ಪದ್ಯ ೧೩: ಕುಂತಿ ಯಾರ ಬಳಿ ಬೆಳೆಯುತ್ತಿದ್ದಳು?

ಇತ್ತ ಕುಂತಿಭೋಜನೆಂಬ ನೃ
ಪೋತ್ತಮನ ಭವನದಲಿ ಮುರಹರ
ನತ್ತೆ ಬೆಳೆವುತ್ತಿರ್ದಳಾ ವಸುದೇವ ನೃಪನನುಜೆ
ಹೆತ್ತವರಿಗೋಲೈಸುವರಿಗೆ ಮ
ಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ (ಆದಿ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ವಸುದೇವನ ತಂಗಿಯಾದ, ಶ್ರೀಕೃಷ್ಣನ ಅತ್ತೆಯಾದ ಕುಂತಿಯು ಕುಂತೀಭೋಜನನೆಂಬ ರಾಜನಲ್ಲಿ ಬೆಳೆಯುತ್ತಿದ್ದಳು. ತನ್ನನ್ನು ಹೆತ್ತ ತಂದೆ ತಾಯಿಗಳಿಗೂ, ಸಾಕು ತಂದೆ ತಾಯಿಗಳಿಗೂ, ಶ್ರೇಷ್ಠರಾದವರಿಗೂ ಸಮಸ್ತಲೋಕಕ್ಕೂ ಮೆಚ್ಚುಗೆಯಾಗುವಂತೆ ಉತ್ತಮ ಗುಣಶಾಲಿಯಾಗಿದ್ದಳು.

ಅರ್ಥ:
ನೃಪ: ರಾಜ; ಉತ್ತಮ: ಶ್ರೇಷ್ಠ; ಭವನ: ಆರಮನೆ, ಆಲಯ; ಮುರಹರ: ಕೃಷ್ಣ; ಅತ್ತೆ: ತಂದೆಯ ತಂಗಿ; ಬೆಳೆ: ಏಳಿಗೆ ಹೊಂದು; ಅನುಜೆ: ತಂಗಿ; ಹೆತ್ತ: ಹುಟ್ಟಿಸಿದ; ಓಲೈಸು: ಉಪಚರಿಸು; ಮಹೋತ್ತಮ: ಶ್ರೇಷ್ಠ; ಉಳಿದ: ಮಿಕ್ಕ; ಅಖಿಳ: ಎಲ್ಲಾ; ಲೋಕ: ಜಗತ್ತು; ಚಿತ್ತ: ಮನಸ್ಸು; ಅಹುದು: ಒಪ್ಪಿಗೆಯಾಗುವಂತೆ; ನಡೆ: ನಡಗೆ, ಆಚರಣೆ; ಗುಣ: ನಡತೆ, ಸ್ವಭಾವ; ಮೆರೆ: ಶೋಭಿಸು;

ಪದವಿಂಗಡಣೆ:
ಇತ್ತ +ಕುಂತಿಭೋಜನೆಂಬ +ನೃಪ
ಉತ್ತಮನ +ಭವನದಲಿ +ಮುರಹರನ್
ಅತ್ತೆ+ ಬೆಳೆವುತ್ತಿರ್ದಳಾ +ವಸುದೇವ+ ನೃಪನ್+ಅನುಜೆ
ಹೆತ್ತವರಿಗ್+ಓಲೈಸುವರಿಗೆ +ಮ
ಹೋತ್ತಮರಿಗ್+ಉಳಿದ್+ಅಖಿಳ +ಲೋಕದ
ಚಿತ್ತಕ್+ಅಹುದ್+ಎನೆ +ನಡೆವ +ಗುಣದಲಿ +ಮೆರೆದಳಾ +ಕುಂತಿ

ಅಚ್ಚರಿ:
(೧) ಕುಂತಿಯನ್ನು ಕರೆದ ಪರಿ – ಮುರಹರನತ್ತೆ, ವಸುದೇವ ನೃಪನನುಜೆ
(೨) ಕುಂತಿಯನ್ನು ಹೊಗಳಿದ ಪರಿ – ಹೆತ್ತವರಿಗೋಲೈಸುವರಿಗೆ ಮಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣ

ಪದ್ಯ ೯: ಯಾರು ಯಾರ ಮನೆಯನ್ನು ಸೇರಿದರು?

ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಯಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ (ಗದಾ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಸುಯೋಧನನ ಅರಮನೆಯನ್ನು ಹೊಕ್ಕನು, ಭೀಮನು ದುಶ್ಯಾಸನನ ಮನೆಯನ್ನೂ, ಅರ್ಜುನನು ಕರ್ಣನ ಭವನವನ್ನು, ನಕುಲಸಹದೇವರು ದುಶ್ಯಾಸನನಿಗಿಂದ ಚಿಕ್ಕವರಾದ ಕೌರವರ ಮನೆಗಳನ್ನು ಹೊಕ್ಕರು. ಉಳಿದೆಲ್ಲ ಅರಮನೆಗಳೂ ಭಂಡಾರ ಭವನಗಳಾದವು.

ಅರ್ಥ:
ಅರಮನೆ: ರಾಜರ ಆಲಯ; ಅವನೀಶ: ರಾಜ; ಹೊಕ್ಕು: ಸೇರು; ಪವನಸುತ: ಭೀಮ; ಪವನ: ಗಾಳಿ, ವಾಯು; ಸುತ: ಮಗ; ಸದನ: ಆಲಯ; ಭವನ: ಆಲಯ; ವಾಸ: ಜೀವಿಸು; ಯಮಳ: ಜೋಡಿ ಮಕ್ಕಳು, ಅವಳಿ; ಅನುಜ: ತಮ್ಮ; ಉಳಿದ: ಮಿಕ್ಕ; ಐಸು: ಎಲ್ಲ; ಭಂಡಾರ: ಬೊಕ್ಕಸ, ಖಜಾನೆ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆ+ ಸುಯೋಧನನ್+ಅರಮನೆಯನ್+ಅವ
ನೀಶ +ಹೊಕ್ಕನು+ ಪವನಸುತ +ದು
ಶ್ಯಾಸನನ+ ಸದನವನು +ಪಾರ್ಥಗೆ +ಕರ್ಣ+ಭವನದಲಿ
ವಾಸವಾದುದು +ಯಮಳರಿಗೆ +ದು
ಶ್ಯಾಸನ+ಅನುಜರ್+ಅರಮನೆಗಳ್+ಉಳಿದ್
ಐಸು+ಮನೆ +ಭಂಡಾರವಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಸದನ, ಮನೆ, ಅರಮನೆ, ಭವನ – ಸಾಮ್ಯಾರ್ಥ ಪದ
(೨) ಒಂದೇ ಪದವಾಗಿ ರಚನೆ: ಸುಯೋಧನನರಮನೆಯನವನೀಶ, ದುಶ್ಯಾಸನಾನುಜರರಮನೆಗಳುಳಿದೈಸುಮನೆ

ಪದ್ಯ ೩೩: ಅಶ್ವತ್ಥಾಮನು ಪಾಂಡವರನ್ನು ಅರಸಿ ಯಾರ ಅರಮನೆಗೆ ಬಂದನು?

ಗಜಬಜವಿದೇನೆನುತ ನಿದ್ರೆಯ
ಮಜಡರೊಳಗೊಳಗರಿದರೀತನ
ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ
ರಜನಿಯಲಿ ರೌಕುಳವ ಮಾಡಿದ
ನಜಿತಸಾಹಸನಿತ್ತ ದ್ರುಪದಾ
ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ (ಗದಾ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಈ ಸದ್ದಿನಿಂದ ನಿದ್ದೆಯಲ್ಲಿ ಮಗ್ನರಾದವರು ಎದ್ದು ಗೊಂದಲಗೊಂಡು ಇವನು ಅಶ್ವತ್ಥಾಮನೇ ಎಂದು ತಿಳಿದರೂ ಸೃಂಜಯಾದಿಗಳು ಇವನ ಎದುರು ಹೋರಾಡಿ ಮಡಿದರು. ಆ ರಾತ್ರಿಯಲ್ಲಿ ರಕ್ತದ ಹೊನಲುಹರಿಸಿ ದ್ರೌಪದಿಯ ಭವನದಲ್ಲಿ ಪಾಂಡವರಿರಬಹುದೆಂದು ಹುಡುಕುತ್ತಾ ಹೋದನು.

ಅರ್ಥ:
ಗಜಬಜ: ಗೊಂದಲ; ನಿದ್ರೆ: ಶಯನ; ಮಜಡ: ದಡ್ಡ, ತಿಳಿಗೇಡಿ; ಭುಜಬಲ: ಪರಾಕ್ರಮ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಕಾಣು: ತೋರು; ರಜನಿ: ರಾತ್ರಿ; ರೌಕುಳ: ಅವ್ಯವಸ್ಥೆ, ಆಧಿಕ್ಯ; ಅಜಿತ: ಅಜೇಯ, ಸೋಲಿಲ್ಲದ; ಸಾಹಸ: ಪರಾಕ್ರಮ; ಆತ್ಮಜೆ: ಮಗಳು; ಭವನ: ಆಲಯ; ಹೊರೆ: ಹತ್ತಿರ, ಸಮೀಪ; ಬಂದು: ಆಗಮಿಸು; ಅರಸು: ಹುಡುಕು;

ಪದವಿಂಗಡಣೆ:
ಗಜಬಜವಿವ್+ಏನೆನುತ +ನಿದ್ರೆಯ
ಮಜಡರೊಳಲ್+ಒಳಗರಿದರ್+ಈತನ
ಭುಜಬಲಕೆ +ಮಲೆತವರ +ಕಾಣೆನು +ಸೃಂಜಯಾದಿಗಳ
ರಜನಿಯಲಿ +ರೌಕುಳವ +ಮಾಡಿದನ್
ಅಜಿತಸಾಹಸನ್+ಇತ್ತ+ ದ್ರುಪದಾ
ತ್ಮಜೆಯ +ಭವನದ +ಹೊರೆಗೆ +ಬಂದನು+ ಪಾಂಡವರನ್+ಅರಸಿ

ಅಚ್ಚರಿ:
(೧) ಅಶ್ವತ್ಥಾಮನನ್ನು ಅಜಿತಸಾಹಸ ಎಂದು ಕರೆದಿರುವುದು
(೨) ದ್ರೌಪದಿಯನ್ನು ದ್ರುಪದಾತ್ಮಜೆ ಎಂದು ಕರೆದಿರುವುದು
(೩) ಯುದ್ಧದ ತೀವ್ರತೆ – ರಜನಿಯಲಿ ರೌಕುಳವ ಮಾಡಿದನಜಿತಸಾಹಸನ್

ಪದ್ಯ ೧೭: ಯಾವ ಆಲಯಗಳಿಂದ ಗಾಡಿಗಳನ್ನು ತುಂಬಿದರು?

ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ (ಗದಾ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೊರೆಯ ಅರಮನೆ, ಮಂಟಪ, ಧ್ವಜ, ಲಾಯ, ಚೌಕಿ, ಮನೆಗಳನ್ನೆಲ್ಲಾ ತೆಗೆದು ಬಂಡಿಗಳ ಸಾಲಿನಲ್ಲಿ ಒಟ್ಟಿದರು. ದೊರೆಯ ತಮ್ಮಂದಿರು, ದ್ರೋಣ, ಕೃಪ, ಕರ್ಣ, ಸೈಂಧವ, ಶಕುನಿ, ರಾಜರ ಆಪ್ತರ ಗುಡಿ ಗುಡಾರಗಳನ್ನು ಗಾಡಿಗಳಲ್ಲಿ ಒಟ್ಟಿದರು.

ಅರ್ಥ:
ರಾಯ: ರಾಜ; ಅರಮನೆ: ರಾಜರ ಆಲಯ; ಮಂಡವಿಗೆ: ಮಂಟಪ; ಗುಡಿ: ಕುಟೀರ, ಮನೆ; ಲಾಯ: ಅಶ್ವಶಾಲೆ; ಚವುಕಿ: ಪಡಸಾಲೆ, ಚೌಕಿ; ನಿಖಿಳ: ಎಲ್ಲಾ; ಭವನ: ಆಲಯ; ನಿಕಾಯ: ಗುಂಪು; ತೆಗೆ: ಹೊರತರು; ಒಟ್ಟು: ಸೇರಿಸು; ಬಂಡಿ: ರಥ; ಹಂತಿ: ಪಂಕ್ತಿ, ಸಾಲು; ರಾಯ: ರಾಜ; ಅನುಜ: ತಮ್ಮ; ಪಸಾಯಿತ: ಆಪ್ತರು; ಚಂಪೆಯ: ಡೇರ; ಏರು: ಹತ್ತು;

ಪದವಿಂಗಡಣೆ:
ರಾಯನ್+ಅರಮನೆ +ಮಂಡವಿಗೆ +ಗುಡಿ
ಲಾಯ +ಚವುಕಿಗೆ+ ನಿಖಿಳ +ಭವನ +ನಿ
ಕಾಯವನು +ತೆಗೆದ್+ಒಟ್ಟಿದರು +ಬಂಡಿಗಳ +ಹಂತಿಯಲಿ
ರಾಯನ್+ಅನುಜರ +ದ್ರೋಣ +ಕೃಪ +ರಾ
ಧೇಯ +ಸೈಂಧವ +ಶಕುನಿ +ರಾಜ+ಪ
ಸಾಯಿತರ +ಗುಡಿ+ಗೂಢ+ಚಂಪಯವ್+ಏರಿದವು +ರಥವ

ಅಚ್ಚರಿ:
(೧) ಜಾಗಗಳನ್ನು ಹೇಳುವ ಪರಿ – ಅರಮನೆ, ಮಂಡವಿಗೆ, ಗುಡಿ, ಲಾಯ, ಚವುಕಿ, ಭವನ

ಪದ್ಯ ೬೫: ದುಶ್ಯಾಸನು ಕೋಪಗೊಂಡು ಹೇಗೆ ದ್ರೌಪದಿಯ ಮುಡಿಗೆ ಕೈಹಾಕಿದ?

ಎಲ್ಲಿಯದು ದುಷ್ಪ್ರಶ್ನೆ ಮರು ಮಾ
ತೆಲ್ಲಿಯದು ನೀ ಪುಷ್ಪವತಿಯಾ
ಗಿಲ್ಲಿ ಫಲವತಿಯಾಗು ನಡೆ ಕುರುರಾಯ ಭವನದಲಿ
ಖುಲ್ಲರೈವರು ತಮ್ಮ ಸೋತರು
ಬಲ್ಲವಿಕೆಯುಚಿತವನು ಮೌಳಿಯ
ನಲ್ಲಿ ತೋರಾಯೆನುತ ತಪ್ಪಿದನಹಹ ಸಿರಿಮುಡಿಗೆ (ಸಭಾ ಪರ್ವ, ೧೫ ಸಂಧಿ, ೬೫ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿನಿಂದ ಕೋಪಗೊಂಡ ದುಶ್ಯಾಸನನು ನಿನ್ನದೆಂತಹ ದುಷ್ಟ ಪ್ರಶ್ನೆ, ಅದಕ್ಕೆ ಉತ್ತರವೇಕೆ. ನೀನಿಲ್ಲಿ ಪುಷ್ಪವತಿಯಾಗಿದ್ದೀಯ ನಡೆ ದುರ್ಯೋಧನನ ಅರಮನೆಯಲ್ಲಿ ಫಲವತಿಯಾಗು, ಕೆಲಸಕ್ಕೆ ಬಾರದ ಐವರು ತಮ್ಮನ್ನೇ ತಾವು ಸೋತಿದ್ದಾರೆ, ನಿನ್ನ ಉಚಿತವಾದ ತಿಳುವಳಿಕೆಯನ್ನು, ಬುದ್ಧಿಯನ್ನು ಅಲ್ಲಿ ತೋರಿಸು ಎನ್ನುತಾ ಅಯ್ಯೋ ಆಕೆಯ ಸಿರಿಮುಡಿಗೆ ಕೈಹಾಕಿದನು.

ಅರ್ಥ:
ದುಷ್ಪ್ರಶ್ನೆ: ದುಷ್ಟ ಪ್ರಶ್ನೆ; ಪ್ರಶ್ನೆ: ಪೃಚ್ಛೆ; ಮರು: ತಿರುಗಿ; ಮಾತು: ವಾಕ್, ನುಡಿ; ಪುಷ್ಪವತಿ: ಋತುವತಿ; ಫಲವತಿ: ಗರ್ಭಿಣಿ; ಕುರುರಾಯ: ದುರ್ಯೋಧನ; ಭವನ: ಅರಮನೆ; ಖುಲ್ಲ: ನೀಚ, ದುಷ್ಟ; ಸೋಲು: ಪರಾಭವ; ಬಲ್ಲವಿಕೆ: ತಿಳುವಳಿಕೆ; ಉಚಿತ: ಸರಿಯಾದುದ; ಮೌಳಿ: ತಲೆ; ತೋರು: ಪ್ರದರ್ಶಿಸು; ತಪ್ಪಿದ: ಸರಿನಡಿಗೆಯಲ್ಲದ; ಅಹಹ: ಅಯ್ಯೋ; ಸಿರಿ: ಶ್ರೇಷ್ಠ; ಮುಡಿ: ತಲೆ, ಶಿರ;

ಪದವಿಂಗಡಣೆ:
ಎಲ್ಲಿಯದು+ ದುಷ್ಪ್ರಶ್ನೆ +ಮರು +ಮಾ
ತೆಲ್ಲಿಯದು +ನೀ +ಪುಷ್ಪವತಿಯಾ
ಗಿಲ್ಲಿ+ ಫಲವತಿಯಾಗು +ನಡೆ +ಕುರುರಾಯ +ಭವನದಲಿ
ಖುಲ್ಲರ್+ಐವರು +ತಮ್ಮ +ಸೋತರು
ಬಲ್ಲವಿಕೆ+ಉಚಿತವನು +ಮೌಳಿಯ
ನಲ್ಲಿ+ ತೋರಾ+ಎನುತ +ತಪ್ಪಿದನ್+ಅಹಹ+ ಸಿರಿಮುಡಿಗೆ

ಅಚ್ಚರಿ:
(೧) ದುಶ್ಯಾಸನ ನೀಚ ಮಾತು – ನೀ ಪುಷ್ಪವತಿಯಾಗಿಲ್ಲಿ ಫಲವತಿಯಾಗು ನಡೆ ಕುರುರಾಯ ಭವನದಲಿ
(೨) ಕವಿಯೇ ನೊಂದು ಬರೆದ ಅನುಭವ – ತಪ್ಪಿದನಹಹ ಸಿರಿಮುಡಿಗೆ
(೩) ದ್ರೌಪದಿಯ ಶಿರವನ್ನು ವರ್ಣಿಸುವ ಪದ – ಸಿರಿಮುಡಿ

ಪದ್ಯ ೬೩: ದುಶ್ಯಾಸನನು ದ್ರೌಪದಿಯನ್ನು ಹೇಗೆ ಜರೆದನು?

ಬಂದನವನಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿದು ಕುರುರಾಜ ಭವನದಲಿ
ಇಂದು ಮರೆ ನಡೆ ನಮ್ಮ ತೊತ್ತಿರ
ಮುಂದೆ ಮೆರೆ ನಡೆ ಮಂಚದಿಂದಿಳಿ
ಯೆಂದು ಜರೆದನು ಕೌರವಾನುಜನಾ ಮಹಾಸತಿಯ (ಸಭಾ ಪರ್ವ, ೧೫ ಸಂಧಿ, ೬೩ ಪದ್ಯ)

ತಾತ್ಪರ್ಯ:
ದುಶ್ಯಾಸನನು ಮಹಾಪತಿವ್ರತೆಯಾದ ದ್ರೌಪದಿಯ ಮುಂದೆ ಬಂದನು, ಎಲೇ, ನಿನ್ನ ಈ ಹಿರಿಮೆ ದರ್ಪವೆಲ್ಲವೂ ಈ ಹಿಂದೆ ಇಂದ್ರಪ್ರಸ್ಥದಲ್ಲಿ ಸಲ್ಲುತ್ತಿದ್ದವು, ಇಂದು ಕೌರವನ ಅರಮನೆಯಲ್ಲಿ ಇವೆಲ್ಲ ಸಲ್ಲದು, ಹಿಂದಿದ್ದ ಠೀವಿಯನ್ನು ಮರೆತುಬಿಡು, ನಡೆ ನಮ್ಮ ದಾಸಿಯರೊಡನೆ ನಿನ್ನ ಹಿರಿಮೆಯನ್ನು ತೋರಿಸು, ನಡೆ ಮಂಚದಿಂದ ಇಳಿ ಎಂದು ದ್ರೌಪದಿಯನ್ನು ತೆಗಳಿದನು.

ಅರ್ಥ:
ಬಂದು: ಆಗಮಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು (ದ್ರೌಪದಿ); ಇದಿರು: ಎದುರು; ನಿಂದು: ನಿಲ್ಲು; ಗರುವತನ: ಗರ್ವ, ದರ್ಪ; ಹಿಂದೆ: ಮೊದಲು; ಸಲುವು: ಸರಿಹೊಂದು; ಸಲ್ಲದು: ಸರಿಹೊಂದದು; ಭವನ: ಅರಮನೆ; ಮರೆ: ನೆನಪಿನಿಂದ ದೂರ ಮಾಡು; ನಡೆ: ಚಲಿಸು; ತೊತ್ತು: ದಾಸಿ; ಮೆರೆ: ಖ್ಯಾತಿಹೊಂದು; ಮಂಚ: ಪಲ್ಲಂಗ; ಇಳಿ: ಕೆಳಗೆ ಬಾ; ಜರೆ: ಬಯ್ಯು, ತೆಗಳು; ಅನುಜ: ತಮ್ಮ; ಸತಿ: ಪತಿವ್ರತೆ, ಗರತಿ; ಮಹಾ: ಶ್ರೇಷ್ಠ;

ಪದವಿಂಗಡಣೆ:
ಬಂದನ್+ಅವನ್+ಅಬುಜಾಕ್ಷಿ+ಇದಿರಲಿ
ನಿಂದನ್+ಎಲೆಗ್+ಈ+ ಗರುವತನವಿದು
ಹಿಂದೆ +ಸಲುವುದು+ ಸಲ್ಲದಿದು +ಕುರುರಾಜ +ಭವನದಲಿ
ಇಂದು +ಮರೆ +ನಡೆ +ನಮ್ಮ +ತೊತ್ತಿರ
ಮುಂದೆ +ಮೆರೆ +ನಡೆ+ ಮಂಚದಿಂದ್+ಇಳಿ
ಎಂದು +ಜರೆದನು +ಕೌರವ+ಅನುಜನ್+ಆ+ ಮಹಾ+ಸತಿಯ

ಅಚ್ಚರಿ:
(೧) ಮೊದಲನೆ ಸಾಲು ಒಂದೇ ಪದವಾಗಿರುವುದು – ಬಂದನವನಬುಜಾಕ್ಷಿಯಿದಿರಲಿ
(೨) ಮರೆ ನಡೆ, ಮೆರೆ ನಡೆ – ಪದಗಳ ಬಳಕೆ – ೪,೫ ಸಾಲು
(೩) ಸಲುವುದು, ಸಲ್ಲದಿದು – ಪದಗಳ ಬಳಕೆ
(೪) ದ್ರೌಪದಿಯನ್ನು ಅಬುಜಾಕ್ಷಿ, ಮಹಾಸತಿ ಎಂದು ಕರೆದಿರುವುದು

ಪದ್ಯ ೬: ಹಸ್ತಿನಾಪುರದ ಸ್ಥಿತಿ ಏನಾಯಿತು?

ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನ ಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನಕವಾಟತತಿ ಗಾಳಾಯ್ತು ಗಜನಗರ (ಕರ್ಣ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಸುದ್ದಿ ತಿಳಿಯುತ್ತಿದ್ದಂತೆ ರಾಣೀವಾಸದಲ್ಲಾದ ಅವ್ಯವಸ್ಥೆಯನ್ನು ನಾನು ಹೇಗೆ ಹೇಳಲಿ ಜನಮೇಜಯ. ಕರ್ಣನೇ ಮೊದಲಾದವರ ಪತ್ನಿಯೂ ಜೋರಾಗಿ ಅಳಲು ಪ್ರಾರಂಭಿಸಿದರು. ಈ ಅವ್ಯವಸ್ಥೆಯ ನಡುವೆ ಹಸ್ತಿನಾವತಿಯ ಊರೊಳಗಿನ ಕೊಳ್ಳೆಹೊಡೆಯುವವರು ಮುಂದಾದರು. ಕೋಟೆ ಕಾವಲಿನವರು ಗುಜುಗುಜು ಎಂದು ಮಾತಾಡಲು, ಮನೆ ಬಾಗಿಲುಗಲು ಮುಚ್ಚಿದವು, ಹಸ್ತಿನಾವತಿ ಕೆಟ್ಟು ಹೋಯಿತು.

ಅರ್ಥ:
ರವ: ಶಬ್ದ; ರವಕುಳ: ಅವ್ಯವಸ್ಥೆ, ಆಕ್ರಂದನ; ಹೇಳು: ತಿಳಿಸು; ಅವನಿ: ಭೂಮಿ; ಅವನಿಪತಿ: ರಾಜ; ಮೊದಲಾದ: ಮುಂತಾದ; ರಾಣಿ: ಅರಸಿ; ರಾಣೀವಾಸ: ಅಂತಃಪುರ; ಬಹಳ: ತುಂಬ; ಆಕ್ರಂದನ: ಅಳುವ ಧ್ವನಿ; ಧ್ವನಿ: ಶಬ್ದ; ಕವಿದು: ಆವರಿಸು; ಸೂರೆ: ಕೊಳ್ಳೆ, ಲೂಟಿ; ಒಳ: ಆಂತರ್ಯ; ಕೋಟೆ: ದುರ್ಗ; ತವಕಿಗ: ಉತ್ಸಾಹಿ, ಆತುರಗಾರ; ಗುಜುಗುಜು: ಬಿಸುಗುನುಡಿ; ಬಿಗಿ: ಬಂಧನ; ಭವನ: ಅರಮನೆ; ಕವಾಟ: ಬಾಗಿಲು; ಗಾಳ: ಕೊಕ್ಕೆ, ಕುತಂತ್ರ; ಗಜ: ಆನೆ; ನಗರ: ಊರು; ಗಜನಗರ: ಹಸ್ತಿನಾಪುರ; ತತಿ: ಗುಂಪು, ಸಮೂಹ;

ಪದವಿಂಗಡಣೆ:
ರವಕುಳವ +ನಾನೇನ +ಹೇಳುವೆನ್
ಅವನಿಪತಿಯಾ +ಕರ್ಣ +ಮೊದಲಾ
ದವರ+ ರಾಣೀವಾಸ +ಬಹಳ+ಆಕ್ರಂದನ +ಧ್ವನಿಯ
ಕವಿದುದ್+ಒಳಸೂರೆಗರು+ ಕೋಟೆಯ
ತವಕಿಗರು+ ಗುಜುಗುಜಿಸೆ +ಬಿಗಿದವು
ಭವನ+ ಭವನ+ಕವಾಟ+ತತಿ +ಗಾಳಾಯ್ತು +ಗಜನಗರ

ಅಚ್ಚರಿ:
(೧) ರಾಜನ ಅಳಿವಿನ ಬಳಿಕ ಯಾವ ರೀತಿ ಅರಾಜಕತೆ ಶುರುವಾಗುತ್ತದೆ ಎಂದು ತಿಳಿಸುವ ಪದ್ಯ
(೨) ಬ ಕಾರದ ತ್ರಿವಳಿ ಪದ – ಬಿಗಿದವು ಭವನ ಭವನಕವಾಟತತಿ

ಪದ್ಯ ೪೯: ಅಗ್ನಿಯು ಯಾವ ಕಡೆ ಬೀಡು ಬಿಟ್ಟಿತು?

ಸುಳಿಸುಳಿದು ಶಶಿಕಾಂತಮಯದ
ಗ್ಗಳದ ವೇದಿಕೆಗಳಲಿ ನೀಲದ
ನೆಲೆಯ ಚೌಕಿಗೆಗಳಲಿ ಮಂಟಪದಲಿ ಲತಾವಳಿಯ
ಲಲಿತ ಸೌಧದ ಚಾರು ಚಿತ್ರಾ
ವಳಿಯ ಮೇಲ್ಕಟ್ಟುಗಳ ಭವನಂ
ಗಳಲಿ ಬಿಟ್ಟುದು ಕೂಡೆ ಪಾಳೆಯ ವಹ್ನಿಭೂಪತಿಯ (ಆದಿ ಪರ್ವ, ೨೦ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅಗ್ನಿಯು ಖಾಂಡವವನವನ್ನೆಲ್ಲಾ ಸುಳಿಯಿತು, ಚಂದ್ರಕಾಂತದ ಶಿಲೆಗಳ ಕಟ್ಟೆಗಳು (ಬೆಟ್ಟ ಗುಡ್ಡಗಳ ಮೇಲಿದ್ದ ಮರಗಳನ್ನು ಆವರಿಸಿತು), ನೀಲಮಣಿಯ ಚೌಕಗಳು (ನೀರಿನ ದಡದಲ್ಲಿದ್ದ ಮರಗಳನ್ನು ಆವರಿಸಿತು), ವನದಲ್ಲಿದ್ದ ಮಂಟಪಗಳ (ಮೇಲೆ ಹರಡಿದ್ದ ಬಳ್ಳಿಗಳನ್ನು ಆವರಿಸಿತು), ಸುಂದರ ಬಳ್ಳಿಗಳು ಮರಗಳನ್ನು ನೆರವಾಗಿಸಿ ಕೊಂಡು ಮೇಲೇರಿರುವ ಬಳ್ಳಿಗಳ ಉಪ್ಪರಿಗೆಗಳನ್ನು ಬೆಂಕಿಯು ಆವರಿಸಿತು.

ಅರ್ಥ:
ಸುಳಿ:ಸುತ್ತು; ಶಶಿ: ಚಂದ್ರ; ಕಾಂತ: ಪ್ರಕಾಶ, ಕಾಂತಿ; ಅಗ್ಗಳ: ದೊಡ್ಡ; ವೇದಿಕೆ: ಎತ್ತರವಾದ ಪ್ರದೇಶ; ನೀಲ:ನೀಲಿ ಬಣ್ಣ; ನೆಲೆ: ಸ್ಥಳ; ಚೌಕಿ:ಚಚ್ಚೌಕವಾದ ಮಂಟಪ; ಮಂಟಪ:ಸಮತಲವಾದ ಚಾವಣಿ ಯುಳ್ಳ ಬಾಗಿಲಿಲ್ಲದ ಚಪ್ಪರದಾಕಾರದ ಕಲ್ಲಿನ ಕಟ್ಟಡ; ಲತ: ಬಳ್ಳಿ; ವಳಿ: ಸಾಲು, ಗುಂಪು; ಲಲಿತ: ಚೆಲುವು; ಸೌಧ:ಉಪ್ಪರಿಗೆ ಮನೆ;ಚಾರು: ಸುಂದರ; ಚಿತ್ರಾವಳಿ: ಬರೆದ ಆಕೃತಿಗಳ ಗುಂಪು; ಮೇಲ್ಕಟ್ಟು: ಎತ್ತಿ ಹಿಡಿ; ಭವನ: ಮನೆ; ಪಾಳೆಯ: ಬೀಡು; ಭೂಪತಿ: ರಾಜ

ಪದವಿಂಗಡಣೆ:
ಸುಳಿಸುಳಿದು +ಶಶಿ+ಕಾಂತಮಯದ
ಅಗ್ಗಳದ+ ವೇದಿಕೆಗಳಲಿ+ ನೀಲದ
ನೆಲೆಯ +ಚೌಕಿಗೆಗಳಲಿ +ಮಂಟಪದಲಿ +ಲತಾವಳಿಯ
ಲಲಿತ +ಸೌಧದ +ಚಾರು +ಚಿತ್ರಾ
ವಳಿಯ +ಮೇಲ್ಕಟ್ಟುಗಳ+ ಭವನಂ
ಗಳಲಿ +ಬಿಟ್ಟುದು +ಕೂಡೆ +ಪಾಳೆಯ +ವಹ್ನಿ+ಭೂಪತಿಯ

ಅಚ್ಚರಿ:
(೧) ಕಾಡಿನಲ್ಲಿ ವೇದಿಕೆ, ಚೌಕಿ, ಮಂಟಪ, ಸೌಧ, ಮೇಲ್ಕಟ್ಟು, ಭವನ ಇವಗಳನ್ನು ಚಿತ್ರಿಸಿರುವುದು

ಪದ್ಯ ೩೧: ಬಲರಾಮನು ಅರ್ಜುನನನ್ನು ಅರಮನೆಗೆ ಬರಲು ಹೇಗೆ ಒಪ್ಪಿಸಿದನು?

ಅಹುದು ನೀವೇಕಾಂತ ಭವನದೊ
ಳಿಹುದು ಚಾತುರ್ಮಾಸವಿದು ಸಂ
ನಿಹಿತವಾಯ್ತದ ನೂಕಿ ಬಿಜಯಂಗೈವುದಿಚ್ಛೆಯಲಿ
ವಿಹಿತ ಚರಿತರು ನೀವಲಾ ನಿ
ರ್ವಹಿಸುವೆನು ಶುಶ್ರೂಷೆಯನು ಕಿಂ
ಹಗನ ಮಾಡದಿರೆಂದು ತಂದನು ಯತಿಯನರಮನೆಗೆ (ಆದಿ ಪರ್ವ, ೧೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಯತಿಯ ವೇಷದಲ್ಲಿದ್ದ ಅರ್ಜುನನು ಅರಮನೆಗೆ ನಾನ್ಯಾಕೆ ಬರಲಿ, ನಾನೊಬ್ಬ ಸನ್ಯಾಸಿ ಎಂದು ಹೇಳಲು, ಬಲರಾಮ ಇವನ ಪಾಂಡಿತ್ಯಕ್ಕೆ ಮಾರುಹೋಗಿ, ನೀವು ಹೇಳುವುದು ನಿಜ, ಆದರೆ ಇನ್ನು ಸ್ವಲ್ಪ ದಿನಗಳಲ್ಲಿ ಚಾತುರ್ಮಾಸವು ಶುರುವಾಗುತ್ತದೆ, ಅದನ್ನು ಮುಗಿಸಿಕೊಂಡು ನೀವು ಹೊರಡಬಹುದು, ನೀವು ಉತ್ತಮಚರಿತರು, ನಿಮಗೆ ಸರಿಯಾದ ಶುಶ್ರೂಷೆಯನ್ನು ಏರ್ಪಡಿಸುತ್ತೇನೆ, ಇದನ್ನೆ ಒಂದು ದೊಡ್ಡ ಪ್ರಶ್ನೆಯನ್ನಾಗಿ ಮಾಡಬೇಡಿ, ಎಂದು ಹೇಳಿ ಬಲರಾಮನು ಅರ್ಜುನನನ್ನು ಮನೆಗೆ ಕರೆತಂದನು.

ಅರ್ಥ:
ಏಕಾಂತ: ಒಂಟಿ; ಭವನ: ಮನೆ; ಇಹುದು: ವಾಸ್ತವ್ಯ; ಮಾಸ: ತಿಂಗಳು; ಸಂನಿಹಿತ: ಹತ್ತಿರ; ನೂಕಿ: ತಳ್ಳಿ; ಬಿಜಯಂಗೈವುದು: ಹೊರಡುವುದು; ಇಚ್ಛೆ: ಆಸೆ; ವಿಹಿತ: ಯೋಗ್ಯ; ಚರಿತರು: ನಡವಳಿಕೆ; ನಿರ್ವಹಿಸು:ಮಾಡು; ಶುಶ್ರೂಷೆ: ಉಪಚಾರ, ಸೇವೆ; ಕಿಂಗಹನ: ಏನುಮಹಾಕಷ್ಟ; ಯತಿ: ಋಷಿ; ಅರಮನೆ: ರಾಜರ ನಿವಾಸ;

ಪದವಿಂಗಡಣೆ:
ಅಹುದು +ನೀವ್+ಏಕಾಂತ +ಭವನದೊಳ್
ಇಹುದು +ಚಾತುರ್ಮಾಸವಿದು +ಸಂ
ನಿಹಿತವಾಯ್ತ್+ಅದ+ ನೂಕಿ +ಬಿಜಯಂಗೈವುದ್+ಇಚ್ಛೆಯಲಿ
ವಿಹಿತ+ ಚರಿತರು +ನೀವಲಾ +ನಿ
ರ್ವಹಿಸುವೆನು +ಶುಶ್ರೂಷೆಯನು +ಕಿಂ
ಹಗನ +ಮಾಡದಿರೆಂದು +ತಂದನು+ ಯತಿಯನ್+ಅರಮನೆಗೆ

ಅಚ್ಚರಿ:
(೧) ಅಹುದು, ಇಹುದು – ೧, ೨ ಸಾಲಿನ ಮೊದಲನೆ ಪದ
(೨) ಭವನ, ಅರಮನೆ – ಸಮನಾರ್ಥಕ ಪದ
(೩) ಕಿಂಗಹನ – ಸ್ವಲ್ಪ ಅಧಿಕಾರದಿಂದ ಹೇಳಿರುವ ಪದ, ಏನುಮಹಾಕಷ್ಟ