ಪದ್ಯ ೪೦: ಪಾಂಡವರೇಕೆ ದುಃಖಿಸಿದರು?

ಮಿಡಿದನರ್ಜುನ ಧನುವ ಯಮಳರು
ತುಡುಕಿದರು ಕಯ್ದುಗಳ ಸಾತ್ಯಕಿ
ಮಿಡುಕಿದನು ಮರುಗಿದರು ಪಂಚದ್ರೌಪದೀಸುತರು
ಒಡೆಯನಳಿವಿನಲೆಲ್ಲಿಯದು ನೃಪ
ನುಡಿದ ನುಡಿಯೆನುತನಿಲತನುಜನ
ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ (ಗದಾ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಧನುಷ್ಟಂಕಾರ ಮಾಡಿದನು. ನಕುಲ ಸಹದೇವರು ಆಯುಧಗಳನ್ನು ಹಿದಿದರು. ಉಪಪಾಂಡವರೂ, ಸಾತ್ಯಕಿ, ದುಃಖಿಸಿದರು. ನಮ್ಮ ಒಡೆಯನು ಮರಣ ಹೊಂದಿದನೇ? ಧರ್ಮಜನ ಪ್ರತಿಜ್ಞೆ ಏನಾಯಿತು? ಎಂದುಕೊಂಡು ಆನೆ, ಕುದುರೆಗಳನ್ನು ಯುದ್ಧಕ್ಕೆ ಅನುವು ಮಾಡಿಕೊಂಡರು.

ಅರ್ಥ:
ಮಿಡಿ: ತವಕಿಸು; ಧನು: ಬಿಲ್ಲು; ಯಮಳ: ಅವಳಿ ಮಕ್ಕಳು; ತುಡುಕು: ಹೋರಾಡು, ಸೆಣಸು; ಕಯ್ದು: ಆಯುಧ; ಮಿಡುಕು: ಅಲುಗಾಟ, ಚಲನೆ; ಮರುಗು: ತಳಮಳ, ಸಂಕಟ; ಪಂಚ: ಐದು; ಸುತ: ಮಕ್ಕಳು; ಒಡೆಯ: ನಾಯಕ, ರಾಜ; ಅಳಿ: ನಾಶ; ನೃಪ: ರಾಜ; ನುಡಿ: ಮಾತಾಡು; ಅನಿಲ: ವಾಯು; ತನುಜ: ಮಗ; ಪಡೆ: ಗುಂಪು, ಸೈನ್ಯ; ಗಜ: ಆನೆ; ಅಶ್ವ: ಕುದುರೆ; ಬಿಗಿ: ಬಂಧಿಸು; ಗಜಬಜ: ಗೊಂದಲ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ಮಿಡಿದನ್+ಅರ್ಜುನ +ಧನುವ +ಯಮಳರು
ತುಡುಕಿದರು +ಕಯ್ದುಗಳ+ ಸಾತ್ಯಕಿ
ಮಿಡುಕಿದನು +ಮರುಗಿದರು+ ಪಂಚ+ದ್ರೌಪದೀ+ಸುತರು
ಒಡೆಯನ್+ಅಳಿವಿನಲ್+ಎಲ್ಲಿಯದು +ನೃಪ
ನುಡಿದ +ನುಡಿಯೆನುತ್+ಅನಿಲತನುಜನ
ಪಡೆ +ಗಜಾಶ್ವವ+ ಬಿಗಿಯೆ +ಗಜಬಜಿಸಿತು +ಭಟಸ್ತೋಮ

ಅಚ್ಚರಿ:
(೧) ನುಡಿ ಪದದ ಬಳಕೆ – ನೃಪನುಡಿದ ನುಡಿಯೆನುತನಿಲತನುಜನ

ಪದ್ಯ ೬೩: ಶಲ್ಯ ಧರ್ಮಜರ ಯುದ್ಧವು ಹೇಗೆ ನಡೆಯಿತು?

ಹಿಂದೆ ಕರ್ಣನು ಫಲುಗುಣನು ಬಳಿ
ಕಿಂದು ಶಲ್ಯಯುಧಿಷ್ಠಿರರು ಸಾ
ನಂದದಲಿ ಸಮತಳಿಸಿ ಕಾದಿದರುಭಯಬಲ ಹೊಗಳೆ
ಇಂದು ಮಾದ್ರಾಧೀಶ್ವರಗೆ ಯಮ
ನಂದನನು ಯಮಸುತಗೆ ಪಡಿ ತಾ
ಸಂದನೈ ಮದ್ರಾಧಿಪತಿಯೆಂದುದು ಭಟಸ್ತೋಮ (ಶಲ್ಯ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹಿಂದೆ ಕರ್ಣಾರ್ಜುನರ ಕದನ ನಡೆದಂತೆ ಇಂದು ಶಲ್ಯ ಯುಧಿಷ್ಠಿರರ ಯುದ್ಧವು ಸರಿಸಮನಾಗಿ ನಡೆಯಿತು. ಎರಡೂ ಬಲಗಳು ಇಬ್ಬರನ್ನೂ ಹೊಗಳುತ್ತಿದ್ದವು. ಧರ್ಮಜನಿಗೆ ಶಲ್ಯನೇ ಸಮ, ಶಲ್ಯನಿಗೆ ಧರ್ಮಜನೇ ಸಮನೆಂದು ಎರಡೂ ಕಡೆಯ ಸೈನಿಕರು ಉದ್ಗರಿಸುತ್ತಿದ್ದರು.

ಅರ್ಥ:
ಹಿಂದೆ: ಹಿಂಭಾಗದಲ್ಲಿ; ಬಳಿ: ಹತ್ತಿರ; ಸಾನಂದ: ಸಂತಸ; ಸಮತಳಿಸು: ಮಟ್ಟಮಾಡು; ಕಾದು: ಹೋರಾಡು; ಉಭಯ: ಎರಡು; ಬಲ: ಸೈನ್ಯ; ಹೊಗಳು: ಪ್ರಶಂಶಿಸು; ನಂದನ: ಮಗ; ಸುತ: ಮಗ; ಪಡಿ: ಸಮ, ಪ್ರತಿ; ಸಂದು: ಮೂಲೆ, ಕೋನ; ಅಧಿಪ: ಒಡೆಯ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ಹಿಂದೆ +ಕರ್ಣನು +ಫಲುಗುಣನು +ಬಳಿಕ್
ಇಂದು +ಶಲ್ಯ+ಯುಧಿಷ್ಠಿರರು+ ಸಾ
ನಂದದಲಿ +ಸಮತಳಿಸಿ +ಕಾದಿದರ್+ಉಭಯಬಲ +ಹೊಗಳೆ
ಇಂದು +ಮಾದ್ರಾಧೀಶ್ವರಗೆ+ ಯಮ
ನಂದನನು +ಯಮಸುತಗೆ+ ಪಡಿ+ ತಾ
ಸಂದನೈ +ಮದ್ರಾಧಿಪತಿ+ಎಂದುದು +ಭಟಸ್ತೋಮ

ಅಚ್ಚರಿ:
(೧) ಧರ್ಮಜ, ಶಲ್ಯರನ್ನು ಕರೆದ ಪರಿ – ಮಾದ್ರಾಧೀಶ್ವರಗೆ ಯಮನಂದನನು ಯಮಸುತಗೆ ಪಡಿ ತಾ
ಸಂದನೈ ಮದ್ರಾಧಿಪತಿ

ಪದ್ಯ ೧೮: ದ್ರೋಣರೇಕೆ ಯುದ್ಧರಂಗದಲ್ಲಿ ಕಾಣಿಸುತ್ತಿರಲಿಲ್ಲ?

ದ್ರೋಣನೆಂಬರೆ ಮುನ್ನವೇ ನಿ
ರ್ಯಾಣದೀಕ್ಷಿತನಾದನಾತನ
ಕಾಣೆವೈ ಗುರುಸುತನದೃಶ್ಯಾಂಜನವೆ ಸಿದ್ಧಿಸಿತು
ಹೂಣಿಗರು ಮತ್ತಾರು ಶಲ್ಯ
ಕ್ಷೋಣಿಪತಿ ಕೃತವರ್ಮ ಕೃಪನತಿ
ಜಾಣರೋಟದ ವಿದ್ಯೆಗೆನುತಿರ್ದುದು ಭಟಸ್ತೋಮ (ದ್ರೋಣ ಪರ್ವ, ೧೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ದ್ರೋಣನ ಸುದ್ದಿಯೇನು, ಎಂದು ಕೇಳಿದರೆ ಅವನು ಮರಣ ದೀಕ್ಷೆಯನ್ನು ಕೈಗೊಂಡನೋ ಏನೋ, ಎಲ್ಲೂ ಕಾಣಿಸುತ್ತಿಲ್ಲ. ಅಶ್ವತ್ಥಾಮನನ್ನು ಹುಡುಕಲು ಕಣ್ಣಿಗೆ ಅಂಜನವನ್ನು ಹಚ್ಚಿಕೊಳ್ಳಬೇಕು. ಇನ್ನು ಮುನ್ನುಗ್ಗಿ ಯುದ್ಧಮಾಡುವವರಾರು? ಶಲ್ಯ ಕೃತವರ್ಮ, ಕೃಪರು ಓಟದಲ್ಲಿ ಜಾಣರಾದರು ಎಂದು ಸೈನಿಕರು ಮಾತಾಡಿಕೊಳ್ಳುತ್ತಿದ್ದರು.

ಅರ್ಥ:
ಮುನ್ನ: ಮುಂಚೆ; ನಿರ್ಯಾಣ: ಅದೃಶ್ಯವಾಗುವಿಕೆ, ಸಾವು; ದೀಕ್ಷೆ: ಸಂಸ್ಕಾರ; ಕಾಣು: ತೋರು; ಗುರು: ಆಚಾರ್ಯ; ಸುತ: ಮಗ; ಅಂಜನ:ಕಾಡಿಗೆ, ಕಪ್ಪು; ದೃಶ್ಯ: ನೋಟ; ಸಿದ್ಧಿ: ಗುರಿಮುಟ್ಟುವಿಕೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಕ್ಷೋಣಿ: ನೆಲ, ಭೂಮಿ; ಪತಿ: ಒಡೆಯ; ಕ್ಷೋಣಿಪತಿ: ರಾಜ; ಜಾಣ: ಬುದ್ಧಿವಂತ; ಓಟ: ಧಾವಿಸು; ವಿದ್ಯೆ: ಜ್ಞಾನ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ದ್ರೋಣನೆಂಬರೆ+ ಮುನ್ನವೇ +ನಿ
ರ್ಯಾಣ+ದೀಕ್ಷಿತನಾದನ್+ಆತನ
ಕಾಣೆವೈ +ಗುರುಸುತನ+ದೃಶ್ಯಾಂಜನವೆ+ ಸಿದ್ಧಿಸಿತು
ಹೂಣಿಗರು+ ಮತ್ತಾರು +ಶಲ್ಯ
ಕ್ಷೋಣಿಪತಿ+ ಕೃತವರ್ಮ +ಕೃಪನ್+ಅತಿ
ಜಾಣರ್+ಓಟದ +ವಿದ್ಯೆಗೆನುತಿರ್ದುದು +ಭಟಸ್ತೋಮ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕ್ಷೋಣಿಪತಿ ಕೃತವರ್ಮ ಕೃಪನತಿ
(೨) ದ್ರೋಣನು ಕಾಣದಿರುವುದಕ್ಕೆ ಕಾರಣ – ನಿರ್ಯಾಣದೀಕ್ಷಿತನಾದನಾತನ ಕಾಣೆವೈ

ಪದ್ಯ ೪೯: ಯಕ್ಷರು ಭೀಮನಿಗೆ ಯಾರ ಬಳಿ ಹೋಗಲು ಹೇಳಿದರು?

ಐಸಲೇ ತಪ್ಪೇನು ನೀ ಯ
ಕ್ಷೇಶನಲ್ಲಿಗೆ ಪೋಗಿ ಬೇಡುವು
ದೀ ಸರೋರುಹವಾವ ಘನ ಧನಪತಿಯುದಾರನಲೆ
ಮೀಸಲಿನ ಸರಸಿಯಲಿ ದೃಷ್ಟಿಯ
ಸೂಸಬಹುದೇ ರಾಯನಾಜ್ಞೆಯ
ಭಾಷೆಯಿಲ್ಲದೆ ಬಗೆಯಲರಿದೆಂದುದು ಭಟಸ್ತೋಮ (ಅರಣ್ಯ ಪರ್ವ, ೧೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿದ ಕಾವಲಿನ ಯಕ್ಷರು ಅಷ್ಟೆ ತಾನೆ, ಯಕ್ಷರ ಒಡೆಯನಾದ ಕುಬೇರನ ಬಳಿಗೆ ಹೋಗಿ ಬೇಡಿಕೋ, ಕಮಲಪುಷ್ಪವೇನು ಹೆಚ್ಚಿನದು, ಕುಬೇರನು ಉದಾರಿ ಅವನು ಇದನ್ನು ನೀಡುತ್ತಾನೆ, ಈ ಸರೋವರವು ಅವನಿಗೆ ಮೀಸಲಾದ ಸರೋವರ, ಇತರರು ಇದನ್ನು ನೋಡಬಾರದು, ಅವನ ಅಪ್ಪಣೆಯಿಲ್ಲದೆ ಹೂವು ನಿನಗೆ ಸಿಕ್ಕಲಾರದು ಎಂದರು.

ಅರ್ಥ:
ಐಸಲೇ: ಅಷ್ಟೆ; ತಪ್ಪು: ಸರಿಯಿಲ್ಲದು; ಯಕ್ಷೇಶ: ಕುಬೇರ; ಪೋಗು: ಹೋಗು, ನಡೆ; ಬೇಡು: ಕೋರಿಕೊ; ಸರೋರುಹ: ಕಮಲ; ಘನ: ಶ್ರೇಷ್ಠ; ಧನಪತಿ: ಕುಬೇರ; ಉದಾರ: ದಾನ ಶೀಲನಾದ ವ್ಯಕ್ತಿ; ಮೀಸಲು: ಕಾಯ್ದಿಟ್ಟ; ಸರಸಿ: ಸರೋವರ; ದೃಷ್ಟಿ: ನೋಟ; ಸೂಸು: ಎರಚು, ಚಲ್ಲು; ರಾಯ: ರಾಜ; ಆಜ್ಞೆ: ಅಪ್ಪಣೆ; ಭಾಷೆ: ಮಾತು; ಬಗೆ: ಎಣಿಸು, ಲಕ್ಷಿಸು; ಅರಿ: ತಿಳಿ; ಭಟ: ಸೇವಕ; ಸ್ತೋಮ: ಗುಂಪು;

ಪದವಿಂಗಡಣೆ:
ಐಸಲೇ +ತಪ್ಪೇನು +ನೀ +ಯ
ಕ್ಷೇಶನಲ್ಲಿಗೆ+ ಪೋಗಿ +ಬೇಡುವುದ್
ಈ+ ಸರೋರುಹವ್+ಆವ+ ಘನ+ ಧನಪತಿ+ಉದಾರನಲೆ
ಮೀಸಲಿನ +ಸರಸಿಯಲಿ+ ದೃಷ್ಟಿಯ
ಸೂಸಬಹುದೇ +ರಾಯನ್+ಆಜ್ಞೆಯ
ಭಾಷೆಯಿಲ್ಲದೆ +ಬಗೆಯಲ್+ಅರಿದೆಂದುದು+ ಭಟಸ್ತೋಮ

ಅಚ್ಚರಿ:
(೧) ಯಕ್ಷೇಶ, ಧನಪತಿ – ಕುಬೇರನಿಗೆ ಬಳಸಿದ ಪದಗಳು

ಪದ್ಯ ೨೩: ಕುರುಸೈನ್ಯದ ವೀರರು ಏನೆಂದು ಗರ್ಜಿಸಿದರು?

ನೆಲನ ರಾಜ್ಯಶ್ರೀಯ ತುರಬಿಂ
ಗಳುಕದಂಘೈಸಿದ ವಿರೋಧಿಯ
ಲಲನೆಯರ ಶ್ರುತಪತ್ರ ಸೀಳಲಿ ಸಾಲ ಹಿಂಗಿತಲ
ಅಳಿದ ವೃಷಸೇನಕನ ತಾಯ್ಗಳು
ಮೆಲಲಿ ವೀಳೆಯವನು ಕಿರೀಟಿಯ
ತಲೆಯ ತೆರಿಗೆಗೆ ತಾವೆ ಹೊಣೆಯೆಂದುದು ಭಟಸ್ತೋಮ (ಕರ್ಣ ಪರ್ವ, ೨೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ರಾಜ್ಯ ಬೇಕೆಂದು ರಾಜ್ಯಶ್ರೀಯ ತುರುಬನ್ನು ಬೆದರದೆ ಹಿಡಿಯಲು ಬಂದ ಶತ್ರುವಿನ ಹೆಂಡಿರ ಕಿವಿಯೋಲೆಗಳು ಹೋಗಲಿ, ಸಾಲ ತೀರಿತು, ವೃಷಸೇನನ ತಾಯಂದಿರು ವೀಳೆಯವನ್ನು ನಿಶ್ಚಿಂತೆಯಿಂದ ಮೆಲ್ಲಲಿ. ಅರ್ಜುನನ ತಲೆಯನ್ನು ನಾವೇ ತರುತ್ತೇವೆ ಎಂದು ಕುರುಸೈನ್ಯದ ವೀರರು ಗರ್ಜಿಸಿದರು.

ಅರ್ಥ:
ನೆಲ: ಭೂಮಿ; ರಾಜ್ಯ: ರಾಷ್ಟ್ರ; ರಾಜ್ಯಶ್ರೀ: ರಾಜ್ಯಲಕ್ಷ್ಮಿ; ತುರುಬ: ಮುಡಿಸು; ಅಳುಕ: ಹೆದರು; ಅಂಘೈಸು: ಹೊಂದಕೆಯಾಗು; ವಿರೋಧ: ಶತ್ರು; ಲಲನೆ: ಸ್ತ್ರೀ; ಶ್ರುತ: ಕೇಳಿದ, ಆಲಿಸಿದ; ಸೀಳು: ಚೂರು, ತುಂಡು; ಸಾಲ: ಎರವು; ಹಿಂಗು: ಬತ್ತು, ಒಣಗು; ಅಳಿ: ಸಾವು; ಮೆಲ್ಲು: ತಿನ್ನು, ಮೆಲುಕು ಹಾಕು; ವೀಳೆ: ತಾಂಬೂಲ; ಕಿರೀಟಿ: ಅರ್ಜುನ; ತಲೆ: ಶಿರ; ತೆರಿಗೆ: ಸುಂಕ; ಹೊಣೆ: ಜವಾಬ್ದಾರಿ; ಭಟ: ಸೈನ್ಯ; ಸ್ತೋಮ: ಗುಂಪು;

ಪದವಿಂಗಡಣೆ:
ನೆಲನ +ರಾಜ್ಯಶ್ರೀಯ +ತುರಬಿಂಗ್
ಅಳುಕದ್+ಅಂಘೈಸಿದ +ವಿರೋಧಿಯ
ಲಲನೆಯರ +ಶ್ರುತಪತ್ರ+ ಸೀಳಲಿ +ಸಾಲ +ಹಿಂಗಿತಲ
ಅಳಿದ +ವೃಷಸೇನಕನ+ ತಾಯ್ಗಳು
ಮೆಲಲಿ +ವೀಳೆಯವನು +ಕಿರೀಟಿಯ
ತಲೆಯ +ತೆರಿಗೆಗೆ+ ತಾವೆ+ ಹೊಣೆಯೆಂದುದು +ಭಟಸ್ತೋಮ

ಅಚ್ಚರಿ:
(೧) ಗೆಲುವು ನಮಗೆ ಎಂದು ಹೇಳುವ ಪರಿ – ರಾಜ್ಯಶ್ರೀಯ ತುರಬಿಂಗಳುಕದಂಘೈಸಿದ ವಿರೋಧಿಯ ಲಲನೆಯರ ಶ್ರುತಪತ್ರ ಸೀಳಲಿ
(೨) ತ ಕಾರದ ತ್ರಿವಳಿ ಪದ – ತಲೆಯ ತೆರಿಗೆಗೆ ತಾವೆ