ಪದ್ಯ ೧೬: ಧರ್ಮಜನು ಭೀಮನನ್ನು ಏಕೆ ಬಯ್ದನು?

ಭೀಮ ಹಾ ಹಾ ಕಷ್ಟವಿದು ಸಂ
ಗ್ರಾಮಜಯವೇ ಸಾಲದೇ ಕುರು
ಭೂಮಿಪತಿಯಶ್ಲಾಘ್ಯನೇ ಲೋಕೈಕಮಾನ್ಯನಲಾ
ನೀ ಮರುಳಲಾ ಸಾರೆನುತ ತ
ತ್ಸೀಮೆಗೈತಂದನಿಲತನುಜನ
ನಾ ಮಹೀಪತಿ ನೂಕಿ ಸಂತೈಸಿದನು ಕುರುಪತಿಯ (ಗದಾ ಪರ್ವ, ೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆಗ ಧರ್ಮಜನು ಭೀಮನಿದ್ದೆಡೆಗೆ ಹೋಗಿ, ಅವನನ್ನು ನೂಕಿ, ಭೀಮ ಇದು ಮಾಡಬಾರದ ಕೆಲಸ. ಯುದ್ಧದಲ್ಲಿ ಗೆದ್ದುದು ಸಾಲದೇ? ಕೌರವನು ಹೊಗಳಿಕೆಗೆ ಬಾಹಿರನೇ? ಅವನು ಲೋಕೈಕ ಮಾನ್ಯನು. ನೀನು ಮಾಡಿದ್ದು ಮೂಢತನದ ಕೆಲಸ ಎಂದು ಕೌರವನನ್ನು ಸಂತೈಸಿದನು.

ಅರ್ಥ:
ಕಷ್ಟ: ಕಠಿಣ; ಸಂಗ್ರಾಮ: ಯುದ್ಧ; ಜಯ: ಗೆಲುವು; ಸಾಲದೇ: ಸಾಕಾಗದೆ; ಭೂಮಿಪತಿ: ರಾಜ; ಶ್ಲಾಘ್ಯ: ಹೊಗಳು; ಲೋಕ: ಜಗತ್ತು; ಮಾನ್ಯ: ಗೌರವ, ಮನ್ನಣೆ; ಮರುಳ: ತಿಳಿಗೇಡಿ, ದಡ್ಡ; ಸಾರು: ಪ್ರಕಟಿಸು, ಘೋಷಿಸು; ಸೀಮೆ: ಎಲ್ಲೆ, ಗಡಿ; ಐತಂದು: ಬಂದು ಸೇರು; ಅನಿಲತನುಜ: ವಾಯು ಪುತ್ರ; ಮಹೀಪತಿ: ರಾಜ; ನೂಕು: ತಳ್ಳು; ಸಂತೈಸು: ಸಮಾಧಾನ ಪಡಿಸು;

ಪದವಿಂಗಡಣೆ:
ಭೀಮ +ಹಾ +ಹಾ +ಕಷ್ಟವಿದು+ ಸಂ
ಗ್ರಾಮ+ಜಯವೇ +ಸಾಲದೇ +ಕುರು
ಭೂಮಿಪತಿ+ಅಶ್ಲಾಘ್ಯನೇ +ಲೋಕೈಕ+ಮಾನ್ಯನಲಾ
ನೀ +ಮರುಳಲಾ +ಸಾರೆನುತ +ತತ್
ಸೀಮೆಗ್+ಐತಂದ್+ಅನಿಲತನುಜನನ್
ಆ+ ಮಹೀಪತಿ+ ನೂಕಿ +ಸಂತೈಸಿದನು +ಕುರುಪತಿಯ

ಅಚ್ಚರಿ:
(೧) ಮಹೀಪತಿ, ಭೂಮಿಪತಿ – ಸಮಾನಾರ್ಥಕ ಪದ

ಪದ್ಯ ೪೯: ಶಲ್ಯನು ಧರ್ಮಜನನ್ನು ಹೇಗೆ ಆಕ್ರಮಣ ಮಾಡಿದನು?

ಮರವೆ ಮಸುಳಿತೆ ಭೂಮಿಪತಿ ಕಂ
ದೆರದಿರೇ ಭೀಮಾರ್ಜುನರು ನಿ
ಮ್ಮಿರಿತಕೊದಗಿದರಿಲ್ಲಲಾ ನೀವೇಕೆ ರಣವೇಕೆ
ನೆರೆ ಧನುರ್ವೇದಾರ್ಥಸಾರವ
ನರಿವೆಯಾದರೆ ಕೊಳ್ಳೆನುತ ಬಿಡೆ
ತರಿದನೆಂಟಂಬಿನಲಿ ಧ್ವಜ ರಥ ಹಯವನಾ ಶಲ್ಯ (ಶಲ್ಯ ಪರ್ವ, ೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಶಲ್ಯನು, ದೊರೆಯೇ ಮೂರ್ಛೆಯಿಂದ ಹೊರಬಂದೆಯೇ? ಕಣ್ಣು ತೆರೆದೆಯಾ? ನಿನ್ನ ಕಷ್ಟಕ್ಕೆ ಭೀಮಾರ್ಜುನರು ಬರಲಿಲ್ಲವೇ? ನಿನಗೆ ಯುದ್ಧವೇಕೆ? ನಿನಗೆ ಧನುರ್ವೇದದ ಸಾರಾರ್ಥ ಗೊತ್ತಿದ್ದರೆ ಈ ಬಾಣಗಳನ್ನು ತಡೆ ಎಂದು ಎಂಟು ಬಾಣಗಳಿಂದ ಧರ್ಮಜನ ಧ್ವಜ, ರಥ, ಕುದುರೆಗಳನ್ನು ತುಂಡು ಮಾಡಿದನು.

ಅರ್ಥ:
ಮರವೆ: ಜ್ಞಾಪಕವಿಲ್ಲದ ಸ್ಥಿತಿ; ಮಸುಳು: ಕಾಂತಿಹೀನವಾಗು, ಮಂಕಾಗು; ಭೂಮಿಪತಿ: ರಾಜ; ಕಂದೆರೆದು: ಕಣ್ಣು ಬಿಟ್ಟು; ಇರಿತ: ಚುಚ್ಚು; ಒದಗು: ಲಭ್ಯ, ದೊರೆತುದು; ರಣ: ಯುದ್ಧ; ನೆರೆ: ಗುಂಪು; ಧನು: ಬಿಲ್ಲು; ಸಾರ: ಸತ್ವ; ಅರಿವು: ತಿಳಿ; ಕೊಳ್ಳು: ನೀಡು; ಬಿಡು: ತೊರೆ; ತರಿ: ಕಡಿ, ಕತ್ತರಿಸು; ಅಂಬು: ಬಾಣ; ಧ್ವಜ: ಬಾವುಟ; ರಥ: ಬಂಡಿ; ಹಯ: ಕುದುರೆ;

ಪದವಿಂಗಡಣೆ:
ಮರವೆ +ಮಸುಳಿತೆ+ ಭೂಮಿಪತಿ+ ಕಂ
ದೆರದಿರೇ +ಭೀಮಾರ್ಜುನರು+ ನಿಮ್ಮ್
ಇರಿತಕ್+ಒದಗಿದರಿಲ್ಲಲಾ +ನೀವೇಕೆ +ರಣವೇಕೆ
ನೆರೆ+ ಧನುರ್ವೇದಾರ್ಥ+ಸಾರವನ್
ಅರಿವೆಯಾದರೆ+ ಕೊಳ್ಳೆನುತ +ಬಿಡೆ
ತರಿದನ್+ಎಂಟಂಬಿನಲಿ +ಧ್ವಜ+ ರಥ +ಹಯವನ್+ಆ+ಶಲ್ಯ

ಅಚ್ಚರಿ:
(೧) ಧರ್ಮಜನನ್ನು ಹಂಗಿಸುವ ಪರಿ – ಮರವೆ ಮಸುಳಿತೆ ಭೂಮಿಪತಿ
(೨) ಧರ್ಮಜನನ್ನು ಕೆಣಕುವ ಪರಿ – ಧನುರ್ವೇದಾರ್ಥಸಾರವನರಿವೆಯಾದರೆ

ಪದ್ಯ ೩೩: ಧರ್ಮಜನು ಏನೆಂದು ಯೋಚಿಸಿದನು?

ಆ ಮಹಾ ಮೋಹರವನೊಡೆಯಲು
ಸೋಮಕುಲಜರು ಭೀತರಾದರು
ಹಾ ಮಹಾದೇವೆನುತ ಧರ್ಮಜ ನೋಡಿ ತಲೆದೂಗಿ
ರಾಮನರಿವನು ಕೃಷ್ಣನರಿವನು
ಸೀಮೆಯಲಿ ಕಲಿ ಪಾರ್ಥನರಿವನು
ಭೂಮಿಪತಿಗಳೊಳುಳಿದ ಸುಭಟರಿಗರಿವುದಿಲ್ಲೆಂದ (ದ್ರೋಣ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಆ ಸೈನ್ಯದ ಪದ್ಮವ್ಯೂಹವನ್ನು ಒಡೆಯಲು ಹೋಗಿ ಚಂದ್ರವಂಶದಲ್ಲಿ ಹುಟ್ಟಿದವರು ಅಸಮರ್ಥರಾಗಿ ಭಯಗೊಂಡು ಹಿಂದಿರುಗಿದರೇ, ಶಿವ ಶಿವಾ, ಎಂದು ಧರ್ಮಜನು ನೋಡಿ ತಲೆಯನ್ನು ತೂಗುತ್ತಾ, ಈ ವ್ಯೂಹವನ್ನು ಭೇದಿಸಲು ರಾಮನು ಬಲ್ಲ, ಕೃಷ್ಣನು ಬಲ್ಲ, ಸೀಮೆಯಲ್ಲಿ ಹೋರಾಡುತ್ತಿರುವ ಅರ್ಜುನನೂ ಬಲ್ಲ, ಇವರನ್ನು ಬಿಟ್ಟರೆ ಇನ್ನಾವ ಪರಾಕ್ರಮಿ ರಾಜರಿಗೂ ತಿಳಿದಿಲ್ಲ ಎಂದು ಯೋಚಿಸಿದನು.

ಅರ್ಥ:
ಮಹಾ: ದೊಡ್ಡ; ಮೋಹರ: ಯುದ್ಧ; ಒಡೆ: ಸೀಳು, ಬಿರಿ; ಸೋಮಕುಲ: ಚಂದ್ರವಂಶ; ಭೀತ: ಭಯ; ಮಹಾದೇವ: ಶಿವ; ನೋಡು: ವೀಕ್ಷಿಸು; ತಲೆ: ಶಿರ; ತೂಗು: ಅಲ್ಲಾಡಿಸು; ಅರಿ: ತಿಳಿ; ಸೀಮೆ: ಎಲ್ಲೆ, ಗಡಿ; ಕಲಿ: ಶೂರ; ಭೂಮಿಪತಿ: ರಾಜ; ಉಳಿದ: ಮಿಕ್ಕ; ಸುಭಟ: ಪರಾಕ್ರಮಿ;

ಪದವಿಂಗಡಣೆ:
ಆ +ಮಹಾ +ಮೋಹರವನ್+ಒಡೆಯಲು
ಸೋಮಕುಲಜರು +ಭೀತರಾದರು
ಹಾ +ಮಹಾದೇವೆನುತ +ಧರ್ಮಜ +ನೋಡಿ +ತಲೆದೂಗಿ
ರಾಮನ್+ಅರಿವನು +ಕೃಷ್ಣನ್+ಅರಿವನು
ಸೀಮೆಯಲಿ +ಕಲಿ +ಪಾರ್ಥನ್+ಅರಿವನು
ಭೂಮಿಪತಿಗಳೊಳ್+ಉಳಿದ +ಸುಭಟರಿಗ್+ಅರಿವುದಿಲ್ಲೆಂದ

ಅಚ್ಚರಿ:
(೧) ಪಾಂಡವರು ಎಂದು ಹೇಳಲು – ಸೋಮಕುಲಜರು ಎಂಬ ಪದದ ಪ್ರಯೋಗ
(೨) ಕಲಿ, ಸುಭಟ – ಸಾಮ್ಯಾರ್ಥ ಪದಗಳು

ಪದ್ಯ ೩೮: ಭೀಮನೊಡನೆ ಯಾರು ಯುದ್ಧಕ್ಕಿಳಿದರು?

ಭೀಮನಿನ್ನ ರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಮ್ತಿಯ
ತಾಮಸಿಕೆ ಘನ ತೆಗಿಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈ ಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು (ದ್ರೋಣ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಇನ್ನು ಅರೆಗಳಿಗೆಯಲ್ಲಿ ನಿರ್ನಾಮನಾಗುತ್ತಾನೆ. ಹೆಚ್ಚು ಹೊತ್ತು ಬೇಕಾಗಿಲ್ಲ. ಆನೆಯ ಬಲ ಕೋಪಗಳು ಅತಿಶಯವಾಗಿವೆ. ಅವನನ್ನು ಯುದ್ಧದಿಂದ ಹಿಂದಕ್ಕೆ ತೆಗೆಸಿ ಎನ್ನುತ್ತಾ ಧರ್ಮಜನು ಯುದ್ಧಕ್ಕೆ ಮುಂದಾಗಲು, ನಕುಲ, ಸಾತ್ಯಕಿ, ಘಟೋತ್ಕಚ, ಅಭಿಮನ್ಯು, ದ್ರುಪದ, ಶಿಖಂಡಿ, ಕೈಕೆಯರು ಅವನೊಡನೆ ಯುದ್ಧಕ್ಕಿಳಿದರು.

ಅರ್ಥ:
ಅರೆ: ಅರ್ಧ; ಘಳಿಗೆ: ಸಮಯ; ನಿರ್ನಾಮ: ನಾಶ; ತಡ: ನಿಧಾನ; ದಂತಿ: ಆನೆ; ತಾಮಸ: ಜಾಡ್ಯ, ಜಡತೆ; ಘನ: ಶ್ರೇಷ್ಠ; ತೆಗೆ: ಹೊರತರು; ತಮ್ಮ: ಸಹೋದರ; ಕಳವಳ: ಗೊಂದಲ; ಭೂಮಿಪತಿ: ರಾಜ; ಒಡನೆ: ಕೂಡಲೆ; ಸನಾಮ: ಪ್ರಸಿದ್ಧವಾದ ಹೆಸರುಳ್ಳ; ಐದು: ಬಂದು ಸೇರು; ಸುತ: ಮಗ;

ಪದವಿಂಗಡಣೆ:
ಭೀಮನ್+ಇನ್ನ್+ಅರೆ+ಘಳಿಗೆಯಲಿ +ನಿ
ರ್ನಾಮನೋ +ತಡವಿಲ್ಲ+ ದಂತಿಯ
ತಾಮಸಿಕೆ +ಘನ +ತೆಗಿಯಿ +ತಮ್ಮನನ್+ಎನುತ +ಕಳವಳಿಸೆ
ಭೂಮಿಪತಿ +ಕೈ +ಕೊಂಡನೊಡನೆ +ಸನಾಮರ್
ಐದಿತು +ನಕುಲ +ಸಾತ್ಯಕಿ
ಭೀಮಸುತನ್+ಅಭಿಮನ್ಯು +ದ್ರುಪದ +ಶಿಖಂಡಿ +ಕೈಕೆಯರು

ಅಚ್ಚರಿ:
(೧) ಭೀಮ – ೧, ೬ ಸಾಲಿನ ಮೊದಲ ಪದ

ಪದ್ಯ ೧: ಪಾಂಡವರು ಎಲ್ಲಿಗೆ ಬಂದರು?

ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಜನ ನೃಪಜನಂಗಳ
ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ
ಮೇಲು ಶಕುನದ ಚಾರುನಿನದವ
ನಾಲಿಸುತ ಸೋದರರು ಸಹಿತ ವ
ನಾಲಯವ ಹೊರವಂಟು ಸೇರಿದರೊಂದು ವಟಕುಜವ (ವಿರಾಟ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಯುಧಿಷ್ಠಿರನು ವನವಾಸದ ಅವಧಿ ಮುಗಿದ ಮೇಲೆ ತನ್ನೊಡನಿದ್ದ ಮುನಿಗಳನ್ನೂ, ಮಿತ್ರರಾಜರನ್ನೂ ಬೀಳ್ಕೊಟ್ಟನು. ಅಗ್ನಿಯನ್ನು ಪ್ರದಕ್ಷಿಣೆ ಮಾಡಿ ಹೊರಟನು. ದಾರಿಯಲ್ಲಿ ಶುಭಶಕುನಗಳನ್ನು ನೋಡುತ್ತಾ, ಇಂಪಾದ ಶಬ್ದವನ್ನು ಕೇಳುತ್ತಾ ತಮ್ಮಂದಿರೊಡನೆ ಒಂದು ಆಲದ ಮರದ ಬಳಿಗೆ ಬಂದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಮುನಿ: ಋಷಿ; ನೃಪ: ರಾಜ; ಬೀಳುಗೊಡು: ತೆರಳು; ಭೂಮಿಪತಿ: ರಾಜ; ಬಲವಂದು: ಪ್ರದಕ್ಷಿಣೆ; ಹುತವಹ: ಅಗ್ನಿ; ಶಕುನ: ನಿಮಿತ್ತ, ಭವಿಷ್ಯ; ಚಾರು: ಸುಂದರ; ನಿನದ: ಶಬ್ದ; ಆಲಿಸು: ಕೇಳು; ಸಹಿತ: ಜೊತೆ; ಸೋದರ: ಅಣ್ಣ ತಮ್ಮಂದಿರು; ಸಹಿತ: ಜೊತೆ; ವನಾಲಯ: ಕಾಡಿನ ವಾಸಸ್ಥಾನ; ಹೊರವಂಟು: ಹೊರಡು; ಸೇರು: ಜೊತೆಗೂಡು; ವಟ: ಆಲದ ಮರ; ಕುಜ: ಗಿಡ, ಮರ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಮುನಿಜನ +ನೃಪ+ಜನಂಗಳ
ಬೀಳುಗೊಟ್ಟನು+ ಭೂಮಿಪತಿ +ಬಲವಂದು +ಹುತವಹನ
ಮೇಲು +ಶಕುನದ +ಚಾರು+ನಿನದವನ್
ಆಲಿಸುತ +ಸೋದರರು +ಸಹಿತ +ವ
ನಾಲಯವ+ ಹೊರವಂಟು +ಸೇರಿದರೊಂದು +ವಟಕುಜವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀಳುಗೊಟ್ಟನು ಭೂಮಿಪತಿ ಬಲವಂದು
(೨) ಧರಿತ್ರೀಪಾಲ, ಭೂಮಿಪತಿ, ನೃಪ – ಸಮನಾರ್ಥಕ ಪದ

ಪದ್ಯ ೪೮: ನಹುಷನು ಧರ್ಮಜನಿಗೆ ಮೊದಲು ಯಾವ ಪ್ರಶ್ನೆಯನ್ನು ಕೇಳಿದನು?

ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮ ಸ್ಥಿತಿಯನಭಿವ
ರ್ಣಿಸುವೆನೆಂದೈ ಭೂಮಿಪತಿ ಭೂದೇವ ಕುಲದೊಳಗೆ
ಎಸೆವ ವಿಪ್ರನದಾರು ಪರಿಶೋ
ಭಿಸುವುದೀ ಬ್ರಾಹ್ಮಣ್ಯವೇತರ
ದೆಸೆಯೊಳಿದನೇ ಮುನ್ನಹೇಳೆನೆ ರಾಯನಿಂತೆಂದ (ಅರಣ್ಯ ಪರ್ವ, ೧೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಹುಷನು ಧರ್ಮಜನ ಮಾತನ್ನು ಕೇಳಿ, ವಿಖ್ಯಾತರಾದ ಬ್ರಾಹ್ಮಣರು ಅರಿತ ಧರ್ಮವನ್ನು ಹೇಳುತ್ತೇನೆಂದೆಯಲ್ಲವೇ? ಹಾಗಾದರೆ ಬ್ರಾಹ್ಮಣರಲ್ಲಿ ವಿಪ್ರನಾರು? ಬ್ರಾಹ್ಮಣ್ಯವು ಏತರದಿಂದ ಶೋಭಿತವಾಗಿದೆ? ಅದನ್ನೇ ಮೊದಲು ಹೇಳು ಎಂದನು.

ಅರ್ಥ:
ಎಸೆ: ಶೋಭಿಸು; ಒಗೆ; ವಿಪ್ರ: ಬ್ರಾಹ್ಮಣ; ಮತಿ: ಬುದ್ಧಿ; ಸಂಭಾವಿಸು: ಯೋಚಿಸು; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಇರವು, ಅಸ್ತಿತ್ವ; ಅಭಿವರ್ಣಿಸು: ಬಣ್ಣಿಸು, ವಿವರಿಸು; ಭೂಮಿಪತಿ: ರಾಜ; ಭೂದೇವ: ಬ್ರಾಹ್ಮಣ; ಕುಲ: ವಂಶ; ವಿಪ್ರ: ಬ್ರಾಹ್ಮಣ; ಪರಿಶೋಭಿಸು: ಅಂದವಾಗು, ಪ್ರಕಾಶಿಸು; ದೆಸೆ: ದೆಶೆ, ಕಾರಣ; ಮುನ್ನ: ಮೊದಲು; ಹೇಳು: ತಿಳಿಸು; ರಾಯ: ರಾಜ;

ಪದವಿಂಗಡಣೆ:
ಎಸೆವ +ವಿಪ್ರರ +ಮತಿಗೆ +ಸಂಭಾ
ವಿಸುವ +ಧರ್ಮ +ಸ್ಥಿತಿಯನ್+ಅಭಿವ
ರ್ಣಿಸುವೆನೆಂದೈ+ ಭೂಮಿಪತಿ+ ಭೂದೇವ+ ಕುಲದೊಳಗೆ
ಎಸೆವ+ ವಿಪ್ರನದ್+ಆರು+ ಪರಿಶೋ
ಭಿಸುವುದೀ +ಬ್ರಾಹ್ಮಣ್ಯವ್+ಏತರ
ದೆಸೆಯೊಳ್+ಇದನೇ +ಮುನ್ನ+ಹೇಳೆನೆ+ ರಾಯನ್+ಇಂತೆಂದ

ಅಚ್ಚರಿ:
(೧) ವಿಪ್ರ, ಬ್ರಾಹ್ಮಣ, ಭೂದೇವ – ಸಮನಾರ್ಥಕ ಪದ

ಪದ್ಯ ೧೦: ಧರ್ಮಜನು ಸಂತಸಪಡಲು ಕಾರಣವೇನು?

ಭೂಮಿ ಪತಿ ಭುಲ್ಲವಿಸಿದನು ನಿ
ಸ್ಸೀಮ ಸಂತೋಷದಲಿ ಸುಜನ
ಸ್ತೋಮ ರಕ್ಷಣಕಾದ ನಿರ್ವಾಹದ ನಿರೂಢಿಯಲಿ
ಆ ಮುನೀಂದ್ರಂಗೆರಗಿ ಬಳಿಕಾ
ಭಾಮಿನಿಯ ಕರೆದೀ ಹದನ ಸು
ಪ್ರೇಮದಿಂದರುಹಿದನು ತನ್ನ ಸಹೋದರ ವ್ರಜಕೆ (ಅರಣ್ಯ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸೂರ್ಯದೇವನಿಂದ ವರವನ್ನು ಪಡೆದ ಯುಧಿಷ್ಠಿರನಿಗೆ ಅತೀವ ಸಂತಸವಾಯಿತು, ಹರ್ಷದಿಂದ ಉಬ್ಬಿದನು, ತನ್ನ ಪರಿವಾರದ ಸಜ್ಜನರ ರಕ್ಷಣೆ ಮಾಡುವ ಖ್ಯಾತಿ ತನಗುಂಟಾಯಿತೆಂದು ಸಮಾಧಾನ ಪಟ್ಟನು. ಧೌಮ್ಯರಿಗೆ ನಮಸ್ಕರಿಸಿ, ದ್ರೌಪದಿಗೆ ಅಕ್ಷಯ ಪಾತ್ರೆಯನ್ನು ನೀಡಿ, ತನ್ನ ಸಹೋದರರೆಲ್ಲರಿಗೂ ಸೂರ್ಯನು ವರವನಿತ್ತುದರ ಬಗ್ಗೆ ತಿಳಿಸಿದನು.

ಅರ್ಥ:
ಭೂಮಿ: ಧರಣಿ; ಭೂಮಿಪತಿ: ರಾಜ; ಭುಲ್ಲವಿಸು: ಉತ್ಸಾಹಗೊಳ್ಳು; ನಿಸ್ಸೀಮ: ಎಲ್ಲೆಯಿಲ್ಲದುದು; ಸಂತೋಷ: ಹರ್ಷ; ಸುಜನ: ಒಳ್ಳೆಯಜನರು; ಸ್ತೋಮ: ಗುಂಪು; ರಕ್ಷಣ: ಕಾಪಾಡು; ನಿರ್ವಾಹ: ಆಧಾರ, ಆಶ್ರಯ; ನಿರೂಢಿ: ವಿಶೇಷ ರೂಢಿಯಾದ; ಮುನಿ: ಋಷಿ; ಎರಗು: ನಮಸ್ಕರಿಸು; ಬಳಿಕ: ನಂತರ; ಭಾಮಿನಿ: ಹೆಂಡತಿ; ಕರೆ: ಬರೆಮಾಡು; ಹದ: ಸ್ಥಿತಿ; ಸುಪ್ರೇಮ: ಒಲವು; ಅರುಹು: ಹೇಳು; ಸಹೋದರ: ತಮ್ಮ; ವ್ರಜ: ಗುಂಪು;

ಪದವಿಂಗಡಣೆ:
ಭೂಮಿಪತಿ+ ಭುಲ್ಲವಿಸಿದನು+ ನಿ
ಸ್ಸೀಮ +ಸಂತೋಷದಲಿ+ ಸುಜನ
ಸ್ತೋಮ +ರಕ್ಷಣಕಾದ+ ನಿರ್ವಾಹದ+ ನಿರೂಢಿಯಲಿ
ಆ +ಮುನೀಂದ್ರಂಗ್+ಎರಗಿ+ ಬಳಿಕ +ಆ
ಭಾಮಿನಿಯ +ಕರೆದ್+ಈ+ ಹದನ +ಸು
ಪ್ರೇಮದಿಂದ್+ಅರುಹಿದನು +ತನ್ನ +ಸಹೋದರ +ವ್ರಜಕೆ

ಅಚ್ಚರಿ:
(೧) ಧರ್ಮಜನ ಸಂತಸದ ಕಾರಣ – ಸುಜನಸ್ತೋಮ ರಕ್ಷಣಕಾದ ನಿರ್ವಾಹದ ನಿರೂಢಿಯಲಿ
(೨) ಸುಜನ, ಸುಪ್ರೇಮ – ಸು ಕಾರದಿಂದ ಪ್ರಾರಂಭಗೊಳ್ಳುವ ಪದ್