ಪದ್ಯ ೩೯: ಆಸ್ಥಾನದ ಪರಿಸ್ಥಿತಿಯನ್ನು ಅರಿತು ಯಾರು ಮಧ್ಯ ಪ್ರವೇಶಿಸಿದರು?

ಕದಡಿತಾ ಆಸ್ಥಾನ ಹೋಯೆಂ
ದೊದರಿ ಋಷಿಗಳ ನಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಯಾದವರು ಆಯುಧಗಳನ್ನು ಹೊರತೆಗೆಯಲು ಆಸ್ಥಾನದ ವಾತಾವರಣವು ಕದಡಿತು, ಋಷಿಗಳು ಹೋಯೆಂದು ಕೂಗಿದರು, ಅವರ ನಾಲಿಗೆಗಳು ಒಣಗಿದವು. ರಥ, ಆನೆ, ಕುದುರೆಗಳು ಯುದ್ಧಕ್ಕೆ ಸಿದ್ಧವಾದವು. ಯಾದವರಾಜರು ಈಚೆ ನಿಂತು ಈ ಸುನೀತನನ್ನು(ದುಷ್ಟನನ್ನು, ಶಿಶುಪಾಲನನ್ನು ವ್ಯಂಗ್ಯವಾಗಿ ಒಳ್ಳೆಯ ನಡತೆಯುಳ್ಳವನೆಂದು ಹೇಳಿರುವುದು) ಬಡಿದು ಇವನ ಹೃದಯವನ್ನು ತೆಗೆಯಿರಿ ಎಂದು ಗರ್ಜಿಸಲು ಭೀಷ್ಮನು ಇವರ ನಡುವೆ ಬಂದನು.

ಅರ್ಥ:
ಕದಡು: ಕ್ಷೋಭೆಗೊಳಿಸು; ಆಸ್ಥಾನ: ದರ್ಬಾರು; ಹೋ: ಜೋರಾಗಿ ಕೂಗುವ ಶಬ್ದ; ಒದರು: ಹೇಳು; ಋಷಿ: ಮುನಿ; ನಾಳಿಗೆ: ನಾಲಗೆ, ಜಿಹ್ವೆ; ಒಣಗು: ಬಾಡು, ನೀರಿಲ್ಲದ; ಹಲ್ಲಣ:ಜೀನು, ಕಾರ್ಯ; ರಥ: ಬಂಡಿ; ಮಾತಂಗ: ಆನೆ; ವಾಜಿ: ಕುದುರೆ; ಕೆದರು: ಹರಡು, ಚದರಿಸು; ದೆಸೆ: ದಿಕ್ಕು; ನೀತಿ: ಒಳ್ಳೆಯ ನಡತೆ; ಸದೆ:ಕುಟ್ಟು, ಪುಡಿಮಾಡು; ತೆಗೆಸು: ಹೊರಹಾಕು; ಸುಂಟಿಗೆ: ಹೃದಯದ ಮಾಂಸ; ಎನುತ: ಹೇಳಿ; ನೃಪ: ರಾಜ; ಗಜಬಜ: ಗಲಾಟೆ, ಕೋಲಾಹಲ; ಎಡೆ: ಹತ್ತಿರ, ಸಮೀಪ; ಹೊಕ್ಕು: ಸೇರು;

ಪದವಿಂಗಡಣೆ:
ಕದಡಿತಾ +ಆಸ್ಥಾನ +ಹೋಯೆಂದ್
ಒದರಿ +ಋಷಿಗಳ +ನಾಳಿಗೆಗಳ್+ಒಣ
ಗಿದವು +ಹಲ್ಲಣಿಸಿದವು +ರಥ +ಮಾತಂಗ +ವಾಜಿಗಳು
ಕೆದರಿತ್+ಈಚೆಯ +ದೆಸೆ +ಸುನೀತನ
ಸದೆದು +ತೆಗೆ+ಸುಂಟಿಗೆಯನ್+ಎನುತಲಿ
ಯದು +ನೃಪಾಲರು +ಗಜಬಜಿಸಲ್+ಎಡೆ+ವೊಕ್ಕನಾ +ಭೀಷ್ಮ

ಅಚ್ಚರಿ:
(೧) ಶಿಶುಪಾಲನನ್ನು ವ್ಯಂಗ್ಯವಾಗಿ ಸುನೀತನೆಂದು ಕರೆದಿರುವುದು

ಪದ್ಯ ೧೯: ರಾತ್ರಿಯನ್ನು ಪಾಂಡವರು ಹೇಗೆ ಕಳೆದರು?

ಕುದುರೆಯೇರಾಟವನು ಮಾತಂ
ಗದ ಸುಶಿಕ್ಷಾಭೇದವನು ರಥ
ವಿದಿತ ಕೌಶಲವನು ಶರಾಸನವೇದ ಸಂಗತಿಯ
ಮದವದರಿಭಂಜನವ ದಿವ್ಯಾ
ಸ್ತ್ರದಲಿ ಮುಕ್ತಾಮುಕ್ತ ಸಮರಂ
ಗದ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ (ಆದಿ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕುದುರೆಗಳ ಏರಾಟ (ಸವಾರಿ), ಆನೆಗೆ ಯುದ್ಧಕ್ಕೆ ಬೇಕಾದ ಶಿಕ್ಷಣ, ರಥಯುದ್ಧದ ಕೌಶಲ, ಧನುರ್ವೇದದ ವಿವರಗಳು, ಗರ್ವಿತರೂ, ಬಲಶಾಲಿಗಳು, ಆದ ಶತ್ರುಗಳನ್ನು ಸೋಲಿಸುವ ರೀತಿ, ದಿವ್ಯಾಸ್ತ್ರಗಳ ಪ್ರಯೋಗ, ಮುಕ್ತ ಮತ್ತು ಅಮುಕ್ತ ಸಮರಗಳು ಮೊದಲಾದ ವಿಷಯಗಳನ್ನು ಮಾತನಾಡುತ್ತಾ ಪಾಂಡವರು ರಾತ್ರಿಯನ್ನು ಕಳೆದರು.

ಅರ್ಥ:
ಕುದುರೆ: ಹಯ, ಅಶ್ವ; ಏರಾಟ: ಸವಾರಿ; ಮಾತಂಗ: ಆನೆ; ಶಿಕ್ಷ: ಕಲಿಕೆ; ಭೇದ: ಬೇರೆ; ರಥ: ತೇರು, ಬಂಡಿ; ವಿದಿತ: ಎಲ್ಲರಿಗೂ ತಿಳಿದುದು; ಕೌಶಲ: ಜಾಣತನ, ಚದುರು; ಶರ: ಧನು; ಶರಾಸನವೇದ: ಧನುರ್ವೇದ; ಸಂಗತಿ: ವಿವರ; ಮದ: ಅಹಂಕಾರ; ಅರಿ: ತಿಳಿ, ವೈರಿ; ಭಂಜನ: ಹಾಳು, ನಾಶ; ದಿವ್ಯ: ಶ್ರೇಷ್ಠ; ಅಸ್ತ್ರ: ಆಯುಧ; ಮುಕ್ತಾಯ: ಅಂತಿಮ; ಸಮರ: ಯುದ್ಧ; ಸಂಗತಿ: ವಿವರ; ನೂಕು: ತಳ್ಳು; ಯಾಮಿನಿ: ರಾತ್ರಿ;

ಪದವಿಂಗಡಣೆ:
ಕುದುರೆ+ಯೇರಾಟವನು+ ಮಾತಂ
ಗದ +ಸುಶಿಕ್ಷಾ+ಭೇದವನು +ರಥ
ವಿದಿತ +ಕೌಶಲವನು +ಶರಾಸನವೇದ +ಸಂಗತಿಯ
ಮದವದರಿ+ಭಂಜನವ +ದಿವ್ಯಾ
ಸ್ತ್ರದಲಿ +ಮುಕ್ತಾಮುಕ್ತ+ ಸಮರಂ
ಗದ+ ಸುಸಂಗತಿಯಿಂದ +ನೂಕಿದರಿವರು+ ಯಾಮಿನಿಯ

ಅಚ್ಚರಿ:
(೧) ಗದ – ೨, ೬ ಸಾಲಿನ ಮೊದಲ ಪದ
(೨) “ಸು” ಅಕ್ಷರದಿಂದ ಶುರುವಾಗುವ ಪದ – ಸುಶಿಕ್ಷ, ಸುಸಂಗತಿ;