ಪದ್ಯ ೧೨: ಶಕುನಿಯ ಸೈನ್ಯದ ಸ್ಥಿತಿ ಏನಾಯಿತು?

ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ (ಗದಾ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಸ್ವಲ್ಪ ದೂರದಲ್ಲೇ ಅದೋ, ಸುಯೋಧನನ ಸೈನ್ಯ ಕಾಣುತ್ತಿದೆ. ಮುತ್ತಿರಿ ಎಂದು ಕೂಗುತ್ತಾ ಭೀಮಾರ್ಜುನಾರ ಚತುರಂಗ ಸೈನ್ಯವು ದಾಳಿಯಿಟ್ಟಿರು. ಶಕುನಿಯ ಸೈನ್ಯವು ಭುಜಬಲ ಪರಾಕ್ರಮದಿಂದ ಕಾದಿತು. ಆದರೆ ಅದರ ಮಾನ ಮೌನತಾಳಿತು (ಸೋತರು).

ಅರ್ಥ:
ಒಡ್ಡು: ರಾಶಿ, ಸಮೂಹ; ನಸು: ಸ್ವಲ್ಪ; ದೂರ: ಅಂತರ; ಕವಿ: ಆವರಿಸು; ಧಾಳಿ: ಲಗ್ಗೆ, ಮುತ್ತಿಗೆ; ರಥ: ಬಂಡಿ; ಚೂಣಿ: ಮೊದಲು; ಹೊದರು: ಗುಂಪು, ಸಮೂಹ; ಹಳಚು: ತಾಗು, ಬಡಿ; ಭಟ: ಸೈನಿಕ; ಭುಜ: ಬಾಹು; ಗರ್ವ: ಅಹಂಕಾರ; ಗರುವ: ಹಿರಿಯ, ಶ್ರೇಷ್ಠ; ಗಾಢ: ಹೆಚ್ಚಳ; ಶೌರ್ಯ: ಸಾಹಸ, ಪರಾಕ್ರಮ; ಮದ: ಅಹಂಕಾರ; ಮಡ: ಹಿಮ್ಮಡಿ, ಹರಡು; ಮುರಿ: ಸೀಳು; ಸಿಲುಕು: ಹಿಡಿ; ಮಾನ: ಮರ್ಯಾದೆ; ಮೋನ: ಮೌನ;

ಪದವಿಂಗಡಣೆ:
ಅದೆ+ ಸುಯೋಧನನ್+ಒಡ್ಡು +ನಸುದೂ
ರದಲಿ +ಕವಿಕವಿ+ಎನುತ +ಧಾಳಿ
ಟ್ಟುದು +ಚತುರ್ಬಲ +ಭೀಮಪಾರ್ಥರ +ರಥದ +ಚೂಣಿಯಲಿ
ಹೊದರು +ಹಳಚಿತು +ಭಟರು +ಭುಜ+ಗ
ರ್ವದಲಿ +ಗರುವರ +ಗಾಢ +ಶೌರ್ಯದ
ಮದಕೆ +ಮಡ+ಮುರಿಯಾಯ್ತು +ಸಿಲುಕಿತು+ ಮಾನ +ಮೋನದಲಿ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ಗಾಢ ಶೌರ್ಯದ ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ

ಪದ್ಯ ೯: ಭೀಮನು ಕೃಷ್ಣನಿಗೆ ಸಂಧಾನ ಮುರಿದ ಬಗ್ಗೆ ಏನು ಹೇಳಿದ?

ಹಾನಿಯನು ನೀಹೊತ್ತು ಭೃತ್ಯರ
ಮಾನವನು ಪತಿಕರಿಸ ಬೇಹುದು
ತಾನೊಡೆಯನಾದಂಗೆ ಗುಣವೆಮ್ಮೊಡೆಯ ನೀನಾಗಿ
ಮಾನಭಂಗವ ಧರಿಸಿಯೆಮ್ಮಭಿ
ಮಾನವನು ನೀನುಳುಹಿದೈ ಸಂ
ಧಾನವನು ಸೇರಿಸದೆ ಸಲಹಿದೆಯೆಂದನಾ ಭೀಮ (ಉದ್ಯೋಗ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ಒಡೆಯನಾದವನು ಬಂದ ಹಾನಿಯನ್ನು ತಾನೇ ವಹಿಸಿಕೊಂಡು ಸೇವಕರ ಮಾನವನ್ನು ಕಾಪಾಡಬೇಕು. ನೀನು ನಮ್ಮೊಡೆಯ ನಮ್ಮ ಅಭಿಮಾನವನ್ನು ಉಳಿಸಿದೆ. ಸಂಧಾನವನ್ನು ಮಾಡದೆ ನಮ್ಮನ್ನು ಕಾಪಾಡಿದೆ ಎಂದು ಭೀಮನು ಹೇಳಿದನು.

ಅರ್ಥ:
ಹಾನಿ: ನಷ್ಟ; ಹೊತ್ತು: ಹೊರು; ಭೃತ್ಯ: ಆಳು, ಸೇವಕ; ಮಾನ: ಮರ್ಯಾದೆ; ಪತಿಕರಿಸು: ಅನುಗ್ರಹಿಸು; ಬೇಹುದು: ಮಾಡುವುದು; ಒಡೆಯ: ನಾಯಕ; ಗುಣ: ನಡತೆ, ಸ್ವಭಾವ; ಮಾನಭಂಗ: ಅವಮಾನ; ಧರಿಸು: ತೊಡು; ಅಭಿಮಾನ: ಆತ್ಮಗೌರವ; ಉಳುಹಿದೆ: ಕಾಪಾಡಿದೆ; ಸಂಧಾನ: ಸಂಯೋಗ; ಸೇರಿಸದೆ: ಮುರಿದ, ಜೊತೆಗೂಡದೆ; ಸಲಹು: ಕಾಪಾಡು;

ಪದವಿಂಗಡಣೆ:
ಹಾನಿಯನು +ನೀ+ಹೊತ್ತು +ಭೃತ್ಯರ
ಮಾನವನು +ಪತಿಕರಿಸ+ ಬೇಹುದು
ತಾನೊಡೆಯನ್+ಆದಂಗೆ +ಗುಣವ್+ಎಮ್ಮೊಡೆಯ +ನೀನಾಗಿ
ಮಾನಭಂಗವ +ಧರಿಸಿ+ಎಮ್ಮ್+ಅಭಿ
ಮಾನವನು+ ನೀನ್+ಉಳುಹಿದೈ +ಸಂ
ಧಾನವನು +ಸೇರಿಸದೆ+ ಸಲಹಿದೆ+ಯೆಂದನಾ +ಭೀಮ

ಅಚ್ಚರಿ:
(೧) ಮಾನ, ಅಭಿಮಾನ, ಸಂಧಾನ – ಪ್ರಾಸ ಪದಗಳು
(೨) ಮಾನ – ೨, ೪, ೫ ಸಾಲಿನ ಮೊದಲ ಪದ
(೩) ನಾಯಕನ ಗುಣವನ್ನು ಹೇಳುವ ಪದ್ಯ – ಹಾನಿಯನು ನೀಹೊತ್ತು ಭೃತ್ಯರ
ಮಾನವನು ಪತಿಕರಿಸ ಬೇಹುದು ತಾನೊಡೆಯನಾದಂಗೆ ಗುಣವ್

ಪದ್ಯ ೩೬: ಭಾನುಮತಿ ಕೃಷ್ಣನಲ್ಲಿ ಏನು ಮೊರೆಯಿಟ್ಟಳು?

ಮಾನ ನಿನ್ನದು ಭಕ್ತ ಜನದಪ
ಮಾನ ನಿನ್ನದು ನಿನ್ನ ಶರಣರ
ಹಾನಿ ವೃದ್ಧಿಗಳೆಲ್ಲ ನಿನ್ನದು ಬೇರೆ ಗತಿಯುಂಟೆ
ಅನತರ ತೇಜೋಭಿಮಾನವ
ನೀನೊಲಿದು ಸಲಹೆನುತೆ ಭಯದಲಿ
ಭಾನುಮತಿ ಮೈಯಿಕ್ಕಿದಳು ಮುರಹರನ ಚರಣದೊಳು (ಉದ್ಯೋಗ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ದುರ್ಯೋಧನನ ಹೆಂಡತಿ ಭಾನುಮತಿಯು ಕೃಷ್ಣನಲ್ಲಿ ಮೊರೆಯಿಟ್ಟಳು. ಭಕ್ತರ ಮಾನ ಅಪಮಾನಗಳೆಲ್ಲವೂ ನಿನ್ನದೇ. ನಿನ್ನ ಆಶ್ರಯವನ್ನು ಕೋರಿ ಬಂದವರ ಹಾನಿ ವೃದ್ಧಿಗಳು ನೀನೇ ಆಗಿರುವೆ. ನೀನಲ್ಲದೆ ಇನ್ನಾರು ಗತಿ ಮನುಷ್ಯರಿಗೆ? ಭಕ್ತರ ತೇಜಸ್ಸು ಅಭಿಮಾನಗಳನ್ನು ನೀನು ಪ್ರೀತಿಯಿಂದ ಸಲಹು ಎಂದು ಭಯಗೊಂಡ ಭಾನುಮತಿಯು ಶ್ರೀಕೃಷ್ಣನ ಪಾದಪದ್ಮಗಳಿಗೆ ನಮಸ್ಕರಿಸಿದಳು.

ಅರ್ಥ:
ಮಾನ:ಮರ್ಯಾದೆ, ಗೌರವ; ಭಕ್ತ: ಗುರುಹಿರಿಯಲ್ಲಿ ಶ್ರದ್ಧೆ ತೋರುವವನು; ಜನ: ಮನುಷ್ಯರು; ಅಪಮಾನ: ಅವಮಾನ, ಅಗೌರವ; ಶರಣರ: ದಾಸ, ಭಕ್ತ; ಹಾನಿ: ನಷ್ಟ; ವೃದ್ಧಿ: ಯಶಸ್ಸು; ಬೇರೆ: ಅನ್ಯ; ಗತಿ: ದಿಕ್ಕು, ದಾರಿ; ಅನತ: ಬಾಗದ, ನೆಟ್ಟಗಿರುವ; ತೇಜ:ಹೊಳಪು; ಅಭಿಮಾನ: ಹೆಮ್ಮೆ; ಒಲಿ: ಸಮ್ಮತಿಸು; ಸಲಹು: ಪೋಷಿಸು, ರಕ್ಷಿಸು; ಭಯ: ಅಂಜಿಕೆ; ಮೈಯಿಕ್ಕು: ನಮಸ್ಕರಿಸು; ಮುರಹರ: ಕೃಷ್ಣ; ಚರಣ: ಪಾದ;

ಪದವಿಂಗಡಣೆ:
ಮಾನ +ನಿನ್ನದು +ಭಕ್ತ +ಜನದ್+ಅಪ
ಮಾನ +ನಿನ್ನದು +ನಿನ್ನ +ಶರಣರ
ಹಾನಿ+ ವೃದ್ಧಿಗಳೆಲ್ಲ +ನಿನ್ನದು +ಬೇರೆ +ಗತಿಯುಂಟೆ
ಅನತರ+ ತೇಜ+ಅಭಿಮಾನವ
ನೀನೊಲಿದು +ಸಲಹೆನುತೆ+ ಭಯದಲಿ
ಭಾನುಮತಿ+ ಮೈಯಿಕ್ಕಿದಳು +ಮುರಹರನ+ ಚರಣದೊಳು

ಅಚ್ಚರಿ:
(೧) ನಮಸ್ಕರಿಸು ಎಂದು ಹೇಳಲು – ಮೈಯಿಕ್ಕಿದಳು ಪದದ ಬಳಕೆ
(೨) ಮಾನ ಅಪಮಾನ – ವಿರುದ್ಧ ಪದಗಳು
(೩) ಮಾನ, ಅಪಮಾನ, ಅಭಿಮಾನ – ಪ್ರಾಸ ಪದಗಳು

ಪದ್ಯ ೭೬: ರಾಜರ ಕರ್ತವ್ಯಗಳಾವುವು?

ದಾನವಿಷ್ಟಾಪೂರ್ತ ವಿನಯಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಸದಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥ ಬಂಧುವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು (ಉದ್ಯೋಗ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ರಾಜನಾದವನ ಕರ್ತವ್ಯಗಳನ್ನು ವಿದುರರು ಇಲ್ಲಿ ತಿಳಿಸಿದ್ದಾರೆ. ರಾಜನಾದವನು ದಾನ, ಅಗ್ನಿಹೋತ್ರ, ಒಳ್ಳೆಯ ನಡತೆ, ಮುನ್ನಡೆಸುವಿಕೆಯ ಜಾಣ್ಮೆ, ದೇವತಾ ಪೂಜೆ, ಬ್ರಾಹ್ಮಣ ಮತ್ತು ಗೋವುಗಳನ್ನು ತೃಪ್ತಿ ಪಡಿಸಿ, ಅತಿಥಿಗಳನ್ನು ಸತ್ಕರಿಸಿ, ಗುರುಹಿರಿಯರಲ್ಲಿ ಭಕ್ತಿಭಾವ ಹೊಂದು, ಧ್ಯಾನವನ್ನು ಆಚರಿಸುತ್ತಾ, ದೀನರು, ಅನಾಥರು, ಬಂಧುಗಳು, ಶರಣಾಗತರನ್ನು ರಕ್ಷಿಸಿ, ಪವಿತ್ರ ಜಲಗಳಲ್ಲಿ ಅಭ್ಯಂಜನ ಮಾಡುವುದು ರಾಜನ ಕರ್ತವ್ಯಗಳು.

ಅರ್ಥ:
ದಾನ: ನೀಡುವಿಕೆ; ಇಷ್ಟ: ಅಪೇಕ್ಷೆ; ಪೂರ್ತ: ಪೂರೈಸುವ; ವಿನಯ: ನಮ್ರತೆ; ಸಮಾನ:ಎಣೆ, ಸಾಟಿ, ಯೋಗ್ಯ; ದೇವ: ಸುರರು, ಭಗವಂತ; ಅರ್ಚನೆ: ಪೂಜೆ, ಆರಾಧನೆ; ಮಹೀ: ಭೂಮಿ; ಮಹೀಸುರ: ಬ್ರಾಹ್ಮಣ; ಧೇನು: ಹಸು; ಸಂತರ್ಪಣ: ತೃಪ್ತಿ ಪಡಿಸುವಿಕೆ; ಸದಾ: ಯಾವಾಗಲು; ತಿಥಿ: ದಿನ; ಅತಿಥಿ: ಆಮಂತ್ರಣವಿಲ್ಲದೆ ಬರುವವ; ಪೂಜೆ: ಪ್ರಾರ್ಥನೆ, ಆರಾಧನೆ; ಗುರು: ಆಚಾರ್ಯ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಧ್ಯಾನ: ಚಿಂತನೆ, ಮನನ; ದೀನ: ಬಡವ, ದರಿದ್ರ; ಅನಾಥ: ತಬ್ಬಲಿ, ನಿರ್ಗತಿಕ; ಬಂಧು: ಬಂಧುಗಳು; ವಿತಾನ: ಆಧಿಕ್ಯ, ಹೆಚ್ಚಳ; ಶರಣಾಗತ: ಆಶ್ರಯವನ್ನು ಬೇಡುವವನು; ಸುರಕ್ಷಾ: ಕಾಪಾಡುವಿಕೆ; ಸ್ನಾನ: ಅಭ್ಯಂಜನ; ತೀರ್ಥ: ಪವಿತ್ರ ಜಲ; ಬೇಹುದು: ಬೇಕು; ಅವನಿಪ: ರಾಜ; ಅವನಿ: ಭೂಮಿ;

ಪದವಿಂಗಡಣೆ:
ದಾನವ್ + ಇಷ್ಟಾಪೂರ್ತ+ ವಿನಯ+ಸ
ಮಾನ +ದೇವಾರ್ಚನೆ +ಮಹೀಸುರ
ಧೇನು +ಸಂತರ್ಪಣ+ ಸದ್+ಅತಿಥಿ+ ಪೂಜೆ +ಗುರುಭಕ್ತಿ
ಧ್ಯಾನ+ ದೀನ+ಅನಾಥ +ಬಂಧು+ವಿ
ತಾನ +ಶರಣಾಗತ+ ಸುರಕ್ಷಾ
ಸ್ನಾನ+ ತೀರ್ಥಂಗಳನು +ಮಾಡಲು +ಬೇಹುದ್+ಅವನಿಪರು

ಅಚ್ಚರಿ:
(೧) ದಾನ, ವಿನಯ, ದೇವಾರ್ಚನೆ, ಸಂತರ್ಪಣ, ಗುರುಭಕ್ತಿ ಹೀಗೆ ೧೩ ಬಗೆಯ ಕರ್ತವ್ಯಗಳನ್ನು ಹೇಳಿರುವುದು
(೨) ಧ್ಯಾನ, ದಾನ, ಮಾನ, ಸ್ನಾನ – ಪ್ರಾಸ ಪದಗಳು

ಪದ್ಯ ೨೬: ಯಾವ ಕಾರ್ಯ ಆತ್ಮಹತ್ಯೆ ಮಾಡಿಕೊಂಡಂತೆ?

ತನ್ನ ಸುಖ ದುಃಖಂಗಳಿಗೆ ನಿ
ರ್ಭಿನ್ನರಹ ಬಾಂಧವರ ವರ್ಜಿಸಿ
ಗನ್ನಗತಕದಲುಂಡುಜಾರುವ ಗಾವಿಲರ ಕೊಡಿ
ಅನ್ಯರನು ಪತಿಕರಿಸಿ ಬಹುಮಾ
ನೋನ್ನತಿಕೆಯನು ವಿರಚಿಸುವುದಿದು
ತನ್ನ ತಾನೇ ಕೊಂದುಕೊಂಬುದು ಭೂಪ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ತನಗೆ ಸುಖ ದುಃಖಗಳು ಬಂದಾಗ ಅವನ ಹತ್ತಿರದ ಬಾಂಧವರನ್ನು ದೂರವಿಟ್ಟು, ಕೇವಲ ಉಂಡು ದೂರಹೋಗುವ ಮೋಸಗಾರರ ಜೊತೆಯಾಗಿರುವುದು, ಅವರನ್ನು ಗೌರವಿಸುವುದು ಮತ್ತು ಅವರಿಗೆ ಸತ್ಕರಿಸುವುದು ಇವು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ವಿದುರ ಹೇಳಿದ.

ಅರ್ಥ:
ತನ್ನ: ಅವರ; ಸುಖ: ಸಂತೋಷ, ನಲಿವು; ದುಃಖ: ದುಗುಡು; ಭಿನ್ನ: ಬೇರೆ; ಬಾಂಧವರು: ಸಂಬಂಧಿಕರು; ವರ್ಜಿಸು: ಬಿಡು, ತ್ಯಜಿಸು; ಅನ್ಯ: ಬೇರೆ; ಉಂಡು: ತಿಂದು; ಜಾರು: ಕೆಳಗೆ ಬೀಳು; ಗಾವಿಲ:ಹೆಡ್ಡ, ದಡ್ಡ; ಕೊಡಿ: ಜೊತೆ; ಪತಿಕರಿಸು: ದಯೆತೋರು, ಅನುಗ್ರಹಿಸು; ಬಹು: ಬಹಳ, ತುಂಬ; ಮಾನ: ಮರ್ಯಾದೆ, ಗೌರವ; ಉನ್ನತಿ: ಹೆಚ್ಚಳ; ವಿರಚಿಸು: ರೂಪಿಸು; ಕೊಂದು: ಸಾಯಿಸು; ಭೂಪ: ರಾಜ;

ಪದವಿಂಗಡಣೆ:
ತನ್ನ + ಸುಖ +ದುಃಖಂಗಳಿಗೆ +ನಿ
ರ್ಭಿನ್ನರಹ+ ಬಾಂಧವರ+ ವರ್ಜಿಸಿಗ್
ಅನ್ನಗತಕದಲ್+ಉಂಡು+ಜಾರುವ +ಗಾವಿಲರ+ ಕೊಡಿ
ಅನ್ಯರನು +ಪತಿಕರಿಸಿ+ ಬಹುಮಾ
ನೋನ್ನತಿಕೆಯನು+ ವಿರಚಿಸುವುದಿದು
ತನ್ನ +ತಾನೇ +ಕೊಂದುಕೊಂಬುದು +ಭೂಪ +ಕೇಳೆಂದ

ಅಚ್ಚರಿ:
(೧) ತನ್ನ – ೧, ೬ ಸಾಲಿನ ಮೊದಲ ಪದ
(೨) ಸುಖ, ದುಃಖ – ವಿರುದ್ಧ ಪದ
(೩) ಅನ್ನಗತ, ಅನ್ಯರು – ಪದ ಪ್ರಯೋಗ

ಪದ್ಯ ೪: ದ್ರುಪದನು ಶ್ರೀಕೃಷ್ಣನಿಗೆ ಏನು ಹೇಳಿದನು?

ದೇವ ನೀನೇ ಬಲ್ಲಿ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವ ಮಾನದ ಹೊರಿಗೆ ನಿನ್ನದು ಹರಣ ಭರಣವನು
ನೀವು ಬಲ್ಲಿರಿ ಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದ ಭೂಪಾಲ (ಉದ್ಯೋಗ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನನ್ನು ಸಂಭೋದಿಸುತ್ತಾ ದ್ರುಪದನು, “ದೇವ ನಿಮಗೆ ತಿಳಿದಿದೆ ನಿಮ್ಮ ಭಾವನಾದ ಧರ್ಮಜನ ಮಾನ ಅಪಮಾನಗಳೆಲ್ಲವು ನಿಮಗೇ ಸೇರಿವೆ. ಇವರ ಜೀವನ ನಿರ್ವಾಹ ಹೇಗೆ ಎಂದುಬು ನಿಮಗೆ ತಿಳಿಯದೆ. ನೀವು ನಿಶ್ಚಯಿಸಿ ನಿಮ್ಮ ಪಾದದಲ್ಲಿ ತೋರಿಸಿದ್ದನ್ನು ನಾವು ತಲೆಯಮೇಲಿಟ್ಟುಕೊಂಡು ನೀವು ಹೇಳಿದಂತೆ ಮಾಡುತ್ತೇವೆ ಎಂದು ಹೇಳಿದನು.

ಅರ್ಥ:
ದೇವ: ಒಡೆಯ; ಬಲ್ಲೆ: ತಿಳಿದಿರುವೆ; ಭಾವ:ಸೋದರಿಯ ಗಂಡ; ಬಹು: ಬಹಳ; ಮಾನ: ಮರ್ಯಾದೆ, ಗೌರವ; ಹೊರಿಗೆ: ಹೊಣೆಗಾರಿಕೆ; ಹರಣ:ಜೀವ, ಪ್ರಾಣ; ಭರಣ:ವಹಿಸುವುದು, ಧರಿಸುವುದು; ಕಾಲು: ಚರಣ; ಒದೆ: ಹೊಡಿ, ತೋರಿಸು; ತಲೆ: ಶಿರ; ಹೊತ್ತು: ಹತ್ತಿಕೊಳ್ಳು; ನಡೆಸು: ನಿರ್ವಹಿಸು; ಜೀಯ: ಒಡೆಯ; ಭೂಪಾಲ: ರಾಜ;

ಪದವಿಂಗಡಣೆ:
ದೇವ+ ನೀನೇ +ಬಲ್ಲಿ +ನಿಮ್ಮಯ
ಭಾವನೀ +ಧರ್ಮಜನ +ಬಹು+ಮಾ
ನಾವ+ ಮಾನದ+ ಹೊರಿಗೆ+ ನಿನ್ನದು +ಹರಣ+ ಭರಣವನು
ನೀವು +ಬಲ್ಲಿರಿ+ ಕಾಲಲ್+ಒದೆದುದ
ನೋವಿ +ತಲೆಯಲಿ +ಹೊತ್ತು +ನಡೆಸುವಡ್
ಆವು+ ಬಲ್ಲೆವು+ ಜೀಯ+ಯೆಂದನು +ದ್ರುಪದ +ಭೂಪಾಲ

ಅಚ್ಚರಿ:
(೧) ದೇವ, ಜೀಯ – ಸಮನಾರ್ಥಕ ಪದ
(೨) ಹರಣ, ಭರಣ – ಪ್ರಾಸ ಪದಗಳು