ಪದ್ಯ ೨೪: ಅರ್ಜುನನ ಮನಸ್ಸೇಕೆ ದುಃಖಿಸಿತು?

ಒಡಲನೊಡೆದಾ ಜ್ಯೋತಿ ಗಗನಕೆ
ನಡೆದುದಿತ್ತಲು ಸುರರು ಮರ್ತ್ಯರು
ಸುಡು ಸುಡೆಂದುದು ಸಾತ್ಯಕಿಯ ದುಷ್ಕರ್ಮವಾಸನೆಗೆ
ಹಿಡಿದ ದುಗುಡದಲರ್ಜುನನು ಮನ
ಮಿಡುಕಿದನು ಕುರುನೃಪರು ಶೋಕದ
ಕಡಲೊಳದ್ದರು ಬೈವುತಿರ್ದರು ಕೃಷ್ಣಫಲುಗುಣರ (ದ್ರೋಣ ಪರ್ವ, ೧೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೂರಿಶ್ರವನ ಆತ್ಮಜ್ಯೋತಿಯು ದೇಹವನ್ನು ಬಿಟ್ಟು ಆಕಾಶಕ್ಕೆ ಹೋಯಿತು. ಮನುಷ್ಯರು, ದೇವತೆಗಳು ಸಾತ್ಯಕಿಯ ದುಷ್ಕರ್ಮದ ವಾಸನೆಯನ್ನು ಸುಡು ಎಂದರು. ಅರ್ಜುನನ ಮನ ಮಿಡಿದು ದುಃಖಿಸಿದನು. ಕುರುರಾಜರು ಶೋಕಸಾಗರದಲ್ಲಿ ಮುಳುಗಿ ಕೃಷ್ಣಾರ್ಜುನರನ್ನು ಬೈದರು.

ಅರ್ಥ:
ಒಡಲು: ದೇಹ; ಒಡೆ: ಸೀಳು; ಜ್ಯೋತಿ: ಬೆಳಕು, ಕಾಂತಿ; ಗಗನ: ಆಗಸ; ನಡೆ: ಚಲಿಸು; ಸುರ: ಅಮರ; ಮರ್ತ್ಯ: ಮನುಷ್ಯ; ಸುಡು: ದಹಿಸು; ದುಷ್ಕರ್ಮ: ಕೆಟ್ಟ ಕಾರ್ಯ; ವಾಸನೆ: ಬಯಕೆ, ಆಸೆ; ಹಿಡಿ: ಗ್ರಹಿಸು; ದುಗುಡ: ದುಃಖ; ಮನ: ಮನಸ್ಸು; ಮಿಡುಕು: ಅಲುಗಾಟ, ಚಲನೆ; ನೃಪ: ರಾಜ; ಶೋಕ: ದುಃಖ; ಕಡಲು: ಸಾಗರ; ಬೈವು: ಜರಿ; ಅದ್ದು: ತೋಯು;

ಪದವಿಂಗಡಣೆ:
ಒಡಲನ್+ಒಡೆದ್+ಆ+ ಜ್ಯೋತಿ +ಗಗನಕೆ
ನಡೆದುದ್+ಇತ್ತಲು +ಸುರರು +ಮರ್ತ್ಯರು
ಸುಡು +ಸುಡೆಂದುದು +ಸಾತ್ಯಕಿಯ +ದುಷ್ಕರ್ಮ+ವಾಸನೆಗೆ
ಹಿಡಿದ +ದುಗುಡದಲ್+ಅರ್ಜುನನು +ಮನ
ಮಿಡುಕಿದನು +ಕುರು+ನೃಪರು +ಶೋಕದ
ಕಡಲೊಳ್+ಅದ್ದರು +ಬೈವುತಿರ್ದರು +ಕೃಷ್ಣ+ಫಲುಗುಣರ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಒಡಲನೊಡೆದಾ ಜ್ಯೋತಿ ಗಗನಕೆನಡೆದುದ್
(೨) ಅರ್ಜುನನ ಮನಃಸ್ಥಿತಿ – ಹಿಡಿದ ದುಗುಡದಲರ್ಜುನನು ಮನಮಿಡುಕಿದನು

ಪದ್ಯ ೨೩: ಕರ್ಣನನ್ನು ಭೀಮನು ಹೇಗೆ ಆಕ್ರಮಣ ಮಾಡಿದನು?

ದೇವ ದಾನವ ಭಟರು ನುಗ್ಗೆಂ
ದಾವು ಬಗೆದಿಹೆವುಳಿದ ಮರ್ತ್ಯರು
ನೀವು ತಾವೇಸರ ಸಮರ್ಥರು ಕರ್ಣ ಗಳಹದಿರು
ಡಾವರಿಗತನವಾರ ಕೂಡೆ ವೃ
ಥಾ ವಿಲಾಸಿಗಳೆಲವೊ ಸುಭಟರೆ
ನೀವೆನುತ ಹದಿನೈದು ಶರದಿಂದೆಚ್ಚನಿನಸುತನ (ದ್ರೋಣ ಪರ್ವ, ೧೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ದೇವ ದೈತ್ಯರ ಸೈನಿಕರು ನುಗ್ಗಿದವು ಎಂದು ನಾವು ಭಾವಿಸಿದೆವು, ಇನ್ನು ನೀವು ಮನುಷ್ಯರು, ತಾವು ಎಂತಹ ಸಮರ್ಥರಿದ್ದೀರಿ? ಕರ್ಣ ವ್ಯರ್ಥವಾಗಿ ಮಾತಾಡಬೇಡ. ಯಾರ ಹತ್ತಿರ ನಿನ್ನ ಪ್ರತಾಪವನ್ನು ತೋರಿಸುವೆ? ನೀವು ವಿಲಾಸ ಜೀವಿಗಳೇ ಹೊರತು ಸಮರ್ಥ ಯೋಧರಲ್ಲ. ಹೀಗೆ ಹೇಳಿ ಭೀಮನು ಹದಿನೈದು ಬಾಣಗಳಿಂದ ಕರ್ಣನನ್ನು ಹೊಡೆದನು.

ಅರ್ಥ:
ದೇವ: ಭಗವಂತ, ಅಮರರು; ದಾನವ: ರಾಕ್ಷಸ; ಭಟ: ಸೈನಿಕ; ನುಗ್ಗು: ತಳ್ಳು; ಬಗೆ: ಆಲೋಚನೆ; ಉಳಿದ: ಮಿಕ್ಕ; ಮರ್ತ್ಯ: ಮನುಷ್ಯ; ಏಸರ: ಎಷ್ಟು; ಸಮರ್ಥ: ಬಲಶಾಲಿ, ಗಟ್ಟಿಗ; ಗಳಹ: ಅತಿಯಾಗಿ ಹರಟುವವ; ಡಾವರಿಗ: ಯೋಧ; ಕೂಡೆ: ಜೊತೆ; ವೃಥ: ಸುಮ್ಮನೆ; ವಿಲಾಸಿ: ಹುಡುಗಾಟಿಕೆಯ; ಸುಭಟ: ಪರಾಕ್ರಮಿ; ಶರ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ಇನಸುತ: ಸೂರ್ಯಪುತ್ರ;

ಪದವಿಂಗಡಣೆ:
ದೇವ+ ದಾನವ +ಭಟರು +ನುಗ್ಗೆಂದ್
ಆವು +ಬಗೆದಿಹೆವ್+ಉಳಿದ +ಮರ್ತ್ಯರು
ನೀವು +ತಾವ್+ಏಸರ +ಸಮರ್ಥರು +ಕರ್ಣ+ ಗಳಹದಿರು
ಡಾವರಿಗತನವ್+ಆರ +ಕೂಡೆ +ವೃ
ಥಾ +ವಿಲಾಸಿಗಳ್+ಎಲವೊ +ಸುಭಟರೆ
ನೀವೆನುತ +ಹದಿನೈದು +ಶರದಿಂದ್+ಎಚ್ಚನ್+ಇನಸುತನ

ಅಚ್ಚರಿ:
(೧) ಕರ್ಣನನ್ನು ಜರಿದ ಪರಿ – ಡಾವರಿಗತನವಾರ ಕೂಡೆ ವೃಥಾ ವಿಲಾಸಿಗಳೆಲವೊ ಸುಭಟರೆ ನೀವೆನುತ

ಪದ್ಯ ೩೬: ದೇವತೆಗಳು ಅರ್ಜುನನನ್ನು ಹೇಗೆ ಹೊಗಳಿದರು?

ಹಿಳುಕನೀದುದೊ ಗಗನವಂಬಿನ
ಜಲಧಿ ಜರಿದುದೊ ಪಾರ್ಥನೆಂಬ
ಗ್ಗಳ ವಿರಂಚನ ಬಾಣ ಸೃಷ್ಠಿಯೊ ಬಲ್ಲನಾವವನು
ಇಳೆಯ ಮರ್ತ್ಯರು ಶಿವ ಶಿವಾ ತೆಗೆ
ಫಲುಗುಣಗೆ ಸರಿಯೆಂಬವರ ಬಾಯ್
ಹುಳುವುದೋ ಗುಣಕೇಕೆ ಮತ್ಸರವೆಂದುದಮರಗಣ (ವಿರಾಟ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಆಕಾಶವು ಬಾಣಗಳನ್ನೀಯಿತೋ, ಬಾಣ ಸಮುದ್ರವು ಈ ಕಡೆ ಹೊರಳಿತೋ, ಅರ್ಜುನನೆಂಬ ಹೊಸ ಬ್ರಹ್ಮನು ಈ ಬಾಣಗಳನ್ನು ಸೃಷ್ಟಿಸಿದನೋ ತಿಳಿದವರು ಯಾರು? ಅರ್ಜುನನಿಗೆ ಉಳಿದ ಮನುಷ್ಯರು ಸರಿ ಎಂದವರ ಬಾಯಿ ಹುಳಿತುಹೋಗುತ್ತದೆ. ಗುಣಕ್ಕೇಕೆ ಮತ್ಸರ ಎಂದು ದೇವತೆಗಳು ಅರ್ಜುನನನ್ನು ಹೊಗಳಿದರು.

ಅರ್ಥ:
ಹಿಳುಕನೀ: ಬಾಣಗಳನ್ನು ಮರಿಹಾಕು; ಗಗನ: ಆಗಸ; ಅಂಬು: ಬಾಣ; ಜಲಧಿ: ಸಾಗರ; ಜರಿ: ಇಳಿಜಾರು ಪ್ರದೇಶ; ಅಗ್ಗ: ಶ್ರೇಷ್ಠ; ವಿರಂಚಿ: ಬ್ರಹ್ಮ; ಬಾಣ: ಅಂಬು; ಸೃಷ್ಟಿ: ಹುಟ್ಟು; ಬಲ್ಲವ: ತಿಳಿದವ; ಇಳೆ: ಭೂಮಿ; ಮರ್ತ್ಯರು: ಮನುಷ್ಯರು; ತೆಗೆ: ಬಿಡು; ಸರಿ: ಸಮಾನ; ಹುಳುವುದು: ಹುಳುಬೀಳುತ್ತದೆ; ಗುಣ: ನಡತೆ,ಸ್ವಭಾವ; ಮತ್ಸರ: ಹೊಟ್ಟೆಕಿಚ್ಚು; ಅಮರ: ದೇವತೆ; ಗಣ: ಗುಂಪು;

ಪದವಿಂಗಡಣೆ:
ಹಿಳುಕನೀದುದೊ+ ಗಗನವ್+ಅಂಬಿನ
ಜಲಧಿ+ ಜರಿದುದೊ+ ಪಾರ್ಥನೆಂಬ್
ಅಗ್ಗಳ +ವಿರಂಚನ +ಬಾಣ +ಸೃಷ್ಠಿಯೊ +ಬಲ್ಲನಾವವನು
ಇಳೆಯ +ಮರ್ತ್ಯರು +ಶಿವ +ಶಿವಾ +ತೆಗೆ
ಫಲುಗುಣಗೆ +ಸರಿ+ಎಂಬವರ +ಬಾಯ್
ಹುಳುವುದೋ +ಗುಣಕೇಕೆ +ಮತ್ಸರವೆಂದುದ್+ಅಮರಗಣ

ಅಚ್ಚರಿ:
(೧) ಅರ್ಜುನನನ್ನು ಹೊಗಳುವ ಪರಿ – ಪಾರ್ಥನೆಂಬಗ್ಗಳ ವಿರಂಚನ ಬಾಣ ಸೃಷ್ಠಿಯೊ

ಪದ್ಯ ೪೦: ಚಿತ್ರಸೇನನು ಏಕೆ ಚಿಂತಿಸಿದನು?

ನೊಂದದುಬ್ಬಿತು ದರ್ಪಶಿಖಿ ಖತಿ
ಯಿಂದ ಮನದುಬ್ಬಿನಲಿ ಘಾತದ
ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ
ನೊಂದುದಿನಿಸಿಲ್ಲಕಟ ದೈತ್ಯರ
ದಂದುಗದಲಾವಿಮ್ದು ಮರ್ತ್ಯರು
ಬಂದಿವಿಡಿದರೆ ಬಲುಹನೆನುತೋರಂತೆ ಚಿಂತಿಸಿದ (ಅರಣ್ಯ ಪರ್ವ, ೨೦ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕರ್ಣನ ಬಾಣಗಳಿಂದ ನೊಂದ ಗಂಧರ್ವನ ಆತ್ಮ ವಿಶ್ವಾಸವು ಉರಿಯಂತೆ ಉಬ್ಬೇರಿತು. ಕೋಪಗೊಂಡ ಅವನು ಪುಟಚೆಂಡಿನಂತೆ ಮೇಲೆದ್ದು ನಾವು ಯಾವ ರಾಕ್ಷಸರಿಂದಲೂ ಯುದ್ಧದಲ್ಲಿ ಸ್ವಲ್ಪವೂ ನೋಯಲಿಲ್ಲ. ಈ ಹುಲು ಮಾನವರು ನಮ್ಮ ಪರಾಕ್ರಮವನ್ನು ಕೈಸೆರೆ ಹುಡಿಯುತ್ತಿರುವರೇ ಎಂದು ಚಿತ್ರಸೇನನು ಚಿಂತಿಸಿದನು.

ಅರ್ಥ:
ನೊಂದು: ಪೆಟ್ಟು ತಿಂದು; ಉಬ್ಬು: ಹೆಚ್ಚಾಗು; ದರ್ಪ: ಅಹಂಕಾರ; ಶಿಖಿ: ಅಗ್ನಿ; ಖತಿ: ಕೋಪ; ಮನ: ಮನಸ್ಸು; ಉಬ್ಬು: ಹೆಚ್ಚಾಗು; ಘಾತ: ಹೊಡೆತ, ಪೆಟ್ಟು; ಕಂದುಕ: ಚೆಂಡು; ಕುಣಿ: ನರ್ತಿಸು; ಇನಿಸು: ಸ್ವಲ್ಪವೂ; ಖೇದ: ದುಃಖ; ಅಂತಃ: ಒಳ, ಮನಸ್ಸಿನ; ಕೊಬ್ಬು: ದರ್ಪ; ಅಕಟ: ಅಯ್ಯೋ; ದೈತ್ಯ: ರಾಕ್ಷಸ; ಮರ್ತ್ಯ: ಮನುಷ್ಯ; ಬಲುಹು: ಬಲ, ಶಕ್ತಿ; ಚಿಂತಿಸು: ಯೋಚಿಸು;

ಪದವಿಂಗಡಣೆ:
ನೊಂದದ್+ಉಬ್ಬಿತು +ದರ್ಪ+ಶಿಖಿ +ಖತಿ
ಯಿಂದ +ಮನದ್+ಉಬ್ಬಿನಲಿ +ಘಾತದ
ಕಂದುಕದವೋಲ್ +ಕುಣಿದುದ್+ಅಂತಃಖೇದ+ ಕೊಬ್ಬಿನಲಿ
ನೊಂದುದ್+ಇನಿಸಿಲ್ಲ್+ಅಕಟ +ದೈತ್ಯರ
ದಂದುಗದಲಾವಿಂದು+ ಮರ್ತ್ಯರು
ಬಂದಿವಿಡಿದರೆ+ ಬಲುಹನೆನುತೋರಂತೆ +ಚಿಂತಿಸಿದ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೊಂದದುಬ್ಬಿತು ದರ್ಪಶಿಖಿ ಖತಿ
ಯಿಂದ ಮನದುಬ್ಬಿನಲಿ ಘಾತದ ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ

ಪದ್ಯ ೧೬: ಭೀಮನ ಮಾರ್ಗವನ್ನು ಯಾರು ನಿಲ್ಲಿಸಿದರು?

ನಾವು ಮರ್ತ್ಯರು ದೂರದಲಿ ರಾ
ಜೀವಗಂಧ ಸಮೀರಣನ ಸಂ
ಭಾವನೆಗೆ ಸೊಗಸಿದಳು ಸತಿಯಾಕೆಯ ಮನೋರಥದ
ತಾವರೆಯ ತಹೆನೆನುತ ಸಿಂಹಾ
ರಾವದಲಿ ವಿಕ್ರಮಿಸೆ ವಿಗಡನ
ಡಾವರವ ಬಲು ಬಾಲ ತಡೆದುದು ಪವನಜನ ಪಥವ (ಅರಣ್ಯ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಹನುಮನಿಗೆ ಉತ್ತರಿಸುತ್ತಾ, ನಾವು ಮನುಷ್ಯರು, ದೂರದಿಂದ ಬೀಸುವ ಕಮಲಗಂಧದ ಸೊಗಸನ್ನು ನನ್ನ ಪತ್ನಿಯು ಇಷ್ಟಪಟ್ಟಳು. ಆ ಪುಷ್ಪವನ್ನು ನೋಡಬೇಕೆಂದು ಬಯಸಿದಳು. ಅವಳ ಮನೋರಥವನ್ನು ಪೂರೈಸಲು ಹೊರಟಿದ್ದೇನೆ, ಎಂದು ಹೇಳಿ ಮುಂದುವರೆಯಲು ಅವನ ಗಮನವನ್ನು ಹನುಮಂತನ ಬಾಲವು ತಡೆಯಿತು.

ಅರ್ಥ:
ಮರ್ತ್ಯ: ಮನುಷ್ಯ; ದೂರ: ಅಂತರ; ರಾಜೀವ: ಕಮಲ; ಗಂಧ: ಪರಿಮಳ; ಸಮೀರ: ವಾಯು; ಸಂಭಾವನೆ: ಮನ್ನಣೆ, ಅಭಿಪ್ರಾಯ; ಸೊಗಸು: ಚೆಲುವು; ಸತಿ: ಹೆಂಡತಿ; ಮನೋರಥ: ಇಚ್ಛೆ; ತಾವರೆ: ಕಮಲ; ತಹೆ: ತಂದುಕೊಡು; ಸಿಂಹಾರವ: ಗರ್ಜನೆ; ವಿಕ್ರಮ: ಗತಿ, ಗಮನ, ಹೆಜ್ಜೆ; ವಿಗಡ: ಶೌರ್ಯ, ಪರಾಕ್ರಮ; ಡಾವರ: ತೀವ್ರತೆ, ರಭಸ; ಬಲು: ದೊಡ್ಡ; ಬಾಲ: ಪುಚ್ಛ; ತಡೆ: ನಿಲ್ಲಿಸು; ಪವನಜ: ವಾಯುಪುತ್ರ; ಪಥ: ಮಾರ್ಗ;

ಪದವಿಂಗಡಣೆ:
ನಾವು +ಮರ್ತ್ಯರು +ದೂರದಲಿ+ ರಾ
ಜೀವ+ಗಂಧ +ಸಮೀರಣನ +ಸಂ
ಭಾವನೆಗೆ +ಸೊಗಸಿದಳು +ಸತಿ+ಆಕೆಯ +ಮನೋರಥದ
ತಾವರೆಯ +ತಹೆನೆನುತ+ ಸಿಂಹಾ
ರಾವದಲಿ +ವಿಕ್ರಮಿಸೆ+ ವಿಗಡನ
ಡಾವರವ+ ಬಲು+ ಬಾಲ+ ತಡೆದುದು+ ಪವನಜನ +ಪಥವ

ಅಚ್ಚರಿ:
(೧) ರಾಜೀವ, ತಾವರೆ – ಸಮನಾರ್ಥಕ ಪದ
(೨) ಸ ಕಾರದ ಸಾಲು ಪದ – ಸಮೀರಣನ ಸಂಭಾವನೆಗೆ ಸೊಗಸಿದಳು ಸತಿ

ಪದ್ಯ ೩೮: ವಿಭೀಷಣನ ಪರಿವಾರದವರು ಯಾಗಕ್ಕೆ ನೀಡಲಾಗುವ ದಾನಕ್ಕೆ ಯಾಕೆ ಆಕ್ಷೇಪಿಸಿದರು?

ತಾವು ಮರ್ತ್ಯರು ಪೂರ್ವಯುಗದವ
ರಾವು ತಮ್ಮಂತರವ ನೋಡದೆ
ದೇವರೆದೆ ದಲ್ಲಣದ ಲಂಕೆಯ ತಾವನೀಕ್ಷಿಸದೆ
ಆವುದುಚಿತಾನುಚಿತವೆಂಬುದ
ಭಾವಿಸದ ಗರ್ವಿತರ ನೋಡಿ
ನ್ನಾವ ಸದರವೊ ನಾವೆನುತ ಗರ್ಜಿಸಿತು ಖಳನಿಕರ (ಸಭಾ ಪರ್ವ, ೫ ಸಂಧಿ, ೩೮ ಪದ್ಯ)

ತಾತ್ಪರ್ಯ:
“ತಾವು ಮನುಷ್ಯರು, ನಾವು ಹಿಂದಿನ ತ್ರೇತಾಯುಗದವರು. ತಮ್ಮ ಮತ್ತು ನಮ್ಮ ಅಂತರವನ್ನು ಅರಿಯದೆ, ದೇವತೆಗಳ ಎದೆ ನಡುಗಿಸುವ ಲಂಕೆಯ ಸ್ಥಾನವನ್ನು ಅರಿಯದೆ ಉಚಿತವಾವುದು, ಅನುಚಿತವಾವುದು ಎಂಬುದನ್ನು ಅರಿಯದೆ ಇರುವ ಗರ್ವಿತರು ಇವರು, ನಾವು ಇವರಿಗೆ ಸದರವೇ”, ಎಂದು ವಿಭೀಷಣನ ಪರಿವಾರದ ರಾಕ್ಷಸರು ಗರ್ಜಿಸಿದರು.

ಅರ್ಥ:
ಮರ್ತ್ಯರು: ಮನುಷ್ಯರು; ಪೂರ್ವ: ಹಿಂದಿನ; ಯುಗ: ಕಾಲಪ್ರಮಾಣದ ಅಳತೆ; ಅಂತರ: ದೂರ; ನೋಡದೆ: ವೀಕ್ಷಿಸದೆ; ದಲ್ಲಣ: ನಾಶಮಾಡುವವನು; ದೇವರು: ದೇವತೆಗಳು, ಸುರರು; ಎದೆ: ಹೃದಯ; ಈಕ್ಷಿಸು: ನೋಡು; ಉಚಿತ: ಸರಿಯಾದ; ಅನುಚಿತ: ಸರಿಯಿಲ್ಲದ; ಭಾವಿಸು: ಆಲೋಚಿಸು; ಗರ್ವ: ಅಹಂಕಾರ; ಸದರ: ಸಲಿಗೆ; ಗರ್ಜಿಸು: ಜೋರಾಗಿ ಕೂಗು; ಖಳ: ದೈತ್ಯ; ನಿಕರ: ಗುಂಪು;

ಪದವಿಂಗಡಣೆ:
ತಾವು +ಮರ್ತ್ಯರು+ ಪೂರ್ವ+ಯುಗದವರ್
ಆವು +ತಮ್ಮ್+ಅಂತರವ+ ನೋಡದೆ
ದೇವರೆದೆ+ ದಲ್ಲಣದ +ಲಂಕೆಯ +ತಾವನ್+ಈಕ್ಷಿಸದೆ
ಆವುದ್+ಉಚಿಆನುಚಿತವ್+ಎಂಬುದ
ಭಾವಿಸದ+ ಗರ್ವಿತರ+ ನೋಡ್
ಇನ್ನಾವ+ ಸದರವೊ+ ನಾವೆನುತ+ ಗರ್ಜಿಸಿತು +ಖಳನಿಕರ

ಅಚ್ಚರಿ:
(೧) ತಾವು, ಆವು – ಪ್ರಾಸ ಪದ
(೨) ೪ ಸಾಲು ಒಂದೇ ಪದವಾಗಿರುವುದು – ಆವುದುಚಿತಾನುಚಿತವೆಂಬುದ
(೩) ನಾವ – ೨ ಬಾರಿ ಪ್ರಯೋಗ, ೬ ಸಾಲು