ಪದ್ಯ ೧೯: ಇಬ್ಬರು ಯೋಧರು ಆಯಾಸವನ್ನು ಹೇಗೆ ಕಳೆದುಕೊಂಡರು?

ತೊಲಗಿ ನಿಂದರು ಮತ್ತೆ ಭಾರಿಯ
ಬಲಲಿಕೆಯ ಬೇಳುವೆಯ ಚಿತ್ತ
ಸ್ಖಲಿತರಮ್ಗೀಕರಿಸಿದರು ಕರ್ಪುರದ ವೀಳೆಯವ
ಘಳಿಲನೆದ್ದರು ನಿಮಿಷಮಾತ್ರಕೆ
ಮಲೆತು ನಿಂದರು ಘಾಯಘಾತಿಯ
ಸುಳಿವನವಧಾನಿಸುತ ತೂಗಿದರಾಯುಧದ್ವಯವ (ಗದಾ ಪರ್ವ, ೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಇಬ್ಬರೂ ಹಿಂದಕ್ಕೆ ಸರಿದು ಕರ್ಪೂರ ವೀಳೆಯನ್ನು ಕೊಂಡು ಬಲಲಿಕೆಯನ್ನು ಕಳೆದುಕೊಂಡರು. ಮತ್ತೆ ಎದ್ದು ಇದಿರಾಗಿ ವಿರೋಧಿಯನ್ನು ಹೇಗೆ ಹೊಡೆಯಬೇಕೆಂದು ಆಲೋಚಿಸುತ್ತಾ ಎರಡು ಗದೆಗಳನ್ನು ತೂಗಿದರು.

ಅರ್ಥ:
ತೊಲಗು: ದೂರ ಸರಿ; ನಿಂದು: ನಿಲ್ಲು; ಭಾರಿ: ಭಾರವಾದುದು; ಬಳಲಿಕೆ: ಆಯಾಸ; ಬೇಳು: ಸುಟ್ಟುಹಾಕು, ನಾಶಪಡಿಸು; ಚಿತ್ತ: ಮನಸ್ಸು; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ರಂಗು: ಬಣ್ಣ; ಕರ್ಪುರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಘಳಿ: ನೆರಗೆ, ಮಡಿಸಿದ ಸೀರೆ; ಎದ್ದು: ಮೇಲೇಳು; ನಿಮಿಷ: ಕ್ಷಣ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ನಿಂದು: ನಿಲ್ಲು; ಘಾಯ: ಪೆಟ್ಟು; ಘಾತಿ: ಪೆಟ್ಟು; ಸುಳಿ: ಕಾಣಿಸಿಕೊಳ್ಳು; ಅವಧಾನ: ಸ್ಮರಣೆ, ಬುದ್ಧಿ; ತೂಗು: ಇಳಿಬಿಡು; ಆಯುಧ: ಶಸ್ತ್ರ; ಅದ್ವಯ: ಎರಡನೆಯದಿಲ್ಲದವನು;

ಪದವಿಂಗಡಣೆ:
ತೊಲಗಿ +ನಿಂದರು +ಮತ್ತೆ+ ಭಾರಿಯ
ಬಳಲಿಕೆಯ +ಬೇಳುವೆಯ +ಚಿತ್ತ
ಸ್ಖಲಿತರ್+ಅಂಗೀಕರಿಸಿದರು +ಕರ್ಪುರದ+ ವೀಳೆಯವ
ಘಳಿಲನೆದ್ದರು+ ನಿಮಿಷಮಾತ್ರಕೆ
ಮಲೆತು +ನಿಂದರು+ ಘಾಯಘಾತಿಯ
ಸುಳಿವನ್+ಅವಧಾನಿಸುತ +ತೂಗಿದರ್+ಆಯುಧ್+ಅದ್ವಯವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭಾರಿಯ ಬಲಲಿಕೆಯ ಬೇಳುವೆಯ

ಪದ್ಯ ೩೬: ಕೌರವನು ಧರ್ಮಜನಿಗೇನು ಹೇಳಿದ?

ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ (ಗದಾ ಪರ್ವ, ೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲವೋ ನಪುಂಸಕ ಧರ್ಮಜ, ತೊಲಗಿ ಉಳಿದುಕೋ, ಭೀಮನ ಶಕ್ತಿಯೇ ನಿನ್ನ ಶಕ್ತಿ, ಅರ್ಜುನನ ಪೌರುಷವೇ ನಿನ್ನ ಪೌರುಷ. ನನ್ನನ್ನಿದಿರಿಸಿ ಕ್ಷತ್ರಧರ್ಮವನ್ನು ಪಾಲಿಸು. ಹೆದರಿ ಓಡಬೇಡ, ನಿಲ್ಲು ಎಂದು ಕೌರವನು ಕೂಗುತ್ತಾ ಬರುವುದು ಭೀಮನಿಗೆ ಕೇಳಿಸಿತು.

ಅರ್ಥ:
ನಪುಂಸಕ: ಷಂಡ, ಖೋಜಾ; ಸುತ: ಮಗ; ಫಡ: ತಿರಸ್ಕಾರದ ಮಾತು; ತೊಲಗು: ದೂರ ಸರಿ; ಕರೆ: ಬರೆಮಾಡು; ಬಲುಹ: ಶಕ್ತಿ; ವಿಕ್ರಮ: ಶೂರ, ಸಾಹಸ; ಮಲೆತು: ಕೊಬ್ಬಿದ; ಮೆರೆ: ಹೊಳೆ, ಪ್ರಕಾಶಿಸು; ಕ್ಷತ್ರಧರ್ಮ: ಕ್ಷತ್ರಿಯ; ಧರ್ಮ: ಧಾರಣ ಮಾಡಿದುದು, ನಿಯಮ; ಅಳುಕು: ಹೆದರು; ನಿಲ್ಲು: ತಡೆ; ಇಟ್ಟಳಿಸು: ದಟ್ಟವಾಗು; ಊಳಿಗ: ಕೆಲಸ, ಕಾರ್ಯ; ಬೊಬ್ಬೆ: ಕೂಗು;

ಪದವಿಂಗಡಣೆ:
ಎಲೆ+ ನಪುಂಸಕ +ಧರ್ಮಸುತ +ಫಡ
ತೊಲಗು +ಕರೆಯಾ +ನಿನಗೆ +ಭೀಮನ
ಬಲುಹೆ +ಬಲುಹ್+ಅರ್ಜುನನ +ವಿಕ್ರಮ +ವಿಕ್ರಮವು +ನಿನಗೆ
ಮಲೆತು +ಮೆರೆಯಾ +ಕ್ಷತ್ರಧರ್ಮವನ್
ಅಳುಕದಿರು +ನೀ +ನಿಲ್ಲೆನುತಲ್
ಇಟ್ಟಳಿಸಿ+ ಬರಲ್+ಊಳಿಗದ +ಬೊಬ್ಬೆಯ +ಕೇಳಿದನು +ಭೀಮ

ಅಚ್ಚರಿ:
(೧) ಧರ್ಮಜನನ್ನು ಬಯ್ಯುವ ಪರಿ – ಎಲೆ ನಪುಂಸಕ ಧರ್ಮಸುತ ಫಡ ತೊಲಗು

ಪದ್ಯ ೬೦: ದುರ್ಯೋಧನನು ಭೀಮನನ್ನು ಹೇಗೆ ತಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ದೆಖ್ಖಾಳದಲಿ ನ
ಮ್ಮರಸ ನಿಂದನು ಕಾದಿದನು ನೂರಾನೆಯಲಿ ಮಲೆತು
ಸರಳ ಸಾರದಲನಿಲಜನ ರಥ
ತುರಗವನು ಸಾರಥಿಯನಾತನ
ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ (ಗದಾ ಪರ್ವ, ೧ ಸಂಧಿ, ೬೦ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಭೀಮನ ಮಹಾಕದನದ ಭರದಲ್ಲಿ ಕೌರವನು ನೂರಾನೆಗಳ ನಡುವೆ ಇದಿರಾಗಿ ನಿಂತು ಕಾದಿದನು. ಬಾಣಗಳಿಂದ ಭೀಮನ ರಥವನ್ನು ತಡೆದು, ಕುದುರೆಗಳ ಸಾರಥಿ ಚಲನೆ ಚಾಕಚಕ್ಯತೆಗಳನ್ನು ನಿಮಿಷಾರ್ಧದಲ್ಲಿ ತಡೆದನು.

ಅರ್ಥ:
ಧರಣಿಪತಿ: ರಾಜ; ಧರಧುರ: ಆರ್ಭಟ, ಕೋಲಾಹಲ; ದೆಖ್ಖಾಳ: ಗೊಂದಲ, ಗಲಭೆ; ಅರಸ: ರಾಜ; ನಿಂದನು: ನಿಲ್ಲು; ಕಾದು: ಹೋರಾಡು; ಆನೆ: ಗಜ; ಮಲೆತ: ಕೊಬ್ಬಿದ; ಸರಳ: ಬಾಣ; ಸಾರ: ಸತ್ವ; ಅನಿಲಜ: ಭೀಮ; ರಥ: ಬಂಡಿ; ತುರಗ: ಕುದುರೆ; ಸಾರಥಿ: ಸೂತ; ಭರ: ಜೋರು; ನಿಲಿಸು: ತಡೆ; ರಾಯ: ರಾಜ;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ದೆಖ್ಖಾಳದಲಿ +ನ
ಮ್ಮರಸ+ ನಿಂದನು +ಕಾದಿದನು +ನೂರಾನೆಯಲಿ +ಮಲೆತು
ಸರಳ +ಸಾರದಲ್+ಅನಿಲಜನ +ರಥ
ತುರಗವನು +ಸಾರಥಿಯನ್+ಆತನ
ಭರವಸವ +ನಿಲಿಸಿದನು +ನಿಮಿಷಾರ್ಧದಲಿ +ಕುರುರಾಯ

ಅಚರಿ:
(೧) ಧರಣಿಪತಿ, ರಾಯ, ಅರಸ – ಸಮಾನಾರ್ಥಕ ಪದ
(೨) ಜೋಡಿ ಪದಗಳ ಪ್ರಯೋಗ – ಧರಧುರದ ದೆಖ್ಖಾಳದಲಿ, ನಿಲಿಸಿದನು ನಿಮಿಷಾರ್ಧದಲಿ