ಪದ್ಯ ೪೨: ಶಲ್ಯನು ಧರ್ಮಜನನ್ನು ಹೇಗೆ ಹಂಗಿಸಿದನು?

ನರನ ರಥವದೆ ಮರೆಯಹೊಗು ಮುರ
ಹರನ ಮರೆವೊಗು ಭೀಮಸೇನನ
ಕರಸಿ ನೂಕು ಶಿಖಂಡಿ ಸಾತ್ಯಕಿ ಸೃಂಜಯಾದಿಗಳ
ಅರಸುಗುರಿಗಳ ಹೊಯ್ಸು ಗೆಲುವಿನ
ಗರುವನಾದಡೆ ನಿಲ್ಲೆನುತಲು
ಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ (ಶಲ್ಯ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅಲ್ಲಿಯೇ ಅರ್ಜುನನ ರಥವಿದೆ, ಅದರ ಹಿಂದೆ ಹೋಗಿ ನಿಲ್ಲು, ಕೃಷ್ಣನ ಹಿಂದೆ ಅಡಗಿಕೋ, ನಿನ್ನ ಕೈಲಿ ಸಾಗುವುದಿಲ್ಲ, ಭೀಮನನ್ನು ಕರೆಸಿ ಯುದ್ಧಕ್ಕೆ ಬಿಡು. ಇಲ್ಲದಿದ್ದರೆ ಶಿಖಂಡಿ, ಸಾತ್ಯಕಿ, ಸೃಂಜಯನೇ ಮೊದಲಾದವರನ್ನು ಕಳಿಸಿ, ಕುರಿಯಂತಿರುವ ಅರಸರನ್ನು ನನ್ನ ಕೈಯಲ್ಲಿ ಕಡಿಸಿ ಹಾಕು, ಅಥವಾ ಗೆಲ್ಲುವೆನೆಂಬ ಸ್ವಾಭಿಮಾನವಿದ್ದರೆ ನನ್ನೆದುರಿನಲ್ಲಿ ನಿಲ್ಲು ಎಂದು ಶಲ್ಯನು ಧರ್ಮಜನನ್ನು ಬಾಣಗಳಿಂದ ಹೊಡೆದನು.

ಅರ್ಥ:
ನರ: ಅರ್ಜುನ; ರಥ: ಬಂಡಿ; ಮರೆ: ಕಾಣದಿರುವುದು; ಮುರಹರ: ಕೃಷ್ಣ; ಕರಸು: ಬರೆಮಾಡು; ನೂಕು: ತಳ್ಳು; ಆದಿ: ಮುಂತಾದ; ಅರಸು: ರಾಜ; ಕುರಿ: ಮೇಷ; ಹೊಯ್ಸು: ಹೊಡೆ; ಗೆಲುವು: ಜಯ; ಗರುವ: ಹಿರಿಯ, ಶ್ರೇಷ್ಠ; ನಿಲ್ಲು: ತಡೆ; ಉಬ್ಬರ: ಅತಿಶಯ, ಹೆಚ್ಚಳ; ಎಚ್ಚು: ಬಾಣ ಪ್ರಯೋಗ ಮಾಡು; ನಂದನ: ಮಗ;

ಪದವಿಂಗಡಣೆ:
ನರನ +ರಥವದೆ +ಮರೆಯಹೊಗು +ಮುರ
ಹರನ +ಮರೆವೊಗು +ಭೀಮಸೇನನ
ಕರಸಿ +ನೂಕು +ಶಿಖಂಡಿ +ಸಾತ್ಯಕಿ +ಸೃಂಜಯಾದಿಗಳ
ಅರಸು+ಕುರಿಗಳ+ ಹೊಯ್ಸು +ಗೆಲುವಿನ
ಗರುವನಾದಡೆ +ನಿಲ್ಲೆನುತಲ್+
ಉಬ್ಬರಿಸಿ +ಮಾದ್ರಾಧೀಶನ್+ಎಚ್ಚನು +ಧರ್ಮ+ನಂದನನ

ಅಚ್ಚರಿ:
(೧) ನರ, ಮುರಹರ – ಪ್ರಾಸ ಪದಗಳು
(೨) ಹಂಗಿಸುವ ಪರಿ – ಗೆಲುವಿನ ಗರುವನಾದಡೆ ನಿಲ್ಲೆನುತಲುಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ

ಪದ್ಯ ೧೯: ಸೈನಿಕರು ಯಾರ ಆಶ್ರಯಕ್ಕೆ ಬಂದರು?

ಏನ ಹೇಳುವೆನಮಮ ಬಹಳಾಂ
ಭೋನಿಧಿಯ ವಿಷದುರಿಯ ಧಾಳಿಗೆ
ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
ದಾನವಾಚಳ ಮಥಿತ ಸೇನಾಂ
ಭೋನಿಧಿಯ ಪರಿಭವದ ವಿಷದುರಿ
ಗಾ ನರೇಂದ್ರನಿಕಾಯ ಹೊಕ್ಕುದು ರವಿಸುತನ ಮರೆಯ (ದ್ರೋಣ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಬ್ಬಬ್ಬಾ, ಹಾಲಾಹಲ ವಿಷದ ಉರಿಯನ್ನು ತಡೆದುಕೊಳ್ಳಲಾಗದೇ, ದೇವತೆಗಳೂ ರಾಕ್ಷಸರೂ ಶಿವನ ಮರೆಹೊಕ್ಕಂತೆ, ಘಟೋತ್ಕಚ ಪರ್ವತದಿಂದ ಕಡೆಯಲ್ಪಟ್ಟ ಸೈನ್ಯ ಸಮುದ್ರದ ಸೋಲಿನ ವಿಷದುರಿಯನ್ನು ತಾಳಲಾರದೆ ರಾಜರು ಕರ್ಣನ ಆಶ್ರಯಕ್ಕೆ ಬಂದರು.

ಅರ್ಥ:
ಹೇಳು: ತಿಳಿಸು; ಬಹಳ: ತುಂಬ; ಅಂಭೋನಿಧಿ: ಸಾಗರ; ವಿಷ: ಗರಳ ಉರಿ: ಬೆಂಕಿ; ಧಾಳಿ: ಆಕ್ರಮಣ; ದಾನವ: ರಾಕ್ಷಸ; ಅಮರ: ದೇವತೆ; ಇಂದುಮೌಳಿ: ಶಂಕರ; ಮರೆ: ಆಶ್ರಯ; ಹೊಗು: ತೆರಳು; ದಾನವ: ರಾಕ್ಷಸ; ಅಚಳ: ಬೆಟ್ಟ; ಮಥಿತ: ಕಡಿಯಲ್ಪಟ್ಟ; ಸೇನ: ಸೈನ್ಯ; ಪರಿಭವ: ಸೋಲು; ನರೇಂದ್ರ: ರಾಜ; ನಿಕಾಯ: ಗುಂಪು; ಹೊಕ್ಕು: ಸೇರು; ರವಿಸುತ: ಸೂರ್ಯನ ಮಗ (ಕರ್ಣ); ಮರೆ: ಶರಣಾಗತಿ;

ಪದವಿಂಗಡಣೆ:
ಏನ +ಹೇಳುವೆನಮಮ+ ಬಹಳ+
ಅಂಭೋನಿಧಿಯ +ವಿಷದುರಿಯ +ಧಾಳಿಗೆ
ದಾನವ+ಅಮರರ್+ಇಂದುಮೌಳಿಯ +ಮರೆಯ +ಹೊಗುವಂತೆ
ದಾನವ+ಅಚಳ +ಮಥಿತ +ಸೇನಾಂ
ಭೋನಿಧಿಯ +ಪರಿಭವದ +ವಿಷದುರಿಗ್
ಆ +ನರೇಂದ್ರ+ನಿಕಾಯ +ಹೊಕ್ಕುದು +ರವಿಸುತನ+ ಮರೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಹಳಾಂಭೋನಿಧಿಯ ವಿಷದುರಿಯ ಧಾಳಿಗೆ ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
(೨) ಅಂಭೋನಿಧಿ, ಸೇನಾಂಭೋನಿಧಿ – ೨, ೫ ಸಾಲಿನ ಮೊದಲ ಪದ
(೩) ದಾನವ – ೩,೪ ಸಾಲಿನ ಮೊದಲ ಪದ

ಪದ್ಯ ೭೭: ಗಾಂಧಾರಿಯ ದುಮ್ಮಾನದ ತೀವ್ರತೆ ಹೇಗಿತ್ತು?

ಮರೆಯ ಮಾತೇಕಿನ್ನು ಕರೆವುದ
ನರಿಯ ಬಾರದೆ ಕುಂತಿ ನಿನ್ನನು
ಮರೆದು ಕಳೆದೆನು ಹಿಂದಣೈರಾವತದ ನೋಂಪಿಯಲಿ
ಇರದೆ ನೀನರ್ಜುನಗೆ ದೂರಲು
ಮೆರೆದನವನು ಪರಾಕ್ರಮವನಾ
ನರಿಯೆನೇ ಸಾಕಿನ್ನು ಬಾರೆನು ಎಂದಳಾ ದೇವಿ (ಆದಿ ಪರ್ವ, ೨೧ ಸಂಧಿ, ೭೭ ಪದ್ಯ)

ತಾತ್ಪರ್ಯ:
ಗಾಂಧಾರಿ ಅತ್ಯಂತ ಕ್ರೋಧಿತಳಾಗಿದ್ದಳು. ಕುಂತಿ ಎಷ್ಟೆ ಪ್ರೀತಿಯಿಂದ ಕರೆದರು ಆಕೆ ಒಪ್ಪಲಿಲ್ಲ. ಇದಕ್ಕೆ ಕಾರಣ ಹೀಗೆ ನೀಡಿದಳು, “ಕುಂತಿ ನೀನು ನನ್ನನ್ನು ಕರೆಯುತ್ತಿರುವುದು ಏಕೆಂದು ನೀನು ಮರೆಮಾಚಬೇಕಿಲ್ಲ. ಹಿಂದೆ ನಾನು ಐರಾವತದ ವ್ರತದಲ್ಲಿ ನಿನ್ನನ್ನು ಕರೆಯದೆ ಬಿಟ್ಟೆನು. ಅದಕ್ಕೆ ದುಃಖಪಟ್ಟು ನೀನು ಅರ್ಜುನನ ಬಳಿ ದೂರಲು, ಅವನು ತನ್ನ ಪರಾಕ್ರಮವನ್ನು ತೋರಿಸಿ ಇಂದ್ರನ ಐರಾವತವನ್ನೇ ತಂದಿದ್ದಾನೆ. ಇದು ನನಗೆ ತಿಳಿಯದೆ? ನಾನು ಬರುವುದಿಲ್ಲ” ಎಂದು ಹೇಳಿದಳು.

ಅರ್ಥ:
ಮರೆ: ಜ್ಞಾಪಕವಿಲ್ಲದಿರುವುದು; ಮಾತು: ನುಡಿ; ಕರೆವುದು: ಆಹ್ವಾನಿಸು; ಅರಿ: ತಿಳಿ; ನೋಂಪು: ವ್ರತ; ದೂರು: ಮೊರೆ, ಅಹವಾಲು; ಮೆರೆ: ತೋರಿಸು, ಪ್ರಖ್ಯಾತ; ಪರಾಕ್ರಮ: ಶೌರ್ಯ; ಸಾಕು: ಕೊನೆ; ಬಾರೆನು: ಬರುವುದಿಲ್ಲ;

ಪದವಿಂಗಡಣೆ:
ಮರೆಯ+ ಮಾತೇಕಿನ್ನು +ಕರೆವುದನ್
ಅರಿಯ+ ಬಾರದೆ +ಕುಂತಿ +ನಿನ್ನನು
ಮರೆದು+ ಕಳೆದೆನು+ ಹಿಂದಣ್+ಐರಾವತದ +ನೋಂಪಿಯಲಿ
ಇರದೆ+ ನೀನ್+ಅರ್ಜುನಗೆ +ದೂರಲು
ಮೆರೆದನ್+ಅವನು+ ಪರಾಕ್ರಮವ+ನಾನ್
ಅರಿಯೆನೇ +ಸಾಕಿನ್ನು +ಬಾರೆನು +ಎಂದಳಾ +ದೇವಿ

ಅಚ್ಚರಿ:
(೧) ಅರಿ- ೨, ೬ ಸಾಲಿನ ಮೊದಲ ಪದ; ಮರೆ: ೧, ೩ ಸಾಲಿನ ಮೊದಲ ಪದ
(೨) ಮರೆ, ಮೆರೆ – ಪದಗಳ ಬಳಕೆ

ಪದ್ಯ ೪೧: ಅರ್ಜುನನ ಬಾಣದ ರಭಸಕ್ಕೆ ಯಾರ ಮೊರೆ ಹೊಕ್ಕರು?

ತುರುಗಿ ಕೂರುಂಬುಗಳು ಮೈಯಲಿ
ಮುರಿದವರ್ಜುನನೆಸುಗೆಯಲಿ ಕೈ
ಮರೆದುದಮರನಿಕಾಯ ಕೆದರಿತು ದೊರೆಯ ಮನ್ನಿಸದೆ
ಮುರಿದುದೀ ಕೃಷ್ಣಾರ್ಜುನರ ಬೊ
ಬ್ಬಿರಿತಕವರೆದೆಯೊಡೆಯಲಿಂದ್ರನ
ಮರೆಯ ಹೊಕ್ಕುದು ದೇವಸಂತತಿ ಭೂಪ ಕೇಳೆಂದ (ಆದಿ ಪರ್ವ, ೨೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೃಷ್ಣಾರ್ಜುನರ ದಾಳಿ ದೇವತೆಗಳ ಮೈಯೆಲ್ಲಾ ನಾಟಿತು, ಅರ್ಜುನನ ಬಾಣದ ಹೊಡೆತ ದೇವತೆಗಳಿಗೆ ಯುದ್ಧಮಾಡುವ ರೀತಿಯೇ ಮರೆಯಿತು, ತಮ್ಮ ದೊರೆಯು ನೋಡುತ್ತಿದ್ದಾನೆ ಎನ್ನುವುದನ್ನೇ ಮರೆತು ಓಡಿದರು, ಕೃಷ್ಣಾರ್ಜುನರ ಗರ್ಜನೆಗೆ ಎದೆಗಳೊಡೆದು ದೇವತೆಗಳು ಇಂದ್ರನ ಮೊರೆಹೊಕ್ಕರು.

ಅರ್ಥ:
ತುರುಗು:ತುಂಬು; ಕೂರುಂಬು:ಹರಿತವಾದ ಬಾಣ; ಮೈ: ದೇಹ; ಮುರಿದು: ಸೀಳು, ಚೂರಾಗು; ಎಸುಗೆ:ಬಾಣದ ಹೊಡೆತ; ಕೈ: ಕರ, ಹಸ್ತ; ಮರೆದು: ಮರೆತುಹೋಗು; ಅಮರ: ದೇವತೆಗಳು; ನಿಕಾಯ: ಗುಂಪು; ಕೆದರು: ಚದುರು, ಹರಡು; ದೊರೆ: ರಾಜ; ಮನ್ನಿಸು: ಗೌರವಿಸು; ಬೊಬ್ಬೆ: ಕೂಗು, ಗಾಯ; ಇರಿ:ಚುಚ್ಚು; ಎದೆ: ವಕ್ಷ; ಒಡೆ: ಸೀಳು, ಬಿರಿ; ಮರೆ:ಆಶ್ರಯ, ಮೊರೆ; ಹೊಕ್ಕು: ಸೇರು; ಭೂಪ: ರಾಜ;

ಪದವಿಂಗಡಣೆ:
ತುರುಗಿ +ಕೂರುಂಬುಗಳು +ಮೈಯಲಿ
ಮುರಿದವ್+ಅರ್ಜುನನ್+ಎಸುಗೆಯಲಿ+ ಕೈ
ಮರೆದುದ್+ಅಮರ+ನಿಕಾಯ+ ಕೆದರಿತು+ ದೊರೆಯ+ ಮನ್ನಿಸದೆ
ಮುರಿದುದ್+ಈ+ ಕೃಷ್ಣಾರ್ಜುನರ +ಬೊಬ್
ಇರಿತಕ್+ಅವರ್+ಎದೆ +ಯೊಡೆಯಲ್+ಇಂದ್ರನ
ಮರೆಯ +ಹೊಕ್ಕುದು +ದೇವಸಂತತಿ+ ಭೂಪ+ ಕೇಳೆಂದ

ಅಚ್ಚರಿ:
(೧) ಮುರಿ, ಮರೆ – ೨, ೪; ೩, ೬ ಸಾಲಿನ ಮೊದಲ ಪದ
(೨) ಮೈ ಮುರಿದು, ಕೈ ಮರೆದು – ಪದಗಳ ಜೋಡಣೆ