡುಕು: ಹೋರಾಡು, ಸೆಣಸು; ಮನ: ಮನಸ್ಸು; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಮೀಸೆ+ ಸೀದವು+ ಭಟರ +ಸುಯ್ಲಿನ
ಲಾಸೆ +ಬೀತುದು +ದೇಹದಲಿ +ಬಲು
ವಾಸಿಯಲಿ +ಮನ +ಮುಳುಗಿತ್+ಅನಿಬರ್+ಈಗ್+ಏಕಮುಖವಾಗಿ
ಬೀಸಿದರು+ ಚೌರಿಗಳ +ಬಲ +ವಾ
ರಾಶಿ +ಮಸಗಿತು +ರಿಪುಗಳ್+ಅಸುವಿನ
ಮೀಸಲನು+ ತುಡುಕಿದುದು +ಮನ +ಕೌರವ+ ಮಹಾರಥವ

ಅಚ್ಚರಿ:
(೧) ನಿಟ್ಟುಸಿರಿನ ಪ್ರಭಾವ – ಮೀಸೆ ಸೀದವು ಭಟರ ಸುಯ್ಲಿನ
(೨) ಸಮುದ್ರಕ್ಕೆ ವಾರಾಶಿಯ ಪದದ ಬಳಕೆ

ಪದ್ಯ ೩: ಕೌರವರ ವೀರರು ತಮ್ಮನು ಏಕೆ ಹಳಿದುಕೊಂಡರು?

ಮೀಸೆಯೇಕಿವ ಸುಡಲಿ ಸುಭಟರ
ವೇಷವೇಕಿವು ತಮ್ಮ ವಧುಗಳು
ಹೇಸರೇಮೇಣ್ ಬಿಸುಟು ಹೋಗಳೆ ಚಂಡಿಕಾದೇವಿ
ಭಾಷೆ ಬಾಯಲಿ ಕೈದು ಕೈಯಲಿ
ವಾಸಿಯನು ಬಿಸುಟಕಟ ಜೀವದ
ಲಾಸೆ ಮಾಡಿದೆವೆನುತ ಮರುಗಿತು ಕೂಡೆ ಪರಿವಾರ (ಕರ್ಣ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಸೋಲನ್ನುಂಡ ಕೌರವರು, ಪೌರುಷದ ಸಂಕೇತವಾದ ಮೀಸೆತಾನೆ ನಮಗೆ ಏತಕ್ಕೆ? ಇದನ್ನು ಸುಡಬೇಕು, ವೀರರ ವೇಷಗಳು ನಮಗೆ ದಂಡ, ನಮ್ಮ ಹೆಂಡಿರು ನಮ್ಮನ್ನು ಕಂಡು ಅಸಹ್ಯ ಪಡುವುದಿಲ್ಲವೇ? ಶಸ್ತ್ರಾಭಿಮಾನಿಯಾದ ಚಂಡಿಕಾದೇವಿಯು ನಮ್ಮನ್ನು ಎಸೆದು ಹೋಗುವುದಿಲ್ಲವೇ? ಬಾಯೊಳಗೆ ಪ್ರತಿಜ್ಞೆ, ಕೈಯಲ್ಲಿ ಆಯುಧ, ನಮ್ಮ ಛಲವನ್ನು ಪಂಥವನ್ನು ತೊರೆದು ಜೀವದ ಮೇಲೆ ಆಸೆಮಾಡಿ ಭಂಡರಾಗಿ ಬದುಕಿದ್ದೇವೆ ಎಂದು ಕುರುಸೇನೆಯ ವೀರರು ತಮ್ಮನ್ನೇ ಹಳಿದುಕೊಂಡರು.

ಅರ್ಥ:
ಮೀಸೆ: ಮೂಗಿನ ಕೆಳಭಾಗದಲ್ಲಿ ಬೆಳೆಯುವ ಕೂದಲು; ಸುಡು: ಸುಟ್ಟು ಹಾಕು, ದಹಿಸು; ಸುಭಟ: ಒಳ್ಳೆಯ ಸೈನಿಕ; ವೇಷ: ಪೋಷಾಕು; ವಧು: ಸ್ತ್ರೀ; ಹೇಸರ: ಅಸಹ್ಯ; ಮೇಣ್: ಹಾಗೂ; ಬಿಸುಟು: ಹೊರಹಾಕು; ಹೋಗು: ನಡೆ; ಭಾಷೆ: ನುಡಿ; ಬಾಯಿ: ಮುಖದಲ್ಲಿರುವ ಊಟಮಾಡುವ ಅಂಗ; ಕೈದು: ಕತ್ತಿ; ಕೈ: ಕರ; ವಾಸಿ: ಪ್ರತಿಜ್ಞೆ, ಶಪಥ; ಬಿಸುಟು: ಹೊರಹಾಕು; ಜೀವ: ಬದುಕು; ಆಸೆ: ಇಚ್ಛೆ; ಮರುಗು: ತಳಮಳ, ಸಂಕಟ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಮೀಸೆಯೇಕ್+ಇವ +ಸುಡಲಿ +ಸುಭಟರ
ವೇಷವೇಕ್+ಇವು+ ತಮ್ಮ +ವಧುಗಳು
ಹೇಸರೇ+ಮೇಣ್ +ಬಿಸುಟು +ಹೋಗಳೆ +ಚಂಡಿಕಾದೇವಿ
ಭಾಷೆ +ಬಾಯಲಿ +ಕೈದು +ಕೈಯಲಿ
ವಾಸಿಯನು +ಬಿಸುಟ್+ಅಕಟ +ಜೀವದಲ್
ಆಸೆ +ಮಾಡಿದೆವೆನುತ+ ಮರುಗಿತು +ಕೂಡೆ +ಪರಿವಾರ

ಅಚ್ಚರಿ:
(೧) ಕೌರವರ ಸೈನ್ಯವು ತಮ್ಮನ್ನು ಹಂಗಿಸಿದ ಬಗೆ – ಭಾಷೆ ಬಾಯಲಿ ಕೈದು ಕೈಯಲಿ
ವಾಸಿಯನು ಬಿಸುಟಕಟ