ಪದ್ಯ ೪೭: ವೇದವ್ಯಾಸರು ಗಾಂಧಾರಿಗೆ ಯಾವ ಉಪದೇಶವನ್ನು ನೀಡಿದರು?

ದುಗುಡವನು ಬಿಡು ಮೋಹಬಂಧ
ಸ್ಥಗಿತ ಚಿತ್ತದ ಕದಡು ಹಣಿಯಲಿ
ಮಗಳೆ ಮರುಳಾದೌ ವಿಳಾಸದ ವಿಹಿತವಿಹಪರಕೆ
ಅಗಡುಮಕ್ಕಳ ತಾಯ್ಗೆ ತಪ್ಪದು
ಬೆಗಡುಬೇಗೆ ಸುಯೋಧನಾದ್ಯರ
ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ವೇದವ್ಯಾಸರು ಗಾಂಧಾರಿಯನ್ನು ಸಮಾಧಾನ ಪಡಿಸಲು ಮುಂದಾದರು. ಗಾಂಧಾರಿ, ದುಃಖವನ್ನು ಬಿಡು, ಮೋಹದಂದ ಕಟ್ಟುವಡೆದ ಚಿತ್ತದ ಕೊಳೆಯನ್ನು ತೆಗೆದುಹಾಕು. ಇಹ ಪರಗಳಲ್ಲಿ ಸಂಭವಿಸುವ ಇಂತಹದಕ್ಕೆ ನೀನು ಚಿಂತಿಸಬಾರದು. ಇಂತಹ ಮಕ್ಕಳ ತಾಯಿಗೆ ಅಂಜಿಕೆ, ನೋವುಗಳು ಎಂದೂ ತಪ್ಪಲಾರವು. ನಿನ್ನ ಮಕ್ಕಳು ಮಾದಿದ ಅಕಾರ್ಯಗಳನ್ನು ನೆನೆಸಿಕೊಂಡು ವಿಚಾರಿಸು ಎಂದು ನುಡಿದರು.

ಅರ್ಥ:
ದುಗುಡ: ದುಃಖ; ಬಿಡು: ತೊರೆ; ಮೋಹ: ಆಸೆ; ಬಂಧ: ಕಟ್ಟು, ಬಂಧನ, ಪಾಶ; ಸ್ಥಗಿತ: ನಿಂತು ಹೋದುದು; ಚಿತ್ತ: ಮನಸ್ಸು; ಕದಡು: ಕಲಕಿದ ದ್ರವ, ಕಲ್ಕ; ಹಣಿ: ಬಾಗು, ಮಣಿ; ಮಗಳೆ: ಪುತ್ರಿ; ಮರುಳ: ತಿಳಿಗೇಡಿ, ದಡ್ಡ; ಆದೌ: ಹಿಂದೆ; ವಿಲಾಸ: ಕ್ರೀಡೆ, ವಿಹಾರ; ವಿಹಿತ: ಯೋಗ್ಯವಾದುದು; ಇಹಪರ: ಈ ಲೋಕ ಮತ್ತು ಪರಲೋಕ; ಅಗಡು: ತುಂಟತನ; ಮಕ್ಕಳು: ಪುತ್ರರು; ತಾಯಿ: ಮಾತೆ; ತಪ್ಪದು: ಬೇರ್ಪಡಿಸಲಾಗದು; ಬೆಗಡು: ಭಯ, ಅಂಜಿಕೆ; ಬೇಗೆ: ಬೆಂಕಿ, ಕಿಚ್ಚು; ಆದಿ: ಮುಂತಾದ; ವಿಗಡ: ಶೌರ್ಯ, ಪರಾಕ್ರಮ; ನೆನೆ: ಜ್ಞಾಪಿಸು; ನೋಡು: ವೀಕ್ಷಿಸು; ಮುನಿ: ಋಷಿ;

ಪದವಿಂಗಡಣೆ:
ದುಗುಡವನು +ಬಿಡು +ಮೋಹ+ಬಂಧ
ಸ್ಥಗಿತ +ಚಿತ್ತದ +ಕದಡು +ಹಣಿಯಲಿ
ಮಗಳೆ +ಮರುಳ್+ಆದೌ +ವಿಳಾಸದ +ವಿಹಿತವ್+ಇಹಪರಕೆ
ಅಗಡು+ಮಕ್ಕಳ+ ತಾಯ್ಗೆ +ತಪ್ಪದು
ಬೆಗಡು+ಬೇಗೆ +ಸುಯೋಧನಾದ್ಯರ
ವಿಗಡತನವನು +ನೆನೆದು +ನೀ +ನೋಡೆಂದನಾ +ಮುನಿಪ

ಅಚ್ಚರಿ:
(೧) ಲೋಕ ನೀತಿ – ಅಗಡುಮಕ್ಕಳ ತಾಯ್ಗೆ ತಪ್ಪದು ಬೆಗಡುಬೇಗೆ

ಪದ್ಯ ೧೭: ಸ್ತ್ರೀಯರು ಹೇಗೆ ಕಳಾಹೀನರಾಗಿದ್ದರು?

ಎಸಳುಗಂಗಳ ಬೆಳಗನಶ್ರು
ಪ್ರಸರ ತಡೆದುದು ಶೋಕಮಯಶಿಖಿ
ಮುಸುಡ ಕಾಂತಿಯ ಕುಡಿದುದೊಸರುವ ಬಿಸಿಲ ಬೇಗೆಗಳು
ಮಿಸುಪ ಲಾವಣ್ಯಾಂಬುವನು ಬ
ತ್ತಿಸಿದವಂಗುಲಿಯುಪಹತಿಯ ಕೇ
ಣಸರ ಸೆಳೆದುದು ಕುಚದ ಚೆಲುವನು ಕೋಮಲಾಂಗಿಯರ (ಗದಾ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಆ ಹಲವಾರು ಸ್ತ್ರೀಯರಲ್ಲಿ ಅವರ ಎಸಳುಗಣ್ಣುಗಳ ಕಾಂತಿಯನ್ನು ಕಣ್ಣೀರು ಮರೆಮಾಡಿತು. ಅವರ ಶೋಕಾಗ್ನಿಯು ಮುಖಕಾಂತಿಯನ್ನು ಬಾಡಿಸಿತು. ಬಿಸಿಲ ಬೇಗೆಯು ಅವರ ಲಾವಣ್ಯಜಲವನ್ನು ಬತ್ತಿಸಿದವು. ಅವರ ಬೆರಳುಗಳ ಘಾತ, ಅವರ ಕುಚಗಲ ಚೆಲುವನ್ನು ಮಾಣಿಸಿತು.

ಅರ್ಥ:
ಎಸಳು: ಪದರ, ಪಟಲ; ಕಂಗಳು: ಕಣ್ಣು, ನಯನ; ಬೆಳಗು: ಹೊಳೆ; ಅಶ್ರು: ಕಣ್ಣೀರು; ಪ್ರಸರ: ಹರಡುವುದು, ವಿಸ್ತಾರ; ತಡೆ: ನಿಲ್ಲು; ಶೋಕ: ದುಃಖ; ಶಿಖಿ: ಬೆಂಕಿ; ಮುಸುಡ: ಮುಖ, ಆನನ; ಕಾಂತಿ: ಪ್ರಕಾಶ; ಕುಡಿ: ಪಾನಮಾಡು; ಒಸರು: ಜಿನುಗು, ಸೋರು; ಬಿಸಿಲು: ಸೂರ್ಯನ ಪ್ರಕಾಶ; ಬೇಗೆ: ತಾಪ, ಕಾವು; ಮಿಸುಪ: ಹೊಳೆ; ಲಾವಣ್ಯ: ಚೆಲುವು; ಅಂಬು: ನೀರು; ಬತ್ತು: ಒಣಗಿದುದು; ಅಂಗುಲಿ: ಬೆರಳು; ಉಪಹತಿ: ಹೊಡೆತ, ಆಘಾತ; ಕೇಣಸ: ಹೊಟ್ಟೆಕಿಚ್ಚು, ಸಂಶಯ; ಸೆಳೆ: ಜಗ್ಗು, ಎಳೆ, ಆಕರ್ಷಿಸು; ಕುಚ: ಮೊಲೆ, ಸ್ತನ; ಚೆಲುವು: ಸೌಂದರ್ಯ; ಕೋಮಲಾಂಗಿ: ಚೆಲುವೆ, ಹೆಣ್ಣು;

ಪದವಿಂಗಡಣೆ:
ಎಸಳು+ಕಂಗಳ +ಬೆಳಗನ್+ಅಶ್ರು
ಪ್ರಸರ+ ತಡೆದುದು +ಶೋಕಮಯ+ಶಿಖಿ
ಮುಸುಡ +ಕಾಂತಿಯ +ಕುಡಿದುದ್+ಒಸರುವ +ಬಿಸಿಲ +ಬೇಗೆಗಳು
ಮಿಸುಪ +ಲಾವಣ್ಯ+ಅಂಬುವನು +ಬ
ತ್ತಿಸಿದವ್+ಅಂಗುಲಿ +ಉಪಹತಿಯ +ಕೇ
ಣಸರ +ಸೆಳೆದುದು +ಕುಚದ +ಚೆಲುವನು +ಕೋಮಲಾಂಗಿಯರ

ಅಚ್ಚರಿ:
(೧) ಹೋಲಿಕೆಯನ್ನು ನೀಡುವ ಪರಿ – ಎಸಳುಗಂಗಳ ಬೆಳಗನಶ್ರು ಪ್ರಸರ ತಡೆದುದು, ಶೋಕಮಯಶಿಖಿ
ಮುಸುಡ ಕಾಂತಿಯ ಕುಡಿದು

ಪದ್ಯ ೧೨: ಬಿಸಿಲಿನ ತಾಪವನ್ನು ಯಾರ ಪ್ರಭೆ ಕಡಿಮೆ ಮಾಡಿತು?

ಭಾನುಮತಿ ಹೊರವಂಟಳರಸನ
ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
ಭಾನುದತ್ತನ ಸೈಂಧವನ ರವಿ
ಸೂನುವಿನ ದುಶ್ಯಾಸನನ ಜಲ
ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ (ಗದಾ ಪರ್ವ, ೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭಾನುಮತಿಯು ತನ್ನ ಬೀಡಿನಿಂದ ಹೊರಹೊರಟಳು. ಸಹಸ್ರ ಸಂಖ್ಯೆಯಲ್ಲಿ ಸ್ತ್ರೀಯರು ತಮ್ಮ ಮುಖದ ಚಂದ್ರಪ್ರಭೆಯಿಂದ ಬಿಸಿಲನ್ನು ತವಿಸುತ್ತಾ ಹೊರಟರು. ಭಾನುದತ್ತ, ಸೈಂಧವ, ಕರ್ಣ, ದುಶ್ಯಾಸನರ ಪತ್ನಿಯರು ದುಃಖಿಸುತ್ತಾ ರಥಗಳನ್ನು ಹತ್ತಿದರು.

ಅರ್ಥ:
ಹೊರವಂಟು: ತೆರಳು; ಅರಸ: ರಾಜ; ಮಾನಿನಿ: ಹೆಣ್ಣು; ಸಹಸ್ರ: ಸಾವಿರ; ಆನನ: ಮುಖ; ಇಂದು: ಚಂದ್ರ; ಪ್ರಭೆ: ಕಾಂತಿ, ಹೊಳಪು; ವಿಭಾಡಿಸು: ನಾಶಮಾಡು; ಬಿಸಿಲು: ಸೂರ್ಯನ ಪ್ರಕಾಶ; ಬೇಗೆ: ಬೆಂಕಿ, ಕಿಚ್ಚು; ಸೂನು: ಮಗ; ಜಲಜ: ಕಮಲ; ಆನನೆ: ಹೆಣ್ಣು, ಸ್ತ್ರೀ; ಒಗ್ಗು: ಗುಂಪು; ರಥ: ಬಂಡಿ; ಏರು: ಹತ್ತು; ದುಗುಡ: ದುಃಖ;

ಪದವಿಂಗಡಣೆ:
ಭಾನುಮತಿ +ಹೊರವಂಟಳ್+ಅರಸನ
ಮಾನಿನಿಯರು +ಸಹಸ್ರ+ಸಂಖ್ಯೆಯೊಳ್
ಆನನ+ಇಂದುಪ್ರಭೆ+ ವಿಭಾಡಿಸೆ +ಬಿಸಿಲ +ಬೇಗೆಗಳ
ಭಾನುದತ್ತನ +ಸೈಂಧವನ+ ರವಿ
ಸೂನುವಿನ +ದುಶ್ಯಾಸನನ+ ಜಲಜ
ಆನನೆಯರ್+ಒಗ್ಗಿನಲಿ +ರಥವೇರಿದರು +ದುಗುಡದಲಿ

ಅಚ್ಚರಿ:
(೧) ಸ್ತ್ರೀಯರ ಸೌಂದರ್ಯವನ್ನು ವಿವರಿಸುವ ಪರಿ – ಅರಸನ ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
(೨) ಮಾನನಿ, ಜಲಜಾನನೆ – ಸ್ತ್ರೀಯರನ್ನು ಕರೆಯುವ ಪರಿ

ಪದ್ಯ ೬೨: ರಾಜ್ಯದ ಜನರು ಬೇಸರವಾಗಲು ಕಾರಣವೇನು?

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು
ಉರಿ ಉರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರದ ಬೇಗೆಯಲಿರದಲೇ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೬೨ ಪದ್ಯ)

ತಾತ್ಪರ್ಯ:
ರಾಜನೋ ರಾಕ್ಷಸ, ಇವನ ಮಂತ್ರಿಗಳೋ ಗರ್ಜಿಸುವ ಹುಲಿಗಳು, ಇವನ ಪರಿವಾರದವರು ಹದ್ದಿನ ಗುಂಫುಗಳು, ಹೀಗಿರುವಾಗ ಬಡವರ ನೋವನ್ನು ಆಲಿಸುವವರಾದರು ಯಾರು, ಅವರ ನೋವಿನ ಉರಿ ಜ್ವಾಲೆಯಾಗಿ ಉರಿಯುತ್ತಿರಲು ಅವರು ಈ ದೇಶದಲ್ಲಿರಬಾರದೆಂದು ಪ್ರಜೆಗಳು ಬೇಸರದ ಬೇಗೆಯಲ್ಲಿ ಬೇಯುತ್ತಿಲ್ಲ ತಾನೆ, ಎಂದು ನಾರದರು ಯುಧಿಷ್ಠಿರನನ್ನು ಕೇಳಿದರು.

ಅರ್ಥ:
ಅರಸು: ರಾಜ; ರಾಕ್ಷಸ: ಅಸುರ; ಮಂತ್ರಿ: ಸಚಿವ; ಮೊರೆ:ಗರ್ಜಿಸು, ಅಬ್ಬರಿಸು; ಹುಲಿ: ವ್ಯಾಘ್ರ; ಪರಿವಾರ: ಸಂಬಂಧಿಕರು, ಪರಿಜನ; ಹದ್ದು:ಒಂದು ಬಗೆಯ ಹಕ್ಕಿ; ನೆರವಿ:ಗುಂಪು, ಸಮೂಹ; ಬಡವ:ನಿರ್ಗತಿಕ; ಬಿನ್ನಪ: ವಿಜ್ಞಾಪನೆ;
ಕೇಳು: ಆಲಿಸು; ಉರಿ: ಜ್ವಾಲೆ, ಸಂಕಟ; ದೇಶ: ರಾಷ್ಟ್ರ; ಇರು: ವಾಸಿಸು; ಜನ: ಮನುಷ್ಯರು; ಬೇಸರ: ಬೇಜಾರು; ಬೇಗೆ:ತಾಪ, ಕಾವು; ಭೂಪಾಲ: ರಾಜ;

ಪದವಿಂಗಡಣೆ:
ಅರಸು +ರಾಕ್ಷಸ +ಮಂತ್ರಿ+ಯೆಂಬುವ
ಮೊರೆವ +ಹುಲಿ +ಪರಿವಾರ+ ಹದ್ದಿನ
ನೆರವಿ +ಬಡವರ +ಬಿನ್ನಪವನ್+ಇನ್ನಾರು +ಕೇಳುವರು
ಉರಿ +ಉರಿವುತಿದೆ+ ದೇಶ +ನಾವಿನ್
ಇರಲು+ ಬಾರದೆನುತ್ತ +ಜನ +ಬೇ
ಸರದ +ಬೇಗೆಯಲಿರದಲೇ +ಭೂಪಾಲ +ಕೇಳೆಂದ

ಅಚ್ಚರಿ:
(೧) ಅರಸು, ಭೂಪಾಲ – ಸಮನಾರ್ಥಕ ಪದ
(೨) “ಉರಿ” ಜೋಡಿ ಪದ – ಉರಿ ಉರಿಯುತಿದೆ
(೩) “ಬ” ಕಾರದ ಪದಗಳು – ಬಡವ, ಬಿನ್ನಪ, ಬಾರದು, ಬೇಸರ, ಬೇಗೆ