ಪದ್ಯ ೨: ಕೌರವನ ಪರಿಸ್ಥಿತಿ ಹೇಗಿತ್ತು?

ಬಲಿದ ಮರವೆಯ ಕರಣವೃತ್ತಿಯ
ಕಳವಳದ ಪಂಚೇಂದ್ರಿಯದ ಪರಿ
ಚಲನಸಂಚದ ಶಿಥಿಲಮೂಲಾಧಾರಮಾರುತನ
ಅಲಘುತರಪರಿವೇದನಾವಿ
ಹ್ವಳಿತಕಂಠಗತಾತ್ಮನೂರ್ಧ್ವ
ಸ್ಖಲಿತದೀರ್ಘಶ್ವಾಸನಿದ್ದನು ಕೌರವರ ರಾಯ (ಗದಾ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಕೌರವನಿಗೆ ಮೂರ್ಛೆ ಬಲಿದಿತ್ತು. ಪಂಚೇಂದ್ರಿಯಗಳು ಕಳವಳಿಸುತ್ತಿದ್ದವು. ಮೂಲಾಧಾರ ಮಾರುತವು ಶಿಥಿಲವಾಗಿ ಚಲಿಸುತ್ತಿತ್ತು. ಅತಿಶಯವಾದ ನೋವಿನಿಮ್ದ ವಿಹ್ವಲನಾಗಿದ್ದ ಅವನ ಪ್ರಾಣವು ಮೇಲಕ್ಕೆ ಚಲಿಸುತ್ತಿತ್ತು. ಅವನ ಉಸಿರಾಟವು ಸಮವಾಗಿರಲಿಲ್ಲ.

ಅರ್ಥ:
ಬಲಿ: ಗಟ್ಟಿಯಾದ; ಮರವೆ: ಮೂರ್ಛೆ; ಕರಣ: ಜ್ಞಾನೇಂದ್ರಿಯ; ವೃತ್ತಿ: ಸ್ಥಿತಿ; ಕಳವಳ: ಗೊಂದಲ; ಪಂಚೇಂದ್ರಿಯ: ಕಣ್ಣು, ಕಿವಿ, ಮೂಗು, ನಾಲಗೆ, ಬಾಯಿ ಎಂಬ ಐದು ಇಂದ್ರಿಯಗಳು; ಚಲನ: ಅಲುಗಾಟ; ಸಂಚ: ಮೊತ್ತ, ರಾಶಿ; ಶಿಥಿಲ: ನಿಶ್ಶಕ್ತವಾದುದು, ಬಲಹೀನವಾದುದು; ಮೂಲಾಧಾರ: ಕುಂಡಲಿನಿಯ ಮೂಲ ಸ್ಥಾನ; ಮಾರುತ: ವಾಯು; ಅಲಗು: ಆಯುಧಗಳ ಹರಿತವಾದ ಅಂಚು; ವೇದನೆ: ನೋವು; ವಿಹ್ವಲ: ಹತಾಶ; ಕಂಠ: ಗಂಟಲು; ಆತ್ಮ: ಜೀವ; ಊರ್ಧ್ವ: ಮೇಲೆ; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ದೀರ್ಘ: ಉದ್ದ; ಶ್ವಾಸ: ಉಸಿರು; ರಾಯ: ರಾಜ;

ಪದವಿಂಗಡಣೆ:
ಬಲಿದ +ಮರವೆಯ +ಕರಣ+ವೃತ್ತಿಯ
ಕಳವಳದ +ಪಂಚೇಂದ್ರಿಯದ +ಪರಿ
ಚಲನ+ಸಂಚದ +ಶಿಥಿಲ+ಮೂಲಾಧಾರ+ಮಾರುತನ
ಅಲಘುತರ+ಪರಿ+ವೇದನಾ+ವಿ
ಹ್ವಳಿತ+ಕಂಠ+ ಗತ+ಆತ್ಮನ್+ಊರ್ಧ್ವ
ಸ್ಖಲಿತ+ದೀರ್ಘ+ಶ್ವಾಸನಿದ್ದನು+ ಕೌರವರ +ರಾಯ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಅಲಘುತರಪರಿವೇದನಾವಿಹ್ವಳಿತಕಂಠಗತಾತ್ಮನೂರ್ಧ್ವ
ಸ್ಖಲಿತದೀರ್ಘಶ್ವಾಸನಿದ್ದನು

ಪದ್ಯ ೬೮: ದ್ರೋಣರು ರಥದಲ್ಲಿ ಹೇಗೆ ಕುಳಿತರು?

ಎನುತ ರಥದೊಳು ರಚಿಸಿ ಪದ್ಮಾ
ಸನವನಿಂದ್ರಿಯಕರಣವೃತ್ತಿಯ
ನನಿತುವನು ತಡೆದೆತ್ತಿ ಮೂಲಾಧಾರ ಮಾರುತನ
ಇನ ಶಶಿಗಳೊಂದಾಗೆ ನಾಡಿಗ
ಳನಿಲನಿಕರವನುಗಿದು ಬಿಂದು
ಧ್ವನಿ ಕಳಾಪರಿಲುಳಿತನೆಸೆದನು ವರ ಸಮಾಧಿಯಲಿ (ದ್ರೋಣ ಪರ್ವ, ೧೮ ಸಂಧಿ, ೬೮ ಪದ್ಯ)

ತಾತ್ಪರ್ಯ:
ರಥದಲ್ಲಿ ಪದ್ಮಾಸನವನ್ನು ಹಾಕಿ ಕುಲಿತ ದ್ರೋಣನು ಇಂದ್ರಿಯ ಮನಸ್ಸುಗಳ ಅಷ್ಟೂ ವೃತ್ತಿಯನ್ನು ತಡೆದು, ಸೂರ್ಯ ಚಂದ್ರರು ಒಂದಾಗುವ ಪರಿ, ಇಡಾ, ಪಿಂಗಳಾ ಸುಷುಮ್ನಾಡಿಗಳ ವಾಯುವನ್ನು ನಿಲ್ಲಿಸಿ ನಾದ ಬಿಂದು ಕಲಾತೀತವಾದ ಸಮಾಧಿಯಲ್ಲಿ ನಿಂತನು.

ಅರ್ಥ:
ರಥ: ಬಂಡಿ; ರಚಿಸು: ನಿರ್ಮಿಸು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಕರಣ: ಜ್ಞಾನೇಂದ್ರಿಯ, ಮನಸ್ಸು; ವೃತ್ತಿ: ಕೆಲಸ; ಅನಿತು: ಅಷ್ಟು; ತಡೆ: ನಿಲ್ಲಿಸು; ಮಾರುತ: ವಾಯು; ಇನ: ಸೂರ್ಯ; ಶಶಿ: ಚಂದ್ರ; ನಾಡಿ: ರೀರದಲ್ಲಿ ರಕ್ತ ಚಲನೆಗಾಗಿ ಇರುವ ಕೊಳವೆಯಾಕಾರದ ರಚನೆ, ಧಮನಿ; ಅನಿಲ: ವಾಯು; ನಿಕರ: ಸಮೂಹ; ಉಗಿ: ಹೊರಹಾಕು; ಬಿಂದು: ಹನಿ; ಧ್ವನಿ: ರವ, ಶಬ್ದ; ಲುಳಿ: ಕಾಂತಿ; ಎಸೆ: ತೋರು; ವರ: ಶ್ರೇಷ್ಠ; ಸಮಾಧಿ: ಏಕಾಗ್ರತೆ, ತನ್ಮಯತೆ;

ಪದವಿಂಗಡಣೆ:
ಎನುತ+ ರಥದೊಳು +ರಚಿಸಿ +ಪದ್ಮಾ
ಸನವನ್+ಇಂದ್ರಿಯ+ಕರಣ+ವೃತ್ತಿಯನ್
ಅನಿತುವನು +ತಡೆದೆತ್ತಿ +ಮೂಲಾಧಾರ +ಮಾರುತನ
ಇನ+ ಶಶಿಗಳೊಂದಾಗೆ +ನಾಡಿಗಳ್
ಅನಿಲ+ನಿಕರವನ್+ಉಗಿದು +ಬಿಂದು
ಧ್ವನಿ +ಕಳಾಪರಿ+ಲುಳಿತನ್+ಎಸೆದನು +ವರ +ಸಮಾಧಿಯಲಿ

ಅಚ್ಚರಿ:
(೧) ಸಮಾಧಿಯಲ್ಲಿ ಕುಳಿತುಕೊಳ್ಳುವ ಪರಿ – ನಾಡಿಗಳನಿಲನಿಕರವನುಗಿದು ಬಿಂದು ಧ್ವನಿ ಕಳಾಪರಿಲುಳಿತನೆಸೆದನು ವರ ಸಮಾಧಿಯಲಿ

ಪದ್ಯ ೧೯: ದ್ರೋಣನು ಸೈನ್ಯವನ್ನು ಹೇಗೆ ಕಡಿದು ಹಾಕಿದನು?

ನುಡಿಗೆ ಮುಂಚುವ ಬಾಣ ಮಾರುತ
ನಡಸಿ ಬೀಸುವ ಲಾಗು ತಲೆಗಳ
ತೊಡಬೆಗಳಚುವ ಬೇಗವನು ಬಣ್ಣಿಸುವರೆನ್ನಳವೆ
ಕಡಲ ಕಡಹದಲುರಿವ ಗರಳವ
ನುಡುಗಿದವರಿವರೋ ಶಿವಾಯೆಂ
ದೊಡನೊಡನೆ ಪಡೆ ನಡುಗಲೊರಸಿದನಾ ಮಹಾರಥರ (ದ್ರೋಣ ಪರ್ವ, ೧೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಾತಿಗಿಂತ ಮೊದಲೇ ಹೋಗುವ ಬಾಣಗಳು, ಅವುಗಳಿಂದ ಬೀಸುವ ಗಾಳಿ, ತಲೆಗಳ ತೊಡಕನ್ನು ಕತ್ತರಿಸುವ ವೇಗಗಳನ್ನು ಹೇಳಲು ಅಸಾಧ್ಯ. ಸಮುದ್ರ ಮಥನದಲ್ಲಿ ಉದಿಸಿದ ವಿಷವನ್ನು ಕುಡಿದವನು ಇವನೋ ಶಿವನೋ ಎನ್ನುವಂತೆ ಮೇಲಿಂದ ಮೇಲೆ ಆ ಸೈನ್ಯವನ್ನು ಕಡಿದು ಹಾಕಿದನು.

ಅರ್ಥ:
ನುಡಿ: ಮಾತು; ಮುಂಚು: ಮುಂದೆ; ಬಾಣ: ಅಂಬು; ಮಾರುತ: ಗಾಳಿ; ಅಡಸು: ಬಿಗಿಯಾಗಿ ಒತ್ತು; ಬೀಸು: ತೂರು, ತೂಗಾದು; ಲಾಗು: ನೆಗೆಯುವಿಕೆ; ತಲೆ: ಶಿರ; ತೊಡಬೆಳಗಚು: ಆಯುಧಗಳ ಸಮೂಹವನ್ನು ಕಳಚು; ಬೇಗ: ಶೀಘ್ರ; ಬಣ್ಣಿಸು: ವಿವರಿಸು; ಅಳವು: ಶಕ್ತಿ; ಕಡಲು: ಸಾಗರ; ಕಡಹು:ಅಲ್ಲಾಡಿಸು; ಉರಿ: ಜ್ವಾಲೆ, ಸಂಕಟ; ಗರಳ: ವಿಷ; ಉಡುಗು: ಒಳಹೋಗು; ಶಿವ: ಶಂಕರ; ಪಡೆ: ಸೈನ್ಯ; ನಡುಗು: ಹೆದರು; ಒರಸು: ನಾಶ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ನುಡಿಗೆ +ಮುಂಚುವ +ಬಾಣ +ಮಾರುತನ್
ಅಡಸಿ +ಬೀಸುವ +ಲಾಗು +ತಲೆಗಳ
ತೊಡಬೆಗಳಚುವ +ಬೇಗವನು +ಬಣ್ಣಿಸುವರೆನ್ನ್+ಅಳವೆ
ಕಡಲ +ಕಡಹದಲ್+ಉರಿವ +ಗರಳವನ್
ಉಡುಗಿದವರ್+ಇವರೋ +ಶಿವಾ+ಯೆಂ
ದೊಡನೊಡನೆ+ ಪಡೆ +ನಡುಗಲ್+ಒರಸಿದನಾ +ಮಹಾರಥರ

ಅಚ್ಚರಿ:
(೧) ರೂಪಕದ ಪ್ರಯೋಗ – ಕಡಲ ಕಡಹದಲುರಿವ ಗರಳವನುಡುಗಿದವರಿವರೋ ಶಿವಾ

ಪದ್ಯ ೪೩: ಭೀಮ ಕರ್ಣರ ಯುದ್ಧವನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾರೆ?

ಸರಳ ಸರಿಸೋನೆಯನು ಪವನಜ
ಗಿರಿಗೆ ಕರೆದುದು ಕರ್ಣ ಮೇಘದ
ಹೊರಳಿಯೇನೆಂಬೆನು ಮಹಾಸಂಗ್ರಾಮ ಸಂಭ್ರಮವ
ಸರಳಿನಲಿ ಧನುವಿನಲಿ ಗದೆಯಲಿ
ಕರಹತಿಯಲಹಿತಾಸ್ತ್ರವನು ಸಂ
ಹರಿಸಿ ಬೀಸಿತು ಭೀಮಮಾರುತ ಕರ್ಣಮೇಘದಲಿ (ದ್ರೋಣ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕರ್ಣನೆಂಬುವ ಮೋಡವು ಭೀಮನೆಂಬ ಪರ್ವತದ ಮೇಲೆ ಬಾಣಗಳ ಸೋನೆಯನ್ನು ವರ್ಷಿಸಿತು. ಬಾಣ, ಧಉಸ್ಸು, ಗದೆ, ಬರೀ ಕೈಗಳಿಂದ ಸರ್ಪಾಸ್ತ್ರಗಳನ್ನು ತಪ್ಪಿಸಿ, ಭೀಮ ಮಾರುತವು ಕರ್ಣ ಮೇಘದ ಮೇಲೆ ಬೀಸಿತು.

ಅರ್ಥ:
ಸರಳು: ಬಾಣ; ಸೋನೆ: ಮಳೆ, ವೃಷ್ಟಿ; ಪವನಜ: ಭೀಮ; ಗಿರಿ: ಬೆಟ್ಟ; ಮೇಘ: ಮೋಡ; ಹೊರಳಿ: ಗುಂಪು; ಸಂಗ್ರಾಮ: ಯುದ್ಧ; ಸಂಭ್ರಮ: ಸಡಗರ; ಧನು: ಬಿಲ್ಲು; ಗದೆ: ಮುದ್ಗರ; ಕರ: ಹಸ್ತ; ಹತಿ: ಪೆಟ್ಟು, ಹೊಡೆತ; ಅಹಿತಾಸ್ತ್ರ: ಸರ್ಪಾಸ್ತ್ರ; ಸಂಹರ: ನಾಶ; ಭೀಸು: ಎಸೆ, ಬಿಸಾಡು; ಮಾರುತ: ಗಾಳಿ, ವಾಯು;

ಪದವಿಂಗಡಣೆ:
ಸರಳ +ಸರಿಸೋನೆಯನು +ಪವನಜ
ಗಿರಿಗೆ +ಕರೆದುದು +ಕರ್ಣ +ಮೇಘದ
ಹೊರಳಿ+ಏನೆಂಬೆನು +ಮಹಾಸಂಗ್ರಾಮ +ಸಂಭ್ರಮವ
ಸರಳಿನಲಿ +ಧನುವಿನಲಿ +ಗದೆಯಲಿ
ಕರಹತಿಯಲ್+ಅಹಿತಾಸ್ತ್ರವನು ಸಂ
ಹರಿಸಿ+ ಬೀಸಿತು +ಭೀಮ+ಮಾರುತ+ ಕರ್ಣ+ಮೇಘದಲಿ

ಅಚ್ಚರಿ:
(೧) ಕವಿಯ ಕಲ್ಪನೆಗೆ ಉತ್ಕೃಷ್ಟ ಉದಾಹರಣೆ – ಭೀಮ ನನ್ನು ಬೆಟ್ಟಕ್ಕೂ, ಕರ್ಣನನ್ನು ಮೇಘಕ್ಕು ಹೋಲಿಸಿದ ಪರಿ

ಪದ್ಯ ೨೮: ಅರ್ಜುನನಿಗೆ ಯಾರು ಶುಭ ನುಡಿಯಲೆಂದು ಧರ್ಮಜನು ಹೇಳಿದನು?

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರಮಹೋರಗ ಯಕ್ಷ ಮನುಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ (ಅರಣ್ಯ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಿವನು ನಿನಗೆ ದಯೆತೋರಿ ಶ್ರೇಷ್ಠವಾದ ಆಯುಧವನ್ನು ನೀಡಲಿ. ಇಂದ್ರ, ಯಮ, ಸೂರ್ಯ, ಅಗ್ನಿ, ನಿರುತಿ, ವರುಣ, ಕುಬೇರ, ವಾಯು, ವಸುಗಳು, ಸಿದ್ಧರು, ವಿದ್ಯಾಧರರು, ಮಹಾಸರ್ಪಗಳು, ಯಕ್ಷರು, ಮನುಗಳು, ದೇವತೆಗಳು, ಕಿಂಪುರುಷರು ನಿನಗೆ ಶುಭನುಡಿಗಳಿಂದ ಹರಸಲಿ ಎಂದು ಧರ್ಮಜನು ನುಡಿದನು.

ಅರ್ಥ:
ಕರುಣಿಸು: ದಯೆತೋರು, ಆಶೀರ್ವದಿಸು; ಕಾಮ: ಮನ್ಮಥ; ಅರಿ: ವೈರಿ; ಕಾಮಾರಿ: ಶಿವ; ಕೃಪೆ: ದಯೆ, ಕರುಣೆ; ವರ: ಶ್ರೇಷ್ಠ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಇಂದ್ರ: ಶಕ್ರ; ಭಾಸ್ಕರ: ಸೂರ್ಯ; ಹುತಾಶನ: ಹವಿಸ್ಸನ್ನು ಸೇವಿಸುವವನು, ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಮಾರುತ: ವಾಯುದೇವತೆ; ಸುರರು: ದೇವತೆಗಳು; ವಸು: ದೇವತೆಗಳ ಒಂದು ವರ್ಗ; ಸಿದ್ಧ: ದೇವತೆಗಳಲ್ಲಿ ಒಂದು ಪಂಗಡ; ವಿದ್ಯಾಧರ: ದೇವತೆಗಳ ಗುಂಪು; ಉರಗ: ಹಾವು; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ಮನು: ಬ್ರಹ್ಮನ ಹದಿನಾಲ್ಕು ಜನ ಮಾನಸಪುತ್ರರಲ್ಲಿ ಪ್ರತಿಯೊಬ್ಬ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ, ಕಿನ್ನರ; ವಿಮಳ: ಶುದ್ಧ; ಸ್ವಸ್ತಿ: ಒಳ್ಳೆಯದು, ಶುಭ; ವಾಚನ: ನುಡಿ;

ಪದವಿಂಗಡಣೆ:
ಕರುಣಿಸಲಿ +ಕಾಮಾರಿ +ಕೃಪೆಯಿಂ
ವರ+ ಮಹಾಸ್ತ್ರವನ್+ಇಂದ್ರ +ಯಮ +ಭಾ
ಸ್ಕರ+ ಹುತಾಶನ+ ನಿರುತಿ +ವರುಣ +ಕುಬೇರ +ಮಾರುತರು
ಸುರರು +ವಸುಗಳು +ಸಿದ್ಧ +ವಿದ್ಯಾ
ಧರ+ಮಹ+ಉರಗ +ಯಕ್ಷ +ಮನು+ಕಿಂ
ಪುರುಷರ್+ಈಯಲಿ +ನಿನಗೆ +ವಿಮಳ +ಸ್ವಸ್ತಿ+ವಾಚನವ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣಿಸಲಿ ಕಾಮಾರಿ ಕೃಪೆಯಿಂ
(೨) ಮಹಾಸ್ತ್ರ, ಮಹೋರಗ – ಮಹ ಪದದ ಬಳಕೆ