ಪದ್ಯ ೫: ಭೀಮ ದುರ್ಯೊಧನರ ಗದಾಯುದ್ಧವನ್ನು ಯಾರು ಹೇಗೆ ಹೊಗಳಿದರು?

ಬೆರಳ ತೂಗಿದನಡಿಗಡಿಗೆ ಹಲ
ಧರನುದಗ್ರ ಗದಾ ವಿಧಾನಕೆ
ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು
ವರ ಗದಾಯುಧ ವಿವಿಧ ಸತ್ವಕೆ
ಪರಮಜೀವವಿದೆಂದನರ್ಜುನ
ನರರೆ ಮಝರೇ ರಾವು ಜಾಗೆಂದುದು ಭಟವ್ರಾತ (ಗದಾ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಬಲರಾಮನು ಅವರಿಬ್ಬರ ಗದಾಯುದ್ಧದ ವಿಧಾನವನ್ನು ನೋಡಿ, ಮೆಚ್ಚಿ, ಅವರಿಟ್ಟ ಒಂದೊಂದು ಹೆಜ್ಜೆಗೂ ಬೆರಳನ್ನು ತೂಗಿದನು. ಶ್ರೀಕೃಷ್ಣನು ಸಹ ಮೆಚ್ಚಿ ತಲೆಯಾಡಿಸಿದನು. ಯುಧಿಷ್ಠಿರನು ಅತಿಶಯವಾಗಿ ಮೆಚ್ಚಿದನು. ಅರ್ಜುನನು ಗದಾಯುದ್ಧದ ಹಲವು ವಿಧದ ರೀತಿಗಳಿಗೆ ಇದು ಭೂಷಣವೆಂದು ಹೊಗಳಿದನು. ಪರಿವಾರದ ಯೋಧರು ಅರರೇ, ಭಲೇ, ರಾವು, ಜಾಗು ಎಂದು ಕೊಂಡಾಡಿದರು.

ಅರ್ಥ:
ಬೆರಳು: ಅಂಗುಲಿ; ತೂಗು: ಅಲ್ಲಾಡಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಹಲಧರ: ಬಲರಾಮ; ಉದಗ್ರ: ವೀರ, ಶೂರ; ಗದೆ: ಮುದ್ಗರ; ವಿಧಾನ: ರೀತಿ; ಶಿರ: ತಲೆ; ಒಲೆ: ತೂಗಾಡು; ಶೌರಿ: ಕೃಷ್ಣ; ಮಿಗೆ: ಮತ್ತು, ಅಧಿಕ; ಮೆಚ್ಚು: ಇಷ್ಟಪಡು; ಸೂನು: ಮಗ; ವರ: ಶ್ರೇಷ್ಠ; ವಿವಿಧ: ಹಲವಾರು; ಸತ್ವ: ಸಾರ; ಪರಮ: ಶ್ರೇಷ್ಠ; ಜೀವ: ಪ್ರಾಣ; ಅರರೆ: ಆಶ್ಚರ್ಯ ಸೂಚಕ ಪದ; ಮಝ: ಭಲೇ; ರಾವು: ದಿಗ್ಭ್ರಮೆ; ಜಾಗು:ಹೊಗಳಿಕೆ ಮಾತು; ಭಟ: ಸೈನಿಕ; ವ್ರಾತ: ಗುಂಪು;

ಪದವಿಂಗಡಣೆ:
ಬೆರಳ +ತೂಗಿದನ್+ಅಡಿಗಡಿಗೆ +ಹಲ
ಧರನ್+ಉದಗ್ರ+ ಗದಾ +ವಿಧಾನಕೆ
ಶಿರವನ್+ಒಲೆದನು +ಶೌರಿ +ಮಿಗೆ +ಮೆಚ್ಚಿದನು +ಯಮಸೂನು
ವರ +ಗದಾಯುಧ +ವಿವಿಧ +ಸತ್ವಕೆ
ಪರಮ+ಜೀವವಿದ್+ಎಂದನ್+ಅರ್ಜುನನ್
ಅರರೆ +ಮಝರೇ +ರಾವು +ಜಾಗೆಂದುದು +ಭಟ+ವ್ರಾತ

ಅಚ್ಚರಿ:
(೧) ಮೆಚ್ಚುಗೆಯ ಮಾತುಗಳು – ಅರರೆ, ಮಝರೇ, ರಾವು, ಜಾಗು
(೨) ತೂಗು, ಒಲೆದು – ಸಾಮ್ಯಾರ್ಥ ಪದ
(೩) ಒಂದೇ ಪದವಾಗಿ ರಚನೆ – ಪರಮಜೀವವಿದೆಂದನರ್ಜುನ

ಪದ್ಯ ೨೭: ಶಲ್ಯನನ್ನು ಹೇಗೆ ಹೊಗಳಿದರು?

ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇಅ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು (ಶಲ್ಯ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಾತ್ಯಕಿ ಸೋಮಕ ಮೊದಲಾದವರು, ಭಲೇ, ಕರ್ನನ ಸೇಡನ್ನು ತೀರಿಸಲು ಶಲ್ಯನು ಮುಂದಾದನೇ? ಇವನೇ ಸೇನಾಧಿಪತಿಯಾಗಲು ಅರ್ಹನಾದ ವೀರನು. ನಿಲುಮೆ, ಸತ್ವ, ನಿರ್ಭೀತಿ ದರ್ಪಗಳು ಇವನಲ್ಲಿ ಎದ್ದುಕಾಣುತ್ತಿದೆ ಎಂದು ಶಲ್ಯನನ್ನು ಹೊಗಳಿದರು.

ಅರ್ಥ:
ಪೂತು: ಭಲೇ; ಮಝ: ಕೊಂಡಾಟದ ಮಾತು; ಹೊಕ್ಕು: ಸೇರು; ಸೂತಜ: ಸೂತನ ಮಗ (ಕರ್ಣ); ಹರಿಬ: ಕೆಲಸ, ಕಾರ್ಯ; ವೀರ: ಶೂರ; ವ್ರಾತ: ಗುಂಪು; ಗಣನೆ: ಲೆಕ್ಕ; ಧಾತು: ಮೂಲ ವಸ್ತು, ತೇಜಸ್ಸು; ದಿಟ್ಟ: ನಿಜ; ನಿರ್ಭೀತ: ಭಯವಿಲ್ಲದ; ಗರ್ವಿತ: ಅಹಂಕಾರಿ; ಭಟ: ಸೈನಿಕ; ಹೊಗಳು: ಪ್ರಶಂಶಿಸು; ಆದಿ: ಮುಂತಾದ;

ಪದವಿಂಗಡಣೆ:
ಪೂತು +ಮಝರೇ +ಶಲ್ಯ+ ಹೊಕ್ಕನೆ
ಸೂತಜನ+ ಹರಿಬದಲಿ +ವೀರ
ವ್ರಾತ+ಗಣನೆಯೊಳ್+ಈತನೊಬ್ಬನೆ +ಹಾ +ಮಹಾದೇವ
ಧಾತುವೊಳ್ಳಿತು+ ದಿಟ್ಟನೈ +ನಿ
ರ್ಭೀತ+ಗರ್ವಿತನ್+ಇವನೆನುತ +ಭಟರ್
ಈತನನು +ಹೊಗಳಿದರು +ಸಾತ್ಯಕಿ +ಸೋಮಕಾದಿಗಳು

ಅಚ್ಚರಿ:
(೧) ಶಲ್ಯನನ್ನು ಹೊಗಳಿದ ಪರಿ – ಧಾತುವೊಳ್ಳಿತು, ದಿಟ್ಟ, ನಿರ್ಭೀತ, ಗರ್ವಿತ

ಪದ್ಯ ೨೪: ದುರ್ಯೋಧನನು ತನ್ನವರನ್ನು ಹೇಗೆ ಮೂದಲಿಸಿದನು?

ಕಾಲ ವಹಿಲವ ಕಲಿಸಲೋಸುಗ
ಕೋಲಗುರು ಜಾರಿದನು ಶಲ್ಯನ
ಮೇಲು ಮುಸುಕನುವಾಯ್ತು ಬಿರುದೇನಾಯ್ತು ಗುರುಸುತನ
ಆಳುವಾಸಿಯ ಕಡುಹು ಕರ್ಣನ
ಬೀಳುಕೊಂಡುದು ಪೂತು ಮಝರೇ
ಬಾಲ ಎಂದವನೀಶ ಮೂದಲಿಸಿದನು ತನ್ನವರ (ದ್ರೋಣ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಓಡುವುದು ಹೇಗೆಂದು ತೋರಿಸಲು ದ್ರೋಣನು ಓಡಿಬಂದ, ಶಲ್ಯನು ತನ್ನಲ್ಲಿದ್ದ ಉತ್ತರೀಯದ ಮುಸುಕನ್ನು ಹಾಕಿಕೊಂಡ, ಅಶ್ವತ್ಥಾಮನ ಬಿರುದು ಏನಾಯಿತು? ಹೋಗಲಿ, ತಾನು ವೀರ ಛಲಗಾರ ಎಂಬ ಪರಾಕ್ರಮ ಕರ್ಣನಿಂದ ಜಾರಿ ಹೋಯಿತು, ಭಲೇ ಬಾಲಕ ಎಂದು ದುರ್ಯೋಧನನು ನುಡಿದನು.

ಅರ್ಥ:
ಕಾಲ: ಸಮಯ; ವಹಿಲ: ಬೇಗ, ತ್ವರೆ; ಕಲಿಸು: ತಿಳಿಸು; ಓಸುಗ: ಓಸ್ಕರ; ಕೋಲಗುರು: ಬಾಣವನ್ನು ಉಪಯೋಗಿಸಲು ಕಲಿಸುವ ಆಚಾರ್ಯ (ದ್ರೋಣ); ಜಾರು: ಕೆಳಗೆ ಬೀಳು; ಮುಸುಕು: ಹೊದಿಕೆ; ಅನುವು:ಸೊಗಸು; ಬಿರುದು: ಗೌರವಸೂಚಕ ಪದ; ಗುರು: ಆಚಾರ್ಯ; ಸುತ: ಮಗ; ಆಳು: ಸೈನಿಕ, ದೂತ; ಕಡು: ವಿಶೇಷ, ಅಧಿಕ; ಬೀಳುಕೊಂಡು: ತೆರಳು; ಪೂತು: ಭಲೇ; ಮಝರೇ: ಭೇಷ; ಬಾಲ: ಚಿಕ್ಕವ; ಅವನೀಶ: ರಾಜ; ಮೂದಲಿಸು: ಹಂಗಿಸು; ತನ್ನವ: ಜೊತೆಯವರು; ಶಲ್ಯ: ಉತ್ತರೀಯ, ಮದ್ರ ದೇಶದ ರಾಜ;

ಪದವಿಂಗಡಣೆ:
ಕಾಲ +ವಹಿಲವ +ಕಲಿಸಲೋಸುಗ
ಕೋಲಗುರು +ಜಾರಿದನು+ ಶಲ್ಯನ
ಮೇಲು +ಮುಸುಕ್+ಅನುವಾಯ್ತು +ಬಿರುದೇನಾಯ್ತು +ಗುರುಸುತನ
ಆಳುವಾಸಿಯ +ಕಡುಹು +ಕರ್ಣನ
ಬೀಳುಕೊಂಡುದು +ಪೂತು +ಮಝರೇ
ಬಾಲ +ಎಂದ್+ಅವನೀಶ +ಮೂದಲಿಸಿದನು +ತನ್ನವರ

ಅಚ್ಚರಿ:
(೧) ಮೂದಲಿಸುವ ಪರಿ – ಆಳುವಾಸಿಯ ಕಡುಹು ಕರ್ಣನ ಬೀಳುಕೊಂಡುದು; ಕಾಲ ವಹಿಲವ ಕಲಿಸಲೋಸುಗ ಕೋಲಗುರು ಜಾರಿದನು

ಪದ್ಯ ೯೬: ರಥಿಕರು ಹೇಗೆ ಹುರಿದುಂಬಿಸುತ್ತಿದ್ದರು?

ಪೂತು ಸಾರಥಿ ಭಾಪು ಮಝರೇ
ಸುತ ಧಿರುಧಿರು ಎನುತ ರಥಿಕ
ವ್ರಾತ ಮಿಗೆ ಬೋಳೈಸಿ ಕೊಂಡರು ಹಯದ ವಾಘೆಗಳ
ಆ ತುರಂಗದ ಖುರಪುಟದ ನವ
ಶಾತಕುಂಭದ ಗಾಲಿಯುರುಬೆಯ
ನಾ ತತುಕ್ಷಣವಾಂಪರಾರೆನೆ ಕವಿದುದುಭಯದೊಳು (ಭೀಷ್ಮ ಪರ್ವ, ೪ ಸಂಧಿ, ೯೬ ಪದ್ಯ)

ತಾತ್ಪರ್ಯ:
ಭಲೇ, ಮಝರೇ, ಭಾಪು, ಸಾರಥಿ ಎಂದು ರಥಿಕರು ಸಾರಥಿಗಳನ್ನು ಹುರಿದುಂಬಿಸುತ್ತಿದ್ದರು. ಬಂಗಾರದ ಗಾಲಿಗಳು ಕುದುರೆಗಳ ಖುರಪುಟದ ವೇಗಕ್ಕನುಸಾರವಾಗಿ ಚಲಿಸಿದವು. ಇವರನ್ನು ತಡೆಯಬಲ್ಲವರಾರು ಎಂದು ಆಶ್ಚರ್ಯಪಡುವಂತೆ ಎರಡು ಸೈನ್ಯಗಳ ರಥಿಕರೂ ಒಬ್ಬರನ್ನೊಬ್ಬರು ತಾಗಿದರು.

ಅರ್ಥ:
ಪೂತು: ಭಲೇ, ಭೇಷ್; ಸಾರಥಿ: ಸೂತ; ಭಾಪು: ಭಲೇ; ಮಝ: ಕೊಂಡಾಟದ ಒಂದು ಮಾತು, ಭಲೇ; ಸೂತ: ಸಾರಥಿ; ಧಿರುಧಿರು: ವೇಗವಾಗಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ವ್ರಾತ: ಗುಂಪು; ಮಿಗೆ: ಅಧಿಕ; ಬೋಳೈಸು: ಸಂತೈಸು, ಸಮಾಧಾನ ಮಾಡು; ಹಯ: ಕುದುರೆ; ವಾಘೆ: ಲಗಾಮು; ತುರಂಗ: ಕುದುರೆ; ಖುರಪುಟ: ಗೊರಸು; ನವ: ಹೊಸ; ಶಾತಕುಂಭ: ಚಿನ್ನ, ಹಿರಣ್ಯ; ಗಾಲಿ: ಚಕ್ರ; ಉರುಬು: ಅತಿಶಯವಾದ ವೇಗ; ಕ್ಷಣ: ಸಮಯ; ಕವಿ: ಆವರಿಸು; ಉಭಯ: ಎರಡು;

ಪದವಿಂಗಡಣೆ:
ಪೂತು +ಸಾರಥಿ+ ಭಾಪು +ಮಝರೇ
ಸುತ +ಧಿರುಧಿರು +ಎನುತ +ರಥಿಕ
ವ್ರಾತ +ಮಿಗೆ +ಬೋಳೈಸಿ +ಕೊಂಡರು +ಹಯದ +ವಾಘೆಗಳ
ಆ +ತುರಂಗದ +ಖುರಪುಟದ +ನವ
ಶಾತಕುಂಭದ +ಗಾಲಿ+ಉರುಬೆಯನ್
ಆ+ ತತುಕ್ಷಣವಾಂಪರ್+ಆರೆನೆ +ಕವಿದುದ್+ಉಭಯದೊಳು

ಅಚ್ಚರಿ:
(೧) ಪೂತು, ಭಾಪು, ಮಝರೇ – ಹುರಿದುಂಬಿಸುವ ಮಾತು

ಪದ್ಯ ೧೯: ಯುದ್ಧದ ಹವಿಸ್ಸಿಗೆ ಏನನ್ನು ಅರ್ಪಿಸಿದರು?

ವೀರ ಧಣುಧಣು ಪೂತರೇ ಬಿಲು
ಗಾರ ಮಝರೇ ಚಾಪತಂತ್ರವಿ
ಶಾರದಾ ಎನುತೊಬ್ಬ ರೊಬ್ಬರ ಬಿರುದ ಮೂದಲಿಸಿ
ಓರಣದ ಕಣೆಗಳಲಿ ತಲೆಗಳ
ತೋರಣವ ಕಟ್ಟಿದರು ಸೇನಾ
ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ (ಭೀಷ್ಮ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭಲೇ ವೀರ, ಬಿಲ್ಲುಗಾರ ಭಲರೇ, ಬಿಲ್ಲುವಿದ್ಯೆಯ ಪಂಡಿತರೇ ಭಲೇ, ಎಂದು ಒಬ್ಬರೊಬ್ಬರನ್ನು ಮೂದಲಿಸುತ್ತಾ, ಬಿಲ್ಲುಗಾರರು ತಮ್ಮ ಬಾಣಗಳಿಂದ ಶತ್ರುಗಳ ತಲೆಯ ತೋರಣವನ್ನು ಕಟ್ಟಿದರು. ಸೇನೆಯ ಮಾರಣಯಜ್ಞವು ರಕ್ತಧಾರೆಯ ತುಪ್ಪದ ಹವಿಸ್ಸಿನಿಂದ ಮುಂದುವರೆಯಿತು.

ಅರ್ಥ:
ವೀರ: ಪರಾಕ್ರಮ; ಧಣುಧಣು: ಕೊಂಡಾಟದ ನುಡಿ; ಪೂತು: ಪವಿತ್ರ, ಶುದ್ಧ; ಬಿಲ್ಲು: ಚಾಪ; ಮಝ: ಭಲೇ; ಚಾಪ: ಬಿಲ್ಲು; ತಂತ್ರ: ರಹಸ್ಯಮಯ ವಿದ್ಯೆ; ವಿಶಾರದ: ಪಂಡಿತ; ಬಿರುದು: ಗೌರವಸೂಚಕ ಹೆಸರು; ಮೂದಲಿಸು: ಹಂಗಿಸು; ಓರಣ: ಕ್ರಮ, ಸಾಲು; ಕಣೆ: ಬಾಣ; ತಲೆ: ಶಿರ; ತೋರಣ: ಹೆಬ್ಬಾಗಿಲು; ಕಟ್ಟು: ನಿರ್ಮಿಸು; ಸೇನ: ಸೈನ್ಯ; ಮಾರಣ:ಕೊಲೆ, ವಧೆ; ಅಧ್ವರ: ಯಜ್ಞ, ಯಾಗ; ಎಸೆ: ತೋರು; ಅರುಣ: ಕೆಂಪು; ಜಲ: ನೀರು; ಅರುಣಜಲ: ರಕ್ತ; ಆಜ್ಯ: ತುಪ್ಪ, ಘೃತ; ಧಾರೆ: ಪ್ರವಾಹ;

ಪದವಿಂಗಡಣೆ:
ವೀರ +ಧಣುಧಣು +ಪೂತರೇ +ಬಿಲು
ಗಾರ +ಮಝರೇ +ಚಾಪತಂತ್ರ+ವಿ
ಶಾರದಾ +ಎನುತ್+ಒಬ್ಬರೊಬ್ಬರ +ಬಿರುದ +ಮೂದಲಿಸಿ
ಓರಣದ +ಕಣೆಗಳಲಿ +ತಲೆಗಳ
ತೋರಣವ +ಕಟ್ಟಿದರು +ಸೇನಾ
ಮಾರಣ+ಅಧ್ವರವ್+ ಎಸೆದುದ್+ಅರುಣ+ಜಲ+ಆಜ್ಯ+ಧಾರೆಯಲಿ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸುವ ಪರಿ – ಸೇನಾ ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ
(೨) ಧಣುಧಣು, ಮಝರೇ , ಪೂತರೇ – ಕೊಂಡಾಟದ ಮಾತುಗಳು
(೩) ಬಿಲ್ಲುಯುದ್ಧದ ತೀವ್ರತೆ – ಓರಣದ ಕಣೆಗಳಲಿ ತಲೆಗಳ ತೋರಣವ ಕಟ್ಟಿದರು

ಪದ್ಯ ೪೩: ಕೌರವನ ಮಲ್ಲರು ಭೀಮನಿಗೆ ಏನು ಹೇಳಿದರು?

ದಿಟ್ಟನಹೆ ಬಾಣಸಿನ ಮನೆಯಲಿ
ಕಟ್ಟುಳಿಲ್ಲದ ಕೂಳ ತಿಂದುರೆ
ಹೊಟ್ಟೆಯನು ನೆರೆ ಬೆಳೆಸಿ ದೇಹದಲುಬ್ಬಿ ಕೊಬ್ಬಿನಲಿ
ಹೊಟ್ಟುಗುಟ್ಟದೊಡಾಗದೆಲೆ ಜಗ
ಜಟ್ಟಿಗಳ ಕೂಡಕಟ ಮಝರೇ
ಬಿಟ್ಟು ಸುಮ್ಮನೆ ಹೋಗು ನಿನಗಳವಲ್ಲ ಹೋಗೆಂದ (ವಿರಾಟ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೌರವನ ಮಲ್ಲರಲ್ಲೊಬ್ಬನಾದ ಸಿಂಧುರನು, ನೀನು ಧೈರ್ಯಶಾಲಿ, ಅಡುಗೆ ಮನೆಯಲ್ಲಿ ಮಿತಿಯಿಲ್ಲದೆ ಕೂಳನ್ನು ತಿಂದು ಹೊಟ್ಟೆಯನ್ನು ಬೆಳೆಸಿ, ಕೊಬ್ಬಿನಿಂದ ಜಗಜಟ್ಟಿಗಳೊಡನೆ ಮಲ್ಲಯುದ್ಧಕ್ಕೆ ಬಂದೆಯಾ? ಭಲೇ ಸುಮ್ಮನೆ ಹೋಗಿ ಬಿಡು, ಇದು ನಿನ್ನ ಕೈಲಾಗದ ಮಾತು ಎಂದನು.

ಅರ್ಥ:
ದಿಟ್ಟ: ಧೈರ್ಯಶಾಲಿ, ಸಾಹಸಿ; ಬಾಣಸಿ: ಅಡುಗೆಯವ; ಮನೆ: ಆಲಯ; ಕಟ್ಟು:ಬಂಧ; ಕೂಳು: ಊಟ; ತಿಂದು: ಊಟಮಾದು; ಹೊಟ್ಟೆ: ಉದರ; ನೆರೆ: ಜೊತೆ, ಪಕ್ಕ; ಬೆಳೆಸು: ವೃದ್ಧಿಸು; ದೇಹ: ಕಾಯ; ಉಬ್ಬು: ಹೆಚ್ಚು; ಕೊಬ್ಬು: ಸೊಕ್ಕು, ಅಹಂಕಾರ, ಮೇದಸ್ಸು; ಹೊಟ್ಟುಗುಟ್ಟು: ವ್ಯರ್ಥವಾದ ಮಾತು; ಜಗಜಟ್ಟಿ: ಪರಾಕ್ರಮಿ; ಕೂಡ: ಜೊತೆ; ಅಕಟ: ಅಯ್ಯೋ; ಮಝ: ಭಲೇ; ಬಿಟ್ಟು: ತೊರೆ; ಸುಮ್ಮನೆ: ವ್ಯರ್ಥವಾಗಿ; ಹೋಗು: ತೆರಳು; ಅಳವು: ಶಕ್ತಿ;

ಪದವಿಂಗಡಣೆ:
ದಿಟ್ಟನಹೆ +ಬಾಣಸಿನ +ಮನೆಯಲಿ
ಕಟ್ಟುಳಿಲ್ಲದ+ ಕೂಳ +ತಿಂದುರೆ
ಹೊಟ್ಟೆಯನು +ನೆರೆ +ಬೆಳೆಸಿ +ದೇಹದಲ್+ಉಬ್ಬಿ +ಕೊಬ್ಬಿನಲಿ
ಹೊಟ್ಟುಗುಟ್ಟದೊಡ್+ಆಗದೆಲೆ +ಜಗ
ಜಟ್ಟಿಗಳ+ ಕೂಡ್+ಅಕಟ+ ಮಝರೇ
ಬಿಟ್ಟು +ಸುಮ್ಮನೆ+ ಹೋಗು +ನಿನಗ್+ಅಳವಲ್ಲ+ ಹೋಗೆಂದ

ಅಚ್ಚರಿ:
(೧) ಹೊಟ್ಟುಗುಟ್ಟು – ಪದದ ಬಳಕೆ

ಪದ್ಯ ೮: ವಂದಿ ಮಾಗಧರು ಹೇಗೆ ಹೊಗಳಿದರು?

ಒಸಗೆಯಾದುದು ನೆಲನ ದಿಕ್ಕಿನ
ಬೆಸುಗೆ ಬಿಡೆ ನಿಸ್ಸಾಳತತಿ ಗ
ರ್ಜಿಸಿದವುಬ್ಬಿದ ಬೊಬ್ಬೆ ಬಿಡಿಸಿತು ಧ್ರುವನ ಮಂಡಲವ
ಅಸಮಭುಜಬಲ ಪೂತುರೇ ಸಾ
ಹಸಿಕ ಮಝರೇ ಭಾಪು ಧಣುಧಣು
ವಿಷಮರಣನರಸಿಂಹ ಜಾಗೆಂದುದು ಭಟಸ್ತೋಮ (ಕರ್ಣ ಪರ್ವ, ೨೪ ಸಂಧಿ, ೮ ಪದ್ಯ)

ತಾತ್ಪರ್ಯ:
ಆಗ ಕೌರವ ಸೇನೆಗೆ ಸಂತೋಷವುಕ್ಕಿತು. ನೆಲಕ್ಕೂ ದಿಕ್ಕಿಗೂ ಇರುವ ಬೆಸುಗೆ ಬಿಡುವಂತೆ ರಣಭೇರಿಗಳು ಬೊಬ್ಬಿಯಿಟ್ಟವು. ಅಸಮ ಭುಜಬಲ ಪೂತುರೇ ಸಾಹಸಿಕ, ಭಲೇ, ಯುದ್ಧದಲ್ಲಿ ಶತ್ರುಗಳನ್ನ್ ತಗ್ಗಿಸಿದ ನರಸಿಂಹನೇ ಭಲೇ ಎಂದು ವಂದಿಮಾಗದಿರು ಕರ್ಣನನ್ನು ಹೊಗಳಿದರು.

ಅರ್ಥ:
ಒಸಗೆ: ಕಾಣಿಕೆ, ಉಡುಗೊರೆ; ನೆಲ: ಭೂಮಿ, ಲೋಕದ ಜನ; ದಿಕ್ಕು: ದಿಶೆ; ಬೆಸುಗೆ: ಒಂದಾಗುವುದು; ಬಿಡೆ: ತೊರೆ, ತ್ಯಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಸಮೂಹ, ಗುಂಪು; ಗರ್ಜಿಸು: ಆರ್ಭಟಿಸು; ಉಬ್ಬು: ಹಿಗ್ಗು, ಗರ್ವಿಸು; ಬಿಡಿಸು: ತೊರೆ; ಧ್ರುವ: ಸ್ಥಿರವಾದುದು; ಮಂಡಲ: ನಾಡಿನ ಒಂದು ಭಾಗ; ಅಸಮ: ಅಸದೃಶವಾದ; ಭುಜಬಲ: ಪರಾಕ್ರಮಿ, ಶೂರ; ಪೂತು: ಭಲೇ, ಭೇಷ್; ಸಾಹಸ: ಪರಾಕ್ರಮ, ಶೌರ್ಯ; ಮಝ, ಭಾಪು, ಧಣುಧಣು, ಜಾಗು:ಕೊಂಡಾಟದ ಒಂದು ಮಾತು; ವಿಷಮ: ಸಮವಾಗಿಲ್ಲದಿರುವುದು; ರಣ: ಯುದ್ಧ; ಭಟ: ಸೈನ್ಯ; ಸ್ತೋಮ: ಗುಂಪು;

ಪದವಿಂಗಡಣೆ:
ಒಸಗೆಯಾದುದು +ನೆಲನ +ದಿಕ್ಕಿನ
ಬೆಸುಗೆ +ಬಿಡೆ +ನಿಸ್ಸಾಳ+ ತತಿ+ ಗ
ರ್ಜಿಸಿದವ್+ಉಬ್ಬಿದ +ಬೊಬ್ಬೆ +ಬಿಡಿಸಿತು +ಧ್ರುವನ +ಮಂಡಲವ
ಅಸಮ+ಭುಜಬಲ +ಪೂತುರೇ +ಸಾ
ಹಸಿಕ+ ಮಝರೇ +ಭಾಪು +ಧಣುಧಣು
ವಿಷಮ+ರಣ+ನರಸಿಂಹ +ಜಾಗೆಂದುದು +ಭಟಸ್ತೋಮ

ಅಚ್ಚರಿ:
(೧) ಕರ್ಣನನ್ನು ಹೊಗಳಿದ ಬಗೆ – ವಿಷಮರಣನರಸಿಂಹ ಜಾಗೆಂದುದು ಭಟಸ್ತೋಮ
(೨) ಹೊಗಳಿಕೆಯ ಶಬ್ದ: ಪೂತುರೇ, ಮಝರೇ, ಭಾಪು, ಧಣುಧಣು