ಪದ್ಯ ೧೩: ಸಂಜಯನು ಯಾರ ನಡಿಗೆಯನ್ನು ನೋಡಿದನು – ೬?

ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸರ ಬಳಿಬಳಿದು
ಗಡಣಹೆಣದೆರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ (ಗದಾ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮುರಿದ ತಡಿ ರಂಚೆಗಳಲ್ಲಿ ಕುಳಿತು ಮೊಣಕಾಲಿನಲ್ಲಾದ ಗಾಯಕ್ಕೆ ನೆಣದ ಕೆಸರನ್ನು ಬಳಿದು, ಒಟ್ಟಾಗಿ ಬಿದ್ದಿದ್ದ ಹೆಣಗಳ ನಡುವೆ ಜಾಗವನ್ನು ಹುಡುಕಿ ಕಾಲಿಟ್ಟು, ಮುಂದೆ ಹೆಜ್ಜೆಯನ್ನಿಡುವಾಗ ಓಲಾಡಿ ಮಾರ್ಗಶ್ರಮಕ್ಕೆ ಹೆದರುವವನೊಬ್ಬನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ತಡಿ: ಕುದುರೆಯ ಜೀನು; ಕುಳ್ಳಿರ್ದು: ಆಸೀನನಾಗು; ಗಾಢ: ಹೆಚ್ಚಳ, ಅತಿಶಯ; ವ್ರಣ: ಹುಣ್ಣು; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಬಳಿ: ಸವರು; ಗಡಣ: ಗುಂಪು; ಹೆಣ: ಜೀವವಿಲ್ಲದ ಶರೀರ; ಸೋದಿಸು: ಶುದ್ಧಿ ಮಾಡು; ಮುಂದೆ: ಎದುರು; ಹೆಜ್ಜೆ: ಪಾದ; ಪೈಸರ: ಕುಗ್ಗುವುದು; ಮಾರ್ಗ: ದಾರಿ; ಶರ್ಮ: ಆಯಾಸ; ಬೆಮರು: ಹೆದರು;

ಪದವಿಂಗಡಣೆ:
ಕಡಿವಡೆದ +ಹಕ್ಕರಿಕೆ +ರೆಂಚೆಯ
ತಡಿಗಳಲಿ +ಕುಳ್ಳಿರ್ದು +ಮೊಣಕಾ
ಲ್ಗಡಿಯ +ಗಾಢವ್ರಣದ+ ನೆಣವಸೆ+ಕೆಸರ +ಬಳಿಬಳಿದು
ಗಡಣ+ಹೆಣದ್+ಎರಹುಗಳೊಳಗೆ +ಕಾ
ಲಿಡುತ +ಸೋದಿಸಿ +ಮುಂದೆ +ಹೆಜ್ಜೆಯ
ನಿಡುತ +ಪೈಸರವೋಗಿ+ ಮಾರ್ಗಶ್ರಮಕೆ +ಬೆಮರುವನ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಹೆಜ್ಜೆಯನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ

ಪದ್ಯ ೪೧: ಅಭಿಮನ್ಯುವು ಧರ್ಮಜನಿಗೆ ಯಾವ ಉತ್ತರವನ್ನಿತ್ತನು?

ಗಾಳಿ ಬೆಮರುವುದುಂಟೆ ವಹ್ನಿ
ಜ್ವಾಲೆ ಹಿಮಕಂಜುವುದೆ ಮಂಜಿನ
ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ
ಬಾಲನಿವನೆನ್ನದಿರು ದುಗುಡವ
ತಾಳಲಾಗದು ಬೊಪ್ಪ ನಿಮ್ಮಡಿ
ಯಾಲಿಗಳಿಗೌತಣವನಿಕ್ಕುವೆನೊರಸಿ ರಿಪುಬಲವ (ದ್ರೋಣ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ಗಾಳಿಯು ಬೆವರುವುದುಂಟೇ? ಅಗ್ನಿಜ್ವಾಲೆಯು ಮಂಜಿಗೆ ಹೆದರುವುದೇ? ಬಿಸಿಲಿನ ಬೇಗೆಯ ವಿರುದ್ಧ ಮಂಜು ಮೇಲೆ ಬಿದ್ದು ಹೋರಾಡಲಾದೀತೇ? ದೊಡ್ಡಪ್ಪ, ಇವನು ಹುಡುಗನೆಂದು ಒಗೆಯಬೇಡ, ದುಃಖಿಸಬೇಡ, ಶತ್ರು ಸೈನ್ಯವನ್ನು ಒರಸಿ ಹಾಕಿ, ನಿಮ್ಮ ಕಣ್ಣುಗಳಿಗೆ ಔತಣವನ್ನುಣಿಸುತ್ತೇನೆ ಎಂದು ಅಭಿಮನ್ಯುವು ನುಡಿದನು.

ಅರ್ಥ:
ಗಾಳಿ: ವಾಯು; ಬೆಮರು: ಬೆವರು, ಸ್ವೇದಜಲ; ವಹ್ನಿ: ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಹಿಮ: ಮಂಜಿನ ಹನಿ; ಅಂಜು: ಹೆದರು; ಮಂಜು: ಇಬ್ಬನಿ, ಹಿಮ; ಬಲು: ಬಹಳ; ಬೇಸಗೆ: ಸಕೆಗಾಲ; ಬಾಲ: ಚಿಕ್ಕವ, ಕುಮಾರ; ದುಗುಡ: ದುಃಖ; ತಾಳು: ಸಹಿಸು; ಬೊಪ್ಪ: ತಂದೆ; ಆಲಿ: ಕಣ್ಣು; ಔತಣ: ವಿಶೇಷವಾದ ಊಟ; ಒರಸು: ನಾಶಮಾಡು; ರಿಪುಬಲ: ವೈರಿ ಸೈನ್ಯ;

ಪದವಿಂಗಡಣೆ:
ಗಾಳಿ +ಬೆಮರುವುದುಂಟೆ +ವಹ್ನಿ
ಜ್ವಾಲೆ +ಹಿಮಕಂಜುವುದೆ+ ಮಂಜಿನ
ಮೇಲುಗಾಳೆಗವುಂಟೆ +ಬಲುಬೇಸಗೆಯ+ ಬಿಸಿಲೊಳಗೆ
ಬಾಲನಿವನೆನ್ನದಿರು+ ದುಗುಡವ
ತಾಳಲಾಗದು +ಬೊಪ್ಪ +ನಿಮ್ಮಡಿ
ಆಲಿಗಳಿಗ್+ಔತಣವನ್+ಇಕ್ಕುವೆನ್+ಒರಸಿ +ರಿಪುಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿ ಬೆಮರುವುದುಂಟೆ ವಹ್ನಿಜ್ವಾಲೆ ಹಿಮಕಂಜುವುದೆ ಮಂಜಿನ
ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ

ಪದ್ಯ ೧೨: ಬೇಟೆಗಾರರ ಸ್ಥಿತಿ ಹೇಗಿತ್ತು?

ತಿರುಗಿ ಕಂಡನು ಭೀಮಢಗೆಯಿಂ
ಪರಿತರುವ ಶಬರವನು ಮೆಯ್ಯಲಿ
ಸುರಿವ ಬೆಮರಿನ ಚರಣದೆಡಹುಗಳೊತ್ತುಗಲ್ಲುಗಳ
ಉರುವ ನಾಸಿಕದುಸಿರಲೋಡುವ
ಭರದಲೇಳುತ ಬೀಳುತವೆ
ಹರಿಯಿಸುತಲೌಕುವ ಮೃಗಾಳಿಯ ಕೊಂದು ಕೂಗುತ್ತ (ಅರಣ್ಯ ಪರ್ವ, ೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭೀಮನು ಬೇಟೆಯಾಡುತ್ತ ವೇಗನೆ ಮುಂದೆ ಹೋಗುತ್ತಿದ್ದನು, ಒಮ್ಮೆ ಹಿಂದಿರುಗಿ ನೋಡಲು, ಅವನ ಜೊತೆ ಬಂದಿದ್ದ ಬೇಟೆಗಾರರು ದಗೆಯಿಂದ ನೊಂದು, ಬೆವರು ಸುರಿಸುತ್ತಾ, ಕಲ್ಲುಗಳನ್ನು ತುಳಿಯುತ್ತ ಅದರ ಮೇಲೆ ಎಡವುತ್ತಾ, ಮೂಗಿನಲ್ಲಿ ಜೋರಾಗಿ ಉಸಿರಾಡುತ್ತಾ ಓಡುತ್ತಾ ಏಳುತ್ತಾ ಮೀಳುತ್ತಾ ಮೃಗಗಳನ್ನು ಕೊಲ್ಲುತ್ತಾ, ಕೂಗುತ್ತಾ ಭೀಮನ ಹಿಂದೆ ಬಂದರು.

ಅರ್ಥ:
ತಿರುಗಿ: ಹಿಂಬದಿ, ಮಗ್ಗುಲಾಗು; ಕಂಡು: ನೋಡು; ಢಗೆ: ಕಾವು, ದಗೆ; ಶಬರ: ಬೇಟೆಗಾರ; ಮೆಯ್ಯಲಿ: ದೇಹದಲ್ಲಿ; ಸುರಿ: ಹರಿಯುವ; ಬೆಮರು: ಬೆವರು; ಚರಣ: ಪಾದ; ಎಡಹು: ಎಡವು, ಕಾಲು ತಪ್ಪು; ಕಲ್ಲು: ಶಿಲೆ, ಬಂಡೆ; ಉರು:ಅತಿಶಯ; ನಾಸಿಕ: ಮೂಗು; ಉಸಿರು: ಗಾಳಿ; ಓಡು: ಧಾವಿಸು; ಭರದ: ಜೋರು; ಏಳು: ಮೇಲೆ ಹತ್ತು; ಬೀಳು: ಕೆಳಗೆ ಬರುವುದು; ಔಕು: ಒತ್ತು, ಹಿಚುಕು; ಮೃಗಾಳಿ: ಪ್ರಾಣಿಗಳ ಗುಂಪು; ಕೊಂದು: ಸಾಯಿಸು; ಕೂಗು: ಗರ್ಜಿಸು;

ಪದವಿಂಗಡಣೆ:
ತಿರುಗಿ +ಕಂಡನು +ಭೀಮ+ಢಗೆಯಿಂ
ಪರಿತರುವ +ಶಬರವನು +ಮೆಯ್ಯಲಿ
ಸುರಿವ +ಬೆಮರಿನ +ಚರಣದ್+ಎಡಹುಗಳ್+ಒತ್ತು+ಕಲ್ಲುಗಳ
ಉರುವ +ನಾಸಿಕದ್+ಉಸಿರಲ್+ಓಡುವ
ಭರದಲ್+ಏಳುತ+ ಬೀಳುತವೆ
ಹರಿಯಿಸುತಲ್+ಔಕುವ +ಮೃಗಾಳಿಯ +ಕೊಂದು +ಕೂಗುತ್ತ

ಅಚ್ಚರಿ:
(೧) ಆಯಾಸವನ್ನು ಚಿತ್ರಿಸುವ ಪರಿ – ಮೆಯ್ಯಲಿ ಸುರಿವ ಬೆಮರಿನ ಚರಣದೆಡಹುಗಳೊತ್ತುಗಲ್ಲುಗಳ ಉರುವ ನಾಸಿಕದುಸಿರಲೋಡುವ ಭರದಲೇಳುತ ಬೀಳುತವೆ

ಪದ್ಯ ೩೫: ದ್ರೌಪದಿ ಅರ್ಜುನನಿಗೆ ಹಾರವನ್ನು ಹೇಗೆ ಹಾಕಿದಳು?

ಧರಣಿಪತಿ ಕೇಳ್ ಬಹಳ ಲಜ್ಜಾ
ಭರದ ಭಯದಲಿ ಬೆಮರಿಡುತ ಕುಚ
ಭರದಿ ಮೇಲುದು ಜಾರೆ ಜೋಡಿಸಿ ನಿಮಿರಿ ನಡನಡುಗಿ
ತರುಣಿ ನಿಜತನು ಪರಿಮಳದಲುರೆ
ಹೊರೆದ ಹೂವಿನ ದಂಡೆಯನು ನಿಜ
ವರನ ಕೊರಳಲಿ ಹಾಯ್ಕಿದಳು ಜಯವೆನೆ ಸುರಸ್ತೋಮ (ಆದಿ ಪರ್ವ, ೧೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ರಾಜ, ಕೇಳು ದ್ರೌಪದಿಯು ಅತಿಶಯದ ಲಜ್ಜೆಯಿಂದಲೂ, ಭಯದಿಂದಲೂ, ಬೆವರಿಡುತ, ಜಾರಿದ ಆಕೆಯ ಸೆರಗನ್ನು ಸರಿಪಡಿಸಿಕೊಳ್ಳುತ್ತಾ ನದುಗುತ್ತಾ ತನ್ನ ದೇಹದ ಸುಗಂಧದಿಂದ ಘಮಘಮಿಸುತ್ತಿದ್ದ ಹೂವಿನ ದಂಡೆಯನ್ನು ವರನ ಕೊರಳಿಗೆ ಹಾಕಲು, ದೇವತೆಗಳೆಲ್ಲರು ಜಯಘೋಷ ಮಾಡಿದರು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಕೇಳ್: ಆಲಿಸು,ಕೇಳು; ಬಹಳ: ತುಂಬ; ಲಜ್ಜ: ನಾಚಿಕೆ; ಭರದ: ಜೋರು; ಭಯ: ಹೆದರುವಿಕೆ; ಬೆಮರು: ಬೆವರು; ಕುಚ:ಮೊಲೆ, ಸ್ತನ; ಭರ:ವೇಗ, ರಭಸ; ಮೇಲುದು: ಹೊದಿಕೆ; ಜಾರು: ಕೆಳಗೆ ಬೀಳು; ಜೋಡಿಸು: ಸರಿಮಾಡು; ನಿಮಿರು: ಹರಡು, ವ್ಯಾಪಿಸು; ನಡುಗು: ಅದುರು, ಕಂಪಿಸು; ತರುಣಿ: ಹುಡುಗಿ; ನಿಜ: ನೈಜ, ಸತ್ಯ, ತನ್ನ; ತನು: ದೇಹ; ನಿಜತನು: ತನ್ನದೇಹ; ಪರಿಮಳ: ಸುಗಂಧ; ಉರು: ಶ್ರೇಷ್ಠವಾದ; ಹೊರೆ: ಹೊಂದು, ಬಳಿ; ಹೂವು: ಪುಷ್ಪ; ದಂಡೆ: ಹಾರ; ವರ: ಹುಡುಗ; ಕೊರಳು: ಕುತ್ತಿಗೆ; ಹಾಯ್ಕು: ಹಾಕಿದಳು; ಜಯ: ಗೆಲುವು, ಉಘೆ, ಉದ್ಘೋಷ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ಧರಣಿಪತಿ +ಕೇಳ್ +ಬಹಳ +ಲಜ್ಜಾ
ಭರದ+ ಭಯದಲಿ+ ಬೆಮರಿಡುತ+ ಕುಚ
ಭರದಿ +ಮೇಲುದು +ಜಾರೆ +ಜೋಡಿಸಿ +ನಿಮಿರಿ +ನಡನಡುಗಿ
ತರುಣಿ +ನಿಜತನು+ ಪರಿಮಳದಲ್+ಉರೆ
ಹೊರೆದ +ಹೂವಿನ +ದಂಡೆಯನು +ನಿಜ
ವರನ+ ಕೊರಳಲಿ+ ಹಾಯ್ಕಿದಳು +ಜಯವೆನೆ+ ಸುರಸ್ತೋಮ

ಅಚ್ಚರಿ:
(೧) ನಿಜ ಪದದ ಬಳಕೆ – ನಿಜತನು, ನಿಜವರ
(೨) ಭರದ, ಭರದಿ – ೨, ೩ ಸಾಲಿನ ಮೊದಲ ಪದ
(೩) ಸೆರಗು ಕಳಚಿತು ಎಂದು ವರ್ಣಿಸಲು – ಕುಚ ಭರದಿ ಮೇಲುದು ಜಾರೆ
(೪) ಲಜ್ಜ, ಭಯ, ಬೆಮರು, ನಡುಗು – ದ್ರೌಪದಿಯ ಭಾವವನ್ನು ವರ್ಣಿಸಲು