ಪದ್ಯ ೧೭: ಸಂಜಯನು ಯಾರ ಪಾದಗಳಲ್ಲಿ ಬಿದ್ದನು?

ಬಂದು ಕಂಡನು ರಾಜವನ ಮಾ
ಕಂದನನು ಧೃತರಾಷ್ಟ್ರ ರಾಯನ
ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು
ಮುಂದುವರಿದ ವಿಲೋಚನಾಂಬುಗ
ಳಿಂದ ಸೈರಣೆ ಮಿಗದೆ ಸಂಜಯ
ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ (ಗದಾ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಸಂಜಯನು ಹೋಗಿ ರಾಜವನದ ಮಾವಿನಮರದಂತಿದ್ದ ಧೃತರಾಷ್ಟ್ರನ ಮಗನನ್ನು, ದುಷ್ಟತನದ ಬಳ್ಳಿಯು ಹುಟ್ಟುವ ಗಡ್ಡೆಯನ್ನು ಕಂಡನು. ಕೌರವನ ದುಃಸ್ಥಿತಿಯನ್ನು ಕಂಡು ಕಣ್ಣೀರಿನ ಹೊಳೆ ಹರಿಸಿ, ಸಹಿಸಿಕೊಳ್ಳಲಾಗದೆ ಕೌರವನ ಪಾದಗಳ ಮೇಲೆ ದೊಪ್ಪನೆ ಬಿದ್ದನು.

ಅರ್ಥ:
ಬಂದು: ಆಗಮಿಸು; ಕಂಡು: ನೋಡು; ರಾಜ: ನೃಪ; ವನ: ಕಾಡು; ಮಾಕಂದ: ಮಾವು; ರಾಯ: ರಾಜ; ಕಂದ: ಮಗ; ದೌರ್ಜನ್ಯ: ದುಷ್ಟತನ; ವಲ್ಲಿ: ಲತೆ, ಬಳ್ಳಿ; ವಿಪುಳ: ಬಹಳ; ಕಂದ: ಗೆಡ್ಡೆಗಳು; ವಿಲೋಚನ:ಕಣ್ಣು; ಅಂಬು: ನೀರು; ಸೈರಣೆ: ಸಮಾಧಾನ, ತಾಳ್ಮೆ, ಸಹನೆ; ಮಿಗು: ಹೆಚ್ಚಾಗು; ದೊಪ್ಪನೆ: ಒಮ್ಮಲೆ; ಕೆಡೆ: ಬೀಳು, ಕುಸಿ; ಹೊರಳು: ಉರುಳಾಡು; ಅರಸ: ರಾಜ; ಅಂಘ್ರಿ: ಪಾದ;

ಪದವಿಂಗಡಣೆ:
ಬಂದು +ಕಂಡನು+ ರಾಜವನ+ ಮಾ
ಕಂದನನು +ಧೃತರಾಷ್ಟ್ರ +ರಾಯನ
ಕಂದನನು +ದೌರ್ಜನ್ಯ+ವಲ್ಲೀ +ವಿಪುಳ+ಕಂದನನು
ಮುಂದುವರಿದ +ವಿಲೋಚನಾಂಬುಗ
ಳಿಂದ+ ಸೈರಣೆ +ಮಿಗದೆ +ಸಂಜಯ
ನಂದು+ ದೊಪ್ಪನೆ +ಕೆಡೆದು +ಹೊರಳಿದನ್+ಅರಸನ್+ಅಂಘ್ರಿಯಲಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ, ಕಂದ ಪದದ ಬಳಕೆ – ರಾಜವನ ಮಾಕಂದನನು, ಧೃತರಾಷ್ಟ್ರ ರಾಯನ ಕಂದನನು, ದೌರ್ಜನ್ಯವಲ್ಲೀ ವಿಪುಳಕಂದನನು
(೨) ರಾಜ, ಅರಸ, ರಾಯ – ಸಮಾನಾರ್ಥಕ ಪದ

ಪದ್ಯ ೧೭: ಅರ್ಜುನನು ದುಃಖದಿಂದ ಅಭಿಮನ್ಯುವನ್ನು ಹೇಗೆ ಕರೆದನು?

ಕಂದನಾವೆಡೆ ತನ್ನ ಮೋಹದ
ಸಿಂಧುವಾವೆಡೆ ತನುಜವನ ಮಾ
ಕಂದನಾವೆಡೆ ಹೇಳೆನುತ ಫಲುಗುಣನು ತೊದಳಿಸುತ
ನೊಂದು ಮನದಲಿ ಪಾರ್ಥನಾ ಸತಿ
ಯಂದವನು ಕಾಣುತ್ತ ಬೆದೆಬೆದೆ
ಬೆಂದು ಯಮರಾಜನ ಕುಮಾರನ ಮೊಗವ ನೋಡಿದನು (ದ್ರೋಣ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅರ್ಜುನನು ತೊದಲುತ್ತಾ, ಮಗನೆಲ್ಲಿ, ನನ್ನ ಪ್ರೀತಿಯ ಸಾಗರವೆಲ್ಲಿ, ಬಾಲಕರ ಉದ್ಯಾನದ ಮಾವಿನ ಮರವೆಲ್ಲಿ ಹೇಳು ಎಂದು ಮನಸ್ಸಿನಲ್ಲಿ ನೊಂದು, ಸುಭದ್ರೆಯ ಸ್ಥಿತಿಯನ್ನು ನೋಡಿ, ಬೆದೆ ಬೆದೆ ಬೆಂದು ಯುಧಿಷ್ಠಿರನ ಮುಖವನ್ನು ನೋಡಿದನು.

ಅರ್ಥ:
ಕಂದ: ಮಗು; ಮೋಹ: ಪ್ರೀತಿ; ಸಿಂಧು: ಸಾಗರ; ತನುಜ: ಮಗ; ವನ: ಉದ್ಯಾನವನ, ಕಾಡು; ಮಾಕಂದ: ಮಾವಿನ ಮರ; ಹೇಳು: ತಿಳಿಸು; ತೊದಲು: ಸರಿಯಾಗಿ ಮಾತನಾಡದ ಸ್ಥಿತಿ; ನೊಂದು: ನೋವನ್ನುಂಡು; ಮನ: ಮನಸ್ಸು; ಸತಿ: ಹೆಂಡತಿ; ಅಂದ: ಸ್ಥಿತಿ; ಕಾಣು: ತೋರು; ಬೆದೆ: ಬೇಯುವುದನ್ನು ವರ್ಣಿಸುವ ಪದ; ಬೆಂದು: ಸಂಕಟಕ್ಕೊಳಗಾಗು; ಯಮ: ಜವ; ಕುಮಾರ: ಮಗ; ಮೊಗ: ಮುಖ; ನೋಡು: ವೀಕ್ಷಿಸು;

ಪದವಿಂಗಡಣೆ:
ಕಂದನ್+ಆವೆಡೆ +ತನ್ನ +ಮೋಹದ
ಸಿಂಧುವ್+ಆವೆಡೆ +ತನುಜ+ವನ+ ಮಾ
ಕಂದನ್+ಆವೆಡೆ +ಹೇಳೆನುತ +ಫಲುಗುಣನು+ ತೊದಳಿಸುತ
ನೊಂದು +ಮನದಲಿ +ಪಾರ್ಥನಾ +ಸತಿ
ಅಂದವನು+ ಕಾಣುತ್ತ +ಬೆದೆ+ಬೆದೆ
ಬೆಂದು +ಯಮರಾಜನ +ಕುಮಾರನ +ಮೊಗವ +ನೋಡಿದನು

ಅಚ್ಚರಿ:
(೧) ಧರ್ಮಜನನ್ನು ಯಮರಾಜನ ಕುಮಾರ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಕರೆಯುವ ಪರಿ – ತನ್ನ ಮೋಹದ ಸಿಂಧುವಾವೆಡೆ ತನುಜವನ ಮಾಕಂದನಾವೆಡೆ
(೩) ಕಂದ, ಮಾಕಂದ – ಪದದ ಬಳಕೆ

ಪದ್ಯ ೮: ಧೃತರಾಷ್ಟ್ರನು ಧರ್ಮರಾಯನನ್ನು ಹೇಗೆ ಹೊಗಳಿದನು?

ಇಳಿದರಾನೆಯನಮಳ ರತ್ನಾ
ವಳಿಯ ಕಾಣಿಕೆಗಳನು ಸುರಿದರು
ಖಳ ಶಿರೋಮಣಿಗೆರಗಿದರು ಧೃತರಾಷ್ಟ್ರಭೂಪತಿಗೆ
ಕುಲತಿಲಕ ಬಾ ಕಂದ ಭರತಾ
ವಳಿ ವನದ ಮಾಕಂದ ಧರ್ಮ
ಸ್ಥಳ ಲತಾವಳಿಕಂದ ಬಾಯೆಂದಪ್ಪಿದನು ನೃಪನ (ಸಭಾ ಪರ್ವ, ೧೪ ಸಂಧಿ, ೮ ಪದ್ಯ)

ತಾತ್ಪರ್ಯ:
ಪಾಂಡವರು ಆನೆಯನ್ನಿಳಿದು, ತಾವು ತಂದಿದ್ದ ರತ್ನಗಳ ಕಾಣಿಕೆಯನ್ನು ದುಷ್ಟ ರಾಜರಿಗೆ ಕಿರೀಟಪ್ರಾಯನಾದ ಧೃತರಾಷ್ಟ್ರನಿಗೆ ನೀಡಿ ಅವನಿಗೆ ನಮಸ್ಕರಿಸಿದರು. ಆಗ ಆ ಅಂಧ ನೃಪನು ಯುಧಿಷ್ಠಿರನನ್ನು ಹೊಗಳುತ್ತಾ, ಕುಲಕ್ಕೆ ತಿಲಕಪ್ರಾಯನಾದವನೇ, ಭರತವಂಶದಲ್ಲಿನ ಕಾಡಿನಲ್ಲಿ ಮಾವಿನ ಮರದಂತಿರುವವನೆ, ಧರ್ಮ ಭೂಮಿಯ ಬಳ್ಳಿಗಳಿಗೆ ಉಗಮವಾದ ಕಂದದಂತಿರುವವನೇ ಬಾ ಎಂದು ಧರ್ಮರಾಯನನ್ನು ಆಲಂಗಿಸಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಆನೆ: ಗಜ; ಅಮಳ: ನಿರ್ಮಳ; ರತ್ನ: ಬೆಲೆಬಾಳುವ ಮುತ್ತು/ಹವಳ; ಆವಳಿ: ಸಾಲು, ಗುಂಪು; ಕಾಣಿಕೆ: ಉಡುಗೊರೆ; ಸುರಿ: ಹರಡು; ಖಳ: ದುಷ್ಟ; ಶಿರೋಮಣಿ: ಶ್ರೇಷ್ಠ, ಉತ್ತಮ; ಭೂಪತಿ: ರಾಜ; ಎರಗು: ಬಾಗು, ನಮಸ್ಕರಿಸು; ಕುಲ: ವಂಶ; ತಿಲಕ: ಶ್ರೇಷ್ಠ; ಬಾ: ಆಗಮಿಸು; ಕಂದ: ಮಗು; ಆವಳಿ: ಸಾಲು; ವನ: ಕಾಡು; ಮಾಕಂದ: ಮಾವಿನಮರ; ಧರ್ಮ: ಧಾರಣ ಮಾಡಿದುದು, ನಿಯಮ; ಸ್ಥಳ:ನೆಲೆ; ಲತಾವಳಿ: ಬಳ್ಳಿಯ ಸಾಲು; ಅಪ್ಪು: ತಬ್ಬಿಕೊ; ನೃಪ: ರಾಜ;

ಪದವಿಂಗಡಣೆ:
ಇಳಿದರ್+ಆನೆಯನ್+ಅಮಳ +ರತ್ನಾ
ವಳಿಯ +ಕಾಣಿಕೆಗಳನು+ ಸುರಿದರು
ಖಳ +ಶಿರೋಮಣಿಗ್+ಎರಗಿದರು +ಧೃತರಾಷ್ಟ್ರ+ಭೂಪತಿಗೆ
ಕುಲತಿಲಕ+ ಬಾ +ಕಂದ +ಭರತಾ
ವಳಿ+ ವನದ+ ಮಾಕಂದ+ ಧರ್ಮ
ಸ್ಥಳ+ ಲತಾವಳಿಕಂದ +ಬಾಯೆಂದ್+ಅಪ್ಪಿದನು +ನೃಪನ

ಅಚ್ಚರಿ:
(೧) ಧೃತರಾಷ್ಟ್ರನನ್ನು ಖಳ ಶಿರೋಮಣಿ ಎಂದು ಕರೆದಿರುವುದು
(೨) ಭೂಪತಿ, ನೃಪ – ಸಮನಾರ್ಥಕ ಪದ – ೩, ೬ ಸಾಲಿನ ಕೊನೆಯ ಪದ
(೩) ಹೊಗಳಿಕೆಗಳು – ಕುಲತಿಲಕ, ಮಾಕಂದ, ಲತಾವಳಿಕಂದ