ಪದ್ಯ ೯: ಯಾರು ಯಾರ ಮನೆಯನ್ನು ಸೇರಿದರು?

ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಯಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ (ಗದಾ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಸುಯೋಧನನ ಅರಮನೆಯನ್ನು ಹೊಕ್ಕನು, ಭೀಮನು ದುಶ್ಯಾಸನನ ಮನೆಯನ್ನೂ, ಅರ್ಜುನನು ಕರ್ಣನ ಭವನವನ್ನು, ನಕುಲಸಹದೇವರು ದುಶ್ಯಾಸನನಿಗಿಂದ ಚಿಕ್ಕವರಾದ ಕೌರವರ ಮನೆಗಳನ್ನು ಹೊಕ್ಕರು. ಉಳಿದೆಲ್ಲ ಅರಮನೆಗಳೂ ಭಂಡಾರ ಭವನಗಳಾದವು.

ಅರ್ಥ:
ಅರಮನೆ: ರಾಜರ ಆಲಯ; ಅವನೀಶ: ರಾಜ; ಹೊಕ್ಕು: ಸೇರು; ಪವನಸುತ: ಭೀಮ; ಪವನ: ಗಾಳಿ, ವಾಯು; ಸುತ: ಮಗ; ಸದನ: ಆಲಯ; ಭವನ: ಆಲಯ; ವಾಸ: ಜೀವಿಸು; ಯಮಳ: ಜೋಡಿ ಮಕ್ಕಳು, ಅವಳಿ; ಅನುಜ: ತಮ್ಮ; ಉಳಿದ: ಮಿಕ್ಕ; ಐಸು: ಎಲ್ಲ; ಭಂಡಾರ: ಬೊಕ್ಕಸ, ಖಜಾನೆ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆ+ ಸುಯೋಧನನ್+ಅರಮನೆಯನ್+ಅವ
ನೀಶ +ಹೊಕ್ಕನು+ ಪವನಸುತ +ದು
ಶ್ಯಾಸನನ+ ಸದನವನು +ಪಾರ್ಥಗೆ +ಕರ್ಣ+ಭವನದಲಿ
ವಾಸವಾದುದು +ಯಮಳರಿಗೆ +ದು
ಶ್ಯಾಸನ+ಅನುಜರ್+ಅರಮನೆಗಳ್+ಉಳಿದ್
ಐಸು+ಮನೆ +ಭಂಡಾರವಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಸದನ, ಮನೆ, ಅರಮನೆ, ಭವನ – ಸಾಮ್ಯಾರ್ಥ ಪದ
(೨) ಒಂದೇ ಪದವಾಗಿ ರಚನೆ: ಸುಯೋಧನನರಮನೆಯನವನೀಶ, ದುಶ್ಯಾಸನಾನುಜರರಮನೆಗಳುಳಿದೈಸುಮನೆ

ಪದ್ಯ ೭: ದ್ರೋಣನು ಪರಬಲವನ್ನು ಹೇಗೆ ಪೀಡಿಸಿದನು?

ಸಾಲ ಮೇಘದ ಮನೆಗಳಿಗೆ ಬಿರು
ಗಾಳಿ ಬಿದ್ದನನಾಗಿ ಬರಲವ
ರಾಲಯದ ಸಿರಿ ಮೆರೆವುದೇ ಧೃತರಾಷ್ಟ್ರ ಚಿತ್ತಯಿಸು
ಬೀಳಹೊಯ್ದರು ಹೊಕ್ಕು ಭೂಮೀ
ಪಾಲನೆಯನಿವರೊಲ್ಲೆವೆಂಬವೊ
ಲೂಳಿಗವ ಮಾಡಿದನು ಪರಬಲದೊಳಗೆ ಕಲಿದ್ರೋಣ (ದ್ರೋಣ ಪರ್ವ, ೧೮ ಸಂಧಿ, ೭ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ಮೇಘಗಳ ಸಾಲುಮನೆಗಳಿಗೆ ಬಿರುಗಾಳಿಯು ಅತಿಥಿಯಾಗಿ ಬಂದರೆ ಆ ಮನೆಗಳು ಸಿರಿಯಿಂದ ಮೆರೆಯಲು ಸಾಧ್ಯವೇ? ಪಾಂಡವರ ಕಡೆಯ ರಾಜರು ಮುಂದೆ ಬಂದು , ನಾವು ಭೂಮಿಯನ್ನು ಆಳುವುದಿಲ್ಲ ಎಂದು ನಿಶ್ಚಯಿಸಿದಂತೆ ಮಡಿದರು. ದ್ರೋಣನು ಪರಬಲವನ್ನು ಬಹಳವಾಗಿ ಪೀಡಿಸಿದನು.

ಅರ್ಥ:
ಸಾಲ: ಗುಂಪು, ಆವಳಿ; ಮೇಘ: ಮೋಡ; ಮನೆ: ಆಲಯ; ಬಿರುಗಾಳಿ: ಜೋರಾದ ಗಾಳಿ; ಬಿದ್ದು: ಬೀಳು; ಬರಲು: ಆಗಮಿಸು; ಆಲಯ: ಮನೆ; ಸಿರಿ: ಐಶ್ವರ್ಯ; ಮೆರೆ: ಹೊಳೆ; ಚಿತ್ತಯಿಸು: ಕೇಳು; ಹೊಯ್ದು: ಹೊಡೆ; ಹೊಕ್ಕು: ಸೇರು; ಭೂಮೀಪಾಲ: ರಾಜ; ಒಲ್ಲೆ: ಸಮ್ಮತಿಸದಿರು; ಊಳಿಗ: ಕೆಲಸ, ಕಾರ್ಯ; ಪರಬಲ: ವೈರಿ ಸೈನ್ಯ; ಕಲಿ: ಶೂರ;

ಪದವಿಂಗಡಣೆ:
ಸಾಲ +ಮೇಘದ +ಮನೆಗಳಿಗೆ +ಬಿರು
ಗಾಳಿ +ಬಿದ್ದನನಾಗಿ +ಬರಲ್+ಅವರ್
ಆಲಯದ +ಸಿರಿ +ಮೆರೆವುದೇ +ಧೃತರಾಷ್ಟ್ರ +ಚಿತ್ತಯಿಸು
ಬೀಳ+ಹೊಯ್ದರು +ಹೊಕ್ಕು +ಭೂಮೀ
ಪಾಲನೆಯನ್+ಇವರ್+ಒಲ್ಲೆವೆಂಬವೊಲ್
ಊಳಿಗವ +ಮಾಡಿದನು +ಪರಬಲದೊಳಗೆ +ಕಲಿ+ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಲ ಮೇಘದ ಮನೆಗಳಿಗೆ ಬಿರುಗಾಳಿ ಬಿದ್ದನನಾಗಿ ಬರಲವ
ರಾಲಯದ ಸಿರಿ ಮೆರೆವುದೇ

ಪದ್ಯ ೧: ಕೃಷ್ಣನು ಯಾರನ್ನು ಬೀಳ್ಕೊಟ್ಟನು?

ಕೇಳು ಜನಮೇಜಯ ಧರಿತ್ರೀ
ಪಾಲ ಮುರಹರ ಗುರು ನದೀಜರ
ಬೀಳುಕೊಟ್ಟನು ಕೃಪನ ಮನ್ನಿಸಿ ಮನೆಗೆ ಕಳುಹಿದನು
ಆಲಯಕೆ ವಿದುರಂಗೆ ಕೊಟ್ಟನು
ವೀಳಯವನೊಡನೆಯ್ದಿ ಬಂದ
ನೃಪಾಲಕರ ಮೊಗಸನ್ನೆಯಲಿ ಕಳುಹಿದನು ಮನೆಗಳಿಗೆ (ಉದ್ಯೋಗ ಪರ್ವ, ೮ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಜನಮೇಜಯ ರಾಜನಿಗೆ ಮಹಾಭಾರತದ ಕಥೆಯನ್ನು ಮುಂದುವರಿಸುತ್ತಾ, ಕೃಷ್ಣನು ಧೃತರಾಷ್ಟ್ರನನ್ನು ಬೀಳ್ಕೊಟ್ಟಮೇಲೆ ಅವರ ಜೊತೆಯಿದ್ದ ದ್ರೋಣ ಮತ್ತು ಭೀಷ್ಮರನ್ನು ಕಳುಹಿಸಿದನು, ಕೃಪಚಾರ್ಯರನ್ನು ಮನ್ನಿಸಿ ಅವರನ್ನು ಕಳುಹಿಸಿ, ವಿದುರನಿಗೆ ಅವನ ಮನೆಗೆ ಹೋಗಲು ವೀಳಯವನ್ನು ನೀಡಿ ಉಳಿದೆಲ್ಲ ರಾಜರನ್ನು ಮುಖಸನ್ನೆಯಲ್ಲೆ ಅವರ ಮನೆಗೆ ಹೋಗಲು ಅಪ್ಪಣೆನೀಡಿದನು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಮುರಹರ: ಕೃಷ್ಣ; ಗುರು: ಆಚಾರ್ಯ (ದ್ರೋಣ), ನದೀಜ: ಗಂಗೆಯಲ್ಲಿ ಹುಟ್ಟಿದ (ಭೀಷ್ಮ); ಬೀಳುಕೊಟ್ಟನು: ಕಳುಹಿಸಿದನು; ಮನ್ನಿಸು: ಅನುಗ್ರಹಿಸು; ಮನೆ: ಆಲಯ; ವೀಳಯ: ತಾಂಬೂಲ; ಐದು: ಹೋಗಿಸೇರು; ನೃಪಾಲ: ರಾಜ; ಮೊಗ: ಮುಖ; ಸನ್ನೆ: ಸಂಕೇತ, ಸುಳಿವು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಮುರಹರ +ಗುರು +ನದೀಜರ
ಬೀಳುಕೊಟ್ಟನು +ಕೃಪನ +ಮನ್ನಿಸಿ +ಮನೆಗೆ +ಕಳುಹಿದನು
ಆಲಯಕೆ+ ವಿದುರಂಗೆ +ಕೊಟ್ಟನು
ವೀಳಯವನ್+ಒಡನೆಯ್ದಿ+ ಬಂದ
ನೃಪಾಲಕರ+ ಮೊಗಸನ್ನೆಯಲಿ+ ಕಳುಹಿದನು +ಮನೆಗಳಿಗೆ

ಅಚ್ಚರಿ:
(೧) ಕೇಳು, ಬೀಳು – ಪ್ರಾಸ ಪದ
(೨) ಆಲಯ, ಮನೆ; ಬೀಳುಕೊಟ್ಟನು, ಕಳುಹಿದನು – ಸಮನಾರ್ಥಕ ಪದ

ಪದ್ಯ ೯: ಕೌರವನು ಶಲ್ಯನಿಗೆ ಯಾವ ರೀತಿ ಆತಿಥ್ಯವನ್ನು ನೀಡಿದನು?

ಬಂದು ಬಿಡುವನ್ನೆಬರ ಮುನ್ನಿನ
ಮಂದಿರವ ಹೊಗುವಂತೆ ಶಲ್ಯನ
ಮಂದಿ ಸಂತೋಷದ ಸಮುದ್ರದಿ ಮೂಡಿ ಮುಳುಗಾಡಿ
ಮುಂದೆ ನಡೆಯಲು ಮತ್ತೆ ಮುನ್ನಿನ
ಚಂದದಿಂ ಮನೆ ಮನೆಗಳನು ಸುಖ
ದಿಂದಿರಲು ರಚಿಸಿದನು ಕುರುಪತಿ ಪಯಣ ಪಯಣದಲಿ (ಉದ್ಯೋಗ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ದುರ್ಯೋಧನನು ಶಲ್ಯನನ್ನು ತನ್ನ ಬಳಿ ಸಳೆಯಲು ಅವನು ಬರುವ ದಾರಿಯಲ್ಲಿ ಬಿಡಾರವನ್ನು ನಿರ್ಮಿಸಿದನು. ಒಂದು ಡೇರೆಯಿಂದ ಮುಂದೆ ಪ್ರಯಾಣ ಮಾಡಿದರೆಮೊದಲಿನ ಮನೆಗೆ ಬಂದೆವೇನೋ ಎನ್ನುವಂತೆ ಬೀಡುಬಿಟ್ಟು, ಸಂತೋಷ ಸಮುದ್ರದಲ್ಲಿ ಮುಳುಗಾಡಿ ಮುಂದೆ ಪ್ರಯಾಣ ಮಾಡಿದಾಗ ಬೀಡು ಬಿಡುವ ಜಾಗದಲ್ಲಿ ಮತ್ತೆ ಮೊದಲಿನಂತೆಯೇ ವ್ಯವಸ್ಥೆಯಾಗಿತ್ತು. ಹೀಗೆ ಕೌರವನು ಶಲ್ಯನಿಗೆ ಆತಿಥ್ಯವನ್ನು ನೀಡಿದನು.

ಅರ್ಥ:
ಬಂದು: ಆಗಮಿಸು; ಇಬರ: ಎದುರು; ಮುನ್ನ: ಮುಂದಿನ; ಮಂದಿರ: ಆಲಯ; ಹೊಗು: ಬರುವಂತೆ; ಮಂದಿ: ಜನ; ಸಂತೋಷ: ಹಸನಗೊಳ್ಳು; ಸಮುದ್ರ: ಸಾಗರ; ಮೂಡಿ: ಹುಟ್ಟು; ಮುಳುಗು: ಮಜ್ಞನಾಗು; ನಡೆ: ಮುಂದುಹೋಗು; ಚಂದ: ಸುಂದರ; ಮನೆ: ಆಲಯ; ಸುಖ: ಸೌಖ್ಯ; ರಚಿಸು: ನಿರ್ಮಿಸು; ಪಯಣ: ಪ್ರಯಾಣ;

ಪದವಿಂಗಡಣೆ:
ಬಂದು +ಬಿಡುವನ್+ಇಬರ +ಮುನ್ನಿನ
ಮಂದಿರವ +ಹೊಗುವಂತೆ+ ಶಲ್ಯನ
ಮಂದಿ +ಸಂತೋಷದ +ಸಮುದ್ರದಿ +ಮೂಡಿ +ಮುಳುಗಾಡಿ
ಮುಂದೆ +ನಡೆಯಲು +ಮತ್ತೆ +ಮುನ್ನಿನ
ಚಂದದಿಂ +ಮನೆ +ಮನೆಗಳನು+ ಸುಖ
ದಿಂದಿರಲು +ರಚಿಸಿದನು +ಕುರುಪತಿ +ಪಯಣ +ಪಯಣದಲಿ

ಅಚ್ಚರಿ:
(೧)ಪಯಣ ಪಯಣ ದಲಿ, ಮನೆ ಮನೆಗಳನು – ಜೋಡಿ ಪದ