ಪದ್ಯ ೧೬: ಎಷ್ಟು ವಸ್ತುಗಳನ್ನು ಸಾಗಿಸಲು ಮುಂದಾದರು?

ಮೆರೆವ ಗಜ ಹಯಶಾಲೆಯಲಿ ಮೈ
ಮುರಿಕ ವೃದ್ಧ ವ್ಯಾಧಿತಾವಳ್
ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ
ಉರುವ ಭಂಡಾರದ ಮಹಾರ್ಥದ
ನೆರವಣಿಗೆ ಗಾಢಿಸಿತು ಬೀದಿಯ
ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ (ಗದಾ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಗಜಶಾಲೆ, ಹಯಶಾಲೆಗಳಲ್ಲಿ ಮುದಿ, ರೋಗಗ್ರಸ್ತ, ಮರಿಕುದುರೆ ಲಕ್ಷಗಟ್ಟಲೆ ಮರಿಯಾನೆಗಳನ್ನು ಹೊರಡಿಸಿಕೊಂಡು ಬಂದರು. ಭಂಡಾರದಿಂದ ಬಹುಬೆಲೆಯ ವಸ್ತುಗಳನ್ನು ತಂದರು. ಸರಕಿನ ಬಂಡಿಗಳು ದಾರಿಯಲ್ಲಿ ಸ್ಥಳವಿಲ್ಲದಂತೆ ಕಿಕ್ಕಿರಿದವು.

ಅರ್ಥ:
ಮೆರೆ: ಹೊಳೆ, ಪ್ರಕಾಶಿಸು; ಗಜ: ಆನೆ; ಹಯ: ಕುದುರೆ; ಶಾಲೆ: ಆಲಯ; ಮೈ: ತನು; ಮುರಿ: ಬಾಗು, ತಿರುವು; ವೃದ್ಧ: ವಯಸ್ಸಾದ, ಮುದುಕ; ವ್ಯಾಧಿ: ರೋಗ, ಖಾಯಿಲೆ; ಆವಳಿ: ಸಾಲು; ಮರಿ: ಚಿಕ್ಕ; ಕುದುರೆ: ಅಶ್ವ; ಆನೆ: ಗಜ; ತೆಗೆ: ಹೊರತಉ; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ; ಉರು: ವಿಶೇಷವಾದ; ಭಂಡಾರ: ಬೊಕ್ಕಸ, ಖಜಾನೆ; ಮಹಾರ್ಥ: ಬಹುಬೆಲೆಯ; ಎರವು: ಸಾಲ, ದೂರವಾಗು; ಗಾಢಿಸು: ತುಂಬು; ಬೀದಿ: ದಾರಿ; ತೆರಹು: ಎಡೆ, ಜಾಗ; ಕೆತ್ತು: ನಡುಕ, ಸ್ಪಂದನ; ಹೊತ್ತ: ಹೇರು; ಸರಕು: ಸಾಮಗ್ರಿ; ಬಹಳ: ತುಂಬ; ಬಂಡಿ: ರಥ;

ಪದವಿಂಗಡಣೆ:
ಮೆರೆವ+ ಗಜ +ಹಯಶಾಲೆಯಲಿ +ಮೈ
ಮುರಿಕ +ವೃದ್ಧ +ವ್ಯಾಧಿತ+ಆವಳಿ
ಮರಿಗುದುರೆ +ಮರಿಯಾನೆ +ತೆಗೆದವು +ಲಕ್ಕ +ಸಂಖ್ಯೆಯಲಿ
ಉರುವ +ಭಂಡಾರದ +ಮಹಾರ್ಥದನ್
ಎರವಣಿಗೆ +ಗಾಢಿಸಿತು +ಬೀದಿಯ
ತೆರಹು +ಕೆತ್ತವು +ಹೊತ್ತ +ಸರಕಿನ +ಬಹಳ +ಬಂಡಿಗಳ

ಅಚ್ಚರಿ:
(೧) ೧-೩ ಸಾಲುಗಳು ಮ ಕಾರದಿಂದ ಪ್ರಾರಂಭ

ಪದ್ಯ ೬೧: ಧೃತರಾಷ್ಟ್ರನ ಕುರುಡ ಪ್ರೀತಿ ಹೇಗಿತ್ತು?

ಎಲೆ ಮಗನೆ ಎನ್ನಾಣೆ ಬಾ ಕುರು
ಕುಲತಿಲಕ ನೀ ಹೋಗಲೆನ್ನೊಡ
ಲುಳಿವುದೇ ಮರಿಯಾನೆ ಬಾರೈ ಕಂದ ಬಾಯೆಂದು
ಸೆಳೆದು ಬಿಗಿಯಪ್ಪಿದನು ಕಂಬನಿ
ದುಳುಕಿದನು ಹೇಳಿನ್ನು ಮೇಲಣ
ಬಳಕೆಯನು ರಿಪುರಾಜಕಾರ್ಯಕೆ ಬುದ್ಧಿಯೇನೆಂದ (ಆದಿ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಇದಕ್ಕೆ ಕುರುಡು ಪ್ರೀತಿ ಎಂದು ಹೇಳುವುದು. ತನಗೆ ಅರಿವಿದ್ದು, ತನ್ನ ಮಗ ದುರ್ಮಾಗದಲ್ಲಿ ಹೋಗುತ್ತಿದ್ದಾನೆ ಎಂದು ತಿಳಿದ ಬಳಿಕವು ಮಗನ ಮೇಲಿನ ಪ್ರೀತಿಯಿಂದ ತಾನು ಮಗನ ಕಪಟ ಕೆಲಸಕ್ಕೆ ಒಪ್ಪಿಗೆ ನೀಡುವುದು. ಹೊರಡಲು ನಿಂತಿದ್ದ ಮಗನನ್ನು, ಧೃತರಾಷ್ಟ್ರನು ತೇವದ ಕಣ್ಣಿನಿಂದ, ಗದ್ಗದ ಸ್ವರದಿಂದ, ಎಲೈ ಮಗನೆ ನನ್ನಾಣೆ ನಿನ್ನನ್ನು ಬಿಟ್ಟು ನಾನಾದರು ಹೇಗೆ ಇರಲಿ, ಕುರುಕುಲ ತಿಲಕ, ಮರಿಯಾನೆ, ಕಂದ ಬಾಪ್ಪಾ ಎಂದು ಪ್ರೀತಿ, ಮಮತೆ ಯಿಂದ ಕರೆದು, ಅವನನ್ನು ಬಿಗಿಯಾಗಿ ಅಪ್ಪಿ ಕಣ್ಣಿರನ್ನು ಹಾಕುತ್ತಾ, ಹೇಳು, ಏನು ಮಾಡಬೇಕು ಶತ್ರು ರಾಜರನ್ನು ಸಂಹರಿಸುಲು, ನಿನ್ನ ನಿಶ್ಚಯವೇನು ಎಂದು ಹೇಳಿದನು.

ಅರ್ಥ:
ಮಗ: ಸುತ; ಆಣೆ: ಪ್ರಮಾಣ, ಪ್ರತಿಜ್ಞೆ; ಕುಲ: ವಂಶ; ತಿಲಕ: ಭೂಷಣಪ್ರಾಯವಾದ, ಶ್ರೇಷ್ಠ; ಒಡಲ್: ದೇಹ; ಕಂದ: ಮಗು; ಸೆಳೆದು: ಹತ್ತಿರ, ಬಳಿ; ಅಪ್ಪಿ: ಆಲಿಂಗನ; ಆನೆ: ಕರಿ; ಕಂಬನಿ: ಕಣ್ಣೀರು; ಅಳುಕು: ನಡುಗು, ಹೆದರು; ಹೇಳು: ತಿಳಿಸು; ರಿಪು: ಶತ್ರು; ಬುದ್ಧಿ: ತಿಳಿವು, ಅರಿವು, ಚಿತ್ತ;

ಪದವಿಂಗಡನೆ:
ಎಲೆ +ಮಗನೆ +ಎನ್ನಾಣೆ+ ಬಾ +ಕುರು
ಕುಲತಿಲಕ+ ನೀ +ಹೋಗಲ್+ಎನ್+ಒಡಲ್
ಉಳಿವುದೇ +ಮರಿಯಾನೆ +ಬಾರೈ +ಕಂದ +ಬಾ+ಯೆಂದು
ಸೆಳೆದು+ ಬಿಗಿಯಪ್ಪಿದನು +ಕಂಬನಿದ್
ಅಳುಕಿದನು +ಹೇಳಿನ್ನು+ ಮೇಲಣ
ಬಳಕೆಯನು +ರಿಪು+ರಾಜಕಾರ್ಯಕೆ +ಬುದ್ಧಿಯೇನೆಂದ

ಅಚ್ಚರಿ:
(೧) ಬಾ – ಮೂರು ಬಾರಿ ಪ್ರಯೋಗ
(೨) ಮಗ, ಕಂದ, ಮರಿಯಾನೆ, ಕುರುಕುಲತಿಲಕ – ದುರ್ಯೋಧನನಿಗೆ ಪ್ರೀತಿಸೂಚಕ ಪದಗಳು
(೩) ಪ್ರೀತಿಯ ವರ್ಣನೆ: ಸೆಳೆದು ಬಿಗಿಯಪ್ಪಿದನು ಕಂಬನಿದಳುಕಿದನು