ಪದ್ಯ ೩೫: ಯಾವ ರೀತಿಯ ಪ್ರಾಣಿಗಳು ಸೃಷ್ಟಿಯಾದವು?

ಭೃಗು ಪುಲಸ್ತ್ಯವಸಿಷ್ಠದಕ್ಷಾ
ದಿಗಳೆನಿಪ್ಪ ನವ ಪ್ರಜೇಶ್ವರ
ರೊಗುಮಿಗೆಯ ಮಾಡಿದರು ಸೃಷ್ಟಿಗೆ ಬೇರೆ ಬೇರವರು
ಜಗದ ಜೋಡಣೆಯಾಯ್ತು ಭೂತಾ
ಳಿಗೆ ಚತುರ್ವಿಧ ಸೃಷ್ಟಿಯೊಡ್ಡಣೆ
ನಿಗಮ ಮತದಲಿ ಹೂಡಿತವನೀಪಾಲ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೃಗು, ಪುಲಸ್ತ್ಯ, ವಸಿಷ್ಠ, ದಕ್ಷರೇ ಮೊದಲಾದ ಒಂಬತ್ತು ಜನ ಪ್ರಜಾಪತಿಗಳು ವಿಧವಿಧ ಸೃಷ್ಟಿಯನ್ನು ಮಾದಿದರು. ಜಗತ್ತು ಹೊಸದಾಗಿ ಜೋಡಣೆಯಾಯಿತು. ನಾಲ್ಕು ವಿಧದ (ಸ್ವೇದಜ, ಅಂಡಜ, ಉದ್ಭಿಜ, ಜರಾಯಜ) ಪಾಣಿಗಳು ವೇದಮತದಂತೆ ಸೃಷ್ಟಿಯಾದವು.

ಅರ್ಥ:
ಆದಿ: ಮುಂತಾದ; ನವ: ಹೊಸ; ಪ್ರಜೇಶ್ವರ: ಪ್ರಜಾಪತಿ, ರಾಜ; ಒಗುಮಿಗೆ: ಆಧಿಕ್ಯ, ಹೆಚ್ಚಳ; ಸೃಷ್ಟಿ: ಉತ್ಪತ್ತಿ, ಹುಟ್ಟು; ಬೇರೆ: ಅನ್ಯ; ಜಗ: ಪ್ರಪಂಚ; ಜೋಡಣೆ: ಹೊಂದಿಸು; ಭೂತ: ಚರಾಚರಾತ್ಮಕ ಜೀವರಾಶಿ; ಆಳಿ: ಗುಂಪು; ಚತುರ್ವಿಧ: ನಾಲ್ಕು ಪ್ರಭೇದ; ಒಡ್ಡಣ: ಗುಂಪು, ಸಮೂಹ; ನಿಗಮ: ವೇದ; ಮತ: ವಿಚಾರ; ಹೂಡು: ಅಣಿಗೊಳಿಸು; ಅವನೀಪಾಲ: ರಾಜ; ಅವನೀ: ಭೂಮಿ; ಕೇಳು: ಆಲಿಸು;

ಪದವಿಂಗಡಣೆ:
ಭೃಗು+ ಪುಲಸ್ತ್ಯ+ವಸಿಷ್ಠ+ದಕ್ಷ
ಆದಿಗಳ್+ಎನಿಪ್ಪ +ನವ +ಪ್ರಜೇಶ್ವರರ್
ಒಗುಮಿಗೆಯ +ಮಾಡಿದರು +ಸೃಷ್ಟಿಗೆ +ಬೇರೆ +ಬೇರವರು
ಜಗದ+ ಜೋಡಣೆಯಾಯ್ತು +ಭೂತಾ
ಳಿಗೆ +ಚತುರ್ವಿಧ +ಸೃಷ್ಟಿಯೊಡ್ಡಣೆ
ನಿಗಮ +ಮತದಲಿ +ಹೂಡಿತ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಪ್ರಜೇಶ್ವರರು – ಭೃಗು, ಪುಲಸ್ತ್ಯ, ವಸಿಷ್ಠ, ದಕ್ಷ

ಪದ್ಯ ೭೬: ಶಿವನ ದರುಶನವನ್ನು ಯಾರು ಪಡೆದರು?

ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ (ಅರಣ್ಯ ಪರ್ವ, ೭ ಸಂಧಿ, ೭೬ ಪದ್ಯ)

ತಾತ್ಪರ್ಯ:
ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ, ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು ಮೊದಲಾದ ಋಷಿಗಳು ಇಂದ್ರಕೀಲ ವನಕ್ಕೆ ಬಂದು ಅರ್ಜುನನ ತಪಸ್ಸಿಗೆ ಮೆಚ್ಚಿ, ನಿನ್ನ ತಪಸ್ಸಿನ ಸಿದ್ಧಿಯಿಂದ ನಮಗೆಲ್ಲರಿಗೂ ಶಿವನ ದರುಶನವಾಗಿದೆ ಎಂದು ಹೇಳಿ, ಶಿವನ ಪಾದಗಳಿಗೆ ನಮಸ್ಕರಿಸಿದರು.

ಅರ್ಥ:
ತನುಜ: ಮಗ; ಮುನಿ: ಋಷಿ; ವನ: ಕಾಡು; ಬಂದು: ಆಗಮಿಸು; ಲೇಸು: ಒಳಿತು; ಮೈಯಿಕ್ಕು: ನಮಸ್ಕರಿಸು; ಹರ: ಶಿವ; ಅಂಘ್ರಿ: ಪಾದ; ನಿಕರ: ಗುಂಪು;

ಪದವಿಂಗಡಣೆ:
ಸನಕ +ನಾರದ +ಭೃಗು +ಪರಾಶರ
ತನುಜ +ಭಾರದ್ವಾಜ +ಗೌತಮ
ಮುನಿ +ವಸಿಷ್ಠ +ಸನತ್ಕುಮಾರನು +ಕಣ್ವನ್+ಉಪಮನ್ಯು
ವನಕೆ+ ಬಂದರು +ಪಾರ್ಥ +ಕೇಳ್+ಇದು
ನಿನಗೆ +ಸಿದ್ಧಿಗಡ್+ಎಮಗೆ +ಲೇಸಾ
ಯ್ತೆನುತ +ಮೈಯಿಕ್ಕಿದುದು +ಹರನ್+ಅಂಘ್ರಿಯಲಿ +ಮುನಿನಿಕರ

ಅಚ್ಚರಿ:
(೧) ಋಷಿಮುನಿಗಳ ಪರಿಚಯ – ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ,
ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು
(೨) ವೇದವ್ಯಾಸರನ್ನು ಪರಾಶರ ತನುಜ ಎಂದು ಕರೆದಿರುವುದು

ಪದ್ಯ ೧೧: ಯಾವ ಮಹರ್ಷಿಗಳು ಕರ್ಣನ ಪರ ನಿಂತರು?

ಭೃಗು ವಸಿಷ್ಠಾಂಗಿರಸ ದಕ್ಷಾ
ದಿಗಳು ಪಾರ್ಥನ ಪಕ್ಷವಾಯ್ತೀ
ಚೆಗೆ ಪುಲಸ್ತ ಮರೀಚಿ ವಿಶ್ವಾಮಿತ್ರ ಗೌತಮರು
ಜಗದ ಜೀವರು ಧಾತುಮೂಲಾ
ದಿಗಳೊಳಿಕ್ಕಟ್ಟಾದುದೀ ಕಾ
ಳೆಗ ಚತುರ್ದಶಭುವನಜನ ಸಂಕ್ಷೋಭವಾಯ್ತೆಂದ (ಕರ್ಣ ಪರ್ವ, ೨೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮಹರ್ಷಿಗಳ ಪೈಕಿ ಭೃಗು, ವಸಿಷ್ಠ, ಅಂಗಿರಸ, ದಕ್ಷನೇ ಮೊದಲಾದವರು ಅರ್ಜುನನ ಪಕ್ಷ ಸೇರಿದರು. ಪುಲಸ್ತ, ಮರೀಚಿ, ವಿಶ್ವಾಮಿತ್ರ, ಗೌತಮರು ಕರ್ಣನ ಕಡೆ ಸೇರಿದರು. ಜಗತ್ತಿನ ಜೀವರು, ಧಾತುಮೂಲಗಳು ಎರಡು ಪಕ್ಷವಾಯಿತು. ಕರ್ಣಾರ್ಜುನರ ಕಾಳಗವು ಲೋಕದ ಜನರ ತಳಮಳಕ್ಕೆ ಕಾರಣವಾಯಿತು.

ಅರ್ಥ:
ಆದಿ: ಮುಂತಾದ; ಜಗ: ಜಗತ್ತು, ಪ್ರಪಂಚ; ಜೀವರು: ಜೀವಿಸಿರುವ, ಉಸಿರಾಡುವ; ಧಾತು: ಮೂಲವಸ್ತು; ಮೂಲ: ಕಾರಣ; ಪ್ರಾರಂಭ; ಕಾಳೆಗ: ಯುದ್ಧ; ಚತುರ್ದಶ: ಹದಿನಾಲ್ಕು; ಭುವನ: ಪ್ರಪಂಚ, ಜಗತ್ತು; ಜನ: ಜೀವರು, ಮನುಷ್ಯ; ಸಂಕ್ಷೋಭ: ತಳಮಳ;

ಪದವಿಂಗಡಣೆ:
ಭೃಗು +ವಸಿಷ್ಠ+ಅಂಗಿರಸ+ ದಕ್ಷ
ಆದಿಗಳು +ಪಾರ್ಥನ +ಪಕ್ಷವಾಯ್ತ್
ಈಚೆಗೆ +ಪುಲಸ್ತ +ಮರೀಚಿ+ ವಿಶ್ವಾಮಿತ್ರ+ ಗೌತಮರು
ಜಗದ +ಜೀವರು +ಧಾತುಮೂಲಾ
ದಿಗಳೊಳ್+ಇಕ್ಕಟ್ಟಾದುದ್+ಈ+ ಕಾ
ಳೆಗ +ಚತುರ್ದಶ+ಭುವನಜನ +ಸಂಕ್ಷೋಭವಾಯ್ತೆಂದ

ಅಚ್ಚರಿ:
(೧) ಹದಿನಾಲ್ಕು ಲೋಕದ ಜನರಿಗೆ ಪರಿಣಾಮ ಬೀರಿತು ಎಂದು ಹೇಳಲು – ಚತುರ್ದಶಭುವನಜನ ಸಂಕ್ಷೋಭವಾಯ್ತೆಂದ
(೨) ಮಹರ್ಷಿಗಳ ಹೆಸರು – ಭೃಗು, ವಸಿಷ್ಠ, ಅಂಗಿರಸ, ದಕ್ಷ, ಪುಲಸ್ತ, ಮರೀಚಿ, ವಿಶ್ವಾಮಿತ್ರ, ಗೌತಮ;

ಪದ್ಯ ೬೩: ಬ್ರಾಹ್ಮಣೋತ್ತಮರ ಪಾದೋದಕ ಏಕೆ ಪವಿತ್ರವಾದುದು?

ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹಾಲಿನ ಸಮುದ್ರದಲ್ಲಿ ವಿಷ್ಣುವು ಯೋಗನಿದ್ರೆಯಲ್ಲಿ ಮುಳುಗಿರಲು ಭೃಗು ಮಹರ್ಷಿಯು ಅವನನ್ನು ನೋಡಲು ಬಂದು, ಬಂದ ಬ್ರಾಹ್ಮಣನನ್ನು ಆಹ್ವಾನಿಸಲಿಲ್ಲವೆಂದು ಕೋಪಗೊಂಡು ವಿಷ್ಣುವಿನ ವಕ್ಷಸ್ಥಳವನ್ನು ಒದೆಯುತ್ತಾನೆ. ವಿಷ್ಣುವು ಭೃಗು ಮಹರ್ಷಿಯ ಪಾದಕ್ಕೆ ನೋವಾಯಿತೇನೋ ಎಂದು ಅದನ್ನು ತನ್ನ ಎದೆಯ ಮೇಲಿಟ್ಟು ಒತ್ತಿ ಆ ಪಾದಗಳ ಮಹಿಮೆಯನ್ನು ಮೆರೆದನು. ಬ್ರಾಹ್ಮಣೋತ್ತಮರ ಪಾದೋದಕಕ್ಕಿಂತ ಹೆಚ್ಚಿನ ತೀರ್ಥವಿಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಶರಧಿ: ಸಮುದ್ರ; ಹರಿ: ವಿಷ್ಣು; ಯೋಗ: ಹೊಂದಿಸುವಿಕೆ, ಮನಸ್ಸು ಹಾಗೂ ಇಂದ್ರಿಯಗಳನ್ನು ನಿಗ್ರಹಿಸಿ ಏಕಚಿತ್ತದಿಂದ ಧ್ಯಾನ ಮಾಡುವಿಕೆ; ನಿದ್ರೆ: ಶಯನ; ಲಕ್ಷ್ಮೀ; ಶ್ರೀದೇವಿ; ಲಕ್ಷ್ಮೀಧರ: ವಿಷ್ಣು; ವಕ್ಷ: ಹೃದಯ; ಸ್ಥಳ: ಜಾಗ; ಒದೆ: ದೂಕು; ಮುನಿ: ಋಷಿ; ಚರಣ: ಪಾದ; ಸಿರಿ: ಲಕ್ಷ್ಮೀ; ಉದರ: ಮಧ್ಯಭಾಗ, ಹೊಟ್ಟೆ; ಒತ್ತು: ಸ್ಪರ್ಶ; ಧರಣಿ: ಭೂಮಿ; ಸುರ: ದೇವ; ಧರಣೀಸುರ: ಬ್ರಾಹ್ಮಣ; ಮೆರೆ:ಪ್ರಸಿದ್ಧವಾಗು, ಪ್ರಖ್ಯಾತವಾಗು; ತೀರ್ಥ: ಪವಿತ್ರವಾದ ಜಲ; ಪಾದ: ಚರಣ; ಧರೆ: ಭೂಮಿ; ಬುಧ: ವಿದ್ವಾಂಸ, ಬ್ರಾಹ್ಮಣ; ಅಧಿಕ: ಹೆಚ್ಚು;

ಪದವಿಂಗಡಣೆ:
ಶರಧಿಯೊಳು+ ಹರಿ +ಯೋಗ+ನಿದ್ರೆಯೊಳ್
ಇರಲು +ಭೃಗುವೈತಂದು +ಲಕ್ಷ್ಮೀ
ಧರನ+ ವಕ್ಷಸ್ಥಳವನ್+ಒದೆಯಲು +ಮುನಿಯ +ಚರಣವನು
ಸಿರಿ+ಯುದರದೊಳಗ್+ಒತ್ತಿ +ಧರಣೀ
ಸುರರ+ ಮೆರೆದನು+ ತೀರ್ಥ+ಪಾದವ
ಧರೆಯೊಳಗೆ+ ಬುಧರಿಂದ್+ಅಧಿಕವಹ+ ತೀರ್ಥವಿಲ್ಲೆಂದ

ಅಚ್ಚರಿ:
(೧) ಹರಿ, ಲಕ್ಷ್ಮೀಧರ; ಲಕ್ಷ್ಮೀ, ಸಿರಿ – ಸಮಾನಾರ್ಥಕ ಪದ
(೨) ಧರಣೀಸುರ, ಬುಧ – ಸಾಮ್ಯಪದಗಳ ಬಳಕೆ

ಪದ್ಯ ೮: ಯಾವ ಮುನಿಗಳು ಯಾಗಕ್ಕೆ ಆಗಮಿಸಿದರು?

ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾರ್ಗ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಂಡೇಯ ಮುದ್ಗಲ
ತನಯ ರೋಮಶರೈಭ್ಯವತ್ಸನು ಶೈಬ್ಯ ನಾರದರು (ಸಭಾ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯ ಯಾಗಕ್ಕೆ ರಾಜರಲ್ಲದೆ ಶ್ರೇಷ್ಠ ಮುನಿವರ್ಗವು ಆಗಮಿಸಿದರು. ಅಂಗಿರಸ, ಕಣ್ವ, ಭೃಗು, ಜೈಮಿನಿ, ಸುಮಂತ, ವಸಿಷ್ಠ, ಶೌನಕ, ಗಾರ್ಗ್ಯ, ಬೃಹದಶ್ವ, ಸನಕ, ಶುಕ, ಜಾಬಾಲಿ, ತಿತ್ತಿರಿ, ಮಾರ್ಕಂಡೇಯ, ಮೌದ್ಗಲ್ಯ, ರೋಮಶ, ರೈಭ್ಯ, ಶ್ರೀವತ್ಸ, ಶೈಬ್ಯ, ನಾರದರೇ ಮೊದಲಾದ ಋಷಿಗ್ತಳು ಆಗಮಿಸಿದರು.

ಅರ್ಥ:
ಜನಪ: ರಾಜ (ಇಲ್ಲಿ ಜನಮೇಜಯ); ಕೇಳು: ಆಲಿಸು; ಈಚೆಯಲಿ: ಇತ್ತಕಡೆ; ಬಂದುದು: ಆಗಮಿಸಿದರು; ಮುನಿ: ಋಷಿ; ತನಯ: ಮಗ;

ಪದವಿಂಗಡಣೆ:
ಜನಪ +ಕೇಳ್+ಈಚೆಯಲಿ +ಬಂದುದು
ಮುನಿಗಳ್+ಆಂಗಿರ+ ಕಣ್ವ+ ಭೃಗು +ಜೈ
ಮಿನಿ +ಸುಮಂತ +ವಸಿಷ್ಠ +ಶೌನಕ+ ಗಾರ್ಗ್ಯ +ಬೃಹದಶ್ವ
ಸನಕ+ ಶುಕ +ಜಾಬಾಲಿ +ತಿತ್ತಿರಿ
ವಿನುತ +ಮಾರ್ಕಂಡೇಯ +ಮುದ್ಗಲ
ತನಯ +ರೋಮಶ+ರೈಭ್ಯ+ವತ್ಸನು+ ಶೈಬ್ಯ+ ನಾರದರು

ಅಚ್ಚರಿ:
(೧) ೨೦ ಋಷಿಗಳ ಹೆಸರನ್ನು ಹೊಂದಿರುವ ಪದ್ಯ