ಪದ್ಯ ೪೫: ಶಲ್ಯನು ವೈರಿಸೈನ್ಯವನ್ನು ಹೇಗೆ ನಾಶಮಾಡಿದನು?

ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದ ನಾಟಕದ
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ (ಶಲ್ಯ ಪರ್ವ, ೨ ಸಂಧಿ, ೪೫ ಪದ್ಯ)

ತಾತ್ಪರ್ಯ:
ತಲೆವರಿಗೆ ಹಿಡಿದ ಪದಾತಿದಳವನ್ನು ಶಲ್ಯನು ಕಡಿದು ಬಿಸುಟನು. ಮುತ್ತಿದ ಕುದುರೆಗಳ ಕಾಲ್ಗೊರಸುಗಳನ್ನು ಕತ್ತರಿಸಿದನು. ಬೆಟ್ಟದಂತಹ ಆನೆಗಳನ್ನೂ, ರಥದ ಕುದುರೆಗಳನ್ನೂ, ಶತ್ರುಸೈನಿಕರನ್ನು ರಕ್ತದ ಕಡಲಿನಲ್ಲಿ ಮುಳುಗಿಸು ನಾಶಮಾಡಿದನು.

ಅರ್ಥ:
ಕಡಿ: ಸೀಳು; ಬಿಸುಟು: ಹೊರಹಾಕು; ತಲೆವರಿಗೆ: ಗುರಾಣಿ; ಅಡಸು: ಬಿಗಿಯಾಗಿ ಒತ್ತು, ಚುಚ್ಚು; ಪಯದಳ: ಕಾಲಾಳು; ಒಗ್ಗು: ಗುಂಪು, ಸಮೂಹ; ತುಡುಕು: ಹೋರಾಡು, ಸೆಣಸು; ಕುದುರೆ: ಅಶ್ವ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ತರಿ: ಕಡಿ, ಕತ್ತರಿಸು; ನಗ: ಬೆಟ್ಟ; ನಾಟಕ: ತೋರಿಕೆ; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ಆನೆ: ಕರಿ; ಥಟ್ಟು: ಗುಂಪು; ಉಪ್ಪರ: ಅತಿಶಯ; ಕುಡಿ: ತುದಿ, ಕೊನೆ; ರಥ: ಬಂಡಿ; ವಾಜಿ: ಕುದುರೆ; ರುಧಿರ: ರಕ್ತ; ಕಡಲು: ಸಾಗರ; ಅದ್ದು: ತೋಯು; ಉದ್ದು: ಒರಸು, ಅಳಿಸು; ಮಾರ್ಬಲ: ಶತ್ರು ಸೈನ್ಯ; ಗರ್ವಿತ: ಸೊಕ್ಕಿದ;

ಪದವಿಂಗಡಣೆ:
ಕಡಿದು+ ಬಿಸುಟನು +ತಲೆವರಿಗೆಗಳಲ್
ಅಡಸಿದಾ +ಪಯದಳವನ್+ಒಗ್ಗಿನ
ತುಡುಕು+ಕುದುರೆಯ +ಖುರವ +ತರಿದನು +ನಗದ +ನಾಟಕದ
ಗಡಣದ್+ಆನೆಯ +ಥಟ್ಟನ್+ಉಪ್ಪರ
ಕುಡಿಯ +ರಥವಾಜಿಗಳ +ರುಧಿರದ
ಕಡಲೊಳ್+ಅದ್ದಿದನ್+ಉದ್ದಿದನು +ಮಾರ್ಬಲದ +ಗರ್ವಿತರ

ಅಚ್ಚರಿ:
(೧) ರಣರಂಗದ ಚಿತ್ರಣ – ರುಧಿರದಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ

ಪದ್ಯ ೩: ಕುರುಪತಿಯು ಯಾರ ಮೇಲೆ ಯುದ್ಧಕ್ಕೆ ಹೊರಟನು?

ಇತ್ತಲಾ ಕುರುರಾಯ ವಳಿತವ
ಮುತ್ತಿದನು ಕೀಚಕನು ತುರುಗಳ
ಮೊತ್ತವನು ಸೆರೆವಿಡಿದು ತಿರುಗಿದನತ್ತ ವಹಿಲದಲಿ
ಬಿತ್ತಿದರು ಕುರುಪತಿಗೆ ಭಯವನು
ತತ್ತಳದ ತವಕದಲಿ ರಾಯನು
ಮೊತ್ತದಕ್ಷೋಹಿಣಿಯ ಮಾರ್ಬಲ ಸಹಿತ ಹೊರವಂಟ (ಅರಣ್ಯ ಪರ್ವ, ೨೫ ಸಂಧಿ, ೩ ಪದ್ಯ)

ತಾತ್ಪರ್ಯ:
ಇತ್ತ ಕೌರವನ ರಾಜ್ಯದ ಸರಹದ್ದಿಗೆ ಕೀಚಕನು ಗೋಗ್ರಹಣ ಮಾಡಿದನು. ಈ ಸುದ್ದಿಯನ್ನು ದುರ್ಯೋಧನನಿಗೆ ಭಟರು ಮುಟ್ಟಿಸಿದರು. ಇದನ್ನು ಕೇಳಿ ಹೆದರಿ, ಕಾತುರಗೊಂಡ ದುರ್ಯೋಧನನು ತನ್ನ ಅಕ್ಷೋಹಿಣಿ ಸೈನ್ಯದ ಸಮೇತ ಯುದ್ಧಕ್ಕೆ ಹೊರಟನು.

ಅರ್ಥ:
ರಾಯ: ರಾಜ; ವಳಿತ: ಮಂಡಲ ಪ್ರದೇಶ; ಮುತ್ತು: ಆವರಿಸು; ಕೀಚಕ: ವಿರಾಟರಾಜನ ಸೇನಾಪತಿ; ತುರು: ಹಸು; ಮೊತ್ತ: ರಾಶಿ, ಒಟ್ಟಲು; ಸೆರೆ: ಬಂಧಿಸು; ತಿರುಗು: ಓಡಾಡು; ವಹಿಲ:ಬೇಗ, ತ್ವರೆ; ಬಿತ್ತು: ಪ್ರಚಾರ ಮಾಡು; ಕುರುಪತಿ: ದುರ್ಯೋಧನ; ಭಯ: ಅಂಜಿಕೆ; ತತ್ತಳ: ಹೆದರು, ನಡುಗು; ತವಕ: ಕಾತುರ, ಕುತೂಹಲ; ರಾಯ: ರಾಜ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಮಾರ್ಬಲ: ದೊಡ್ಡ ಸೈನ್ಯ; ಸಹಿತ: ಜೊತೆ; ಹೊರವಂಟ: ತೆರಳು;

ಪದವಿಂಗಡಣೆ:
ಇತ್ತಲ್+ಆ+ ಕುರುರಾಯ +ವಳಿತವ
ಮುತ್ತಿದನು +ಕೀಚಕನು +ತುರುಗಳ
ಮೊತ್ತವನು +ಸೆರೆವಿಡಿದು +ತಿರುಗಿದನ್+ಅತ್ತ +ವಹಿಲದಲಿ
ಬಿತ್ತಿದರು +ಕುರುಪತಿಗೆ +ಭಯವನು
ತತ್ತಳದ +ತವಕದಲಿ +ರಾಯನು
ಮೊತ್ತದ್+ಅಕ್ಷೋಹಿಣಿಯ +ಮಾರ್ಬಲ +ಸಹಿತ +ಹೊರವಂಟ

ಅಚ್ಚರಿ:
(೧) ದುರ್ಯೋಧನನ ಭಾವನೆ – ತತ್ತಳದ ತವಕದಲಿ ರಾಯನು ಮೊತ್ತದಕ್ಷೋಹಿಣಿಯ ಮಾರ್ಬಲ ಸಹಿತ ಹೊರವಂಟ

ಪದ್ಯ ೨೪: ದ್ವಾರಕೆಯ ಮೇಲಿನ ಆಕ್ರಣವನ್ನು ಯಾರು ತಡೆದರು?

ಲಗ್ಗೆಗಳುಕುವುದಲ್ಲಲೇ ಬಲು
ದುರ್ಗವದು ದುರ್ಭೇದ್ಯವದರೊಳ
ಗಗ್ಗಳೆಯರಿದ್ದುದು ಹಲಾಯುಧ ಮನ್ಮಥಾದಿಗಳು
ಬಗ್ಗಿ ಕವಿವ ಕಠೋರ ದೈತ್ಯರ
ನುಗ್ಗುನುರಿ ಮಾಡಿದರು ಹರಣದ
ಸುಗ್ಗಿ ಮೆರೆದುದು ಮಾರ್ಬಲದೊಳಬುಜಾಕ್ಷಿ ಕೇಳೆಂದ (ಅರಣ್ಯ ಪರ್ವ, ೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ದ್ರೌಪದಿ ಕೇಳು, ದ್ವಾರಕೆಯ ಕೋಟೆ ಶತ್ರುಗಳ ಲಗ್ಗೆಗೆ ಬಗ್ಗುವಂತಹದಲ್ಲ. ಅದು ಭೇದಿಸಲಸಾಧ್ಯವಾದ ಕೋಟೆ, ಅಲ್ಲದೆ ಯಾದವ ಸೈನ್ಯದಲ್ಲಿ ಬಲರಾಮ, ಪ್ರದ್ಯುಮ್ನ ಮೊದಲಾದ ವೀರರಿದ್ದರು. ದ್ವಾರಕೆಯನ್ನು ಮುತ್ತಿದ ಕಠೋರ ರಾಕ್ಷಸರನ್ನು ಬಲರಾಮಾದಿಗಳು ಪುಡಿಪುಡಿಯಾಗುವಂತೆ ಕೊಂದರು. ಶತ್ರುಸೈನ್ಯದ ಯೋಧರ ಪ್ರಾಣಗಳ ಸುಗ್ಗಿಯಾಯಿತು ಎಂದು ಕೃಷ್ಣನು ದ್ರೌಪದಿಗೆ ತಿಳಿಸಿದನು.

ಅರ್ಥ:
ಲಗ್ಗೆ: ಮುತ್ತಿಗೆ, ಆಕ್ರಮಣ; ಅಳುಕು: ಹೆದರು; ಬಲು: ದೊಡ್ಡ; ದುರ್ಗ: ಕೋಟೆ; ದುರ್ಭೇದ: ಭೇದಿಸಲಾಗದ; ಅಗ್ಗ: ಶ್ರೇಷ್ಠ; ಹಲಾಯುಧ: ಬಲರಾಮ; ಮನ್ಮಥ: ಪ್ರದ್ಯುಮ್ನ; ಆದಿ: ಮೊದಲಾದ; ಬಗ್ಗಿ: ಬಾಗಿಸು; ಕವಿವ: ಮುತ್ತುವರೆದ; ಕಠೋರ: ಉಗ್ರವಾದ; ದೈತ್ಯ: ರಾಕ್ಷಸ; ನುಗ್ಗು: ಪುಡಿ; ಹರಣ: ಜೀವ, ಪ್ರಾಣ, ಅಪಹರಿಸುವದು; ಸುಗ್ಗಿ: ಹಬ್ಬ, ಪರ್ವ; ಮೆರೆ: ಹೊಳೆ, ಪ್ರಕಾಶಿಸು; ಮಾರ್ಬಲ: ಶತ್ರು ಸೈನ್ಯ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು (ದ್ರೌಪದಿ); ಕೇಳು: ಆಲಿಸು;

ಪದವಿಂಗಡಣೆ:
ಲಗ್ಗೆಗ್+ಅಳುಕುವುದಲ್ಲಲೇ+ ಬಲು
ದುರ್ಗವದು +ದುರ್ಭೇದ್ಯವ್+ಅದರೊಳಗ್
ಅಗ್ಗಳೆಯರ್+ಇದ್ದುದು +ಹಲಾಯುಧ +ಮನ್ಮಥಾದಿಗಳು
ಬಗ್ಗಿ +ಕವಿವ +ಕಠೋರ+ ದೈತ್ಯರ
ನುಗ್ಗುನುರಿ+ ಮಾಡಿದರು+ ಹರಣದ
ಸುಗ್ಗಿ+ ಮೆರೆದುದು +ಮಾರ್ಬಲದೊಳ್+ಅಬುಜಾಕ್ಷಿ+ ಕೇಳೆಂದ

ಅಚ್ಚರಿ:
(೧) ರಾಕ್ಷಸರನ್ನು ಸದೆಬಡೆದ ಪರಿ – ಬಗ್ಗಿ ಕವಿವ ಕಠೋರ ದೈತ್ಯರ ನುಗ್ಗುನುರಿ ಮಾಡಿದರು
(೨) ದ್ವಾರಕೆಯ ದುರ್ಗ – ಲಗ್ಗೆಗಳುಕುವುದಲ್ಲಲೇ ಬಲುದುರ್ಗವದು ದುರ್ಭೇದ್ಯವ

ಪದ್ಯ ೩೫: ಅರ್ಜುನನು ಯಾವ ಬಾಣದಿಂದ ಕೌರವ ಸೇನೆಯನ್ನು ನಿಲ್ಲಿಸಿದನು?

ಬಳಿಕ ಸೇನಾಸ್ತಂಭ ಶರದಲಿ
ನಿಲಿಸಿದನು ಮಾರ್ಬಲವನಿತ್ತಲು
ಚಳೆಯದಲಿ ಹಿಮ್ಮೆಟ್ಟುತಿರೆ ಕಂಡನು ಧನಂಜಯನ
ಹೊಳಹು ದೂವಾಳಿಯಲಿ ಪಾರ್ಥನ
ಕೆಲಕೆ ಬಿಟ್ಟನು ರಥವ ನಿಲು ನಿ
ಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ (ಕರ್ಣ ಪರ್ವ, ೧೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕೌರವ ಸೇನೆಯು ತನ್ನ ಬಳಿ ಬರುವುದನ್ನು ಕಂಡ ಅರ್ಜುನನು ಸಂಭಾಸ್ತ್ರವನ್ನು ಪ್ರಯೋಗಿಸಿ ಅವರನ್ನು ನಿಲ್ಲಿಸಿ ಮತ್ತೆ ಧರ್ಮಜನ ಪಾಳೆಯದತ್ತ ಹೋಗುತ್ತಿರಲು, ಕರ್ಣನು ತನ್ನ ರಥವನ್ನು ಅರ್ಜುನನ ಕೆಲಕ್ಕೆ ಬಿಟ್ಟು ನಿಲ್ಲು ನಿಲ್ಲು ಹೋಗಬೇಡ ಎಂದು ಅವನನ್ನು ಬೆನ್ನಟ್ಟಿದನು.

ಅರ್ಥ:
ಬಳಿಕ: ನಂತರ; ಸೇನಾ: ಸೈನ್ಯ; ಸ್ತಂಭ: ಬಾಣದ ಹೆಸರು; ಶರ: ಬಾಣ; ನಿಲಿಸು: ತಡೆ; ಮಾರ್ಬಲ: ಶತ್ರು ಸೈನ್ಯ; ಚಳೆ: ಚಿಮುಕಿಸುವುದು; ಹಿಮ್ಮೆಟ್ಟು: ಹಿಂದಕ್ಕೆ ಸರಿ; ಕಂಡು: ನೋಡು; ಹೊಳಹು: ಕುದುರೆಯ ಓಟದಲ್ಲಿ ಒಂದು ಬಗೆ; ದೂವಾಳಿ: ವೇಗವಾಗಿ ಓಡುವುದು; ಕೆಲ: ಪಕ್ಕ, ಮಗ್ಗುಲು; ಬಿಡು: ತೊರೆ, ತ್ಯಜಿಸು; ರಥ: ಬಂಡಿ; ನಿಲು: ತಡೆ; ಹೊಗು: ತೆರಳು; ಬೆಂಬತ್ತಿ: ಅಟ್ಟಿಸಿಕೊಂಡು ಹೋಗು; ಕಲಿ: ಶೂರ;

ಪದವಿಂಗಡಣೆ:
ಬಳಿಕ +ಸೇನಾಸ್ತಂಭ +ಶರದಲಿ
ನಿಲಿಸಿದನು +ಮಾರ್ಬಲವನ್+ಇತ್ತಲು
ಚಳೆಯದಲಿ+ ಹಿಮ್ಮೆಟ್ಟುತಿರೆ+ ಕಂಡನು +ಧನಂಜಯನ
ಹೊಳಹು +ದೂವಾಳಿಯಲಿ +ಪಾರ್ಥನ
ಕೆಲಕೆ +ಬಿಟ್ಟನು +ರಥವ +ನಿಲು +ನಿಲ್
ಎಲವೊ +ಹೋಗದಿರೆನುತ+ ಬೆಂಬತ್ತಿದನು +ಕಲಿಕರ್ಣ

ಅಚ್ಚರಿ:
(೧) ಕರ್ಣನು ಕರೆಯುವ ಬಗೆಯನ್ನು ಚಿತ್ರಿಸಿರುವುದು – ನಿಲು ನಿಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ