ಪದ್ಯ ೯: ಭೀಮನು ಅಡವಿಯಲ್ಲಿ ಹೇಗೆ ನಡೆದನು?

ಮುಡುಹು ಸೋಂಕಿದೊಡಾ ಮಹಾದ್ರಿಗ
ಳೊಡನೆ ತೋರಹ ತರು ಕೆಡೆದುವಡಿ
ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು
ಒಡೆದುದಿಳೆ ಬೊಬ್ಬಿರಿತಕೀತನ
ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು ಮೀರಿ ನಡೆದನು ಭೀಮನಡವಿಯಲಿ (ಅರಣ್ಯ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಭುಜದ ತುದಿಯು ಸೋಂಕಿದ ಮಾತ್ರಕ್ಕೆ ಮಹಾ ಪರ್ವತಗಳು, ವೃಕ್ಷಗಳು ಕೆಳಕ್ಕೆ ಬಿದ್ದವು. ಹೆಜ್ಜೆಯನ್ನಿಟ್ಟ ಮಾತ್ರಕ್ಕೆ ಚಿಕ್ಕ ಪುಟ್ಟ ದಿನ್ನೆಗಳು ಭೂಮಿಯೂ ತಗ್ಗಿ ಹೋದವು. ಇವನು ಹಾಕಿದ ಕೇಕೆಗೆ ಭೂಮಿ ಬಿರುಕು ಬಿಟ್ಟಿತು. ಇವನ ತೊಡೆಯ ಗಾಳಿಗೆ ಚಿಕ್ಕ ಮರಗಳು, ಗಿಡಗಳು, ಹಾರಿಹೋದವು. ಈ ರೀತಿ ಭೀಮನು ಅಡವಿಯಲ್ಲಿ ದಾಟುತ್ತಾ ನಡೆದನು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಸೋಂಕು: ಮುಟ್ಟು, ಸ್ಪರ್ಶ; ಮಹಾದ್ರಿ: ದೊಡ್ಡ ಬೆಟ್ಟ; ತೋರು: ಗೋಚರಿಸು; ತರು: ಮರ; ಕೆಡೆ: ಬೀಳು, ಕುಸಿ; ಅಡಿಯಿಡು: ಹೆಜ್ಜೆಯಿಡು; ಹೆಜ್ಜೆ: ಪಾದ; ತಗ್ಗು: ಹಳ್ಳ, ಗುಣಿ; ನೆಲ: ಭೂಮಿ; ಸಹಿತ: ಜೊತೆ; ಹೆದ್ದೆವರು: ದೊಡ್ಡ ದಿಣ್ಣೆ; ಒಡೆದು: ಸೀಳು; ಇಳೆ: ಭೂಮಿ; ಬೊಬ್ಬಿರಿತ: ಜೋರಾದ ಕೂಗು, ಗರ್ಜನೆ; ತೊಡೆ: ಊರು; ಗಾಳಿ: ವಾಯು; ಹಾರು: ಲಂಘಿಸು; ಕಿರುಗಿಡ: ಚಿಕ್ಕ ಗಿಡ; ಮರ: ತರು; ಮೀರು: ದಾಟು, ಹಾದುಹೋಗು; ನಡೆ: ಚಲಿಸು; ಅಡವಿ: ಕಾಡು;

ಪದವಿಂಗಡಣೆ:
ಮುಡುಹು +ಸೋಂಕಿದೊಡ್+ಆ+ ಮಹಾದ್ರಿಗಳ್
ಒಡನೆ +ತೋರಹ +ತರು +ಕೆಡೆದುವ್+ಅಡಿ
ಯಿಡಲು +ಹೆಜ್ಜೆಗೆ +ತಗ್ಗಿದುದು +ನೆಲ +ಸಹಿತ+ ಹೆದ್ದೆವರು
ಒಡೆದುದ್+ಇಳೆ +ಬೊಬ್ಬಿರಿತಕ್+ಈತನ
ತೊಡೆಯ +ಗಾಳಿಗೆ +ಹಾರಿದವು +ಕಿರು
ಗಿಡ +ಮರಂಗಳು +ಮೀರಿ +ನಡೆದನು +ಭೀಮನ್+ಅಡವಿಯಲಿ

ಅಚ್ಚರಿ:
(೧) ಭೀಮನ ನಡೆತದ ರಭಸ – ಒಡೆದುದಿಳೆ ಬೊಬ್ಬಿರಿತಕೀತನ ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು

ಪದ್ಯ ೩೩: ಕಿಂಪುರಷರನ್ನು ಗೆದ್ದಮೇಲೆ ಯಾವ ಪರ್ವತಶ್ರೇಣಿಗೆ ಮುತ್ತಿಗೆ ಹಾಕಿದನು?

ಅಲ್ಲಿ ಕೆಲಕಡೆಯಲ್ಲಿ ಗಿರಿಗುಹೆ
ಯಲ್ಲಿ ನೆರೆದ ಕಿರಾತವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ
ಮೆಲ್ಲ ಮೆಲ್ಲನೆ ಹೇಮಕೂಟದ
ಕಲ್ಲನಡರಿದನಾ ಮಹಾದ್ರಿಗ
ಳಲ್ಲಿ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ (ಸಭಾ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಯಕ್ಷ ಕಿಂಪುರುಷರನ್ನು ಗೆದ್ದಮೇಲೆ ಅಲ್ಲೆ ಕೆಲವು ಕಡೆ ಪರ್ವತದಲ್ಲಿದ್ದ ಕಿರಾತರನ್ನು ಓಡಿಸಿ ಅಪಾರಧನವನ್ನು ಅಪಹರಿಸಿದನು. ಹೇಮಕೂಟ ಪರ್ವತವನ್ನು ನಿಧಾನವಾಗಿ ಹತ್ತಿದನು. ಅವೆಲ್ಲ ಪ್ರದೇಶಗಳೂ ಹಿಮಾಲಯದಷ್ಟೇ ಎತ್ತರ ಮತ್ತು ವಿಸ್ತಾರವಾಗಿದ್ದವು.

ಅರ್ಥ:
ಗಿರಿ: ಬೆಟ್ಟ; ಗುಹೆ: ಪೊಟರೆ, ಗವಿ; ನೆರೆದ: ವಾಸಿಸುತ್ತಿದ್ದ; ವರ್ಗ: ಗುಂಪು; ಅಪಹರಿಸು: ಕದಿಯುವುದು; ಬಹುವಿಧ: ಬಹಳ; ಧನ: ಹಣ; ಅದ್ರಿ: ಬೆಟ್ಟ, ಶೈಲ; ಮಹೋನ್ನತಿ: ಬಹಳ ಎತ್ತರ; ವಿಸ್ತಾರ: ಹರಹು, ವ್ಯಾಪ್ತಿ;

ಪದವಿಂಗಡಣೆ:
ಅಲ್ಲಿ +ಕೆಲಕಡೆಯಲ್ಲಿ +ಗಿರಿ+ಗುಹೆ
ಯಲ್ಲಿ +ನೆರೆದ +ಕಿರಾತ+ವರ್ಗವ
ಚೆಲ್ಲ +ಬಡಿದ್+ಅಪಹರಿಸಿದನು +ಬಹುವಿಧ +ಮಹಾಧನವ
ಮೆಲ್ಲ +ಮೆಲ್ಲನೆ +ಹೇಮಕೂಟದ
ಕಲ್ಲನ್+ಅಡರಿದನಾ+ ಮಹಾದ್ರಿಗಳ್
ಅಲ್ಲಿ +ಹಿಮಶೈಲದ+ ಮಹೋನ್ನತಿ+ ಬಹಳ+ ವಿಸ್ತಾರ

ಅಚ್ಚರಿ:
(೧) ಗಿರಿ, ಅದ್ರಿ, ಶೈಲ – ಸಮನಾರ್ಥಕ ಪದಗಳು
(೨) ಅಲ್ಲಿ – ೧, ೬ ಸಾಲಿನ ಮೊದಲ ಪದ