ಪದ್ಯ ೩೩: ಕೌರವನೇಕೆ ಉದ್ರೇಕಗೊಂಡನು?

ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಂತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ (ಗದಾ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ನಿನ್ನ ಮಗನ ತಿಳುವಳಿಕೆ ಮರೆಯಾಯಿತು, ವೀರಪ್ರತಿಜ್ಞೆ ಸ್ವಾಭಿಮಾನ ಹೆಚ್ಚಿತು. ಮಂತ್ರಜಪದಲ್ಲಿದ್ದ ಮೌನ ಹಿಂದಯಿತು. ಯುದ್ಧವ್ಯಸನ ಆವರಿಸಿತು. ದೈನ್ಯವು ಮಾಯವಾಯಿತು. ತಾನ ಅಡಗಿಕೊಂಡು ನೀರಿನ ಕೊಳದಲ್ಲಿರುವುದನ್ನು ನೆನೆದು ನಾಚಿಕೊಂಡನು. ಶತ್ರುಗಳ ಮಾತಿನ ಪೆಟ್ಟಿನಿಂದ ಉದ್ರೇಕಗೊಂಡನು.

ಅರ್ಥ:
ಜ್ಞಾನ: ಬುದ್ಧಿ, ತಿಳುವಳಿಕೆ; ಅಳಿ: ನಾಶ; ವೀರ: ಶೂರ; ಅಭಿಮಾನ: ಹೆಮ್ಮೆ, ಅಹಂಕಾರ; ಮಸೆ: ಹರಿತವಾದುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ನಿಷ್ಠೆ: ದೃಢತೆ, ಸ್ಥಿರತೆ; ಮೌನ: ಸುಮ್ಮನಿರುವಿಕೆ, ನೀರವತೆ; ಹಿಂಬೆಳೆ: ಹಿಂದಾಗು, ಹಿಂದೆ ತಳ್ಳು; ಮೋಹ: ಆಸೆ; ಆಹವ: ಯುದ್ಧ; ವ್ಯಸನ: ಚಾಳಿ; ದೀನ: ದೈನ್ಯಸ್ಥಿತಿ; ಮನ: ಮನಸ್ಸು; ಹೊರಗೆ: ಆಚೆ; ಉದಕ: ನೀರು; ಸ್ಥಾನ: ನೆಲೆ; ಭಾವ: ಮನಸ್ಸು, ಚಿತ್ತ; ನಾಚು: ಲಜ್ಜೆ, ಸಿಗ್ಗು, ಅವಮಾನ; ಸೂನು: ಮಗ; ತಳವೆಲಗಾಗು: ತಲೆಕೆಳಗಾಗು; ಅಹಿತ: ವೈರಿ; ವಚೋ: ಮಾತು; ವಿಘಾತ: ಕೇಡು, ಹಾನಿ, ಏಟು;

ಪದವಿಂಗಡಣೆ:
ಜ್ಞಾನವ್+ಅಳಿದುದು +ವೀರಪಣದ್+ಅಭಿ
ಮಾನ +ಮಸೆದುದು +ಮಂತ್ರನಿಷ್ಠೆಯ
ಮೌನ +ಹಿಂಬೆಳೆಯಾಯ್ತು +ಮೋಹಿದುದ್+ಆಹವ+ವ್ಯಸನ
ದೀನಮನ+ ಹೊರಗಳೆದುದ್+ಉದಕ
ಸ್ಥಾನಭಾವಕೆ +ನಾಚಿದನು +ತವ
ಸೂನು +ತಳವೆಳಗಾದನ್+ಅಹಿತ+ವಚೋ+ವಿಘಾತದಲಿ

ಅಚ್ಚರಿ:
(೧) ಒಂದೇ ಪದದ ರಚನೆ – ತಳವೆಳಗಾದನಹಿತವಚೋವಿಘಾತದಲಿ
(೨) ಜ್ಞಾನ, ಮಾನ, ಮೌನ, ದೀನ, ಸ್ಥಾನ – ಪ್ರಾಸ ಪದಗಳು

ಪದ್ಯ ೪೨: ದ್ರೋಣನ ಕೋಪವನ್ನು ಎದುರಿಸಲು ಯಾರು ಬಂದರು?

ಮತ್ತೆ ಮಸೆದುದು ಖಾತಿ ಕರ್ಬೊಗೆ
ಸುತ್ತಿದುಸುರಲಿ ಮೀಸೆಗಡಿದೌ
ಡೊತ್ತಿ ಸೆಳೆದನು ಶರವನೆಚ್ಚನು ಪವನನಂದನನ
ಹತ್ತೆಗಡಿದನು ಭೀಮ ಮಗುಳಿವ
ನೊತ್ತಿ ಹೊಕ್ಕರೆ ಕೈ ನೆರವ ಹಾ
ರುತ್ತ ಮುರಿದನು ಬಳಿಕ ಧೃಷ್ಟದ್ಯುಮ್ನನಿದಿರಾದ (ದ್ರೋಣ ಪರ್ವ, ೧೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ದ್ರೋಣನು ಮತ್ತೆ ಕೋಪಗೊಂಡು ಔಡೊತ್ತಿ, ಹೊಗೆಯುಗುಳುವ ಉಸಿರನ್ನು ಬಿಡುತ್ತ, ಭೀಮನ ಮೇಲೆ ಬಾಣವನ್ನು ಬಿಡಲು ಭೀಮನು ಅದನ್ನು ಕಡಿದನು. ದ್ರೋಣನು ಮತ್ತೆ ಮುನ್ನುಗ್ಗಲು, ಭೀಮನು ಸಹಾಯಕ್ಕಾಗಿ ಬೇರೆಡೆಗೆ ಹೋದನು. ಆಗ ಧೃಷ್ಟದ್ಯುಮ್ನನು ಎದುರಿಗೆ ಬಂದನು.

ಅರ್ಥ:
ಮಸೆ: ಹರಿತವಾದುದು; ಖಾತಿ: ಕೋಪ; ಕರ್ಬೊಗೆ: ದಟ್ಟವಾದ ಹೊಗೆ; ಸುತ್ತು: ಆವರಿಸು; ಉಸುರು: ಗಾಳಿ; ಕಡಿ: ಸೀಳು; ಔಡೊತ್ತು: ಹಲ್ಲಿನಿಂದ ತುಟಿಕಚ್ಚು; ಸೆಳೆ: ಎಳೆತ, ಸೆಳೆತ; ಶರ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ನಂದನ: ಮಗ; ಹತ್ತೆ: ಹತ್ತಿರ, ಸಮೀಪ; ಕದಿ: ಸೀಳು; ಮಗುಳು: ಪುನಃ, ಮತ್ತೆ; ಒತ್ತು: ತಳ್ಳು; ಹೊಕ್ಕು: ಸೇರು; ಕೈ: ಹಸ್ತ; ನೆರವು: ಸಹಾಯ; ಹಾರು: ಜಿಗಿ; ಮುರಿ: ಸೀಳು; ಬಳಿಕ: ನಂತರ; ಇರಿದು: ಎದುರು;

ಪದವಿಂಗಡಣೆ:
ಮತ್ತೆ +ಮಸೆದುದು +ಖಾತಿ +ಕರ್ಬೊಗೆ
ಸುತ್ತಿದ್+ಉಸುರಲಿ +ಮೀಸೆ+ಕಡಿದ್+ಔ
ಡೊತ್ತಿ +ಸೆಳೆದನು +ಶರವನ್+ಎಚ್ಚನು +ಪವನ+ನಂದನನ
ಹತ್ತೆ+ಕಡಿದನು +ಭೀಮ +ಮಗುಳಿವನ್
ಒತ್ತಿ +ಹೊಕ್ಕರೆ +ಕೈ +ನೆರವ+ ಹಾ
ರುತ್ತ +ಮುರಿದನು+ ಬಳಿಕ +ಧೃಷ್ಟದ್ಯುಮ್ನನ್+ಇದಿರಾದ

ಅಚ್ಚರಿ:
(೧) ಸುತ್ತಿ, ಔಡೊತ್ತಿ, ಒತ್ತಿ – ಪ್ರಾಸ ಪದಗಳು
(೨) ಕೋಪವನ್ನು ವರ್ಣಿಸುವ ಪರಿ – ಮತ್ತೆ ಮಸೆದುದು ಖಾತಿ ಕರ್ಬೊಗೆ ಸುತ್ತಿದುಸುರಲಿ

ಪದ್ಯ ೨೩: ಕರ್ಣನು ಸಂಧಿಯನ್ನರಿಯೆ ಎಂದು ಏಕೆ ಹೇಳಿದ

ಮಸೆದುದಿತ್ತಂಡಕೆ ಮತ್ಸರ
ವಸಮಸಂಗರರೀಗ ಸಂಧಿಯ
ನುಸಿರಿದೊಡೆ ಮನಗಾಣನೇ ಕೌರವ ಮಹೀಶ್ವರನು
ವಿಷಮನಹ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ಬೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ (ಉದ್ಯೋಗ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಷ್ಣ ನೀನು ಎರಡು ತಂಡಗಳಿಗೂ ಮತ್ಸರವನ್ನು ಮಸೆದು ಅಸಮಾನ ವೀರನು ಸಂಧಿಯನ್ನು ಪ್ರತಿಪಾದಿಸಿದರೆ ಕೌರವನು ಏನೆಂದು ಕೊಂಡಾನು? ಯುದ್ಧವೇ ಇಲ್ಲದ ವೀರನು ಮಂತ್ರಾಲೋಚನೆ ಮಾಡಬಾರದು; ಹಾಗೆ ಮಾಡಿದರೆ ಅದು ನನ್ನ ಪರಾಕ್ರಮಕ್ಕೆ ಮಂಕುಬಡಿದಂತೆ ಆದುದರಿಂದ ನಾನು ಸಂಧಿಯನ್ನು ಅರಿಯೆ ಎಂದು ಕರ್ಣನು ಹೇಳಿದನು.

ಅರ್ಥ:
ಮಸೆ:ಹರಿತವಾದುದು; ತಂಡ: ಗುಂಪು; ಮತ್ಸರ: ಹೊಟ್ಟೆಕಿಚ್ಚು; ಅಸಮ:ಅಸದೃಶವಾದ; ಸಂಗರ:ಯುದ್ಧ, ಕಾಳಗ; ಸಂಧಿ: ಸಂಯೋಗ; ಉಸಿರು: ಸದ್ದು ಮಾಡು; ಮನ: ಮನಸ್ಸು; ಮನಗಾಣು: ತಿಳಿದುಕೊ; ಮಹೀಶ್ವರ: ರಾಜ; ವಿಷಮ: ಕಷ್ಟಕರವಾದುದು; ಕಟ್ಟಾಳು: ಶೂರ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಎಸಗು: ಕೆಲಸ, ಉದ್ಯೋಗ; ಬೀರ: ವೀರ; ಮಸುಳ:ಕಾಂತಿಹೀನವಾಗು; ಮುರವೈರಿ: ಕೃಷ್ಣ; ಅರಿ: ತಿಳಿ;

ಪದವಿಂಗಡನೆ:
ಮಸೆದುದ್+ಇತ್+ತಂಡಕೆ +ಮತ್ಸರವ್
ಅಸಮ+ಸಂಗರರ್+ಈಗ +ಸಂಧಿಯನ್
ಉಸಿರಿದೊಡೆ+ ಮನಗಾಣನೇ +ಕೌರವ +ಮಹೀಶ್ವರನು
ವಿಷಮನಹ +ಕಟ್ಟಾಳು +ಮಂತ್ರವನ್
ಎಸಗಲಾಗದು +ತನ್ನ +ಬೀರಕೆ
ಮಸುಳಹುದು+ ಮುರವೈರಿ+ ಸಂಧಿಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಮಸೆದು, ಮತ್ಸರ, ಮಹೀಶ್ವರ, ಮಂತ್ರ, ಮಸುಳ, ಮುರವೈರಿ, ಮನಗಾಣು – ಮ ಕಾರದ ಪದಗಳ ಬಳಕೆ