ಪದ್ಯ ೫೩: ಅಭಿಮನ್ಯುವು ಕರ್ಣನಿಗೆ ಏನುತ್ತರವ ನೀಡಿದನು?

ಬಲ್ಲೆನುಂಟುಂಟಖಿಳ ವೀರರೊ
ಳಿಲ್ಲ ಸರಿದೊರೆ ನಿನಗೆ ಬಾಯಲಿ
ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ
ಒಳ್ಳೆ ಗಡ ಪಾವುಡವ ವಾಸುಗಿ
ಯಲ್ಲಿಗಟ್ಟಿತು ಗಡ ಮಹಾಹವ
ಮಲ್ಲ ಮಡಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು (ದ್ರೋಣ ಪರ್ವ, ೫ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಉತ್ತರಿಸುತ್ತಾ, ನನಗೆ ಗೊತ್ತು, ನಿನಗೆ ಸರಿಸಮಾನರಾದ ವೀರರು ಯಾರೂ ಇಲ್ಲ. ಮಾತಿನಲ್ಲಿ ನಿನಗೆ ಸರಿಸಮರೇ ಇಲ್ಲ, ಇನ್ನು ಪರಾಕ್ರಮ ಶಸ್ತ್ರಾಸ್ತ್ರ ಚಾತುರ್ಯಗಳ ಮಾತು ಹಾಗಿರಲಿ, ನೀರು ಹಾವು ವಾಸುಕಿಗೆ ಉಡುಗೊರೆ ಕೊಟ್ಟಹಾಗಾಯಿತು, ಎಳೊ ಸಾಹಸಮಲ್ಲ ಕೈಗುಂದಬೇಡ, ಎಂದು ಕರ್ಣನ ಮೇಲೆ ಅಭಿಮನ್ಯುವು ಬಾಣ ಪ್ರಯೋಗ ಮಾಡಿದನು.

ಅರ್ಥ:
ಬಲ್ಲೆ: ತಿಳಿದಿರುವೆ; ಅಖಿಳ: ಎಲ್ಲಾ; ವೀರ: ಶೂರ, ಪರಾಕ್ರಮಿ; ಸರಿ: ಸಮಾನ; ಬಲ್ಲಿದ: ಬಲಿಷ್ಠನಾದವನು; ಭಟ: ವೀರ, ಸೈನಿಕ; ಮಾತು: ವಾಣಿ; ಒಳ್ಳೆ: ನೀರು ಹಾವು; ಗಡ: ಅಲ್ಲವೆ; ಪಾವು: ಹಾವು; ವಾಸುಕಿ: ಅನಂತ, ವಾಸುಕಿ, ತಕ್ಷಕ, ಕರ್ಕೋಟಕ, ಪದ್ಮ, ಮಹಾಪದ್ಮ, ಶಂಖ ಹಾಗೂ ಕುಲಿಕ ಎಂಬ ಅಷ್ಟಕುಲ ನಾಗಗಳಲ್ಲಿ ಎರಡನೆಯವ; ಆಹವ: ಯುದ್ಧ; ಮಲ್ಲ: ವೀರ; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮುರಿ: ಸೀಳು; ಹೊಕ್ಕು: ಸೇರು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಬಲ್ಲೆನುಂಟುಂಟ್ +ಅಖಿಳ +ವೀರರೊಳ್
ಇಲ್ಲ +ಸರಿದೊರೆ+ ನಿನಗೆ +ಬಾಯಲಿ
ಬಲ್ಲಿದನು +ನೀನಹೆ +ಭಟಾಂಗದ +ಮಾತದಂತಿರಲಿ
ಒಳ್ಳೆ +ಗಡ +ಪಾವುಡವ+ ವಾಸುಗಿ
ಯಲ್ಲಿಗಟ್ಟಿತು +ಗಡ+ ಮಹಾಹವ
ಮಲ್ಲ +ಮಡಮುರಿಯದಿರ್+ಎನುತ +ಹೊಕ್ಕ್+ಎಚ್ಚನ್+ಅಭಿಮನ್ಯು

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಳ್ಳೆ ಗಡ ಪಾವುಡವ ವಾಸುಗಿಯಲ್ಲಿಗಟ್ಟಿತು
(೨) ಕರ್ಣನನ್ನು ಮಹಾಹವಮಲ್ಲ ಎಂದು ಕರೆದಿರುವುದು

ಪದ್ಯ ೨೩: ಧರ್ಮಜನು ಏನೆಂದು ಚಿಂತಿಸಿದನು?

ತಾಗಲನುಗೈದುಭಯಬಲ ಕೈ
ಲಾಗನೀಕ್ಷಿಸುತಿರಲು ರಿಪುಬಲ
ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು
ತೂಗಿದನು ಶಿರವನು ಮಹಾಹವ
ವೀಗಲಾಗದ ಮುನ್ನ ಭೇದದ
ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ (ಭೀಷ್ಮ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎರಡು ಸೈನ್ಯಗಳೂ ಯುದ್ಧಸನ್ನದ್ಧವಾಗಿ ಸನ್ನೆಗಾಗಿ ಕಾಯುತ್ತಿರಲು, ಧರ್ಮಜನು ಶತ್ರು ಸೈನ್ಯವನ್ನು ನೋಡಿ ತಲೆದೂಗಿದನು. ಇನ್ನು ಮಹಾಯುದ್ಧವು ಆರಂಭವಾಗುತ್ತದೆ, ಅದಕ್ಕೆ ಮೊದಲು ಭೀಷ್ಮನೇ ಮೊದಲಾದವರ ಮನಸ್ಸುಗಳನ್ನು ನಾವು ಭೇದೋಪಾಯದಿಂದ ಒಲಿಸಿಕೊಳ್ಳಬೇಕು ಎಂದು ಚಿಂತಿಸಿದನು.

ಅರ್ಥ:
ತಾಗು: ಮುಟ್ಟು; ಅನುವು: ಆಸ್ಪದ; ಕೈದು: ಆಯುಧ; ಬಲ: ಸೈನ್ಯ; ಕೈಲಾಗ: ಸನ್ನೆ; ಈಕ್ಷಿಸು: ನೋಡು; ರಿಪು: ವೈರಿ; ಸಾಗರ: ಸಮುದ್ರ; ಸೌರಂಭ: ಸಂಭ್ರಮ, ಸಡಗರ; ಮಿಗೆ: ಮತ್ತು, ಅಧಿಕವಾಗಿ; ಶಿರ: ತಲೆ; ಮಹಾಹವ: ದೊಡ್ಡ ಯುದ್ಧ; ಮುನ್ನ: ಮುಂಚೆ; ಭೇದ: ಮುರಿ, ಬಿರುಕು; ಮನ: ಮನಸ್ಸು; ಒಲಿಸು: ಸಮ್ಮತಿಸು, ಬಯಸು;

ಪದವಿಂಗಡಣೆ:
ತಾಗಲ್+ಅನು+ಕೈದುಭಯ+ಬಲ +ಕೈ
ಲಾಗನ್+ಈಕ್ಷಿಸುತಿರಲು +ರಿಪುಬಲ
ಸಾಗರದ+ ಸೌರಂಭವನು+ ಮಿಗೆ+ ನೋಡಿ +ಧರ್ಮಜನು
ತೂಗಿದನು+ ಶಿರವನು+ ಮಹಾಹವ
ವೀಗಲಾಗದ+ ಮುನ್ನ +ಭೇದದ
ಲಾಗಿನಲಿ +ಭೀಷ್ಮಾದಿಗಳ +ಮನವೊಲಿಸ+ಬೇಕೆಂದ

ಅಚ್ಚರಿ:
(೧) ಕೈದುಭಯಬಲ, ರಿಪುಬಲ – ಬಲ ಪದದ ಬಳಕೆ
(೨) ಸೈನ್ಯವನ್ನು ವಿವರಿಸುವ ಪರಿ – ರಿಪುಬಲ ಸಾಗರದ ಸೌರಂಭವನು

ಪದ್ಯ ೩೨: ಉತ್ತರನೇಕೆ ಅರ್ಜುನನನ್ನು ಒಡೆಯನೆಂದು ಹೇಳಿದ?

ನಡೆಗೊಳಿಸಿದನು ರಥವ ಮುಂದಕೆ
ನಡೆಸುತುತ್ತರ ನುಡಿದ ಸಾರಥಿ
ಕೆಡಿಸದಿರು ವಂಶವನು ರಾಯನ ಹಿಂದೆ ಹೆಸರಿಲ್ಲ
ಬಿಡು ಮಹಾಹವವೆನಗೆ ನೂಕದು
ತೊಡೆಯದಿರು ನೊಸಲಕ್ಕರವ ನೀ
ನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ (ವಿರಾಟ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಉತ್ತರನು ರಥವನ್ನು ಮುಂದಕ್ಕೆ ಚಲಿಸುತ್ತಾ, ಈಗ ನಾನು ಸಾರಥಿ, ನಾನು ಸತ್ತರೆ ನಮ್ಮಪ್ಪನ ಹೆಸರು ಹೇಳಲು ಇನ್ನೊಬ್ಬರಿಲ್ಲ, ನಮ್ಮ ವಂಶವನ್ನು ನಾಶಮಾಡಬೇಡ, ಈ ಮಹಾಯುದ್ಧವು ನನ್ನಕೈಯ್ಯಲ್ಲಾಗುವುದಿಲ್ಲ. ಬದುಕಬೇಕೆಂದು ಹಣೆಯ ಮೇಲೆ ಬರೆದಿರುವ ಅಕ್ಷರವನ್ನು ನೀನು ಅಳಿಸಬೇಡ, ಇಂದಿನಿಂದ ನೀನೇ ಒಡೆಯ ನಾನೆ ಸೇವಕನೆಂದು ತಿಳಿಸಿದ.

ಅರ್ಥ:
ನಡೆ: ಚಲಿಸು; ರಥ: ಬಂಡಿ; ಮುಂದೆ: ಎದುರು; ನುಡಿ: ಮಾತಾಡು; ಸಾರಥಿ: ಸೂತ; ಕೆಡಿಸು: ಹಾಳುಮಾದು; ವಂಶ: ಕುಲ; ರಾಯ: ರಾಜ; ಹಿಂದೆ: ಹಿಂಬದಿ; ಹೆಸರು: ನಾಮ; ಬಿಡು: ತೊರೆ; ಮಹಾಹವ: ದೊಡ್ಡ ಯುದ್ಧ; ನೂಕು: ತಳ್ಳು; ತೊಡೆ: ಒರಸು, ಅಳಿಸು; ನೊಸಲು: ಹಣೆ; ಅಕ್ಕರ: ಅಕ್ಷರ; ಒಡೆಯ: ರಾಜ, ಯಜಮಾನ; ಕಿಂಕರ: ಸೇವಕ;

ಪದವಿಂಗಡಣೆ:
ನಡೆಗೊಳಿಸಿದನು +ರಥವ +ಮುಂದಕೆ
ನಡೆಸುತ್+ಉತ್ತರ +ನುಡಿದ +ಸಾರಥಿ
ಕೆಡಿಸದಿರು +ವಂಶವನು +ರಾಯನ +ಹಿಂದೆ +ಹೆಸರಿಲ್ಲ
ಬಿಡು +ಮಹಾಹವವ್+ಎನಗೆ +ನೂಕದು
ತೊಡೆಯದಿರು+ ನೊಸಲ್+ಅಕ್ಕರವ+ ನೀನ್
ಒಡೆಯ +ಕಿಂಕರರ್+ಆಗಿಹೆವು +ನಾವಿಂದು +ಮೊದಲಾಗಿ

ಅಚ್ಚರಿ:
(೧) ಹಣೆಬರಹ ಎಂದು ಹೇಳಲು – ನೊಸಲಕ್ಕರ
(೨) ನಾನು ದಾಸನೆಂದು ಹೇಳುವ ಪರಿ – ನೀನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ

ಪದ್ಯ ೨೮: ಕೌರವರ ಯುದ್ಧವನ್ನು ಯಾರು ನೋಡಿದರು?

ಅರಸ ಕೇಳೀಚೆಯಲಿ ಕೌರವ
ರರಸ ಬಂದನು ಸರ್ವದಳ ಸಹಿ
ತೆರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ
ನರ ವೃಕೋದರ ನಕುಲ ಸಹದೇ
ವರು ಕುತೂಹಲದಿಂದ ಸುತ್ತಣ
ಮೊರಡಿಗಳ ಮೇಲಿದ್ದು ನೋಡಿದರಾ ಮಹಾಹವವ (ಅರಣ್ಯ ಪರ್ವ, ೨೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಇತ್ತ ಕೌರವನು ತನ್ನ ಸೈನ್ಯ ಸಮೇತನಾಗಿ ಬಂದನು. ಎರಡೂ ಬಲಗಳ ಗರ್ಜನೆಗೆ ಭೂಮಿ ಬಿರಿಯಿತು. ಅರ್ಜುನ, ಭೀಮ, ನಕುಲ ಸಹದೇವರು ಸುತ್ತಲಿದ್ದ ಗಡ್ಡಗಳ ಮೇಲೆ ನಿಂತು ಕುತೂಹಲದಿಂದ ಈ ಮಹಾಯುದ್ಧವನ್ನು ನೋಡಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಈಚೆ: ಈ ಬದಿ; ಬಂದು: ಆಗಮಿಸು; ಸರ್ವ: ಎಲ್ಲಾ; ದಳ: ಸೈನ್ಯ; ಸಹಿತ: ಜೊತೆ; ಉಬ್ಬರ: ಹೆಚ್ಚಳ; ಬೊಬ್ಬೆ: ಆರ್ಭಟ; ಬಿರಿ: ಬಿರುಕು, ಸೀಳು; ಅವನಿತಳ: ಭೂಮಿ; ನರ: ಅರ್ಜುನ; ವೃಕೋದರ: ಭೀಮ; ಕುತೂಹಲ: ಆಶ್ಚರ್ಯ; ಸುತ್ತಣ: ಎಲ್ಲಾಕಡೆ; ಮೊರಡಿ: ದಿಣ್ಣೆ, ಗುಡ್ಡ; ನೋಡು: ವೀಕ್ಷಿಸು; ಮಹಾ: ದೊಡ್ಡ; ಆಹವ: ಯುದ್ಧ;

ಪದವಿಂಗಡಣೆ:
ಅರಸ +ಕೇಳ್+ಈಚೆಯಲಿ +ಕೌರವರ್
ಅರಸ +ಬಂದನು +ಸರ್ವ+ದಳ +ಸಹಿತ್
ಎರಡು+ ಬಲದ್+ಉಬ್ಬರದ +ಬೊಬ್ಬೆಗೆ +ಬಿರಿದುದ್+ಅವನಿತಳ
ನರ+ ವೃಕೋದರ+ ನಕುಲ +ಸಹದೇ
ವರು +ಕುತೂಹಲದಿಂದ +ಸುತ್ತಣ
ಮೊರಡಿಗಳ+ ಮೇಲಿದ್ದು+ ನೋಡಿದರಾ +ಮಹಾಹವವ

ಅಚ್ಚರಿ:
(೧) ಸೈನ್ಯದ ಗಾತ್ರವನ್ನು ಹೇಳುವ ಪರಿ – ಎರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ

ಪದ್ಯ ೧೮: ಕರ್ಣನು ಹೇಗೆ ಗಂಧವರನ್ನು ಬೀಳಿಸಿದನು?

ಗಾಯವಡೆದರು ಕೆಲರು ನೆಲದಲಿ
ಲಾಯ ನೀಡಿತು ಕೆಲಬರಿಗೆ ಪೂ
ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆದೆಸೆಗೆ
ಆಯುಧದ ಮೆದೆಯೊಡ್ಡಿತಾಕ
ರ್ಣಾಯತಾಸ್ತ್ರವ ಕೆಣಕಿ ಖೇಚರ
ರಾಯದಳ ನುಗ್ಗಾಯ್ತು ದೊರೆಹೊಕ್ಕನು ಮಹಾಹವವ (ಅರಣ್ಯ ಪರ್ವ, ೨೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನ ಬಾನಗಳಿಂದ ಕೆಲವರು ಗಾಯಗೊಂಡರು. ಕೆಲವರು ನೆಲದಲ್ಲಿ ಸಾಲಾಗಿ ಬಿದ್ದರು. ಕರ್ಣನ ಹೊಡೆತಕ್ಕೆ ಯೋಧರು ದಿಕ್ಕು ದಿಕ್ಕಿಗೆ ಓಡಿ ಹೋದರು. ಕರ್ಣನು ಮುರಿದ ಗಂಧರ್ವರ ಶಸ್ತ್ರಗಳು ಮೆದೆಯಾಗಿ ಬಿದ್ದವು. ಕಿವಿವರೆಗೆ ಹೆದೆಯನ್ನೆಳೆದು ಕರ್ಣನು ಬಿಟ್ಟ ಬಾಣಗಳಿಂದ ಗಂಧರ್ವರ ಸೈನ್ಯವು ಕಡಿದು ಬಿತ್ತು. ಚಿತ್ರಸೇನನೇ ಯುದ್ಧಕ್ಕೆ ಬಂದನು.

ಅರ್ಥ:
ಗಾಯ: ಪೆಟ್ಟು; ಕೆಲರು: ಸ್ವಲ್ಪ; ನೆಲ: ಭೂಮಿ; ಲಾಯ: ಸಾಲು, ಅಶ್ವಶಾಲೆ; ಪೂರಾಯ: ಪರಿಪೂರ್ಣ; ಎಸು: ಬಾಣ ಪ್ರಯೋಗ ಮಾಡು; ಹಸುಗೆ: ವಿಭಾಗ, ಹಂಚಿಕೆ; ಭಟ: ಸೈನ್ಯ; ದೆಸೆ: ದಿಕ್ಕು; ಆಯುಧ: ಶಸ್ತ್ರ; ಮೆದೆ: ಹುಲ್ಲಿನ ರಾಶಿ, ಒಡ್ಡು, ಗುಂಪು; ಕರ್ಣ: ಕಿವಿ; ಆಯತ: ಅಣಿಗೊಳಿಸು; ಕೆಣಕು: ಪ್ರಚೋದಿಸು; ಖೇಚರ: ಗಂಧರ್ವ; ರಾಯ: ಒಡೆಯ; ದಳ; ಸೈನ್ಯ; ನುಗ್ಗು: ತಳ್ಳಿಕೊಂಡು ಮುಂದೆ ಸರಿ; ದೊರೆ: ರಾಜ; ಹೊಕ್ಕು: ಸೇರು; ಮಹಾ: ದೊಡ್ಡ; ಆಹವ: ಯುದ್ಧ;

ಪದವಿಂಗಡಣೆ:
ಗಾಯವಡೆದರು+ ಕೆಲರು +ನೆಲದಲಿ
ಲಾಯ +ನೀಡಿತು +ಕೆಲಬರಿಗೆ +ಪೂ
ರಾಯದ್+ಎಸುಗೆಗೆ+ ಹಸುಗೆಯಾದರು +ಭಟರು +ದೆಸೆದೆಸೆಗೆ
ಆಯುಧದ +ಮೆದೆಯೊಡ್ಡಿತ್+ಆ+ಕ
ರ್ಣಾಯತ+ಅಸ್ತ್ರವ +ಕೆಣಕಿ +ಖೇಚರ
ರಾಯದಳ +ನುಗ್ಗಾಯ್ತು +ದೊರೆ+ಹೊಕ್ಕನು +ಮಹ+ಆಹವವ

ಅಚ್ಚರಿ:
(೧) ಗಾಯ, ಲಾಯ, ಪೂರಾಯ, ರಾಯ – ಪ್ರಾಸ ಪದಗಳು

ಪದ್ಯ ೪೫:ಅರ್ಜುನನ ಮೇಲೆ ಯಾವೆರಡರ ಹೊರೆ ಬಿದ್ದಿತು?

ಸಾರಥಿತ್ವದ ಕೈಮೆ ತತ್ಪ್ರತಿ
ಕಾರ ಶರಸಂಧಾನವೆರಡರ
ಭಾರ ಬಿದ್ದುದು ಮೇಲೆ ದನುಜರ ಮೂರು ಕೋಟಿಯದು
ಧೀರರಾತ್ಮ ಸ್ತುತಿಗೆ ನಾಚದ
ರಾರು ಜೀಯ ಮಹಾಹವದವಿ
ಸ್ತಾರವನು ಮಾತಲಿಯ ಕೈಯಲಿ ಚಿತ್ತವಿಸಿಯೆಂದ (ಅರಣ್ಯ ಪರ್ವ, ೧೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಾರಥಿತ್ವ ಮತ್ತು ಯುದ್ಧ ಇವೆರಡರ ಭಾರವೂ ನನ್ನ ಮೇಲೆ ಬಿತ್ತು. ನಾನೊಬ್ಬನು, ಅಸುರರು ಮೂರು ಕೋಟಿ. ಆತ್ಮ ಸ್ತುತಿಯನ್ನು ಮಾಡಿಕೊಳ್ಳಲು ನಾಚದಿರುವವರಾರು? ಆ ದೊಡ್ಡ ಯುದ್ಧದ ವಿಷಯವನ್ನು ಅಣ್ಣಾ ನೀವು ಮಾತಲಿಯಿಂದಲೇ ಕೇಳಿ ಎಂದು ಅರ್ಜುನನು ಹೇಳಿದನು.

ಅರ್ಥ:
ಸಾರಥಿ: ರಥವನ್ನು ಓಡಿಸುವವ; ಕೈಮೆ: ಮೋಸ, ಕೈಚಳಕ; ಪ್ರತಿಕಾರ: ಮಾಡಿದುದಕ್ಕೆ ಪ್ರತಿಯಾಗಿ ಮಾಡುವುದು; ಶರ: ಬಾಣ; ಸಂಧಾನ: ಸೇರಿಸುವುದು, ಹೊಂದಿಸುವುದು; ಭಾರ: ಹೊರೆ; ಬಿದ್ದು: ಕುಸಿ; ದನುಜ: ರಾಕ್ಷಸ; ಧೀರ: ಶೂರ; ಸ್ತುತಿ: ಹೊಗಳಿಕೆ; ನಾಚು: ನಾಚಿಕೆಪಡು, ಅವಮಾನ; ಜೀಯ: ಒಡೆಯ; ಆಹವ: ಯುದ್ಧ; ಮಹಾ: ದೊಡ್ಡ; ವಿಸ್ತಾರ: ಹರಹು, ವ್ಯಾಪ್ತಿ; ಕೈಯಲಿ: ಬಳಿ; ಚಿತ್ತವಿಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಸಾರಥಿತ್ವದ +ಕೈಮೆ+ ತತ್+ಪ್ರತಿ
ಕಾರ +ಶರ+ಸಂಧಾನವ್+ಎರಡರ
ಭಾರ +ಬಿದ್ದುದು +ಮೇಲೆ +ದನುಜರ+ ಮೂರು +ಕೋಟಿಯದು
ಧೀರರ್+ಆತ್ಮ +ಸ್ತುತಿಗೆ +ನಾಚದ
ರಾರು +ಜೀಯ +ಮಹ+ಆಹವದ+ವಿ
ಸ್ತಾರವನು +ಮಾತಲಿಯ+ ಕೈಯಲಿ+ ಚಿತ್ತವಿಸಿಯೆಂದ

ಅಚ್ಚರಿ:
(೧) ಹೊಗಳಿಕೆಯ ಬಗ್ಗೆ ಅರ್ಜುನನ ನುಡಿ – ಧೀರರಾತ್ಮ ಸ್ತುತಿಗೆ ನಾಚದರಾರು

ಪದ್ಯ ೩೯: ಅರ್ಜುನನು ಹೇಗೆ ತನ್ನ್ ಆತ್ಮ ಪ್ರಶಂಸೆ ಮಾಡಿದನು?

ಬಳಿಕ ಭೀಷ್ಮನನಾರು ರಣದಲಿ
ಗೆಲಿದವನು ದ್ರೋಣ ಪ್ರತಾಪಾ
ನಳನ ನಂದಿಸಿದಾತನಾರು ಮಹಾಹವಾಗ್ರದಲಿ
ಮಲೆತು ನಿಂದರೆ ಸೂತತನಯನ
ಕೊಲುವನಾವನು ಎನ್ನ ಟಿಕ್ಕರಿ
ಗಳೆವೆ ನೀನೆನ್ನೊಡನೆ ಸೆಣಸುವ ಭಟನ ತೋರೆಂದ (ಕರ್ಣ ಪರ್ವ, ೧೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಆ ಬಳಿಕ ಯುದ್ಧದಲ್ಲಿ ಭೀಷ್ಮನನ್ನು ಗೆದ್ದವರಾರು? ದ್ರೋಣನ ಪ್ರತಾಪಾಗ್ನಿಯನ್ನು ಮಹಾ ಯುದ್ಧದಲ್ಲಿ ಆರಿಸಿದವನಾರು? ಸಿಟ್ಟಿನಿಂದ ಇದಿರಾಗಿ ನಿಂತರೆ ಕರ್ಣನನ್ನು ಕೊಲ್ಲುವವನು ನಾನಲ್ಲದೆ ಇನ್ನಾರು? ಇಂತಹ ನನ್ನನ್ನು ನೀನು ಹೀಯಾಳಿಸುತ್ತಿರುವೆ, ನನ್ನೆದುರು ಯುದ್ಧ ಮಾಡಬಲ್ಲ ವೀರನನ್ನು ತೋರಿಸು ಎಂದು ಅರ್ಜುನನು ತನ್ನ ಆತ್ಮ ಪ್ರಶಂಸೆ ಮಾಡಿಕೊಂಡನು.

ಅರ್ಥ:
ಬಳಿಕ: ನಂತರ; ರಣ: ಯುದ್ಧಭೂಮಿ; ಗೆಲಿದು: ಗೆದ್ದು, ಜಯಗಳಿಸು; ಪ್ರತಾಪ: ಶೌರ್ಯ; ಅನಲ: ಬೆಂಕಿ; ಪ್ರತಾಪಾನಳ: ಶೌರ್ಯವೆಂಬ ಬೆಂಕಿ; ನಂದಿಸು: ಆರಿಸು; ಮಹಾ: ದೊಡ್ಡ, ಶ್ರೇಷ್ಠ; ಆಹವ: ಯುದ್ಧ; ಅಗ್ರ: ತುದಿ, ಮುಂಭಾಗ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ನಿಲ್ಲು: ಎದುರು ನೋಡು, ತಡೆ; ತನಯ: ಮಗ; ಸೂತ: ದಾಸ, ರಥವನ್ನು ಓಡಿಸುವವ; ಕೊಲು: ಕೊಲ್ಲು, ಸಾಯಿಸು; ಟಿಕ್ಕರಿಗಳೆ: ನಿಂದಿಸು, ಹೀಯಾಳಿಸು; ಸೆಣಸು: ಸ್ಪರ್ಧೆ, ಪೈಪೋಟಿ; ಭಟ: ಸೈನಿಕ; ತೋರು: ಕಾಣು, ದೃಷ್ಟಿಗೆ ಬೀಳು;

ಪದವಿಂಗಡಣೆ:
ಬಳಿಕ +ಭೀಷ್ಮನನ್+ಆರು +ರಣದಲಿ
ಗೆಲಿದವನು +ದ್ರೋಣ +ಪ್ರತಾಪಾ
ನಳನ +ನಂದಿಸಿದ್+ಆತನಾರು +ಮಹ+ಆಹವ+ಅಗ್ರದಲಿ
ಮಲೆತು +ನಿಂದರೆ +ಸೂತ+ತನಯನ
ಕೊಲುವನ್+ಆವನು +ಎನ್ನ +ಟಿಕ್ಕರಿ
ಗಳೆವೆ +ನೀನ್+ಎನ್ನೊಡನೆ +ಸೆಣಸುವ +ಭಟನ +ತೋರೆಂದ

ಅಚ್ಚರಿ:
(೧) ಗೆಲಿದವನು, ನಂದಿಸಿದವನು, ಕೊಲುವನಾವನು – ಅರ್ಜುನನ ಹೆಮ್ಮೆಯ ನುಡಿಗಳು