ಪದ್ಯ ೨೫: ಯಾವ ಬಾಣವನ್ನು ಹಿಡಿದು ಭೀಮಾರ್ಜುನರು ಮುನ್ನಡೆದರು?

ಐದುವಡೆ ಮೆಣ್ಮಂತ್ರಸಿದ್ಧಿಯ
ಕೈದು ಮನೆಯಲಿ ಬೇಂಟೆಕಾರರ
ಕೈದು ಕೈಯಲಿ ಸಮಯವಲ್ಲ ಮಹಾಸ್ತ್ರಕರ್ಷಣಕೆ
ಮೈದುನನ ಮೈಸರಸಕೀ ಹುಲು
ಗೈದು ಸಾಲದೆ ತಂಗಿ ದುಶ್ಶಳೆ
ಯೈದೆತನ ಬಯಲಾಯ್ತೆನುತ ಬೆಂಬತ್ತಿದರು ಖಳನ (ಅರಣ್ಯ ಪರ್ವ, ೨೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಯುದ್ಧ ಮಾಡಲು ಹೊರಟಿದ್ದೇವೆ, ಮಂತ್ರಾಸ್ತ್ರಗಳು ಮನೆಯಲ್ಲಿವೆ, ಬೇಟೆಯಾಡುವ ಬಾಣಗಳು ಕೈಯಲ್ಲಿವೆ, ಮಹಾಸ್ತ್ರ ಪ್ರಯೋಗಕ್ಕೆ ಇದು ಸಮಯವಲ್ಲ, ಮೈದುನನ ಮೈ ಮೇಲೆ ಸರಸದಿಂದ ಪ್ರಯೊಗ ಮಾಡಲು ಈ ಬೇಟೆಯಾಡುವ ಬಾಣಗಳು ಸಾಕಲ್ಲವೇ? ತಂಗಿ ದುಶ್ಶಳೆಯ ಮುತ್ತೈದೆತನವಿಲ್ಲದಂತಾಗುತ್ತದೆ ಎಂದುಕೊಂಡು ಭೀಮಾರ್ಜುನರು ಸೈಂಧವನನ್ನು ಬೆನ್ನುಹತ್ತಿದರು.

ಅರ್ಥ:
ಐದು: ಬಂದು ಸೇರು; ಮೇಣ್: ಮತ್ತು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕೈದು: ಆಯುಧ, ಶಸ್ತ್ರ; ಮನೆ: ಆಲಯ; ಬೇಂಟೆ: ಬೇಟೆ; ಕೈ: ಹಸ್ತ; ಸಮಯ: ಕಾಲ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಮೈದುನ: ತಂಗಿಯ ಗಂಡ; ಮೈ: ತನು; ಸರಸ: ಚೆಲ್ಲಾಟ; ಹುಲು: ಕ್ಷುಲ್ಲ; ಸಾಲದೆ: ಸಾಕಲ್ಲವೇ; ತಂಗಿ: ಸಹೋದರಿ; ಐದೆ: ಮುತ್ತೈದೆ; ಬಯಲು: ಬರಿದಾದ ಜಾಗ, ಶೂನ್ಯ; ಬೆಂಬತ್ತು: ಹಿಂಬಾಲಿಸು; ಖಳ: ದುಷ್ಟ;

ಪದವಿಂಗಡಣೆ:
ಐದುವಡೆ +ಮೆಣ್+ಮಂತ್ರ+ಸಿದ್ಧಿಯ
ಕೈದು+ ಮನೆಯಲಿ+ ಬೇಂಟೆಕಾರರ
ಕೈದು+ ಕೈಯಲಿ +ಸಮಯವಲ್ಲ+ ಮಹಾಸ್ತ್ರಕರ್ಷಣಕೆ
ಮೈದುನನ +ಮೈಸರಸಕ್+ಈ +ಹುಲು
ಕೈದು+ ಸಾಲದೆ+ ತಂಗಿ+ ದುಶ್ಶಳೆ
ಐದೆತನ+ ಬಯಲಾಯ್ತೆನುತ+ ಬೆಂಬತ್ತಿದರು +ಖಳನ

ಅಚ್ಚರಿ:
(೧) ಐದು, ಕೈದು, ಮೈದುನ, ಐದೆತನ – ಐ ಪದದ ಪ್ರಯೋಗ
(೨) ಬೇಟೆಯ ಬಾಣಗಳೇ ಸಾಕು ಎಂದು ಹೇಳುವ ಪರಿ – ಮೈದುನನ ಮೈಸರಸಕೀ ಹುಲು
ಗೈದು ಸಾಲದೆ

ಪದ್ಯ ೧೦: ದುರ್ಯೋಧನನು ಏನನ್ನು ಯೋಚಿಸುತ್ತಿದ್ದನು?

ಮಾನಿನಿಯ ಕಟಕಿಯ ಮಹಾಸ್ತ್ರಕೆ
ಮೌನವನು ಮರೆಗೊಂಡು ಕಲುಷ
ಧ್ಯಾನನಿದ್ದನು ಚಿತ್ತದಲಿ ಬೇರೊಂದು ಚಿಂತಿಸುತ
ಭಾನುಮತಿ ಕೈಮುಗಿದಳೀ ಕ
ರ್ಣಾನುಗತ ತಾಟಂಕ ಮುದ್ರೆಯ
ನೀನೆಲೈ ದಯೆಗೈದೆಯೆಂದೆರಗಿದಳು ಚರಣದಲಿ (ಅರಣ್ಯ ಪರ್ವ, ೨೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರೌಪದಿಯ ಚುಚ್ಚು ಮಾತುಗಳನ್ನು ಕೇಳಿದ ದುರ್ಯೋಧನನು ಬೇರೇನೂ ಮಾಡಲಾಗದೇ ಮೌನಕ್ಕೆ ಶರಣಾದರೂ ರೋಷದ ಧ್ಯಾನದಲ್ಲಿ ಮುಳುಗಿದ್ದನು. ತನ್ನ ಮನಸ್ಸು ಬೇರೇನೋ ಯೋಚನೆಯನ್ನೇ ಚಿಂತಿಸುತ್ತಿತ್ತು. ಇತ್ತ ಭಾನುಮತಿಯು ತನ್ನ ಗಂಡನನ್ನು ಪುನಃ ಪಡೆದ ಸಂತಸದಲ್ಲಿ, ಯುಧಿಷ್ಠಿರನಿಗೆ ನಮಸ್ಕರಿಸಿ, ಕಿವಿಯ ಓಲೆಯ ಭಾಗ್ಯವನ್ನು ನೀನು ನನಗೆ ದಯಪಾಲಿಸಿದೆ ಎಂದು ಆತನ ಚರಣಕ್ಕೆರಗಿದಳು.

ಅರ್ಥ:
ಮಾನಿನಿ: ಹೆಣ್ಣು; ಕಟಕಿ: ಚುಚ್ಚುಮಾತು, ವ್ಯಂಗ್ಯ; ಮಹಾಸ್ತ್ರ: ದೊಡ್ಡ ಶಸ್ತ್ರ; ಮೌನ: ಸುಮ್ಮನಿರುವ ಸ್ಥಿತಿ; ಮರೆ: ಹೊದಿಕೆ; ಕಲುಷ: ಸಿಟ್ಟಿಗೆದ್ದ, ರೋಷ; ಧ್ಯಾನ: ಚಿಂತನೆ, ಮನನ; ಚಿತ್ತ: ಮನಸ್ಸು; ಬೇರೆ: ಅನ್ಯ; ಚಿಂತೆ: ಯೋಚನೆ; ಕೈಮುಗಿ: ನಮಸ್ಕರಿಸು; ಕರ್ಣ: ಕಿವಿ; ತಾಟಂಕ: ಕಿವಿಯ ಆಭರಣ, ಓಲೆ; ಮುದ್ರೆ: ಮೊಹರು, ಚಿಹ್ನೆ; ದಯೆ: ಕರುಣೆ; ಎರಗು: ಬೀಳು, ನಮಸ್ಕರಿಸು; ಚರಣ: ಪಾದ; ಅನುಗತ: ಜೊತೆಯಲ್ಲಿ ಬರುವವನು, ಸಂಬಂಧಪಟ್ಟ;

ಪದವಿಂಗಡಣೆ:
ಮಾನಿನಿಯ +ಕಟಕಿಯ +ಮಹಾಸ್ತ್ರಕೆ
ಮೌನವನು +ಮರೆಗೊಂಡು +ಕಲುಷ
ಧ್ಯಾನನಿದ್ದನು +ಚಿತ್ತದಲಿ+ ಬೇರೊಂದು +ಚಿಂತಿಸುತ
ಭಾನುಮತಿ +ಕೈಮುಗಿದಳ್+ಈ +ಕರ್ಣ
ಅನುಗತ +ತಾಟಂಕ +ಮುದ್ರೆಯ
ನೀನೆಲೈ +ದಯೆಗೈದೆ+ಎಂದೆರಗಿದಳು+ ಚರಣದಲಿ

ಅಚ್ಚರಿ:
(೧) ಧನ್ಯತೆಯನ್ನು ತಿಳಿಸುವ ಪರಿ – ಕರ್ಣಾನುಗತ ತಾಟಂಕ ಮುದ್ರೆಯನೀನೆಲೈ ದಯೆಗೈದೆ
(೨) ದುರ್ಯೋಧನನ ಸ್ಥಿತಿ – ಮೌನವನು ಮರೆಗೊಂಡು ಕಲುಷಧ್ಯಾನನಿದ್ದನು ಚಿತ್ತದಲಿ ಬೇರೊಂದು ಚಿಂತಿಸುತ

ಪದ್ಯ ೧೧: ಅರ್ಜುನನಿಗೆ ನಾರದರು ಯಾವ ಹಿತವಚನ ನುಡಿದರು?

ಹರಮಹಾಸ್ತ್ರಾದಿಗಳ ಲೀಲೆಯ
ನರಸ ನೋಡಲು ಬೇಹುದಾದರೆ
ಬೆರೆಸುವುದು ತತ್ಸಮಯ ಸೈರಿಸು ನೃಪನ ಕಣ್ಮನವ
ಹೊರೆವ ಹೇರಾಳದ ಮಹಾಸಂ
ಗರವಹುದು ಮುಂದಣ ಕಥಾವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ (ಅರಣ್ಯ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರವೇ ಮೊದಲಾದ ಮಹಾಸ್ತ್ರಗಳ ಲೀಲೆಯನ್ನು ಯುಧಿಷ್ಠಿರನು ನೋಡಲು ಇಚ್ಛಿಸಿದರೆ, ಆ ಕಾಲವೂ ಬರುತ್ತದೆ, ಅಲ್ಲಿಯವರೆಗೂ ನಿಮ್ಮಣ್ಣ ಕಣ್ಣು ಮತ್ತು ಮನಸ್ಸುಗಳು ಕಾಯಬೇಕು. ಈ ಅಸ್ತ್ರ ಪ್ರಯೋಗವು ಸಾರ್ಥಕವಾಗುವಂತಹ ಮಹಾಯುದ್ಧವಾಗುತ್ತದೆ. ಮುಂದಾಗುವುದನ್ನು ಹೇಳುವುದು ಉಚಿತವಲ್ಲ ಎಂದು ನಾರದರು ಹೇಳಿದರು.

ಅರ್ಥ:
ಹರ: ಶಿವ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಲೀಲೆ: ಆನಂದ, ಸಂತೋಷ; ಅರಸ: ರಾಜ; ನೋಡು: ವೀಕ್ಷಿಸು; ಬೇಹು: ಗುಪ್ತಚಾರಿಕೆ; ಬೆರೆ: ಕೂಡು, ಸೇರು; ಸಮಯ: ಕಾಲ; ಸೈರಿಸು: ತಾಳು, ಸಹಿಸು; ನೃಪ: ರಾಜ; ಕಣ್ಮನ: ಕಣ್ಣು ಮತ್ತು ಮನಸ್ಸು; ಹೊರೆ: ರಕ್ಷಣೆ, ಆಶ್ರಯ; ಹೇರಾಳ: ದೊಡ್ಡ, ವಿಶೇಷ; ಮಹಾ: ದೊಡ್ಡ; ಸಂಗರ: ಯುದ್ಧ; ಮುಂದಣ: ಮುಂದೆ; ಕಥೆ: ವಿಚಾರ; ವಿಸ್ತರ: ವಿವರಣೆ; ವಿರಚಿಸ: ನಿರೂಪಿಸು, ರಚಿಸು; ಅನುಚಿತ: ಸರಿಯಲ್ಲ; ಮುನಿಪ: ಋಷಿ;

ಪದವಿಂಗಡಣೆ:
ಹರ+ಮಹಾಸ್ತ್ರ+ಆದಿಗಳ+ ಲೀಲೆಯನ್
ಅರಸ+ ನೋಡಲು+ ಬೇಹುದಾದರೆ
ಬೆರೆಸುವುದು +ತತ್ಸಮಯ +ಸೈರಿಸು+ ನೃಪನ+ ಕಣ್ಮನವ
ಹೊರೆವ +ಹೇರಾಳದ +ಮಹಾಸಂ
ಗರವಹುದು +ಮುಂದಣ +ಕಥಾ+ವಿ
ಸ್ತರವ +ವಿರಚಿಸಬಾರದ್+ಅನುಚಿತವ್+ಎಂದನಾ +ಮುನಿಪ

ಅಚ್ಚರಿ:
(೧) ಮುಂದೆ ಆಗುವುದನ್ನು ಹೇಳಬಾರದೆಂದು ಹೇಳುವ ಪರಿ – ಮುಂದಣ ಕಥಾವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ

ಪದ್ಯ ೬೪: ಧರ್ಮಜನು ಅರ್ಜುನನಿಗೆ ಯಾವ ಆಶೆಯನ್ನು ತೋಡಿಕೊಂಡನು?

ಶಿವನಘಾಟದ ಶರ ಚತುರ್ದಶ
ಭುವನ ಭಂಜನವಿದು ಮದೀಯಾ
ಹವಕೆ ಹೂಣಿಗನಾಯ್ತಲೇ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀಶಾಂ
ಭವಮಹಾಸ್ತ್ರ ಪೌಢಕೇಳೀ
ವಿವರಣವ ಕಾಂಬರ್ತಿಯಾಯ್ತೆಂದನು ಧನಂಜಯಗೆ (ಅರಣ್ಯ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಅಸಮಾನವಾದ ಪಾಶುಪತಾಸ್ತ್ರವು ಹದಿನಾಲ್ಕು ಲೋಕಗಳನ್ನು ಸುಡಬಲ್ಲದು, ಇದು ನಮ್ಮ ಸಮರಸಾಧನವಾದುದು ಮಹಾಪುಣ್ಯವೇ ಸರಿ. ಈ ಪಾಶುಪತಾಸ್ತ್ರದ ಪ್ರೌಢ ವಿಧಾನವನ್ನು ನೋಡಬೇಕೆಂಬಾಶೆಯಾಗಿದೆ, ತೋರಿಸು ಎಂದು ಧರ್ಮಜನು ಕೇಳಿದನು.

ಅರ್ಥ:
ಶಿವ: ಶಂಕರ; ಅಘಾಟ: ಅದ್ಭುತ, ಅತಿಶಯ; ಶರ: ಬಾಣ; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಭಂಜನ: ನಾಶಕಾರಿ; ಆಹವ: ಯುದ್ಧ; ಹೂಣಿಗ: ಬಿಲ್ಲುಗಾರ; ಹೇರಾಳ: ಬಹಳ; ಸುಕೃತ: ಒಳ್ಳೆಯ ಕಾರ್ಯ; ಎವಗೆ: ನನಗೆ; ತೋರಿಸು: ನೋಡು, ಗೋಚರಿಸು; ಮಹಾಸ್ತ್ರ: ದೊಡ್ಡ ಶಸ್ತ್ರ; ಪ್ರೌಢ: ಶ್ರೇಷ್ಠ; ವಿವರಣ: ವಿಚಾರ; ಕಾಂಬು: ನೋಡು;

ಪದವಿಂಗಡಣೆ:
ಶಿವನ್+ಅಘಾಟದ +ಶರ +ಚತುರ್ದಶ
ಭುವನ +ಭಂಜನವಿದು +ಮದೀಯ
ಆಹವಕೆ+ ಹೂಣಿಗನ್+ಆಯ್ತಲೇ +ಹೇರಾಳ +ಸುಕೃತವಿದು
ಎವಗೆ+ ತೋರಿಸಬೇಹುದ್+ಈಶಾಂ
ಭವ+ಮಹಾಸ್ತ್ರ +ಪೌಢ+ಕೇಳ್+ಈ
ವಿವರಣವ+ ಕಾಂಬರ್ತಿಯಾಯ್ತೆಂದನು +ಧನಂಜಯಗೆ

ಅಚ್ಚರಿ:
(೧) ಪಾಶುಪತಾಸ್ತ್ರದ ಹಿರಿಮೆ – ಶಿವನಘಾಟದ ಶರ ಚತುರ್ದಶ ಭುವನ ಭಂಜನವಿದು

ಪದ್ಯ ೨೮: ಅರ್ಜುನನಿಗೆ ಯಾರು ಶುಭ ನುಡಿಯಲೆಂದು ಧರ್ಮಜನು ಹೇಳಿದನು?

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರಮಹೋರಗ ಯಕ್ಷ ಮನುಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ (ಅರಣ್ಯ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಿವನು ನಿನಗೆ ದಯೆತೋರಿ ಶ್ರೇಷ್ಠವಾದ ಆಯುಧವನ್ನು ನೀಡಲಿ. ಇಂದ್ರ, ಯಮ, ಸೂರ್ಯ, ಅಗ್ನಿ, ನಿರುತಿ, ವರುಣ, ಕುಬೇರ, ವಾಯು, ವಸುಗಳು, ಸಿದ್ಧರು, ವಿದ್ಯಾಧರರು, ಮಹಾಸರ್ಪಗಳು, ಯಕ್ಷರು, ಮನುಗಳು, ದೇವತೆಗಳು, ಕಿಂಪುರುಷರು ನಿನಗೆ ಶುಭನುಡಿಗಳಿಂದ ಹರಸಲಿ ಎಂದು ಧರ್ಮಜನು ನುಡಿದನು.

ಅರ್ಥ:
ಕರುಣಿಸು: ದಯೆತೋರು, ಆಶೀರ್ವದಿಸು; ಕಾಮ: ಮನ್ಮಥ; ಅರಿ: ವೈರಿ; ಕಾಮಾರಿ: ಶಿವ; ಕೃಪೆ: ದಯೆ, ಕರುಣೆ; ವರ: ಶ್ರೇಷ್ಠ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಇಂದ್ರ: ಶಕ್ರ; ಭಾಸ್ಕರ: ಸೂರ್ಯ; ಹುತಾಶನ: ಹವಿಸ್ಸನ್ನು ಸೇವಿಸುವವನು, ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಮಾರುತ: ವಾಯುದೇವತೆ; ಸುರರು: ದೇವತೆಗಳು; ವಸು: ದೇವತೆಗಳ ಒಂದು ವರ್ಗ; ಸಿದ್ಧ: ದೇವತೆಗಳಲ್ಲಿ ಒಂದು ಪಂಗಡ; ವಿದ್ಯಾಧರ: ದೇವತೆಗಳ ಗುಂಪು; ಉರಗ: ಹಾವು; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ಮನು: ಬ್ರಹ್ಮನ ಹದಿನಾಲ್ಕು ಜನ ಮಾನಸಪುತ್ರರಲ್ಲಿ ಪ್ರತಿಯೊಬ್ಬ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ, ಕಿನ್ನರ; ವಿಮಳ: ಶುದ್ಧ; ಸ್ವಸ್ತಿ: ಒಳ್ಳೆಯದು, ಶುಭ; ವಾಚನ: ನುಡಿ;

ಪದವಿಂಗಡಣೆ:
ಕರುಣಿಸಲಿ +ಕಾಮಾರಿ +ಕೃಪೆಯಿಂ
ವರ+ ಮಹಾಸ್ತ್ರವನ್+ಇಂದ್ರ +ಯಮ +ಭಾ
ಸ್ಕರ+ ಹುತಾಶನ+ ನಿರುತಿ +ವರುಣ +ಕುಬೇರ +ಮಾರುತರು
ಸುರರು +ವಸುಗಳು +ಸಿದ್ಧ +ವಿದ್ಯಾ
ಧರ+ಮಹ+ಉರಗ +ಯಕ್ಷ +ಮನು+ಕಿಂ
ಪುರುಷರ್+ಈಯಲಿ +ನಿನಗೆ +ವಿಮಳ +ಸ್ವಸ್ತಿ+ವಾಚನವ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣಿಸಲಿ ಕಾಮಾರಿ ಕೃಪೆಯಿಂ
(೨) ಮಹಾಸ್ತ್ರ, ಮಹೋರಗ – ಮಹ ಪದದ ಬಳಕೆ

ಪದ್ಯ ೧೯: ಸುರರು ಏತಕ್ಕೆ ಮರುಗಿದರು?

ಕಾದಲೆಳಸಿದ ಪಾಂಡವರ ಸಂ
ವಾದ ತೀರಿತು ಕೌರವೇಂದ್ರನು
ಸಾಧಿಸಿದ ಹಗೆ ಸಫಲವಾದುದು ಸಮರಭೂಮಿಯಲಿ
ಹೋದನರ್ಜುನನೀ ಮಹಾಸ್ತ್ರದ
ಬಾಧೆಗಿದಿರಿಲ್ಲೆನುತ ಘನಚಿಂ
ತೋದಧಿಯಲುರೆ ಮುಳುಗಿ ಮರುಗಿತು ಮೇಲೆ ಸುರಕಟಕ (ಕರ್ಣ ಪರ್ವ, ೨೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆಗಸದಿಂದ ಈ ಕಾಳಗವನ್ನು ನೋಡುತ್ತಿದ್ದ ದೇವತೆಗಳ ಸಮೂಹವು, ಪಾಂಡವರ ಯುದ್ಧ ಸನ್ನಾಹ ಇಲ್ಲಿಗೆ ನಾಶವಾಗುವಂತೆ ತೋರುತ್ತದೆ, ದುರ್ಯೋಧನನು ಸಾಧಿಸಿದ ದ್ವೇಷವು ಯುದ್ಧರಂಗದಲ್ಲಿ ಸಫಲವಾಯಿತು. ಈ ಮಹಾಸ್ತ್ರಕ್ಕೆ ಇದಿರೇ ಇಲ್ಲ, ಅರ್ಜುನನು ಹೋದಂತೆಯೇ ಎಂದು ಆತಂಕಭರಿತವಾಗಿ ದೇವತೆಗಳು ನುಡಿದರು.

ಅರ್ಥ:
ಕಾದು: ಹೋರಾಡು; ಎಳಸು: ಬಯಸು, ವ್ಯಾಪಿಸು; ಸಂವಾದ: ಸಂಭಾಷಣೆ, ಚರ್ಚೆ; ತೀರಿತು: ಮುಗಿಯಿತು; ಸಾಧಿಸು: ಪಡೆ, ದೊರಕಿಸಿಕೊಳ್ಳು; ಹಗೆ: ವೈರತ್ವ, ದ್ವೇಷ; ಸಫಲ: ಸಾರ್ಥಕವಾದುದು; ಸಮರ: ಯುದ್ಧ; ಹೋದ: ಅಳಿ, ತೆರಳು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಬಾಧೆ: ನೋವು; ಇದಿರು: ಎದುರು; ಘನ: ಭಾರ, ಗಟ್ಟಿ; ಚಿಂತನೆ: ಯೋಚನೆ; ಉದಧಿ: ಸಾಗರ; ಉರೆ: ಅಧಿಕವಾಗಿ; ಮುಳುಗು: ತೋಯು, ಅದ್ದು; ಮರುಗು: ತಳಮಳ, ಸಂಕಟ; ಮೇಲೆ: ಎತ್ತರದಲ್ಲಿ; ಸುರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಕಾದಲ್+ಎಳಸಿದ +ಪಾಂಡವರ +ಸಂ
ವಾದ +ತೀರಿತು +ಕೌರವೇಂದ್ರನು
ಸಾಧಿಸಿದ +ಹಗೆ +ಸಫಲವಾದುದು +ಸಮರ+ಭೂಮಿಯಲಿ
ಹೋದನ್+ಅರ್ಜುನನ್+ಈ+ ಮಹಾಸ್ತ್ರದ
ಬಾಧೆಗ್+ಇದಿರ್+ಇಲ್ಲೆನುತ +ಘನ+ಚಿಂತ
ಉದಧಿಯಲ್+ಉರೆ +ಮುಳುಗಿ +ಮರುಗಿತು+ ಮೇಲೆ +ಸುರಕಟಕ

ಅಚ್ಚರಿ:
(೧) ಚಿಂತ ಸಾಗರದಲ್ಲಿ ಮುಳುಗಿದರು ಎಂದು ಹೇಳಲು – ಘನಚಿಂತೋದಧಿಯಲುರೆ ಮುಳುಗಿ ಮರುಗಿತು

ಪದ್ಯ ೪೬: ಕರ್ಣನು ಬ್ರಹ್ಮಾಸ್ತ್ರಕ್ಕೆ ಪ್ರತಿಯಾಗಿ ಯಾವ ಅಸ್ತ್ರವನ್ನು ಬಿಟ್ಟನು?

ಶಿವಶಿವಾ ಬ್ರಹ್ಮಾಸ್ತ್ರವಿದಲಾ
ಭುವನಜನ ಸಂಹಾರಶರ ಸಂ
ಭವಿಸಿತೋ ಹಾ ಎನುತ ಹರೆದುದು ಮೇಲೆ ದಿವಿಜಗಣ
ತವಕದಲಿ ತತ್ಪ್ರತಿಮಹಾಸ್ತ್ರವ
ಜವಳಿವೆರಳಿಂದುಗಿದು ಬಿಡೆ ತಿವಿ
ತಿವಿದು ತಮ್ಮೊಳಗಡಗಿದವು ದಿವ್ಯಾಸ್ತ್ರವಭ್ರದಲಿ (ಕರ್ಣ ಪರ್ವ, ೨೩ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ಬ್ರಹ್ಮಾಸ್ತ್ರವನ್ನು ಹೂಡಲು, ದೇವತೆಗಳೆಲ್ಲಾ ಶಿವ ಶಿವಾ ಇದು ಲೋಕವನ್ನೇ ಸಂಹರಿಸಬಲ್ಲ ಬ್ರಹ್ಮಾಸ್ತ್ರ, ಇದರ ಪ್ರಯೋಗವಾಯಿತೇ ಎಂದು ಆಚೆ ಈಚೆಗೆ ಹೋದರು. ಕರ್ಣನು ಅದಕ್ಕೆ ಪ್ರತಿಯಾಗಿ ಬ್ರಹ್ಮಾಸ್ತ್ರವನ್ನೇ ಎರಡು ಬೆರಳಿನಿಂದ ತೆಗೆದು ಬಿಡಲು, ಆ ದಿವ್ಯಾಸ್ತ್ರಗಳು ಒಂದಕ್ಕೊಂದು ಹೋರಾಡಿ ಆಗಸದಲ್ಲಿ ಅಡಗಿದವು.

ಅರ್ಥ:
ಶಿವಶಿವಾ: ಭಗವಂತ; ಭುವನ: ಜಗತ್ತು; ಜನ: ಮನುಷ್ಯ; ಸಂಹಾರ: ನಾಶ, ಕೊನೆ; ಶರ: ಬಾಣ; ಸಂಭವಿಸು: ಉಂಟಾಗು, ಒದಗಿಬರು; ಹರೆ: ವ್ಯಾಪಿಸು, ವಿಸ್ತರಿಸು, ಚೆದುರು; ದಿವಿಜ: ದೇವತೆ; ಗಣ: ಗುಂಪು; ತವಕ: ಬಯಕೆ, ಆತುರ; ಪ್ರತಿ: ಎದುರಾಗಿ; ಮಹಾ: ದೊಡ್ಡ, ಶ್ರೇಷ್ಠ; ಅಸ್ತ್ರ: ಆಯುಧ, ಶಸ್ತ್ರ; ಅವಳಿ: ಜೋಡಿ; ವೆರಳು: ಬೆರಳು; ಉಗಿ: ಹೊರಹಾಕು; ಬಿಡು: ಹಾರಿಸು; ತಿವಿ: ಚುಚ್ಚು; ಅಡಗು: ಮರೆಯಾಗು; ಅಭ್ರ: ಆಕಾಶ;

ಪದವಿಂಗಡಣೆ:
ಶಿವಶಿವಾ +ಬ್ರಹ್ಮಾಸ್ತ್ರವ್+ಇದಲ್+ಆ
ಭುವನಜನ +ಸಂಹಾರ+ಶರ +ಸಂ
ಭವಿಸಿತೋ +ಹಾ +ಎನುತ +ಹರೆದುದು +ಮೇಲೆ +ದಿವಿಜಗಣ
ತವಕದಲಿ+ ತತ್+ಪ್ರತಿ+ಮಹಾಸ್ತ್ರವ
ಜವಳಿ+ ವೆರಳಿಂದ್+ಉಗಿದು +ಬಿಡೆ +ತಿವಿ
ತಿವಿದು+ ತಮ್ಮೊಳಗ್+ಅಡಗಿದವು +ದಿವ್ಯಾಸ್ತ್ರವ್+ಅಭ್ರದಲಿ

ಅಚ್ಚರಿ:
(೧) ಬ್ರಹ್ಮಾಸ್ತ್ರದ ಬಗ್ಗೆ ಇರುವ ಭಯ – ಶಿವಶಿವಾ ಬ್ರಹ್ಮಾಸ್ತ್ರವಿದಲಾ ಭುವನಜನ ಸಂಹಾರಶರ ಸಂಭವಿಸಿತೋ ಹಾ ಎನುತ ಹರೆದುದು ಮೇಲೆ ದಿವಿಜಗಣ
(೨) ಬ್ರಹ್ಮಾಸ್ತ್ರ ಹೋರಾಡಿದ ಪರಿ – ತಿವಿತಿವಿದು ತಮ್ಮೊಳಗಡಗಿದವು ದಿವ್ಯಾಸ್ತ್ರವಭ್ರದಲಿ
(೩) ಬ್ರಹ್ಮಾಸ್ತ್ರ, ಮಹಾಸ್ತ್ರ, ದಿವ್ಯಾಸ್ತ್ರ – ಪದಗಳ ಬಳಕೆ

ಪದ್ಯ ೧೧: ಕರ್ಣನು ಯುದ್ಧಕ್ಕೆ ಹೇಗೆ ಸಿದ್ದತೆ ಮಾಡಿಕೊಂಡನು?

ಸರಳೊಳಾಯ್ದು ಮಹಾಸ್ತ್ರವನು ಸಂ
ವರಿಸಿದನು ಬತ್ತಳಿಕೆಯಲಿ ಮಾ
ರ್ತಿರುವ ಬೆರಳಲಿ ತೀಡಿ ಕೊಪ್ಪಿನ ಬಲುಹನಾರೈದು
ತಿರುವನೇರಿಸಿ ಮಿಡಿಮಿಡಿದು ಪೊಂ
ಬರಹದವನಿನ್ನೂರು ಚಾಪವ
ನಿರಿಸಿದನು ಕೆಲದವರ ತೊಲಗಿಸಿ ವಾಮಭಾಗದಲಿ (ಕರ್ಣ ಪರ್ವ, ೨೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಾಣಗಳಲ್ಲಿ ಮಹಾಸ್ತ್ರಗಳನ್ನು ಆಯ್ದು ತನ್ನ ಬತ್ತಳಿಕೆಯಲ್ಲಿಟ್ಟು ಕರ್ಣನು ಬಿಲ್ಲಿನ ಹಗ್ಗವನ್ನು ಬೆರಳಲ್ಲಿ ತೀಡಿ, ಬಿಲ್ಲಿನ ಕೊಪ್ಪಿನ ಬಲವನ್ನು ಪರೀಕ್ಷಿಸಿದನು. ಹೆದೆಯನ್ನೇರಿಸಿ ಅದರ ಬಲವನ್ನು ಮಿಡಿದುನೋಡಿ, ಚಿನ್ನದ ರೇಖೆಗಳನ್ನುಳ್ಳ ಇನ್ನೂರು ಬಿಲ್ಲುಗಳನ್ನು ಎಡಭಾಗದಲ್ಲಿಟ್ಟುಕೊಂಡನು.

ಅರ್ಥ:
ಸರಳ: ಬಾಣ; ಆಯ್ದು: ಆರಿಸಿ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಸಂವರಿಸು: ಸಜ್ಜು ಮಾಡು; ಬತ್ತಳಿಕೆ: ಬಾಣಗಳನ್ನು ಇಡುವ ಸ್ಥಳ; ಮಾರ್ತಿರುವು: ಮತ್ತೊಂದು ಬಿಲ್ಲಿನ ಹಗ್ಗ, ಮೌರ್ವಿ; ಬೆರಳು: ಅಂಗುಲಿ; ತೀಡಿ: ಉಜ್ಜು, ತಿಕ್ಕು, ಮಸೆ; ಕೊಪ್ಪು: ಬಿಲ್ಲಿನ ತುದಿ; ಬಲುಹು: ಬಲ, ಶಕ್ತಿ; ತಿರುವು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಏರಿಸು: ಕಟ್ಟು; ಮಿಡಿ:ತವಕಿಸು, ಆತುರಪಡು; ಪೊಂಬರಹ: ಚಿನ್ನದ ರೇಖೆ; ಚಾಪ: ಬಾಣ; ಇರಿಸು: ಇಡು; ಕೆಲ: ಪಕ್ಕ; ತೊಲಗು: ದೂರ ಸರಿ; ವಾಮ: ಎಡ;

ಪದವಿಂಗಡಣೆ:
ಸರಳೊಳ್+ಆಯ್ದು +ಮಹಾಸ್ತ್ರವನು +ಸಂ
ವರಿಸಿದನು +ಬತ್ತಳಿಕೆಯಲಿ +ಮಾ
ರ್ತಿರುವ +ಬೆರಳಲಿ +ತೀಡಿ +ಕೊಪ್ಪಿನ +ಬಲುಹನಾರೈದು
ತಿರುವನ್+ಏರಿಸಿ+ ಮಿಡಿಮಿಡಿದು +ಪೊಂ
ಬರಹದವನ್+ಇನ್ನೂರು +ಚಾಪವನ್
ಇರಿಸಿದನು +ಕೆಲದವರ +ತೊಲಗಿಸಿ +ವಾಮಭಾಗದಲಿ

ಅಚ್ಚರಿ:
(೧) ಮಾರ್ತಿರುವ, ತಿರುವ – ೩, ೪ ಸಾಲಿನ ಮೊದಲ ಪದ
(೨) ಕರ್ಣನ ತಯಾರಿ – ಪೊಂಬರಹದವನಿನ್ನೂರು ಚಾಪವ ನಿರಿಸಿದನು

ಪದ್ಯ ೩೧: ಅರ್ಜುನನು ವೃಷಸೇನನಿಗೆ ಏನು ಹೇಳಿದ?

ಪೂತುರೇ ವೃಷಸೇನ ಶರಸಂ
ಘಾತವಿದೆಕೋ ಸೈರಿಸಾದಡೆ
ಪಾತಕಕ್ಕೋಸರಿಸಿದೆವಲೇ ಭ್ರೂಣಹತಿಯೆಂಬ
ಮಾತು ಹಲವರಲೇನು ಪಾರ್ಥಿವ
ಜಾತಿಗೆನುತ ಮಹಾಸ್ತ್ರನಿಕರದೊ
ಳೀತನನು ಮುಸುಕಿದನು ಶರಮಯವಾಯ್ತು ರಣಭೂಮಿ (ಕರ್ಣ ಪರ್ವ, ೨೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನು, ಭಲೇ ವೃಷಸೇನಾ ಭ್ರೂಣಹತ್ಯಾ ಪಾಪಕ್ಕೆ ಹೆದರಿ ಸುಮ್ಮಿನಿದ್ದೆ. ಮಾತಾಡಿ ಏನು ಬಂತು! ಕ್ಷತ್ರಿಯರು ತಮ್ಮ ಶಸ್ತ್ರದಿಂದ ಮಾತನಾಡಬೇಕು ಎನ್ನುತ್ತಾ ಅರ್ಜುನನು ಮಹಾಸ್ತ್ರಗಳಿಂದ ವೃಷಸೇನನನ್ನು ಮುಚ್ಚಿದನು. ರಣರಂಗವು ಬಾಣಗಳಿಂದ ತುಂಬಿತು.

ಅರ್ಥ:
ಪೂತು: ಭಲೇ; ಶರ: ಬಾಣ; ಸಂಘಾತ: ಗುಂಪು, ಸಮೂಹ; ಸೈರಿಸು: ತಾಳು, ಸಹಿಸು; ಪಾತಕ: ಪಾಪ, ದೋಷ; ಓಸರಿಸು: ಓರೆಮಾಡು, ಹಿಂಜರಿ; ಭ್ರೂಣ: ಗರ್ಭಸ್ಥ ಶಿಶು, ಪಿಂಡ; ಹತಿ: ಕೊಲ್ಲು; ಮಾತು: ವಾಣಿ; ಹಲವರು: ಬಹಳ; ಪಾರ್ಥಿವ: ದೇಹ; ಶರೀರ ಮಣ್ಣಿನ ದೇಹ; ಪಾರ್ಥಿವಜಾತಿ: ಕ್ಷತ್ರಿಯ; ಮಹಾ: ಶ್ರೇಷ್ಠ, ದೊಡ್ಡ; ಅಸ್ತ್ರ: ಆಯುಧ; ನಿಕರ: ಗುಂಪು; ಮುಸುಕು: ಹೊದಿಕೆ; ಶರ: ಬಾಣ; ಶರಮಯ: ಬಾಣಗಳ ಗುಂಪು; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಪೂತುರೇ +ವೃಷಸೇನ +ಶರಸಂ
ಘಾತವ್+ಇದೆಕೋ +ಸೈರಿಸ್+ಆದಡೆ
ಪಾತಕಕ್+ಓಸರಿಸಿದೆವಲೇ+ ಭ್ರೂಣ+ಹತಿಯೆಂಬ
ಮಾತು +ಹಲವರಲೇನು +ಪಾರ್ಥಿವ
ಜಾತಿಗೆನುತ+ ಮಹಾಸ್ತ್ರ+ನಿಕರದೊಳ್
ಈತನನು +ಮುಸುಕಿದನು +ಶರಮಯವಾಯ್ತು +ರಣಭೂಮಿ

ಅಚ್ಚರಿ:
(೧) ಕ್ಷತ್ರಿಯ ಜಾತಿಯ ಪ್ರಾಮುಖ್ಯತೆ – ಮಾತು ಹಲವರಲೇನು ಪಾರ್ಥಿವ ಜಾತಿಗೆ

ಪದ್ಯ ೨೦: ಅರ್ಜುನನ ಬಾಣಗಳು ಅಶ್ವತ್ಥಾಮನಿಗೆ ಏನು ಮಾಡಿದವು?

ಕಡುಗಿದರೆ ಕಾಲಾಗ್ನಿ ರುದ್ರನ
ಕಡುಹನಾನುವರೀತನೇ ಸೈ
ಗೆಡೆವ ರೋಮದ ಧೂಮ್ರವಕ್ತ್ರದ ಸ್ವೇದಬಿಂದುಗಳ
ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿ
ಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ (ಕರ್ಣ ಪರ್ವ, ೧೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೋಪಗೊಂಡು ಕಾಳಗಕ್ಕಿಳಿದರೆ ಪ್ರಳಯಕಾಲದ ರುದ್ರನ ಅಬ್ಬರವನ್ನು ಯಾರು ತಾನೆ ತಾಳಿಯಾರು? ರೋಮಗಳು ಜೋತು ಬಿದ್ದು, ಮುಖ ಕಪ್ಪಾಗಿ, ಬೆವರಿನ ಹನಿಗಳಿಯುತ್ತಿರಲು, ಕೋಪೋದ್ರಿಕ್ತನಾದ ಅರ್ಜುನನು ಮೈತೂಗಿ ಮಹಾಸ್ತ್ರ ಪ್ರಯೋಗ ಮಾಡಿ ಅಶ್ವತ್ಥಾಮನ ಸಾರಥಿ ರಥ ಕುದುರೆಗಳನ್ನು ಕಡಿದು ಬಿಟ್ಟನು.

ಅರ್ಥ:
ಕಡುಗು: ಶಕ್ತಿಗುಂದು; ಕಾಲಾಗ್ನಿ: ಪ್ರಳಯಕಾಲದ ಬೆಂಕಿ; ರುದ್ರ: ಶಿವನ ಅವತಾರ; ಕಡು: ವಿಶೇಷವಾಗಿ, ಹೆಚ್ಚಾಗಿ; ಆನು: ಯಾರು; ಅರಿ: ತಿಳಿ; ಸೈಗೆಡೆ:ಅಡ್ಡಬೀಳು, ನಮಸ್ಕರಿಸು; ರೋಮ: ಕೂದಲು; ಧೂಮ್ರ:ಬೂದುಬಣ್ಣ, ಹೊಗೆಯ ಬಣ್ಣ; ವಕ್ತ್ರ: ಮುಖ; ಸ್ವೇದ: ಬೆವರು; ಬಿಂದು: ಹನಿ; ಜಡಿ: ಗದರಿಸು, ಬೆದರಿಸು; ರೋಷ: ಕೋಪ; ಭರದ: ವೇಗ, ಆವೇಶ; ಅಡಿಗಡಿ: ಮತ್ತೆ ಮತ್ತೆ; ಒಡಲು: ದೇಹ; ಒಲೆ: ತೂಗಾಡು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಕಡಿ: ಸೀಳು; ಬಿಸುಟು: ಹೊರಹಾಕು; ಗುರುಸುತ: ಅಚಾರ್ಯರ ಮಗ (ಅಶ್ವತ್ಥಾಮ); ಸಾರಥಿ: ರಥವನ್ನು ಓಡಿಸುವವ; ರಥ: ಬಂಡಿ; ಹಯ: ಕುದುರೆ;

ಪದವಿಂಗಡಣೆ:
ಕಡುಗಿದರೆ +ಕಾಲಾಗ್ನಿ +ರುದ್ರನ
ಕಡುಹನ್+ಆನುವರ್+ಈತನೇ +ಸೈ
ಗೆಡೆವ +ರೋಮದ +ಧೂಮ್ರವಕ್ತ್ರದ +ಸ್ವೇದಬಿಂದುಗಳ
ಜಡಿವ +ರೋಷದ +ಭರದಲ್+ಅಡಿಗಡಿಗ್
ಒಡಲನ್+ಒಲೆದು +ಮಹಾಸ್ತ್ರದಲಿ +ಕಡಿ
ಕಡಿದು +ಬಿಸುಟನು +ಗುರುಸುತನ +ಸಾರಥಿಯ +ರಥ+ಹಯವ

ಅಚ್ಚರಿ:
(೧) ಅರ್ಜುನನ ವೀರಾವೇಶವನ್ನು ವಿವರಿಸುವ ಪದ್ಯ – ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ