ಪದ್ಯ ೩೧: ರಾತ್ರಿಯ ಯುದ್ಧ ಹೇಗೆ ಸಾಗ್ಗಿತ್ತು?

ಆರವಂಗಡದಾಳಿವನು ನೀ
ನಾರುಹೆಸರೇನೆಂದು ಬಳಿಕ ವಿ
ಚಾರ ಮಿಗೆ ಹೊಯ್ದಾಡಿದರು ಕರೆಕರೆದು ಮೂದಲಿಸಿ
ಭಾರಿಸಿತು ಬಲುತಿಮಿರ ಬಲ ಸಂ
ಹಾರವನು ವಿವರಿಸುವನಾವನು
ಭೂರಿ ಭಟರಂಘವಣೆ ಬೀತುದು ಭೂಪ ಕೇಳೆಂದ (ದ್ರೋಣ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಇವನು ಯಾರ ಕಡೆಯ ಯೋಧ? ಇವನು ಯಾರು? ಹೆಸರೇನು? ಎಂದು ಕೇಳಿ ಬಳಿಕ ಕರೆಕರೆದು ಮೂದಲಿಸಿ ಹೊಯ್ದರು. ಕತ್ತಲು ದಟ್ಟವಾಗಿ ಹಬ್ಬಿತ್ತು. ವೀರರ ಶಕ್ತಿ ಕುಗ್ಗಿತ್ತು. ಎಷ್ಟು ಸೈನಿಕರು ಸತ್ತರೋ ತಿಳಿಯುವುದಾದರು ಹೇಗೆ ಹೇಳು ರಾಜನೇ ಎಂದು ಸಂಜಯನು ವಿವರಿಸಿದನು.

ಅರ್ಥ:
ದಾಳಿ: ಆಕ್ರಮಣ; ಹೆಸರು: ನಾಮಧೇಯ; ಬಳಿಕ: ನಂತರ; ವಿಚಾರ: ರ್ಯಾಲೋಚನೆ, ವಿಮರ್ಶೆ; ಮಿಗೆ: ಮತ್ತು, ಅಧಿಕ; ಹೊಯ್ದಾಡು: ಹೋರಾಡು; ಕರೆ: ಬರೆಮಾಡು; ಮೂದಲಿಸು: ಹಂಗಿಸು; ಭಾರಿಸು: ಹೊಡೆ; ತಿಮಿರ: ರಾತ್ರಿ; ಸಂಹಾರ: ನಾಶ, ಕೊನೆ; ವಿವರಿಸು: ಹೇಳು; ಭೂರಿ: ಹೆಚ್ಚು, ಅಧಿಕ; ಭಟ: ಸೈನಿಕ; ಅಂಘವಣೆ: ಉದ್ದೇಶ; ಬೀತು: ಕಳೆದು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆರವಂಗಡದಾಳ್+ಇವನು +ನೀನ್
ಆರು+ಹೆಸರೇನೆಂದು +ಬಳಿಕ +ವಿ
ಚಾರ +ಮಿಗೆ +ಹೊಯ್ದಾಡಿದರು +ಕರೆಕರೆದು +ಮೂದಲಿಸಿ
ಭಾರಿಸಿತು +ಬಲು+ತಿಮಿರ +ಬಲ +ಸಂ
ಹಾರವನು +ವಿವರಿಸುವನ್+ಆವನು
ಭೂರಿ +ಭಟರ್+ಅಂಘವಣೆ +ಬೀತುದು +ಭೂಪ +ಕೇಳೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭಾರಿಸಿತು ಬಲುತಿಮಿರ ಬಲ; ಭೂರಿ ಭಟರಂಘವಣೆ ಬೀತುದು ಭೂಪ

ಪದ್ಯ ೫೨: ಕರ್ಣನು ಅಭಿಮನ್ಯುವನ್ನು ಹೇಗೆ ಹಂಗಿಸಿದನು?

ಸಾರು ಸಾರಭಿಮನ್ಯು ಫಡ ಇ
ನ್ನಾರ ಬಸುರನು ಹೊಗುವೆ ನಿನ್ನವ
ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ
ಭೂರಿ ಬಲವನು ಸದೆವ ಗರ್ವವಿ
ದಾರ ಕೂಡೆ ಧರ್ನುಧರಾಗ್ರಣಿ
ವೀರ ಕರ್ಣ ಕಣಾ ಎನುತ ತೆಗೆದೆಚ್ಚನತಿರಥನ (ದ್ರೋಣ ಪರ್ವ, ೫ ಸಂಧಿ, ೫೨ ಪದ್ಯ
)

ತಾತ್ಪರ್ಯ:
ಕರ್ಣನು ಅಭಿಮನ್ಯುವನ್ನು ಸಂಭೋದಿಸುತ್ತಾ, ಹೋಗು ಅಭಿಮನ್ಯು ತೆರಳು, ಬದುಕಿಕೊಳ್ಳಲು ಇನ್ನಾರ ಹೊಟ್ಟೆಯೊಳಗೆ ಹೋಗುತ್ತೀ? ಸೈನ್ಯವನ್ನು ನಾಶಮಾಡಿದ ಗರ್ವವನ್ನು ಯಾರೆದುರು ತೋರಿಸುತ್ತೀ? ನಾನು ಅತ್ಯಂತ ಶ್ರೇಷ್ಠ ಧನುರ್ಧರನಾದ ಕರ್ಣ, ಎಂದು ಬಾಣಗಳನ್ನು ಅಭಿಮನ್ಯುವಿನ ಮೇಲೆ ಸುರಿಸಿದನು.

ಅರ್ಥ:
ಸಾರು: ಹರಡು, ಹೋಗು; ಫಡ: ತಿರಸ್ಕಾರದ ಮಾತು; ಬಸುರು: ಹೊಟ್ಟೆ; ಹೊಗು: ತೆರಳು; ಸಂತತಿ: ವಂಶ; ಪರೋಕ್ಷ: ಕಣ್ಣಿಗೆ ಕಾಣದಿರುವುದು; ಭೂರಿ: ಹೆಚ್ಚು, ಅಧಿಕ; ಬಲ: ಶಕ್ತಿ; ಸದೆ: ಕುಟ್ಟು, ಪುಡಿಮಾಡು; ಗರ್ವ: ಅಹಂಕಾರ; ಕೂಡೆ: ಜೊತೆ; ಅಗ್ರಣಿ: ಶ್ರೇಷ್ಠ; ವೀರ: ಶೂರ; ತೆಗೆ: ಹೊರತರು; ಎಚ್ಚು: ಬಾಣ ಪ್ರಯೋಗ ಮಾಡು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಸಾರು +ಸಾರ್+ಅಭಿಮನ್ಯು +ಫಡ +ಇ
ನ್ನಾರ +ಬಸುರನು +ಹೊಗುವೆ +ನಿನ್ನವರ್
ಆರ +ಸಂತತಿ +ಮಾಡಿಕೊಳಲಿ+ ಭವತ್ +ಪರೋಕ್ಷದಲಿ
ಭೂರಿ +ಬಲವನು+ ಸದೆವ +ಗರ್ವವ್
ಇದಾರ +ಕೂಡೆ +ಧರ್ನುಧರಾಗ್ರಣಿ
ವೀರ +ಕರ್ಣ +ಕಣಾ+ ಎನುತ+ ತೆಗೆದ್+ಎಚ್ಚನ್+ಅತಿರಥನ

ಅಚ್ಚರಿ:
(೧) ಅಭಿಮನ್ಯುವನ್ನು ಹಂಗಿಸುವ ಪರಿ – ಸಾರು ಸಾರಭಿಮನ್ಯು ಫಡ ಇನ್ನಾರ ಬಸುರನು ಹೊಗುವೆ
(೨) ಕರ್ಣನು ಹೊಗಳಿಕೊಳ್ಳುವ ಪರಿ – ಧರ್ನುಧರಾಗ್ರಣಿ ವೀರ ಕರ್ಣ ಕಣಾ

ಪದ್ಯ ೨೩: ದ್ರೋಣನು ಹೇಗೆ ಬೊಬ್ಬಿರಿದನು?

ಆರಿ ಬೊಬ್ಬಿರಿದಖಿಳ ಸೇನೆಯ
ಭೂರಿ ಭಟರಗ್ರದಲಿ ಕಟಕಾ
ಚಾರಿಯನು ಕೈವೀಸಿದನು ಬರಹೇಳು ಪವನಜನ
ವೀರನಾದಡೆ ದ್ರೆಯ ಹೊಗ ಹೇ
ಳಾರು ತಡೆದರೆ ತಡೆಯಿ ಹಿಡಿವೆನು
ಧೀರ ಕೌರವನಾಣೆನುತ ಬೊಬ್ಬಿರಿದನಾ ದ್ರೋಣ (ದ್ರೋಣ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮಹಾಧ್ವನಿಯಿಂದ ಗರ್ಜಿಸಿ, ಸೈನ್ಯದ ಮುಂಭಾಗದಲ್ಲಿ ನಿಂತು ದ್ರೋಣನು ಕೈಬೀಸಿ ಭೀಮನನ್ನು ಬರಹೇಳು, ವೀರನಾದರೆ ಧರ್ಮಜನು ಯುದ್ಧಕ್ಕೆ ಬರಲಿ, ಯಾರು ಬೇಕಿದ್ದರೂ ತಡೆಯಬಹುದು, ಧೀರನಾದ ದುರ್ಯೋಧನನಾಣೆಯಾಗಿ ಯುಧಿಷ್ಠಿರನನ್ನು ಸೆರೆ ಹಿಡಿಯುತ್ತೇನೆ ಎಂದು ಬೊಬ್ಬಿರಿದನು.

ಅರ್ಥ:
ಆರು: ಗರ್ಜಿಸು; ಬೊಬ್ಬಿರಿ: ಜೋರಾಗಿ ಕೂಗು; ಸೇನೆ: ಸೈನ್ಯ; ಭೂರಿ: ಹೆಚ್ಚು, ಅಧಿಕ; ಭಟ: ಸೈನ್ಯ; ಅಗ್ರ: ಮುಂಭಾಗ; ಕಟಕ: ಗುಂಪು, ಸೈನ್ಯ; ಆಚಾರಿ:ಗುರು; ಕೈವೀಸು: ಕೈಯಾಡಿಸು; ಬರಹೇಳು: ಆಗಮಿಸು; ಪವನಜ: ಭೀಮ; ವೀರ: ಪರಾಕ್ರಮಿ; ದೊರೆ: ರಾಜ; ಹೊಗರು: ಕಾಂತಿ; ಹೇಳಾರು: ಹೇಳು: ತಿಳಿಸು; ತಡೆ: ನಿಲ್ಲಿಸು; ಹಿಡಿ: ಬಂಧಿಸು; ಧೀರ: ಪರಾಕ್ರಮಿ; ಆಣೆ: ಪ್ರಮಾಣ;

ಪದವಿಂಗಡಣೆ:
ಆರಿ +ಬೊಬ್ಬಿರಿದ್+ಅಖಿಳ +ಸೇನೆಯ
ಭೂರಿ +ಭಟರ್+ಅಗ್ರದಲಿ +ಕಟಕಾ
ಚಾರಿಯನು +ಕೈವೀಸಿದನು +ಬರಹೇಳು +ಪವನಜನ
ವೀರನಾದಡೆ +ದೊರೆಯ+ ಹೊಗ+ ಹೇಳ್
ಆರು +ತಡೆದರೆ +ತಡೆಯಿ +ಹಿಡಿವೆನು
ಧೀರ +ಕೌರವನಾಣೆನುತ +ಬೊಬ್ಬಿರಿದನಾ +ದ್ರೋಣ

ಅಚ್ಚರಿ:
(೧) ವೀರ, ಧೀರ – ಪ್ರಾಸ, ಸಮಾನಾರ್ಥಕ ಪದ;
(೨) ದ್ರೋಣನನ್ನು ಕಟಕಾಚಾರಿ ಎಂದು ಕರೆದಿರುವುದು

ಪದ್ಯ ೪: ಸಭೆಯಲ್ಲಿ ಯಾರು ಎದ್ದು ನಿಂತರು?

ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ (ದ್ರೋಣ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ವೀರರಿದ್ದು ಏನು ಮಾಡಿಯಾರು? ದೈವದ ಪ್ರೀತಿ ಬೇರೆ ಕಡೆಗಿದೆ. ನಮಗೊಲಿದು ಯಾರು ತಾನೇ ಏನು ಮಾಡಿಯಾರು? ಹೀಗೆಂದು ಕರ್ಣನು ನಿಟ್ಟುಸಿರಿಟ್ಟನು. ಸಭೆಯಲ್ಲಿದ್ದ ಮಹಾವೀರರಾದ ರಾಜರು ಸದ್ದಿಲ್ಲದ ಸಾಗರದಮ್ತೆ ಮೌನವಾಗಿದ್ದರು. ಆಗ ರಣಧೀರರಾದ ತ್ರಿಗರ್ತರು ಸಭೆಯಲ್ಲಿ ಎದ್ದು ನಿಂತರು.

ಅರ್ಥ:
ವೀರ: ಶೂರ; ಏಗು: ಸಾಗಿಸು, ನಿಭಾಯಿಸು; ದೈವ: ಭಗವಂತ; ಕೂರು: ಪ್ರೀತಿ, ಮೆಚ್ಚು; ನೆಲೆ: ಭೂಮಿ; ಬೇರೆ: ಅನ್ಯ; ಒಲಿ: ಪ್ರೀತಿ; ಕಲಿ: ಶೂರ; ಬಿಸುಸುಯ್: ನಿಟ್ಟುಸಿರುಬಿಡು; ಭೂರಿ: ಹೆಚ್ಚು, ಅಧಿಕ; ಭೂಪ: ರಾಜ; ವಿಸ್ತರ: ವಿಶಾಲ; ಗಂಭೀರ: ಆಳವಾದುದು; ಸಾಗರ: ಸಮುದ್ರ; ರಣ: ಸಮುದ್ರ; ಧೀರ: ಶೂರ; ವರ: ಶ್ರೇಷ್ಠ; ತ್ರಿಗರ್ತ: ಒಂದು ದೇಶದ ಹೆಸರು; ಎದ್ದು: ಮೇಲೇಳು; ಸಭೆ: ಓಲಗ;

ಪದವಿಂಗಡಣೆ:
ವೀರರಿದ್+ಏಗುವರು +ದೈವದ
ಕೂರುಮೆಯ +ನೆಲೆ +ಬೇರೆ +ನಮಗ್+ಒಲಿದ್
ಆರು +ಮಾಡುವುದೇನ್+ಎನುತ +ಕಲಿಕರ್ಣ+ ಬಿಸುಸುಯ್ಯೆ
ಭೂರಿ +ಭೂಪರು +ವಿಸ್ತರದ +ಗಂ
ಭೀರ +ಸಾಗರದಂತಿರಲು +ರಣ
ಧೀರರ್+ಎದ್ದರು +ವರ +ತ್ರಿಗರ್ತರು +ರಾಜಸಭೆಯೊಳಗೆ

ಅಚ್ಚರಿ:
(೧) ಕೆಲಸಕ್ಕೆ ದೈವದ ಮಹತ್ವ – ವೀರರಿದ್ದೇಗುವರು ದೈವದ ಕೂರುಮೆಯ ನೆಲೆ ಬೇರೆ
(೨) ಉಪಮಾನದ ಪ್ರಯೋಗ – ಭೂರಿ ಭೂಪರು ವಿಸ್ತರದ ಗಂಭೀರ ಸಾಗರದಂತಿರಲು

ಪದ್ಯ ೪೪: ದುರ್ಯೋಧನನು ಅರಮನೆಯಿಂದ ಹೇಗೆ ಹೊರಬಂದನು?

ವೀರ ಧೃತರಾಷ್ಟ್ರಂಗೆ ವರ ಗಾಂ
ಧಾರಿಗೆರಗಿದನವರ ಹರಕೆಯ
ಭೂರಿಗಳ ಕೈಕೊಂಡನವನೀಸುರರಿಗಭಿನಮಿಸಿ
ಚಾರುಚಮರದ ನಿಕರದವರೊ
ಯ್ಯಾರಿಸಲು ಜಯರವದ ರಭಸದು
ದಾರ ಮೆರೆಯಲು ಬೀಳುಕೊಂಡನು ರಾಜಮಂದಿರವ (ಭೀಷ್ಮ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಧೃತರಾಷ್ಟ್ರ ಗಾಂಧಾರಿಗೆ ನಮಸ್ಕರಿಸಿ, ದುರ್ಯೋಧನನು ಅವರ ಆಶೀರ್ವಾದವನ್ನು ಸ್ವೀಕರಿಸಿದನು. ಬ್ರಾಹ್ಮಣರಿಗೆ ನಮಸ್ಕರಿಸಿ ಛತ್ರ ಚಾಮರಧಾರಿಗಳ ಜೊತೆಗೆ ಅವನು ಪ್ರಯಾಣ ಮಾಡಲು, ಎಲ್ಲೆಡೆ ಜಯಕಾರಗಳು ಕೇಳಿ ಬಂದವು.

ಅರ್ಥ:
ವೀರ: ಶೂರ, ಪರಾಕ್ರಮಿ; ವರ: ಶ್ರೇಷ್ಠ; ಎರಗು: ನಮಸ್ಕರಿಸು; ಹರಕೆ: ಆಶೀರ್ವಾದ; ಭೂರಿ: ಹೆಚ್ಚು, ಅಧಿಕ; ಅವನೀಸುರ: ಬ್ರಾಹ್ಮಣ; ಅವನೀ: ಭೂಮಿ; ಸುರ: ದೇವತೆ; ಅಭಿನಮಿಸು: ನಮಸ್ಕರಿಸು; ಚಾರು: ಸುಂದರ; ಚಮರ: ಚಾಮರ; ನಿಕರ: ಗುಂಪು; ಒಯ್ಯಾರ: ಬೆಡಗು, ಬಿನ್ನಾಣ; ಜಯ: ಗೆಲುವು; ರವ: ಶಬ್ದ; ರಭಸ: ವೇಗ; ಉದಾರ: ಧಾರಾಳ ಸ್ವಭಾವದ; ಮೆರೆ: ಹೊಳೆ, ಪ್ರಕಾಶಿಸು; ಬೀಳುಕೊಡು: ತೆರಳು; ರಾಜಮಂದಿರ: ಅರಮನೆ;

ಪದವಿಂಗಡಣೆ:
ವೀರ +ಧೃತರಾಷ್ಟ್ರಂಗೆ +ವರ +ಗಾಂ
ಧಾರಿಗ್+ಎರಗಿದನ್+ಅವರ+ ಹರಕೆಯ
ಭೂರಿಗಳ+ ಕೈಕೊಂಡನ್+ಅವನೀಸುರರಿಗ್+ಅಭಿನಮಿಸಿ
ಚಾರು+ಚಮರದ+ ನಿಕರದವರ್
ಒಯ್ಯಾರಿಸಲು+ ಜಯರವದ+ ರಭಸದ್
ಉದಾರ +ಮೆರೆಯಲು +ಬೀಳುಕೊಂಡನು +ರಾಜಮಂದಿರವ

ಅಚ್ಚರಿ:
(೧) ಎರಗು, ಅಭಿನಮಿಸು – ಸಮನಾರ್ಥಕ ಪದ

ಪದ್ಯ ೧೦: ಭೂತದ ಆಕಾರವು ಹೇಗಿತ್ತು?

ಮೂರು ಮೊಗ ಬಾಯಾರು ಕಣ್ಣೀ
ರಾರು ಕೃತ್ಯೆಯ ಬೆನ್ನಲೊಪ್ಪುವ
ಮೂರು ಕಾಲುಗಳೇಳುಕೈ ಕಣ್ಣೊಂದು ನೆತ್ತಿಯಲಿ
ತೋರಕರದ ಕಪಾಲವೊಂದುರೆ
ಮೀರಿ ಮೆರೆವ ತ್ರಿಶೂಲ ಬಟ್ಟಲ
ಭೂರಿ ಭೀಕರ ಭೂತ ನುಡಿದುದು ಕೃತ್ಯವೇನೆಂದು (ಅರಣ್ಯ ಪರ್ವ, ೨೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಆ ಕೃತ್ಯೆಗೆ ಮೂರು ಮುಖಗಳು, ಆರು ಬಾಯಿಗಳು, ಹನ್ನೆರಡು ಕಣ್ಣುಗಳು, ಬೆನ್ನಲ್ಲಿ ಮೂರು ಕಾಲುಗಳು, ಏಳು ಕೈಗಳು, ನೆತ್ತಿಯಲ್ಲಿ ಒಂದು ಕಣ್ಣು, ದೊಡ್ಡ ಕೈಯಲ್ಲಿ ಹಿಡಿದ ಮನುಷ್ಯರ ತಲೆ ಚಿಪ್ಪು, ಭಯಂಕರ ತ್ರಿಶೂಲ, ಭಯಂಕರವಾಗಿದ್ದ ಆ ಕೃತ್ಯೆಯು ಕನಕನನ್ನು ನನಗೇನು ಕೆಲಸವೆಂದು ಕೇಳಿತು.

ಅರ್ಥ:
ಮೊಗ: ಮುಖ; ಬಾಯಿ: ಮುಖದ ಅವಯವ; ಕಣ್ಣು: ನಯನ; ಕೃತ್ಯ: ಕೆಲಸ; ಬೆನ್ನು: ಹಿಂಭಾಗ; ಒಪ್ಪು: ಸಮ್ಮತಿ; ಕಾಲು: ಪಾದ; ಕೈ: ಹಸ್ತ; ನೆತ್ತಿ: ಶಿರ; ತೋರು: ಕಾಣಿಸು; ಕರ: ಹಸ್ತ; ಕಪಾಲ: ತಲೆಬುರುಡೆ; ಮೀರು: ದಾಟು; ತ್ರಿಶೂಲ: ಮೂರುಮೊನೆಯ ಆಯುಧ; ಬಟ್ಟಲ: ಚಿಪ್ಪು, ಚಿಕ್ಕ ಪಾತ್ರೆ; ಭೂರಿ: ಹೆಚ್ಚು, ಅಧಿಕ; ಭೀಕರ: ಭಯವನ್ನುಂಟು ಮಾಡುವ; ನುಡಿ: ಮಾತಾಡು; ಈರಾರು: ಹನ್ನೆರಡು;

ಪದವಿಂಗಡಣೆ:
ಮೂರು +ಮೊಗ +ಬಾಯಾರು +ಕಣ್
ಈರಾರು+ ಕೃತ್ಯೆಯ +ಬೆನ್ನಲೊಪ್ಪುವ
ಮೂರು +ಕಾಲುಗಳ್+ಏಳುಕೈ +ಕಣ್ಣೊಂದು +ನೆತ್ತಿಯಲಿ
ತೋರ+ಕರದ+ ಕಪಾಲವೊಂದ್+ಉರೆ
ಮೀರಿ +ಮೆರೆವ +ತ್ರಿಶೂಲ +ಬಟ್ಟಲ
ಭೂರಿ +ಭೀಕರ +ಭೂತ +ನುಡಿದುದು +ಕೃತ್ಯವೇನೆಂದು

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೂರಿ ಭೀಕರ ಭೂತ

ಪದ್ಯ ೩೨: ಕರ್ಣನ ಸಹಾಯಕ್ಕೆ ಯಾರು ಬಂದರು?

ಭೀಮಸೇನನ ದಳಪತಿಯ ಸಂ
ಗ್ರಾಮ ಮಸೆದುದು ಮತ್ತೆ ಕೈಕೊಳ
ಲೀ ಮಹಾರಥರೆನುತ ಕೈಬೀಸಿದನು ಕುರುರಾಯ
ಸೋಮದತ್ತನ ಸೂನು ಕೃಪನು
ದ್ಧಾಮ ಶಕುನಿ ಸುಯೋಧನಾನುಜ
ನಾ ಮಹಾಹವಕೊದಗಿದರು ಕೃತವರ್ಮ ಗುರುಸುತರು (ಕರ್ಣ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣ ಮತ್ತು ಭೀಮರ ಯುದ್ಧವು ಪ್ರಾರಂಭವಾಯಿತು, ಇದನ್ನು ಗಮನಿಸಿದ ದುರ್ಯೋಧನನು ಕರ್ಣನಿಗೆ ಸಹಾಯವಾಗಲೆಂದು ಪರಾಕ್ರಮಿಗಳಾದ ಸೋಮದತ್ತನ ಮಕ್ಕಳು (ಭೂರಿ, ಭೂರಿಶ್ರವ, ಶಲ ಎನ್ನುವವರು ಸೋಮದತ್ತನ ಮಕ್ಕಳು), ಕೃಪಾಚಾರ್ಯರು, ಶಕುನಿ, ಕೃತವರ್ಮ, ಅಶ್ವತ್ಥಾಮ, ದುಶ್ಯಾಸನರನ್ನು ಸನ್ನೆ ಮಾಡಿ ಕಳುಹಿಸಿದನು.

ಅರ್ಥ:
ದಳಪತಿ: ಸೇನಾಧಿಪತಿ; ಸಂಗ್ರಾಮ: ಯುದ್ಧ; ಮಸೆ: ಹರಿತವಾದುದು; ಮತ್ತೆ: ಪುನಃ; ಕೈಕೊಳಲು: ಒದಗಲು; ಮಹಾರಥ: ಪರಾಕ್ರಮಿ; ಕೈಬೀಸು: ಸನ್ನೆ ಮಾಡು; ರಾಯ: ರಾಜ; ಸೂನು: ಪುತ್ರ; ಉದ್ದಾಮ: ಶ್ರೇಷ್ಠ; ಅನುಜ: ತಮ್ಮ; ಆಹವ: ಯುದ್ಧ; ಒದಗು: ಲಭ್ಯ, ದೊರೆತುದು; ಸುತ: ಮಗ;

ಪದವಿಂಗಡಣೆ:
ಭೀಮಸೇನನ +ದಳಪತಿಯ+ ಸಂ
ಗ್ರಾಮ +ಮಸೆದುದು +ಮತ್ತೆ +ಕೈಕೊಳಲ್
ಈ +ಮಹಾರಥರೆನುತ +ಕೈಬೀಸಿದನು +ಕುರುರಾಯ
ಸೋಮದತ್ತನ +ಸೂನು +ಕೃಪನ್
ಉದ್ಧಾಮ+ ಶಕುನಿ +ಸುಯೋಧನ+ಅನುಜನ್
ಆ+ ಮಹ+ಆಹವಕ್+ಒದಗಿದರು +ಕೃತವರ್ಮ +ಗುರುಸುತರು

ಅಚ್ಚರಿ:
(೧) ಸಹಾಯಕ್ಕೆ ಬಂದ ಪರಾಕ್ರಮಿಗಳು – ಭೂರಿ, ಭೂರಿಶ್ರವ, ಶಲ, ಕೃಪ, ಶಕುನಿ, ದುಶ್ಯಾಸನ, ಕೃತವರ್ಮ, ಅಶ್ವತ್ಥಾಮ

ಪದ್ಯ ೨೬: ಕೃಷ್ಣನನ್ನು ಯಾರಿಗೆ ಹೋಲಿಸಿ ಹೀಯಾಳಿಸಲಾಯಿತು?

ಭೂರಿ ಭೂರಿಶ್ರವರು ನಿಮ್ಮೊಳ
ಗಾರ ಹೊಯ್ದರು ಸೋಮದತ್ತ ಮ
ಹೀರಮಣನತಿ ಮಾನ್ಯನಲ್ಲಾ ಅಗ್ರಪೂಜೆಯಲಿ
ಸಾರಧರ್ಮವಿದೆಂದು ಬಂದೆ ವಿ
ದಾರು ಬಲ್ಲರು ಹಳ್ಳಿಕಾರರ
ನಾರಿಯರ ನೆರೆಮಿಂಡನಲ್ಲದೆ ಯೋಗ್ಯರಿಲ್ಲೆಂದ (ಸಭಾ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೂರಿ, ಭೂರಿಶ್ರವರನ್ನೇಕೆ ಪೂಜಿಸಲಿಲ್ಲ. ನಿಮ್ಮಲ್ಲಿ ಯಾರನ್ನಾದರೂ ಅವರು ಹೊಡೆದಿದ್ದರೇ? ಅಗ್ರಪೂಜೆಗೆ ಸೋಮದತ್ತನು ಅತಿ ಮಾನ್ಯನಲ್ಲವೇ? ರಾಜಸೂಯ ಯಾಗದಲ್ಲಿ ಭಾಗವಹಿಸುವುದು ಧರ್ಮದಸಾರ ಎಂದುಕೊಂಡು ನಾವಿಲ್ಲಿಗೆ ಬಂದೆವು. ಹಳ್ಳಿಯ ಹೆಣ್ಣುಗಳೊಡನೆ ವ್ಯಭಿಚಾರ ಮಾಡುವ ಜಾರನೇ ಅಗ್ರಪೂಜೆಗೆ ಪಾತ್ರನೆಂದು ಯಾರಿಗೆ ಗೊತ್ತು?

ಅರ್ಥ:
ಹೊಯ್ದು: ಹೊಡೆದು; ಮಹೀರಮಣ: ರಾಜ; ಮಹೀ:ಭೂಮಿ; ರಮಣ: ಪ್ರಿಯ, ಹಿತವನ್ನು ಉಂಟುಮಾಡುವಂತಹುದು; ಮಾನ್ಯ: ಗೌರವ; ಅಗ್ರ: ಆದಿ; ಪೂಜೆ: ಆರಾಧನೆ; ಸಾರ: ಶ್ರೇಷ್ಠವಾದ; ಧರ್ಮ: ಧಾರಣೆ ಮಾಡುವಂತಹದು; ಬಂದೆ: ಆಗಮಿಸಿದೆ; ಬಲ್ಲರು: ತಿಳಿದವರು; ಹಳ್ಳಿ: ಗ್ರಾಮ; ನಾರಿ: ಹೆಣ್ಣು; ನೆರೆ: ಜೊತೆ; ಮಿಂಡ: ವೀರ, ಶೂರ; ಯೋಗ್ಯ: ಅರ್ಹತೆ;

ಪದವಿಂಗಡಣೆ:
ಭೂರಿ +ಭೂರಿಶ್ರವರು +ನಿಮ್ಮೊಳಗ್
ಆರ+ ಹೊಯ್ದರು +ಸೋಮದತ್ತ+ ಮ
ಹೀರಮಣನ್+ಅತಿ +ಮಾನ್ಯನಲ್ಲಾ +ಅಗ್ರಪೂಜೆಯಲಿ
ಸಾರಧರ್ಮವಿದೆಂದು +ಬಂದೆ +ವಿ
ದಾರು +ಬಲ್ಲರು +ಹಳ್ಳಿಕಾರರ
ನಾರಿಯರ +ನೆರೆಮಿಂಡನಲ್ಲದೆ+ ಯೋಗ್ಯರಿಲ್ಲೆಂದ

ಅಚ್ಚರಿ:
(೧) ರಾಜರ ಹೆಸರುಗಳ ಪರಿಚಯ: ಭೂರಿ, ಭೂರಿಶ್ರವ, ಸೋಮದತ್ತ
(೨) ಕೃಷ್ಣನನ್ನು ಬಯ್ಯುವ ಪರಿ – ಹಳ್ಳಿಕಾರರ ನಾರಿಯರ ನೆರೆಮಿಂಡನಲ್ಲದೆ ಯೋಗ್ಯರಿಲ್ಲೆಂದ

ಪದ್ಯ ೫೫: ಧೃಷ್ಟದ್ಯುಮ್ನನು ಮತ್ತು ಯಾವ ರಾಜರ ಪರಿಚಯ ಮಾಡಿದನು?

ಭೂರಿ ಭೂರಿಶ್ರವನು ದಕ್ಷಿಣ
ವೀರ ಬಾಹ್ಲಿಕ ವಿಂಧ್ಯ ಚಿತ್ರ ಭ
ಗೀರಥನು ನೃಪವರ ಜಯದ್ರಥ ಶಿಬಿ ಶ್ರುತಾಯುಧರು
ವೀರ ವೃದ್ಧಕ್ಷತ್ರ ಸೃಂಜಯ
ಚಾರು ಭುಜಬಲ ಸೋಮದತ್ತಮ
ಹೀರಮಣರಿವರಿತ್ತಲಿದೆ ತರಳಾಕ್ಷಿ ನೋಡೆಂದ (ಆದಿ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಇನ್ನೂ ರಾಜರನ್ನು ಪರಿಚಯಿಸುತ್ತಾ: ಭೂರಿ, ಭೂರಿಶ್ರವ, ದಕ್ಷಿಣದ ರಾಜರಾದ, ಬಾಹ್ಲಿಕ, ವಿಂಧ್ಯ, ಚಿತ್ರ, ಭಗೀರಥ, ಜಯದ್ರಥ, ಶಿಬಿ, ಶ್ರುತಾಯುಧ, ವೃದ್ಧಕ್ಷತ್ರ, ಸೃಂಜಯ, ಸೋಮದತ್ತ ಮುಂತಾದ ರಾಜರನ್ನು ದೃಷ್ಟದ್ಯುಮ್ನನು ದ್ರೌಪದಿಗೆ ತೋರಿಸಿದನು.

ಅರ್ಥ:
ದಕ್ಷಿಣ: ತೆಂಕಣ; ವೀರ: ಶೂರ; ನೃಪ: ರಾಜ; ಚಾರು: ಸುಂದರ; ಭುಜಬಲ: ಬಲಶಾಲಿ, ಶೂರ; ಮಹೀರಮಣ: ರಾಜ; ತರಳ: ಚಂಚಲ; ಅಕ್ಷಿ: ಕಣ್ಣು; ನೋಡು: ವೀಕ್ಷಿಸು;

ಪದವಿಂಗಡಣೆ:
ಭೂರಿ +ಭೂರಿಶ್ರವನು +ದಕ್ಷಿಣ
ವೀರ +ಬಾಹ್ಲಿಕ +ವಿಂಧ್ಯ +ಚಿತ್ರ +ಭ
ಗೀರಥನು +ನೃಪವರ+ ಜಯದ್ರಥ +ಶಿಬಿ +ಶ್ರುತಾಯುಧರು
ವೀರ +ವೃದ್ಧಕ್ಷತ್ರ +ಸೃಂಜಯ
ಚಾರು +ಭುಜಬಲ+ ಸೋಮದತ್ತ+ಮ
ಹೀರಮಣರ್+ಇವರ್+ಇತ್ತಲಿದೆ+ ತರಳಾಕ್ಷಿ +ನೋಡೆಂದ

ಅಚ್ಚರಿ:
(೧) ದ್ರೌಪದಿಯನ್ನು ತರಳಾಕ್ಷಿ ಎಂದು ಕರೆದಿರುವುದು
(೨) ನೃಪ, ಮಹೀರಮಣ – ಸಮಾನಾರ್ಥಕ ಪದಗಳು
(೩) ಭೂರಿ, ಭೂರಿಶ್ರವ, ಭಗೀರಥ, ಬಾಹ್ಲಿಕ – “ಬ” ಕಾರದ ರಾಜರ ಹೆಸರು
(೪) ೧೨ ರಾಜರ ಪರಿಚಯ ಈ ಪದ್ಯದಲ್ಲಿ