ಪದ್ಯ ೩೨: ಭೀಮ ದುರ್ಯೋಧನರ ರಕ್ತವು ಹೇಗೆ ಭೂಮಿಯನ್ನು ತೋಯಿಸಿತು?

ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ (ಗದಾ ಪರ್ವ, ೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಮನು ಸಂತೈಸಿಕೊಂಡು ಕೌರವನನ್ನು ಹೊಡೆಯಲು ಬಿಸಿರಕ್ತ ಸುರಿದು ನೆಲದಧೂಳು ನೆನೆಯಿತು. ಕೌರವನು ಅದನ್ನು ಲೆಕ್ಕಿಸದೆ ಭೀಮನನ್ನು ಹೊಡೆಯಲು ಅವನ ಮೈಯಿಂದ ರಕ್ತ ಸುರಿಯಿತು.

ಅರ್ಥ:
ಸಂತೈಸು: ಸಮಾಧಾನ ಪಡಿಸು; ರಿಪು: ವೈರಿ; ಕೈ: ಹಸ್ತ; ತಾಗು: ಮುಟ್ಟು; ಅರಸ: ರಾಜ; ಘಾಯ: ಪೆಟ್ತು; ಬೇಗಡೆ: ಮಿಂಚುವ ಬಣ್ಣ; ಉಚ್ಚಳಿಸು: ಮೇಲಕ್ಕೆ ಹಾರು; ಬಿಸಿ: ಕಾವು, ಶಾಖ; ರಕುತ: ನೆತ್ತರು; ಹುಡಿ: ಹಿಟ್ಟು, ಪುಡಿ; ನನೆ: ತೋಯು, ಒದ್ದೆಯಾಗು; ಗರುವ: ಶ್ರೇಷ್ಠ; ಬಗೆ: ಎಣಿಸು, ಲಕ್ಷಿಸು, ಸೀಳು; ಭಾಗ: ಅಂಶ, ಪಾಲು; ರಕುತ: ನೆತ್ತರು; ಅನಿಲಸುತ: ವಾಯು ಪುತ್ರ (ಭೀಮ); ತೂಗು: ತೋಲನ ಮಾಡು, ಅಲ್ಲಾಡಿಸು; ಹೊಯ್ದು: ಹೊಡೆ; ನಂದನ: ಮಗ;

ಪದವಿಂಗಡಣೆ:
ಆಗಳೇ +ಸಂತೈಸಿ +ರಿಪು +ಕೈ
ತಾಗಿಸಿದನ್+ಅರಸನನು+ ಘಾಯದ
ಬೇಗಡೆಯಲ್+ಉಚ್ಚಳಿಸಿದುದು +ಬಿಸಿರಕುತ +ಹುಡಿ +ನನೆಯೆ
ಆ +ಗರುವನದ +ಬಗೆವನೇ +ಸರಿ
ಭಾಗ+ರಕುತವನ್+ಅನಿಲಸುತನಲಿ
ತೂಗಿ +ತೆಗೆದವೊಲಾಯ್ತು+ ಹೊಯ್ದನು +ಪವನ+ನಂದನನ

ಅಚ್ಚರಿ:
(೧) ಅರಸ, ಗರುವನ, ರಿಪು – ದುರ್ಯೋಧನನನ್ನು ಕರೆದ ಪರಿ

ಪದ್ಯ ೩೦: ಶಲ್ಯನು ಧರ್ಮಜನ ಮೇಲೆ ಬಿಟ್ಟ ಬಾಣಗಳು ಏನಾದವು?

ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು (ಶಲ್ಯ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಶಲ್ಯನ ಮೇಲೆ ನೂರು ಬಾಣಗಳನನ್ನು ಬಿಡಲು, ಶಲ್ಯನು ಅವನ್ನು ಕತ್ತರಿಸಿ ಅರಸನ ಮೇಲೆ ಬಾಣಗಳನ್ನು ಬಿಟ್ಟನು. ಸಿಡಿಲಿಗೆ ಕುಲಪರ್ವತವು ಅಳುಕುವುದೇ ಧರ್ಮಜನ ಪರಾಕ್ರಮಕ್ಕೆ ಎತ್ತಿದ ಉಪ್ಪಾರತಿಗಳಂತೆ ಶಲ್ಯನ ಬಾಣಗಳು ನಿಷ್ಫಲವಾದವು.

ಅರ್ಥ:
ಹಳಚು: ತಾಗು, ಬಡಿ; ದಳಪತಿ: ಸೇನಾಧಿಪತಿ; ಅವನಿಪ: ರಾಜ; ತಿಲಕ: ಶ್ರೇಷ್ಠ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಶರ: ಬಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಕೈ: ಹಸ್ತ; ಒಡ್ಡು: ನೀಡು; ಬೇಗಡೆ: ಹೊಳಪಿನ ತಗಡು; ಅಳುಕು: ಹೆದರು; ಅರಿ: ತಿಳಿ; ಸಿಡಿಲು: ಅಶನಿ; ಹೊಯ್ಲು: ಹೊಡೆ; ಕುಲಕುಧರ: ಕುಲಪರ್ವತ; ಸುತ: ಮಗ; ಅಗ್ಗಳಿಕೆ: ಶ್ರೇಷ್ಠ; ಉಪ್ಪಾರತಿ: ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ಅಂಬು: ಬಾಣ;

ಪದವಿಂಗಡಣೆ:
ಹಳಚಿದನು +ದಳಪತಿಯನ್+ಅವನಿಪ
ತಿಲಕನ್+ಎಚ್ಚನು +ನೂರು +ಶರದಲಿ
ಕಳಚಿ +ಕಯ್ಯೊಡನ್+ಎಚ್ಚು +ಬೇಗಡೆಗಳೆದನ್+ಅವನಿಪನ
ಅಳುಕಲ್+ಅರಿವುದೆ +ಸಿಡಿಲ +ಹೊಯ್ಲಲಿ
ಕುಲಕುಧರವೀ +ಧರ್ಮಸುತನ್
ಅಗ್ಗಳಿಕೆಗ್+ಉಪ್ಪಾರತಿಗಳಾದುವು +ಶಲ್ಯನ್+ಅಂಬುಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ -ಅಳುಕಲರಿವುದೆ ಸಿಡಿಲ ಹೊಯ್ಲಲಿ ಕುಲಕುಧರವೀ
(೨) ಅವನಿಪತಿಲಕ, ಧರ್ಮಸುತ – ಯುಧಿಷ್ಠಿರನನ್ನು ಕರೆದ ಪರಿ

ಪದ್ಯ ೨೭: ರಾತ್ರಿಯ ಯುದ್ಧ ಹೇಗೆ ಕಂಡಿತು?

ಜಡಿವ ಖಡುಗದ ಕಿಡಿಗಳಲಿ ಬೇ
ಗಡೆಯನಾಂತುದು ಮಕುಟಬದ್ಧರ
ಮುಡಿಯ ರತ್ನ ಪ್ರಭೆಗಳಲಿ ಜರ್ಝರಿತ ತನುವಾಯ್ತು
ಗಡಣದಂಬಿನ ಮಸೆಯ ಬೆಳಗಿನೊ
ಳಡಸಿದಾಕ್ಷಣ ಮತ್ತೆ ನಿಮಿಷಕೆ
ಹೊಡಕರಿಸಿ ಹಬ್ಬಿದುದು ಮಬ್ಬಿನ ದಾಳಿ ದೆಸೆದೆಸೆಗೆ (ದ್ರೋಣ ಪರ್ವ, ೧೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಜಡಿದ ಖಡ್ಗಗಳ ಕಿಡಿಗಳು ಕತ್ತಲಿನಲ್ಲಿ ರಂಧ್ರವನ್ನು ಕೊರೆದವು. ರಾಜರ ಕಿರೀಟ ಪ್ರಭೆಗಳಿಂದ ಕತ್ತಲು ಜರ್ಝರಿತವಾಯಿತು. ಬಾಣಗಳ ತುದಿಯ ಕಿಡಿಗಳಿಂದ ಹೊರಟ ಬೆಳಕನ್ನು ಆ ನಿಮಿಷಕ್ಕೆ ಕತ್ತಲು ಆವರಿಸಿತು. ಕತ್ತಲಿನ ದಾಳಿ ದಿಕ್ಕು ದಿಕ್ಕಿನಲ್ಲೂ ಹಬ್ಬಿತು.

ಅರ್ಥ:
ಜಡಿ: ಗದರಿಸು, ಬೆದರಿಸು; ಖಡುಗ: ಕತ್ತಿ; ಕಿಡಿ: ಬೆಂಕಿ; ಬೇಗಡೆ: ಮಿಂಚುವ ಬಣ್ಣ; ಮಕುಟ: ಕಿರೀಟ; ಬದ್ಧ: ಕಟ್ಟಿದ, ಬಿಗಿದ; ಮುಡಿ: ಶಿರ; ರತ್ನ: ಬೆಲೆಬಾಳುವ ಹರಳು; ಪ್ರಭೆ: ಕಾಂತಿ; ಜರ್ಝರಿತ: ಭಗ್ನ; ತನು: ದೇಹ; ಗಡಣ: ಕೂಡಿಸುವಿಕೆ; ಅಂಬು: ಬಾಣ; ಮಸೆ: ಹರಿತವಾದುದು; ಬೆಳಗು: ದಿನ; ಅಡಸು: ಆಕ್ರಮಿಸು, ಮುತ್ತು; ಕ್ಷಣ: ಹೊತ್ತು; ನಿಮಿಷ: ಕಾಲ; ಹೊಡಕರಿಸು: ಕಾಣಿಸು; ಹಬ್ಬು: ಹರಡು; ಮಬ್ಬು: ನಸುಗತ್ತಲೆ, ಮಸುಕು; ದಾಳಿ: ಲಗ್ಗೆ, ಆಕ್ರಮಣ; ದೆಸೆ: ದಿಕ್ಕು;

ಪದವಿಂಗಡಣೆ:
ಜಡಿವ +ಖಡುಗದ +ಕಿಡಿಗಳಲಿ +ಬೇ
ಗಡೆಯನಾಂತುದು +ಮಕುಟ+ಬದ್ಧರ
ಮುಡಿಯ +ರತ್ನ +ಪ್ರಭೆಗಳಲಿ +ಜರ್ಝರಿತ +ತನುವಾಯ್ತು
ಗಡಣದ್+ಅಂಬಿನ +ಮಸೆಯ +ಬೆಳಗಿನೊಳ್
ಅಡಸಿದ್+ಆ+ ಕ್ಷಣ +ಮತ್ತೆ +ನಿಮಿಷಕೆ
ಹೊಡಕರಿಸಿ +ಹಬ್ಬಿದುದು +ಮಬ್ಬಿನ +ದಾಳಿ +ದೆಸೆದೆಸೆಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಜಡಿವ ಖಡುಗದ ಕಿಡಿಗಳಲಿ ಬೇಗಡೆಯನಾಂತುದು
(೨) ಕಿಡಿ, ಪ್ರಭೆ, ಬೆಳಗು – ಸಾಮ್ಯಾರ್ಥ ಪದ
(೩) ಕತ್ತಲನ್ನು ವಿವರಿಸುವ ಪರಿ – ನಿಮಿಷಕೆ ಹೊಡಕರಿಸಿ ಹಬ್ಬಿದುದು ಮಬ್ಬಿನ ದಾಳಿ ದೆಸೆದೆಸೆಗೆ

ಪದ್ಯ ೧೦: ಧೃತರಾಷ್ಟ್ರನು ಸಂಜಯನಿಗೆ ಏನು ಹೇಳಿದ?

ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿವ ಪರಿಯನು ರಚಿಸಿ ಹೇಳೆಂದ (ದ್ರೋಣ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಹೋಗಲಿ ದುಷ್ಟರಾದ ನನ್ನ ಮಕ್ಕಳು ಯುದ್ಧವನ್ನು ಆರಂಭಿಸಿದ್ದಾರೆ, ಅವರು ನಮ್ಮ ಮಾತನ್ನು ಒಪ್ಪುವುದಿಲ್ಲ. ಪುಣ್ಯಪಾಪಗಳನ್ನು ಮಾಡಿದವರಿಗೆ ಅದಕ್ಕನುಸಾರವಗಿ ಫಲವನ್ನುಣ್ಣುವುದು ತಪ್ಪುವುದಿಲ್ಲ. ಈ ಯುದ್ಧದಲ್ಲಿ ವಜ್ರದಲ್ಲಿ ರಂದ್ರವನ್ನು ಕೊರೆದು ದ್ರೋಣನನ್ನು ಹೇಗೆ ಸಂಹರಿಸಿದರು ಎನ್ನುವುದನ್ನು ಹೇಳು ಎಂದು ಧೃತರಾಷ್ಟ್ರನು ಸಂಜಯನಿಗೆ ಕೇಳಿದನು.

ಅರ್ಥ:
ಹೋಗಲಿ: ಬಿಡು; ಮಾತು: ನುಡಿ; ಖೂಳ: ದುಷ್ಟ; ತಾಗು: ಮುಟ್ಟು; ಬಾಗು: ಎರಗು; ಸುಕೃತ: ಒಳ್ಳೆಯ ಕೆಲಸ; ದುಷ್ಕೃತ: ಕೆಟ್ಟ ಕೆಲಸ; ಭೋಗ: ಸುಖವನ್ನು ಅನುಭವಿಸುವುದು, ಹೊಂದುವುದು; ಅಪ್ಪು: ಆಲಿಂಗಿಸು, ಸಂಭವಿಸು; ಖೇದ: ದುಃಖ; ಕದನ: ಯುದ್ಧ; ವಜ್ರ:ಗಟ್ಟಿಯಾದ; ಬೇಗಡೆ: ಕಾಗೆ ಬಂಗಾರ; ಮುರಿ: ಸೀಳು; ಪರಿ: ರೀತಿ; ರಚಿಸು: ನಿರ್ಮಿಸು; ಹೇಳು: ತಿಳಿಸು;

ಪದವಿಂಗಡಣೆ:
ಹೋಗಲಿನ್ನ್+ಆ+ ಮಾತು +ಖೂಳರು
ತಾಗಿ +ಬಾಗರು +ಸುಕೃತ +ದುಷ್ಕೃತ
ಭೋಗವದು +ಮಾಡಿದರಿಗ್+ಅಪ್ಪುದು +ಖೇದ +ನಮಗೇಕೆ
ಈಗಲೀ +ಕದನದಲಿ +ವಜ್ರಕೆ
ಬೇಗಡೆಯ +ಮಾಡಿದನ್+ಅದಾವನು
ತಾಗಿ +ದ್ರೋಣನ +ಮುರಿವ+ ಪರಿಯನು +ರಚಿಸಿ +ಹೇಳೆಂದ

ಅಚ್ಚರಿ:
(೧) ಸುಕೃತ, ದುಷ್ಕೃತ – ವಿರುದ್ಧ ಪದಗಳು;

ಪದ್ಯ ೫೨: ಮುನಿಗಳು ರಾಮನ ಹಿರಿಮೆಯನ್ನು ಹೇಗೆ ಹೇಳಿದರು?

ಸಾಗರದ ತೆರೆಗಳಲಿ ಗಿರಿಗಳ
ತೂಗಿ ಸೇನೆಯ ನಡೆಸಿ ದಶಶಿರ
ನಾಗ ಹಿಂಗಿಸಿ ರಾಮ ರಮಣಿಯ ಬಿಡಿಸಿದಾಯಸವ
ಈಗಳೀ ನರರೇನನಾನುವ
ರಾ ಗರುವ ರಘುರಾಮ ವಜ್ರಕೆ
ಬೇಗಡೆಯ ವಿಧಿಮಾಡಿತೆಂದನು ಮುನಿ ನೃಪಾಲಂಗೆ (ಅರಣ್ಯ ಪರ್ವ, ೨೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಸಾಗರದ ತೆರೆಗಳ ಮೇಲೆ ಬೆಟ್ಟವನ್ನೊಟ್ಟಿ ಸೈನ್ಯವನ್ನು ನಡೆಸಿ ಹತ್ತು ತಲೆಗಳ ರಾವಣನನ್ನು ಸಂಹರಿಸಿ ಪತ್ನಿಯನ್ನು ಬಿಡಿಸಿದ. ಅವನ ಕಷ್ಟವನ್ನು ಈಗಿನ ಮನುಷ್ಯರು ಸಹಿಸಬಲ್ಲರೇ? ರಘುರಾಮನೆಂಬ ವಜ್ರಕ್ಕೆ ವಿಧಿಯು ರಂಧ್ರವನ್ನು ಕೊರೆದು ಬಿಟ್ಟಿತು.

ಅರ್ಥ:
ಸಾಗರ: ಸಮುದ್ರ; ತೆರೆ: ಅಲೆ, ತರಂಗ; ಗಿರಿ: ಬೆಟ್ಟ; ತೂಗು: ಅಲ್ಲಾಡಿಸು; ಸೇನೆ: ಸೈನ್ಯ; ನಡೆಸು: ಮುನ್ನುಗ್ಗು; ದಶಶಿರ: ಹತ್ತು ತಲೆ; ಹಿಂಗಿಸು: ನಿವಾರಿಸು, ಹೋಗಲಾಡಿಸು; ರಮಣಿ: ಪ್ರಿಯತಮೆ; ಬಿಡಿಸು: ವಿಮೋಚಿಸು; ಆಯಸ: ಬಳಲಿಕೆ, ಶ್ರಮ; ನರ: ಮನುಷ್ಯ; ಗರುವ: ಹಿರಿಯ, ಶ್ರೇಷ್ಠ; ವಜ್ರ: ಗಟ್ಟಿಯಾದ; ಬೇಗಡೆ: ಅಲಂಕಾರಕ್ಕಾಗಿ ಬಳಸುವ ಹೊಳಪಿನ ತಗಡು; ವಿಧಿ: ಬ್ರಹ್ಮ; ಮುನಿ: ಋಷಿ; ನೃಪಾಲ: ರಾಜ;

ಪದವಿಂಗಡಣೆ:
ಸಾಗರದ +ತೆರೆಗಳಲಿ +ಗಿರಿಗಳ
ತೂಗಿ +ಸೇನೆಯ +ನಡೆಸಿ +ದಶಶಿರ
ನಾಗ +ಹಿಂಗಿಸಿ +ರಾಮ +ರಮಣಿಯ +ಬಿಡಿಸಿದ್+ಆಯಸವ
ಈಗಳ್+ಈ+ ನರರ್+ಏನನಾನುವರ್
ಆ+ ಗರುವ+ ರಘುರಾಮ +ವಜ್ರಕೆ
ಬೇಗಡೆಯ +ವಿಧಿಮಾಡಿತೆಂದನು +ಮುನಿ +ನೃಪಾಲಂಗೆ

ಅಚ್ಚರಿ:
(೧) ರಾಮನ ಹಿರೆಮೆಯನ್ನು ಹೇಳುವ ಪರಿ – ಗರುವ ರಘುರಾಮ ವಜ್ರಕೆ ಬೇಗಡೆಯ ವಿಧಿಮಾಡಿತೆಂದನು

ಪದ್ಯ ೪೪: ಅರ್ಜುನನು ಏನೆಂದು ಚಿಂತಿಸಿದನು?

ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ
ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ
ಆಗಲಿದು ಸುರಭವನ ವಧುಗಳು
ನಾಗರಿಕರಿವರೆತ್ತ ಭಾರತ
ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆಂದ (ಅರಣ್ಯ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅರ್ಜುನನು ಈ ಘಟನೆಯಿಂದ ಮೂಕನಾದನು. ಅವನ ಅಪಾರ ಧೈರ್ಯದಲ್ಲಿ ರಂಧ್ರವನ್ನು ಕೊರೆದಂತಾಯಿತು. ಅವನು ತಲೆಯನ್ನು ತೂಗಿ ನಾನಿರುವುದು ಸ್ವರ್ಗದಲ್ಲಿ, ಇಲ್ಲಿನ ಅಪ್ಸರೆಯರು ನಾಗರಿಕರು, ಇವರೆಲ್ಲಿ, ಕರ್ಮ ಭೂಮಿಯಾದ ಭಾರತವರ್ಷದವರು ನಾವೆಲ್ಲಿ? ಈ ಪ್ರಸಂಗ ವಿಧಿವಶದಿಂದ ಘಟಿಸಿತಲ್ಲವೇ? ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ಮೂಗ: ಮಾತುಬರದವ; ಬಹಳ: ತುಂಬ; ಧೈರ್ಯ: ಎದೆಗಾರಿಕೆ, ಕೆಚ್ಚು; ಬೇಗಡೆ: ಕಾಗೆ ಬಂಗಾರ, ಮಿಂಚುವ ಬಣ್ಣ; ಬಿಡೆ: ತೊರೆ; ಬಿಗಿ: ಕಟ್ಟು; ಬೆರಗು: ಆಶ್ಚರ್ಯ; ಮೂಗು: ನಾಸಿಕ; ಅಂಗುಲಿ: ಬೆರಳು; ಒಲಿ: ಒಪ್ಪು; ಶಿರ: ತಲೆ; ಸುರ: ದೇವತೆ; ಭವನ: ಆಲಯ; ವಧು: ಹೆಣ್ಣು; ನಾಗರಿಕ: ಸಭ್ಯ; ಭೂಗತ: ಭೂಮಿಯ ಒಳಗಿರುವ; ಘಟಿಸು: ನಡೆದುದು; ವಿಧಿ: ಆಜ್ಞೆ, ಆದೇಶ;

ಪದವಿಂಗಡಣೆ:
ಮೂಗನಾದನು+ ಬಹಳ +ಧೈರ್ಯದ
ಬೇಗಡೆಯ +ಬಿಡೆ +ಬಿಗಿದ +ಬೆರಗಿನ
ಮೂಗಿನ್+ಅಂಗುಲಿಗಳ+ ಧನಂಜಯನ್+ಒಲೆದು +ನಿಜ+ಶಿರವ
ಆಗಲಿದು +ಸುರಭವನ +ವಧುಗಳು
ನಾಗರಿಕರ್+ಇವರೆತ್ತ+ ಭಾರತ
ಭೂಗತರು +ತಾವೆತ್ತಲ್+ಇದು +ಘಟಿಸಿದುದು +ವಿಧಿಯೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೇಗಡೆಯ ಬಿಡೆ ಬಿಗಿದ ಬೆರಗಿನ
(೨) ಅಪ್ಸರೆ ಎಂದು ಹೇಳಲು – ಸುರಭವನ ವಧುಗಳು
(೩) ಅರ್ಜುನನ ಸ್ಥಿತಿಯನ್ನು ಚಿತ್ರಿಸುವ ಪರಿ – ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ