ಪದ್ಯ ೩: ದ್ರೋಣನು ಎಷ್ಟು ದಿನ ಸೇನಾಧಿಪತಿಯಾಗಿದ್ದ?

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರ ರನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ (ದ್ರೋಣ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣನು ಐದು ದಿವಸಗಳ ಕಾಲ ಯುದ್ಧಮಾಡಿ, ಶತ್ರು ಸೈನ್ಯವನ್ನು ಹೊಡೆದು ಕುಟ್ಟಿ, ವೈರಿರಾಜರನ್ನು ಸಂಹರಿಸಿ ತನ್ನ ಭುಜಬಲವನ್ನು ಮೆರೆದನು. ಆಯುಧದಾರಿಗಳ ಗುರುವಾದ ದ್ರೋಣನು ಆ ಬಳಿಕ ಅಮರಾವತಿಗೆ ಪ್ರಯಾಣ ಮಾಡಿದನು ಎಂದು ಸಂಜಯನು ಹೇಳಲು ಧೃತರಾಷ್ಟ್ರನ ಹೊಟ್ಟೆಯಲ್ಲಿ ಉರಿಬಿದ್ದಿತು.

ಅರ್ಥ:
ದಿವಸ: ದಿನ; ಅಹಿತ: ವೈರಿ; ಬಲ: ಸೈನ್ಯ; ಹೊಯ್ದು: ಹೋರಾಡು; ಹೊಡೆ: ಏಟು; ಕುಟ್ಟು: ಅಪ್ಪಳಿಸು; ರಿಪು: ವೈರಿ; ಐದು: ಬಂದುಸೇರು; ದೊರೆ: ರಾಜ; ಇರಿ: ಚುಚ್ಚು; ಮೆರೆ: ಹೊಳೆ; ಭುಜ: ಬಾಹು; ಮಹೋನ್ನತಿ: ಅತಿಶಯ, ಹೆಚ್ಚುಗಾರಿಗೆ; ಕೈದು: ಆಯುಧ; ಗುರು: ಆಚಾರ್ಯ; ಛಡಾಳಿಸು: ಪ್ರಜ್ವಲಿಸು, ಥಳಥಳಿಸು; ಮೈ: ತನು; ತೆಗೆ: ಹೊರತಉ; ನಿರ್ಜರ: ದೇವತೆ; ನಗರ: ಊರು; ಹಾಯ್ದು: ಹಾರು, ಉರಿ: ಬೆಂಕಿ; ಜಠರ: ಹೊಟ್ಟೆ; ಮೋಹರ: ಸೈನ್ಯ, ಯುದ್ಧ; ಅವನಿಪ: ರಾಜ;

ಪದವಿಂಗಡಣೆ:
ಐದು +ದಿವಸದೊಳ್+ಅಹಿತ +ಬಲವನು
ಹೊಯ್ದು +ಹೊಡೆ+ಕುಟ್ಟಾಡಿ +ರಿಪುಗಳೊಳ್
ಐದೆ+ ದೊರೆಗಳನ್+ಇರಿದು +ಮೆರೆದನು +ಭುಜ+ಮಹೋನ್ನತಿಯ
ಕೈದುಕಾರರ+ ಗುರು +ಛಡಾಳಿಸಿ
ಮೈದೆಗೆದು +ನಿರ್ಜರರ+ನಗರಿಗೆ
ಹಾಯ್ದನ್+ಎನಲ್+ಉರಿ+ ಜಠರದಲಿ+ ಮೋಹರಿಸಿತ್+ಅವನಿಪನ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕೈದುಕಾರರ ಗುರು ಛಡಾಳಿಸಿಮೈದೆಗೆದು ನಿರ್ಜರರ ನಗರಿಗೆಹಾಯ್ದನ್
(೨) ಐದು, ಹೊಯ್ದು, ಕೈದು – ಪ್ರಾಸ ಪದಗಳು

ಪದ್ಯ ೩೨: ಯಾವ ದೇವತೆಯರು ಪಾರ್ವತಿಯ ಜೊತೆ ಶಬರಿ ವೇಷ ಧರಿಸಿದರು?

ಧೃತಿ ಮಹೋನ್ನತಿ ತುಷ್ಟಿ ಪುಷ್ಟಿ
ಸ್ಮೃತಿ ಸರಸ್ವತಿ ಸಂವಿಧಾಯಕಿ
ಮತಿ ಮನಸ್ವನಿ ಸಿದ್ಧಿ ಕೀರ್ತಿ ಖ್ಯಾತಿ ನಿಯತಮತಿ
ಗತಿ ಕಳಾಮಾನಿನಿ ಕಳಾವತಿ
ರತಿ ರಸಾವತಿ ಚಂಡಿ ಜಯೆ ಮಧು
ಮತಿಯೆನಿಪ ದೇವಿಯರು ಶಬರಿಯರಾಯ್ತು ನಿಮಿಷದಲಿ (ಅರಣ್ಯ ಪರ್ವ, ೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾರ್ವತಿಯು ಶಬರಿಯಾದ ನಂತರ ಉಳಿದ ದೇವಿಯರಾದ ಧೃತಿ, ಮಹೋನ್ನತಿ, ತುಷ್ಟಿ, ಪುಷ್ಟಿ
ಸ್ಮೃತಿ, ಸರಸ್ವತಿ, ಸಂವಿಧಾಯಕಿ,ಮತಿ, ಮನಸ್ವನಿ, ಸಿದ್ಧಿ, ಕೀರ್ತಿ, ಖ್ಯಾತಿ, ನಿಯತಮತಿ,ಗತಿ, ಕಳಾಮಾನಿನಿ, ಕಳಾವತಿ, ರತಿ, ರಸಾವತಿ, ಚಂಡಿ, ಜಯೆ, ಮಧುಮತಿ ಎನ್ನುವ ದೇವತೆಯರು ಶಬರಿಯಾದರು.

ಅರ್ಥ:
ಧೃತಿ: ಧೈರ್ಯ; ತುಷ್ಟಿ: ತೃಪ್ತಿ; ಪುಷ್ಟಿ: ಚೆನ್ನಾಗಿ ಬೆಳೆದ ಸ್ಥಿತಿ; ಸ್ಮೃತಿ: ಸ್ಮರಣೆ; ಸರಸ್ವತಿ: ವಿದ್ಯಾಧಿದೇವತೆ; ಮತಿ: ಬುದ್ಧಿ; ಕೀರ್ತಿ: ಯಶಸ್ಸು; ಖ್ಯಾತಿ: ಪ್ರಸಿದ್ಧ; ಗತಿ: ಚಲನೆ; ಮಾನಿನಿ: ಹೆಣ್ಣು; ಕಳಾ: ಕಲೆ; ರತಿ: ಪ್ರೀತಿ, ಒಲವು, ಮನ್ಮಥನ ಹೆಂಡತಿ; ಶಬರಿ: ಪುಳಿಂದಿ;

ಪದವಿಂಗಡಣೆ:
ಧೃತಿ+ ಮಹೋನ್ನತಿ +ತುಷ್ಟಿ +ಪುಷ್ಟಿ
ಸ್ಮೃತಿ +ಸರಸ್ವತಿ +ಸಂವಿಧಾಯಕಿ
ಮತಿ+ ಮನಸ್ವನಿ +ಸಿದ್ಧಿ+ ಕೀರ್ತಿ +ಖ್ಯಾತಿ +ನಿಯತಮತಿ
ಗತಿ+ ಕಳಾಮಾನಿನಿ+ ಕಳಾವತಿ
ರತಿ+ ರಸಾವತಿ+ ಚಂಡಿ +ಜಯೆ +ಮಧು
ಮತಿ+ಎನಿಪ +ದೇವಿಯರು +ಶಬರಿಯರಾಯ್ತು +ನಿಮಿಷದಲಿ

ಅಚ್ಚರಿ:
(೧) ಧೃತಿ, ಮಹೋನ್ನತಿ, ಸ್ಮೃತಿ, ಸರಸ್ವತಿ, ಖ್ಯಾತಿ, ನಿಯತಮತಿ, ಗತಿ, ಕಳಾವತಿ, ರತಿ, ರಸಾವತಿ, ಮಧುಮತಿ – ತಿ ಕಾರದಿಂದ ಕೊನೆಗೊಳ್ಳುವ ಪದಗಳು