ಪದ್ಯ ೨೨: ಜಾಹ್ನವಿಯು ಮಗುವನ್ನು ಎಲ್ಲಿಗೆ ಸೇರಿಸಿದಳು?

ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ
ರಾಯಕೇಳೈ ಸಕಲಲೋಕದ
ತಾಯಲಾ ಜಾಹ್ನವಿ ತರಂಗದಿ
ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ (ಆದಿ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕುಂತಿಯು ಗಂಗಾದೇವಿಗೆ ಅಮ್ಮಾ, ನೀನಗೆ ತಿಳಿದ ಹಾಗೆ ಮಾಡು, ಈ ಮಗುವನ್ನು ಕಾಪಾಡು ಇಲ್ಲವೆ ಕೊಲ್ಲು ಎಂದು ಹೇಳಿ, ಗಂಗಾನದಿಯ ಮಡುವಿನಲ್ಲಿ ಆ ಮಗುವನ್ನು ಹಾಕಿದಳು. ರಾಜ ಜನಮೇಜಯ ಕೇಳು, ಸಕಲಲೋಕಕ್ಕೂ ತಾಯಿಯಾದ ಗಂಗೆಯು ಆ ಮಗುವು ಮುಳುಗದಂತೆ, ನೋಯದಂತೆ ನದಿಯ ತೀರಕ್ಕೆ ಕರೆತಂದು ಬಿಟ್ಟಳು.

ಅರ್ಥ:
ತಾಯಿ: ಮಾತೆ; ಬಲ್ಲೆ: ತಿಳಿ; ಕಂದ: ಮಗು; ಕಾಯಿ: ರಕ್ಷಿಸು; ಮೇಣ್; ಅಥವ; ಕೊಲ್ಲು: ಸಾಯಿಸು; ಕಮಲದಳಾಯತಾಕ್ಷಿ: ಕಮಲದಂತಹ ಕಣ್ಣುಳ್ಳ; ಕುಮಾರ: ಮಗ; ಹಾಯ್ಕು: ಇಡು, ಇರಿಸು; ಮಡು: ಕೊಳ, ಸರೋವರ ; ರಾಯ: ರಾಜ; ಕೇಳು: ಆಲಿಸು; ಸಕಲ: ಎಲ್ಲಾ; ಲೋಕ: ಜಗತ್ತು; ಜಾಹ್ನವಿ: ಗಂಗೆ; ತರಂಗ: ಅಲೆ; ನೋವು: ಪೆಟ್ಟು; ಮುಳುಗು: ತೋಯು, ನೀರಿನಲ್ಲಿ ಮೀಯು; ಚಾಚು: ಹರಡು; ತಡಿ: ದಡ;

ಪದವಿಂಗಡಣೆ:
ತಾಯೆ +ಬಲ್ಲಂದದಲಿ +ಕಂದನ
ಕಾಯಿ +ಮೇಣ್ +ಕೊಲ್ಲೆನುತ +ಕಮಲದ
ಳಾಯತಾಕ್ಷಿ+ ಕುಮಾರಕನ +ಹಾಯ್ಕಿದಳು +ಮಡುವಿನಲಿ
ರಾಯ+ಕೇಳೈ +ಸಕಲ+ಲೋಕದ
ತಾಯಲಾ +ಜಾಹ್ನವಿ+ ತರಂಗದಿ
ನೋಯಲೀಯದೆ +ಮುಳುಗಲೀಯದೆ +ಚಾಚಿದಳು +ತಡಿಗೆ

ಅಚ್ಚರಿ:
(೧) ಜಾಹ್ನವಿಯ ಕಾಳಜಿ – ಸಕಲಲೋಕದ ತಾಯಲಾ ಜಾಹ್ನವಿ ತರಂಗದಿ ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ

ಪದ್ಯ ೨೪: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೧?

ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ
ವಸತಿಯಲಿ ಬಳಿಕಗ್ನಿ ದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಕೌರವ, ಹಿಂದೆ ಬಾಲಯ್ದಲ್ಲಿ ನನಗೆ ವಿಷವನ್ನಿಟ್ಟೆ, ಹಾವಿನಿಂದ ಕಟ್ಟಿಹಾಕಿದೆ. ಮಡುವಿನಲ್ಲಿ ಮುಳುಗಿಸಿದೆ. ಬಳಿಕ ಅರಗಿನ ಮನೆಗೆ ಬೆಂಕಿ ಹಚ್ಚಿದೆ ಪುಣ್ಯದಿಂದ ನಾವು ಬದುಕಿಕೊಂಡೆವು. ನೀರಿನಲ್ಲಿ ಮುಳುಗಿದರೆ ಈಗ ಬಿಟ್ಟೇನೇ ಎಂದು ಭೀಮನು ಕೌರವನನ್ನು ಪ್ರಚೋದಿಸಿದನು.

ಅರ್ಥ:
ವಿಷ: ಗರಳ; ಹಾವು: ಉರಗ; ಬಂಧಿಸು: ಕಟ್ಟು, ಸೆರೆ; ಮಡು: ನದಿ, ಹೊಳೆ ಮುಂ.ವುಗಳಲ್ಲಿ ಆಳವಾದ ನೀರಿರುವ ಪ್ರದೇಶ; ಉಬ್ಬಸ: ಸಂಕಟ, ಮೇಲುಸಿರು; ಬಳಿಕ: ನಂತರ; ಹಿಂದೆ: ಗತಿಸಿದ ಕಾಲ; ಮನ: ಮನಸ್ಸು; ಮುನಿಸು: ಕೋಪ; ಬಾಲ್ಯ: ಚಿಕ್ಕವ; ವಸತಿ: ವಾಸಮಾಡುವಿಕೆ; ಅಗ್ನಿ: ಬೆಂಕಿ; ಪಸರಿಸು: ಹರಡು; ಪುಣ್ಯ: ಸದಾಚಾರ; ಜೀವಿಸು: ಬದುಕು; ಅಡಗು: ಅವಿತುಕೊಳ್ಳು; ಬಿಡು: ತೊರೆ;

ಪದವಿಂಗಡಣೆ:
ವಿಷವನಿಕ್ಕಿದೆ +ಹಾವಿನಲಿ +ಬಂ
ಧಿಸಿದೆ +ಮಡುವಿನೊಳಿಕ್ಕಿ +ಬಳಿಕ್
ಉಬ್ಬಸವ +ಮಾಡಿದೆ +ಹಿಂದೆ +ಮನ+ಮುನಿಸಾಗಿ +ಬಾಲ್ಯದಲಿ
ವಸತಿಯಲಿ +ಬಳಿಕ್+ಅಗ್ನಿ+ ದೇವರ
ಪಸರಿಸಿದೆ +ಪುಣ್ಯದಲಿ +ನಾವ್ +ಜೀ
ವಿಸಿದೆವ್+ಅಡಗಿದಡ್+ಇನ್ನು +ಬಿಡುವೆನೆ+ಎಂದನಾ +ಭೀಮ

ಅಚ್ಚರಿ:
(೧) ಮನೆಗೆ ಬೆಂಕಿ ಹಚ್ಚಿದೆ ಎಂದು ಹೇಳುವ ಪರಿ – ವಸತಿಯಲಿ ಬಳಿಕಗ್ನಿ ದೇವರಪಸರಿಸಿದೆ

ಪದ್ಯ ೧೪: ಸಂಜಯನು ಯಾರ ನಡಿಗೆಯನ್ನು ನೋಡಿದನು – ೭?

ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡೆದು ದೈವವ ಬಯ್ದು ಬಯ್ದಡಿಗಡಿಗೆ ಸುಯ್ವವನ (ಗದಾ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ಆಯುಧಗಳ ರಾಶಿಯಲ್ಲಿ ಗಾಲಿಯನ್ನು ಹಾಕಿ ಅದರ ಮೇಲೆ ಕಾಲಿಡುತ್ತಾ, ಎರಡು ಹೆಜ್ಜೆ ದೂರದಲ್ಲಿ ಕೆಸರಿರಲು ಅಲ್ಲಿ ಛತ್ರ ಚಾಮರಗಳನ್ನು ಹಾಕಿ ಕಾಲಿಡುತ್ತಾ, ರಕ್ತದ ಮಡುಗಳನ್ನು ಎಡಕ್ಕೆ ಬಲಕ್ಕೆ ಬಿಟ್ಟು ಮೆಲ್ಲನೆ ನಡೆಯುತ್ತಾ, ಹೆಜ್ಜೆ ಹೆಜ್ಜೆಗೂ ದೈವ ವಿಧಿಯನ್ನು ಬಯ್ಯುತ್ತಾ ನಿಟ್ಟುಸಿರು ಬಿಡುವವನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಕೈದು: ಆಯುಧ; ತನಿ: ಹೆಚ್ಚಾಗು, ಅತಿಶಯವಾಗು; ಕೆಡೆ: ಬೀಳು, ಕುಸಿ; ಗಾಲಿ: ಚಕ್ರ; ಹಾಯ್ಕು: ಹೊಡೆ; ಮೆಲ್ಲಡಿ: ಮೃದುವಾದ ಪಾದ, ಕೋಮಲವಾದ ಅಡಿ; ಹಜ್ಜೆ: ಪಾದ; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಛತ್ರ: ಕೊಡೆ; ಚಮರಿ: ಚಾಮರ; ಅಡಸು: ಬಿಗಿಯಾಗಿ ಒತ್ತು; ರಕುತ: ನೆತ್ತರು; ಮಡು: ಕೊಳ, ಸರೋವರ; ಎಡಬಲ: ಅಕ್ಕಪಕ್ಕ; ಮೆಲ್ಲನೆ: ನಿಧಾನ; ದೈವ: ಭಗವಂತ; ಬಯ್ದು: ಜರೆ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಸುಯ್: ನಿಟ್ಟುಸಿರು;

ಪದವಿಂಗಡಣೆ:
ಕಡಿದ +ಕೈದುಗಳ್+ಒಟ್ಟಿಲಲಿ +ತನಿ
ಕೆಡೆದ +ಗಾಲಿಯ +ಹಾಯ್ಕಿ +ಮೆಲ್ಲಡಿ
ಯಿಡುತ +ಹಜ್ಜೆಯ +ನೆಣದ +ಕೆಸರಿಗೆ+ ಛತ್ರ+ಚಮರಿಗಳ
ಅಡಸಿ +ಹಜ್ಜೆಯನಿಡುತ +ರಕುತದ
ಮಡುವನ್+ಎಡಬಲಕಿಕ್ಕಿ +ಮೆಲ್ಲನೆ
ನಡೆದು +ದೈವವ +ಬಯ್ದು +ಬಯ್ದ್+ಅಡಿಗಡಿಗೆ+ ಸುಯ್ವವನ

ಅಚ್ಚರಿ:
(೧) ಎಡಬಲ, ಅಡಿಗಡಿ, ಅಡಿಯಿಡು – ಪದಗಳ ಬಳಕೆ

ಪದ್ಯ ೫೭: ದ್ರೌಪದಿಯು ಹೇಗೆ ಚಿಂತಿಸಿದಳು?

ಆವ ಗರಳವ ಕುಡಿವೆನೋ ಮೇ
ಣಾವ ಬೆಟ್ಟವನಡರಿ ಬೀಳ್ವೆನೊ
ಆವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ
ಆವ ಕುಂತವ ಹಾಯ್ವೆನೋ ಮೇ
ಣಾವ ಪಾವಕನೊಳಗೆ ಬೀಳ್ವೆನೊ
ಸಾವು ಸಮನಿಸದೆನಗೆನುತ ಮರುಗಿದಳು ಕಮಲಾಕ್ಷಿ (ವಿರಾಟ ಪರ್ವ, ೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ನನಗೆ ತಾನಾಗಿ ಸಾವು ಬರುತ್ತಿಲ್ಲ, ಬದುಕು ಬೇಡವಾಗಿದೆ, ಅತೀವ ದುಃಖಿತಳಾದ ದ್ರೌಪದಿ ಚಿಂತಿಸುತ್ತಾ ನಾನು ಯಾವ ವಿಷವನ್ನು ಕುಡಿಯಲಿ, ಯಾವ ಬೆಟ್ಟವನ್ನು ಹತ್ತಿ ಮೇಲಿಂದ ಬೀಳಲಿ, ಯಾವ ಕಲ್ಲುಗುಂಡಿರುವ ಮಡುವಿನಲ್ಲಿ ಬೀಳಲಿ, ಯಾವ ಆಯುಧಕ್ಕೆ ನನ್ನನ್ನು ಒಡ್ಡಿ ಪ್ರಾಣವನ್ನು ಬಿಡಲಿ, ಯಾವ ಬೆಂಕಿಗೆ ಹಾಯಲಿ ಎಂದು ದ್ರೌಪದಿಯು ದುಃಖಿತಳಾಗಿ ಚಿಂತಿಸಿದಳು.

ಅರ್ಥ:
ಗರಳ: ವಿಷ; ಕುಡಿ: ಪಾನಮಾಡು; ಮೇಣ್: ಅಥವ; ಬೆಟ್ಟ: ಗಿರಿ; ಅಡರು: ಹತ್ತು; ಬೀಳು: ಕುಸಿ; ಮಡು: ಸುಳಿ; ಹೊಗು: ಸೇರು; ಹಾಸರೆ: ಪ್ರಯಾಣ; ಗುಂಪು: ಸಮೂಹ; ಕುಂತ:ಈಟಿ, ಭರ್ಜಿ; ಹಾಯ್ದು: ಹೊಡೆ, ಹಾರು; ಪಾವಕ: ಬೆಂಕಿ; ಸಾವು: ಮರಣ; ಸಮನಿಸು: ಘಟಿಸು, ದೊರಕು; ಮರುಗು: ದುಃಖಿಸು; ಕಮಲಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ಆವ+ ಗರಳವ+ ಕುಡಿವೆನೋ +ಮೇಣ್
ಆವ +ಬೆಟ್ಟವನ್+ಅಡರಿ +ಬೀಳ್ವೆನೊ
ಆವ +ಮಡುವನು +ಹೊಗುವೆನೋ +ಹಾಸರೆಯ +ಗುಂಪಿನಲಿ
ಆವ +ಕುಂತವ +ಹಾಯ್ವೆನೋ +ಮೇಣ್
ಆವ +ಪಾವಕನೊಳಗೆ+ ಬೀಳ್ವೆನೊ
ಸಾವು +ಸಮನಿಸದ್+ಎನಗೆನುತ +ಮರುಗಿದಳು+ ಕಮಲಾಕ್ಷಿ

ಅಚ್ಚರಿ:
(೧) ಆತ್ಮಹತ್ಯೆಗೆ ಯೋಚಿಸುತ್ತಿರುವ ಪರಿ – ಗರಳ, ಬೆಟ್ಟ, ಪಾವಕ, ಮಡು, ಕುಂತ

ಪದ್ಯ ೨೮: ಕರ್ಣನಿಗೆ ಅರ್ಜುನನು ಹೇಗೆ ಉತ್ತರಿಸಿದನು?

ಆವ ಹಂಜರಕೂಳಿ ಮೊಗವಲೆ
ಯಾವಗಾನವು ಬೀಸುವಲೆಯುರೆ
ತೀವಿದುದಕದ ಮಡುವೆಯಿದು ಸಂಗ್ರಾಮಭೂಮಿ ಕಣಾ
ಹೇವವಿಲ್ಲದೆ ಕಾದಬೇಹುದು
ಧೀವರರವೋಲ್ ತಡಿಕೆವಲೆಯಲಿ
ಲಾವುಗೆಯ ಹೊಯ್ದಂದವಲ್ಲೆನುತೆಚ್ಚನಾ ಪಾರ್ಥ (ಕರ್ಣ ಪರ್ವ, ೨೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅರ್ಜುನನು, ಇದು ಮೀನು ಹಿಡಿಯುವ ಬುಟ್ಟಿಯೋ, ಮೊಗವಲೆಯೋ, ಗಾಳವೋ, ಬೀಸುವಬಲೆಯೋ, ನೀರು ತುಂಬಿದ ಮಡುವೋ? ಇದನ್ನೇನೆಂದು ತಿಳಿದೆ ಇದು ಯುದ್ಧರಂಗ, ಇಲ್ಲಿ ಹೇವವಿಲ್ಲದ ಯುದ್ಧಮಾಡಬೇಕು. ಬೆಸ್ತರಂತೆ ತಡಿಕೆ ಬಲೆಯಲ್ಲಿ ಪುರಲೆಯನ್ನು ಹಿಡಿದು ಕೊಂದಹಾಗಿಲ್ಲ ಎಂದು ಅರ್ಜುನನು ಕರ್ಣನನ್ನು ಬಾಣಗಳಿಂದ ಹೊಡೆದನು.

ಅರ್ಥ:
ಹಂಜರ: ಪಂಜರ; ಕೂಳಿ: ತಗ್ಗು; ಮೊಗವಲೆ: ಮಖಕ್ಕೆ ಹಾಕುವ ಬಲೆ; ಗಾಣ: ಗಾಳ, ಬಲೆಯ ಕೊಕ್ಕು; ಬೀಸು: ಒಗೆ, ಎಸೆ; ಬಲೆ: ಮೋಸ, ವಂಚನೆ, ಬಂಧನ; ಉರೆ: ಅತಿಶಯವಾಗಿ; ತೀವು: , ಚೆಲ್ಲು, ಹರಡು; ಉದಕ: ನೀರು; ಮಡು: ಹಳ್ಳ, ಕೊಳ್ಳ, ಮಡುವು; ಸಂಗ್ರಾಮ: ಯುದ್ಧ; ಭೂಮಿ: ನೆಲ; ಹೇವ: ಅವಮಾನ, ತಿರಸ್ಕಾರ; ಕಾದು: ಹೋರಾಡು; ಧೀವರ: ಮೀನುಗಾರ, ಬೆಸ್ತ; ತಡಿಕೆ: ಬಿದಿರಿನ ತಟ್ಟಿ; ವಲೆ: ಬಲೆ, ಪ್ರಾಣಿಯನ್ನು ಹಿಡಿಯುವ ಸಾಧನ; ಹೊಯ್ದು: ಹೊಡೆದು; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಆವ +ಹಂಜರ+ಕೂಳಿ+ ಮೊಗವಲೆ
ಆವ +ಗಾಣವು +ಬೀಸುವಲೆ+ಉರೆ
ತೀವಿದ್+ಉದಕದ +ಮಡುವೆ+ಇದು +ಸಂಗ್ರಾಮಭೂಮಿ +ಕಣಾ
ಹೇವವಿಲ್ಲದೆ +ಕಾದಬೇಹುದು
ಧೀವರರವೋಲ್ +ತಡಿಕೆ+ವಲೆಯಲಿ
ಲಾವುಗೆಯ +ಹೊಯ್ದಂದವಲ್+ಎನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಹಲವಾರು ಸಾಧನಗಳ ಉದಾಹರಣೆ ನೀಡಿರುವುದು – ಹಂಜರಕೂಳಿ, ಮೊಗವಲೆ, ಗಾಣ, ಬೀಸುವಬಲೆ, ಮಡು
(೨) ಉಪಮಾನದ ಪ್ರಯೋಗ – ಹೇವವಿಲ್ಲದೆ ಕಾದಬೇಹುದು ಧೀವರರವೋಲ್

ಪದ್ಯ ೪೯: ಪಂಡಿತನ ಲಕ್ಷಣವೇನು?

ಬಲುಹರಿದು ಕೋಪಿಸುವ ಬದುಕಿನ
ಬಳಿಯರಿದು ಕೊಡುವಾತ್ಮಹಿತವನು
ತಿಳಿದು ನಿರ್ಮಲವೆನಿಪ ಮೇಲಣ ತಾಗು ಬಾಗುಗಳ
ಹೊಲಬರಿದು ಸುಖ ದುಃಖದಲಿ ಸಂ
ಚಲಿಸದಿಹ ಗಂಗೆಯ ಮಡುವಿನಂ
ತೊಳಗುದೋರದೆ ನಡೆವವನು ಪಂಡಿತನು ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪಂಡಿತನ ಲಕ್ಷಣವನ್ನು ಈ ಪದ್ಯದಲ್ಲಿ ವಿದುರ ಉಲ್ಲೇಖಿಸುತ್ತಾರೆ. ಪಂಡಿತನಾದವನು ತನ್ನ ಶಕ್ತಿಯನ್ನರಿತು ಕೋಪಗೊಳ್ಳುತ್ತಾನೆ, ತನ್ನ ಬದುಕಿಗೆ ಬೇಕಾಗುವಷ್ಟನ್ನಿಟ್ಟುಕೊಂಡು ಉಳಿದದ್ದನ್ನು ದಾನ ಮಾಡುತ್ತಾನೆ, ತನ್ನ ಹಿತವನ್ನೂ ಮುಂದುಟಾಗಬಹುದಾದ ಏಳು ಬೀಳುಗಳ ದಾರಿಯನ್ನರಿತು ಸುಖ ದುಃಖಗಳಲ್ಲಿ ವಿಕಾರಗೊಳ್ಳದೆ ಗಂಗೆಯ ಮಡುವಿನಂತೆ ತನ್ನ ಅಂತರಂಗವನ್ನು ಹೊರಗಡೆ ತೋರದೆ ಮುನ್ನಡೆಯುತ್ತಾನೆ. ಇದು ಪಂಡಿತನ ಲಕ್ಷಣ ಎಂದು ವಿದುರ ಧೃತರಾಷ್ಟ್ರನಿಗೆ ಹೇಳಿದ.

ಅರ್ಥ:
ಬಲುಹ: ಶಕ್ತಿ; ಅರಿ: ತಿಳಿ; ಕೋಪ: ಕ್ರೋಧ; ಬದುಕು: ಜೀವನ; ಬಳಿ: ಹತ್ತಿರ; ಕೊಡು: ನೀಡು; ಆತ್ಮ: ಜೀವ; ಹಿತ: ಪ್ರಿಯಕರವಾದುದು; ತಿಳಿ: ಅರಿ; ನಿರ್ಮಲ: ಶುದ್ಧತೆ, ಸ್ವಚ್ಛತೆ; ಮೇಲಣ: ಮುಂಬರುವ; ತಾಗುಬಾಗು: ಏಳುಬೀಳು; ಹೊಲಬು: ದಾರಿ, ಪಥ; ಸುಖ: ಸಂತೋಷ; ದುಃಖ: ದುಗುಡ; ಸಂಚಲಿಸು: ನಡೆದಾಡು; ಗಂಗೆ: ನೀರು, ಸರೋವರ, ಪವಿತ್ರ ನದಿ; ಮಡು:ಆಳವಾದ ನೀರಿರುವ ಪ್ರದೇಶ; ಒಳಗೆ: ಆಂತರ್ಯ; ತೋರು: ಪ್ರಕಟಿಸು; ನಡೆ: ಚಲಿಸು; ಪಂಡಿತ: ವಿದ್ವಾಂಸ;

ಪದವಿಂಗಡಣೆ:
ಬಲುಹ +ಅರಿದು +ಕೋಪಿಸುವ+ ಬದುಕಿನ
ಬಳಿ+ಯರಿದು +ಕೊಡುವ+ಆತ್ಮಹಿತವನು
ತಿಳಿದು +ನಿರ್ಮಲವೆನಿಪ +ಮೇಲಣ +ತಾಗು +ಬಾಗುಗಳ
ಹೊಲಬ+ಅರಿದು+ ಸುಖ +ದುಃಖದಲಿ+ ಸಂ
ಚಲಿಸದಿಹ +ಗಂಗೆಯ +ಮಡುವಿನಂತ್
ಒಳಗುದೋರದೆ +ನಡೆವವನು +ಪಂಡಿತನು +ಕೇಳೆಂದ

ಅಚ್ಚರಿ:
(೧) ಅರಿ, ತಿಳಿ – ಸಮನಾರ್ಥಕ ಪದ; ಅರಿ – ೩ ಬಾರಿ ಪ್ರಯೋಗ
(೨) ಸುಖ ದುಃಖ, ತಾಗು ಬಾಗು – ಜೋಡಿ ಪದಗಳ ಬಳಕೆ
(೩) ಉಪಮಾನ – ಗಂಗೆಯ ಮಡುವಿನಂತೊಳಗುದೋರದೆ ನಡೆವವನು

ಪದ್ಯ ೧೫: ಕೌರವರ ದುಷ್ಕೃತ್ಯಕ್ಕೆ ಭೀಮನು ಹೇಗೆ ಉತ್ತರಿಸಿದನು?

ಮಡುವಿನಲ್ಲಿ ಹಾಯ್ಕಿದಿರಿ ಹಾವಿನ
ಹೆಡೆಯ ಕೊಂಡೂರಿದಿರಿ ಬಲುವಿಷ
ದಡಿಗೆಗಳ ಮೆಲಿಸಿದಿರಿ ಬಲ್ಲಂದದ ವಿಕಾರದಲಿ
ಕೆಡಹಲನು ಮಾಡಿದಿರಿ ನೂರ್ವರ
ಕಡಿದು ಶಾಕಿನಿಯರಿಗೆ ರಕುತವ
ಕುಡಿಸಿದಲ್ಲದೆ ಮುನ್ನ ಸಾವನೆ ಕೇಳಿ ನೀವೆಂದ (ಆದಿ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅತ್ಯಂತ ಕೋಪ ಗೊಂಡ ಭೀಮನು ಕೌರವರ ಮೇಲೆ ಹರಿಹಾಯ್ದನು, ನಾನು ಸುಮ್ಮನಿದ್ದರು ನೀವು ನಾನು ಮಲಗಿದ್ದಾಗ ಮಡುವಿನಲ್ಲಿ ಹಾಕಿದಿರಿ, ಮೈಮರೆಸಿ ಹಾವುಗಳಿಂದ ಕಚ್ಚಿಸಿದಿರಿ, ತಿಳಿಯದೆ ವಿಷಬೆರೆಸಿದ ತಿನಿಸುಗಳನ್ನು ತಿನ್ನಿಸಿದಿರಿ, ನಿಮಗೆ ತಿಳಿದ ಇನ್ನು ಹಲವು ವಿಕಾರ ಮಾರಗಗಳನ್ನು ಬಳಸಿ ನನ್ನನ್ನು ಸಾಯಿಸಲು ಹೊಂಚು ಹಾಕಿದಿರಿ. ಆದರೆ ನೀವು ಮಾಡಿದ ಕುತಂತ್ರಗಳಿಗೆ ನಾನು ಸುಮ್ಮನಿರುವುದಿಲ್ಲ ನೀವು ನೂರು ಜನರ ರಕ್ತವನ್ನು ಶಾಕಿನಿಯರಿಗೆ ಕುಡಿಸದೆ ನಾನು ಸಾಯುವೇನೆ ಎಂದು ಪ್ರಶ್ನಿಸಿದ.

ಅರ್ಥ:
ಮಡು: ಸರೋವರದಲ್ಲಿ ಆಳವಾದ ಜಾಗ; ಹಾಕು: ತಳ್ಳು, ಬಿಸಾಕು
ಹಾವು: ಉರಗ, ಸರ್ಪ; ಉರಿ: ಸಂಕಟ
ಮೆಲಿಸು: ತಿನ್ನಿಸು; ಬಲ್ಲು: ತಿಳಿದ
ಕೆಡ: ಕೆಡಕು, ತೊಂದರೆ; ಮಾಡು: ನಡೆಸು, ನಿರ್ವಹಿಸು
ಶಾಕಿನಿ: ಕ್ಷುದ್ರ ದೇವತೆ; ರಕ್ತ: ನೆತ್ತರು
ಕಡಿ: ಕತ್ತರಿಸು; ಕುಡಿಸು: ಪಾನಮಾಡು
ಮುನ್ನ: ಮುಂಚೆ; ಸಾವು: ಮರಣ; ಕೇಳಿ: ಆಲಿಸಿ

ಪದವಿಂಗಡಣೆ:
ಮಡುವಿನಲ್ಲಿ +ಹಾಯ್ಕಿದಿರಿ +ಹಾವಿನ
ಹೆಡೆಯ +ಕೊಂಡ್+ಊರಿದಿರಿ +ಬಲುವಿಷದ್
ಅಡಿಗೆಗಳ +ಮೆಲಿಸಿದಿರಿ+ ಬಲ್ಲಂದದ +ವಿಕಾರದಲಿ
ಕೆಡಹಲನು +ಮಾಡಿದಿರಿ+ ನೂರ್ವರ
ಕಡಿದು +ಶಾಕಿನಿಯರಿಗೆ+ ರಕುತವ
ಕುಡಿಸಿದಲ್ಲದೆ +ಮುನ್ನ +ಸಾವನೆ +ಕೇಳಿ +ನೀವೆಂದ

ಅಚ್ಚರಿ:
(೧) ಕೊನೆಯ ಮೂರುಸಾಲಿನ ಮೊದಲ ಪದಗಳು: ಕೆಡ, ಕಡಿ, ಕುಡಿ
(೨) “ದಿರಿ” ಪದ ೪ ಬಾರಿ ಪ್ರಯೋಗ – ಮೊದಲ ೪ ಸಾಲುಗಳಲ್ಲಿ
(೩) ಕೆಡಹು, ಸಾವು – ಒಂದೇ ಅರ್ಥ ಕೊಡುವ ಪದಗಳು