ಪದ್ಯ ೪: ಸರೋವರವು ಹೇಗೆ ಶೋಭಿಸುತ್ತಿತ್ತು?

ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕ ಪಾಠಕರ ನೃತ್ಯಗಳ
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪಕೇಳೆಂದ (ಅರಣ್ಯ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ತಿಳಿನೀರಿನ ಸರೋವರದ ಮಧ್ಯದಲ್ಲಿ ಕಮಲವೆಂಬ ರಾಜನೆದುರಿನಲ್ಲಿ ದುಂಬಿಗಳೆಂಬ ಗಾಯಕರು, ಕೋಗಿಲೆಗಳೆಂಬ ಸ್ತುತಿಪಾಠಕರ ನೃತ್ಯ, ನವಿಲಿನ ವಾದ್ಯ ಕೊಳದ ಹಕ್ಕಿಗಳ ಘುಳುಘುಳುವೆಂಬ ಶಬ್ದದವೆಲ್ಲವೂ ರಂಜಿಸುತ್ತಿರಲು ಸರೋವರವು ಲಕ್ಷ್ಮೀದೇವಿಯ ಅರಮನೆಯಂತೆ ಶೋಭಿಸುತ್ತಿತ್ತು.

ಅರ್ಥ:
ತಿಳಿ: ಸ್ವಚ್ಛ, ನಿರ್ಮಲ; ಕೊಳ: ಸರೋವರ; ಮಧ್ಯ: ನಡುವೆ; ಮೆರೆ: ಹೊಳೆ, ಪ್ರಕಾಶಿಸು; ನಳಿನ: ಕಮಲ; ನೃಪ: ರಾಜ; ಇದಿರು: ಎದುರು; ಮಧುಪಾವಳಿ: ದುಂಬಿಗಳ ಗುಂಪು; ಮಧು: ಜೇನು; ರವ: ಶಬ್ದ; ಗಾಯಕ: ಸಂಗೀತಗಾರ; ಪಿಕ: ಕೋಗಿಲೆ; ಪಾಠಕ: ಹೊಗಳುಭಟ್ಟ; ನೃತ್ಯ: ನಾಟ್ಯ, ನರ್ತನ; ಲಲಿತ: ಸುಂದರ; ನವಿಲು: ಮಯೂರ; ವಾದ್ಯ: ಸಂಗೀತದ ಸಾಧನ; ಘುಳು: ಶಬ್ದವನ್ನು ವಿವರಿಸುವ ಪದ; ಹಕ್ಕಿ: ಪಕ್ಷಿ; ಲಲನೆ: ಹೆಣ್ಣು; ಅರಮನೆ: ರಾಜರ ವಾಸಸ್ಥಾನ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಿಳಿ+ಕೊಳನ +ಮಧ್ಯದಲಿ +ಮೆರೆದಿಹ
ನಳಿನ+ನೃಪನ್+ಇದಿರಿನಲಿ +ಮಧುಪಾ
ವಳಿ+ ರವದ +ಗಾಯಕರ+ ಪಿಕ +ಪಾಠಕರ +ನೃತ್ಯಗಳ
ಲಲಿತ +ನವಿಲಿನ +ವಾದ್ಯಗಳ +ಘುಳು
ಘುಳಿಪ +ಕೊಳರ್ವಕ್ಕಿಗಳ +ಲಕ್ಷ್ಮೀ
ಲಲನೆಯರ್+ಅಮನೆ+ಎನಲು+ ಮೆರೆದುದು +ಭೂಪಕೇಳೆಂದ

ಅಚ್ಚರಿ:
(೧) ಸರೋವರವನ್ನು ಲಕ್ಷ್ಮೀದೇವಿಯ ಅರಮನೆಯಂತ ಚಿತ್ರಿಸುವ ಕವಿಯ ಕಲ್ಪನೆ